ಮೂರು ದಶಕಗಳು-ನಲವತ್ನಾಲ್ಕು ದೇಶಗಳು ಜಗತ್ತು ಸುತ್ತಿದ ಈ ಫಕೀರ ʼದಿ ಗ್ರೇಟ್ ಟ್ರಾವೆಲರ್ʼ
ಇಬ್ನ್ ಬಟೂಟ ನಿಜಕ್ಕೂ ದಿ ಗ್ರೇಟ್ ಟ್ರಾವೆಲರ್. ಅವನು ತನ್ನ ಬದುಕಿನ ಇಪ್ಪತ್ತೊಂಬತ್ತು ವರ್ಷಗಳು ಅಲೆಮಾರಿಯಂತೆ ಜಗತ್ತನ್ನು ಸುತ್ತಿದವನು. ಅವನದ್ದು ಖಾಲಿ ಪ್ರವಾಸವಲ್ಲ. ಅದೊಂದು ಮಹಾನ್ವೇಷಣೆ. ಅವನು ಕ್ರಮಿಸಿದ್ದು ಸಹಸ್ರ ಸಹಸ್ರ ಕಿಲೋಮೀಟರ್. ತಾನು ಅಡ್ಡಾಡಿದ ಪ್ರತಿ ದೇಶದ ಜನಜೀವನ ಮತ್ತು ಸಂಸ್ಕೃತಿಯನ್ನು ಸ್ಪಷ್ಟವಾಗಿ ದಾಖಲಿಸಿದನು. ಬಟೂಟ ಪ್ರವಾಸಕ್ಕೆ ಹೊಸ ದಿಕ್ಕು ತೋರಿದವನು. 800 ವರ್ಷಗಳ ಹಿಂದಿನ ಈ ಮಹಾನ್ ಯಾತ್ರಿಕನ ಪ್ರವಾಸ ಈಗಲೂ ಬೆರಗು ಹುಟ್ಟಿಸುವಂಥದ್ದು!
`ಜಗತ್ತು ಸುತ್ತುತ್ತಲೇ ನಾನು ದೇವರನ್ನು ತಲುಪಿದ್ದೇನೆ. ಮತ್ತೊಮ್ಮೆ ಅವನನ್ನು ಕಾಣುವ ಹಂಬಲವಿಲ್ಲ. ನನ್ನದು ಬರಿಯ ಪ್ರವಾಸವಲ್ಲ. ಅದೊಂದು ಅನ್ವೇಷಣೆ. ಅಲೆಮಾರಿತನದ ಹುಚ್ಚಿನಿಂದಲೇ ಕುಟುಂಬವನ್ನು ತೊರೆದೆ. ಆದರೆ ಕಳೆದುಕೊಂಡದ್ದೇನೂ ಇಲ್ಲ. ನನ್ನೊಳಗೆ ಸಾಕಷ್ಟು ತುಂಬಿಕೊಂಡಿದ್ದೇನೆʼ ಎಂದವನು ಇಬ್ನ್ ಬಟೂಟ. ಅವನು ಮಹಾನ್ ಯಾತ್ರಿಕ. ಅವನ ಹಾಗೆ ಜಗತ್ತನ್ನು ಸುತ್ತಿದ ಮತ್ತೊಬ್ಬ ಪ್ರವಾಸಿಗನಿಲ್ಲ. ತನ್ನ ಹುಟ್ಟೂರಾದ ಮೊರಾಕೊದಿಂದ ಕತ್ತೆ ಮೇಲೆ ಕೂತು ಹೊರಟವನು ಮಾಡಿದ್ದು ವಿಶ್ವಪರ್ಯಟನೆ. ಬರಿಗಾಲಿನಲ್ಲಿಯೇ ನಲವತ್ನಾಲ್ಕು ದೇಶಗಳನ್ನು ಸುತ್ತಿದ ಬಟೂಟ ತನ್ನ ಬದುಕಿನ ಇಪ್ಪತ್ತೊಂಬತ್ತು ವರ್ಷಗಳು ಎಲ್ಲಿಯೂ ವಿರಮಿಸಲಿಲ್ಲ. ಮಧ್ಯ ಪ್ರಾಚ್ಯದಲ್ಲೆಲ್ಲ ಅಡ್ಡಾಡಿ ಏಷ್ಯಾ ಕಡೆಗೆ ಬಂದನು. ಕರ್ನಾಟಕದಲ್ಲೂ ಅಂಡಲೆದನು. ಅವನಿಗೆ ಹೋದಲೆಲ್ಲ ಹೆಂಡಿರು-ಮಕ್ಕಳು. ಅವನ ಯಾತ್ರೆಯ ಕಥನಗಳು ಜಗತ್ತು ಸುತ್ತುವ ಪ್ರತಿಯೊಬ್ಬರಿಗೂ ದಿಕ್ಸೂಚಿ. ಇಬ್ನ್ ಬಟೂಟ ಮಾರ್ಕೊಪೊಲೊವನ್ನೂ ಮೀರಿದವನು.

ಟ್ರಾವೆಲ್ ಆಫ್ ಬಟೂಟ
ಇಬ್ನ್ ಬಟುಟಾ ಮೊರಾಕೊದ ಟ್ಯಾಂಗಿಯರ್‌ನಲ್ಲಿ ಫೆಬ್ರವರಿ 25, 1304 ರಂದು ಜನಿಸಿದವನು. ಪ್ರಸ್ತುತ ಅಟ್ಲಾಂಟಿಕ್ ಮಹಾಸಾಗರದ ಕರಾವಳಿಯಲ್ಲಿರುವ ಈ ಪ್ರದೇಶವು ಮೆಡಿಟರೇನಿಯನ್ ಸಮುದ್ರದಿಂದ 45 ಮೈಲುಗಳಷ್ಟು ಪಶ್ಚಿಮಕ್ಕೆ, ಜಿಬ್ರಾಲ್ಟರ್ ಜಲಸಂಧಿಯ ಪಶ್ಚಿಮ ಭಾಗಕ್ಕೆ ಸಮೀಪದಲ್ಲಿದೆ. ಬಟೂಟನ ಕುಟುಂಬದಲ್ಲಿ ವಿದ್ವಾಂಸರಿದ್ದರು. ಆದರೆ ಅವನು ಮದರಸಾದಲ್ಲಿ ಎಂದೂ ಕಲಿತವನಲ್ಲ. ಅವನದ್ದು ಅಲೆಮಾರಿತನದ ಪ್ರವೃತ್ತಿ. ಬಾಲ್ಯದಲ್ಲೇ ಮೆಕ್ಕಾ ಕಡೆಗೆ ತೀರ್ಥಯಾತ್ರೆ ಬೆಳೆಸಿದನು. ಅವನು ಅರೆ ಗಳಿಗೆಯೂ ಕೂತು ಕೆಟ್ಟವನಲ್ಲ. ತೋಚಿದ ಕಡೆಗೆಲ್ಲ ಪ್ರಯಾಣ ಬೆಳೆಸಿ ಗರಗರ ಸುತ್ತಿ ಬಂದನು. ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಆತನಿಗೆ ಜಗತ್ತು ಸುತ್ತುವ ಆಸೆಯಾಯಿತು. ಬಟೂಟ 1325 ರಲ್ಲಿ ತನ್ನ ಹೆತ್ತ ತಂದೆ-ತಾಯಿ ಮತ್ತು ಇಡೀ ಕುಟುಂಬವನ್ನು ತೊರೆದು ಹೊರ ನಡೆದನು. ಅವನದ್ದು ಒಬ್ಬಂಟಿ ಪ್ರಯಾಣ. ಅವನು ಕ್ರಮಿಸಿದ್ದು ಸಹಸ್ರಾರು ಕಿಲೋಮೀಟರ್.
ಅಲೆಕ್ಸಾಂಡ್ರಿಯಾ ಡಮಾಸ್ಕಸ್,ಆಫ್ರೋ-ಯುರೇಷಿಯಾ, ಮಧ್ಯ ಪ್ರಾಚ್ಯ, ಯುರೋಪ್, ಚೀನಾ, ಮಾಲ್ಡೀವ್ಸ್, ಭಾರತ ಹೀಗೆ ನಲವತ್ನಾಲ್ಕು ದೇಶಗಳಲ್ಲಿ ಇಬ್ನ್ ಬಟೂಟ ಸಂಚರಿಸಿದನು. ನದಿ, ಬಂಜರು ಮರುಭೂಮಿ, ದುರ್ಗಮವಾದ ಕಾಡು, ಪರ್ವತದ ಹಾದಿ ಹೀಗೆ ಎಲ್ಲೆಡೆ ಹೆಜ್ಜೆಗಳನ್ನಿಡುತ್ತಾ ಹೋದನು. ಅಷ್ಟೆಲ್ಲ ದೇಶಗಳನ್ನು ಸುತ್ತಿದ ಅವನಿಗೆ ಇಷ್ಟವಾದದ್ದು ಮತ್ತು ಅವನ ಮೇಲೆ ಪ್ರಭಾವ ಬೀರಿದ್ದು ಭಾರತ. ಅದನ್ನು ಸ್ವತಃ ಅವನೇ ದಾಖಲಿಸಿದ್ದಾನೆ. ಇಬ್ನ್ ಬಟೂಟ ಆಗಿನ ದೆಹಲಿಯ ಆಡಳಿತಗಾರ ಮೊಹಮ್ಮದ್ ಬಿನ್ ತುಘಲಕ್ ಆಸ್ಥಾನವನ್ನು ತಲುಪಿದನು. ಅಲ್ಲೊಂದು ಕೆಲಸ ಗಿಟ್ಟಿಸಿಕೊಂಡು ಸುದೀರ್ಘ ಏಳು ವರ್ಷಗಳು ಅಲ್ಲಿಯೇ ವಾಸವಿದ್ದನು. ಆ ಸಮಯದಲ್ಲಿ ಅವನು ಪಂಜಾಬ್‌ನ ಅಬೋಹರ್, ಹರಿಯಾಣದ ಸಿರ್ಸಾ ಮತ್ತು ಹಂಸಿ, ಉತ್ತರ ಪ್ರದೇಶದ ಅಲಿಗಢ ಮತ್ತು ಕನ್ನೌಜ್, ಮಹಾರಾಷ್ಟ್ರದ ದೌಲತಾಬಾದ್, ಗುಜರಾತ್‌ನ ಖಂಬತ್, ಮಧ್ಯಪ್ರದೇಶದ ಗ್ವಾಲಿಯರ್, ಉಜ್ಜಯಿನಿ, ಕೇರಳದ ಕೋಳಿಕ್ಕೋಡ್ ಹೀಗೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿದನು. ಆ ಭೇಟಿಗಳನ್ನು ಇಬ್ನ್ ಬಟೂಟ ʼಭಾರತದ ಪ್ರವಾಸವು ನನ್ನ ಯಾತ್ರೆಯ ದಿನಗಳ ಪರ್ವಕಾಲʼ ಎಂದು ಕರೆದಿದ್ದಾನೆ. ಕರ್ನಾಟಕದ ಹೊನ್ನಾವರದಲ್ಲೂ ಈ ಅಲೆಮಾರಿ ತಿಂಗಳುಗಟ್ಟಲೆ ಬೀಡು ಬಿಟ್ಟಿದ್ದನು.
ಬಟೂಟನ ಅಂತಿಮ ಪ್ರವಾಸ
ಮೂರು ದಶಕಗಳು ವಿಶ್ವ ಪರ್ಯಟನೆ ಮಾಡಿದ ಇಬ್ನ್ ಬಟೂಟನಿಗೆ ಹತ್ತಾರು ಮದುವೆಗಳಾಗಿದ್ದವು. ಅವನ ಸಂತಾನ ಎಲ್ಲೆಲ್ಲಿದೆ ಎಂಬುದರ ಬಗ್ಗೆ ಅವನಿಗೂ ಗೊತ್ತಿರಲಿಲ್ಲ. ಅವನು ತನ್ನ ನಲವತ್ತೈದನೆಯ ವಯಸ್ಸಿನಲ್ಲಿ ಟ್ಯಾಂಗಿಯರ್‌ನ ತನ್ನ ಮನೆಗೆ ಮರಳಿದನು. ಕೆಲವು ತಿಂಗಳ ಹಿಂದೆಯಷ್ಟೇ ಪ್ಲೇಗ್‌ನಿಂದ ಬಳಲಿ ಬಟೂಟನ ತಾಯಿ ಸಾವನ್ನಪ್ಪಿದರು. ಬಟೂಟ ಡಮಾಸ್ಕಸ್ ಪ್ರವಾಸದಲ್ಲಿದ್ದಾಗಲೇ ಆತನ ತಂದೆಯೂ ಮರಣ ಹೊಂದಿದ್ದರು. ಹುಟ್ಟೂರಿನಲ್ಲಿ ಅಲ್ಪ ಕಾಲವೂ ಇರದ ಬಟೂಟ ಮುಂದೆ ಉತ್ತರ ಆಫ್ರಿಕಾ, ಸ್ಪೇನ್ ಮತ್ತು ಪಶ್ಚಿಮ ಆಫ್ರಿಕಾ ದೇಶಗಳತ್ತ ಪ್ರಯಾಣ ಬೆಳೆಸಿದನು. ಎಲ್ಲ ನೋವುಗಳನ್ನೂ ದಾಟಲು ಅವನು ಅಲೆಮಾರಿತನದ ಮೊರೆ ಹೋಗಬೇಕಿತ್ತು. 21ನೇ ವಯಸ್ಸಿಗೆ ಪ್ರಯಾಣ ಆರಂಭಿಸಿದ ಇಬ್ನ್ ಬಟೂಟ ತನ್ನ ಐವತ್ತನೇ ವಯಸ್ಸಿನಲ್ಲಿ ಮುಗಿಸಿದನು. ಅವನು 1368ರಲ್ಲಿ ನಿಧನ ಹೊಂದಿರಬಹುದು ಎಂದು ದಾಖಲೆಗಳು ಹೇಳುತ್ತವೆ. 13ನೇ ಶತಮಾನದ ಯಾತ್ರಿಕನ ಸಾಹಸವನ್ನು ಇಪ್ಪತ್ತೊಂದನೆಯ ಶತಮಾನದಲ್ಲೂ ಸ್ಮರಿಸುತ್ತಿದ್ದೇವೆ ಎಂದರೆ; ಇಬ್ನ್ ಬಟೂಟ ದಿ ಗ್ರೇಟ್.. ಅಷ್ಟೇ ಅಲ್ಲ. ಅವನು ದಿ ಗ್ರೇಟ್ ಟ್ರಾವೆಲರ್!
ನಾನು ಹುಟ್ಟು ಅಲೆಮಾರಿ. ಇಪ್ಪತ್ತೊಂದು ವರ್ಷದ ತರುಣನಿದ್ದಾಗಲೇ ಹೆತ್ತವರು ಮತ್ತು ಇಡೀ ಕುಟುಂಬವನ್ನು ತೊರೆದೆ. ಥೇಟ್ ಹಕ್ಕಿಯೊಂದು ತನ್ನ ಗೂಡನ್ನು ತೊರೆದಂತೆ. ಪ್ರತಿ ದೇಶಕ್ಕೆ ಹೋದಾಗಲೂ ಒಬ್ಬೊಬ್ಬರನ್ನು ವರಿಸಿದೆ . ಹತ್ತಾರು ಹೆಣ್ಣು ಮಕ್ಕಳೊಂದಿಗೆ ಹಾಸಿಗೆಯಲ್ಲಿ ಮಲಗಿದೆ. ನನಗೆಷ್ಟು ಮಕ್ಕಳು? ಉಹೂಂ..ನೆನಪಿಲ್ಲ. ಇಡೀ ಜಗತ್ತು ನನ್ನನ್ನು ಪ್ರೀತಿ-ಆದರದಿಂದ ನೋಡಿದೆ. ನನ್ನದು ಬರೋಬ್ಬರಿ ಇಪ್ಪತ್ತೊಂಬತ್ತು ವರ್ಷಗಳ ಸುತ್ತಾಟ. ನಲವತ್ನಾಲ್ಕು ದೇಶಗಳಲ್ಲಿ ಫಕೀರನಂತೆ ಅಡ್ಡಾಡಿದ್ದೇನೆ. ಬದುಕನ್ನು ಇಡಿಯಾಗಿ ಅನುಭವಿಸಿದ ಸಂಭ್ರಮವಿದೆ. ನಾನು ಮೊರಾಕೊದಲ್ಲಿ ಹುಟ್ಟಿದವನು. ಸಾವು ಎಲ್ಲಿ ಬೇಕಾದರೂ ಸಂಭವಿಸಲಿ. ತಿರುಗಾಲನಿಗೆ ಇಡೀ ಜಗತ್ತು ತವರು!