ರಾಧಿಕೆ ನಿನ್ನ ಸರಸವಿದೇನೇ...
ಈ ಎಐ ಸುಂದರಿಯ ಹೆಸರು ರಾಧಿಕಾ ಸುಬ್ರಹ್ಮಣ್ಯಂ. ನಯ ನಾಜೂಕಿನ ಈ ಬೆಡಗಿ ಭಾರತದ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುತ್ತಾಳೆ. ಟೂರಿಸ್ಟ್ ಗೈಡ್ನಂತೆ ಪ್ರತಿ ಜಾಗಕ್ಕೂ ಜತೆಯಾಗುತ್ತಾಳೆ. ಇವಳ ಕಾರ್ಯ ವೈಖರಿ ಬೆರಗು ಹುಟ್ಟಿಸುವಂತಿದೆ.
- ವಿನಯಾ ವಿ ಎಂ
ಇದು ಎಐ ಜಮಾನ. ಎಲ್ಲೇ ಹೋದರೂ ಕೃತಕ ಬುದ್ದಿಮತ್ತೆ ಎಂದರೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆಯೇ ಕೇಳುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಎಐ, ಮನುಷ್ಯರಿಗಿಂತ ಸಾವಿರ ಪಟ್ಟು ವೇಗವಾಗಿ ಸ್ಮಾರ್ಟ್ ಆಗಿ ಕೆಲಸ ಮಾಡುತ್ತಿದೆ. ಹೀಗಾಗಿ ಹೆಚ್ಚು ಕಂಪನಿಗಳು Automation ಕೆಲಸದ ಮೊರೆ ಹೋಗಿವೆ. ಇದರ ಪರಿಣಾಮ ಮಾನವ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದು, ಮತ್ತಷ್ಟು ಜನರಲ್ಲಿ ಕೆಲಸ ಕಳೆದುಕೊಳ್ಳುವ ಭಯದ ವಾತಾವರಣ ನಿರ್ಮಾಣವಾಗಿದೆ.

ಇದೀಗ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಎಐ ಕಾಲಿಟ್ಟಿದ್ದು, ಈ ಮೂಲಕ ಟ್ರಾವೆಲ್ ಇನ್ ಫ್ಲುಯೆನ್ಸರ್ ಮಾಡುವ ಕೆಲಸವನ್ನು AI ಕಸಿದುಕೊಳ್ಳುತ್ತಿದೆ. ಸದ್ಯ ಭಾರತದ ಮೊಟ್ಟ ಮೊದಲ AI ಜನರೇಟೆಡ್ ಟ್ರಾವೆಲ್ ಇನ್ ಫ್ಲುಯೆನ್ಸರ್ ರಾಧಿಕಾ ಸುಬ್ರಹ್ಮಣ್ಯಂ ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಮನುಷ್ಯರಿಗಿಂತಲೂ ವೇಗವಾಗಿ ಭಾರತದ ಮೂಲೆ ಮೂಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುತ್ತಾ, ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಲು ಹೊರಟಿದ್ದಾಳೆ ಈ AI ಸುಂದರಿ.
ಯಾರಿದು ರಾಧಿಕಾ ಸುಬ್ರಹ್ಮಣ್ಯಂ?
ರಾಧಿಕಾ ಸುಬ್ರಹ್ಮಣ್ಯಂ ಭಾರತದ ಮೊಟ್ಟ ಮೊದಲ AI ಜನರೇಟೆಡ್ ಟ್ರಾವೆಲ್ ಇನ್ ಫ್ಲುಯೆನ್ಸರ್. ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್ ಎಂಬ ಸಂಸ್ಥೆಯು ರಾಧಿಕಾಳನ್ನು ಸೃಷ್ಟಿಸಿದ್ದು, ತಮಿಳು ಮತ್ತು ಇಂಗ್ಲಿಷ್ ಮಾತನಾಡುವ ಈಕೆ ಕೃತಕ ಟ್ರಾವೆಲ್ ಇನ್ ಫ್ಲುಯೆನ್ಸರ್ ಆಗಿ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚುತ್ತಿದ್ದಾಳೆ. 2025 ಏಪ್ರಿಲ್ ನಿಂದ ರಾಧಿಕಾ ಸುಬ್ರ ಹ್ಮಣ್ಯಂ ಎಂಬ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ(@indiawithradhika) ಕಾಣಿಸಿಕೊಳ್ಳುತ್ತಿದ್ದು, ಇದರ ಮೂಲಕ ಇಲ್ಲಿಯವರೆಗೆ ಭಾರತದ ಸಾಕಷ್ಟು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿದ್ದಾಳೆ. ಭಾರತದ ಮೊದಲ ವರ್ಚುವಲ್ ಟ್ರಾವೆಲ್ ಇನ್‌ಫ್ಲುಯೆನ್ಸರ್ ಆಗಿರುವ ಈಕೆ ಭಾರತದಾದ್ಯಂತ ಪ್ರಯಾಣಿಸುವ ಮೂಲಕ ಭಾರತದ ವಿವಿಧ ಪ್ರವಾಸಿ ತಾಣಗಳ ಬಗೆಗಿನ ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾಳೆ.
ಈ ಕುರಿತು ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್‌ನ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ವಿಜಯ್ ಸುಬ್ರಹ್ಮಣ್ಯಂ ಅವರು, "ರಾಧಿಕಾ ನಮಗೆಲ್ಲರಿಗೂ ತಿಳಿದಿರುವ ಒಬ್ಬ ಸ್ನೇಹಿತೆಯಂತೆ ನಮ್ಮನ್ನು ಭಾರತದ ಪ್ರವಾಸಿ ತಾಣಗಳಿಗೆ ವರ್ಚುವಲ್ ಆಗಿ ಕರೆದೊಯ್ಯಲಿದ್ದಾಳೆ. ಹೇಗೆ ಅಂದರೆ ಆ ಕ್ಷಣದಲ್ಲಿ ನಾವೇ ಪ್ರವಾಸಕ್ಕೆ ಹೋದಂತೆ ಭಾಸವಾಗುತ್ತದೆ. ಆಕೆ ಭಾರತದ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿದ್ದು, ಈ ಮೂಲಕ ಭಾರತೀಯ ಪ್ರೇಕ್ಷಣೀಯ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸಲಿದ್ದಾಳೆ" ಎಂದು ವಿವರಿಸಿದ್ದಾರೆ.
AI ಟ್ರಾವೆಲ್ ಇನ್ ಫ್ಲುಯೆನ್ಸರ್ ಎಂದರೇನು?
ಸರಳವಾಗಿ ಹೇಳುವುದಾದರೆ AI ಟ್ರಾವೆಲ್ ಇನ್ ಫ್ಲುಯೆನ್ಸರ್ ಅಂದರೆ ಇನ್‌ಸ್ಟಾಗ್ರಾಂ ಅಥವಾ ಯೂಟ್ಯೂಬ್‌ನಲ್ಲಿ ತಾನಾಗಿ ಪ್ರವಾಸ ಹೋಗಿ, ಸ್ಥಳಗಳನ್ನು ಪರಿಚಯಿಸುತ್ತಿರುವಂತೆ ಕಾಣಿಸುವ ಎಐ ವ್ಯಕ್ತಿತ್ವ. ಇದಲ್ಲದೇ AI ಟ್ರಾವೆಲ್ ಇನ್ ಫ್ಲುಯೆನ್ಸರ್ ಎನ್ನುವುದು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ತಂತ್ರಜ್ಞಾನದಿಂದ ರಚಿಸಲಾದ ಅಥವಾ ಚಲಾಯಿಸಲ್ಪಡುವ ಒಂದು ವರ್ಚುವಲ್ ವ್ಯಕ್ತಿತ್ವ, ಅದು ಜನರಿಗೆ ಪ್ರವಾಸ, ಸ್ಥಳಗಳು, ಸಂಸ್ಕೃತಿ, ಆಹಾರ ಮತ್ತು ಅನುಭವಗಳನ್ನು ಪರಿಚಯಿಸುತ್ತದೆ.
ಈ ವರ್ಚುವಲ್ ಪಾತ್ರಗಳನ್ನು ನಿರ್ದಿಷ್ಟ ವ್ಯಕ್ತಿತ್ವಗಳು, ಹಿನ್ನೆಲೆ ಕಥೆಗಳು ಮತ್ತು ಸಂವಹನ ಶೈಲಿಗಳೊಂದಿಗೆ ನಿರ್ಮಿಸಲಾಗುತ್ತದೆ. ಇದು ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು, ಬಳಕೆದಾರರೊಂದಿಗೆ ಸಂವಹನ ನಡೆಸಲು ಮತ್ತು ಗಮ್ಯಸ್ಥಾನಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡಲು ಮನುಷ್ಯರಂತೆಯೇ ಅನುವು ಮಾಡಿಕೊಡುತ್ತದೆ.

ಜರ್ಮನೀಲಿ ಒಬ್ಬ ಎಮ್ಮ ಇದ್ಳು!
ರಾಧಿಕಾ ಸುಬ್ರಹ್ಮಣ್ಯಂ ಭಾರತದ ಮೊಟ್ಟ ಮೊದಲ AI ಜನರೇಟೆಡ್ ಟ್ರಾವೆಲ್ ಇನ್ ಫ್ಲುಯೆನ್ಸರ್ ಆಗಿದ್ದರೂ ಕೂಡ ವಿಶ್ವದಲ್ಲೇ ಇದು ಮೊದಲೇನಲ್ಲ. 2023 ರಲ್ಲಿ ಜರ್ಮನ್ ರಾಷ್ಟ್ರೀಯ ಪ್ರವಾಸಿ ಮಂಡಳಿ(German National Tourist Board) ಎಮ್ಮಾ ಎಂಬ ಒಂದು ಕೃತಕ ಬುದ್ಧಿಮತ್ತೆ (AI) ಆಧಾರಿತ ವರ್ಚುವಲ್ ಟ್ರಾವೆಲ್ ಇನ್ ಫ್ಲುಯೆನ್ಸರ್ ಸೃಷ್ಟಿಸಿದೆ. ಎಮ್ಮಾ ಇಂಗ್ಲಿಷ್, ಜರ್ಮನ್, ಸ್ಪ್ಯಾನಿಷ್, ಚೈನೀಸ್ ಸೇರಿದಂತೆ 20 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಜರ್ಮನಿಯ ಪ್ರವಾಸೋದ್ಯಮವನ್ನು ಜಾಹೀರಾತು ರೂಪದಲ್ಲಿ ಪ್ರಸ್ತುತ ಪಡಿಸುವುದು ಈಕೆಯ ಮುಖ್ಯ ಉದ್ದೇಶ. ಎಮ್ಮಾಳ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ (emmatravelsgermany) ಜರ್ಮನಿಯ ಸುಂದರ ತಾಣಗಳನ್ನು ಪರಿಚಯಿಸಿರುವ ಸಾಕಷ್ಟು ವಿಡಿಯೋಗಳನ್ನು ಕಾಣಬಹುದು.