Tuesday, October 7, 2025
Tuesday, October 7, 2025

ಶ್ರೀ ವಿಜಯಪುರಂನಲ್ಲಿ ಪ್ರಕೃತಿ ಮತ್ತು ಐತಿಹಾಸಿಕ ವೈಭವ

ಇದು ಬ್ರಿಟಿಷರ ಕಾಲದಿಂದಲೂ ಜನ ವಸತಿಯಾಗಿ, ಸೂಕ್ಷ್ಮ ಸ್ಥಳವಾಗಿಯೇ ಬೆಳೆದು ಬಂದಿದ್ದು. ಇಲ್ಲಿ ಓಡಾಡುವಾಗೆಲ್ಲ ಒಂದಿಲ್ಲೊಂದು ಐತಿಹಾಸಿಕ ಐತಿಹ್ಯಗಳು ಕಾಣುತ್ತಲೇ ಇರುತ್ತವೆ. ಅದು ಎರಡನೇ ಮಹಾ ಯುದ್ಧದಲ್ಲಿ ಬಳಸಿದ ಬಂಕರ್ ಇರಬಹುದು, ನೇತಾಜಿ ಮೊದಲ ಬಾರಿ ತಿರಂಗಾ ಹಾರಿಸಿದ ಸ್ಥಳ ಇರಬಹುದು ಹೀಗೆ ಹತ್ತಾರು ಜಾಗಗಳು ಇಲ್ಲಿವೆ. ನೇತಾಜಿ ಧ್ವಜ ಹಾರಿಸಿದ ಸ್ಥಳವನ್ನು ಚೆಂದನೆಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಂಜೆಯ ಹೊತ್ತಿನ ಅಲ್ಲಿನ ತಿರುಗಾಟ ಅವಿಸ್ಮರಣೀಯ.

-ವಿನಾಯಕ ಭಟ್

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ. ಪ್ರವಾಸಿ ಸ್ಥಳಕ್ಕೂ ಒಂದೊಂದು ಸಲ ಇಂಥದ್ದೇ ಉಕ್ತಿ ಅಂಟಿಕೊಂಡು ಬಿಡುತ್ತದೆ. ಅಯ್ಯೋ ಅದೇನ್ ಬಿಡ್ರಿ, ಭಾರತದಲ್ಲೇ ಇದೆ ಅಲ್ವೇ, ಅಲ್ಲಿಗೆ ಹೋಗೋದು ಅದೆಂಥ ಪ್ರವಾಸ. ಪ್ರವಾಸ ಅಂದ್ರೆ ಫಾರಿನ್ ಮಾತ್ರ ಅಂತ ಅಂದುಕೊಳ್ಳುವ ಜನ ಕೂಡಾ ಇಲ್ಲದಿಲ್ಲ. ಅಂಥ ನಮ್ಮ ದೇಶದಲ್ಲೇ ಇರುವ ಶ್ರೀ ವಿಜಯಪುರಂ (ಈ ಮೊದಲು ಪೋರ್ಟ್‌ಬ್ಲೇರ್) ಇಂಥದ್ದೇ ಸ್ಥಳಗಳ ಸಾಲಿಗೆ ಸೇರುತ್ತದೆ. ನಮ್ಮದೇ ದೇಶದಲ್ಲಿರುವ ಪ್ರಾಕೃತಿಕ ಸೌಂದರ್ಯಕ್ಕಾಗಿ, ಐತಿಹಾಸಿಕವಾಗಿ, ಭಾವನಾತ್ಮಕವಾಗಿ, ರಕ್ಷಣಾತ್ಮಕವಾಗಿ ಸೊಗಸಾಗಿರುವ ಸ್ಥಳ ಇದು. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಕೇಂದ್ರ ಸ್ಥಳ. ಈ ದ್ವೀಪ ಸಮೂಹದ ಎಲ್ಲ ಆಡಳಿತಗಳೂ, ವ್ಯವಸ್ಥೆಗಳೂ, ಸೇವೆಗಳೂ ಇಲ್ಲಿಂದ ಆಗುವಂಥದ್ದು. ಹಾಗಾಗಿ ಸರಕಾರದ ಎಲ್ಲ ಇಲಾಖೆಗಳ ನಿರ್ದೇಶಕರ ಹಂತದ ಕಚೇರಿಗಳೂ ಇಲ್ಲಿಯೇ ಇವೆ.

Nicobar green

ಪ್ರಾಕೃತಿಕ ಸೌಂದರ್ಯ

ಶ್ರೀ ವಿಜಯಪುರಂ ಮೂಲತಃ ದ್ವೀಪ. ಅದರಲ್ಲೂ ಚೆನ್ನಾಗಿ ಮಳೆ ಆಗುವ ಪ್ರದೇಶ. ಜನಸಂಖ್ಯೆಯ ಒತ್ತಡ ಇಲ್ಲ. ಈ ಕಾರಣಗಳಿಂದ ಗುಡ್ಡ, ಬೆಟ್ಟ ಗಿಡ ಮರಗಳು ಯಥೇಚ್ಛ. ಎಲ್ಲಿ ನೋಡಿದರೂ ಹಸಿರು ಕಣ್ತುಂಬುತ್ತದೆ. ಅದರ ಜತೆಗೆ ಚೆಂದನೆಯ ಸಮುದ್ರ ಸುತ್ತುವರೆದಿದೆ. ಇಲ್ಲಿನ ಜನ ಪ್ಲಾಸ್ಟಿಕ್ ಬಳಕೆಯಲ್ಲಿ ಜಿಪುಣರು ಎನ್ನಿಸುತ್ತದೆ. ಉದಾಹರಣೆಗೆ -ಸಾಮಾನ್ಯ ಕೋಲ್ಡ್ ಡ್ರಿಂಕ್ ಬಾಟಲಿಗಳ ಹಾವಳಿ ಹೆಚ್ಚು ಕಂಡು ಬರುವುದಿಲ್ಲ. ಬದಲಿಗೆ ಮರು ಬಳಕೆ ಮಾಡಬಹುದಾದ ಕ್ಯಾನ್‌ಗಳನ್ನೇ ಹೆಚ್ಚು ಮಾರುವುದು. ಪಟ್ಟಣದ ಒಂದು ಕಡೆಯಲ್ಲಂತೂ ನಮ್ಮ ಮಲೆನಾಡಿನ ಭಾಗಗಳಲ್ಲಿ ಕಂಡು ಬರುವಂತೆ ನೀರ ಝರಿಯೂ ಕಂಡು ಬಂತು. ತೆಂಗಿನ ಮರಗಳು, ಅಡಿಕೆ ಮರಗಳ ಜೊತೆಗೆ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಅದೆಷ್ಟೋ ಜಾತಿಯ ಮರಗಳೂ ಇಲ್ಲಿ ಲಭ್ಯ. ಹಸಿರು ಕಾಡು, ನೀಲಿ ಕಡಲು, ಬೆಳ್ಳಗಿನ ಮರಳ ರಾಶಿ ಹೀಗೆ ವಿವಿಧ ಬಣ್ಣಗಳಿಂದ ಕೂಡಿದ ಪ್ರಕೃತಿಯ ಸೌಂದರ್ಯಕ್ಕೆ ಪ್ರವಾಸಿಗ ಮರುಳಾಗಲೇಬೇಕು.

Netaji

ಐತಿಹಾಸಿಕ ಸೌಂದರ್ಯ

ಇದಕ್ಕೆ ಪೋರ್ಟ್ ಬ್ಲೇರ್ ಎಂಬ ಹೆಸರಿತ್ತು. ಕೇಂದ್ರ ಸರಕಾರದ ಭಾರತೀಯತೆಯನ್ನು ಸಾರುವ ಪ್ರಯತ್ನದ ಫಲವಾಗಿ ಈಗ ಶ್ರೀ ವಿಜಯಪುರಂ ಆಗಿದೆ. ಇದು ಬ್ರಿಟಿಷರ ಕಾಲದಿಂದಲೂ ಜನ ವಸತಿಯಾಗಿ, ಸೂಕ್ಷ್ಮ ಸ್ಥಳವಾಗಿಯೇ ಬೆಳೆದು ಬಂದಿದ್ದು. ಇಲ್ಲಿ ಓಡಾಡುವಾಗೆಲ್ಲ ಒಂದಿಲ್ಲೊಂದು ಐತಿಹಾಸಿಕ ಐತಿಹ್ಯಗಳು ಕಾಣುತ್ತಲೇ ಇರುತ್ತವೆ. ಅದು ಎರಡನೇ ಮಹಾಯುದ್ಧದಲ್ಲಿ ಬಳಸಿದ ಬಂಕರ್ ಇರಬಹುದು, ನೇತಾಜಿ ಮೊದಲ ಬಾರಿ ತಿರಂಗಾ ಹಾರಿಸಿದ ಸ್ಥಳ ಇರಬಹುದು ಹೀಗೆ ಹತ್ತಾರು ಜಾಗಗಳು ಇಲ್ಲಿವೆ. ನೇತಾಜಿ ಧ್ವಜ ಹಾರಿಸಿದ ಸ್ಥಳವನ್ನು ಚೆಂದನೆಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಂಜೆಯ ಹೊತ್ತಿನ ಅಲ್ಲಿನ ತಿರುಗಾಟ ಅವಿಸ್ಮರಣೀಯ. 1943 ನೇ ಇಸವಿಯಲ್ಲಾದ ಘಟನೆ ಅದು!. ಆ ಇಸವಿಯ ಜತೆಗೆ ಫೋಟೋ ತೆಗೆಸಿಕೊಳ್ಳಲು ಜನ ತುಂಬಿರುತ್ತಾರೆ. ಆ ಸ್ಥಳದಿಂದಲೇ ಹತ್ತಿರದ ನೇತಾಜಿ ಸುಭಾಷ್‌ ಚಂದ್ರ ಬೋಸ್ ದ್ವೀಪ ಕಾಣುತ್ತದೆ. (2018 ಕ್ಕೆ ಮೊದಲು ಇದನ್ನು ರೋಸ್ ಐಲ್ಯಾಂಡ್ ಎಂದು ಕರೆಯುತ್ತಿದ್ದರು)

Kaalapani cellular jail

ಭಾವನಾತ್ಮಕ ಸ್ಥಳ -

ಇಲ್ಲಿನ ಸೆಲ್ಯೂಲರ್ ಜೈಲ್ ಅಥವಾ ಕಾಲಾಪಾನಿ ಜೈಲ್. ಇದು ಭಾವನಾತ್ಮಕವಾಗಿ ಬಹಳ ಕಾಡುವ ಸ್ಥಳ. ವೀರ ಸಾವರ್ಕರ್ ಅಂತಹ ಸ್ವಾತಂತ್ರ್ಯ ಹೋರಾಟಗಾರರು ಇಂದಿನ ನಮ್ಮ ಬದುಕಿಗಾಗಿ ಅಂದಿನ ತಮ್ಮ ಜೀವನವನ್ನು ತೇದ ಸ್ಥಳ. ಆ ಜೈಲು ಅದೆಷ್ಟು ಸುಂದರ ಕಟ್ಟಡವೋ, ಅಷ್ಟೇ ಭಾವನಾತ್ಮಕವಾಗಿ ಕಾಡುತ್ತದೆ. ಅಲ್ಲಿನ ಜೈಲಿನ ಕೋಣೆಗಳ ಪ್ರತಿ ಇಟ್ಟಿಗೆಗಳು ಅದೆಷ್ಟು ನೋವನ್ನು ಕಂಡಿರಬಹುದು ಅನ್ನಿಸುತ್ತದೆ. ಅಲ್ಲಿ ಕೈದಿಗಳು ಉಪಯೋಗಿಸುತ್ತಿದ್ದ ವಿವಿಧ ವಸ್ತುಗಳನ್ನೂ ಇಡಲಾಗಿದೆ. ಕೈದಿಗಳಿಗೆ ನೀಡುತ್ತಿದ್ದ ಶಿಕ್ಷೆಗಳಿಗೆ ಉಪಯೋಗಿಸುತ್ತಿದ್ದ ಸಲಕರಣೆಗಳನ್ನು ನೋಡಿದಾಗ, ಭಾವ ಜೀವಿಗಳಿಗೆ ಕಣ್ಣಂಚು ಒದ್ದೆಯಾಗದೇ ಇರದು. ವೀರ ಸಾವರ್ಕರ್‌ರನ್ನು ಇಟ್ಟಿದ್ದ ಕೋಣೆಯಲ್ಲಿ ಅವರ ಭಾವಚಿತ್ರವನ್ನೂ, ಅವರು ಉಪಯೋಗಿಸಿದ ವಸ್ತುಗಳನ್ನೂ ಇಡಲಾಗಿದೆ. ಅವರನ್ನು ಟೀಕಿಸುವ, ಅವರ ದೇಶ ಪ್ರೇಮದ ಬಗ್ಗೆ ಕೊಂಕು ಮಾತನಾಡುವ ಜನ ಒಮ್ಮೆಯಾದರೂ ಈ ಸ್ಥಳವನ್ನು ನೋಡಿ ಬಂದರೆ ಅವರ ವಿಚಾರ ಬದಲಾದರೂ ಆದೀತು. ಉಳಿದ ಅನೇಕ ಸೋ ಕಾಲ್ಡ್ ಸ್ವಾತಂತ್ರ್ಯ ವೀರರಂತೇ ಐಷಾರಾಮೀ ಜೈಲಿನಲ್ಲಿ ಅಲ್ಲ ಸಾವರ್ಕರ್ ಇದ್ದಿದ್ದು. ಭಯಂಕರವಾದ ಕಾಲಾಪಾನಿ ಜೈಲು ಎಂಬುದು ಅರ್ಥ ಆದೀತು.

ರಕ್ಷಣಾತ್ಮಕ ಸ್ಥಳ

ಇದು ಭೌಗೋಳಿಕವಾಗಿ ಭಾರತದ ಮೂಲ ಪ್ರದೇಶದಿಂದ ಹೊರಗಿರುವುದರಿಂದ ವೈರಿಗಳ ಆಕ್ರಮಣಕ್ಕೆ ಸದಾ ಸನ್ನದ್ಧ ಆಗಿರಲೇಬೇಕು. ಇಲ್ಲಿನ ಏರ್‌ಪೋರ್ಟ್ ಕೂಡ ಸೇನೆಗೆ ಸೇರಿದ್ದು. ಆದ್ದರಿಂದ ಏರ್‌ರ್ಪೋರ್ಟ್‌ನಲ್ಲಿ ವಿಡಿಯೋ, ಫೊಟೋ ಚಿತ್ರೀಕರಣ ನಿಷೇಧ. ಭಾರತದ ಪೂರ್ವ ಕರಾವಳಿಯಲ್ಲಿ ಹೊರಗಿನ ವೈರಿಗಳಿಗೆ ಮೊದಲಿಗೆ ಸಿಗುವ ಭಾರತದ ಮುಖ್ಯ ಭೂ ಪ್ರದೇಶ ಇದು. ಹಾಗಾಗಿ, ಈ ಸ್ಥಳ ದೇಶ ರಕ್ಷಣೆಯ ದೃಷ್ಟಿಯಿಂದಲೂ ಅತ್ಯಂತ ಸೂಕ್ಷ್ಮ ಪ್ರದೇಶ. ಹೀಗೆ ವಿವಿಧ ದೃಷ್ಟಿಯಿಂದ ಶ್ರೀ ವಿಜಯಪುರಂ ಒಂದು ನೋಡಲೇ ಬೇಕಾದ ಸ್ಥಳ.

ಪ್ರವಾಸಿಗರಿಗೆ ಒಂದೆರಡು ಟಿಪ್ಸ್

ಇಲ್ಲಿನ ಭೌಗೋಳಿಕ ಪರಿಸ್ಥಿತಿಯಿಂದಾಗಿ ಎಲ್ಲ ಕಡೆಯಲ್ಲೂ ಸ್ಥಿರ ಮೊಬೈಲ್ ನೆಟ್ವರ್ಕ್ ಇರುವುದಿಲ್ಲ. ಆದ್ದರಿಂದ ಮೊಬೈಲ್ ಬ್ಯಾಟರಿ ಕೂಡ ಬೇಗ ಖಾಲಿಯಾಗುತ್ತದೆ. ಜತೆಗೊಂದು ಪವರ್ ಬ್ಯಾಂಕ್ ಇದ್ದರೆ ಅನುಕೂಲ. ಇಲ್ಲಿನಂತೆ Uber, Ola ಸದ್ಯಕ್ಕೆ ಇಲ್ಲ. ಪ್ರವಾಸಕ್ಕೇ ಹೋಗುವವರಾದರೆ, ಮೊದಲೇ ಸ್ಥಳೀಯ ಸಾರಿಗೆಯನ್ನು ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಚಹಾ ಕಾಫಿ ಪ್ರಿಯರಿಗೆ ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವುದು ಹೆಚ್ಚಾಗಿ ಹಾಲಿನ ಪೌಡರಿನ ಚಾ/ಕಾಫಿ. ನೋಡಿಕೊಳ್ಳಿ. ಬೆಂಗಳೂರಿಂದ ಡೈರೆಕ್ಟ್ ವಿಮಾನಗಳು ಇವೆ. ಸರಿಯಾದ ಸಮಯಕ್ಕೆ, ಆದಷ್ಟು ಬೇಗ ಮನೆಯಿಂದ ಹೊರಡಿ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೆಚ್ಚು ಬರೆಯುವುದೇನೂ ಇಲ್ಲ. ಇಲ್ಲದಿದ್ದಲ್ಲಿ, ಓಡಿ ಓಡಿ (ನನ್ನಂತೇ) ಒಂದೇ ಒಂದು ನಿಮಿಷ ಇರುವಾಗ ಗೇಟ್ ತಲುಪುವ ಸ್ಥಿತಿ ನಿಮ್ಮದೂ ಆದೀತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!