Saturday, February 14, 2026
Saturday, February 14, 2026

ಹಂಪಿ ಉತ್ಸವ 2026

ದೇಶವಿಖ್ಯಾತ ಹಂಪಿ ಉತ್ಸವವು ಇದೇ ಫೆಬ್ರವರಿ 13 ರಿಂದ 15 ರವರೆಗೆ ನಡೆಯಲಿದೆ. ಬೀದಿಯ ಇಕ್ಕೆಲಗಳಲ್ಲಿ ಮುತ್ತು ರತ್ನಗಳನ್ನು ರಾಶಿ ಹಾಕಲಾಗುತ್ತಿತ್ತು. ಸೇರಿನಲ್ಲಿ ಅಳೆದು ಮಾರಲಾಗುತ್ತಿತ್ತು. ಹೀಗೆಂದ ಕೂಡಲೇ ನಮಗೆ ನೆನಪಾಗುವುದು ಒಂದೇ ಸಾಮ್ರಾಜ್ಯ. ಅದು ಹಂಪಿಯ ವಿಜಯನಗರ ಸಾಮ್ರಾಜ್ಯ. ಇತಿಹಾಸದ ಪುಟಗಳಲ್ಲಿ ರೋಮ್‌ ನಂತರದ ಭೂಮಿಯ ಮೇಲಿನ ಅತಿ ಶ್ರೀಮಂತ ನಗರ ಎಂದು ಕರೆಸಿಕೊಂಡ ನಗರವಿದು. ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪಗಳಿಗೆ ಅದ್ಭುತ ಕೊಡುಗೆ ನೀಡಿದ ತಾಣವಿದು. ಹೀಗೆ ಸರ್ವ ಪ್ರಕಾರಗಳಲ್ಲೂ ಶಿಖರಪ್ರಾಯವಾಗಿರುವ ಹಂಪಿಯಲ್ಲಿ ಈಗ ವಿಶ್ವಪ್ರಸಿದ್ಧ ಹಂಪಿ ಉತ್ಸವ ಜಗಮಗಿಸುತ್ತಿದೆ.

ಪ್ರತಿ ವರ್ಷದಂತೆ ಈ ಭಾರಿಯೂ ವಿಜಯ ನಗರ ಸಾಮ್ರಾಜ್ಯದ ಗತವೈಭವ, ಸುವರ್ಣಯುಗ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ. ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 13ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಉತ್ಸವದ ಅಂಗವಾಗಿ 6 ವೇದಿಕೆ ನಿರ್ಮಿಸಲಾಗಿದೆ.

ಇದನ್ನೂ ಓದಿ: ಹಂಪಿ ಉತ್ಸವ: ಎಲ್ಲೆಲ್ಲಿ ಯಾವ್ಯಾವ ವೇದಿಕೆಗಳು ? ವಿವರ ಇಲ್ಲಿದೆ

ಫೆಬ್ರವರಿ 7ರಿಂದಲೇ ಹಲವು ಕಾರ್ಯಕ್ರಮ ಆರಂಭವಾಗಿವೆ. ಫೆಬ್ರವರಿ 10 ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಬೈಕ್ ರ‍್ಯಾಲಿ, 11 ರಂದು ಸಂಜೆ ತುಂಗಾ ಆರತಿ, 12 ರಂದು ಮಯೂರ ಭುವನೇಶ್ವರಿ ಹೊಟೇಲ್ ಆವರಣದಲ್ಲಿ ಹಂಪಿ ಬೈಸ್ಕೆಗೆ ಚಾಲನೆ ನೀಡಲಾಗಿದ್ದು ಹೊಸಪೇಟೆ ನಗರದ ವಡಕರಾಯನ ದೇವಸ್ಥಾನದಿಂದ ಡಾ.ಪುನೀತ್ ರಾಜ್‍ಕುಮಾರ್ ವೃತ್ತದವರೆಗೆ ವಸಂತ ವೈಭವ ಮೆರವಣಿಗೆ ನಡೆದಿದೆ. ಅದೇ ದಿನದಂದು ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ವೃತ್ತದವರೆಗೆ ವಸಂತ ಆರತಿ ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 13 ರಂದು ವಿಶ್ವಪಾರಂಪರಿಕ ತಾಣವಾದ ಹಂಪಿ ನಿರ್ವಹಣಾ ಪ್ರಾಧಿಕಾರ ಕಚೇರಿ ಹಿಂಭಾಗ ವಿವಿಧ ತಳಿಗಳ ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಬೋಟಿಂಗ್, ಹಂಪಿ ವಿಚಾರ ಕುರಿತು ವಿಚಾರ ಸಂಕಿರಣ ಹಾಗೂ ಆಹಾರ ಮೇಳ ಆಯೋಜಿಸಲಾಗಿದೆ. 14 ರಂದು ಗ್ರಾಮೀಣ ಕ್ರೀಡೆ, ಸಾಹಸ ಕ್ರೀಡೆಗಳು ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ.

Untitled design (83)

ಮೋಡಿ ಮಾಡಲಿವೆ ಡ್ರೋನ್‌ ಶೋ ಮತ್ತು ಗಾಳಿಪಟ ಉತ್ಸವ

ಈ ಬಾರಿ ಹಂಪಿ ಉತ್ಸವದಲ್ಲಿ ಮುಂಬೈನಿಂದ ತಾಂತ್ರಿಕ ಕಲಾಬಳಗ ಬರಲಿದೆ. ಸಾವಿರಾರು ಡ್ರೋನ್‌ಗಳನ್ನು ಬಳಸಿ ಡ್ರೋನ್‌ ಶೋ ಏರ್ಪಡಿಸಲಾಗಿದೆ. ಇದರಲ್ಲಿ ಹಂಪಿಯ ಇತಿಹಾಸವನ್ನು ಸಾರುವ ಅಮೂಲ್ಯ ಕ್ಷಣಗಳ ಮಾದರಿಗಳನ್ನು ಆಕಾಶದಲ್ಲಿ ರೂಪಿಸಲಾಗುತ್ತದೆ. ಇದರ ಜತೆಗೆ ಈ ಬಾರಿ ವಿಶೇಷ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಇವು ಹಂಪಿಯಲ್ಲಿ ಮತ್ತಷ್ಟು ಮೆರುಗು ತರಲಿವೆ. ಹಂಪಿಯ ಸುಂದರ ಮತ್ತು ಮಹತ್ವದ ಸ್ಮಾರಕಗಳಾದ ಕಲ್ಲಿನ ರಥ, ವಿರೂಪಾಕ್ಷೇಶ್ವರ ದೇವಾಲಯದ ಗೋಪುರ, ಯೋಗ ನರಸಿಂಹ ಪ್ರತಿಮೆ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಕಮಲ ಮಹಲ್, ರಾಣಿಯ ಸ್ನಾನಗೃಹ, ಮಹಾನವಮಿ ದಿಬ್ಬ ಮತ್ತು ವಿಜಯ ವಿಠ್ಠಲ ದೇವಾಲಯಗಳೂ ಡ್ರೋನ್ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿವೆ. ಈ ಬಾರಿ ಗಾಳಿಪಟ ಉತ್ಸವವೂ ಇರಲಿದ್ದು, ಪ್ರವಾಸಿಗರನ್ನು ಮೋಡಿ ಮಾಡಲಿವೆ.

ಹಂಪಿ ಸುತ್ತಿಸಲು 350ಕ್ಕೂ ಹೆಚ್ಚು ಗೈಡ್‌ಗಳು

ಹಂಪಿಯೊಂದರಲ್ಲೇ ವಿಜಯನಗರ ಸಾಮ್ರಾಜ್ಯ ಕಾಲದ ಸುಮಾರು 50-60 ಪ್ರವಾಸಿ ತಾಣಗಳಿವೆ. ಅವುಗಳ ನಿರ್ಮಾಣ ಶೈಲಿ, ಇತಿಹಾಸ, ವಾಸ್ತುಶೈಲಿ ಹೀಗೆ ಮಹತ್ವದ ವಿಷಯಗಳು ಸಾಕಷ್ಟಿವೆ. ಇವುಗಳನ್ನೆಲ್ಲ ತಿಳಿಸಿ ಒಂದು ಪ್ರವಾಸಿಗರನ್ನು ಸುತ್ತಿಸಲು ಹಂಪಿಯಲ್ಲಿ ಸುಮಾರು 350ಕ್ಕೂ ಹೆಚ್ಚು ಪರಿಣಿತ ಗೈಡ್‌ಗಳಿದ್ದಾರೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ಗಳ ಮೂಲಕ ಅವರನ್ನು ಸಂಪರ್ಕಿಸಿ ಪರಿಪೂರ್ಣ ಪ್ರವಾಸ ಮಾಡಬಹುದು.

Untitled design (79)

ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ

ವಿಜಯನಗರ ಸಾಮ್ರಾಜ್ಯದ ಕುರಿತು ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಮೂಲಕ ಹಂಪಿ ಉತ್ಸವದ ವೇಳೆ ಹಂಪಿಯ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಲು ಯೋಜಿಸಲಾಗಿದೆ. ಫೆ.13-19ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಸಂಜೆ ಆರು ಗಂಟೆಯಿಂದ ಆರಂಭವಾಗುವ ಈ ಪ್ರದರ್ಶನವನ್ನು, ಆನೆಲಾಯ ಮತ್ತು ಕುದುರೆಲಾಯ ಆವರಣದಲ್ಲಿ ಆಯೋಜಿಸಲಾಗಿದೆ.

ಕಲಾವಿದರ ಕಲರವ

ಮುಖ್ಯ ವೇದಿಕೆಯಾದ ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ನಟ ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ರುಕ್ಮಿಣಿ ವಸಂತ್ ಸೇರಿದಂತೆ ಹಲವು ಗಣ್ಯರು ಇರಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಗಾಯಕ ವಿಜಯ್ ಪ್ರಕಾಶ್ ಮತ್ತು ಹರಿಹರನ್ ತಂಡದಿಂದ, ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ಶಮಿತಾ ಮಲ್ನಾಡ್ ತಂಡ ಹಾಗೂ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಕಲಾವತಿ ದಯಾನಂದ್ ತಂಡದಿಂದ ಸುಮಧುರ ಗೀತಗಾಯನ ಕಾರ್ಯಕ್ರಮವಿದೆ.

ಫೆಬ್ರವರಿ 14 ಉತ್ಸವದ 2ನೇ ದಿನದಂದು ಮುಖ್ಯ ವೇದಿಕೆಯಾದ ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಾಜ್ ಬಿ ಶೆಟ್ಟಿ, ಸಪ್ತಮಿ ಗೌಡ, ಝೈದ್ ಖಾನ್, ಗಿಲ್ಲಿ ಮತ್ತು ಕಾವ್ಯ ಇವರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತದನಂತರ ನವೀನ್ ಸಜ್ಜು ಮತ್ತು ಅರ್ಜುನ್ ಜನ್ಯ ತಂಡದಿಂದ ಗೀತಗಾಯನ ಪ್ರಸ್ತುತಿ. ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ಎಂಡಿ ಪಲ್ಲವಿ ಮತ್ತು ತಂಡ ವಿರೂಪಾಕ್ಷೇಶ್ವರ ವೇದಿಕೆಯ ಬಳಿ ಹೊಸಪೇಟೆಯ ಸ್ವರಾರ್ಥ ಬ್ಯಾಂಡ್ ವತಿಯಿಂದ ಸುಮಧುರ ಗೀತೆ ಗಾಯನ ಪ್ರಸ್ತುತಪಡಿಸಲಿದ್ದಾರೆ.

ಫೆಬ್ರವರಿ 15 ರಂದು ಮುಖ್ಯ ವೇದಿಕೆಯಲ್ಲಿ ನಟರಾದ ಡಾಲಿ ಧನುಂಜಯ್, ಧ್ರುವಸರ್ಜಾ ಹಾಗೂ ರಚಿತಾರಾಮ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ತದನಂತರದಲ್ಲಿ ರಘು ದೀಕ್ಷಿತ್, ಮಂಗಲಿ ಮತ್ತು ಮಣಿಕಾಂತ್ ಕದ್ರಿ ತಂಡದಿಂದ ಗಾಯನ ಏರ್ಪಡಿಸಲಾಗಿದೆ. ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ವಾಸುಕಿ ವೈಭವ್ ಮತ್ತು ತಂಡ, ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಬಿಗ್‌ಬಾಸ್ ವಿಜೇತ ಹನುಮಂತ ಮತ್ತು ತಂಡ ಗೀತ ಗಾಯನದೊಂದಿಗೆ ಜನ-ಮನ ರಂಜಿಸಲಿದ್ದಾರೆ.

Untitled design (81)

ಸೂಕ್ತ ಬಂದೋಬಸ್ತ್

ಹಂಪಿ ಉತ್ಸವ ಅಂಗವಾಗಿ ನೆರೆ ಜಿಲ್ಲೆ, ರಾಜ್ಯ, ದೇಶ ವಿದೇಶಗಳಿಂದ ಜನ ಆಗಮಿಸಲಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಬಂದೋ ಬಸ್ತ್ ಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 8 ಎಸ್ಪಿ, 15 ಡಿವೈಎಸ್ಪಿ, 60 ಇನ್ಸ್ ಪೆಕ್ಟರ್, 120 ಸಬ್ ಇನ್ಸ್ ಪೆಕ್ಟರ್, ಒಂದು ಸಾವಿರ ಪುರುಷ ಪೊಲೀಸ್ ಸಿಬ್ಬಂದಿ, 800 ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಅದಷ್ಟೇ ಅಲ್ಲದೇ ಪ್ರಮುಖ ಸ್ಥಳಗಳಲ್ಲಿ 250ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗುತ್ತಿದ್ದು, ಇದರ ನಿರ್ವಹಣೆಗಾಗಿ ತಾತ್ಕಾಲಿಕ ಕಮಾಂಡ್ ಸೆಂಟರ್ ಮತ್ತು 10 ವಾಚಿಂಗ್ ಟವರ್ ಸ್ಥಾಪಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷ ಮಹಿಳಾ ತಂಡ ರಚಿಸಲಾಗಿದೆ.

ಹಂಪಿ ಉತ್ಸವ ವೈಭವ ಏನಿದರ ವಿಶೇಷತೆ?

ನೀವು ಎಂದಾದರೂ ಪ್ರಾಚೀನ ಕೋಟೆ ಕೊತ್ತಲಗಳು, ಅವಶೇಷಗಳು, ಪುರಾತನ ನಾಗರೀಕತೆಯನ್ನು ಪರಿಚಯಿಸುವ ರಚನೆಗಳಿಗೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ನಿಮ್ಮ ಮನದಲ್ಲಿ ಒಂದು ವಿಚಿತ್ರ ಭಾವನೆ, ಕುತೂಹಲ, ತರಹೇವಾರಿ ಯೋಚನೆಗಳು ಮೂಡಿಯೇ ಮೂಡಿರುತ್ತವೆ. ಹೌದು, ಏಕೆಂದರೆ ಇವು ಗತಕಾಲದ ತಮ್ಮ ಇತಿಹಾಸವನ್ನು ಹೇಳಲು ಪ್ರಯತ್ನಿಸುತ್ತಿರುತ್ತವೆ.

ಇಂಥ ಐತಿಹಾಸಿಕ ಪ್ರಾಮುಖ್ಯವುಳ್ಳ ಅದೆಷ್ಟೊ ರಚನೆಗಳು, ಸ್ಥಳಗಳು ಭಾರತದಾದ್ಯಂತ ಕಾಣಬಹುದು. ಅವುಗಳಲ್ಲಿ ಕೆಲವು ಅತ್ಯಂತ ಶ್ರೀಮಂತ ವಾಸ್ತುಕಲೆ, ಇತಿಹಾಸ, ಪ್ರಾಚೀನ ಕಾಲದಲ್ಲಿಯೆ ಉನ್ನತ ಮಟ್ಟದ ಜೀವನಶೈಲಿಗಾಗಿ ವಿಶ್ವವಿಖ್ಯಾತಿಯನ್ನೇ ಪಡೆದಿವೆ. ಅಂಥ ಕೆಲವು ಅದ್ಭುತ ಸ್ಥಳಗಳ ಪೈಕಿ ಒಂದಾಗಿದೆ ಕರ್ನಾಟಕದ ಹೆಮ್ಮೆಯ ಹಂಪಿ ಅಥವಾ ಹಂಪೆ.

ಭಾರತ ಕಂಡ ಅತ್ಯದ್ಭುತ ರಾಜಸಾಮ್ರಾಜ್ಯಗಳ ಪೈಕಿ ವಿಜಯನಗರ ಸಾಮ್ರಾಜ್ಯವೂ ಒಂದು. ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಸಾಮ್ರಾಜ್ಯ ಜಗತ್ತಿನ ಅತಿ ಶ್ರೀಮಂತ ಸಾಮ್ರಾಜ್ಯವೆಂದರೂ ತಪ್ಪಾಗಲಾರದು. ಬೀದಿ ಬದಿಗಳಲ್ಲೆ ರತ್ನ, ವೈಡೂರ್ಯ, ವಜ್ರಗಳ ವ್ಯಾಪಾರ ನಡೆಯುತ್ತಿತ್ತೆಂದರೆ ನೀವೇ ಊಹಿಸಬಹುದು ವಿಜಯನಗರದ ವೈಭೋಗವನ್ನು.

ಹೀಗೆ ಆರ್ಥಿಕ ಶ್ರೀಮಂತಿಕೆ ಒಂದೆಡೆಯಾದರೆ, ಶಿಲ್ಪಕಲೆ ದೃಷ್ಟಿಯಿಂದ ಇನ್ನಷ್ಟು ಹೆಚ್ಚಾಗಿ ವಿಕಸಿತಗೊಂಡಿದ್ದು ಹೊರಗಿನವರು ಹೊಟ್ಟೆಕಿಚ್ಚು ಪಡುವಂತೆ ನಳನಳಿಸುತ್ತಿದ್ದವು ಇಲ್ಲಿನ ಶಿಲೆಯಲ್ಲಿ ಮೂಡಿದ ಶಿಲ್ಪಕಲಾಕೃತಿಗಳು. ಈ ಸಾಮ್ರಾಜ್ಯದ ಒಂದೊಂದೂ ಮೂಲೆಗಳಲ್ಲೂ ನಿಪುಣ ಶಿಲ್ಪಕಲಾಕಾರರ ಅದ್ಭುತ ರಚನೆಗಳು ಸುಂದರವಾಗಿ ರೂಪುಗೊಂಡಿದ್ದವು.

ಕಾಲಕ್ರಮೇಣ ವಿಜಯನಗರದ ವರ್ಚಸ್ಸು ಕಡಿಮೆಯಾದಂತೆ ಹಲವಾರು ಬಾರಿ ಶತ್ರುಗಳಿಂದ ದಾಳಿಗೆ ಒಳಗಾಗಿ, ಕಾಲದ ಹಿಡಿತಕ್ಕೆ ಒಳಗಾಗಿ, ಕೆಲ ರಚನೆಗಳು ಭಗ್ನಗೊಂಡರೂ ಹಂಪಿಯು ತನ್ನ ನಡಿಗೆಯನ್ನು ನಡೆದುಕೊಂಡು ಬಂದಿತಾದರೂ ತನ್ನ ವೈಭವವನ್ನು ಸಾರುವ ಇನ್ನೂ ಎಷ್ಟೋ ರಚನೆಗಳನ್ನು ಉಳಿಸಿಕೊಂಡೂ ಬಂದಿತು. ಇಂಥ ಅಪರೂಪದ, ಗತಕಾಲದ ವೈಭವ ಸಾರುವ ಹಂಪಿಯನ್ನು ಮುಂಬರುವ ಸಮಯದಲ್ಲೂ ಜೀವಂತವಾಗಿರಿಸುವ ಉದ್ದೇಶದಿಂದ ಕರ್ನಾಟಕ ಸರಕಾರದಿಂದ ಆರಂಭಿಸಲಾದ ಉತ್ಸವವೇ ಹಂಪಿ ಉತ್ಸವ.

Untitled design (80)

1992ರಲ್ಲಿ ವಿಜಯ ನಗರದ ಪರಂಪರೆಯನ್ನು ಜೀವಂತವಾಗಿಡಲು ರಾಜ್ಯ ಸರ್ಕಾರವು ಆಯೋಜಿಸಿದ ಬೃಹತ್ ಉತ್ಸವವಿದು. ಎಂಪಿ ಪ್ರಕಾಶ್‌ ಅವರ ಆಡಳಿತಾವಧಿಯಲ್ಲಿ ಆರಂಭವಾದ ಈ ವಿನೂತನ ಉತ್ಸವ ಇಂದಿಗೆ ಹಂಪಿಯ ಹೆಗ್ಗಳಿಕೆಯಾಗಿದೆ. ಅಂದಿನ ವಿಜಯನಗರ ಇಂದಿಗೆ ಹಂಪಿಯಾಗಿದೆ. ಆದರೆ, ಅಂದಿನ ವಾಸ್ತುಶಿಲ್ಪಗಳು ಇಂದಿಗೂ ಅಂದಿನ ಕಲೆ, ಸಂಸ್ಕೃತಿ, ಇತಿಹಾಸ, ಸಾಹಿತ್ಯ, ವೈಭವವನ್ನು ಪ್ರವಾಸಿಗರಿಗೆ ನೀಡುತ್ತಿವೆ.

ಕರ್ನಾಟಕ ಪ್ರವಾಸೋದ್ಯಮದ ದೃಷ್ಟಿಯಿಂದ ಹಂಪಿ ಉತ್ಸವವು ಕರ್ನಾಟಕದ ಪ್ರತಿಷ್ಠಿತ ಉತ್ಸವವಾಗಿದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರಲ್ಲಿ ಇದು ಹೆಚ್ಚು ಜನಪ್ರಿಯತೆಗಳಿಸಿದೆ. ನಮ್ಮ ನಾಡ ನುಡಿಯ ವೈಭವ ಸಾರುವ ಸದುದ್ದೇಶದಿಂದ ಈ ಉತ್ಸವಕ್ಕೆ ನಮ್ಮ ಜನರಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ.

ವಿಜಯ ಉತ್ಸವ ಎಂದೂ ಕರೆಯಲ್ಪಡುವ ಹಂಪಿ ಉತ್ಸವವು ಕರ್ನಾಟಕದ ವರ್ಣರಂಜಿತ ಉತ್ಸವಗಳ ಪೈಕಿ ಒಂದಾಗಿದೆ. ರಾಜ್ಯವಲ್ಲದೆ ದೇಶದ ಹಲವು ಭಾಗಗಳಿಂದಲೂ ಸಹ ಜನರು, ಪ್ರವಾಸಿಗರು ಹಾಗೂ ಮುಖ್ಯವಾಗಿ ವಿವಿಧ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡು ಕಳೆ ತರುತ್ತಾರೆ.

ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಉತ್ಸವದ ಪ್ರಮುಖ ಆಕರ್ಷಣೆ. ಬೊಂಬೆಯಾಟ, ಭಾರ ಎತ್ತುವಿಕೆ, ನಾಟಕ, ಸಂಗೀತ, ನೃತ್ಯ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡು ಅತ್ಯಂತ ಸಡಗರದಿಂದ ಈ ಉತ್ಸವ ನಡೆಯುತ್ತದೆ.

ಕರ್ನಾಟಕದ ನಾಡು ನುಡಿ ಸಂಸ್ಕೃತಿಗಳ ಪರಿಚಯ ನಿಮಗಾಗಬೇಕೆಂದಿದ್ದಲ್ಲಿ ಮೂರು ದಿನಗಳ ಕಾಲ ನಿಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಮುಂದೂಡಿ, ಒತ್ತಡ ಮರೆತು ಸಂತಸದಿಂದ ಈ ಉತ್ಸವದಲ್ಲಿ ಪಾಲ್ಗೊಳ್ಳಿ. ದೇಶದ ಪ್ರಮುಖ ಕಲಾವಿದರನ್ನು ಒಳಗೊಂಡ ಸಂಗೀತ, ಗಾಯನ ಮುಂತಾದ ಕಾರ್ಯಕ್ರಮಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ.

ನಾದ ಹೊಮ್ಮಿಸುವ ಕಂಬಗಳಾಗಲೀ, ಬಡವಿ ಲಿಂಗವಾಗಲೀ, ಸಾಸಿವೆ ಗಣೇಶನಾಗಲಿ, ಕಲ್ಲಿನ ರಥವಾಗಲೀ, ವಿರೂಪಾಕ್ಷ ದೇವಸ್ಥಾನ ಗೋಪುರವಾಗಲೀ, ಉಗ್ರನರಸಿಂಹನ ಸುಂದರ ಶಿಲಾ ವಿಗ್ರಹವಾಗಲೀ ಎಲ್ಲವೂ ಒಂದಕ್ಕಿಂತ ಒಂದು ವಿಶಿಷ್ಟ ಕಲಾ ರಚನೆಗಳಾಗಿದ್ದು ಅಂದಿನ ಕಲಾ ನೈಪುಣ್ಯವನ್ನು ನೀವು ಹಾಡಿ ಹೊಗಳುವಂತೆ ಮಾಡುತ್ತವೆ.

Untitled design (78)

ಅಷ್ಟೇ ಅಲ್ಲ, ಇಲ್ಲಿ ಪುಸ್ತಕ ಮಳಿಗೆಗಳು ಮತ್ತು ಹಲವಾರು ಸ್ಟಾಲುಗಳನ್ನೂ ಉತ್ಸವದ ಸಂದರ್ಭದಲ್ಲಿ ಹಾಕಿರಲಾಗುತ್ತದೆ. ಸರಿ ಇನ್ನೇಕೆ ತಡ...ಈ ಉತ್ಸವದಲ್ಲಿ ಪಾಲ್ಗೊಳ್ಳಲು ನೀವು ಸನ್ನದ್ಧರಾಗಿ ಹಾಗೂ ಪ್ರತಿ ವರ್ಷ ಜರುಗುವ ಈ ಉತ್ಸವಕ್ಕೆ ನಿಮ್ಮ ಭೇಟಿ ನೀಡಿ, ಕರ್ನಾಟಕ ಸಂಸ್ಕೃತಿಯ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸುವಂತೆ ಮಾಡುವಲ್ಲಿ ನೆರವಾಗಿ.

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಐತಿಹಾಸಿಕ ಹಂಪಿ ಉತ್ಸವ 2026 ಫೆಬ್ರವರಿ 13ರಿಂದ 15ರವರೆಗೆ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

5 ಸಾವಿರಕ್ಕೂ ಹೆಚ್ಚು ಕಲಾವಿದರು, ಡ್ರೋನ್ ಶೋ, ಗಾಳಿಪಟ ಉತ್ಸವ, ಮತ್ತು 'ಹಂಪಿ ಬೈ ಸ್ಕೈ' (ಹೆಲಿಕಾಪ್ಟರ್ ರೈಡ್) ಇದರ ಪ್ರಮುಖ ಆಕರ್ಷಣೆಗಳಾಗಿವೆ. ಖ್ಯಾತ ಗಾಯಕರು ಸಂಗೀತ ರಸದೌತಣ ನೀಡಲಿದ್ದು, ಪ್ರವಾಸಿಗರಿಗಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

--

ಹಂಪಿ ಉತ್ಸವ 2026ರ ವಿಶೇಷತೆಗಳು:

ದಿನಾಂಕ ಮತ್ತು ಉದ್ಘಾಟನೆ: ಫೆಬ್ರವರಿ 13, 14, 15

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ.

--

ಪ್ರಮುಖ ವೇದಿಕೆಗಳು

ಎಂಪಿ ಪ್ರಕಾಶ್ ವೇದಿಕೆ (ಮುಖ್ಯ ವೇದಿಕೆ)

ಕೃಷ್ಣದೇವರಾಯ ವೇದಿಕೆ

ವಿರೂಪಾಕ್ಷೇಶ್ವರ ವೇದಿಕೆ

ವಿದ್ಯಾರಣ್ಯ ವೇದಿಕೆ ( ಮಹಾನವಮಿ ದಿಬ್ಬ)

ಸಾಸಿವೆಕಾಳು ಗಣಪತಿ ವೇದಿಕೆ

ಒಟ್ಟು ಐದು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಗಾಯತ್ರಿ ಪೀಠ ಸಮೀಪ ಮುಖ್ಯ ವೇದಿಕೆ ಶ್ರೀಕೃಷ್ಣದೇವರಾಯನ ದರ್ಬಾರ್ ಮಾದರಿ ಇರಲಿದೆ.

ಡ್ರೋನ್ ಶೋ: ಪ್ರತಿದಿನ ಸಂಜೆ 7 ಗಂಟೆಗೆ ಮುಖ್ಯ ವೇದಿಕೆಯ ಬಳಿ 15 ನಿಮಿಷಗಳ ಕಾಲ ಆಕರ್ಷಕ ಡ್ರೋನ್ ಶೋ ನಡೆಯಲಿದೆ.

ಹಂಪಿ ಬೈ ಸ್ಕೈ: ಹೆಲಿಕಾಪ್ಟರ್ ಮೂಲಕ ಹಂಪಿಯ ಅವಶೇಷಗಳನ್ನು ವೀಕ್ಷಿಸುವ ಸೌಲಭ್ಯವಿದ್ದು 3,500 ರೂಗಳನ್ನು ನಿಗದಿಪಡಿಸಲಾಗಿದೆ.

ಸಂಗೀತ ಝೇಂಕಾರ

ವಿಜಯಪ್ರಕಾಶ್, ಮಂಗ್ಲಿ, ಹರಿಹರನ್, ಅರ್ಜುನ್ ಜನ್ಯ, ರಘು ದೀಕ್ಷಿತ್ ಸೇರಿದಂತೆ ಹಲವು ಸೆಲೆಬ್ರಿಟಿಗಳಿಂದ ಸಂಗೀತ ಕಾರ್ಯಕ್ರಮ.

ಜಾನಪದ ಸಂಭ್ರಮ: ವಿವಿಧ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ಶೋಭಾಯಾತ್ರೆ.

Untitled design (85)

ಹಂಪಿ ಉತ್ಸವಕ್ಕೆ 50 ವಿಶೇಷ ಬಸ್

ಪ್ರತಿ ವರ್ಷದಂತೆ ಈ ಬಾರಿಯೂ ಫೆಬ್ರವರಿ 13 ರಿಂದ 15ರವರೆಗೆ ಹಂಪಿ ಉತ್ಸವ ಜರುಗಲಿದ್ದು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಫೆಬ್ರವರಿ 13 ರಿಂದ 15 ರವರೆಗೆ 3 ದಿನಗಳ ಕಾಲ ಹೊಸಪೇಟೆಯಿಂದ ಹಂಪಿಗೆ 50 ವಿಶೇಷ ಉಚಿತ ಬಸ್ ಸೇವೆ ಒದಗಿಸಲಾಗುತ್ತದೆ. ಅದಲ್ಲದೇ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ 168 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು.

ಕಲರವ ಮೂಡಿಸಿದ ಕಾರ್ಯಕ್ರಮಗಳು

ಫೆಬ್ರವರಿ ಏಳರಿಂದಲೇ ಮಾತಂಗಾ ಪರ್ವತದ ಮೈದಾನದಲ್ಲಿ ಶಿಲ್ಪಕಲಾ ಶಿಬಿರ, ಎದುರು ಬಸವಣ್ಣ ಬಳಿಯ ಮಂಟಪದಲ್ಲಿ ಚಿತ್ರಕಲಾ ಶಿಬಿರ, ಹೊಸಪೇಟೆಯಲ್ಲಿನ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿ ವಿರೂಪಾಕ್ಷ ದೇವಾಲಯದವರೆಗೆ ಬೈಕ್‌ ರ್ಯಾಲಿ, ತುಂಗಾ ಆರತಿ ಮಹೋತ್ಸವ, ಹೊಸಪೇಟೆಯ ವಡಕರಾಯ ದೇವಸ್ಥಾನದ ರಥಬೀದಿಯಲ್ಲಿ ವಿಜಯನಗರ ವಸಂತ ವೈಭವ, ಕಮಲಾಪುರದಲ್ಲಿನ ಹೊಟೇಲ್‌ ಮಯೂರ ಭುವನೇಶ್ವರಿ ಆವರಣದಲ್ಲಿ ಹಂಪಿ ಬೈ ಸ್ಕೈ ಮತ್ತು HWHAMA ಕಚೇರಿ ಆವರಣದಲ್ಲಿ ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಬೋಟಿಂಗ್‌, ಹಂಪಿ ಇತಿಹಾಸದ ಕುರಿತು ವಿಚಾರ ಸಂಕಿರಣ, ಆಹಾರ ಮೇಳ, ಡ್ರೋನ್‌ ಪ್ರದರ್ಶನ, ಭಾರ ಎತ್ತುವ ಮತ್ತು ಕುಸ್ತಿಯಂಥ ಗ್ರಾಮೀಣ ಕ್ರೀಡೆಗಳು, ಕವಿಗೋಷ್ಠಿ, ಗಾಳಿಪಟ ಪ್ರದರ್ಶನ, ಯುವಗೋಷ್ಠಿ, ಜಾನಪದ ವಾಹಿನಿ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ಹಂಪಿಯನ್ನು ರಂಗೇರಿಸಿವೆ. ದೇಶ-ವಿದೇಶಗಳಿಂದ ಪ್ರವಾಸಿಗರು, ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಈ ಬಾರಿ ಹಿಂದೆಂದಿಗಿಂತ ಅದ್ದೂರಿ!
ಉತ್ಸವಕ್ಕಾಗಿ ಎಂಪಿ.ಪ್ರಕಾಶ್ ವೇದಿಕೆ, ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆ, ಸಾಸಿವೆ ಕಾಳು ಗಣಪ ವೇದಿಕೆ, ವಿದ್ಯಾರಣ್ಯ (ಮಹನಾವಮಿ ದಿಬ್ಬ) ವೇದಿಕೆ ಹಾಗೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೇದಿಕೆ ಸೇರಿ ಒಟ್ಟು 6 ಬೃಹತ್ ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. ಎಂ.ಪಿ. ಪ್ರಕಾಶ್ ವೇದಿಕೆ ಪ್ರಧಾನ ವೇದಿಕೆಯಾಗಿದ್ದು 50,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೇ ಈ ಬಾರಿ 8 ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು 15 ಸಾವಿರ ಆಸನಗಳ ಕಾಯ್ದಿರಿಸಲಾಗಿದೆ.
ಈ ಬಾರಿಯ ಉತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ರಚಿತಾ ರಾಮ್, ಡಾಲಿ ಧನಂಜಯ್ ಮತ್ತು ಬಿಗ್ ಬಾಸ್ ವಿಜೇತ ಗಿಲ್ಲಿನಟ ಭಾಗವಹಿಸುವುದು ಖಚಿತವಾಗಿದೆ. ಹಂಪಿ ಮತ್ತು ಸುತ್ತಮುತ್ತಲಿನ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಡೀ ಹಂಪಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
ಹಂಪಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಭದ್ರತೆಗೆ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಕ್ಕ-ಬುಕ್ಕರ ಇತಿಹಾಸ ಸಾರುವ ವಿಶೇಷ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಉತ್ಸವ ಮುಗಿದರೂ 7 ದಿನಗಳ ಕಾಲ ಮುಂದುವರಿಯಲಿದೆ. ಭಕ್ತಾದಿಗಳು ಮತ್ತು ಸಾರ್ವಜನಿಕರಿಗಾಗಿ ಕೃಷ್ಣ ದೇವಸ್ಥಾನದ ಬಳಿ ಸರ್ಕಾರದಿಂದ ಉಚಿತ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಉತ್ಸವಕ್ಕಾಗಿ ಸುಮಾರು 14 ರಿಂದ 15 ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗಿದೆ.
-ಜಮೀರ್ ಅಹಮದ್ ಖಾನ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು

------------------------------------------------------------------------

ಹಂಪಿ ಉತ್ಸವದ ಭಾಗವಾಗಿ ಒಟ್ಟು ಐದು ಮುಖ್ಯ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ನೆರಳು ಬೆಳಕಿನ ಶೋ ಮೂಲಕ ಹಂಪಿಯ ಇತಿಹಾಸದ ಚಿತ್ರಣವನ್ನು ಪ್ರಸಾರ ಮಾಡಲಾಗುತ್ತಿದೆ. ಉತ್ಸವದ ಸಮಯದಲ್ಲಿ ಹಂಪಿಗೆ ಬರುವವರ ಸಹಾಯಕ್ಕಾಗಿ ಹತ್ತಿರದ ವಿವಿಧ ತಾಲೂಕುಗಳಿಂದ 334 ಉಚಿತ ಬಸ್‌ಗಳನ್ನು ಬಿಡಲು ನಿರ್ಧರಿಸಲಾಗಿದೆ. ಇಲ್ಲಿ 350ಕ್ಕಿಂತ ಹೆಚ್ಚು ಗೈಡ್‌ಗಳಿದ್ದಾರೆ. ಹಾಗಾಗಿ ಹಂಪಿಯ ಪ್ರವಾಸಕ್ಕೆ ಬರುವವರಿಗೆ ಉತ್ತಮ ಗೈಡ್‌ ಟೂರ್‌ ವ್ಯವಸ್ಥೆಯೂ ಇದೆ. ವಿಶ್ವ ವಿಖ್ಯಾತ ಹಂಪಿ ಒಂದು ವಿಶಿಷ್ಟ ತಾಣ. ವಿಜಯನಗರ ಸಾಮ್ರಾಜ್ಯ ನಡೆದು ಬಂದ ಹಾದಿ, ಅದರ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಎಲ್ಲವನ್ನು ತಿಳಿದುಕೊಳ್ಳಲು ಹಂಪಿಗೆ ಅದರಲ್ಲೂ ಹಂಪಿ ಉತ್ಸವ ಸಮಯದಲ್ಲಿ ಪ್ರವಾಸಿಗರು ಭೇಟಿ ನೀಡಬೇಕು.
-ಕವಿತಾ ಎಸ್‌. ಮನ್ನಿಕೇರಿ, ವಿಜಯನಗರ ಜಿಲ್ಲಾಧಿಕಾರಿಗಳು

ಹಂಪಿ ಉತ್ಸವಕ್ಕೆ ಎಲ್ಲರೂ ಬರಬೇಕು. ಉತ್ಸವಕ್ಕೆ ಈಗಾಗಲೇ ಸಾಕಷ್ಟು ತಯಾರಿಗಳು ನಡೆಯುತ್ತಿವೆ. ಇದರ ಭಾಗವಾಗಿ ನಾಲ್ಕು ಮುಖ್ಯ ವೇದಿಕೆಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಉತ್ಸವ ಹಂಪಿಯ ಒಂದು ಮೆರುಗು. ಎಂಪಿ ಪ್ರಕಾಶ್‌ ಅವರು ಹಂಪಿ ಉತ್ಸವವನ್ನು ಆರಂಭಿಸಿದ್ದರು. 1992ರಿಂದ ಹಂಪಿ ಉತ್ಸವ ಆರಂಭವಾಯಿತು. ಆದರೆ ಹೆಚ್ಚು ಮೆರುಗು ಕಂಡಿದ್ದು 2010ರಲ್ಲಿ. ಅಂದಿಗೆ ಶ್ರೀಕೃಷ್ಣದೇವರಾಯ ಅವರ ಪಟ್ಟಾಭಿಷೇಕವಾಗಿ 500 ವರ್ಷ ತುಂಬಿತ್ತು. ಪ್ರತಿ ವರ್ಷವೂ ಹಂಪಿ ಉತ್ಸವ ನಡೆಯುತ್ತಿದೆ. ದೇಶ-ವಿದೇಶಗಳಿಂದ ಜನರು ಹಂಪಿ ಉತ್ಸವಕ್ಕೆ ಬರುವುದು ಹೆಚ್ಚು. ಅವರಿಗೆಲ್ಲ ಒಂದು ಮನವಿ ಹಂಪಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿ. ʻಕಣ್ಣಿದ್ದರೆ ಬೇಲೂರು ನೋಡು, ಕಾಲಿದ್ದರೆ ಹಂಪಿ ನೋಡುʼ ಎಂಬ ಮಾತು ಇದೆ. ಸುತ್ತಾಡಿ ನೋಡಲು ಇಲ್ಲಿ ಸಾಕಷ್ಟು ತಾಣಗಳಿವೆ. ಹಂಪಿ ಉತ್ಸವ ಇದಕ್ಕೆ ದಿ ಬೆಸ್ಟ್‌ ಸಮಯ.
-ಶೇಖರ್‌ ಗೌಡ, ಟೂರ್‌ ಗೈಡ್‌

ನಾವು ಇಂಗ್ಲೆಂಡ್‌ನಿಂದ ಹಂಪಿಗೆ ಬಂದಿದ್ದೇವೆ. ಇಲ್ಲಿಗೆ ಬರುವುದು ನಮ್ಮ ಐದಾರು ವರ್ಷಗಳ ಕನಸಾಗಿತ್ತು. ಇದು ಐತಿಹಾಸಿಕ ಮತ್ತು ಸುಂದರವಾದ ತಾಣ. ಇಲ್ಲಿನ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿದೆ. ನಮ್ಮ ಟೂರ್‌ ಗೈಡ್‌ ಹ್ಯಾಪಿ ಇನ್‌ ಹಂಪಿ ಮನಸ್ಥಿತಿಯವರು. ಅವರು ನಮಗೆ ತುಂಬಾ ಚೆನ್ನಾಗಿ ಸ್ಥಳಗಳನ್ನು ತೋರಿಸಿ, ಅವುಗಳ ಇತಿಹಾಸ, ವಾಸ್ತುಶಿಲ್ಪದ ಬಗ್ಗೆ ಮಾಹಿತಿ ನೀಡುತ್ತಾರೆ. ಇಲ್ಲಿ ಹಂಪಿ ಉತ್ಸವವೂ ಆರಂಭವಾಗುತ್ತಿದ್ದು, ಸಾಕಷ್ಟು ವೇದಿಕೆಗಳನ್ನು ಹಾಕುತ್ತಿದ್ದಾರೆ. ನಾವು ಇನ್ನೂ ಎರಡು ದಿನಗಳ ಕಾಲ ಹಂಪಿಯಲ್ಲೇ ಉಳಿದುಕೊಳ್ಳಲಿದ್ದೇವೆ. ಅಷ್ಟರೊಳಗೆ ಸಾಧ್ಯವಾದಷ್ಟು ಹಂಪಿಯನ್ನು ಸುತ್ತಾಡಬೇಕು.
- ಶಾಲಿನ್‌ ಮತ್ತು ಸಹ ಪ್ರವಾಸಿಗರು

ನಾವಿಬ್ಬರೂ ಫೆ. 09ಕ್ಕೆ ಹಂಪಿಗೆ ಭೇಟಿ ನೀಡಿದ್ದೆವು. ಇಲ್ಲಿನ ಕಡಲೆಕಾಳು ಗಣೇಶ, ವಿಜಯ ವಿಠಲ ದೇವಾಲಯ, ಬಡವಿಲಿಂಗ, ಯೋಗಾನರಸಿಂಹ ಇನ್ನು ಸಾಕಷ್ಟು ದೇವಾಲಯಗಳನ್ನು ನೋಡಿದೆವು. ಈ ಐತಿಹಾಸಿಕ ದೇವಾಲಯಗಳು ನೋಡಲು ತುಂಬಾ ಸುಂದರವಾಗಿವೆ. ಒಟ್ಟು ಹಂಪಿ ನಂಬಲಾಗದಷ್ಟು ಸುಂದರವಾಗಿದೆ. ಇಲ್ಲಿನ ವಾತಾವರಣ ಚೆನ್ನಾಗಿದೆ. ಜನರೂ ಸ್ನೇಹಪರರಾಗಿದ್ದಾರೆ. ಇಲ್ಲಿ ಹಂಪಿ ಉತ್ಸವಕ್ಕೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಲೈಟಿಂಗ್‌ ವ್ಯವಸ್ಥೆ, ವೇದಿಕೆಗಳು ಮತ್ತಿತರ ಕೆಲಸಗಳು ನಡೆಯುತ್ತಿವೆ. ಎರಡು ದಿನಗಳ ಕಾಲ ಹಂಪಿಯಲ್ಲಿ ತಂಗಿದ್ದೇವೆ. ಹಂಪಿಯ ನಂತರ ಗೋವಾಕ್ಕೆ ಹೋಗಲು ಯೋಜಿಸಿದ್ದೇವೆ. ಸಾಧ್ಯವಾದರೆ ಹಂಪಿ ಉತ್ಸವದ ಹೊತ್ತಿಗೆ ನಾವು ಮರಳಿ ಹಂಪಿಗೆ ಬರಬಹುದು.
-ಜೂಲಿಯನ್ ಮತ್ತು ಝುನೋಕ್, ಫ್ರಾನ್ಸ್‌ ಪ್ರವಾಸಿಗರು

ಸುಶೀಲಾನಗರ ಪ್ರೌಢಶಾಲೆಯ ಮಕ್ಕಳನ್ನು ವನ ದರ್ಶನಕ್ಕೆಂದು ಕರೆದುಕೊಂಡು ಬಂದಿದ್ದೇವೆ. ಹಂಪಿಯ ಸುತ್ತಲಿನ ಅರಣ್ಯ ಪ್ರದೇಶಗಳಿಗೆ ಭೇಟಿನೀಡಿ ಮಕ್ಕಳಿಗೆ ಮರ-ಗಿಡ, ಪ್ರಾಣಿ-ಪಕ್ಷಿಗಳ ಕುರಿತು ಮಾಹಿತಿ ನೀಡಿದ್ದೇವೆ. ಅವರಲ್ಲಿ ಕಾಡಿನ ಕುರಿತು ಜಾಗೃತಿ ಮೂಡಿಸಲು ಈ ಮೂಲಕ ಪ್ರಯತ್ನಿಸುತ್ತಿದ್ದೇವೆ. ಇದೇ ವೇಳೆ ಹಂಪಿಗೆ ನಾವು ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ. ಇಲ್ಲಿನ ಇತಿಹಾಸ, ದೇವಾಲಯಗಳ ವಾಸ್ತುಶಿಲ್ಪ, ತುಂಗಭದ್ರಾ ನದಿ ಎಲ್ಲವನ್ನು ತೋರಿಸುತ್ತಿದ್ದೇವೆ. ಈಗ ಹಂಪಿಯಲ್ಲಿ ಉತ್ಸವ ಸಿದ್ಧತೆಗಳೂ ನಡೆಯುತ್ತಿವೆ. ನಗರವಿಡೀ ದೀಪದ ಅಲಂಕಾರದಿಂದ ಕೂಡಿರುವುದರಿಂದ ನೋಡಲು ಆಕರ್ಷಕವಾಗಿದೆ. ಮಕ್ಕಳೆಲ್ಲ ಇದನ್ನು ಇಷ್ಟ ಪಟ್ಟಿದ್ದಾರೆ.
-ವಿಜಯ ಕುಮಾರ್‌ ಮಲ್ಲೇಶಪ್ಪ, ಫಾರೆಸ್ಟರ್‌
Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ