Friday, October 3, 2025
Friday, October 3, 2025

ಸೇಂಟ್ ಪೀಟರ್ಸ್‌ಬರ್ಗ್!

ವಿಶ್ವವಾಣಿ ಸಮೂಹವು ಕರ್ನಾಟಕದ ಅಪರೂಪದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಷ್ಯಾದ ಮಾಸ್ಕೋದಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶ್ವವಾಣಿ ಸಮೂಹದ ಪ್ರದಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು, ಸೇಂಟ್ ಪೀಟರ್ಸ್‌ಬರ್ಗ್ ಭೇಟಿಯ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ.

ಈ ನಗರಕ್ಕೆ ನಾನು ಬರುತ್ತಿರುವುದು ನಾಲ್ಕನೇ ಸಲ. ಇನ್ನೂ ನಾಲ್ಕು ಸಲ ಬಂದರೂ ಬೇಸರವಾಗುವುದಿಲ್ಲ. ಮತ್ತೆ ಮತ್ತೆ ಬರಬೇಕು ಎಂದು ಅನಿಸುವ ನಗರ. ಎಷ್ಟು ನೋಡಿದರೂ ಪೂರ್ತಿ ಆಯ್ತು, ಸಮಾಧಾನವಾಯ್ತು ಎಂದು ಅನಿಸದ ನಗರ. ಇದು ರಷ್ಯಾದ ಎರಡನೇ ಅತಿ ದೊಡ್ಡ ನಗರ. ತನ್ನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವೈಭವದಿಂದ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈ ನಗರವನ್ನು ನೇವಾ ನದಿಯ ತೀರದಲ್ಲಿ 1703 ರಲ್ಲಿ ಪೀಟರ್ ದಿ ಗ್ರೇಟ್ ಎಂಬಾತ ಸ್ಥಾಪಿಸಿದ. ಇದನ್ನು “ಉತ್ತರದ ವೆನಿಸ್” ಅಂತ ಕರೆಯುತ್ತಾರೆ. ಏಕೆಂದರೆ ನಗರವು 42 ದ್ವೀಪಗಳ ಮೇಲೆ ನಿರ್ಮಿತವಾಗಿದೆ ಮತ್ತು 600 ಕ್ಕೂ ಹೆಚ್ಚು ಸೇತುವೆಗಳ ಮೂಲಕ ಸಂಪರ್ಕಗೊಂಡಿದೆ.

ಸೇಂಟ್ ಪೀಟರ್ಸ್‌ಬರ್ಗ್‌ನ ಪ್ರಮುಖ ಆಕರ್ಷಣೆಗಳಲ್ಲಿ ಪೀಟರ್‌ಹೋಫ್ ಅರಮನೆ, ಹೆರ್ಮಿಟೇಜ್ ಮ್ಯೂಸಿಯಂ, ನೆವ್ಸ್ಕಿ ಪ್ರಾಸ್ಪೆಕ್ಟ್ ಹಾಗೂ ಪೀಟರ್ ಮತ್ತು ಪಾಲ್ ಕೋಟೆ ಸೇರಿವೆ. ಪೀಟರ್‌ಹೋಫ್ ಅರಮನೆಗೆ “ರಷ್ಯಾದ ವರ್ಸೈಲ್ಸ್” ಅಂತಾರೆ. ಇದನ್ನು ಪೀಟರ್ ದಿ ಗ್ರೇಟ್ ಆದೇಶದಂತೆ ನಿರ್ಮಿಸಲಾಯಿತು ಮತ್ತು ಅದರ ಸುಂದರ ಉದ್ಯಾನ ಮತ್ತು ಕಾರಂಜಿಗಳು ಪ್ರಸಿದ್ಧ.

bhat sir

ಹೆರ್ಮಿಟೇಜ್ ಮ್ಯೂಸಿಯಂ ವಿಶ್ವದ ಎರಡನೇ ಅತಿ ದೊಡ್ಡ ಕಲಾ ಸಂಗ್ರಹಾಲಯ. ಇದರಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಕಲಾಕೃತಿಗಳು ಮತ್ತು ಸಾಂಸ್ಕೃತಿಕ ವಸ್ತುಗಳಿವೆ. ಈ ಮ್ಯೂಸಿಯಂನಲ್ಲಿ ಪ್ರತಿ ವಸ್ತುವನ್ನು ಒಂದು ನಿಮಿಷ ನೋಡಲು ಪ್ರಯತ್ನಿಸಿದರೆ, ಸಂಪೂರ್ಣ ಸಂಗ್ರಹವನ್ನು ನೋಡಲು ಸುಮಾರು 8 ವರ್ಷಗಳು ಬೇಕು!

ಸೇಂಟ್ ಪೀಟರ್ಸ್‌ಬರ್ಗ್

ನೆವ್ಸ್ಕಿ ಪ್ರಾಸ್ಪೆಕ್ಟ್ ಈ ನಗರದ ಪ್ರಮುಖ ಬೀದಿಯಾಗಿದ್ದು, ಇದು ಸಾವಿರಾರು ಅಂಗಡಿಗಳು, ಕೆಫೆಗಳು ಮತ್ತು ಐತಿಹಾಸಿಕ ಕಟ್ಟಡಗಳಿಂದ ಕೂಡಿದೆ. ಪೀಟರ್ ಮತ್ತು ಪಾಲ್ ಕೋಟೆ ನಗರ ಸ್ಥಾಪನೆಯ ಮೂಲಸ್ಥಳವಾಗಿದ್ದು, ಇದು ರಾಜಕೀಯ ಕೈದಿಗಳಿಗೆ ಜೈಲಾಗಿ ಬಳಸಲಾಗುತ್ತಿತ್ತು .

ಸೇಂಟ್ ಪೀಟರ್ಸ್‌ಬರ್ಗ್‌ನ ಮೆಟ್ರೋ ವ್ಯವಸ್ಥೆ ವಿಶ್ವದ ಅತಿ ಆಳವಾದ ಮೆಟ್ರೋ ವ್ಯವಸ್ಥೆಗಳಲ್ಲಿ ಒಂದು. ಇದರ ಅಡ್ಮಿರಾಲ್ಟೆಸ್ಕಾಯಾ ನಿಲ್ದಾಣವು ಭೂಮಿಯಿಂದ 86 ಮೀಟರ್ ಆಳದಲ್ಲಿದೆ . ಈ ಮೆಟ್ರೋ ನಿಲ್ದಾಣ ತನ್ನ ಶಿಲ್ಪಕಲಾ ಮತ್ತು ಅಲಂಕಾರಿಕ ವಿನ್ಯಾಸಗಳಿಂದ ಪ್ರಸಿದ್ಧವಾಗಿವೆ.

interior-station-admiralteyskaya-saint-petersburg-metro-russia-157604760

ಈ ನಗರವು ತನ್ನ ವೈಟ್ ನೈಟ್ಸ್ (White Nights) ಎಂಬ ಪ್ರಕೃತಿ ವೈಶಿಷ್ಟ್ಯದಿಂದಲೂ ಪ್ರಸಿದ್ಧವಾಗಿದೆ, ಏಕೆಂದರೆ ಬೇಸಿಗೆ ಸಮಯದಲ್ಲಿ ರಾತ್ರಿ ಸಮಯದಲ್ಲೂ ಬೆಳಕು ಇರುತ್ತದೆ. ಈ ಸಮಯದಲ್ಲಿ ನಗರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಉತ್ಸವಗಳು ನಡೆಯುತ್ತವೆ.

ಸೇಂಟ್ ಪೀಟರ್ಸ್‌ಬರ್ಗ್ ರಷ್ಯಾದ ಸಾಂಸ್ಕೃತಿಕ ರಾಜಧಾನಿ. ಏಕೆಂದರೆ ಇಲ್ಲಿ ವರ್ಷಕ್ಕೆ ಐವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಲಾ ಉತ್ಸವಗಳು ಮತ್ತು 80 ಕ್ಕೂ ಹೆಚ್ಚು ಸಂಗೀತ ಮತ್ತು ನಾಟಕ ಉತ್ಸವಗಳು ನಡೆಯುತ್ತವೆ. ಈ ನಗರವು ತನ್ನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವೈಭವದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ರಷ್ಯಾದ ಇತಿಹಾಸ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ.

ಈ ಎಲ್ಲ ವೈಶಿಷ್ಟ್ಯಗಳೊಂದಿಗೆ, ಸೇಂಟ್ ಪೀಟರ್ಸ್‌ಬರ್ಗ್ ಒಂದು ಅನನ್ಯ ಮತ್ತು ಆಕರ್ಷಕ ನಗರ. ಇದು ತನ್ನ ಐತಿಹಾಸಿಕ ಕಟ್ಟಡಗಳು, ಕಲಾ ಸಂಗ್ರಹಾಲಯಗಳು, ನದಿಗಳು ಮತ್ತು ಸೇತುವೆಗಳೊಂದಿಗೆ ವಿಶಿಷ್ಟ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!