ಎಸ್.ಎಲ್.ಭೈರಪ್ಪ ಕಣ್ಣಲ್ಲಿ ಗುಜರಾತ್
ನಿರ್ಭಾವುಕ ಜೀವನದಲ್ಲಿ ಕಲೆಯ ಹುಚ್ಚು ಇರುವುದು ಸಾಧ್ಯವಿಲ್ಲ. ನಿರ್ಭಾವುಕರೊಡನೆ ವ್ಯವಹಾರ ಮಾಡುವುದು ಸುಲಭ. ಆದರೆ ಜೀವನ ಮಾಡುವುದು ಕಷ್ಟ. ತುಂಬಿದ ರೈಲಿನಲ್ಲಿ ಗುಜರಾತಿಗಳು ನಿಮ್ಮೊಡನೆ ಅನುಸರಿಸುತ್ತಾರೆ, ನೆರೆಹೊರೆಯವರು ಜಗಳ ಕಾಯದೆ ಇರುತ್ತಾರೆ ಎಂದರೆ ಮನುಷ್ಯ ಸಹಜವಾದ ಅಸೂಯೆ ಮೊದಲಾದವು ಇಲ್ಲವೆಂದಲ್ಲ. ನೀವು ಎಂಥ ದೊಡ್ಡ ಅಂಗಡಿಯ ಮಾಲೀಕನ ಎದುರಿಗೆ ಬೇಕಾದರೂ ತಲೆಹರಟೆಯ ಮಾತನ್ನಾಡಿ. ಅವನು ನಕ್ಕು “ ಭಾಯಿ, ಇದರ ಬೆಲೆ ಹೆಚ್ಚಾಗಿದೆ, ಟ್ಯಾಕ್ಸ್ ಏರಿದೆ'' ಎನ್ನುತ್ತಾನೇ ವಿನಾ ದೋಷ ಗಳನ್ನು ತೋರಿಸುವುದಿಲ್ಲ.
ಮೊದಲಿನಿಂದ ಬಂದ ಹೊರದೇಶಗಳ ಸಂಪರ್ಕ ಮತ್ತು ಆಫ್ರಿಕಾದಲ್ಲಿರುವ ವ್ಯಾಪಾರೋದ್ಯಮಗಳ ಸಂಪರ್ಕವು ಗುಜರಾತಿನ ಜನಗಳ ಸಾಂಸ್ಕೃತಿಕ ಮನೋಭಾವದ ಮೇಲೆ ಪ್ರಭಾವವನ್ನುಂಟುಮಾಡಿದೆ. ಜನಗಳ ಆಧುನಿಕತೆಯು ಎಷ್ಟು ಮಟ್ಟಿಗೆ ಹೋಗಿದೆ ಎಂದರೆ ಭಕ್ತಾದಿಗಳು ದೇವರಿಗೆ ಟೇಬಲ್ ಫ್ಯಾನುಗಳನ್ನು ಮುಡಿಪು ಕೊಡುತ್ತಾರೆ. ಪೂಜಾರಿಗಳು ದೇವರ ಮುಖಕ್ಕೆ ಸರಿಯಾಗಿ ಅದನ್ನು ತಿರುಗಿಸಿ ಬೇಸಗೆ ಕಾಲದಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸ್ವಿಚ್ ಹಾಕಿರುತ್ತಾರೆ. ದೇವದೇವತೆಗಳಿಗೆ ಸಹ ಟೆರಿಲಿನ್, ನೈಲಾನ್, ಟೆರಿಕಾಟ್‌ಗಳ ವೇಷವನ್ನು ಮುಡಿಪುಕೊಡುವುದು, ಉಡಿಸುವುದು ನಡೆಯುತ್ತಿದೆ.
ಗುಜರಾತು ತನ್ನದೇ ಆದ ಒಂದು ಶೈಲಿಯ ಜಾನಪದ ಗೀತವನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಈಗಲೂ ದಸರಾಕಾಲದಲ್ಲಿ ಗರ್ಬಾ ಸಾಮೂಹಿಕ ಗೀತೆಗಳನ್ನು ಹಾಡಿಕೊಂಡು ಕೇರಿಯ ಹೆಂಗಸರು ನಗರಗಳಲ್ಲಿ ಸಹ ನಡುರಾತ್ರಿಯ ತನಕ ನೃತ್ಯ ಮಾಡುತ್ತಾರೆ. ಈ ಗೀತೆಗೆ ತನ್ನದೇ ಆದ ಮೃದುಮಧುರ ಲಯವಿದೆ. ಎಷ್ಟೋ ಜನ ಹೊಸ ಕವಿಗಳು ಸಹ ಈ ಲಯವು ಸಾಧಿಸಿರುವ ಕವಿತೆಗಳನ್ನು ಬರೆದು ಜನಪದವು ಹಾಡುವಂತೆ ಪ್ರಚಾರ ಮಾಡುತ್ತಾರೆ. ಸೌರಾಷ್ಟ್ರದವರ ಹಾಡುಗಳು ಮಧ್ಯ ಗುಜರಾತಿಗಳ ಹಾಡುಗಳಿಗಿಂತ ಹೆಚ್ಚು ಶಕ್ತವೂ ಸಂಕೀರ್ಣವೂ ಆದ ಲಯಗಳನ್ನು ಪ್ರಕಟಿಸುತ್ತವೆ. ಇತ್ತೀಚೆಗೆ ಆಧುನಿಕರು ಈ ಗೀತೆಗಳನ್ನು ಸಹ ಸಿನಿ ರಾಗತಾಳಗಳಿಗೆ ಅಥವಾ ಪಂಜಾಬಿನ ಬಾಂಗಡಾ ಗತ್ತಿಗೆ ತುರುಕಿ ಅವುಗಳ ಮೂಲಮಾಧುರ್ಯವನ್ನು ಕೊಲೆ ಮಾಡುತ್ತಿದ್ದಾರೆ. ಗರ್ಬ ನೃತ್ಯವು ನಮ್ಮ ವಿಶಿಷ್ಟ ಜನಪದ ಕಲೆಯೆಂದು ಗುಜರಾತಿಗಳು ಹೆಮ್ಮೆ ಪಡುತ್ತಾರೆ. ಆದರೆ ಅದರಲ್ಲಿ ಹೇಳಿಕೊಳ್ಳುವಂಥ ಅಂಗವಿನ್ಯಾಸಗಳಾಗಲಿ, ನಡೆಯ ಸಂಕೀರ್ಣತೆಯಾಗಲಿ, ತಾಳಗಳ ವೈವಿಧ್ಯವಾಗಲಿ ಇಲ್ಲ. ಯಾಂತ್ರಿಕ ಕಾಲವಿಭಜನೆಗೆ ತಕ್ಕಂತೆ ಒಮ್ಮೆ ತಲೆಯ ಮೇಲೆ ಮತ್ತೊಮ್ಮೆ ಪಕ್ಕಕ್ಕೆ ಇನ್ನೊಮ್ಮೆ ಬಾಗಿ ಹಸ್ತದಿಂದ ಅಥವಾ ಬಣ್ಣದ ಕೋಲುಗಳಿಂದ ತಾಳ ಬಡಿದುಕೊಂಡು ಹೆಂಗಸರು ಕಲಶದ ಸುತ್ತ ತಿರುಗುವುದರಲ್ಲಿ ಸ್ವಲ್ಪ ಮಟ್ಟಿನ ಲಾವಣ್ಯವಿದೆ ನಿಜ; ಆದರೆ ಸ್ಥಿರವಾದ ಕಲಾಕಟ್ಟಡವನ್ನು ಸಂಕೀರ್ಣತೆ ಮತ್ತು ಬೆಳವಣಿಗೆಗಳು ಅದರಲ್ಲಿ ಕಾಣುವುದಿಲ್ಲ. ಹಾಸನ ಮತ್ತು ಕಿಕ್ಕೇರಿಗಳ ಸುತ್ತಿನ ಗಂಡಸರ ಕೋಲಾಟಕ್ಕೆ ಹೋಲಿಸಿದರೆ ಗರ್ಬಾ ನೃತ್ಯವು ತೀರ ಸರಳವೆನಿಸುತ್ತದೆ.

ಹಿಂದುಸ್ತಾನಿ ಸಂಗೀತದಲ್ಲಿ ಪ್ರಸಿದ್ಧರಾದ ಓಂಕಾರನಾಥ ಠಾಕೂರರು ಹುಟ್ಟಿನಿಂದ ಗುಜರಾತಿಯಾದರೂ ಸ್ವಭೂಮಿ ಯಲ್ಲಿ ಅವರ ಕಲೆಯನ್ನು ಗುರುತಿಸುವವರಿಲ್ಲದೆ ದೂರದ ಬನಾರಸ್ಸಿಗೆ ಹೋದರು. ಅರೆಯಾಯಸ್ಸಿನಲ್ಲಿ ಸತ್ತ ಸೌರಾಷ್ಟ್ರರ ಯಶವಂತರಾಯ ಪುರೋಹಿತ (ಅವರು ಸಹ ಮುಂಬಯಿಯಲ್ಲಿ ನೆಲಸಿದ್ದರು)ರನ್ನು ಬಿಟ್ಟರೆ ಗುಜರಾತು ತನ್ನದೆಂದು ಹೇಳಿ ಕೊಳ್ಳುವಂಥ ಯಾವ ಸಂಗೀತಗಾರರೂ ಇಲ್ಲ. ಜನಗಳಿಗೆ ಆ ಗಂಧವೂ ಇಲ್ಲ. ಬಡೋದೆಯಲ್ಲಿರುವ ಮಹಾರಾಷ್ಟ್ರೀಯ ಜನಗಳು ಆಗಾಗ್ಗೆ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಾರೆ. ಶ್ರೋತೃವೃಂದದಲ್ಲಿ ಶೇಕಡ ಐದು ಭಾಗ ಗುಜರಾತಿಗಳೂ ಇರುವುದಿಲ್ಲ. ಅಹಮದಾಬಾದಿನಲ್ಲಿ ಆಗಾಗ್ಗೆ ಕಚೇರಿಗಳು ಆದರೂ ಅವು ವ್ಯಾಪಾರೀ ದೃಷ್ಟಿಯಿಂದ ಏರ್ಪಡಿಸಲ್ಪಡುವವೇ ವಿನಾ ಕಲಾಪ್ರೇಮಿಗಳು ಒಂದೆಡೆ ಕಲೆತು ನಡೆಸುವವು ಬಹು ಕಡಿಮೆ. ಬಡೋದೆಯಲ್ಲಿ ಕೆಲವರು ಸೇರಿ ಯಾವಾಗಲಾದರೊಮ್ಮೆ ದಿವಂಗತ ಫಯಾಜ್ ಖಾನರ ಪುಣ್ಯತಿಥಿಯ ರೂಪದಲ್ಲಿ ಎರಡು ಮೂರು ದಿನಗಳ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. ಆದರೆ ಅದರ ಶ್ರೋತೃಗಳಲ್ಲಿ ಗುಜರಾತಿಗಳು ಎಂದಿನಂತೆ ಕಡಿಮೆಯೇ. ಬಡೋದೆಯ ವಿಶ್ವವಿದ್ಯಾಲಯದಲ್ಲಿ ಪೂರ್ಣ ರೂಪ ಲಲಿತಕಲೆಯ ವಿಭಾಗವೇ ಇದೆ.
ಆದರೆ ಗುಜರಾತೀ ಜನಜೀವನವು ಅದರೊಡನೆ ಸಂಬಂಧವನ್ನು ಕಂಡುಕೊಂಡಿಲ್ಲ. ನಾನಿದ್ದ ವಲ್ಲಭ ವಿದ್ಯಾನಗರಕ್ಕೆ ನಲವತ್ತೆರಡು ಮೈಲಿ ದೂರದ ಅಹಮದಾಬಾದ ಮತ್ತು ಇಪ್ಪತ್ತುಮೂರು ಮೈಲಿಯ ಬಡೋದೆಗಳಲ್ಲಿ ಸಂಗೀತದ ಯಾವ ಕಾರ್ಯಕ್ರಮಗಳಾದರೂ ಹೋಗುತ್ತಿದ್ದೆ; ಸಂಗೀತದ ಮೇಲೆ ಆಸ್ಥೆ ಯುಳ್ಳ ಒಬ್ಬಿಬ್ಬ ಮಿತ್ರರೂ ಜತೆಗೆ ಇರುತ್ತಿದ್ದರು. “ಸಂಗೀತಕ್ಕೋಸ್ಕರ ಹೀಗೆ ರಾತ್ರಿಯ ನಿದ್ರೆಯನ್ನೂ ಕಳೆದುಕೊಂಡು ಇಷ್ಟು ಹಣ ವ್ಯರ್ಥ ಮಾಡುವ ಇವರ ತಲೆ ನೆಟ್ಟಗಿಲ್ಲ" ಎಂದು ವಿಶ್ವವಿದ್ಯಾಲಯದ ಅಧ್ಯಾಪಕರುಗಳೇ ಮಾತನಾಡಿಕೊಳ್ಳುತ್ತಿದ್ದರು. ರಾಜಕೋಟೆಯ ಜನಗಳು ಸಂಗೀತ ಪ್ರೇಮಿಗಳೆಂದು ಕೇಳಿದ್ದೇನೆ. ಆದರೆ ಪ್ರತ್ಯಕ್ಷ ಕಾಣುವ ಅವಕಾಶ ಒದಗಲಿಲ್ಲ.
ನಿರ್ಭಾವುಕ ಜೀವನದಲ್ಲಿ ಕಲೆಯ ಹುಚ್ಚು ಇರುವುದು ಸಾಧ್ಯವಿಲ್ಲ. ನಿರ್ಭಾವುಕರೊಡನೆ ವ್ಯವಹಾರ ಮಾಡುವುದು ಸುಲಭ. ಆದರೆ ಜೀವನ ಮಾಡುವುದು ಕಷ್ಟ. ತುಂಬಿದ ರೈಲಿನಲ್ಲಿ ಗುಜರಾತಿಗಳು ನಿಮ್ಮೊಡನೆ ಅನುಸರಿಸುತ್ತಾರೆ, ನೆರೆಹೊರೆಯವರು ಜಗಳ ಕಾಯದೆ ಇರುತ್ತಾರೆ ಎಂದರೆ ಮನುಷ್ಯ ಸಹಜವಾದ ಅಸೂಯೆ ಮೊದಲಾದವು ಇಲ್ಲವೆಂದಲ್ಲ. ನೀವು ಎಂಥ ದೊಡ್ಡ ಅಂಗಡಿಯ ಮಾಲೀಕನ ಎದುರಿಗೆ ಬೇಕಾದರೂ ತಲೆಹರಟೆಯ ಮಾತನ್ನಾಡಿ. ಅವನು ನಕ್ಕು “ ಭಾಯಿ, ಇದರ ಬೆಲೆ ಹೆಚ್ಚಾಗಿದೆ, ಟ್ಯಾಕ್ಸ್ ಏರಿದೆ'' ಎನ್ನುತ್ತಾನೇ ವಿನಾ ದೋಷ ಗಳನ್ನು ತೋರಿಸುವುದಿಲ್ಲ. ಆರು ವರ್ಷಗಳು ಅಲ್ಲಿ ಇದ್ದರೂ ನಿತ್ಯ ಜೀವನದಲ್ಲಿ, ರೈಲು ಬಸ್ಸುಗಳಲ್ಲಿ, ರಸ್ತೆಯಲ್ಲಿ ಅಥವಾ ಓಣಿಕೇರಿಗಳಲ್ಲಿ ಜನಗಳು ಜೋರಿನಿಂದ ಜಗಳವಾಡಿದುದನ್ನೇ ನೋಡಲಿಲ್ಲ. ನಮ್ಮ ಕರ್ನಾಟಕದ ಯಾವ ಊರಿನಲ್ಲಿ, ಯಾವ ಓಣಿಯಲ್ಲಿ, ಮೋಟಾರು ಬಸ್ಸುಗಳಲ್ಲಿ ನೋಡಿ, ಜಗಳವಾಗುತ್ತಲೇ ಇರುತ್ತದೆ. ನಾವು ಭಾವುಕರು, ಆವೇಶಪೂರ್ಣರು.

ನಿರ್ಭಾವುಕತೆಯೋ ಸಾರಲ್ಯಪ್ರಿಯತೆಯೋ ಶ್ರೀಮಂತಿಕೆಯಿಂದ ಉಂಟಾಗುವ ಸಂತೃಪ್ತಿಯೋ ಅಥವಾ ಮಿತವ್ಯಯದ ದೃಷ್ಟಿಯೋ, ಜನಗಳ ವೇಷಭೂಷಣಗಳಲ್ಲಿ ತುಂಬ ಸರಳತೆಯಿದೆ. ಅಹಮದಾಬಾದಿನ ಭಾರಿ ಭಾರಿ ಮಿಲ್ಲುಗಳ ಮಾಲೀಕನ ಹೆಂಡತಿಯು ಉಡುವುದೂ ಸಾಧಾರಣವಾದ ಹದಿನೂರು ರುಪಾಯಿನ ಸೀರೆಯೇ. ಮಾಲೀಕನ ಮೈಮೇಲೆ ಕಾಣುವುದು ಸಾಮಾನ್ಯನ ಬಿಳಿಯ ಧೋತಿ ಮತ್ತು ಒಂದು ಅಂಗಿ ಅಥವಾ ಜುಬ್ಬವೇ. ಹೆಂಗಸರ ಮೈಮೇಲೆ ಬಂಗಾರವೇ ಕಾಣಿಸುವುದಿಲ್ಲ. ಆದರೆ ಅವರಲ್ಲಿ ಒಡವೆ ವಸ್ತ್ರಗಳಿಲ್ಲವೆಂದಲ್ಲ. ಹೆಂಗಸರು ತಮ್ಮ ಮದುವೆಯಲ್ಲಿ ತಂದೆಯ ಮನೆಯಲ್ಲಿ ಕೊಟ್ಟ ನೂರು ತೊಲ, ಇನ್ನೂರು ತೊಲ ಚಿನ್ನದ ಆಭರಣಗಳನ್ನು ಬ್ಯಾಂಕುಗಳ ಭದ್ರ ತಿಜೋರಿಯಲ್ಲಿಟ್ಟಿರುತ್ತಾರೆ. ವಿಶೇಷ ದಿನಗಳಲ್ಲಿ ಅವುಗಳಲ್ಲಿ ಕೆಲವನ್ನು ತಂದು ಧರಿಸಿ, ಮರುದಿನವೇ ಬ್ಯಾಂಕಿನಲ್ಲಿ ಇಟ್ಟು ಬಿಡುತ್ತಾರೆ. ಐನೂರು ರೂಪಾಯಿ ಬಾಳುವ ಬನಾರಸಿನ ಸೀರೆಗಳು ದೀಪಾವಳಿ ಮದುವೆ ಮೊದಲಾದ ವಿಶೇಷ ದಿನಕ್ಕೆ ಮಾತ್ರ. ಆದರೆ ಅಂಥ ಸೀರೆಗಳು ಇವರಲ್ಲಿ ಇವೆ ಎಂಬುದನ್ನು ನಿತ್ಯ ಜೀವನದಲ್ಲಿ ಯಾವ ಹೆಂಗಸನ್ನು ನೋಡಿಯೂ ಊಹಿಸಲಾಗುವುದಿಲ್ಲ,
ಮಧ್ಯಗುಜರಾತಿನಲ್ಲಿ ಬಹುಸಂಖ್ಯಾತರಾಗಿರುವ ಪಟೇಲರ ಮದುವೆಗಳು ಈಗಲೂ ಹಿಂದಿನ ಪಾಳೆಯಗಾರರ ಮನೆಯ ಮದುವೆಗಳನ್ನು ನೆನಪಿಗೆ ತರುತ್ತವೆ. ಗಂಡನ ಕಡೆಯ ಐನೂರು ಅತಿಥಿಗಳಿದ್ದರೂ ಪ್ರತಿಯೊಬ್ಬರಿಗೂ ಹಾಸಿಗೆ ದಿಂಬುಗಳನ್ನು ಹೆಣ್ಣಿನವರು ಒದಗಿಸುತ್ತಾರೆ. ಅವೆಲ್ಲವೂ ಬಾಡಿಗೆಗೆ ದೊರೆಯುತ್ತವೆ. ತುಪ್ಪ ಮತ್ತು ಸಿಹಿ ತಿಂಡಿಗಳಿಗೆ ಲೆಕ್ಕವೇ ಇಲ್ಲ. ವರದಕ್ಷಿಣೆ ಸಾಧಾರಣವಾಗಿ ನಲವತ್ತು ಐವತ್ತು ಸಾವಿರ ರುಪಾಯಿ. ಇದು ಜಾತಿಯಲ್ಲಿ ಬೆಳೆದು ಬಂದ ಪದ್ಧತಿ. ಆದರೆ ಎಲ್ಲರೂ ಒಂದೇ ಸಮನಾಗಿ ಶ್ರೀಮಂತರಾಗಿರುವುದಿಲ್ಲ. ಹೀಗಾಗಿ ಹೆಣ್ಣು ಮಕ್ಕಳ ಮದುವೆ ಮಾಡುವುದು ಕಷ್ಟ. ನಾನು ಕಂಡ ಒಬ್ಬ ತರಕಾರೀ ವ್ಯಾಪಾರಿಯಿದ್ದ. ಮೂವತ್ತೆರಡು ವರ್ಷ ವಯಸ್ಸಿನ ಅವನ ಹೆಂಡತಿ ತೀರಿಕೊಂಡಿದ್ದಳು. ಅವನಿಗೆ ಹೆಣ್ಣು ಕೊಡಲು ಮೇಲೆ ಬಿದ್ದು ಬರುತ್ತಿದ್ದರು ಹಲವರು. ವರದಕ್ಷಿಣೆ ಇಪ್ಪತ್ತೈದು ಸಾವಿರ ತನಕ ಏರಿತ್ತು. ನಲವತ್ತಕ್ಕೆ ಒಂದು ದಮಡಿ ಕಡಿಮೆಯಾದರೂ ಮುಟ್ಟುವುದಿಲ್ಲವೆಂದು ಅವನು ಹಟ ಹಿಡಿದಿದ್ದ. ಕೊನೆಗೆ ಮೂವತ್ತಕ್ಕೆ ಒಪ್ಪಂದವಾಗಿ ಮದುವೆಯಾಯಿತು.
ಕನ್ಯಾಪಿತೃವು ಮಗಳ ಮದುವೆ ಮಾಡಿಬಿಟ್ಟರೆ ಜವಾಬ್ದಾರಿ ಮುಗಿಯಲಿಲ್ಲ. ಅವಳ ಜೀವವಿರುವವರೆಗೂ ಅವಳಿಗೆ ಮತ್ತು ಅವಳ ಮಕ್ಕಳು ದೊಡ್ಡವಾಗುವ ತನಕ ಅವಕ್ಕೆ ಬೇಕಾದ ಸಕಲ ಬಟ್ಟೆಗಳನ್ನು ವರ್ಷಕ್ಕೊಂದು ಸಲ ಕೊಡುವುದು ತೌರಿನ ಕರ್ತವ್ಯ. ಅವಳು ಸತ್ತಾಗ ಶವಸಂಸ್ಕಾರದ ಖರ್ಚನ್ನು ತೌರಿನವರೇ ಹಾಕಬೇಕು. ವರದಕ್ಷಿಣೆಯೊಡನೆ ಬಂದು ಮದುವೆಯಾಗುವುದು, ನಂತರ ಹೆಂಡತಿಯನ್ನು ಸಾಯಿಸುವುದು ( ಸ್ಟೋವ್ ಹೊತ್ತಿಸು ವಾಗ ಆದ ಆಕಸ್ಮಿಕವೆಂಬ ಕಾರಣವೇ ಮುಂದೆ ಸಾಬೀತಾಗುತ್ತದೆ ), ಮತ್ತೆ ವರದಕ್ಷಿಣೆ ಪಡೆದು ಮದುವೆಯಾಗುವುದು ಮೊನ್ನೆ ಮೊನ್ನೆಯವರೆಗೂ ನಡೆಯುತ್ತಿದ್ದ ಘಟನೆಗಳು; ಈಗಲೂ ನಡೆಯುತ್ತಿರುತ್ತವೆ. ಪ್ರತಿಯೊಬ್ಬರೂ ಹೀಗೆ ಮಾಡುವು ದಿಲ್ಲವಾದರೂ ಇಂಥ ಕೆಲಸಗಳು ಅಲ್ಲಲ್ಲಿ ಆಗಾಗ ಆಗುತ್ತಿರುತ್ತವೆ. ಸೊಸೆಯು ಹೆಣ್ಣುಮಗುವನ್ನು ಹಡೆದರೆ ಅತ್ತೆಯೇ ಆ ಕೂಸನ್ನು ಹೇಗಾದರೂ ಸಾಯಿಸಿಬಿಡುವುದೂ ಅಪರೂಪವಾಗಿರಲಿಲ್ಲ. ಈಗ ಅದು ವಿರಳವಾಗುತ್ತಾ ಬಂದಿದೆ. ಇವೆಲ್ಲವೂ ಹೆಚ್ಚಾಗಿರುವುದು ಪಟೇಲ ಜಾತಿಯಲ್ಲಿ. ಬಾಹ್ಮಣ, ಕಮ್ಮಾರ, ಬಡಗಿ ಮೊದಲಾದ ಬಡ ಜಾತಿಗಳಲ್ಲಿ ಗಂಡಿನ ವಿದ್ಯೆ ಮತ್ತು ಅಂತಸ್ತಿಗೆ ತಕ್ಕಂತೆ ಕೊಡುವ ಒಂದೆರಡು ಸಾವಿರ ರುಪಾಯಿಗಳನ್ನು ಬಿಟ್ಟರೆ ವರದಕ್ಷಿಣೆಯ ಹೊಡೆತವೂ ಇಲ್ಲ. ಹೆಣ್ಣುಮಕ್ಕಳ ಮದುವೆಯು ಅಷ್ಟು ಕಷ್ಟವೂ ಅಲ್ಲ. ಈಗ ಹತ್ತು ವರ್ಷಕ್ಕೆ ಮೊದಲು ಹದಿನಾಲ್ಕು ಹದಿನೇಳಕ್ಕೇ ಗಂಡು ಹುಡುಗರಿಗೆ ಮದುವೆಯಾಗುತ್ತಿತ್ತು. ಈಗ ಮದುವೆಯ ವಯಸ್ಸು ಮೇಲೆ ಏರಿದೆ. ಪಟೇಲರಲ್ಲಿ ಮಾತ್ರ ವಯಸ್ಸು ಮೀರಿದರೂ ಅವಿವಾಹಿತರಾಗಿ ನಿಂತಿರುವ ಹೆಣ್ಣು ಮಕ್ಕಳ ಸಂಖ್ಯೆ ಬೆಳೆಯುತ್ತಿದೆ.

ಪಟೇಲರುಗಳೆಂದರೆ ಒಂದು ಜಾತಿ. ನಮ್ಮ ಒಕ್ಕಲಿಗೆ ಗೌಡರಿಗೆ ಸಮ. ಆದರೆ ಅವರು ಶುದ್ಧ ಶಾಕಾಹಾರಿಗಳು. ಜಮೀನುದಾರರು ಮಾತ್ರವಲ್ಲದೆ, ವ್ಯಾಪಾರ ಮತ್ತು ಕೈಗಾರಿಕೆಯಲ್ಲಿ ಬಹಳ ಮುಂದುವರಿದ ಶ್ರೀಮಂತ ಜನ. ಕೋಮಟಿಯ ವ್ಯವಹಾರಿತನದ ಜೊತೆಗೆ ಪಾಳೆಗಾರರ ಜೂರತ್ತು (ಮತ್ತು ಕೆಲವು ಹುಂಬತನ ಗಳೂ) ಇರುವ ಮನೋಧರ್ಮ ಇವರದು. ಅವರಲ್ಲಿಯೂ ಒಳಪಂಗಡಗಳಿವೆ. ಐದು ಹಳ್ಳಿಯ ಗುಂಪು, ಹತ್ತು ಹಳ್ಳಿಯ ಗುಂಪು, ನಲವತ್ತು ಹಳ್ಳಿಯ ಗುಂಪು ಎಂದು ಹಲವು ಗುಂಪುಗಳಿವೆ. ಕರಮ-ಸದ್, ನಡಿಯಾದ್, ಸಾಜಿತ್ರ, ಧರ್ಮಚ್, ಆನಂದ್ ಈ ಐದು ಊರುಗಳದೇ ಒಂದು ಗುಂಪು. ಪ್ರತಿಯೊಂದೂ ತುಂಬ ಶ್ರೀಮಂತ ಊರು. ಅವುಗಳಲ್ಲಿ ಒಂದು ಲಕ್ಷ ರುಪಾಯಿನ ಕುಳವು ಸಾಧಾರಣ ಮನುಷ್ಯ. ಈ ಗುಂಪಿನವರು ಈ ಊರು ಗಳಲ್ಲಿಯೇ ಹೆಣ್ಣನ್ನು ತರಬೇಕು. ಕೊಡಬೇಕು. ಒಂದೇ ಊರಿನ ಹುಡುಗ ಹುಡುಗಿಯರು ಮದುವೆಯಾಗುವಂತಿಲ್ಲ; ಏಕೆಂದರೆ ಅವರು ಅಣ್ಣ ತಂಗಿಯರು. ಹೀಗೆ ಉಳಿದ ಕೆಲವು ಹಳ್ಳಿಗಳದೇ ಒಂದು ಗುಂಪು. ಒಂದು ಗುಂಪಿನವರು ಮತ್ತೊಂದು ಗುಂಪಿನವರೊಡನೆ ಊಟ ತಿಂಡಿ ಆಚಾರವಿಚಾರಗಳಲ್ಲಿ ಭಾಗವಹಿಸುತ್ತಾರೆ. ಆದರೆ ಮದುವೆಯಾಗುವುದು ನಿಷಿದ್ದ. ಪ್ರತಿಯೊಂದು ಗುಂಪೂ ತಾನು ಶ್ರೇಷ್ಠವೆಂದು ಹೇಳಿಕೊಳ್ಳುತ್ತದೆ.
ಗುಜರಾತಿನಲ್ಲಿ ಸಂಬಂಧದ ಹುಡುಗಿಯನ್ನು ಮದುವೆಯಾಗುವುದಿಲ್ಲ. ನಮ್ಮ ಕರ್ನಾಟಕದಲ್ಲಿ ಸೋದರ ಮಾವ, ಸೋದರತ್ತೆಯ ಮಗ ಅಥವಾ ಮಗಳು ಮದುವೆಗೆ ಯಾವಾಗಲೂ ಸಹಜವಾಗಿಯೇ ಶ್ರೇಷ್ಠರು. ಆದರೆ ಗುಜರಾತಿ ನಲ್ಲಿ ಅವರು ಸೋದರ ಅಥವಾ ಸೋದರಿಯ ಸಮಾನ. ಸೋದರ ಸಂಬಂಧವಿಲ್ಲ, ಸ್ವಗ್ರಾಮದ ಸಂಬಂಧವಿಲ್ಲ, ತಮ್ಮ ಗುಂಪಿನ ಊರಿನಿಂದ ಹೊರಗಿನ ಸಂಬಂಧವಿಲ್ಲ. ಹೀಗಾಗಿ ತಕ್ಕ ಕನ್ಯ ಅಥವಾ ವರಗಳು ದೊರೆಯುವುದು ಪಟೇಲ ಜಾತಿಯಲ್ಲಿ ಕಷ್ಟ. ಜತೆಗೆ ದೊಡ್ಡ ವರದಕ್ಷಿಣೆಯ ಹೊಡೆತ. ಒಂದೇ ಹಳ್ಳಿಯ ವಯಸ್ಸಾದ ಹುಡುಗ ಹುಡುಗಿಯರು(ಗಂಡು ಹುಡುಗರಿಗೆ ಮದುವೆಯು ಸ್ವಲ್ಪವೂ ಕಷ್ಟವಲ್ಲ) ಪರಸ್ಪರ ಪ್ರೇಮ ಮಾಡುವುದೂ ಉಂಟು. ಒಂದೇ ಗ್ರಾಮದ ಮಕ್ಕಳಾದುದರಿಂದ ನಾತೆಯಲ್ಲಿ ಸೋದರ ಸೋದರಿಯರೆನಿಸಿ ಮುಂದೆ ತಮ್ಮ ಮದುವೆಯಾಗುವುದು ಅಸಾಧ್ಯವೆಂದು ಅವರಿಗೆ ತಿಳಿದಿರುತ್ತದೆ. ಮುಂದೆ ಅವರು ಮದುವೆಯಾಗುವುದೂ ಇಲ್ಲ. ಆದರೂ ತಾತ್ಕಾಲಿಕವಾಗಿ ಪ್ರೇಮ ಮಾಡುತ್ತಾರೆ. ವಯಸ್ಸಿನ ಗುಣ ತಾನೇ! ಕರಮಸದ್ ಗ್ರಾಮದ ಒಬ್ಬ ಹುಡುಗನ ಎರಡು ಕಲೆಗಳು ಮುಂಬಯಿಯಲ್ಲಿ ಇದ್ದು ಆ ಹುಡುಗ ಕರಮಸದನ್ನು ಹುಟ್ಟಿದಾಗಿನಿಂದ ಕಾಣದೆ ಇದ್ದರೂ ಅವನು ಆ ಊರಿನ ಮಗನೇ. ಅದೇ ಊರಿನ ಹುಡುಗಿಯನ್ನು ಅವನು ಮದುವೆಯಾಗುವಂತಿಲ್ಲ. ಅಷ್ಟು ಮಾತ್ರವಲ್ಲ, ತನ್ನ ಗುಂಪಿನ ಹಳ್ಳಿಯಲ್ಲಿಯೇ ಅವನು ಮದುವೆಯಾಗಬೇಕು.
ಈ ರೀತಿಯ ಕಟ್ಟು ಇತರ ಜಾತಿಗಳಲ್ಲಿಲ್ಲ. ಆದರೆ ನಮ್ಮಲ್ಲಿರುವಂತೆ ಅವರಲ್ಲಿಯೂ ಜಾತಿ ಉಪಜಾತಿಗಳಿವೆ. ಎಷ್ಟಾದರೂ ಹಿಂದುಸ್ಥಾನವಲ್ಲವೆ!