Tuesday, October 28, 2025
Tuesday, October 28, 2025

ಅಧ್ಯಾತ್ಮಕ್ಕೆ ವಾರಾಣಸಿ.. ಸೀರೆಗೆ ಬನಾರಸ್! ಪುಣ್ಯಕ್ಷೇತ್ರದಲ್ಲೊಂದು ಸುತ್ತು

"ಕಾಶಿ" ಎಂದಕೂಡಲೇ ಪ್ರತಿಯೊಬ್ಬರೂ ಅವರವರದ್ದೇ ಆದ ಭಾವನೆಗಳೊಟ್ಟಿಗೆ ಬೆಸೆದುಕೊಳ್ಳುವರು. ಕೆಲವರಿಗೆ ಕಾಶಿ ಅಧ್ಯಾತ್ಮಿಕ ಪವಿತ್ರ ಕ್ಷೇತ್ರವಾದರೆ ಇನ್ನು ಕೆಲವರಿಗೆ ಅದು ಜ್ಞಾನ ಕೇಂದ್ರ. ಮತ್ತೆ ಕೆಲವರಿಗೆ ಅಲ್ಲಿಯ ಗಂಗಾ ನದಿಯ ಆಕರ್ಷಣೆ. ಹಾಗೆ ಮತ್ತೆ ಕೆಲವರಿಗೆ ಅಲ್ಲಿಯ ಬನಾರಸ್ ವಿಶ್ವವಿದ್ಯಾಲಯ, ಶಾಸ್ತ್ರೀಯ ಸಂಗೀತ, ಅಲ್ಲಿಯ ರೇಷ್ಮೆ ವಸ್ತ್ರ ಹಾಗೂ ಕರಕುಶಲ ವಸ್ತು ಹೀಗೆ ಪಟ್ಟಿ ಅಗಣಿತ. ಹೆಚ್ಚಿನವರಿಗೆ ಇದೆಲ್ಲವೂ ಕೂಡಿರುವ ಕಾಶಿಯನ್ನು ಅವರ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿ ಬರುವ ಹಂಬಲ

-ಪದ್ಮಿನಿ ಅಶೋಕ್

"ಕಾಶಿ, ಬನಾರಸ್, ವಾರಾಣಸಿ" ಈ ಎಲ್ಲವೂ ಒಂದೇ ಜಾಗದ ಹೆಸರಾದರೂ ಅದನ್ನು ಹೆಸರಿಸುವಾಗ ಅದದರದ್ದೇ ಒಂದು ಸೊಬಗು. ಬಹುಶಃ ಭಾವನೆಗೆಲ್ಲವೂ ಒಂದೇ. "ಕಾಶಿ" ಎಂದಕೂಡಲೇ ಪ್ರತಿಯೊಬ್ಬರೂ ಅವರವರದ್ದೇ ಆದ ಭಾವನೆಗಳೊಟ್ಟಿಗೆ ಬೆಸೆದುಕೊಳ್ಳುವರು. ಕೆಲವರಿಗೆ ಕಾಶಿ ಅಧ್ಯಾತ್ಮಿಕ ಪವಿತ್ರ ಕ್ಷೇತ್ರವಾದರೆ ಇನ್ನು ಕೆಲವರಿಗೆ ಅದು ಜ್ಞಾನ ಕೇಂದ್ರ. ಮತ್ತೆ ಕೆಲವರಿಗೆ ಅಲ್ಲಿಯ ಗಂಗಾ ನದಿಯ ಆಕರ್ಷಣೆ. ಹಾಗೆ ಮತ್ತೆ ಕೆಲವರಿಗೆ ಅಲ್ಲಿಯ ಬನಾರಸ್ ವಿಶ್ವವಿದ್ಯಾಲಯ, ಶಾಸ್ತ್ರೀಯ ಸಂಗೀತ, ಅಲ್ಲಿಯ ರೇಷ್ಮೆ ವಸ್ತ್ರ ಹಾಗೂ ಕರಕುಶಲ ವಸ್ತು ಹೀಗೆ ಪಟ್ಟಿ ಅಗಣಿತ. ಹೆಚ್ಚಿನವರಿಗೆ ಇದೆಲ್ಲವೂ ಕೂಡಿರುವ ಕಾಶಿಯನ್ನು ಅವರ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿ ಬರುವ ಹಂಬಲ.

ಹೀಗಿರುವಾಗ ನನಗೆ ಮೂರು ಬಾರಿ ಅಲ್ಲಿಗೆ ಹೋಗುವ ಪುಣ್ಯ ಒದಗಿದೆ. ಆದರೆ ಮೂರು ಬಾರಿಯ ಅನುಭವವೂ ವಿಭಿನ್ನ, ಕಾರಣ ನಾನು ಅಲ್ಲಿಗೆ ಭೇಟಿ ನೀಡಿದಾಗ ಇದ್ದ ಸಂದರ್ಭ ಮತ್ತು ನನ್ನ ವಯಸ್ಸು. ಒಮ್ಮೆ 19 ವರ್ಷ ವಯಸ್ಸಿನಲ್ಲಿ ಕಾಲೇಜು ದಿನಗಳಲ್ಲಿ. ಆಗ ಕಂಡಿದ್ದು ಕಾಶಿ ವಿಶ್ವನಾಥ ಮತ್ತು ವಿಶಾಲಾಕ್ಷಿ ದೇವಾಲಯ ಮತ್ತು ತ್ರಿವೇಣಿ ಸಂಗಮದ ನೆನಪು. ಎರಡು ವರ್ಷದ ಹಿಂದೆ ಕಾಶಿಯೊಟ್ಟಿಗೆ ಅಯೋಧ್ಯೆ, ಪ್ರಯಾಗ್, ಗಯಾ ಭೋದ್ ಗಯಾ.. ಆ ಸಮಯದಲ್ಲಿ ದೇವಸ್ಥಾನಗಳ ಭೇಟಿ ಮತ್ತು ಪಿತೃಕಾರ್ಯಕ್ಕೆ ಆದ್ಯತೆ.

kashi view


ಆದರೆ ಮೂರನೇ ಬಾರಿ ಕಾಶಿಗೆ ಹೋಗಿದ್ದು ಇತ್ತೀಚೆಗೆ. ಅಂದರೆ ಸೆಪ್ಟೆಂಬರ್ 25 ರಂದು ನಾಲ್ಕು ದಿನ ಇರಲು. ಹೀಗೆ ಕಾಶಿಯಲ್ಲಿ ನಾಲ್ಕು ದಿನವಾದರೂ ಒಮ್ಮೆ ಸಾವಕಾಶವಾಗಿ ಉಳಿಯಬೇಕು ಎಂದು ಕೊಂಡಿದ್ದು ಹಿಂದಿನ ಬಾರಿ ಬಂದಾಗ.

ಈ ಪ್ರವಾಸದ ವಿಶೇಷವೇನೆಂದರೆ ಪೂರಾ ನಾಲ್ಕು ದಿನವೂ ನಾವು ಇದ್ದಿದ್ದು ಕಾಶಿಯ ಗಂಗಾ ನದಿ ತೀರದ "ಗುಲೇರಿಯ ಕೋಠಿ" ಅನ್ನುವ ಹೊಟೇಲ್‌ನಲ್ಲಿ. ಈ ಪ್ರವಾಸವನ್ನು ಏರ್ಪಡಿಸಿದವರು ಬೆಂಗಳೂರಿನ ಸಂಯಮ್ ಸ್ಪಿರಿಚುಯಲ್ ಟೂರಿಸಂ ಎಂಬ ಸಂಸ್ಥೆ. ಈ ಪ್ರವಾಸದ ಮುಖ್ಯ ಆಕರ್ಷಣೆ ಅಂದರೆ ಈ ಪ್ರವಾಸ ಇತರೆ ಯಾವುದೇ conducted tours ನಂತಿರದೆ ಕೆಲವು ವೈಶಿಷ್ಟ್ಯಗಳಿಂದ ಕೂಡಿತ್ತು. ಮೊದಲನೆಯದಾಗಿ ಈ ಪ್ರವಾಸದಲ್ಲಿ ಯೋಗ, ಸೌಂಡ್ ಹೀಲಿಂಗ್, ಶಾಸ್ತ್ರೀಯ ಸಂಗೀತ, ಸತ್ಸಂಗ್, ಅಧ್ಯಾತ್ಮಿಕ ಪ್ರವಚನ, ದೇವಸ್ಥಾನಗಳಲ್ಲಿ ದರ್ಶನ, ಹವನ, ಗಂಗಾ ಆರತಿ ದೋಣಿ ವಿಹಾರ ಎಲ್ಲವೂ ಸೇರಿತ್ತು.

Kashi aarti

ಪ್ರವಾಸದ ಕಾರ್ಯಕ್ರಮ ಹೀಗಿತ್ತು

ಸೂರ್ಯೋದಯದ ಸಮಯದಲ್ಲಿ ಗಂಗಾ ನದಿಯ ತಟದಲ್ಲಿ ಶಾಸ್ತ್ರೀಯ ಸಂಗೀತ.
ಅದನ್ನು ಆಸ್ವಾದಿಸುವ ಆನಂದವೇ ಬೇರೆ. ನಸುಕಿನಲ್ಲಿ ಮಾಡಿದ ಯೋಗ ಇಡೀ ದಿನಕ್ಕೆ ಚೈತನ್ಯ. ಸೌಂಡ್ ಹೀಲಿಂಗ್‌ನದ್ದೇ ಮತ್ತೊಂದು ದಿವ್ಯ ಅನುಭವ. ಹತ್ತಿರದಿಂದ ಕಂಡ ಗಂಗಾ ಆರತಿ, ಕಾಶಿ ವಿಶ್ವನಾಥ, ವಿಶಾಲಾಕ್ಷಿ, ಬಿಂದು ಮಾಧವ, ಕಾಲಭೈರವ ಅನೇಕ ದೇವಸ್ಥಾನಗಳ ಭೇಟಿ ಅನುಭೂತಿ. ನಮಗಾಗಿಯೇ ಸಂಯಮ್ ನವರು ಏರ್ಪಡಿಸಿದ ಚಂಡಿಹೋಮ. ಒಂದೇ ಎರಡೇ ವಿಶೇಷಗಳು! ನಾವಿದ್ದಿದ್ದು ಹನ್ನೆರಡೇ ಮಹಿಳೆಯರು. ಜೊತೆಗೆ ಇದನ್ನು ಸಾಕಾರ ಮಾಡಿದ ಏಳು ಜನ ಸಂಯಮ್‌ನ ಸಮಾನ ಮನಸ್ಕ ಸಿಬ್ಬಂದಿಯವರು. ಇದು ಅವರು ನಡೆಸಿದ ಎರಡನೇ "ಕಾಶಿ" ಪ್ರವಾಸ. ಇದೇ ತಿಂಗಳ 29 ರಿಂದ ನವೆಂಬರ್ 1 ರವರೆಗೆ 3ನೇ ಬಾರಿಗೆ ಪ್ರವಾಸ ಏರ್ಪಡಿಸುತ್ತಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಮೈಸೂರ್, ಟ್ರಿವೆಂಡ್ರಮ್, ಹೃಷಿಕೇಶ್, ಜಮ್ಮು, ಮುಂಬೈ ಕಾರ್ಕಳದಿಂದ ಬಂದ ಪ್ರವಾಸಿಗರಾದರೂ ನಾವೆಲ್ಲಾ ಅಲ್ಲಿ ನಾಲ್ಕು ದಿನವಿದ್ದು ಈ ವಿಶಿಷ್ಟವಾದ ಅನುಭವ ಹೊಂದಿದ್ದು, ಇದು ನಮ್ಮೆಲ್ಲರ ಸುಯೋಗವೆಂದೇ ಭಾವಿಸಿದ್ದೆವು.
ಈ ಪ್ರವಾಸವು ನನ್ನ ಈವರೆಗಿನ ಎಲ್ಲಾ ಪ್ರವಾಸಗಳಿಗಿಂತ ತುಂಬಾ ಭಿನ್ನವಾದ, ಅತ್ಯಂತ ಶಾಂತ ಮತ್ತು ಸಾವಧಾನವಾದ ಮನಸ್ಸಿಗೆ ಹಿತವನ್ನು ನೀಡಿದ ಪ್ರವಾಸ ಅಂತ ಪ್ರಾಮಾಣಿಕವಾಗಿ ಹೇಳಬಲ್ಲೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!