ಕನಸೋ ಇದು ನನಸೋ ಇದು...
ಇಲ್ಲಿನ ಸ್ಯಾಂಟೋಸಾ ದ್ವೀಪಕ್ಕೆ ಭೇಟಿ ನೀಡಲು ಕೇಬಲ್ ಕಾರಲ್ಲಿ ಪ್ರಯಾಣಿಸಿದ್ದು ವಿಶೇಷ ಅನುಭವ ನೀಡಿತು. ಇದು ನನ್ನ ಮೊದಲ ಕೇಬಲ್ ಕಾರು ಸವಾರಿ. ಆಕಾಶದಲ್ಲಿ ಹಾರುವಂತೆ ಕಂಡ ಆ ಅನುಭವ ತುಂಬ ರೋಚಕವಾಗಿತ್ತು. ಸಮುದ್ರದ ನೋಟ, ಹಡಗುಗಳು, ಹಸಿರಿನಿಂದ ಕಂಗೊಳಿಸುತ್ತಿರುವ ದ್ವೀಪದ ಸೌಂದರ್ಯ, ಕೇಬಲ್ ಕಾರಲ್ಲಿ ತೇಲುತ್ತಾ ಸಾಗುತ್ತಿರುವಾಗ ನಾನು ಕನಸಿನಲ್ಲಿದ್ದೇನೆಯೋ ಎಂಬ ಭಾವನೆ!
- ಅಶ್ವಿತಾ ಶೆಟ್ಟಿ ಇನೋಳಿ
ಪ್ರತಿ ವ್ಯಕ್ತಿಯ ಜೀವನದಲ್ಲಿ ಕೆಲವು ಅನುಭವಗಳು ಅವಿಸ್ಮರಣೀಯವಾಗಿರುತ್ತವೆ. ಅದು ಕೂಡ ಮೊದಲ ಬಾರಿ ವಿದೇಶ ಪ್ರಯಾಣ ಯಾವಾಗಲೂ ಒಂದು ವಿಶೇಷ, ಅದ್ಭುತ ಅನುಭವವನ್ನು ಕೊಡುತ್ತದೆ. ಆ ಮರೆಯಲಾಗದ ನನ್ನ ಮೊದಲ ವಿದೇಶ ಪ್ರಯಾಣ ಸ್ವಚ್ಛ ನಗರ, ಗಾರ್ಡನ್ ಸಿಟಿ ಎಂದು ಕರೆಯುವ ಸಿಂಗಾಪುರಕ್ಕೆ ಆಗಿತ್ತು. ಇದು ವಿದೇಶಕ್ಕೆ ನನ್ನ ಮೊದಲ ಬಾರಿಯ ಪ್ರವಾಸ ಮಾತ್ರವಲ್ಲದೆ ಕೆಲವು ಅನೇಕ ಮರೆಯಲಾಗದ ರೋಮಾಂಚಕ 'ಪ್ರಥಮಗಳಿಂದಲೂ' ತುಂಬಿತ್ತು. ಈ ಪ್ರವಾಸ ಕೇವಲ ಆರು ದಿನಗಳಷ್ಟೇ ಇದ್ದರೂ, ಅದರಲ್ಲಿ ನಾನು ಕಂಡಿದ್ದು, ಅನುಭವಿಸಿದ್ದು, ಕಲಿತದ್ದು ಬಹಳಷ್ಟು.
2018 ರ ಮಾರ್ಚ್ ನಾಲ್ಕರಂದು ಮುಂಬೈ ಛತ್ರಪತಿ ವಿಮಾನ ನಿಲ್ದಾಣದಿಂದ 5 ಗಂಟೆ ಪ್ರಯಾಣದ ಮೂಲಕ ಸಿಂಗಾಪುರ್ ಚಾಂಗಿ ಏರ್‌ಪೋರ್ಟಿಗೆ ಬಂದು ಇಳಿಯುವಾಗ ಬೆಳಗ್ಗೆ ಗಂಟೆ ಒಂಬತ್ತು. ವಾಹ್! ಎಂದೆನಿಸುವ ಮುಂಬೈ ಏರ್‌ಪೋರ್ಟೇ ಇರುವಾಗ ಅದಕ್ಕಿಂತಲೂ ದುಪ್ಪಟ್ಟು ಸುಂದರವಾದ ಸಿಂಗಾಪುರ್ ಏರ್‌ಪೋರ್ಟ್ ನೋಡುವಾಗ ಇದೇನು ಸ್ವರ್ಗವೇ ಎಂದೆನಿಸಿತು. ವಿಮಾನ ಪ್ರಯಾಣದಿಂದ ಸರಿಯಾಗಿ ನಿದ್ದೆ ಇಲ್ಲದೆ ತಲೆ ಗಿರ್ರೆಂದು ಸುತ್ತುತ್ತಿದ್ದರೂ, ಸಿಂಗಾಪುರದ ಸ್ವಚ್ಛ ರಸ್ತೆಗಳು, ಬೆರಗುಗೊಳಿಸುವ ಗಗನಚುಂಬಿ ಕಟ್ಟಡಗಳನ್ನು ನೋಡುವ ಉತ್ಸಾಹ,ಕುತೂಹಲ ನನ್ನ ಬಳಲಿಕೆಯನ್ನು ದೂರ ತಳ್ಳುತ್ತಿತ್ತು. ಏರ್‌ಪೋರ್ಟಿನಲ್ಲಿ 'ಮೇ' ಎಂಬ ಹೆಸರಿನ ಟೂರ್ ಗೈಡ್ ಮತ್ತು ಮಿನಿ ವ್ಯಾನ್ ಚಾಲಕಿ ನಮ್ಮನ್ನು ಸ್ವಾಗತಿಸಿದರು. ತನ್ನ ಮಿನಿ ವ್ಯಾನಲ್ಲಿ ನಮ್ಮನ್ನು ಕೂರಿಸಿ ಹೊಟೇಲಿಗೆ ಕರೆದುಕೊಂಡು ಹೋಗುವ ದಾರಿಯಲ್ಲೇ ಮರ್ಲಿಯನ್ ನೋಡಲು ಕರೆದುಕೊಂಡು ಹೋದಳು.

ಬಿಳಿ ಕಲ್ಲಿನ ಆ ಸಿಂಹಮುಖ, ಮೀನು ಶರೀರದ, ಸಮುದ್ರಕ್ಕೆ ನೀರು ಉಗುಳುವ ಈ ಅದ್ಭುತ ಶಿಲ್ಪವನ್ನು ನೋಡಿದಾಗ ನನಗೆ ಹೃದಯದಲ್ಲಿ ಒಂದು ವಿಶೇಷ ಕಂಪನ ಉಂಟಾಯಿತು. ಇದೊಂದು ಕೇವಲ ಪ್ರವಾಸಿಗರ ಆಕರ್ಷಣೆಯಲ್ಲ,ಸಿಂಗಾಪುರದ ಇತಿಹಾಸದ ಪ್ರತೀಕ ಕೂಡ. ಸಿಂಗ ಅಂದರೆ ಸಿಂಹ, ಪುರ ಅಂದರೆ ನಗರ. ಈ ಪ್ರತಿಮೆಯ ಮುಂದೆ ಫೊಟೋ ತೆಗೆಸಿಕೊಳ್ಳುವಾಗ ನಾನು ನನ್ನ ಮೊದಲ ವಿದೇಶ ಪ್ರಯಾಣದ ಕ್ಷಣವನ್ನು ಅನುಭವಿಸುತ್ತಿದ್ದೆ.
ಸಿಂಗಾಪುರದಲ್ಲಿ ನೋಡಿದ ಸ್ಥಳಗಳಲ್ಲಿ ಮರೀನ ಬೇ ಸ್ಯಾಂಡ್ಸ್ ನನ್ನ ನೆನಪಿನಲ್ಲಿ ಇನ್ನೂ ಸ್ಪಷ್ಟವಾಗಿ ಉಳಿದಿದೆ. ಅದರ ಮೇಲ್ಚಾವಣಿಯಿಂದ ಕಂಡ ದೃಶ್ಯ ಅಸಾಧಾರಣವಾಗಿತ್ತು. ಗಾರ್ಡನ್ ಬೈ ದ ಬೇ ಯಲ್ಲಿ ನೋಡಿದ ಬೆಳಕು ಪ್ರದರ್ಶನ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು.
ಇನ್ನೊಂದು ವಿಶೇಷ ಅನುಭವ ಇಲ್ಲಿನ ಸ್ಯಾಂಟೋಸಾ ದ್ವೀಪಕ್ಕೆ ಭೇಟಿ ನೀಡಲು ಕೇಬಲ್ ಕಾರಲ್ಲಿ ಪ್ರಯಾಣಿಸಿದ್ದು, ಇದು ನನ್ನ ಮೊದಲ ಕೇಬಲ್ ಕಾರು ಸವಾರಿ. ಆಕಾಶದಲ್ಲಿ ಹಾರುವಂತೆ ಕಂಡ ಆ ಅನುಭವ ತುಂಬ ರೋಚಕವಾಗಿತ್ತು. ಸಮುದ್ರದ ನೋಟ, ಹಡಗುಗಳು, ಹಸಿರಿನಿಂದ ಕಂಗೊಳಿಸುತ್ತಿರುವ ದ್ವೀಪದ ಸೌಂದರ್ಯ, ಕಾರಲ್ಲಿ ತೇಲುತ್ತಾ ಸಾಗುತ್ತಿರುವಾಗ ನಾನು ಕನಸಿನಲ್ಲಿದ್ದೇನೆಯೋ ಎಂಬ ಭಾವನೆ!

ಯುನಿವರ್ಸಲ್ ಸ್ಟುಡಿಯೋ ಕನಸುಗಳ ಲೋಕವನ್ನು ನೆನಪಿಸುವಂಥ ಸ್ಥಳ! ಇಲ್ಲಿ ನನಗೆ ಯಾವುದೋ ಒಂದು ಹಾಲಿವುಡ್ ಮೂವಿಯ ಲೋಕಕ್ಕೆ ನಿಜವಾಗಿ ಪ್ರವೇಶಿಸಿದ ಅನುಭವ. ಅಲ್ಲಿಯ ಥೀಮ್ ಪಾರ್ಕ್‌ಗಳು, ಚಿಕ್ಕ ಮಕ್ಕಳಂತೆ ಎಲ್ಲ ರೈಡ್‌ಗಳಲ್ಲಿ ಕುಳಿತು ಆನಂದಿಸಿದ ಆ ಕ್ಷಣಗಳು ಈಗಲೂ ನನ್ನ ಮನಸ್ಸಿನಲ್ಲಿ ಜೀವಂತವಾಗಿವೆ.
ಇನ್ನೊಂದು ನೆನಪಿನಲ್ಲಿ ಉಳಿಯುವಂಥ ವೀಕ್ಷಣೆ ಎಂದರೆ ಓಷನೇರಿಯಂ ಅಕ್ವೇರಿಯಂನ ಭೇಟಿ. ಈ ಸ್ಥಳ ಪ್ರವೇಶಿಸಿದ ಕ್ಷಣಕ್ಕೆ ನಾನೇನು ಸಮುದ್ರದೊಳಗೇ ಬಂದು ನಿಂತಿದ್ದೇನೆಯೋ ಎಂಬ ಭಾವನೆ ಮೂಡಿತು. ಆ ದೊಡ್ಡ ಗಾಜಿನ ಸುರಂಗ ಮಾರ್ಗದ ಮೂಲಕ ಸಾಗುವಾಗ ಅಸಂಖ್ಯಾತ ಬಣ್ಣದ ಮೀನುಗಳು, ದೊಡ್ಡ ದೊಡ್ಡ ಶಾರ್ಕ್‌ಗಳು, ಸ್ಟಿಂಗ್ರೇಗಳು, ಆಕರ್ಷಕ ಜೆಲ್ಲಿ ಮೀನುಗಳು ಹಾಗೂ ಈ ಪಾರದರ್ಶಕ ಟ್ಯಾಂಕ್‌ಗಳ ಮೂಲಕ ಈಜುತ್ತಿರುವ ಆ ಸಮುದ್ರ ಜೀವಿಗಳು ನನ್ನನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು.
ಸಿಂಗಾಪುರದಲ್ಲಿರುವ ಜುರಾಂಗ್ ಬರ್ಡ್ ಪಾರ್ಕ್‌ನಲ್ಲಿ ಕಂಡ ಹಕ್ಕಿಗಳ ವೈವಿಧ್ಯ, ನೂರಾರು ಬಣ್ಣ ಬಣ್ಣದ ಹಕ್ಕಿಗಳು, ಅವುಗಳ ಚಿಲಿಪಿಲಿ ಕೂಗು, ಪಕ್ಷಿಗಳ ಪ್ರದರ್ಶನ ಮೋಡಿ ಮಾಡುವಂತಿತ್ತು. ಅಲ್ಲಿನ ಆರ್ಕಿಡ್ ಗಾರ್ಡನಿಗೆ ಹೋದಾಗ ಅಲ್ಲಿದ್ದ ಹೂವಿನ ಲೋಕವೇ ಒಂದು ಸ್ವರ್ಗದಂತೆ ತೋರಿತು. ಬಣ್ಣ ಬಣ್ಣದ ಆರ್ಕಿಡ್ ಹೂವುಗಳು, ಅದರ ಆಕರ್ಷಕ ವಿನ್ಯಾಸ, ಸುಗಂಧ, ಈ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ನಾನು ಮೈ ಮರೆತಿದ್ದೆ.

ಇನ್ನೊಂದು ಸಾಹಸ ಎಂದರೆ ಇಲ್ಲಿನ ಕ್ಲಾರ್ಕ್ ಕ್ವೇ ಎಂಬಲ್ಲಿ ನಾನು ಎಂದಿಗೂ ಯೋಚಿಸದ 'ಎಕ್ಸ್ಟ್ರೀಮ್ ಸ್ವಿಂಗ್ ' ಎನ್ನುವ ಜೋಕಾಲಿ ಮೇಲೆ ಕುಳಿತುಕೊಂಡದ್ದು! ಇದು ನೆಲದಿಂದ ಎತ್ತರಕ್ಕೆ ಹೋಗಿ ಆಕಾಶದಲ್ಲಿ ಉಡಾವಣೆ ಮಾಡಲು ತಯಾರಾಗುತ್ತದೆ. ನೆಲದಿಂದ ಮೇಲಕ್ಕೆ ನಿಧಾನವಾಗಿ ಹೋಗುವಾಗ ನೆಲದಲ್ಲಿದ್ದವರು ಸಣ್ಣ ಸಣ್ಣ ಇರುವೆಯಂತೆ ಕಂಡುಬಂದರು. ಏನೋ ಒಂದು ಭಯ, ಉತ್ಸಾಹ, ಕುತೂಹಲ, ರೋಮಾಂಚನ ಅದರಲ್ಲಿ ಕುಳಿತ ನನಗೆ! ಆದರೆ ಅಲ್ಲಿಂದ ನೆಲಕ್ಕೆ ರಭಸದಿಂದ ಕುಸಿದು ಜೋಕಾಲಿಯ ಹಾಗೆ ಜಿಗಿದು ಬರುವಾಗ ಹೃದಯ ಬಹುತೇಕ ನಿಂತು ಹೋದ ಅನುಭವ! ಒಮ್ಮೆಲೆ ಭಯದಿಂದ ಕಣ್ಣು ಮುಚ್ಚಿ ಕಿರುಚಿದೆ. ಕೊನೆಗೆ ಆಕಾಶದಲ್ಲಿ ತೇಲಾಡುವಾಗ 'ಓಹೋ ವಾಹ್!' ಎನ್ನುವ ಅನುಭವ. ನಾನು ಮಾಡಿದ ಧೈರ್ಯಶಾಲಿ ಕೆಲಸದಲ್ಲಿ ಇದೂ ಒಂದಾಗಿತ್ತು ಎನ್ನುವ ಹೆಮ್ಮೆ!
ಈ ನನ್ನ ವಿದೇಶದ ಮೊದಲ ಪ್ರವಾಸ ಕೇವಲ ಫೊಟೋ ಮತ್ತು ಸುಂದರ ನೆನಪುಗಳಿಗಿಂತ ಹೆಚ್ಚಿನದನ್ನು ನೀಡಿದವು. ಅದು ಕೇವಲ ಪ್ರವಾಸವಾಗಿರದೆ, ಜಗತ್ತು ಎಷ್ಟು ವೈವಿಧ್ಯಮಯವಾಗಿದೆ ಎಂದು ಅರಿಯುವ ಅವಕಾಶವೂ ನೀಡಿತು . ಆತ್ಮವಿಶ್ವಾಸ, ಮರೆಯಲಾಗದ ಸ್ಮರಣೆ, ಹೊಸ ವಿಷಯವನ್ನು ಪ್ರಯತ್ನಿಸುವ ಧೈರ್ಯವನ್ನು ಕೊಟ್ಟಿದ್ದವು. ಆ ನೆನಪುಗಳು ಮತ್ತೆ ಮತ್ತೆ ಮೂಡಿದಾಗ ಹೃದಯ ಸಂತೋಷದಿಂದ ನಲಿಯುತ್ತದೆ.