Saturday, November 15, 2025
Saturday, November 15, 2025

ಗುಜರಾತಿಗೆ ಬರುವ ಇತರ ರಾಜ್ಯಗಳ ಜನರು ಎಂದೆಂದಿಗೂ ನೌಕರರಾಗಿಯೇ ಬರುತ್ತಾರೆ!

ಇದು ಖ್ಯಾತ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪನವರ ಗುಜರಾತ್‌ ಅನುಭವ ಕಥನ. ಗುಜರಾತಿನಲ್ಲಿ ಸುಮಾರು ಆರು ವರ್ಷಗಳು ನೆಲೆಸಿದ್ದ ಭೈರಪ್ಪನವರು ಅಲ್ಲಿನ ಜನ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನು ಪ್ರವಾಸಕಥನ ಎಂಬುದಕ್ಕಿಂತ ಅನುಭವಕಥನ ಎಂಬುದೇ ಹೆಚ್ಚು ಸೂಕ್ತ. ಅವರದ್ದು ಸಾಹಿತ್ಯ ಪ್ರವಾಸವೇ ಹೊರತು ಪ್ರವಾಸ ಸಾಹಿತ್ಯವಲ್ಲ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಹತ್ತಿರದಿಂದ ತಾವು ಕಂಡ ಅನುಭವಗಳನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸಿದ್ದಾರೆ.

ಇದು ಖ್ಯಾತ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪನವರ ಗುಜರಾತ್‌ ಅನುಭವ ಕಥನ. ಗುಜರಾತಿನಲ್ಲಿ ಸುಮಾರು ಆರು ವರ್ಷಗಳು ನೆಲೆಸಿದ್ದ ಭೈರಪ್ಪನವರು ಅಲ್ಲಿನ ಜನ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನು ಪ್ರವಾಸಕಥನ ಎಂಬುದಕ್ಕಿಂತ ಅನುಭವಕಥನ ಎಂಬುದೇ ಹೆಚ್ಚು ಸೂಕ್ತ. ಅವರದ್ದು ಸಾಹಿತ್ಯ ಪ್ರವಾಸವೇ ಹೊರತು ಪ್ರವಾಸ ಸಾಹಿತ್ಯವಲ್ಲ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಹತ್ತಿರದಿಂದ ತಾವು ಕಂಡ ಅನುಭವಗಳನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸಿದ್ದಾರೆ. ಒಂದು ಪ್ರದೇಶ ಮತ್ತು ಆ ಪ್ರದೇಶದ ಜನರ ಸ್ವಭಾವ, ಅವರ ಆಚಾರ-ವಿಚಾರಗಳನ್ನು ಭೈರಪ್ಪನಂಥ ಸೂಕ್ಷ್ಮಮತಿಯ ಒಳಗಣ್ಣಿನ ಲೇಖಕ ಮಾತ್ರ ಹಿಡಿದಿಡಲು ಸಾಧ್ಯ ಎಂಬುದು ಈ ಲೇಖನದಲ್ಲೂ ಸಾಬೀತಾಗಿದೆ. ಅನುಭವ ಮತ್ತು ತಮ್ಮ ಅಧ್ಯಯನವನ್ನು ಸಾಂದ್ರಗೊಳಿಸಿ ಭೈರಪ್ಪನವರು ಬರೆದ ʼನಾ ಕಂಡ ಗುಜರಾತ್‌ʼ ಲೇಖನವನ್ನು ಇಲ್ಲಿ ಯಥಾವತ್ತು ಪ್ರಕಟಿಸಿದ್ದೇವೆ. ಅವರ ಲೇಖನವು ಮೂರ್ನಾಲ್ಕು ಸರಣಿಗಳಲ್ಲಿ ಪ್ರಕಟವಾಗುತ್ತದೆ. ಮೂಲ ಲೇಖನವು ಕಸ್ತೂರಿ ಮಾಸ ಪತ್ರಿಕೆಯ 1967ರ ಮೇ ಸಂಚಿಕೆಯಲ್ಲಿ ಪ್ರಕಟವಾಗಿದ್ದು, ಕಸ್ತೂರಿ ಪತ್ರಿಕೆ ಬಳಗಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಒಂದು ಪ್ರದೇಶದ ಜನರ ಸ್ವಭಾವ, ರೀತಿ ರಿವಾಜುಗಳನ್ನು ಅರಿಯಲು ಆರು ವರ್ಷಗಳು ಸಾಕಷ್ಟು ಅವಧಿಯೇ. ಆದರೆ ನಾನು ಗುಜರಾತಿಗಳ ಆಚಾರ ವಿಚಾರಗಳನ್ನು ಪೂರ್ಣವಾಗಿ ತಿಳಿದಿದ್ದೇನೆಂದು ಭಾವಿಸಲಾರೆ. ದಕ್ಷಿಣ ಗುಜರಾತು ಮತ್ತು ಸೌರಾಷ್ಟ್ರಗಳ ಭಾಗ ನನಗೆ ಹೆಚ್ಚು ಪರಿಚಿತವಲ್ಲ. ಚಾರುತರ (ಜಾರೋತ್ತರ್)ವೆಂದು ಕರೆಸಿಕೊಳ್ಳುವ ಮಧ್ಯ ಗುಜರಾತೇ ನಾನು ಹೆಚ್ಚಾಗಿ ಕಂಡುದು. ಒಂದು ಜನಜೀವನದ ರೀತಿನೀತಿಗಳ ಬಗೆಗೆ ಹೇಳುವಾಗ ಅದನ್ನು ಸ್ಥೂಲವಾಗಿ ಮಾತ್ರ ಭಾವಿಸಬೇಕು. ನಿರಪವಾದವಾದ ಸರ್ವ ಸಾಮಾನ್ಯ ಸತ್ಯವೆಂದು ತಿಳಿಯಬಾರದು. ಗುಜರಾತಿಗಳೆಂದರೆ ಶ್ರೀಮಂತರೆಂದು ನಮ್ಮವರ ಸಾಮಾನ್ಯ ಭಾವನೆ. ಅಲ್ಲಿ ಬಡವರು ಇಲ್ಲದಿಲ್ಲ. ಆದರೂ ಇಡೀ ಹಿಂದೂಸ್ಥಾನದ ಕೈಗಾರಿಕೆ ಮತ್ತು ವಾಣಿಜ್ಯಗಳ ಕೇಂದ್ರ ಗುಜರಾತೆಂದು ಹೇಳಬಹುದು. ಟಾಟಾ, ಬಿರಲಾ ಮೊದಲಾದ ಕೆಲ 'ಪಾರ್ಸಿ, ರಾಜಸ್ಥಾನಿಗಳು ಮತ್ತು ಮದರಾಸಿನ ನಾಲ್ಕಾರು ಚೆಟ್ಟಿಯಾರರನ್ನು ಬಿಟ್ಟರೆ ನಮ್ಮ ದೇಶದ ಖಾಸಗಿ ಕ್ಷೇತ್ರದಲ್ಲಿರುವ ವ್ಯಾಪಾರ. ಉದ್ದಿಮೆಗಳಲ್ಲಿ ಬಹುಪಾಲು ಗುಜರಾತಿನಲ್ಲಿದೆ; ಅಥವಾ ಗುಜರಾತಿಗಳ ಕೈಲಿದೆ. ಸೂರತ್ತಿನಿಂದ ಅಹಮದಾಬಾದಿನ ತನಕ ರೈಲಿನ ಎರಡು ಕಡೆಗಳಿಗೂ ಏಳೆಂಟು ಮೈಲಿಗೆ ಒಂದರಂತೆ ಯಾವುದಾದರೂ ಕಾರ್ಖಾನೆಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಹೊಸಹೊಸವು ಬೆಳೆಯುತ್ತಲೇ ಇವೆ.

Untitled design (10)

ನಮ್ಮ ಕರ್ನಾಟಕದಲ್ಲಿ ಯಾವನ ಹತ್ತಿರವಾದರೂ ಎರಡು ಲಕ್ಷ ರೂಪಾಯಿ ಸೇರಿದರೆ ತಕ್ಷಣ ಒಂದು ಸಿನಿಮಾ ಥೇಟರು ಕಟ್ಟಿಸುತ್ತಾನೆ. ಇಲ್ಲವೇ ಭಾರೀ ಬಂಗಲೆ ಕಟ್ಟಿಸಿಕೊಳ್ಳುತ್ತಾನೆ. ಅದೇ ಒಬ್ಬ ಗುಜರಾತಿಯಾದರೆ ಸಣ್ಣ ಪ್ರಮಾಣದ್ದೇ ಆದರೂ ಒಂದು ಉತ್ಪತ್ತಿದಾಯಕ ಕೈಗಾರಿಕೆಯನ್ನು ಪ್ರಾರಂಭಿಸುತ್ತಾನೆ. ಸಂಪತ್ತೆಂಬುದು ಕೈಗಾರಿಕೆಯಿಂದ ವೃದ್ಧಿಯಾಗಬೇಕಾದುದು. ತಿಪಟೂರು, ಮಂಗಳೂರು ಕಡೆಯಲ್ಲಿ ಇಷ್ಟೊಂದು ತೆಂಗು ಇದೆ; ಆದರೆ ತೆಂಗಿನ ನಾರಿನಿಂದ ತಯಾರಾಗುವ ವಸ್ತುಗಳ ಕೈಗಾರಿಕೆಗಳನ್ನು ನಮ್ಮಲ್ಲಿ ಯಾರೂ ಪ್ರಾರಂಭಿಸಿಲ್ಲವೇಕೆ? ಒಂದೆರಡು ಲಕ್ಷಕ್ಕಿಂತ ಹೆಚ್ಚು ಬಂಡವಾಳವೂ ಅದಕ್ಕೆ ಬೇಡ. ಬೆಂಗಳೂರಿನಷ್ಟೇ ದೊಡ್ಡದಾದ ಅಹಮದಾಬಾದಿನಲ್ಲಿ ಬೆಂಗಳೂರಿನಲ್ಲಿರುವ ಅರ್ಧದಷ್ಟು ಸಿನಿಮಾ ಥೇಟರುಗಳಿಲ್ಲ. ಹೊಟೇಲುಗಳಂತೂ ಇನ್ನೂ ತೀರಾ ಕಡಿಮೆಯಿವೆ.

ವಾಣಿಜ್ಯವು ಜನರ ರಕ್ತದ ಗುಣವಾಗಿದೆ. ಉದ್ಯಮದಲ್ಲಿ ಮುಂದುವರಿದಿರುವ ಪಟೇಲ, ಜೈನ ಮತ್ತು ಇತರ ಬನಿಯರೇ ಇರಲಿ, ಬ್ರಾಹ್ಮಣ, ಬಡಿಗ ಮೊದಲಾದವರೇ ಇರಲಿ. ಹಣ, ಅದರ ಬಡ್ಡಿಯ ಮೌಲ್ಯ ಮೊದಲಾದುವನ್ನು ಲೆಕ್ಕಾಚಾರ ಮಾಡುವುದು ಅವರಿಗೆ ಸಹಜವಾಗಿಯೇ ಬಂದಿರುತ್ತದೆ. ಎಂಟು ವರ್ಷದ ಹುಡುಗನಿಗೆ ನೆಂಟರು ಐದು ರುಪಾಯಿಯ ನೋಟನ್ನು ಕೊಟ್ಟು ಹೋದರೆ ಅವನು ನಮ್ಮ ಹುಡುಗನಂತೆ ಮಿಠಾಯಿಗೋ ಆಟಸಾಮಾನಿಗೋ ಹಾಕುವುದಿಲ್ಲ. ಓಡಿಹೋಗಿ ತನ್ನ ಹೆಸರಿನಲ್ಲಿ ಪೋಸ್ಟ್ ಆಫೀಸಿನಿಂದ ಒಂದು ಪ್ರೈಸ್ ಬಾಂಡ್ ತಂದು ಇಟ್ಟುಕೊಳ್ಳುತ್ತಾನೆ. ಮೂರು ತಿಂಗಳಿಗೊಮ್ಮೆ ಪೇಪರಿನಲ್ಲಿ ಪ್ರೈಸ್ ಪ್ರಕಟವಾದಾಗ ಹುಡುಗರು ತಮ್ಮ ಪರೀಕ್ಷೆಯ ಫಲಿತಾಂಶದ ನಂಬರುಗಳನ್ನು ಹುಡುಕುವಷ್ಟೇ ಉತ್ಸುಕತೆಯಿಂದ ನೋಡುತ್ತಾರೆ.

ನಿಷ್ಪ್ರಯೋಜಕ ವಾಗ್ವಾದದಲ್ಲಿ ತೊಡಗುವುದು ಈ ಜನರ ಸ್ವಭಾವವಲ್ಲ. ಪ್ರತಿ ಯೊಂದಕ್ಕೂ " What is your basis, what is its definition?" ಎಂದುಕೊಂಡು ಕಾನೂನು ಕಟ್ಟಳೆಗಳನ್ನು ತೆಗೆಯುವ ನಮ್ಮ ಮೈಸೂರಿನವರಂತೆ ಗುಜರಾತಿಗಳಲ್ಲ. ವ್ಯವಹಾರದಲ್ಲಿ ಸಹಜವಾಗಿಯೇ ಅನುಸರಿಸಿಕೊಂಡು ಹೋಗುತ್ತಾರೆ. ನಾಲ್ಕು ಜನರ ಸೀಟಿನಲ್ಲಿ ಆರು ಜನ ಕುಳಿತಿದ್ದು ಮತ್ತೊಬ್ಬ ಬಂದರೂ ಒಂದಿಷ್ಟು ಜಾಗ ಕೊಡುತ್ತಾರೆ. ತಮ್ಮ ಬಂಧುವಿನ ಅಂಗಡಿಯಲ್ಲಿಯೂ ಅವನಿಗೆ ಸಲ್ಲಬೇಕಾದ ಲಾಭವನ್ನು ಕೊಟ್ಟು, ಸಾಮಾನು ಕೊಳ್ಳುತ್ತಾರೆ. ಅದಕ್ಕೆ ಗೊಣಗುವುದಿಲ್ಲ. ಲೆಕ್ಕಾಚಾರವು ಸ್ನೇಹ ಮತ್ತು ಬಾಂಧವ್ಯಕ್ಕೆ ಅಡ್ಡ ಬರುವುದಿಲ್ಲ. ಇನಾಮು ಕೊಡುವಾಗ ಲಕ್ಷವಾಗಲಿ ಆದರೆ ಲೆಕ್ಕಾಚಾರದಲ್ಲಿ ಒಂದು ಪೈಸೆಯನ್ನೂ ಬಿಡಬಾರದು” ಎಂಬುದು ಅವರ ರೀತಿ.

Untitled design (9)

ಸರ್ಕಾರದ ಅಫೀಸುಗಳಲ್ಲಿ ಕೆಲಸ ಮಾಡುವವನಲ್ಲಿಯೂ ವ್ಯಾವಹಾರಿಕ ನಿಷ್ಠೆಯಿದೆ. ವಿನಾಕಾರಣ ಒಬ್ಬ ಅರ್ಜಿದಾರನನ್ನು ನಾನೇಕೆ ಆಲಿಸಬೇಕು? ಎಂದು ಗುಮಾಸ್ತನೂ ಹೇಳುತ್ತಾನೆ. ಹಾಗೆ ನಡೆಯುತ್ತಾನೆ. ಲಂಚವಿದ್ದರೂ ತೀರ ಸಣ್ಣ ಪುಟ್ಟ ಕೆಲಸಗಳಿಗೆ ತೆಗೆದುಕೊಳ್ಳುವುದಿಲ್ಲ. ಸರಕಾರದ ಆಫೀಸುಗಳು ನಮ್ಮ ಕರ್ನಾಟಕ ಕದನಕ್ಕಿಂತ ಹೆಚ್ಚು ಪ್ರಾಮಾಣಿಕವಾಗಿದೆ. ನೀವು ಬರೆಯುವ ಪತ್ರಗಳಿಗೆ ಸಾಧಾರಣವಾಗಿ ಶೀಘ್ರವಾಗಿಯೇ ತಂಟೆ ತಾಪತ್ರಯಗಳಿಲ್ಲದ ನೇರವಾದ ಉತ್ತರವನ್ನು ನಿರೀಕ್ಷಿಸಬಹುದು.

ಇಷ್ಟೊಂದು ಅಧಿಕ ಪ್ರಮಾಣದಲ್ಲಿ ವ್ಯಾಪಾರ ಮತ್ತು ಉದ್ಯಮಗಳು ನಡೆಯುವುದರಿಂದ ಗುಜರಾತಿನಲ್ಲಿ ನಿರುದ್ಯೋಗವು ಹೆಚ್ಚಾಗಿಲ್ಲ. ಗುಜರಾತಿಗಳ ವಿದ್ಯಾಭ್ಯಾಸದಲ್ಲಿ ಇಂಗ್ಲಿಷ್ ಜ್ಞಾನದ ಮಟ್ಟ ಕಡಿಮೆ. ಅಲ್ಲಿಯ ವಿಶ್ವವಿದ್ಯಾಲಯಗಳು ಪದವೀಧರರು ಬೇರೆ ರಾಜ್ಯಗಳಿಗೆ ಹೋಗಿ ನೌಕರಿ ಮಾಡುವುದು ಕಷ್ಟ. ಆದರೆ ನಮ್ಮಂತೆ ಕೆಲಸ ಹುಡುಕಿಕೊಂಡು ಹೊರ ನಾಡುಗಳಿಗೆ ಅಲೆಯುವ ಬವಣೆಯು ಗುಜರಾತಿ ಯುವಕರಿಗಿಲ್ಲ. ತಮ್ಮ ನಾಡಿನ ಉದ್ಯಮಗಳಲ್ಲಿಯೇ ಸಾಕಷ್ಟು ಕೆಲಸಗಳಿವೆ; ಉದ್ಯಮವು ಬೆಳೆದಂತೆ ಕೆಲಸಗಳೂ ಉಂಟಾಗುತ್ತವೆ. ಅವನ್ನು ಮಾಡಲು ಇಂಗ್ಲಿಷಿನ ಪರಿಣತಿಯೇನೂ ಬೇಕಿಲ್ಲ. ಗಾಂಧೀ ಮತ್ತು ಪಟೇಲರುಗಳಂಥ ನಾಯಕರ ಮಾದರಿಯ ಪರಿಣಾಮವಿರಬಹುದು, ಅಥವಾ ಇಂಗ್ಲಿಷಿನ ಅಲ್ಪ ಜ್ಞಾನದ ಕಾರಣವಾದರೂ ಇರಬಹುದು. ದೊಡ್ಡ ದೊಡ್ಡ ವಿದ್ವಾಂಸರು ಸೇರುವ ಸಮಾರಂಭಗಳು ಸಹ ಅಚ್ಚ ಗುಜರಾತಿಯಲ್ಲಿ ನಡೆಯುತ್ತವೆ. ಮಾತೃಭಾಷೆಯಲ್ಲಿ ಭಾಷಣ ಮಾಡಲು ಬರುವುದಿಲ್ಲವೆನ್ನುವ ಯಾವ ಗುಜರಾತಿಯೂ ಇಲ್ಲ. ಗುಜರಾತಿಗಳು ಪರರಾಜ್ಯಗಳ ಜನರ ಬಗೆಗೆ ಸಹಿಷ್ಣುತೆಯನ್ನಿಟ್ಟುಕೊಂಡಿದ್ದಾರೆ, ನೌಕರಿಗಳಿಗೆ ನಮ್ಮನ್ನು ತೆಗೆದುಕೊಳ್ಳುತ್ತಾರೆ ಎಂಬ ಒಂದು ಮನೋಭಾವವು ಸಾಧಾರಣವಾಗಿ ಕರ್ನಾಟಕದ ನಿರುದ್ಯೋಗಿ ಯುವಕರಿಗಿದೆ. ತಮ್ಮ ಕೆಲಸಕ್ಕೆ ಗುಜರಾತಿ ಅಭ್ಯರ್ಥಿ ಇಲ್ಲದಿರುವಾಗ ಅವರು ಹೊರಗಿನವರನ್ನು ತೆಗೆದುಕೊಳ್ಳುವುದು ನಿಜ. ಟೈಪಿಸ್ಟ್, ಅಫೀಸ್ ಆಡಳಿತ ಮೊದಲಾಗಿ ಒಳ್ಳೆಯ ಇಂಗ್ಲಿಷ್ ಜ್ಞಾನವು ಬೇಕಾದ ಕೆಲಸಗಳಿಗೆ ದಕ್ಷಿಣದವರನ್ನು ಆರಿಸುವುದೂ ನಿಜ. ಆದರೆ ಗುಜರಾತಿ ಮತ್ತು ಗುಜರಾತೇತರ ಎಂಬ ವ್ಯತ್ಯಾಸವನ್ನು ಮೇಲ್ಮಟ್ಟದ ಕೆಲಸಗಳಲ್ಲಿ ಯಾವಾಗಲೂ ಮಾಡುತ್ತಾರೆ. ಸೇವಾ ವಧಿಯ ಮೇಲೆಯೇ ಬಡ್ತಿ ದೊರೆಯುವ ಸರಕಾರಿ ನೌಕರಿಗಳಲ್ಲಿ ಸಾಧ್ಯವಾಗದಿದ್ದರೂ ಖಾಸಗಿ ಉದ್ಯಮಗಳಲ್ಲಿಯಂತೂ ಈ ವ್ಯತ್ಯಾಸವು ಇದ್ದೇ ಇದೆ. ಲಕ್ಷಗಟ್ಟಳೆ, ಕೋಟಿಗಟ್ಟಳೆ ಬಂಡವಾಳ ವನ್ನು ಸುರಿದಿರುವ ಉದ್ಯಮಗಳಲ್ಲಿ ಮುಖ್ಯವಾದ ಸ್ಥಾನಗಳಿಗೆ ತಮ್ಮವರನ್ನೇ ಆಯುವುದು ಸಹಜವೇ.

ಹಿಂದುಸ್ಥಾನದ ರಾಜ್ಯಗಳ ಎಲ್ಲ ನಗರಗಳ ಮುಖ್ಯವಾದ ವ್ಯಾಪಾರದ ಬಹು ಭಾಗವು ಗುಜರಾತಿಗಳ ಕೈಲಿದೆ. ಉತ್ಪತ್ತಿಯ ಉದ್ಯಮದ ಮಾಲೀಕರೇ ವ್ಯಾಪಾರದ ಧಣಿಗಳೂ ಆಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ತಮ್ಮ ನೆಲದಿಂದ ಹೊರಗೆ ಹೋಗುವ ಗುಜರಾತಿಗಳು ಧಣಿಗಳಾಗಿಯೇ ಹೋಗು ತ್ತಾರೆ. ಅಥವಾ ತಮ್ಮವರ ವ್ಯವಹಾರಗಳ ನೌಕರರಾಗಿ ಮುಖ್ಯ ಸ್ಥಾನವನ್ನು ವಹಿಸಿಕೊಂಡು ಹೋಗಿರುತ್ತಾರೆ. ಆದರೆ ಗುಜರಾತಿಗೆ ಬರುವ ಇತರ ರಾಜ್ಯಗಳ ಜನರು ಎಂದೆಂದಿಗೂ ನೌಕರರಾಗಿಯೇ ಬರುತ್ತಾರೆ; ನೌಕರರಾಗಿಯೇ ಉಳಿಯುತ್ತಾರೆ. ನಾನಿದ್ದ ವಲ್ಲಭ ವಿದ್ಯಾನಗರದಲ್ಲಿಯೇ ಒಬ್ಬ ಮಲೆಯಾಳಿ ಒಂದು ಮನೆಯನ್ನು ಬಾಡಿಗೆಗೆ ಹಿಡಿದು ದಕ್ಷಿಣದ ಊಟದ ಒಂದು ಹೊಟೇಲನ್ನು ತೆಗೆದ. ದಕ್ಷಿಣದ ವಿದ್ಯಾರ್ಥಿಗಳು ಮತ್ತು ಹತ್ತಿರದ ಕೆಲವು ಕಾರ್ಖಾನೆಗಳ ಕೆಲಸಗಾರರು ಮೊದಲಾಗಿ ಅವನಿಗೆ ಸುಮಾರು ನೂರ ಐವತ್ತು ಜನ ಗಿರಾಕಿಗಳು ದೊರೆತರು. ವ್ಯಾಪಾರ ಚೆನ್ನಾಗಿಯೇ ನಡೆಯಲು ಮೊದಲಾಯಿತು. ಹತ್ತಿರವೇ ಇದ್ದ ಇತರ ಗುಜರಾತಿ ಹೊಟೇಲುಗಳ ಒಡೆಯರು ಇದನ್ನು ಗಮನಿಸಿದರು. ಮಲೆಯಾಳಿಗೆ ಬಾಡಿಗೆಗೆ ಮನೆಯನ್ನು ಕೊಟ್ಟಿದ್ದವನಿಗೆ ಅವರು ಹೇಳಿದರು, 'ಗುಜರಾತಿಯಲ್ಲದವನಿಗೆ ನೀನು ಹೀಗೆ ವ್ಯಾಪಾರಕ್ಕೆ ಮನೆಯನ್ನು ಹೇಗೆ ಕೊಟ್ಟೆ, ಅವನನ್ನು ತಕ್ಷಣ ಬಿಡಿಸು.” ಒಂದೇ ತಿಂಗಳಲ್ಲಿ ಮಲೆಯಾಳಿಯನ್ನು ಮನೆಯವನು ಬಿಡಿಸಿದ.

ಹೊಟೇಲು ಮುಚ್ಚಿತು. ಜೀವನೋಪಾಯಕ್ಕೆ ಅವನು ಮಾಡುವುದೇನು? ಬೇರೊಂದು ಗುಜರಾತಿ ಹೊಟೇಲಿನವನೇ ಆವನಿಗೆ ತಿಂಗಳಿಗೆ ಇನ್ನೂರು ರುಪಾಯಿ ಸಂಬಳವನ್ನು ಕೊಟ್ಟು ಕರೆದ. ಅದೇ ಮಲೆಯಾಳಿಯಿಂದ ದಕ್ಷಿಣದ ಗಿರಾಕಿಗಳು ಕೇಳುವ ರಸಂ, ಸಾಂಬಾರು, ಇಡ್ಲಿ, ದೋಸೆಗಳನ್ನು ಮಾಡಿಸಲು ಮೊದಲು ಮಾಡಿದ. ಆ ನೂರೈವತ್ತು ಗಿರಾಕಿಗಳೂ ಈ ಹೊಟೇಲಿನ ಗಿರಾಕಿಗಳಾದರು. ಮಲೆಯಾಳಿ ಕೊನೆಗೂ ನೌಕರನೇ ಆಗಿ ಉಳಿದ; ಮಾಲೀಕನಾಗಲಿಲ್ಲ. ಗುಜರಾತಿಗಳು ಹೊರ ರಾಜ್ಯಗಳಲ್ಲೆಲ್ಲ ಮಾಲೀಕರಾಗಿದ್ದಾರೆ; ಮುಂದೆಯೂ ಆಗುತ್ತಾರೆ. ಆದರೆ ಹೊರಗಿನವರು ಮಾತ್ರ ಗುಜರಾತಿನಲ್ಲಿ ಎಂದಿಗೂ ನೌಕರವಾಗಿಯೇ ಹೋಗಬೇಕು. ಹಾಗೆ ಹೋಗುವ ಅವಕಾಶವೂ ದಿನದಿನಕ್ಕೆ ಕಡಿಮೆಯಾಗುತ್ತಿದೆ. ಸ್ವಪ್ರಾಂತ್ಯದ ಜನರೇ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಎಲ್ಲ ವಿಧವಾದ ಕೆಲಸಗಳಿಗೂ ಅಣಿಯಾಗುತ್ತಿದ್ದಾರೆ.

ಆಫ್ರಿಕಾ ದೇಶದಲ್ಲಿರುವ ಭಾರತೀಯರು ಎಂದು ನಾವು ಪತ್ರಿಕೆಗಳಲ್ಲಿ ಓದುತ್ತೇವಲ್ಲ? ಅವರೆಲ್ಲರೂ (ಅಥವಾ ತೊಂಬತ್ತೈದು ಭಾಗ) ಗುಜರಾತಿಗಳೇ. ಹಿಂದುಸ್ಥಾನದ ಇತರ ರಾಜ್ಯಗಳಿಗೆ ಹೋಗಿ ತಮ್ಮ ವ್ಯಾಪಾರವನ್ನು ಸ್ಥಾಪಿಸಿದಂತೆ ಆಫ್ರಿಕಾ ದೇಶಗಳಿಗೂ ಹೋಗಿ ಸ್ಥಾಪಿಸಿದರು. ಕೆಲವು ದೇಶ ಮತ್ತು ನಗರಗಳ ವ್ಯಾಪಾರೋದ್ಯಮಗಳನ್ನುತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡರು. ಈಗ ಅವರ ಮೇಲೆ ಅಲ್ಲಿಯ ಸರಕಾರದವರು ಅನೇಕ ವಿಧವಾದ ಪ್ರತಿಬಂಧಗಳನ್ನು ಹೇರುತ್ತಿದ್ದಾರೆ. ಆಫ್ರಿಕಾದಲ್ಲಿ ತನ್ನ ತಂದೆ ತಾಯಿಗಳಿರುವ ಒಬ್ಬ ಗುಜರಾತಿ ವಿದ್ಯಾರ್ಥಿಯೇ ನನಗೆ ಹೇಳಿದ. "ಹಣ ನಮ್ಮವರ ಕೈಲಿದೆ. ತಮ್ಮ ಕಾಲೋನಿಯಲ್ಲಿ ಇವರು ತಮ್ಮ ದೇವರಗುಡಿಗಳನ್ನು ಕಟ್ಟಿಸಿ ಪುಣ್ಯ ಗಳಿಸುತ್ತಾರೆ. ಆದರೆ ಸಾರ್ವಜನಿಕರಿಗೆ ಬೇಕಾದ ಶಾಲೆ ಕಾಲೇಜು, ಆಸ್ಪತ್ರೆಗಳನ್ನು ಕಟ್ಟಿಸಲು ಒಂದು ಕಾಸನ್ನೂ ಬಿಚ್ಚುವುದಿಲ್ಲ. ನನ್ನನ್ನೇ ನೋಡಿ, ಕಾಲೇಜು ಓದಿಸುವುದಕ್ಕೆಂದು ನಮ್ಮಪ್ಪ ನನ್ನನ್ನು ಇಲ್ಲಿಗೆ ಕಳಿಸಿದ್ದಾರೆ. ಆದರೆ ತಾವು ದೊಡ್ಡ ವ್ಯಾಪಾರ ಮಾಡುತ್ತಿರುವ ಊರಿನಲ್ಲೇ ಎರಡು ಮೂರು ಲಕ್ಷವನ್ನು ದಾನಕೊಟ್ಟು ಒಂದು ಕಾಲೇಜನ್ನು ಸ್ಥಾಪಿಸಬಹುದಿತ್ತು. ಅಲ್ಲಿ ನಾನೂ ಓದುತ್ತಿದ್ದೆ. ಆಫ್ರಿಕನ್ನರ ಮಕ್ಕಳೂ ಓದುತ್ತಿದ್ದರು. ನಮ್ಮಪ್ಪ ಹಾಗೆ ಮಾಡುವುದಿಲ್ಲ. ನಮ್ಮಪ್ಪನಂತೆಯೇ ಉಳಿದ ಗುಜರಾತಿಗಳೂ. ಇದನ್ನು ಆ ದೇಶದ ಜನ ಮತ್ತು ಸರಕಾರಗಳು ಏಕೆ ಸಹಿಸಬೇಕು? ಅಲ್ಲಿ ದುಡಿದ ಸಂಪತ್ತನ್ನು ತಮ್ಮ ಊರುಗಳಿಗೆ ಸಾಗಿಸಲು ಇವರು ಪ್ರಯತ್ನಪಡುತ್ತಾರೆ. ನೀವು ಇಲ್ಲಿ ದುಡಿದುದನ್ನು ಇಲ್ಲಿಯೇ ಇಟ್ಟುಕೊಳ್ಳಿ, ಇಲ್ಲಿಯೇ ಖರ್ಚು ಮಾಡಿ ಎಂದು ಸ್ಥಳೀಯ ಸರಕಾರಗಳು ಹೇಳುತ್ತವೆ."

Untitled design (11)

ಭಾರತವಾದರೆ ಒಂದೇ ದೇಶ. ನಾನಾ ರಾಜ್ಯಗಳಲ್ಲಿ ವ್ಯಾಪಾರೋದ್ಯಮಗಳನ್ನು ಮಾಡಿ ಗಳಿಸಿದ ಸಂಪತ್ತನ್ನು ಸ್ವಗ್ರಾಮ ಅಥವಾ ನಗರಕ್ಕೆ ಸಾಗಿಸಬಹುದು. ಆದರೆ ಬೇರೆ ದೇಶದಿಂದ ಹಾಗೆ ತರಲು ಪ್ರಾರಂಭಿಸಿದರೆ ಯಾವ ಸರಕಾರ ತಾನೇ ಸುಮ್ಮನಿದ್ದೀತು? ಚಿನ್ನ, ಗಡಿಯಾರ ಮೊದಲಾವುಗಳ ಅಂತಾರಾಷ್ಟ್ರೀಯ ಕಳ್ಳಸಾಗಾಣಿಕೆಗಳಿಗೂ ಇಂಥ ಸಂಪತ್ತಿನ ರವಾನೆಗೂ ಸಂಬಂಧವಿರುವುದನ್ನು ಎಲ್ಲರೂ ಬಲ್ಲರು ಜನಗಳಲ್ಲಿ ಬೇರು ಬಿಟ್ಟು ಬೆಳೆದಿರುವ ಆರ್ಥಿಕ ಪ್ರಜ್ಞೆಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಮುಖಗಳ ಮೇಲೆ ಸಾಕಷ್ಟು ಪ್ರಭಾವವನ್ನುಂಟುಮಾಡಿದೆ. ಸಂಗೀತ ನಾಟಕ ಮೊದಲಾದ ಕಲೆಗಳಿಗೆ ಜನಗಳ, ಸಾಧಾರಣವಾಗಿ ಜನರು ಕಾಸು ಬಿಚ್ಚುವುದಿಲ್ಲ. ಆದರಿಂದೇನು ಪ್ರಯೋಜನ ಮನೋಭಾವವೇ ಸರ್ವೆಸಾಮಾನ್ಯ. ತನ್ನದೇ ಆದ ಕಲೆ, ಸಂಸ್ಕೃತಿ ಮೊದಲಾ ದುವುಗಳ ಪ್ರಜ್ಞೆಯಿಲ್ಲದ ಜನಗಳಲ್ಲಿ ಒಂದು ತೆರನಾದ ಸಾಂಸ್ಕೃತಿಕ ಶೂನ್ಯವು ಉಂಟಾಗುವುದು ಎಷ್ಟು ಸಹಜವೋ ಆ ಶೂನ್ಯವು ಸಿಕ್ಕಿದ ಅಗ್ಗದ ಕಲೆಗಳಿಗೆ ಸ್ಥಳ ನೀಡುವುದೂ ಅಷ್ಟೇ ಸಹಜ. ದಿನದಿನಕ್ಕೂ ಔದ್ಯೋಗೀಕೃತವಾಗುತ್ತಿರುವ ಜೀವನ ದಲ್ಲಿ ಮನರಂಜನೆಗಿರುವುದು ಮುಂಬಯಿ ಸಿನೆಮಾ ಮತ್ತು ಅವುಗಳ ಹಾಡುಗಳು ಮಾತ್ರ. ವಿಧವಿಧವಾದ ಆಕಾರ ಮತ್ತು ಗಾತ್ರಗಳ ಟ್ರಾನ್ಸಿಸ್ಟರುಗಳು ಗುಜರಾತಿನ ಜನಗಳ ಕೈಲಿ ಕಾಣುವಷ್ಟು ಪ್ರಮಾಣದಲ್ಲಿ ಹಿಂದುಸ್ಥಾನದ ಮತ್ತೆ ಎಲ್ಲಿಯೂ ಸಿಕ್ಕುವುದಿಲ್ಲ. ವೇಷ ಭೂಷಣಗಳಲ್ಲಿ ಸಹ ತನ್ನದೇ ಆದ ಪರಂಪರೆಯ ಪ್ರಜ್ಞೆಯು ನವೀನ ಪೀಳಿಗೆಗೆ ಇಲ್ಲ. ಬೂದುಕುಂಬಳ ಕಾಯಿಯಂತೆ ಬೆಳೆದ ಮೂವತ್ತು ವರ್ಷದ ಲಡಕಿಯರು ಸಹ ಮಂದಿ ಮೊಳಕಾಲುಗಳ ಮೇಲಿನ ಬೆರಳುದ್ದ ಕೂದಲುಗಳನ್ನು ಕಾಣಿಸಿಕೊಂಡು ನಡು ತೊಡೆಯವರೆಗಿನ ಸ್ಕರ್ಟ್ ಮತ್ತು ಭುಜದ ಮೇಲಿನ ಜಂಪರನ್ನು ಹಾಕಿಕೊಂಡು ಕಾಲೇಜಿಗೆ ಬರುವುದು ಇಲ್ಲಿ ಸಾಮಾನ್ಯ ದೃಶ್ಯ. ಅಮೇರಿಕೆಯಲ್ಲಿ ಹುಟ್ಟುವ ಹೊಸ ವೇಷಗಳು ಮುಂಬಯಿಯಲ್ಲಿ ಪ್ರಚಾರವಾಗುವ ಮೊದಲೇ ಗುಜರಾತಿನಲ್ಲಿ ಹಳೆಯವಾಗಿರುತ್ತವೆ. ಸ್ಕೂಲು ಕಾಲೇಜುಗಳ ಹುಡುಗಿಯರು ಗಂಡು ಹುಡುಗರ ಸೈಕಲ್ ಕ್ಯಾರಿಯರಿನ ಮೇಲೆ ಕೂತು ಅಥವಾ ಅವರನ್ನು ಒಮ್ಮೊಮ್ಮೆ ತಮ್ಮ ಕ್ಯಾರಿಯರುಗಳ ಮೇಲೆ ಕೂರಿಸಿಕೊಂಡು ಸೈಕಲ್ ಹೊಡೆಯುವುದೂ ಸಾಧಾರಣ ಸಂಗತಿ. ಮಕ್ಕಳಿಗೆ ಸಾಂಸ್ಕೃತಿಕ ಶಿಕ್ಷಣವನ್ನು ಮನೆ ಯಲ್ಲಿಯಾದರೂ ಕೊಡುವುದು ಹಿಂದಿನ ತಲೆಮಾರಿನವರಿಗೆ ತಿಳಿದಂತೆ ಕಾಣುವುದಿಲ್ಲ. ಮಗ ದಿಲೀಪ ಕುಮಾರನಂತೆ,

ಮಗಳು ಸಾಯಿರಾಬಾನುವಿನಂತೆ ಆಡಿದರೆ ಸಂತೋಷಪಡುವ ಹಿರಿಯರೇ ಹೆಚ್ಚು.

(ಮುಂದುವರಿಯುತ್ತದೆ)

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!