ಪ್ರಕೃತಿಯೇ ಪ್ರವಾಸಕ್ಕೆ ಹೊರಟಾಗ!
ಪ್ರವಾಸದ ಕಲ್ಪನೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಒಂದು ಕಾಲದಲ್ಲಿ ಕೇವಲ ತೀರ್ಥಯಾತ್ರೆಗೆ ಸೀಮಿತವಾಗಿದ್ದದ್ದು ಇಂದು ಇಡೀ ವಿಶ್ವವನ್ನು ಮುಷ್ಟಿಯಲ್ಲಿ ಹಿಡಿದಿಟ್ಟಿದೆ. ಅದರಲ್ಲೂ ಮಹಿಳೆ ಒಬ್ಬಳೇ ಪ್ರವಾಸ ಮಾಡುವುದು ತೀರಾ ಸಾಮಾನ್ಯವಾಗಿದೆ.
- ಸುಮಾ ಸತೀಶ್
"ಉಚಿತ ಬಸ್ಸಿಗಾಗಿ ಹೆಣ್ಣುಮಕ್ಕಳ ನೂಕುನುಗ್ಗಲು. ಮಾರಾಮಾರಿ ಜಗಳ. ಬಸ್ಸಿನ ಡೋರನ್ನೇ ಕಿತ್ತಿಟ್ಟ ಹೆಂಗಸರು" ಅಂತ ಸಮಾಚಾರ ಬಿತ್ತರವಾಗುತ್ತಿದ್ದರೆ ಕೊಂಕು ನುಡಿಯುವ ನಾಲಗೆಗಳು ಮನಬಂದಂತೆ ಮಾತಾಡುತ್ತಿದ್ದವು.
ಕಂಡವರ ಹೊಲದಲ್ಲಿ ಕೂಲಿನಾಲಿ ಮಾಡುತ್ತಾ, ಹೊಟ್ಟೆ ತುಂಬಾ ಕೂಳು ಸಿಕ್ಕರೆ ಸ್ವರ್ಗ ಎನ್ನುತ್ತಿದ್ದ ಗಂಗಮ್ಮನಿಗೆ ಗೋರ್ಮೆಂಟೋರು ಫ್ರೀ ಬಸ್ಸು ಬಿಟ್ಟ ಸುದ್ದಿ ಸಿಕ್ಕಿದ್ದೇ, ಮಗಂಗೆ ಹುಷಾರಿಲ್ಲ ಅಂತ ಧರ್ಮಸ್ಥಳದ ಮಂಜುನಾಥನಿಗೆ ವರುಷಗಳ ಹಿಂದೆ ಹೊತ್ತ ಹರಕೆ ಥಟ್ಟನೆ ನೆನಪಾಯಿತು. ಕನಸಲ್ಲೂ ಕನವರಿಸುತ್ತಿದ್ದಳು ಮಂಜುನಾಥನ ದರ್ಶನಕ್ಕೆ. ಕೂಡಿಟ್ಟ ಪುಡಿಗಾಸು ಟಿಕೆಟ್ ಕೊಂಡು ಹೋಗುವಷ್ಟು ಇರಲಿಲ್ಲ. ಅಡಿಕೆಲೆ ಸಂಚಿಯಲ್ಲಿ ಪುಡಿಗಾಸನ್ನೂ ಸಿಕ್ಕಿಸಿಕೊಂಡು ಹೊರಟೇ ಬಿಟ್ಟಳು. ಇಂಥ ಸಾವಿರಾರು ಮಹಿಳೆಯರು ತಮಗೆ ಇಷ್ಟ ಬಂದ ದೇವರನ್ನು ಕಾಣಲು ಗುಂಪುಗುಂಪಾಗಿ ಹೊರಟು ನಿಂತರು. ತಮ್ಮ ಜೊತೆಯೇ ಮಣ್ಣಾಗಬೇಕಿದ್ದ ಕನಸನ್ನು ಸಾಕಾರಗೊಳಿಸಲು ಸಿಕ್ಕ ಅವಕಾಶ ಬಿಡಲಿಲ್ಲ.
ಸರ್ಕಾರ ಇತ್ತೀಚೆಗೆ ಮಹಿಳೆಯರಿಗೆ ಉಚಿತ ಬಸ್ ಕಲ್ಪಿಸಿದ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಹುಚ್ಚು ಹಿಡಿದಂತೆ ನೂಕುನುಗ್ಗಲಿನಲ್ಲಿ ಬಸ್ಸು ಹಿಡಿದು ನೇತಾಡುತ್ತಾ ಧಾರ್ಮಿಕ ಸ್ಥಳಗಳಿಗೆ ಗುಂಪುಗುಂಪಾಗಿ ಹೋದ ಸನ್ನಿವೇಶಗಳು ಮರೆಯಲಾಗದ್ದು. ಅದರಲ್ಲೂ ಗ್ರಾಮೀಣ ಪ್ರದೇಶದ ಕೂಲಿ ಮಾಡುವ ಹೆಣ್ಣುಮಕ್ಕಳು, ನಗರದ ಕೊಳೆಗೇರಿಯ ಶ್ರಮಿಕ ವರ್ಗದ ಹೆಣ್ಣುಮಕ್ಕಳು ಪ್ರವಾಸ ಮಾಡಿದ್ದು ನಮಗೆ ಒಂದು ಪಾಠವಾಯಿತು. ಅದುವರೆಗೆ ಅದುಮಿಟ್ಟ ಎಲ್ಲ ಒತ್ತಡಗಳನ್ನೂ ಹೊರಚೆಲ್ಲಿ ಮುಕ್ತರಾದರು. ಗಂಡನ ಹಿಂದೆ ಒಂದಿಷ್ಟು ನೆಂಟರ ಮನೆಗೋ, ಮದುವೆ ಮುಂಜಿಗೋ ಹೋಗಿ ಗೊತ್ತಿತ್ತು. ಈ ಅವಕಾಶ ಅವರೊಳಗೆ ತುಡಿಯುತ್ತಿದ್ದ ಆಯ್ಕೆಯ ಸ್ವಾತಂತ್ರ್ಯ ಹೆಡೆಯೆತ್ತಲು ನೆರವಾಯಿತು. ಸದಾ ಮನೆಯನ್ನೇ ಹೊತ್ತು ತಿರುಗುತ್ತಿದ್ದ ಅವರ ಪಾಲಿಗೆ ಅವರದ್ದೇ ಆದ ಸಮಯವನ್ನು ಕಲ್ಪಿಸಿತು. ಇಂಥ ಬಹುದೊಡ್ಡ ಪರಿವರ್ತನೆಗೆ ಬಹುಕಾಲದಿಂದ ಅವರೊಳಗೆ ಹುದುಗಿದ್ದ ಆಸೆಯೂ ನೀರೆರೆಯಿತು.

2024 ರ ಜೂನ್ ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನ ಕೈಗೊಂಡಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಕೇವಲ ಇಪ್ಪತ್ತಾರು ಗಂಟೆಗಳ ಪ್ರಯಾಣದಲ್ಲಿ ಗಮ್ಯ ಸೇರಿದರು. ಅಲ್ಲಿ ಕೆಲವೇ ದಿನಗಳ ವಾಸ್ತವ್ಯ ಅವರಿಗಿದ್ದ ಉದ್ದೇಶ. ಅನಿವಾರ್ಯವಾಗಿ ಹಲವಾರು ತಿಂಗಳುಗಳ ಕಾಲ ಅಲ್ಲಿಯೇ ಕಳೆಯುವಂತಾಗಿ ಇತ್ತೀಚೆಗಷ್ಟೇ ಭೂಮಿಗೆ ಹಿಂತಿರುಗಿದರು. ಸುದೀರ್ಘ ಕಾಲ ನಭದ ನೀಲನಕ್ಷೆಯೇ ಅವರ ನೆಲೆಯಾಗಿತ್ತು.
ಇವೆರಡೂ ಸನ್ನಿವೇಶಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತು ವಿವಿಧ ವರ್ಗಗಳಲ್ಲಿ ಹೆಣ್ಣಿನ ಪ್ರವಾಸಕ್ಕೆ ಇರುವ ಭೂಮಿ ಆಕಾಶದ ಅಂತರದ ಕತೆಯನ್ನೂ ಅರುಹುತ್ತವೆ.
ಪ್ರವಾಸದ ಕಲ್ಪನೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಒಂದು ಕಾಲದಲ್ಲಿ ಕೇವಲ ತೀರ್ಥಯಾತ್ರೆಗೆ ಸೀಮಿತವಾಗಿದ್ದದ್ದು ಇಂದು ಇಡೀ ವಿಶ್ವವನ್ನು ಮುಷ್ಟಿಯಲ್ಲಿ ಹಿಡಿದಿಟ್ಟಿದೆ. ಅದರಲ್ಲೂ ಮಹಿಳೆ ಒಬ್ಬಳೇ ಪ್ರವಾಸ ಮಾಡುವುದು ತೀರಾ ಸಾಮಾನ್ಯವಾಗಿದೆ.
ಪ್ರವಾಸದಲ್ಲಿ ಸ್ತ್ರೀ ಪುರುಷ ದೃಷ್ಟಿಕೋನಗಳಲ್ಲಿ ವ್ಯತ್ಯಾಸವಿದೆಯೇ ಎಂಬ ಪ್ರಶ್ನೆ ಹಾಕಿಕೊಂಡು ಹುಡುಕಿದರೆ ಇದೆ ಎಂದು ಹೇಳುವ ಸಾಕಷ್ಟು ಸಮೀಕ್ಷೆಗಳು ಸಿಗುತ್ತವೆ. ಪ್ರವಾಸ ಪುರುಷನ ಪಾಲಿಗೆ ವಿಹಾರ, ಮಜ. ಆದರೆ ಹೆಣ್ಣಿನ ಪಾಲಿಗೆ ಸಾಂಸ್ಕೃತಿಕ ಅರಿವು ಮೂಡಿಸುವ ಬಾಗಿಲು. ಪುರುಷ ಸಾಹಸಕ್ಕೆ ಹೆಚ್ಚು ಒತ್ತು ನೀಡಿದರೆ, ಮಹಿಳೆ ಸಂಸ್ಕೃತಿಗೆ ಸಂಬಂಧಿಸಿದ ದೇಗುಲ, ಶಿಲ್ಪಕಲೆ, ಸ್ಥಳೀಯ ಆಹಾರ ಪದ್ಧತಿಯ ಕುರಿತು ಕುತೂಹಲಿಯಾಗಿರುವಳೆಂದು ಸಮೀಕ್ಷೆಯೊಂದು ಹೇಳುತ್ತದೆ. ಪುರುಷ ಹೋದೆಡೆಯಲ್ಲಿನ ರಾಜಮಹಾರಾಜರ ಸಾಹಸಗಾಥೆ, ಇತಿಹಾಸದಲ್ಲಿ ಆಸಕ್ತನಾದರೆ, ಮಹಿಳೆ ಅಲ್ಲಿನ ಕಲೆ, ಸಂಗೀತ, ರಾಣಿವಾಸಗಳೆಡೆ, ಅವರ ಬದುಕಿನೆಡೆ ಆಸಕ್ತಳೆಂದು ಮತ್ತೊಂದು ಸಮೀಕ್ಷೆ ಹೇಳುತ್ತದೆ. ಪುರುಷ ಅಲ್ಲಿನ ರಾಜಕೀಯ, ಆರ್ಥಿಕ ಸ್ಥಿತಿಗಳತ್ತ ಗಮನ ಹರಿಸಿದರೆ ಹೆಣ್ಣು ಅಲ್ಲಿನ ಮಹಿಳೆಯರ ಬದುಕು, ವಿವಾಹ ಪದ್ಧತಿ, ಕೌಟುಂಬಿಕ ಜೀವನದತ್ತ ಗಮನ ಹರಿಸುತ್ತಾಳಂತೆ. ಇದು ನನ್ನ ಅನುಭವಕ್ಕೂ ಬಂದ ಸಂಗತಿ.
ವಿಯೆಟ್ನಾಂ ಪ್ರವಾಸದಲ್ಲಿ ಇಪ್ಪತ್ತೆಂಟರ ತರುಣನೊಬ್ಬ ನಮ್ಮ ಗೈಡ್ ಆಗಿದ್ದ. ಪಟಪಟ ಮಾತಿನಮಲ್ಲ. ನನ್ನ ಸಂಗಾತಿ ಅವನೊಡನೆ ಅಲ್ಲಿಯ ಉದ್ಯೋಗ, ರಾಜಕೀಯ ಇತ್ಯಾದಿಗಳ ಚರ್ಚೆ ನಡೆಸಿದರೆ, ನನ್ನೊಳಗಿನ ಹೆಣ್ಣು ತಿಳಿಯಬಯಸಿದ್ದು, ಅಲ್ಲಿನ ಹೆಣ್ಣುಮಕ್ಕಳ ವಿದ್ಯೆ, ಉದ್ಯೋಗ, ವಿವಾಹ ವ್ಯವಸ್ಥೆ, ವರದಕ್ಷಿಣೆ ಇತ್ಯಾದಿಗಳನ್ನು. ಅವನು ಈಗಾಗಲೇ ಪ್ರೇಮಿಸುತ್ತಿದ್ದ ಹುಡುಗಿ ಬೇಕರಿ ನಡೆಸುತ್ತಿದ್ದಾಳೆ. ಭಾನುವಾರ ತಾನು ಕಡ್ಡಾಯ ರಜೆ ತೆಗೆದುಕೊಳ್ಳುವೆ. ಅವಳಿಗೆ ಪಾತ್ರೆ ತೊಳೆದುಕೊಟ್ಟು ಸಹಾಯ ಮಾಡುವೆ. ಅವಳನ್ನು ಇಂಪ್ರೆಸ್ ಮಾಡಲು ಸದಾ ಯತ್ನಿಸುವೆ ಎಂದದ್ದು ಕುತೂಹಲ ಕೆರಳಿಸಿತು. ಆ ದೇಶದಲ್ಲಿ ವರದಕ್ಷಿಣೆ ಪದ್ಧತಿ ಕುರಿತು ವಿಚಾರಿಸಿದೆ. ಮದುವೆ ಎರಡೂ ಕುಟುಂಬಕ್ಕೆ ಸೇರಿದ್ದು. ಹಾಗಾಗಿ ಖರ್ಚು ಇಬ್ಬರದೂ ಸಹ. ಅಲ್ಲದೆ ವಧುದಕ್ಷಿಣೆ ನೀಡಬೇಕು. ನಾನು ಹಣ ಹೊಂದಿಸುತ್ತಿದ್ದೇನೆ ಎಂದದ್ದು ಹಾಲು ಕುಡಿದಂತಾಯಿತು. ಹೋದೆಡೆಯಲ್ಲೆಲ್ಲಾ ನಮ್ಮ ಕಣ್ಣು ಅಲ್ಲಿನ ಪುರುಷ ಪಾರಮ್ಯ, ವಿವಾಹ ಹೆಣ್ಣಿನ ಸ್ವಾತಂತ್ರ್ಯ ಕಸಿಯುವುದೇ ಎಂಬ ಹೋಲಿಕೆಯಲ್ಲಿ ವ್ಯಸ್ತವಾಗಿರುತ್ತದೆ.
ಎಲ್ಲಿಂದ ಎಲ್ಲಿಗೆ ನಮ್ಮ ಪಯಣ. ಸ್ವಲ್ಪ ಹಿಂತಿರುಗಿ ನೋಡಿದರೆ, ಈ ಮುಕ್ಕಾಲು ಶತಮಾನದಲ್ಲಿ ಸಾರಿಗೆ ಸಂಪರ್ಕ ಸಾಧನಗಳು ಸೃಷ್ಟಿಸಿದ ಕ್ರಾಂತಿ, ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಾಂತ್ರಿಕತೆ, ಆಧುನಿಕತೆಗಳು, ಅವಳ ಎದೆಗೆ ಬಿದ್ದ ಅಕ್ಷರವನ್ನು ಅರಿವಿನ ಬಿತ್ತವಾಗಿಸಿವೆ. ಸಣ್ಣ ಬೆಳಕಿಂಡಿ ಕತ್ತಲೆಯನ್ನು ವೇಗವಾಗಿ ಸೀಳುತ್ತಾ ನೇಸರನ ಅರುಣರಾಗವನ್ನು ಪಲ್ಲವಿಸಿದೆ. ಆರ್ಥಿಕ ಸ್ವಾವಲಂಬನೆ ಆತ್ಮಾಭಿಮಾನಕ್ಕೆ ಆಧಾರವಾಗಿದೆ.
ಪ್ರವಾಸದ ಕುರಿತು ಒಂದು ಪುಟ್ಟ ಸಮೀಕ್ಷೆಯನ್ನು ಮಾಡುವ ಯೋಚನೆ ಬಂದಾಗ ಪ್ರವಾಸಪ್ರಿಯರಾದ ಭಿನ್ನ ತಲೆಮಾರಿನ ಹಲವರನ್ನು ಸಂಪರ್ಕಿಸಿದೆ. ಪ್ರತಿಯೊಬ್ಬರ ನಿಲುವೂ, ಚಿಂತನೆಯೂ ಭಿನ್ನವಾಗಿದ್ದರೂ ಪ್ರವಾಸ ಅವರಲ್ಲಿನ ಸಮಾನ ಆಸಕ್ತಿಯಾಗಿತ್ತು.
ಏಕಾಂಗಿ ಪ್ರವಾಸಗಳೆಂದರೆ ಬಲುಪ್ರೀತಿಯಿರುವ ಇಂದಿನ ತಲೆಮಾರಿನ ಅಂಕಿತಾ, ಪ್ರತಿವರ್ಷ ಡಿಸೆಂಬರ್ ನಲ್ಲಿ ಮೂರು ನಾಲ್ಕು ವಾರ ಪ್ರವಾಸ ಹೋಗುತ್ತಾರೆ. ಇಲ್ಲಿಂದ ಏಕಾಂಗಿಯಾಗಿ ಹೊರಟರೂ ಹಳೆಯ ಪ್ರವಾಸದಲ್ಲೆಲ್ಲೋ ಒಮ್ಮೆ ಜೊತೆಯಾಗಿ, ಸಮಾನ ಆಸಕ್ತಿಗಳಿಂದ ಹತ್ತಿರಾದ ಬೇರೆ ಬೇರೆ ದೇಶಗಳ ಗೆಳೆಯರ ಬಳಗ ಕಟ್ಟಿಕೊಂಡಿದ್ದು, ಎಲ್ಲಾ ಒಟ್ಟುಗೂಡಿ ಮತ್ತೊಂದು ದೇಶಕ್ಕೆ ಭೇಟಿ ನೀಡುತ್ತಾರೆ. ಹೋದ ಕಡೆಯಲ್ಲಿ ಅಲ್ಲಿನ ಜನ ಏನು ತಿನ್ನುತ್ತಾರೆ, ಕುಡಿಯುತ್ತಾರೆ, ಎಲ್ಲಿ ಹೋಗುತ್ತಾರೆ ಎಂಬುದನ್ನು ತಿಳಿಯಲು ಸ್ಥಳೀಯರೊಂದಿಗೆ ಸ್ನೇಹ ಬೆಳೆಸುತ್ತಾರೆ. ಅವರದೇ ಉಡುಗೆ ತೊಡುಗೆ, ಆಹಾರ ಹಾಗೂ ಅಲ್ಪ ಸ್ವಲ್ಪ ಭಾಷಾಬಳಕೆಯಿಂದ ಅವರಿಗೆ ಹತ್ತಿರಾಗಬಹುದು ಎನ್ನುತ್ತಾರೆ. ಅವರನ್ನು ವಿಚಾರಿಸಿ, ಸ್ಥಳೀಯ ವಿಶೇಷದ ತಿನಿಸುಗಳನ್ನು ಸವಿಯಲು ಯಾವುದೋ ಗಲ್ಲಿಯನ್ನೂ ಹುಡುಕಿ ಹೊರಡುವ ಸಾಹಸ ಇಷ್ಟ ಎನ್ನುತ್ತಾರೆ. ಏಕಾಂಗಿಯಾಗಿ ಹೋಗಲು ಕಾರಣ ನನ್ನೊಂದಿಗೆ ನಾನು ಮಾತನಾಡಲು, ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
ವಿಭಿನ್ನ ಸಂಸ್ಕೃತಿ, ಆಹಾರ ಪಾನೀಯಗಳು, ಪ್ರಕೃತಿ ಸೌಂದರ್ಯ ಎಲ್ಲವನ್ನೂ ಸಾವಧಾನವಾಗಿ ತಿಳಿಯುವ ಕುತೂಹಲ ಇಲ್ಲಿ ಕೆಲಸ ಮಾಡುತ್ತದೆ. ಇಂಥ ಪ್ರವಾಸಗಳಲ್ಲಿ ಯಾವುದೇ ಸಮಯದ ಮಿತಿ ಇರುವುದಿಲ್ಲ. ಪೂರ್ವನಿಗದಿತವಾಗಿರುವುದಿಲ್ಲ. ಇಷ್ಟ ಆದರೆ ಅದೇ ಜಾಗದಲ್ಲಿ ಇನ್ನೆರಡು ದಿನವಿರಲೂ ಸೈ. ಇಲ್ಲವೆಂದರೆ ಅಲ್ಲಿಂದ ಮುಂದಿನ ಜಾಗಕ್ಕೆ ನಿಂತ ಕ್ಷಣದಲ್ಲೇ ಹೊರಡಲೂ ಸೈ. ಒಂಟಿಯಾಗಿ ಪ್ರವಾಸ ಹೋಗುವುದರ ಲಾಭ ಹೊಸ ಜನರೊಡನೆ ಬೆರೆಯುವುದು. ಅವರೊಂದಿಗೆ ಮಾತುಕತೆ. ಅಲ್ಲಿನ ಆಹಾರ ವೈವಿಧ್ಯ ಕೇಳಿ ತಿಳಿಯುವುದು. ಅಲ್ಲಿಯ ಹಾಲಿನಿಂದ ಆಲ್ಕೋಹಾಲಿನವರೆಗೆ ಎಲ್ಲದರ ಪರಿಚಯವೂ ಕುತೂಹಲದ ವಸ್ತುಗಳೇ. When in Rome do as the Romans do ಎಂಬಂತೆ ಅಲ್ಲಿ ನಡೆದುಕೊಳ್ಳುವುದರಿಂದ ಅವರ ಸಂಸ್ಕೃತಿ ಪೂರ್ಣ ಅರಿವಾಗುತ್ತದೆ. ಪ್ರೀತಿ ಹಾಗೂ ನಂಬಿಕೆಗಳು ಇಲ್ಲಿ ಮುಖ್ಯವಾಗುತ್ತವೆ. ಇಲ್ಲಿ ಭಾಷೆ ಮಾಡದ ಕೆಲಸವನ್ನು ಭಾವ ಮಾಡುತ್ತದೆ. ಇಂಥ ಸಾಹಸಗಳು ಇಂದು ಮಹಿಳಾ ಪ್ರವಾಸಿಗರ ಆದ್ಯತೆಗಳಾಗಿವೆ.

ಕಾಲು ಶತಮಾನದ ಹಿಂದೆಯೇ ಅಧ್ಯಯನ, ವೈಜ್ಞಾನಿಕ ಉದ್ದೇಶ ಹಾಗೂ ಸಂಶೋಧನೆಯ ನೆಲೆಯಲ್ಲಿ ನೇಮಿಚಂದ್ರ ಅವರು ಸಾಕಷ್ಟು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಯಾವುದೇ ಆಯೋಜಿತ ಪ್ರವಾಸ ಇರದಿದ್ದ ಕಾಲದಲ್ಲಿ ಸ್ಥಳೀಯ ಸಾರಿಗೆಯನ್ನು ಬಳಸಿ, ಓಡಾಡಿ, ಸಾಧಕಿಯರನ್ನು, ವಿಜ್ಞಾನಿಗಳನ್ನು ಭೇಟಿ ಮಾಡಿದ ಹಿರಿಮೆ ಅವರದು. ಮುಸಲ್ಮಾನರೇ ಹೆಚ್ಚಿರುವ ಜಾವಾ ದ್ವೀಪದ ಪ್ರವಾಸದ ಅನುಭವ ಬಿಚ್ಚಿಡುತ್ತಾ, ಅಲ್ಲಿನ ಸ್ಥಳೀಯ ಸಾರಿಗೆ ಬಳಸಿ ಓಡಾಡುವಾಗ, ಮಧ್ಯರಾತ್ರಿಯೂ ಯಾವುದೇ ಅಂಜಿಕೆಯಿಲ್ಲದೆ ಹೆಣ್ಣುಮಕ್ಕಳು ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ದೇಶದಲ್ಲಿ ಇದು ಸಾಧ್ಯವೇ ಇಲ್ಲ. ಹೀಗೆ ಪ್ರವಾಸಗಳು ಹೊಸಜಗತ್ತಿನ ತಿಳಿವಳಿಕೆ ನೀಡುತ್ತವೆ. ನಮ್ಮ ಅರಿವಿನ ಪರಿಧಿ ವಿಸ್ತರಿಸುತ್ತಾ ಹೋಗುತ್ತವೆ. ಜೀವಜಗತ್ತಿನ ವೈವಿಧ್ಯದ ಜೊತೆಗೆ ಮನುಷ್ಯ ಜಗತ್ತಿನ ವೈವಿಧ್ಯವನ್ನೂ ಕಾಣಿಸುತ್ತವೆ ಎನ್ನುತ್ತಾರೆ.
ನಾಲ್ಕೈದನೆಯ ತರಗತಿಯಲ್ಲಿದ್ದಾಗ ಹಳ್ಳಿಯಲ್ಲಿ ಶಾಲೆಯಿಂದ ಹೊರ ಸಂಚಾರ ಅಂತ ಮಕ್ಕಳನ್ನು ಸಮೀಪದ ತೊರೆಗೆ ಕರೆದೊಯ್ಯುತ್ತಿದ್ದರು. ಇಡೀ ದಿನದ ಇಂಥ ಸಂಚಾರಗಳು ಮಕ್ಕಳ ಮನಸ್ಸನ್ನು ವಿಕಸಿತಗೊಳಿಸುತ್ತಿದ್ದವು. ಇಂದಿನ ಪ್ರವಾಸಗಳೂ ಹೊರ ಸಂಚಾರಗಳಾಗಿ ನಮ್ಮೊಳಗಿನ ಜಗತ್ತನ್ನು ವಿಸ್ತರಿಸುತ್ತಾ ಹೋಗುತ್ತವೆ.
ಮಹಿಳೆ ಸ್ವಾವಲಂಬಿ. ಪ್ರವಾಸ ಹೊರಟರೆ ಅಲ್ಲಿ ಅವಶ್ಯವಿರುವ ಪ್ಲಾನ್ ಎ, ಬಿ ಎಲ್ಲಕ್ಕೂ ಅವಳು ತಯಾರಿರುತ್ತಾಳೆ. ಏಕೆಂದರೆ ಅವಳ ಜೊತೆ ಸದಾ ಮನೆಯೂ ಇರುತ್ತದೆ. ಹಾಗಾಗಿ ಅವಳ ತಯಾರಿಯಲ್ಲಿ ಪುರುಷನಿಗಿಂತ ಸ್ವಲ್ಪ ವ್ಯತ್ಯಾಸ ಇರುತ್ತದೆ. ಮುಂಜಾಗ್ರತೆಯಿರುತ್ತದೆ. ಆದರೆ ಇತ್ತೀಚೆಗೆ ಪ್ರವಾಸದ ಅನುಭವ ಪಡೆಯುವಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸಮಾನ ಅವಕಾಶ ಇರುವುದರಿಂದ ಅವರ ಬರವಣಿಗೆಯ ಅಭಿವ್ಯಕ್ತಿಯಲ್ಲಿ ಅಂಥ ವ್ಯತ್ಯಾಸಗಳೇನೂ ಕಾಣುವುದಿಲ್ಲ ಎನ್ನುತ್ತಾರೆ ಲೇಖಕಿ, ಪ್ರವಾಸಪ್ರಿಯರಾದ ಸಂಧ್ಯಾರಾಣಿ.
ಪ್ರವಾಸದ ಪರಿಕಲ್ಪನೆಯೇ ಬದುಕಿನ ಏಕತಾನತೆಯನ್ನು ಒಡೆದು, ಹುರುಪು ತುಂಬುವುದು. ಕುತೂಹಲ ಪ್ರವಾಸದ ಜೀವಚೈತನ್ಯ. ನಗರ ಪ್ರದೇಶಗಳಲ್ಲಿ ಆರಂಭವಾದ ಕಿಟ್ಟಿ ಪಾರ್ಟಿಗಳು ಹೆಣ್ಣಿಗೆ ಕೌಟುಂಬಿಕ ಜವಾಬ್ದಾರಿಯಿಂದ ಕೆಲವು ಗಂಟೆ ಮುಕ್ತಿ ನೀಡಿ ಗೆಳತಿಯರ ಜಗತ್ತಿನಲ್ಲಿ ವಿಹರಿಸುವ ಮೊದಲ ಅವಕಾಶ ನೀಡಿತೆಂದು ನನ್ನ ನಂಬಿಕೆ. ಇದೇ ಪ್ರವಾಸಗಳಿಗೆ ಬಿತ್ತವಾಯಿತು.
ಕೆಳವರ್ಗದ ಹಾಗೂ ಗ್ರಾಮೀಣ ನೆಲೆಯ ಹೆಣ್ಣುಮಕ್ಕಳನ್ನು ಒಟ್ಟುಗೂಡಿಸಿದ್ದು ಸ್ತ್ರೀಶಕ್ತಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳು. ಅಲ್ಲಿ ಸಣ್ಣ ಇಡಿಗಂಟನ್ನು ಕೂಡಿಟ್ಟು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವಷ್ಟು ಸಬಲರಾಗುತ್ತಾ ಹೋದರು. ನಾಲ್ಕಾರು ದಿನಗಳ ಮಟ್ಟಿಗಾದರೂ ಗಂಡ ಮನೆ ಮಕ್ಕಳನ್ನು ಮರೆತು ಮೆರೆಯುವಂತಾಯಿತು. ಹತ್ತು ವರ್ಷಗಳ ಹಿಂದೆ ಮುರುಡೇಶ್ವರಕ್ಕೆ ಹೋದಾಗ ಅಲ್ಲಿನ ಬೀಚ್ ನಲ್ಲಿ ಹಳ್ಳಿ ಹೆಣ್ಣುಮಕ್ಕಳ ಗುಂಪೊಂದು ಜಗತ್ತನ್ನೇ ಮರೆತು ನೀರನ್ನು ಎರಚಾಡುವುದರಲ್ಲಿ ಮಗ್ನವಾಗಿತ್ತು. ಉಟ್ಟ ಕಾಟನ್ ಸೀರೆಯನ್ನು ಮೊಣಕಾಲಿನ ಮೇಲಕ್ಕೆ ಕಟ್ಟಿ ಮಧ್ಯ ವಯಸ್ಸಿನ ಅವರು ಮಕ್ಕಳಂತೆ ಆಡುತ್ತಿದ್ದುದು ಗಮನ ಸೆಳೆಯಿತು. ಹತ್ತಿರ ಹೋಗಿ ವಿಚಾರಿಸಿದೆ. ಕೋಲಾರದ ಬಳಿಯ ಸಣ್ಣ ಊರಿನಿಂದ ಬಂದಿದ್ದರು. ಸಂಘದ ಹೆಣ್ಣುಮಕ್ಕಳು ಒಟ್ಟಾಗಿ ಒಂದು ವಾರದ ಪ್ರವಾಸಕ್ಕೆ ಹೊರಟಿದ್ದರು. ಅದು ಅವರ ಮೂರನೆಯ ಪ್ರವಾಸವಾಗಿತ್ತು. ದೇಗುಲ ದರ್ಶನದಿಂದ ಬೀಚ್ ದರ್ಶನಕ್ಕೆ ಮಾನಸಿಕವಾಗಿ ಬಡ್ತಿ ಪಡೆದಿದ್ದರು.
ಎಲ್ಲಿ ಹೋದರೂ ನಮಗೆ ಮಹಿಳಾ ದೃಷ್ಟಿಕೋನ ಇರುತ್ತದೆ. ಅಲ್ಲಿನ ಹೋರಾಟಗಾರ್ತಿಯರು, ಕೌಟುಂಬಿಕ ವ್ಯವಸ್ಥೆ, ಆಸ್ತಿ ಹಕ್ಕು ಇತ್ಯಾದಿಗಳ ಅಧ್ಯಯನ ಸಹಜವಾಗಿ ನನ್ನ ಆಯ್ಕೆ
ಆಗಿರುತ್ತದೆ ಎನ್ನುತ್ತಾರೆ ಪ್ರವಾಸದ ಕುರಿತಾಗಿಯೇ ಡಾಕ್ಟರೇಟ್ ಪದವಿ ಪಡೆದ ಲತಾಗುತ್ತಿಯವರು.

ಇತ್ತೀಚೆಗಷ್ಟೇ ಲೇಹ್ ಲಡಾಖ್ ಗೆ ಪ್ರವಾಸ ಹೋಗಿದ್ದಾಗ ಭಾರತ ಪಾಕಿಸ್ಥಾನದ ಕೊನೆಯ ಹಳ್ಳಿ ತಂಗ್ ಎಂಬಲ್ಲಿಗೆ ಹೋಗಿದ್ದೆವು. ಅಲ್ಲಿ ಎಲ್ಲಿ ನೋಡಿದರೂ ಬರೀ ಹೆಣ್ಣುಮಕ್ಕಳು. ಬೈನಾಕ್ಯುಲರ್ ನಲ್ಲಿ ಗಡಿರೇಖೆಯನ್ನು ತೋರಿಸುವವರಿರಬಹುದು, ಅಲ್ಲಿನ ವಿಶೇಷ ಅಕ್ರೋಟ್ ಅಥವಾ ಸಕ್ಕರೆ ಬಾದಾಮಿ ಹಣ್ಣು ಮಾರುವವರಿರಬಹುದು. ಕುತೂಹಲದಿಂದ ವಿಚಾರಿಸಿದಾಗ ತಿಳಿದದ್ದು, ಅಲ್ಲಿನ ಹೆಂಗಸರು ಅಪ್ಪಟ ಶ್ರಮಜೀವಿಗಳು. ಗಂಡಸರು ಬಹಳ ಸೋಮಾರಿಗಳಂತೆ. ಇಡೀ ಸಂಸಾರವನ್ನು ತೂಗಿಸುವುದು ಇವರೇ. ಅವಳ ಕ್ರತುಶಕ್ತಿಗೆ ಹೆಮ್ಮೆಯೆನಿಸಿದರೂ, ಎಲ್ಲಕ್ಕೂ ನೆತ್ತಿ ಕೊಡಬೇಕಾದ ದುಸ್ಥಿತಿಗೆ ಬೇಸರವಾಯಿತು. ಹೀಗೆ ಪ್ರವಾಸವೊಂದು ಹೆಣ್ಣಿನ ನೋಟದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಏಕಾಂಗಿ ಪ್ರವಾಸದಲ್ಲಿ ನಮ್ಮ ಸಮಯ ನಮ್ಮ ಆಯ್ಕೆ. ಒಂದು ಮ್ಯೂಸಿಯಂ ನೋಡಬೇಕು ಅಂದರೆ ನಮ್ಮದೇ ಸಮಯ ಇರುತ್ತದೆ. ಮೂರು ದಿನವಾದರೂ ನಿಧಾನಕ್ಕೆ ಅಧ್ಯಯನ ಮಾಡಬಹುದು. ಇಲ್ಲವೇ ಮೂರು ಗಂಟೆಯಲ್ಲಿ ಮುಗಿಸಿ ಹೊರಡಬಹುದು. ಮುಖ್ಯವಾಗಿ ಅಲ್ಲಿನ ಸ್ಥಳೀಯ ಸಾರಿಗೆ ಸಂಪರ್ಕ ಬಳಸಿ ಅಲ್ಲಿನ ವಾಸ್ತವತೆ ಅರಿಯುವ ಅವಕಾಶ ಇರುತ್ತದೆ. ಯಾರೂ ಇಲ್ಲದಿದ್ದರೂ ನನಗಿಷ್ಟದ ಜಾಗ ನೋಡಲು ನಾನೊಬ್ಬಳೇ ಹೋಗುತ್ತೇನೆ. ಇಲ್ಲಿ ನಮಗೆ ಆಯ್ಕೆಯ ಸ್ವಾತಂತ್ರ್ಯ ಇರುತ್ತದೆನ್ನುತ್ತಾರೆ ನವಪೀಳಿಗೆಯ ನಿರ್ಮಲಾ.
ಮೇಲಿಂದ ಮೇಲಿನ ಪ್ರವಾಸಗಳು ಇಡೀ ಪ್ರಪಂಚವನ್ನು ಇಂದು ಹಿಡಿಯಾಗಿಸಿದೆ. ಹೆಣ್ಣೊಬ್ಬಳೇ ಸಿನಿಮಾಗೋ ಹೋಟೆಲ್ ಗೋ ಹೋದರೆ ಗಂಡುಬೀರಿಯೆಂದು ಜರಿಯುತ್ತಿದ್ದ ಮನಸ್ಸುಗಳು ಇಂದು ವಿದೇಶಗಳಿಗೂ ಸಲೀಸಾಗಿ ಹಾರುವ ಅವಳ ಒಂಟಿ ಪ್ರವಾಸವನ್ನೂ ಕಂಡು ಕರುಬುತ್ತಿವೆ. ಯಾವುದಕ್ಕೂ ಅಳುಕದೆ, ಬಾಗದೆ ಅವಳು ತನ್ನತನವನ್ನು ಸಾಬೀತು ಮಾಡುತ್ತಿದ್ದಾಳೆ.
ಬೈಕನ್ನೇರಿ ದಿನಗಟ್ಟಲೇ ಸಂಚಾರ ಹೊರಡುವುದೂ ಇತ್ತೀಚಿನ ಟ್ರೆಂಡ್. ಸೈಕ್ಲಿಂಗ್ ಮಾಡುತ್ತಾ ಸಾಗುವುದೂ ಅಂತೆಯೇ. ಇವುಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪಯಣ ಸಾಹಸವೇ ಹೌದು. ಇವು ತೆರೆದಿಡುವ ಅನುಭವ ಲೋಕವೇ ಬೇರೆ. ಇಂಥ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ಎದುರಿಸಬಹುದಾದ ಸವಾಲುಗಳು ಲೆಕ್ಕವಿಲ್ಲದಷ್ಟು ಎಂದು ಇತ್ತೀಚೆಗಷ್ಟೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕ್ಲಿಂಗ್ ಯಾತ್ರೆ ಕೈಗೊಂಡಿದ್ದ ಚೈತ್ರಾ ಹೇಳುತ್ತಾರೆ.
ಒಟ್ಟಾರೆ ಇಂದು ಲಿಂಗಭೇದ ಒಡೆಯುತ್ತಿರುವ ಇಂಥ ಪ್ರವಾಸದ ಪರಿಕಲ್ಪನೆಗಳು ಹೆಣ್ಣಿನ ಕಣ್ಣೋಟವನ್ನು ವಿಸ್ತಾರವಾಗಿಸಿದೆ. ಅವಳ ಪ್ರಪಂಚವನ್ನು ಹಿಗ್ಗಿಸಿದೆ. ಇತ್ತೀಚಿನ ಮಹಿಳಾ ಪ್ರವಾಸ ಕಥನಗಳನ್ನು ನೋಡಿದರೆ ಗಂಭೀರವಾದ ಅಧ್ಯಯನಶೀಲತೆಯ ಅರಿವಾಗುತ್ತದೆ.
ಪ್ರವಾಸ ನಮ್ಮೊಳಗೆ ಸಾಯುತ್ತಿರುವ ವಿಚಾರಗಳನ್ನು ಅಳಿಸಿ, ಹೊಸ ವಿಚಾರ ತುಂಬಿ, ಬದುಕಿಗೆ ಮರುಜೀವ ತುಂಬುತ್ತದೆ. ಬರಹಗಾರರಿಗೆ ಹೊಸ ಜಗತ್ತು ಹೊಸ ಆಲೋಚನೆ ನೀಡುತ್ತದೆ. ಪ್ರವಾಸವೆಂದರೆ ಭಾರ ಹೊತ್ತು ಹೋಗುವುದಲ್ಲ, ಭಾರ ಇಳಿಸಿ ಬರುವುದು ಎನ್ನುತ್ತಾರೆ ಹಿರಿಯ ಕವಯಿತ್ರಿ ಡಾ. ಎಚ್.ಎಲ್. ಪುಷ್ಪ.
ಪ್ರವಾಸ ಮತ್ತು ಪ್ರವಾಸ ಕಥನ ಎರಡರಲ್ಲಿಯೂ ಸ್ತ್ರೀ ಪುರುಷರ ನಡುವಿನ ಅನೇಕ ಅಂತರಗಳನ್ನು ಈ ಮೊದಲು ನೋಡುತ್ತಿದ್ದೆವು. ಈಗ ಏನಿದ್ದರೂ ನನ್ನ ಸಮಯ, ನನ್ನ ಆಯ್ಕೆ. ಬೇಕಾದಲ್ಲಿಗೆ ಬೇಕಾದ ರೀತಿಯಲ್ಲಿ ಹೋಗುತ್ತೇನೆ, ಬೇಕಾದ ಸ್ಥಳಗಳನ್ನು ನೋಡಿ, ಅಲ್ಲಿನ ಜನಾಂಗದ ಆಚಾರ ವಿಚಾರಗಳನ್ನೂ ಅರಿಯುತ್ತೇನೆ, ಅಲ್ಲಿನ ಸಾಹಸಗಾಥೆಗಳೂ ನನಗೆ ಬೇಕು, ಅಲ್ಲಿನ ಚಾರಣಕ್ಕೂ ನಾವ್ ರೆಡಿ ಎಂದು ಹೊರಡುತ್ತಾರೆ ಈಗಿನ ಹುಡುಗಿಯರು. ಒಡವೆ, ವಸ್ತ್ರಗಳಿಗಾಗಿ ಹಣವನ್ನು ಕೂಡಿಡುವುದಕ್ಕಿಂತಲೂ ಹೆಚ್ಚಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಹೋಗಿ ಬರುವ ಯುವತಿಯರ ದಂಡೇ ನಮಗೆ ಸಿಗುತ್ತದೆ. ಒಟ್ಟಿನಲ್ಲಿ ಅವರ ಸಮಯ, ಅವರ ಪ್ರವಾಸ, ಅವರ ಖುಷಿ!