Sunday, October 5, 2025
Sunday, October 5, 2025

ಸ್ಟ್ರಾಬೆರಿ ಸೇವಿಸಿ ಮಹಾಬಲೇಶ್ವರನನ್ನು ದರ್ಶಿಸಿ!

ಮಹಾಬಲೇಶ್ವರದ ರಸ್ತೆಗಳಲ್ಲೂ ಎಲ್ಲೆಲ್ಲೂ ಸ್ಟ್ರಾಬೆರಿಗಳ ಅಂಗಡಿಗಳಿವೆ. ಹಾಗಾಗಿ ನಾವು ಯಥೇಚ್ಛವಾಗಿ ಸ್ಟ್ರಾಬೆರಿಗಳನ್ನೂ ಅವುಗಳ ಉತ್ಪನ್ನಗಳನ್ನೂ ಕೊಂಡು ಸೇವಿಸಬಹುದು! ಮಹಾಬಲೇಶ್ವರದ ಹವೆಯು ಸ್ಟ್ರಾಬೆರಿ ಬೆಳೆಯುವುದಕ್ಕೆ ಬಹಳ ಅನುಕೂಲಕರವಾಗಿದೆ. ನಮ್ಮ ದೇಶದ 85% ಸ್ಟ್ರಾಬೆರಿ ಮಹಾಬಲೇಶ್ವರದಿಂದಲೇ ಬರುತ್ತದೆ. ಅಂತೆಯೇ ಮಹಾಬಲೇಶ್ವರಕ್ಕೆ ಸ್ಟ್ರಾಬೆರಿಗೆ ಜಿ.ಐ. ಟ್ಯಾಗ್ ನೀಡಲಾಗಿದೆ.

- ಡಾ.ಬಿ.ಆರ್.ಸುಹಾಸ್

ಪಶ್ಚಿಮ ಘಟ್ಟಗಳ ಸುಂದರವಾದ ಸಹ್ಯಾದ್ರಿ ಬೆಟ್ಟಗಳ ಸಾಲು, ಅವುಗಳ ಮಧ್ಯೆ ಒಂದು ನದಿಯ ಕಣಿವೆ, ಮೈಯನ್ನು ಮೆಲ್ಲನೆ ತೀಡುವ ತಂಗಾಳಿ, ಕೆಲವು ಪ್ರಾಚೀನ ದೇವಾಲಯಗಳು, ಮಹಾನ್ ನದಿಯೊಂದರ ಉಗಮಸ್ಥಳ, ಸಂಜೆಯ ಹೊಂಬಣ್ಣದ ಸೂರ್ಯಾಸ್ತದ ವೈಭವ, ಇವೆಲ್ಲವುಗಳೊಂದಿಗೆ ಇಲ್ಲಿಗೆ ಹೋಗುವ ದಾರಿಯುದ್ದಕ್ಕೂ ಕೆಂಪಾದ ರಸಭರಿತ ಸ್ಟ್ರಾಬೆರಿ ಹಣ್ಣುಗಳ ಸವಿ, ಇಂಥ ಪ್ರವಾಸ ಯಾರಿಗೆ ತಾನೇ ಇಷ್ಟವಾಗುವುದಿಲ್ಲ?

ನಮ್ಮ ಭಾರತದಲ್ಲಿ ಇಂಥ ಸ್ಥಳಗಳು ಹಲವಾರಿವೆ ನಿಜ. ಆದರೆ ಈಗ ನಾನು ಹೇಳಲು ಹೊರಟಿರುವ ಸ್ಥಳ, ಸ್ಟ್ರಾಬೆರಿ ಹಣ್ಣುಗಳ ರಸಾಸ್ವಾದ ಇರುವ ಮಹಾರಾಷ್ಟ್ರದ ಮಹಾಬಲೇಶ್ವರ ಗಿರಿಧಾಮ! ಇಲ್ಲಿ ಕೃಷ್ಣಾ, ಕೊಯ್ನಾ, ವೇನ್ನಾ, ಸಾವಿತ್ರೀ, ಮತ್ತು ಗಾಯತ್ರೀ ಎಂಬ ಐದು ನದಿಗಳು ಉಗಮವಾಗುತ್ತವೆ! ಹಿಂದೂಗಳಾದ ನಮಗೆ ಇದೊಂದು ಯಾತ್ರಾ ಸ್ಥಳವಾದರೆ, ಬ್ರಿಟಿಷರು ಇದನ್ನು ಒಂದು ಗಿರಿಧಾಮವಾಗಿ ಅಭಿವೃದ್ಧಿಪಡಿಸಿ, ಬಾಂಬೆ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಇದು ಮರಾಠರ ವಶದಲ್ಲಿದ್ದು, ಶಿವಾಜಿ ಮಹಾರಾಜನು ಮಹಾಬಲೇಶ್ವರದ ಬಳಿಯ ಜಾವಳಿಯನ್ನು ಆಳುತ್ತಿದ್ದ ಆದಿಲ್ ಶಾಹಿ ಸುಲ್ತಾನರ ಸರದಾರ ಚಂದ್ರರಾವ್ ಮೋರೆಯನ್ನು ಕೊಂದು ಪ್ರತಾಪಗಢ ಗಿರಿ ದುರ್ಗವನ್ನು ನಿರ್ಮಿಸಿದ್ದನು.

Mahabalshwar

ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಪುಣೆಯಿಂದ ಸುಮಾರು 120 ಕಿಮೀ. ದೂರದಲ್ಲಿದ್ದು ಸುಮಾರು ಎರಡು ಗಂಟೆಗಳ ಪ್ರಯಾಣ ಬೇಕಾಗುತ್ತದೆ.ಇಲ್ಲಿಗೆ ಹೋಗಲು ಬಸ್ ಇದ್ದರೂ ಸ್ವಂತ ಇಲ್ಲವೇ ಬಾಡಿಗೆ ಗಾಡಿಯಲ್ಲಿ ಹೋಗುವುದು ಒಳ್ಳೆಯದು. ಪುಣೆಯಿಂದ ಪಂಚಗಣಿ - ಮಹಾಬಲೇಶ್ವರ ರಸ್ತೆಯಲ್ಲಿ ಹೋದಾಗ, ಮಹಾಬಲೇಶ್ವರಕ್ಕೂ 20 ಕಿ.ಮೀ. ಮೊದಲು, ಪಂಚಗಣಿ ಎಂಬ ಸುಂದರ ಗಿರಿಧಾಮ ಸಿಗುತ್ತದೆ. ಒಂದು ದಿನದ ಪ್ರವಾಸದಲ್ಲಿ ಇಲ್ಲಿಗೆ ಹೋಗಿಯೇ ಮಹಾಬಲೇಶ್ವರಕ್ಕೆ ಹೋಗಬಹುದು.

ಸ್ಟ್ರಾಬೆರಿ ಉದ್ಯಾನವೇ ಇದೆ!

ಈ ಎರಡೂ ಸ್ಥಳಗಳಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ಪಂಚಗಣಿಗೆ ಬರುತ್ತಿದ್ದಂತೆ ಎಲ್ಲೆಲ್ಲೂ ಸ್ಟ್ರಾಬೆರಿಗಳ ಮಾರಾಟ ಕಾಣುತ್ತದೆ. ಇಲ್ಲೊಂದು ಚಿಕ್ಕ, ಆಕರ್ಷಕವಾದ ಸ್ಟ್ರಾಬೆರಿ ಉದ್ಯಾನವನವೇ ಇದೆ! ಇದರ ಹೆಸರು ಮ್ಯಾಪ್ರೋ ಸ್ಟ್ರಾಬೆರಿ ಉದ್ಯಾನವನ. ಇಲ್ಲಿ ಎಲ್ಲವೂ ಸ್ಟ್ರಾಬೆರಿಮಯ! ಸ್ಟ್ರಾಬೆರಿ ಅಲಂಕೃತ ಕಾರು, ಸ್ಟ್ರಾಬೆರಿ ಹಣ್ಣು ಇರುವ ಗಾಡಿ, ಸ್ಟ್ರಾಬೆರಿ ದೇಹದ ಪಕ್ಷಿಗಳು, ಫೋಟೋ ತೆಗೆಸಿಕೊಳ್ಳಲು ಸ್ಟ್ರಾಬೆರಿ ಹಣ್ಣುಗಳ ಬೃಹತ್ ಆಕೃತಿಗಳು, ಹೀಗೆ ಆಕರ್ಷಣೆಗಳಿವೆ.ಬಗೆಬಗೆಯ ಸುಂದರ ಹೂಗಿಡಗಳು, ಪುಟ್ಟ ಜಲಪಾತ ಮತ್ತು ಕಮಲಗಳ ಹಾಗೂ ಬಣ್ಣದ ಮೀನುಗಳ ಕೊಳ, ಇವು ಸುಂದರ ನೋಟ ಒದಗಿಸುತ್ತವೆ! ಅಲ್ಲದೇ ಸ್ಟ್ರಾಬೆರಿ ರೂಪದ ದಿಂಬುಗಳು, ಗೋಡೆಗೆ ನೇತುಹಾಕುವ ಆಕೃತಿಗಳು ಇವೆಲ್ಲವೂ ಸಿಗುತ್ತವೆ! ಈ ಉದ್ಯಾನವನದ ಎದುರಿಗೆ ಬೀದಿ ಮಾರುಕಟ್ಟೆಯಲ್ಲಿ ತಾಜಾ ಸ್ಟ್ರಾಬೆರಿ ಹಣ್ಣುಗಳು ದೊರೆಯುತ್ತವೆ! ಅಂತೆಯೇ ಸನಿಹದ ಹೊಟೇಲುಗಳಲ್ಲಿ ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಐಸ್ಕ್ರೀಮ್ ಮುಂತಾದವುಗಳು ಸಿಗುತ್ತವೆ.ಇಲ್ಲಿ ಸನಿಹದಲ್ಲೇ ಭವಾನಿ ವ್ಯಾಕ್ಸ್ ಮ್ಯೂಸಿಯಂ ಎಂಬ ಒಂದು ಸೊಗಸಾದ ವ್ಯಾಕ್ಸ್ ಮ್ಯೂಸಿಯಂ ಕೂಡ ಇದೆ. ಜನಪ್ರಿಯ ವ್ಯಕ್ತಿಗಳ ಪ್ರತಿಕೃತಿಗಳನ್ನು ಮೇಣದಲ್ಲಿ ಮಾಡಿ ಇರಿಸಿರುವ ಸಂಗ್ರಹಾಲಯ ಇದು.

ಸ್ಟ್ರಾಬೆರಿಗೆ ಜಿ ಐ ಟ್ಯಾಗ್

ಮಹಾಬಲೇಶ್ವರದ ರಸ್ತೆಗಳಲ್ಲೂ ಎಲ್ಲೆಲ್ಲೂ ಸ್ಟ್ರಾಬೆರಿಗಳ ಅಂಗಡಿಗಳಿವೆ.ಹಾಗಾಗಿ ನಾವು ಯಥೇಚ್ಛವಾಗಿ ಸ್ಟ್ರಾಬೆರಿಗಳನ್ನೂ ಅವುಗಳ ಉತ್ಪನ್ನಗಳನ್ನೂ ಕೊಂಡು ಸೇವಿಸಬಹುದು! ಮಹಾಬಲೇಶ್ವರದ ಹವೆಯು ಸ್ಟ್ರಾಬೆರಿ ಬೆಳೆಯುವುದಕ್ಕೆ ಬಹಳ ಅನುಕೂಲಕರವಾಗಿದೆ. ನಮ್ಮ ದೇಶದ 85% ಸ್ಟ್ರಾಬೆರಿ ಮಹಾಬಲೇಶ್ವರದಿಂದಲೇ ಬರುತ್ತದೆ. ಅಂತೆಯೇ ಮಹಾಬಲೇಶ್ವರಕ್ಕೆ ಸ್ಟ್ರಾಬೆರಿಗೆ ಜಿ.ಐ. ಟ್ಯಾಗ್ ನೀಡಲಾಗಿದೆ.

ಮಹಾಬಲೇಶ್ವರದಲ್ಲಿ ನಾವು ಮುಖ್ಯವಾಗಿ ನೋಡಬೇಕಾಗಿರುವುದು ಮಹಾಬಲೇಶ್ವರ ಹಾಗೂ ಕೃಷ್ಣಾದೇವಿ ದೇವಾಲಯಗಳು ಮತ್ತು ಬೆಟ್ಟಗುಡ್ಡಗಳ ಸಾಲುಗಳಲ್ಲಿರುವ ಹಲವಾರು ಸೊಗಸಾದ ವ್ಯೂ ಪಾಯಿಂಟ್ ಅಥವಾ ವೀಕ್ಷಣಾ ಕೇಂದ್ರಗಳು.

Mahabaleshwar Temple

ಶ್ರೀ ಕ್ಷೇತ್ರ ಮಹಾಬಲೇಶ್ವರ ದೇವಾಲಯದಿಂದಲೇ ಈ ಗಿರಿಧಾಮಕ್ಕೆ ಮಹಾಬಲೇಶ್ವರ ಎಂದು ಹೆಸರು ಬಂದಿದೆ. ಇದು ನಗರದಿಂದ ಸುಮಾರು ಆರು ಕಿಮೀ. ದೂರವಿದೆ. ಇದೊಂದು ಸುಂದರ ದೇವಾಲಯವಾಗಿದ್ದು, ಇಲ್ಲಿ ಪೂಜಿಸಲ್ಪಡುವ ದೇವರು ಮಹಾಬಲೇಶ್ವರನೆಂದು ಕರೆಯಲ್ಪಡುವ ತ್ರಿಮೂರ್ತ್ಯಾತ್ಮಕ ಉದ್ಭವ ಲಿಂಗವಾಗಿದೆ. ಈ ಶಿವಲಿಂಗವು ಒಂದು ರುದ್ರಾಕ್ಷಿ ಗಾತ್ರದಷ್ಟಿದೆ. ದೇವಾಲಯದ ಹೊರಗೆ ಇದರ ಸ್ಥಳಪುರಾಣ ಮತ್ತು ಐತಿಹ್ಯಗಳ ಫಲಕವನ್ನು ಹಾಕಿದ್ದಾರೆ. ಅದರಂತೆ, ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಇದರ ಕಥೆಯಿದೆ. ಪಾದ್ಮ ಕಲ್ಪದಲ್ಲಿ ಅತಿಬಲ ಮತ್ತು ಮಹಾಬಲ ಎಂಬ ಇಬ್ಬರು ದೈತ್ಯರು ಲೋಕಕಂಟಕರಾಗಿದ್ದರು. ಆಗ ಲೋಕವನ್ನು ರಕ್ಷಿಸಲು ವಿಷ್ಣುವು ಅತಿಬಲನನ್ನು ಕೊಂದನು. ಆದರೆ ಅವನಿಗೆ ಮಹಾಬಲನನ್ನು ಕೊಲ್ಲಲಾಗಲಿಲ್ಲ. ಏಕೆಂದರೆ ಮಹಾಬಲನು ತನ್ನ ಇಚ್ಛೆಯಿಂದಷ್ಟೇ ಸಾಯಬೇಕೆಂದು ವರ ಪಡೆದಿದ್ದನು. ಹಾಗಾಗಿ ದೇವತೆಗಳು ಆದಿಶಕ್ತಿಯ ಮೊರೆಹೊಕ್ಕರು. ಆದಿಶಕ್ತಿಯು ಮಹಾಬಲನನ್ನು ಆಕರ್ಷಿಸಿ ಅವನು ಯುದ್ಧವಿಮುಖನಾಗುವಂತೆ ಮಾಡಿದಳು. ಆಗ ದೇವತೆಗಳು ಅವನಿಗೆ ಶರಣಾಗಲು ಅವನು ದೇವತೆಗಳಿಗೆ ವರ ಕೊಡಲು ಮುಂದಾದನು. ಆಗ ದೇವತೆಗಳು ಅವನು ತಮ್ಮಿಂದ ಸಾಯಬೇಕೆಂದು ವರ ಬೇಡಿದರು. ಮಾತಿಗೆ ತಪ್ಪಲಾಗದ ಮಹಾಬಲನು ಒಪ್ಪಿ, ದೇವತೆಗಳು ಅವನೊಂದಿಗೆ ಸದಾ ಈ ಸ್ಥಳದಲ್ಲಿ ನೆಲೆಸಿರಬೇಕೆಂದು ನಿಬಂಧನೆ ಹಾಕಿದನು. ಹಾಗಾಗಿ, ಇಲ್ಲಿನ ಶಿವಲಿಂಗದಲ್ಲಿ ಶಿವನು ಮಹಾಬಲೇಶ್ವರನೆಂದೂ ವಿಷ್ಣುವು ಅತಿಬಲೇಶ್ವರನೆಂದೂ ಬ್ರಹ್ಮನು ಕೋಟೇಶ್ವರನೆಂದೂ ನೆಲೆಸಿದ್ದಾರೆ. ಫಲಕದ ಪ್ರಕಾರ ಈ ದೇವಾಲಯವನ್ನು ಎಂಟುನೂರು ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದೂ ಲಿಂಗವು ಉದ್ಭವಲಿಂಗವೆಂದೂ ಹೇಳಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜನು ಇಲ್ಲಿ ತನ್ನ ತಾಯಿಗೆ ಸುವರ್ಣ ತುಲಾಭಾರ ಮಾಡಿಸಿದ್ದನಂತೆ!

mahabaleshwar fort

ಮಹಾಬಲೇಶ್ವರ ಗಿರಿಧಾಮದಲ್ಲಿ ಕೇಟ್ಸ್ ವ್ಯೂ ಪಾಯಿಂಟ್, ಇಕೋ ಪಾಯಿಂಟ್, ಎಲಿಫೆಂಟ್ ಹಾಗೂ ನೀಡಲ್ ಹೋಲ್ ವ್ಯೂ ಪಾಯಿಂಟ್, ಆರ್ಥರ್ ಸೀಟ್ ಕಾಂಪ್ಲೆಕ್ಸ್. ಮೊದಲಾದ ಅನೇಕ ಸುಂದರ ವ್ಯೂ ಪಾಯಿಂಟ್ ಗಳಿವೆ. ಇಲ್ಲಿ ಹಲವಾರು ತಿಂಡಿ, ತಿನಿಸುಗಳೂ ಲಭ್ಯವಿದ್ದು, ಕುದುರೆ ಹಾಗೂ ಒಂಟಿ ಸವಾರಿಗಳೂ ಇವೆ.

ಕೇಟ್ಸ್ ವ್ಯೂ ಪಾಯಿಂಟ್‌ಗೆ ಬ್ರಿಟಿಷ್ ಗವರ್ನರ್ ಆಗಿದ್ದ ಜಾನ್ ಮಲ್ ಕಮ್ ನ ಮಗಳು ಕೇಟ್‌ಳ ಹೆಸರಿಟ್ಟಿದ್ದಾರೆ. ಶಿವಾಜಿ ಮಹಾರಾಜರ ಕಾಲದಲ್ಲಿ ಇದಕ್ಕೆ ನಾಕೆ ಖಿಂಡ್ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಒಂದು ಟೆಲಿಸ್ಕೋಪ್ ಮೂಲಕ ನಾವು ಕೃಷ್ಣಾ ನದಿ ಕಣಿವೆ, ಧೋಮ್ ಮತ್ತು ಬಾಲ್ಕವಾಡಿ ಅಣೆಕಟ್ಟುಗಳು, ವಿದ್ಯುದಾಗರಗಳು, ಟೆಂಟ್‌ಗಳು, ಕಮಲ ಗಢ ಕೋಟಿ, ಒಂದು ದೇವಾಲಯ ಹಾಗೂ ಶಾಲೆ, ಇವೆಲ್ಲವನ್ನೂ ನೋಡಬಹುದು. ಈ ವ್ಯೂ ಪಾಯಿಂಟ್‌ಗೆ ನೇರವಾಗಿ ಎಲಿಫೆಂಟ್ ಮತ್ತು ನೀಡಲ್ ಹೋಲ್ ಪಾಯಿಂಟ್ ಕಾಣುತ್ತದೆ. ಬೆಟ್ಟದ ಆಕೃತಿ ಆನೆಯ ತಲೆಯಂತಿರುವುದರಿದ ಹಾಗೂ ಅದರಲ್ಲಿ ಸೂಜಿಯ ಕಣ್ಣಿನಂಥ ರಂಧ್ರವಿರುವುದರಿಂದ ಈ ಹೆಸರುಗಳನ್ನು ಇಡಲಾಗಿದೆ.ಈ ಪಾಯಿಂಟ್‌ನ ಬಳಿ ಮಂಕಿ ಫಾಲ್ಸ್ ಎಂಬ ಪುಟ್ಟ ಜಲಪಾತ ಇದೆ. ಇದೊಂದು ನೀರಿನ ಬುಗ್ಗೆಯಂತಿರುವುದರಿಂದ ಇದನ್ನು ವಲ್ಚರ್ಸ್ ಸ್ಪ್ರಿಂಗ್ ಎಂದೂ ಕರೆಯುತ್ತಾರೆ.

ಕೇಟ್ಸ್ ಪಾಯಿಂಟ್ ಬಳಿಯೇ ಒಂದು ಕಡೆ ಜೋರಾಗಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಇದನ್ನು ಇಕೋ ಪಾಯಿಂಟ್ ಎನ್ನುತ್ತಾರೆ. ವಿಶೇಷವೆಂದರೆ ಈ ಎಲ್ಲ ವ್ಯೂ ಪಾಯಿಂಟ್‌ಗಳಲ್ಲೂ ಅವುಗಳ ಹೆಸರು ಮತ್ತು ವೈಶಿಷ್ಟ್ಯಗಳನ್ನುಳ್ಳ ಫಲಕಗಳನ್ನು ಹಾಕಿದ್ದಾರೆ. ನವೆಂಬರ್ ಇಂದ ಫೆಬ್ರುವರಿ ವರೆಗಿನ ಚಳಿಗಾಲದ ಅವಧಿಯಲ್ಲಿ ಹೋದರೆ ಚೆನ್ನಾಗಿರುತ್ತದೆ. ಆಗ ಸ್ಟ್ರಾಬೆರಿ ಹಣ್ಣುಗಳ ಕಾಲವೂ ಆಗಿರುತ್ತದೆ.‌

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!