ಕ್ರಾಂಪುಸ್‌ಲೌಫ್; ಯುರೋಪ್‌ನ ಭೂತಾರಾಧನೆ
ದುಷ್ಟ ಆತ್ಮಗಳನ್ನು ಓಡಿಸಲು ಭಯಾನಕ ವೇಷ, ಸರಪಳಿಗಳ ಶಬ್ದ, ಬೆಂಕಿ ಮತ್ತು ಹೊಗೆ ಬಳಸಿ ನಡೆಸುತ್ತಿದ್ದ ವಿಧಿಗಳಿವು. ಕಾಲ ನಂತರ ಈ ಸಂಪ್ರದಾಯದ ಭಾಗವಾಯಿತು. ಚಳಿಗಾಲದ ಸೂರ್ಯಾಸ್ತದ ಸಂದರ್ಭದಲ್ಲಿ ಬೆಳಕಿನ ಪುನರ್ಜನ್ಮವನ್ನು ತಿಳಿಸುವ ಆಚರಣೆಗಳು, ಇಂದಿಗೂ ಕ್ರಾಂಪುಸ್‌ಲೌಫ್‌ನ ಜ್ವಾಲಾ-ಕ್ರೀಡೆಯಲ್ಲಿರುತ್ತವೆ.
- ಸುನೀಲ್ ತುಂಬಗಿ
ಆಲ್ಪ್ಸ್ ಪರ್ವತ ಶ್ರೇಣಿಗಳ ಹಿಮಾವೃತ ಪ್ರದೇಶಗಳಲ್ಲಿ ಪ್ರತಿವರ್ಷ ಡಿಸೆಂಬರ್ 5ರಂದು ನಡೆಯುವ ಕ್ರಾಂಪುಸ್‌ಲೌಫ್, ಯೂರೋಪಿನ ಅತ್ಯಂತ ಹಳೆಯ ಮತ್ತು ವಿಶಿಷ್ಟ ಚಳಿಗಾಲದ ಸಂಪ್ರದಾಯಗಳಲ್ಲಿ ಒಂದು. ಆಸ್ಟ್ರಿಯಾ, ಜರ್ಮನಿ ಮತ್ತು ಸ್ವಿಟ್ಜರ್‌ಲೆಂಡ್ ಒಳನ್ನೊಳಗೊಂಡ ಆಲ್ಪೈನ್ ಪ್ರದೇಶಗಳಾದ ಸಾಲ್ಸ್‌ಬರ್ಗ್ ಮತ್ತು ಬಾವೇರಿಯಾಯಲ್ಲಿ ಈ ಹಬ್ಬ ಅಪಾರ ಜನಪ್ರಿಯತೆಯನ್ನು ಪಡೆದಿದ್ದು, ಸಾವಿರಾರು ಸ್ಥಳೀಯರು ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿದೆ.
ಈ ಮೆರವಣಿಗೆಯ ಕೇಂದ್ರ ಬಿಂದು ಎರಡು ಸೆಂಟ್ ನಿಕೊಲಸ್ ಮತ್ತು ಕ್ರಾಂಪುಸ್. ಸೆಂಟ್ ನಿಕೊಲಸ್ ದಯೆ, ಬೆಳಕು ಮತ್ತು ಒಳ್ಳೇತನದ ಸಂಕೇತವಾಗಿದ್ದರೆ, ಕ್ರಾಂಪುಸ್ ಕತ್ತಲೆ, ಭಯ ಮತ್ತು ನಿಯಂತ್ರಣದ ಪ್ರತಿನಿಧಿ. ಇವರಿಬ್ಬರ ಕುರಿತು ಒಂದು ಜನಪ್ರಿಯ ಕಥೆಯೂ ಇದೆ. ಒಳ್ಳೆಯ ವರ್ತನೆ ತೋರಿದ ಮಕ್ಕಳಿಗೆ ಸೆಂಟ್ ನಿಕೊಲಸ್ ಸಿಹಿತಿಂಡಿಗಳು ಮತ್ತು ಸಣ್ಣ ಉಡುಗೊರೆಗಳನ್ನು ನೀಡುತ್ತಿದ್ದರೆ, ತಪ್ಪು ಮಾಡಿದ ಅಥವಾ ಮಾತು ಕೇಳದ ಮಕ್ಕಳನ್ನು ಕ್ರಾಂಪುಸ್ ತನ್ನ ಸರಪಳಿಗಳ ಗದ್ದಲ ಮತ್ತು ಭಯಾನಕ ರೂಪದಿಂದ ಎಚ್ಚರಿಸುತ್ತಾನೆ. ಈ ಕಥೆ ಶತಮಾನಗಳಿಂದ ಮಕ್ಕಳಿಗೆ ನೈತಿಕ ಪಾಠವನ್ನು ನೀಡುವ ಒಂದು ಜನಪದ ಪರಂಪರೆಯಾಗಿ ಮುಂದುವರಿದಿದೆ.

ಈ ಮೆರವಣಿಗೆಯಲ್ಲಿ ಎಲ್ಲಾ ವಯೋಮಾನದ ಕ್ರಾಂಪುಸ್ ಮುಖವಾಡ, ವೇಷ ಧರಿಸಿ ಬೀದಿಗಳಲ್ಲಿ ಸಂಚರಿಸುತ್ತಾರೆ. ಬೆಂಕಿಯ ಹೊಳಪು, ಹೊಗೆ ಹಾಗೂ ದೊಡ್ಡ ಗಂಟೆಗಳ ಗದ್ದಲ, ಇವೆರಡರ ಸಂಗಮದಿಂದ ಉತ್ಸವ ಮತ್ತಷ್ಟು ರೋಚಕವಾಗಿರುತ್ತದೆ. ಸಾಲ್ಸ್‌ಬರ್ಗ್ ಮತ್ತು ಬಾವೇರಿಯಾದ ಅನೇಕ ಊರು-ಪಟ್ಟಣಗಳಲ್ಲಿ ಈ ಮೆರವಣಿಗೆಗಳು ಶತಮಾನಗಳಿಂದ ಮುಂದುವರಿದಿದ್ದು, ಇಂದಿಗೂ ಚಳಿಗಾಲದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಯಾಗಿ ಉಳಿದಿವೆ. ಸ್ಥಳೀಯರು ಆಹಾರ, ಪಾನೀಯ ಹಾಗೂ ಹಬ್ಬದ ಮಾರುಕಟ್ಟೆಗಳನ್ನು ಆನಂದಿಸುವ ಮೂಲಕ, ಈ ಹಬ್ಬವನ್ನು ಸಮಗ್ರ ಸಮುದಾಯದ ಆಚರಣೆಯಾಗಿ ಪರಿವರ್ತಿಸುತ್ತಾರೆ.
ಇತಿಹಾಸಕಾರರ ಪ್ರಕಾರ, ಕ್ರಾಂಪುಸ್‌ಲೌಫ್‌ನ ಹಿನ್ನೆಲೆ ಸಾವಿರ ವರ್ಷಗಳ ಹಿಂದಿನ ಪೇಗನ್ ಸಂಸ್ಕೃತಿಯಲ್ಲಿದೆ. ಆ ಕಾಲದಲ್ಲಿ ಚಳಿಗಾಲವನ್ನು ಕತ್ತಲೆ ಹಾಗೂ ದುಷ್ಟ ಶಕ್ತಿಗಳ ಕಾಲವೆಂದು ಪರಿಗಣಿಸಲಾಗುತ್ತಿತ್ತು. ದುಷ್ಟ ಆತ್ಮಗಳನ್ನು ಓಡಿಸಲು ಭಯಾನಕ ವೇಷ, ಸರಪಳಿಗಳ ಶಬ್ದ, ಬೆಂಕಿ ಮತ್ತು ಹೊಗೆ ಬಳಸಿ ನಡೆಸುತ್ತಿದ್ದ ವಿಧಿಗಳಿವು. ಕಾಲ ನಂತರ ಈ ಸಂಪ್ರದಾಯದ ಭಾಗವಾಯಿತು. ಚಳಿಗಾಲದ ಸೂರ್ಯಾಸ್ತದ ಸಂದರ್ಭದಲ್ಲಿ ಬೆಳಕಿನ ಪುನರ್ಜನ್ಮವನ್ನು ತಿಳಿಸುವ ಆಚರಣೆಗಳು, ಇಂದಿಗೂ ಕ್ರಾಂಪುಸ್‌ಲೌಫ್‌ನ ಜ್ವಾಲಾ-ಕ್ರೀಡೆಯಲ್ಲಿರುತ್ತವೆ. ವಾಡಿಕೆಯಂತೆ ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 5 ಸೇರಿದಂತೆ ಕ್ರಿಸ್ತ್ಮಸ್ ಹಬ್ಬದ 3-4 ವಾರಗಳ ಮೊದಲು ಆಚರಿಸಲಾಗುತ್ತದೆ. ಈ ಸಂಭ್ರಮದ ಅಂತರಾಳದಲ್ಲಿ ನೈತಿಕತೆಯ ಸಂದೇಶವಿದೆ. ತಪ್ಪು ವರ್ತನೆ ಮಾಡಿದರೆ ಶಿಕ್ಷೆ ಎಂಬ ಪಾಠವನ್ನು ಮಕ್ಕಳಿಗೆ ತಿಳಿಸುವುದರ ಜತೆಗೆ, ಸಮುದಾಯದ ಒಳಶಿಸ್ತಿನ ಅವಶ್ಯಕತೆಯನ್ನು ನೆನಪಿಸುವ ಪಾತ್ರವನ್ನು ಈ ಪರಂಪರೆ ನಿಭಾಯಿಸುತ್ತದೆ. ಕಡು ಚಳಿಗಾಲದ ನಡುವೆ ಮಾನವನು ತನ್ನ ಭಯಗಳನ್ನು ಎದುರಿಸುವ ಹಾಗೂ ಒಳಗಿನ ಒಳ್ಳೆಯತನವನ್ನು ಉಳಿಸಿಕೊಳ್ಳುವ ಹೋರಾಟವನ್ನೂ ಇದು ಪ್ರತಿಬಿಂಬಿಸುತ್ತದೆ.

ಇಂದಿನ ದಿನಗಳಲ್ಲಿ ಕ್ರಾಂಪುಸ್‌ಲೌಫ್ ಕೇವಲ ಜನಪದ ಮೆರವಣಿಗೆಯಲ್ಲ; ಅದು ಯೂರೋಪಿನ ಶತಮಾನಗಳ ಪರಂಪರೆಯನ್ನು ಹೊತ್ತಿರುವ ಜೀವಂತ ಸಂಸ್ಕೃತಿ. ವಿಶೇಷವಾಗಿ ಸಾಲ್ಸ್‌ಬರ್ಗ್ ಮತ್ತು ಬಾವೇರಿಯಾಗಳಲ್ಲಿ ಈ ಹಬ್ಬ ಚಳಿಗಾಲದ ಗುರುತಿನ ಚಿಹ್ನೆಗಳಲ್ಲಿ ಒಂದಾಗಿ ಅಸ್ತಿತ್ವ ಉಳಿಸಿಕೊಂಡಿದೆ.