Saturday, June 20, 2026
Saturday, June 20, 2026

ಕಲೆಯ ಭೂಪಟ ಬಿಡಿಸಿದ ಮ್ಯೂಸಿಯಂ

ಐಟಿ ಬೆಳವಣಿಗೆ ಹಾಗೂ ತಂತ್ರಜ್ಞಾನಕ್ಕೆ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರದ ಹೃದಯಭಾಗದಲ್ಲಿ, ಒಂದು ವಿಭಿನ್ನ ರೀತಿಯ ಮ್ಯೂಸಿಯಂ ತಲೆಯೆತ್ತಿ ನಿಂತಿದೆ. 'ಮ್ಯೂಸಿಯಂ ಆಫ್ ಆರ್ಟ್ & ಫೊಟೋಗ್ರಫಿ' (MAP), ಪ್ರಾಚೀನ ಸಂಪ್ರದಾಯ ಹಾಗೂ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಅದ್ಭುತ ಸಂಗಮವಾಗಿದೆ. ಈ ಮ್ಯೂಸಿಯಂನ ಕುರಿತಾದ ಒಂದು ಸಮಗ್ರ ಇಣುಕು ನೋಟ ಇಲ್ಲಿದೆ.

ಬೆಂಗಳೂರು ಎಂದರೆ ತಂತ್ರಜ್ಞಾನ, ಸ್ಟಾರ್ಟ್‌ಅಪ್, ಗಾರ್ಡನ್ ಸಿಟಿ — ಇಷ್ಟು ಮಾತ್ರ ಎಂದು ತಿಳಿದಿದ್ದವರಿಗೆ ಇದೊಂದು ಸಿಹಿ ಅಚ್ಚರಿ. ಕಸ್ತೂರಬಾ ರಸ್ತೆಯ ಮ್ಯೂಸಿಯಂ ಜಿಲ್ಲೆಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ Museum of Art & Photography (MAP) ಉದ್ಯಾನ ನಗರಿಗೆ ಹೊಸ ಗರಿ ಮೂಡಿಸಿರುವ ವಸ್ತು ಸಂಗ್ರಹಾಲಯ. ದಕ್ಷಿಣ ಭಾರತದ ಮೊದಲ ಪ್ರಮುಖ ಖಾಸಗಿ ಕಲಾ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆ ಹೊತ್ತ ಈ ಮ್ಯೂಸಿಯಂ, ಕಲೆಗೆ ಮತ್ತು ಛಾಯಾಗ್ರಹಣಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡುತ್ತಿದೆ.

MAP ಎಂಬ ಸುಂದರ ಅಧ್ಯಾಯ ಆರಂಭವಾದದ್ದು 2011ರಲ್ಲಿ, Art & Photography Foundation ಸ್ಥಾಪನೆಯೊಂದಿಗೆ. ಉದ್ಯಮಿ, ಸಮಾಜ ಸೇವಕ ಮತ್ತು ಕಲಾ ಸಂಗ್ರಾಹಕ ಅಭಿಷೇಕ್ ಪೊದ್ದಾರ್ ಅವರ ಎದೆಯಲ್ಲಿ ಹುಟ್ಟಿದ ಅಪೂರ್ವ ಕನಸು ಇದು. ಒಂದು ದಶಕದ ಸತತ ಶ್ರಮ ಮತ್ತು ಸಾಧನೆಯ ನಂತರ 2023ರ ಫೆಬ್ರವರಿ 18ರಂದು ಸಾರ್ವಜನಿಕರಿಗೆ ತೆರೆದುಕೊಳ್ಳುವ ಮೂಲಕ ನನಸಾಯಿತು. ಭಾರತದಲ್ಲಿ ಒಂದು ದಶಕದ ನಂತರ ತೆರೆದ ಮೊದಲ ಹೊಸ ಸಾರ್ವಜನಿಕ ಮ್ಯೂಸಿಯಂ ಎಂಬ ಐತಿಹಾಸಿಕ ಹಿರಿಮೆ ಇದರದ್ದು.

ಇದನ್ನೂ ಓದಿ: ರ‍್ಯಾಡಿಸನ್ ಬ್ಲೂ ಏಟ್ರಿಯಾ...ಮೂರು ದಶಕಗಳ ಆತಿಥ್ಯ ಪರಂಪರೆ

2017ರಲ್ಲಿ ಅಭಿಷೇಕ್ ಪೊದ್ದಾರ್ ಅವರು ತಮ್ಮ 7000ಕ್ಕೂ ಹೆಚ್ಚು ಕಲಾಕೃತಿಗಳನ್ನು MAPಗೆ ದಾನ ನೀಡಿದರು. 2016ರಲ್ಲಿ Christie's ನಲ್ಲಿ ಪೊದ್ದಾರ್ ಕುಟುಂಬದ ಸಂಗ್ರಹದ ಹರಾಜಿನಿಂದ ಬಂದ ಹಣ ಈ ಮ್ಯೂಸಿಯಂ ನಿರ್ಮಾಣಕ್ಕೆ ಮೀಸಲಾಯಿತು. ಕೋವಿಡ್ ಸಂದರ್ಭದಲ್ಲಿ 2020ರಲ್ಲಿ ಡಿಜಿಟಲ್ ಮ್ಯೂಸಿಯಂ ಆಗಿ ಕಣ್ತೆರೆದ MAP, ವರ್ಚುವಲ್ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಕಲಾವಿದರ ಮಾತುಕತೆಗಳ ಮೂಲಕ ಜಗತ್ತನ್ನು ಕಲಾ ಜಗತ್ತಿನ ಮನೆಮಾತಾಯಿತು. ಈಗ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಕಲಾಕೃತಿಗಳ ಸಂಗ್ರಹವಿದೆ.

ಕಟ್ಟಡ — ಕಲೆಯ ಕಾವ್ಯ

ಖ್ಯಾತ ವಾಸ್ತುಶಿಲ್ಪ ಸಂಸ್ಥೆ Matthew & Ghosh ವಿನ್ಯಾಸಗೊಳಿಸಿದ 44 ಸಾವಿರ ಚದರ ಅಡಿ ವಿಸ್ತೀರ್ಣದ MAP ಭವನ, ತನ್ನ ಉಕ್ಕಿನ ಫಲಕಗಳ ಕಾರಣದಿಂದ ಎದುರಿನಿಂದ ನೋಡುತ್ತಿದ್ದಂತೆಯೇ ಒಂದೇ ಬಾರಿಗೆ ಗಮನ ಸೆಳೆಯುತ್ತದೆ. ಕೈಗಾರಿಕಾ ನೀರಿನ ಟ್ಯಾಂಕನ್ನು ಹೋಲುವ ಈ ವಿನ್ಯಾಸ ಕೇವಲ ಅಲಂಕಾರಕ್ಕಾಗಿ ಮಾಡಿರುವುದಲ್ಲ, ಕಲೆಯಂಥ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ಕಾಪಾಡುವ ಪಾತ್ರೆಯ ರೂಪಕವಾಗಿ ಇದನ್ನು ನಿರ್ಮಿಸಲಾಗಿದೆ. ಐದು ಮಹಡಿಗಳ ಈ ಕಟ್ಟಡ Universal Design Award ಅನ್ನು ಮುಡಿಗೇರಿಸಿಕೊಂಡಿದ್ದು ಸಮಾಜದ ಎಲ್ಲ ವರ್ಗದ ಜನರಿಗೂ ಪ್ರವೇಶ ಮುಕ್ತವಾಗಿದೆ ಹಾಗೂ ಪ್ರವೇಶಯೋಗ್ಯವಾಗಿದೆ.

Untitled design (26)

ಭವನದಲ್ಲಿ ಅನೇಕ ಗ್ಯಾಲರಿ ಕೋಣೆಗಳು, ಒಂದು ಸಭಾಗೃಹ, ಕಲಾ ಮತ್ತು ಸಂಶೋಧನಾ ಗ್ರಂಥಾಲಯ, ಶಿಕ್ಷಣ ಕೇಂದ್ರ, ವಿಶೇಷ ಸಂಶೋಧನಾ ಮತ್ತು ಸಂರಕ್ಷಣಾ ಕೇಂದ್ರ, ಕೆಫೆ, ರೂಫ್‌ ಟಾಪ್‌ ರೆಸ್ಟೋರೆಂಟ್ ಮತ್ತು ಕಲಾ ಪ್ರೇಮಿಗಳಿಗಾಗಿ ವಿಶೇಷ ಅಂಗಡಿ ಕೂಡ ಇದೆ. ಗಮನಿಸಬೇಕಿರುವ ಪ್ರಮುಖ ಅಂಶವೇನೆಂದರೆ, ಈ ಮ್ಯೂಸಿಯಂ ಅನ್ನು National Geographic ತನ್ನ 'Best of the World' ಪಟ್ಟಿಯಲ್ಲಿ ಕಲ್ಚರಲ್‌ ಹಾಟ್‌ಸ್ಪಾಟ್ ಎಂದು ಗುರುತಿಸಿದೆ.

ಪ್ರದರ್ಶನಗಳು — ಕಲಾ ಸಂವಾದ

MAP ತನ್ನ ಉದ್ಘಾಟನೆಯ ಸಂದರ್ಭದಲ್ಲಿ ಅನೇಕ ಐತಿಹಾಸಿಕ ಪ್ರದರ್ಶನಗಳನ್ನು ನೀಡಿತು. 'Visible/Invisible' ಎಂಬ ಪ್ರದರ್ಶನ ಭಾರತೀಯ ಕಲಾ ಇತಿಹಾಸದಲ್ಲಿ ಮಹಿಳೆಯರ ಚಿತ್ರಣವನ್ನು 130ಕ್ಕೂ ಹೆಚ್ಚು ಕೃತಿಗಳ ಮೂಲಕ ಪ್ರದರ್ಶಿಸಿತು. 10ನೆಯ ಶತಮಾನದ ದೇವಿ ಬ್ರಾಹ್ಮಣಿ ಶಿಲ್ಪದಿಂದ ಆಧುನಿಕ ಛಾಯಾಚಿತ್ರಗಳ ತನಕ, ಈ ಪ್ರದರ್ಶನ ಒಂದು ಮಹಾ ಪಯಣವೇ ಸರಿ.

'Time & Time Again' ಜ್ಯೋತಿ ಭಟ್ ಅವರ ಛಾಯಾಗ್ರಹಣದ ಮೊದಲ ಪ್ರಮುಖ ಅವಲೋಕನ ಪ್ರದರ್ಶನ — 1000 ಮುದ್ರಣಗಳು ಮತ್ತು 60000 ನೆಗೆಟಿವ್‌ಗಳ ಅಪೂರ್ವ ಸಂಗ್ರಹ. 2024ರಲ್ಲಿ ಮಹಾನ್ ಕಲಾವಿದ ಕೃಷ್ಣ ರೆಡ್ಡಿ ಅವರ ಜನ್ಮಶತಮಾನೋತ್ಸವ ಸ್ಮರಿಸಲು 'Rhyme Unbroken' ಪ್ರದರ್ಶನ ಆಯೋಜಿಸಲಾಯಿತು. 'The Forgotten Souvenir', 'Chay Reds, Ferrous Black', 'Book of Gold: The Kanchana Chitra Ramayana' — ಇವೆಲ್ಲವನ್ನೂ ಒಳಗೊಂಡ ಪ್ರತಿ ಪ್ರದರ್ಶನ ಒಂದು ಅನನ್ಯ ಅನುಭವ.

MAP ಪ್ರತಿ ತಿಂಗಳೂ ಹೊಸ ಆನ್‌ಲೈನ್ ಪ್ರದರ್ಶನಗಳನ್ನು ಆಯೋಜಿಸುತ್ತದೆ. ಸೆಬಾಸ್ತಿಯಾವ್ ಸಾಲ್ಗಾಡೋ, ಮರೀನಾ ಅಬ್ರಮೋವಿಚ್, ವಿದ್ಯಾ ದೇಹೇಜಿಯಾ ಮುಂತಾದ ಜಾಗತಿಕ ಕಲಾ ವ್ಯಕ್ತಿಗಳೊಂದಿಗಿನ ಡಿಜಿಟಲ್ ಸಂವಾದಗಳು MAP ನ ವ್ಯಾಪ್ತಿ ವಿಶ್ವಮಟ್ಟದಲ್ಲಿ ಇರುವುದಕ್ಕೆ ಸಾಕ್ಷಿ.

ಸಂಗ್ರಹ — ಶತಮಾನಗಳ ಸೇತುವೆ

MAP ಒಂದು ಲಕ್ಷಕ್ಕೂ ಹೆಚ್ಚು ಕಲಾಕೃತಿಗಳ ಸಂಪನ್ನ ಭಂಡಾರ. 10ನೇ ಶತಮಾನದ ದೇವಿ ಬ್ರಾಹ್ಮಣಿಯ ಶಿಲ್ಪದಿಂದ ಹಿಡಿದು ಇಂದಿನ ಸಮಕಾಲೀನ ಕಲಾಕೃತಿಗಳವರೆಗೆ, ಕಲ್ಲು ಶಿಲ್ಪ, ಚಿತ್ರಕಲೆ, ವಸ್ತ್ರಕಲೆ, ಛಾಯಾಗ್ರಹಣ, ಜಾನಪದ ಕಲೆ, ವಿನ್ಯಾಸ — ಎಲ್ಲವನ್ನೂ ಒಳಗೊಂಡ ಈ ಸಂಗ್ರಹ ದಕ್ಷಿಣ ಏಷ್ಯಾದ ದೃಶ್ಯ ಸಂಸ್ಕೃತಿಯ ಸಮಗ್ರ ದಾಖಲೆ. MAP ನ ಕ್ಯೂರೇಟರ್‌ಗಳ ತಂಡ ಈ ಸಂಗ್ರಹಗಳ ಕುರಿತಾದ ವಾಸ್ತವಿಕ ಕಥೆಗಳನ್ನು ನಿರೂಪಿಸುವ ಮೂಲಕ ಸಂದರ್ಶಕರ ಕುತೂಹಲ ಮತ್ತು ಪ್ರಶ್ನೆಗಳನ್ನು ತಣಿಸುತ್ತಾರೆ. ಇಲ್ಲಿ ನಡೆಯುವ ಪ್ರತಿ ಪ್ರದರ್ಶನವೂ ಒಂದು ಕಥೆ, ಒಂದು ಚಿಂತನೆ, ಒಂದು ಸಂವಾದದೊಂದಿಗೆ ಸಂಪನ್ನಗೊಳ್ಳುತ್ತದೆ.

Untitled design (25)

ಜಾಮಿನಿ ರಾಯ್, ಭೂಪೇನ್ ಕಕ್ಕರ್‌, ಮೃಣಾಲಿನಿ ಮುಖರ್ಜಿ, ರವೀಂದ್ರ ರೆಡ್ಡಿ, ಅರ್ಪಿತಾ ಸಿಂಗ್, M.F. ಹುಸೇನ್, K.G. ಸುಬ್ರಹ್ಮಣ್ಯನ್ ಮುಂತಾದ ದಿಗ್ಗಜ ಕಲಾವಿದರ ಕೃತಿಗಳು ಇಲ್ಲಿ ಸ್ಥಾನ ಪಡೆದಿವೆ. ಆಧುನಿಕ ಮತ್ತು ಸಮಕಾಲೀನ ಕಲೆ, ಛಾಯಾಗ್ರಹಣ, ಜಾನಪದ ಮತ್ತು ಬುಡಕಟ್ಟು ಕಲೆ, ಜನಪ್ರಿಯ ಸಂಸ್ಕೃತಿ, ವಸ್ತ್ರ ಮತ್ತು ಕರಕುಶಲ ವಸ್ತುಗಳು — ಎಲ್ಲ ವಿಭಾಗಗಳಲ್ಲಿಯೂ MAP ಸಮೃದ್ಧ. ಕಲಾ ವಿಭಾಗಗಳ ನಡುವಿನ ಸಂಬಂಧಗಳನ್ನು ಹೊಸ ನಿರೂಪಣೆಯ ಮೂಲಕ ತೆರೆದಿಡುವ ಮ್ಯೂಸಿಯಂ ನ ವಿಶಿಷ್ಟ ಶೈಲಿ, ಇದನ್ನು ಜಗತ್ತಿನ ಇತರ ಮ್ಯೂಸಿಯಂಗಳಿಂದ ಭಿನ್ನ ಎಂದು ತೋರಿಸುತ್ತದೆ.

ಶಿಕ್ಷಣ ಮತ್ತು ಡಿಜಿಟಲ್ ಕ್ರಾಂತಿ

MAP Academy ಮೂಲಕ ಭಾರತೀಯ ಕಲಾ ಇತಿಹಾಸದ ಡಿಜಿಟಲ್ ಶಿಕ್ಷಣ ಒದಗಿಸಲಾಗುತ್ತದೆ. ಶಾಲಾ ವಿದ್ಯಾರ್ಥಿಗಳು, ಕುಟುಂಬಗಳು, ಶಿಕ್ಷಕರು — ಎಲ್ಲರಿಗೂ ವಿಶೇಷ ಕಾರ್ಯಾಗಾರಗಳು, ಉಪನ್ಯಾಸ ಸರಣಿಗಳು, ಚಲನಚಿತ್ರ ಪ್ರದರ್ಶನಗಳು, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕಲೆ ಕೇವಲ ಗ್ಯಾಲರಿ ಗೋಡೆಗಳ ಒಳಗೆ ಇರಬೇಕಿಲ್ಲ, ಅದು ಎಲ್ಲರ ಮನೆ ತಲುಪಬೇಕು ಎಂಬ ತತ್ತ್ವ MAP ನದ್ದು.

'Artcade Night' ಮುಂತಾದ ಸಂಜೆ ಕಾರ್ಯಕ್ರಮಗಳು ಯುವ ಜನಾಂಗವನ್ನು ಕಲಾ ಜಗತ್ತಿಗೆ ಆಕರ್ಷಿಸುತ್ತಿವೆ. ಸಾಂಪ್ರದಾಯಿಕ ಬ್ಲಾಕ್ ಪ್ರಿಂಟಿಂಗ್, ಕ್ರೊಶೆ, ಚಲನಚಿತ್ರ ಪೋಸ್ಟರ್ ವಿನ್ಯಾಸ — ಹೀಗೆ ವಿವಿಧ ಕಾರ್ಯಾಗಾರಗಳ ಮೂಲಕ MAP ಕಲೆಯನ್ನು ಅನುಭವಿಸುವ, ಅನ್ವೇಷಿಸುವ ಅವಕಾಶ ನೀಡುತ್ತದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ವಸ್ತ್ರ ಸಂಗ್ರಹವನ್ನು ಬೃಹತ್ ಕನ್ನಡಿ ಮೇಲ್ಮೈಯ ಮೇಲೆ ಪ್ರೊಜೆಕ್ಟ್ ಮಾಡುವ ಸಂವಾದಾತ್ಮಕ ಅನುಭವ ಇದಕ್ಕೊಂದು ಉದಾಹರಣೆ.

ಎರಡು ಬಗೆಯ ಎಕ್ಸಿಬಿಷನ್

ಇಲ್ಲಿನ ವಿಶೇಷತೆ ಏನು ಎಂದರೆ ಎರಡು ಬಗೆಯ ಎಕ್ಸಿಬಿಷನ್ ಗೆ ಅವಕಾಶವಿದೆ. ಮೊದಲನೆಯದು ಪರ್ಮನೆಂಟ್ ಎಕ್ಸಿಬಿಷನ್. ಅಂದರೆ ಎಕ್ಸಿಬಿಷನ್ 3 ವರ್ಷಗಳ ಕಾಲ ಇರುತ್ತದೆ. ಸದ್ಯ ಜನವರಿಯಲ್ಲಿ ಶುರುವಾದ ಎಕ್ಸಿಬಿಷನ್ ಮುಂದಿನ 3 ವರ್ಷಗಳ ಕಾಲ ನಡೆಯಲಿದೆ. ಎರಡನೆಯದು ತಾತ್ಕಾಲಿಕ ಎಕ್ಸಿಬಿಷನ್. ಅಂದರೆ ಎಕ್ಸಿಬಿಷನ್ ಪ್ರತಿ ನಾಲ್ಕರಿಂದ ಆರು ತಿಂಗಳು ಮಾತ್ರ ಇರುತ್ತದೆ. ಇದು ಎರಡನೆಯ ಮಹಾಯುಡಿಯಲ್ಲಿರುತ್ತದೆ. ಜನರಿಗೆ ಪ್ರತಿ ಬಾರಿ ಬಂದಾಗಲೂ ಹೊಸತು ಏನಾದರೂ ಸಿಗಬೇಕು ಎಂಬ ಉದ್ದೇಶದಿಂದ ಹಾಗೂ ಹಲವು ಕಲಾವಿದರು ಗಳಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಈ ರೀತಿಯ ತಾತ್ಕಾಲಿಕ ಎಕ್ಸಿಬಿಷನ್ ವ್ಯವಸ್ಥೆ ಮಾಡಲಾಗಿದೆ. ಚಿತ್ರಗಳ ಪ್ರದರ್ಶನ ಮಾತ್ರವಲ್ಲದೆ, ಧ್ವನಿ ಹಾಗೂ ಸ್ಪರ್ಶದ ಮೂಲಕವೂ ಕಲೆಯ ಅನುಭವವನ್ನು ಜನರಿಗೆ ನೀಡಲಾಗುತ್ತಿದೆ.

Untitled design (28)

MAP ಭವನದ ಸೌಲಭ್ಯಗಳು

ಗ್ಯಾಲರಿಗಳು - ವಿಭಿನ್ನ ಕಲಾ ಪ್ರಕಾರಗಳ ವಿಸ್ತೃತ ಪ್ರದರ್ಶನ ಕೋಣೆಗಳು

ಸಭಾಗೃಹ - ಉಪನ್ಯಾಸ, ಕಾರ್ಯಕ್ರಮ ಮತ್ತು ಚಲನಚಿತ್ರ ಪ್ರದರ್ಶನಗಳಿಗಾಗಿ

ಗ್ರಂಥಾಲಯ - ಕಲಾ ಮತ್ತು ಸಂಶೋಧನಾ ಪ್ರಕಟಣೆಗಳ ವಿಶೇಷ ಕೊಠಡಿ

ಸಂರಕ್ಷಣಾ ಕೇಂದ್ರ - ಕಲಾಕೃತಿಗಳ ಸಂರಕ್ಷಣೆ ಮತ್ತು ಸಂಶೋಧನಾ ಸೌಲಭ್ಯ

ಕೆಫೆ & ರೆಸ್ಟೋರೆಂಟ್ - ರೂಫ್‌ಟಾಪ್‌ ರೆಸ್ಟೋರೆಂಟ್ ಮತ್ತು ಕೆಫೆ

MAP ಅಂಗಡಿ - ಕಲಾ ಸ್ಮರಣಿಕೆ, ಸ್ಮರಣ ಗ್ರಂಥಗಳು ಮತ್ತು ವಿಶೇಷ ಉತ್ಪನ್ನಗಳು

ನಾನು ಬೆಳೆಯುವಾಗ ಏನನ್ನು ಕಳೆದುಕೊಂಡೆ ಎಂಬುದರ ಬಗ್ಗೆ ಇಂದು MAP ಗೆ ಭೇಟಿ ನೀಡುವ ಹಲವಾರು ಮಕ್ಕಳನ್ನು ನೋಡಿದಾಗ, ನನಗೆ ತುಂಬಾ ಅರಿವಾಗುತ್ತದೆ. ಪ್ರವಾಸಿಗರು ಈ ವಸ್ತುಸಂಗ್ರಹಾಲಯದಲ್ಲಿ ಸಮಯ ವ್ಯಯಿಸಲು ಇಷ್ಟಪಡುತ್ತಿದ್ದಾರೆ ಅಂದರೆ ನಾವು ಇಲ್ಲೊಂದು ಹೆಜ್ಜೆ ಗುರುತು ಮೂಡಿಸಿದ್ದೇವೆ ಅಂತರ್ಥ. ಹೆಚ್ಚಿನ ತೃಪ್ತಿ ಎಂದರೆ ಸಂದರ್ಶಕರಿಂದ ಸಿಗುವ ಪ್ರತಿಕ್ರಿಯೆ. ಅದೊಂದು ದಿನ ಸಂದರ್ಶಕರೊಬ್ಬರು ನನ್ನ ಬಳಿಗೆ ಬಂದು, ನಗರಕ್ಕೆ ಈ ಅದ್ಭುತ ಉಡುಗೊರೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದರು. ಇದಕ್ಕಿಂತ ದೊಡ್ಡ ಸಾರ್ಥಕತೆ ಏನಿದೆ?

- ಅಭಿಷೇಕ್ ಪೊದ್ದಾರ್,
MAP ಸ್ಥಾಪಕರು

ನಮ್ಮ ದೇಶದಲ್ಲಿ ಮ್ಯೂಸಿಯಂ ಎಂದರೆ ಇನ್ನೂ ಸ್ಕೂಲ್ ಟ್ರಿಪ್ ಎಂಬ ಮನೋಭಾವ ಇದೆ. ಅದರ ಮ್ಯಾಪ್ ಇದನ್ನು ಒಂದು ಕಲಾತ್ಮಕ ಜಾಗವನ್ನಾಗಿ ಮಾಡಿದೆ. ವಾಲೆಂಟಿಯರ್ ಮಾಡುವಾಗ ನನಗೂ ಹೆಚ್ಚು ಕಲಿಯಲು ಅವಕಾಶ ಸಿಗುತ್ತದೆ. ಭೇಟಿ ಕೊಟ್ಟ ಜನರಿಗೆ ಎಲ್ಲಾ ಚಿತ್ರಗಳ ಬಗ್ಗೆ ಮಾಹಿತಿ ನೀಡಿದಾಗ ಅವರಿಗೂ ಖುಷಿಯಾಗುತ್ತದೆ. ಅವರು ಕಲೆಯ ಬಗ್ಗೆ ಇನ್ನಷ್ಟು ಅರ್ಥ ಮಾಡಿಕೊಳ್ಳುತ್ತಾರೆ. ಈ ವಿಷಯದಲ್ಲಿ ಮ್ಯಾಪ್ ವಿಭಿನ್ನ ಪ್ರಯತ್ನವನ್ನು ಮಾಡುತ್ತಿದೆ.

- ಅನುಬ್ರತಾ ಚಟರ್ಜಿ, ವಾಲೆಂಟೀರ್‌

ಮ್ಯೂಸಿಯಂ ಅಂದರೆ ಕೇವಲ ಶಾಲೆ ಮಕ್ಕಳನ್ನು ಕರೆದುಕೊಂಡು ಹೋಗುವ ಜಾಗ ಇಂದು ಭಾವನೆ ಇರುತ್ತದೆ. ಆದರೆ ಈ ಜಾಗ ಹಾಗಲ್ಲ. ಇದೊಂದು ವಿಭಿನ್ನ ಮ್ಯೂಸಿಯಂ. ಇಲ್ಲಿ ಬರುವ ಸಂದರ್ಶಕರಿಗೆ ಮಾರ್ಗದರ್ಶನ ಮಾಡಲು ಗೈಡ್‌ಗಳು ಇರುತ್ತಾರೆ. ಎಲ್ಲಾ ವಯಸ್ಸಿನವರು ಹಾಗೂ ಯಾವುದೇ ವೃತ್ತಿಯಲ್ಲಿರುವವರು ಈ ಜಾಗಕ್ಕೆ ಭೇಟಿಕೊಟ್ಟು ಎಂಜಾಯ್ ಮಾಡಬಹುದು.

- ರಾಜೇಶ್‌, ಸಿಬ್ಬಂದಿ

ಇಲ್ಲಿ ಕೆಲಸ ಮಾಡಲು ಬಹಳ ಖುಷಿ ಇದೆ. ಇಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರು ಈ ಮ್ಯೂಸಿಯಂ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮ್ಯೂಸಿಯಂ ಅಷ್ಟಕ್ಕೇ ಸೀಮಿತವಾಗದೆ ಈ ಜಾಗ ಒಂದು ಇಡೀ ದಿನ ಕಾಲ ಕಳೆಯಲು ಸುಂದರ ತಾಣವಾಗಿದೆ.

- ಆಲಿಸ್, ಸಿಬ್ಬಂದಿ

Untitled design (27)

ಗಮನಿಸಿ

ಇದು ಕೇವಲ ಮ್ಯೂಸಿಯಂ ಅಷ್ಟೇ ಅಲ್ಲ. ಇಲ್ಲಿ ಕಾನ್ಫರೆನ್ಸ್ ಹಾಲ್ ಇದೆ, ಕ್ಲಾಸ್‌ರೂಮ್ ಸೌಲಭ್ಯವಿದೆ. ಇವೆಲ್ಲವನ್ನೂ ಜನರು ಬಾಡಿಗೆಗೆ ಪಡೆದು ಕಾರ್ಪೊರೆಟ್ ಕಾರ್ಯಕ್ರಮ ಅಥವಾ ವಿಶೇಷ ಸೆಮಿನಾರ್ ಕಾರ್ಯಕ್ರಮಗಳನ್ನು ಮಾಡಬಹುದು. ಯಾರಾದರೂ ಪ್ರದರ್ಶನ ಏರ್ಪಡಿಸಬೇಕು ಎಂದುಕೊಂಡರೂ ಇಲ್ಲಿ ಅವಕಾಶವಿದೆ. ರೆಸ್ಟೋರೆಂಟ್ ಹಾಗೂ ಬಾರನ್ನು ಕೂಡ ಬಳಸಬಹುದು.

ಪ್ರವಾಸಿಗರಿಗೆ ಮಾಹಿತಿ

ವಿಳಾಸ: 22, ಕಸ್ತೂರಬಾ ರಸ್ತೆ, ಶಾಂತಲಾ ನಗರ,

ಬೆಂಗಳೂರು – 560 001

ಸಂಪರ್ಕ: +91-80693-34100

ಮ್ಯೂಸಿಯಂ ಅಂಗಡಿ: +91-77956-80982

ವೆಬ್‌ಸೈಟ್: map-india.org

ಉಚಿತ ಪ್ರವೇಶ: ಪ್ರತಿ ಮಂಗಳವಾರ ಹಾಗೂ ಎಕ್ಸಿಬಿಷನ್‌ ಶುರುವಾಗುವ ಮತ್ತು ಮುಗಿಯುವ ದಿನದಂದು ಎಲ್ಲಾ ಪ್ರದರ್ಶನಗಳಿಗೆ ಉಚಿತ ಪ್ರವೇಶವಿರುತ್ತದೆ

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!