Monday, August 18, 2025
Monday, August 18, 2025

ಮಾನ್ಸೂನ್ ನ ರಸ್ತೆ ಪ್ರವಾಸ ನೀಡುವ ದಿವ್ಯಾನುಭೂತಿ!

ಕಾಲ್ನಡಿಗೆ ಪ್ರವಾಸ ನಿಮ್ಮೊಂದಿಗೆ ನೀವು ಬೆರೆಯುವ, ನಿಮ್ಮನ್ನು ನೀವೇ ಕಂಡುಕೊಳ್ಳುವ ಒಂದು ಅದ್ಭುತ ಅವಕಾಶ. ಇದು ಆತ್ಮಾವಲೋಕನಕ್ಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಒಂದು ಸುವರ್ಣಾವಕಾಶ. ಈ ಪ್ರಯಾಣದ ಸಂಪೂರ್ಣ ಆನಂದವನ್ನು ಅನುಭವಿಸಲು ಕೆಲವು ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ.

  • ಹೊಸ್ಮನೆ ಮುತ್ತು

ಪ್ರವಾಸವೆಂಬುದು ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ, ಬದಲಿಗೆ ಹೊಸ ಅನುಭವಗಳನ್ನು ಅರಸುವ ಒಂದು ಅದ್ಭುತ ಪಯಣ. ಅದರಲ್ಲೂ ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲಿ ಕೈಗೊಳ್ಳುವ ರಸ್ತೆ ಪ್ರವಾಸವು (ರೋಡ್ ಟ್ರಿಪ್) ಅತ್ಯಂತ ವಿಶಿಷ್ಟ ಮತ್ತು ಚಿರಸ್ಮರಣೀಯವಾಗಿರುತ್ತದೆ. ಮಾನ್ಸೂನ್ ಆಗಮನವೆಂದರೆ ಕೇವಲ ಬರಡು ಭೂಮಿಗೆ ಹಸಿರು ತುಂಬುವುದಲ್ಲ. ಅದು ಪ್ರವಾಸ ಪ್ರಿಯರ ಮನಸ್ಸಿನಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸುವ ಸಮಯ. ಬಾಹ್ಯ ಪ್ರಪಂಚದ ಗದ್ದಲದಿಂದ ದೂರ ಸರಿದು, ಪ್ರಕೃತಿಯ ನವಚೈತನ್ಯದೊಂದಿಗೆ ಹೆಜ್ಜೆಹಾಕುವ ಈ ರೀತಿಯ ಪ್ರವಾಸ ಮನಸ್ಸಿಗೆ ಹೊಸ ಹುರುಪು ಮತ್ತು ಶಕ್ತಿಯನ್ನು ನೀಡುತ್ತದೆ. ಪ್ರವಾಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ಪುನಶ್ಚೇತನಗೊಳಿಸುವ ಒಂದು ಪಯಣ. ಇದು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ದಾರಿಯಲ್ಲ, ಬದಲಿಗೆ ಪ್ರಕೃತಿಯ ಅದ್ಭುತ ಶಕ್ತಿ ಮತ್ತು ಸೌಂದರ್ಯವನ್ನು ಅನುಭವಿಸುವ ಒಂದು ಸುಂದರ ಅಧ್ಯಾಯ.

ಮಾನ್ಸೂನ್‌ನಲ್ಲಿ ರಸ್ತೆ ಪ್ರವಾಸ ಆರಂಭಿಸುತ್ತಿದ್ದಂತೆ ಮೊದಲಿಗೆ ನಮ್ಮನ್ನು ಸ್ವಾಗತಿಸುವುದು ಮಳೆಯಲ್ಲಿ ಮಿಂದೆದ್ದ ಪ್ರಕೃತಿಯ ಅಪ್ರತಿಮ ಸೌಂದರ್ಯ. ಮಳೆ ಹನಿ, ಹನಿಯಾಗಿ ಧರೆಗೆ ಬೀಳುತ್ತಲೇ ಪ್ರಕೃತಿ ಹೊಸ ಬಣ್ಣ ತಾಳುತ್ತದೆ. ಸುತ್ತಲಿನ ಹಸಿರು ಪ್ರಕೃತಿ, ಕಾಡು ಬಳ್ಳಿಗಳ ಮೈ-ಮಾಟ, ತಂಪಾದ ಗಾಳಿ, ಬಣ್ಣ, ಬಣ್ಣದ ಮೋಹಕ ಹೂಗಳು, ಅವುಗಳ ವರ್ಣ ವಿನ್ಯಾಸ, ಒನಪು-ವೈಯಾರ, ಪಕ್ಷಿಗಳ ಚಿಲಿಪಿಲಿ ನಾದ, ಮಣ್ಣಿನ ತಾಜಾ ವಾಸನೆ, ಉಕ್ಕಿ ಹರಿಯುವ ನದಿಗಳು, ಜಲಪಾತಗಳ ಮಂಜುಳ ಗಾನ, ಮಂಜಿನಿಂದ ಆವೃತವಾದ ಬೆಟ್ಟಗಳು, ಕಣಿವೆಯ ಅಗಾಧ ನೋಟ ಹೀಗೆ ಪ್ರತಿ ತಿರುವಿನಲ್ಲೂ ಹೊಸದೊಂದು ದೃಶ್ಯಕಾವ್ಯ ತೆರೆದುಕೊಳ್ಳುತ್ತದೆ. ಇದೆಲ್ಲವೂ ಒಂದು ಮಾಂತ್ರಿಕ ಲೋಕವಾಗಿ ರೂಪಾಂತರಗೊಳ್ಳುತ್ತದೆ. ಈ ಸಮಯದಲ್ಲಿ ಹೊರಗೆ ಹೆಜ್ಜೆ ಹಾಕುವುದು ಮನಸ್ಸಿಗೆ ಅಪೂರ್ವ ಶಾಂತಿ ಮತ್ತು ಉಲ್ಲಾಸವನ್ನು ನೀಡುತ್ತದೆ.

road trip 2

ಮಳೆಯ ಸಿಂಚನದಲ್ಲಿ ಹೆಜ್ಜೆ ಹಾಕುವುದು ಪ್ರಕೃತಿಯೊಂದಿಗೆ ನೇರ ಸಂಪರ್ಕ ಸಾಧಿಸಿದಂತೆ. ಅಲ್ಲಲ್ಲಿ ನಿಂತು ಸುತ್ತಲಿನ ಪ್ರಶಾಂತತೆಯನ್ನು ಸವಿಯುವುದು ಒಂದು ಅನನ್ಯ ಅನುಭವ. ಪ್ರತಿ ತಿರುವಿನಲ್ಲಿಯೂ ನವನವೀನ ದೃಶ್ಯವೊಂದು ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ. ಕೆಲವೊಮ್ಮೆ ಮೋಡಗಳು ದಟ್ಟವಾಗಿ ಕವಿದು, ಮುಂದೆ ರಸ್ತೆಯೇ ಕಾಣದಷ್ಟು ಮಂಜು ತುಂಬಿಕೊಂಡಾಗ ಪ್ರಪಂಚದ ಅಂಚಿನಲ್ಲಿರುವಂತೆಯೋ, ಕಣ್ಣಿಗೆ ನಿಲುಕದ, ಕತ್ತಲೆಯ ಜಗತ್ತಿನಲ್ಲಿರುವಂತೆಯೋ ಭಾಸವಾಗುತ್ತದೆ. ಮಳೆಗಾಲದ ಕಾಲ್ನಡಿಗೆ ಪ್ರವಾಸ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ನಿಮ್ಮೆಲ್ಲಾ ಗಮನವೂ ಅಡೆತಡೆಯಿಲ್ಲದೆ ಸುತ್ತಲಿನ ಪ್ರಕೃತಿಯ ಸೌಂದರ್ಯದಲ್ಲಿ ಮುಳುಗಿರುತ್ತದೆ. ಎಲ್ಲ ಲೌಕಿಕ ಚಿಂತೆಗಳನ್ನು ಮರೆತು ಪ್ರಕೃತಿಯ ಮಡಿಲಲ್ಲಿಡುವ ಹೆಜ್ಜೆ ನಮ್ಮನ್ನು ಅಲೌಕಿಕದತ್ತ ಕರೆದೊಯ್ಯುತ್ತದೆ.

ಮಳೆಗಾಲದಲ್ಲಿ ಪ್ರಕೃತಿಯೊಂದಿಗೆ ಬೆರೆತು, ಅದರ ಶಾಂತಿಯನ್ನು ಅನುಭವಿಸುವುದು ಜೀವನದಲ್ಲಿ ಮರೆಯಲಾಗದ ಅನುಭವ. ಪ್ರತಿಯೊಂದು ಮಳೆ ಹನಿಯೂ ಹೊಸ ಅನುಭವ; ತುಂತುರು ಹನಿಗಳು ಮುಖಕ್ಕೆ ಸೋಕಿದಾಗ ಆಗುವ ಅನುಭವ ವರ್ಣನಾತೀತ. ಈ ನೆನೆಯುವಿಕೆಯಲ್ಲಿಯೇ ನಿಜವಾದ ಆನಂದವಿದೆ. ಅಂದರೆ, ಮಳೆಗಾಲದ ನಿಶ್ಯಬ್ದತೆಯಲ್ಲಿ ಹೆಜ್ಜೆ ಹಾಕುವುದು ಮನಸ್ಸನ್ನು ಶುದ್ಧಿಗೊಳಿಸುವ ಅನುಭವ. ಪ್ರಕೃತಿಯ ಸೌಂದರ್ಯವನ್ನು ಸವಿಯಲು, ಮಳೆಗಾಲಕ್ಕಿಂತ ಸೂಕ್ತ ಸಮಯ ಇನ್ನೊಂದಿಲ್ಲ. ದಟ್ಟಕಾಡಿನ ನಡುವಿನ ಅಂಕು-ಡೊಂಕಾದ ಹಾದಿಗಳು ಪ್ರವಾಸಿಗರಿಗೆ ಪ್ರಕೃತಿಯ ಮಧುರ ಅನುಭವ ನೀಡುತ್ತವೆ. ಮನದ ನೆಮ್ಮದಿಯನ್ನು ಅರಸಿ, ದೂರದ ದೇಶಗಳತ್ತ ಮುಖ ಮಾಡುವ ನಾವು ನಮ್ಮ ಸುತ್ತಲಿರುವ ನಿಸರ್ಗದ ಚೆಲುವನ್ನು ಕಾಣಲು ಇದೊಂದು ಸದವಕಾಶ.

ಕಾಲ್ನಡಿಗೆ ಪ್ರವಾಸ ನಿಮ್ಮೊಂದಿಗೆ ನೀವು ಬೆರೆಯುವ, ನಿಮ್ಮನ್ನು ನೀವೇ ಕಂಡುಕೊಳ್ಳುವ ಒಂದು ಅದ್ಭುತ ಅವಕಾಶ. ಇದು ಆತ್ಮಾವಲೋಕನಕ್ಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಒಂದು ಸುವರ್ಣಾವಕಾಶ. ಈ ಪ್ರಯಾಣದ ಸಂಪೂರ್ಣ ಆನಂದವನ್ನು ಅನುಭವಿಸಲು ಕೆಲವು ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಪ್ರಯಾಣವೆಂದರೆ ಹೊಸ ಸ್ಥಳಗಳನ್ನು ನೋಡುವುದಷ್ಟೇ ಅಲ್ಲ; ಹೊಸ ಸಂಸ್ಕೃತಿಗಳನ್ನು ಅನುಭವಿಸುವುದು ಕೂಡಾ. ಇದು ನಿಮಗೆ ಆ ಸ್ಥಳದ ಬಗ್ಗೆ ಆಳವಾದ ಅರಿವನ್ನು ಮೂಡಿಸುತ್ತದೆ ಹಾಗೂ ನಿಮ್ಮ ಪ್ರಯಾಣಕ್ಕೆ ಒಂದು ವಿಶಿಷ್ಟ ಆಯಾಮವನ್ನು ಒದಗಿಸುತ್ತದೆ. ಅನಿರೀಕ್ಷಿತ ಘಟನೆಗಳು, ಅನುಭವಗಳು ಪಯಣದ ಮಜವನ್ನು ದ್ವಿಗುಣಗೊಳಿಸುತ್ತವೆ.

ನಿಮ್ಮ ಪ್ರಯಾಣವನ್ನು ಸ್ಮರಣೀಯವಾಗಿಸಲು, ಯಾವುದೇ ಸ್ಥಳಕ್ಕೆ ಪ್ರವಾಸ ಹೋದಾಗ, ಅಲ್ಲಿನ ಸ್ಥಳೀಯ ಜನರೊಂದಿಗೆ ಬೆರೆಯುವುದು, ಅವರೊಡನೆ ಸೌಜನ್ಯದಿಂದ ವರ್ತಿಸುವುದು ಬಹಳ ಮುಖ್ಯ. ನೆನಪಿಡಿ, ಸ್ಥಳೀಯರೊಂದಿಗಿನ ನಿಮ್ಮ ಸೌಹಾರ್ದಯುತ ಸಂಬಂಧಗಳು ನಿಮ್ಮ ಪ್ರವಾಸದ ಅನುಭವವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ! ಅವರೊಂದಿಗೆ ಬೆರೆತಾಗ, ನೀವು ಹೊಸ ಗೆಳೆತನವನ್ನು ಗಳಿಸುವುದರ ಜೊತೆಗೆ, ಆ ಸ್ಥಳದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ. ಅಲ್ಲದೆ, ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹತ್ತಿರದಿಂದ ನೋಡುವ ಮತ್ತು ಅರ್ಥೈಸಿಕೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ

ಅಗತ್ಯಬಿದ್ದರೆ, ಸ್ಥಳೀಯರ ಸಹಾಯ ಪಡೆಯಲು ಹಿಂಜರಿಯಬೇಡಿ. ಪ್ರತಿಯಾಗಿ, ನೀವು ಅವರಿಗೆ ಸಹಾಯ ಮಾಡಲು ಸಿದ್ಧರಾಗಿ. ಒಂದು ಪುಟ್ಟ ನಗು ಕೂಡ ದೊಡ್ಡ ಸ್ನೇಹಕ್ಕೆ ನಾಂದಿಯಾಗಬಹುದು. ಆದರೆ ಇಲ್ಲಿ ಇರಬೇಕಾದ ಎಚ್ಚರವೆಂದರೆ; ಸ್ಥಳೀಯರ ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ಗೌರವಿಸುವುದು, ಅವರ ನಂಬಿಕೆಗಳಿಗೆ ಅವರ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಕುಂದು ತರುವಂತಹ ವರ್ತನೆಗಳಿಂದ ದೂರವಿರುವುದು.

ಪಯಣದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗುವುದು ಸಹಜ. ದಾರಿ ತಪ್ಪಬಹುದು ಅಥವಾ ಅನಿರೀಕ್ಷಿತ ಸಮಸ್ಯೆಗಳು ಬರಬಹುದು. ಹದಗೆಟ್ಟ ರಸ್ತೆ, ಜಾರುವ ದಾರಿ, ಪ್ರವಾಹ, ಗುಡ್ಡ ಕುಸಿತಗಳು, ಮರಗಳು ಬೀಳುವುದು, ದಟ್ಟ ಮಂಜು ಅಥವಾ ಭಾರೀ ಮಳೆ ದೃಷ್ಟಿಯನ್ನು ಮಿತಿಗೊಳಿಸಬಹುದು. ಮಳೆ ನೀರು ರಸ್ತೆಗೆ ನುಗ್ಗುವುದು ಅಥವಾ ಹಳ್ಳ-ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಪ್ರವಾಹದ ಅಪಾಯಗಳು ಎದುರಾಗಬಹುದು. ಮಳೆಗಾಲದಲ್ಲಿ ಹಾವು, ಚೇಳು, ಉಂಬಳ(leeches)ಗಳಂತಹ ಉಪದ್ರವಿ ಜೀವಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಇಂಥ ಸಂದರ್ಭಗಳಲ್ಲಿ ಅವರಿವರ ಸಹಾಯ ನಿರೀಕ್ಷಿಸುತ್ತಾ ಕೂರದೇ, ನೀವೇ ಸ್ವತಃ ಪರಿಹಾರ ಕಂಡುಕೊಳ್ಳಬೇಕು. ಇದು ನಿಮ್ಮ ಸಮಸ್ಯೆ-ಪರಿಹಾರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. "ನಾನು ಇದನ್ನು ಮಾಡಬಲ್ಲೆ" ಎಂಬ ಭಾವನೆ ನಿಮಗೆ ಇನ್ನಷ್ಟು ಬಲ ನೀಡುತ್ತದೆ.

monsoon road trip

ನಿರಂತರ ನೆನೆಯುವುದು, ತಂಪಾದ ಗಾಳಿಯಲ್ಲಿ ನಡೆಯುವುದು ಆರೋಗ್ಯ ಸಮಸ್ಯೆಗಳನ್ನು ತರಬಹುದು. ಕೆಲವೊಮ್ಮೆ ನಗರದಿಂದ ದೂರವಿರುವ ಹಳ್ಳಿ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಸುರಕ್ಷಿತ ಆಶ್ರಯ, ಆಹಾರ, ವೈದ್ಯಕೀಯ ನೆರವು ಸಿಗುವುದು ಕಷ್ಟವಾಗಬಹುದು. ಈ ಸವಾಲುಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಆದರೆ, ಇಂಥ ಸವಾಲುಗಳು, ಅಡೆತಡೆಗಳೂ ಕೂಡಾ ಪ್ರಯಾಣವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತವೆ. ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುವುದೂ ಒಂದು ಸಾಹಸಮಯ ಅನುಭವ. ಕೊಂಚ ‘ರಿಸ್ಕ್’ ಅನ್ನಿಸಿದರೂ, ಇದು ಪ್ರಕೃತಿಯೊಡನೆ ನಮ್ಮ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಮಳೆಗಾಲದಲ್ಲಿ ಪ್ರಕೃತಿಯ ವಿಭಿನ್ನ ಸ್ಪರೂಪದ ಅನನ್ಯ ಅನುಭವ ಪಡೆಯಲು ಇಂಥ ಸಾಹಸಗಳು ಅಗತ್ಯ. ಸಹಜವಾಗಿಯೇ ಇಂದಿನ ಯುವಪಡೆ ಸಾಹಸಮಯ ಮನೋಭಾವ ಮತ್ತು ಅಪಾರ ಉತ್ಸಾಹದೊಂದಿಗೆ ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಉತ್ಸುಕವಾಗಿದೆ.

ಮಳೆಗಾಲದಲ್ಲಿ ರಸ್ತೆ ಪ್ರವಾಸ ಕೈಗೊಳ್ಳುವುದು ಖುಷಿಯ ವಿಚಾರವೇ ಆದರೂ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅದಕ್ಕಾಗಿ ಕೆಲವು ಸಿದ್ಧತೆಗಳೂ ಅಗತ್ಯ. ಹೊರಡುವ ಮುನ್ನ ಹವಾಮಾನ ಮುನ್ಸೂಚನೆಯನ್ನು ತಿಳಿದುಕೊಳ್ಳುವುದು ಮತ್ತು ಸುರಕ್ಷಿತ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯ. ಅಗತ್ಯ ಔಷಧಗಳು, ರೇನ್‌ಕೋಟ್, ಛತ್ರಿ ಮತ್ತು ಜಲನಿರೋಧಕ ಬ್ಯಾಗ್‌ಗಳನ್ನು ಜತೆಗೆ ಕೊಂಡೊಯ್ಯುವುದು ಅನಿವಾರ್ಯ. ಕಾಲ್ನಡಿಗೆಯಲ್ಲಿ ಸಾಗುವಾಗ ಸಾಕಷ್ಟು ಶುದ್ಧ ಕುಡಿಯುವ ನೀರು ಮತ್ತು ಸುಲಭವಾಗಿ ಕೆಡದ ಆಹಾರವನ್ನು ಕೊಂಡೊಯ್ಯುವುದು ಬಹಳ ಮುಖ್ಯ. ಮೊಬೈಲ್ ನೆಟ್‌ವರ್ಕ್ ಲಭ್ಯವಿಲ್ಲದಿರುವ ಸಾಧ್ಯತೆ ಇರುವುದರಿಂದ, ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಜಾಣತನ.

ಒಟ್ಟಾರೆ, ಮಾನ್ಸೂನ್ ರಸ್ತೆ ಪ್ರವಾಸವು ದೇಹ ಮತ್ತು ಮನಸ್ಸಿಗೆ ಪುನಶ್ಚೇತನ ನೀಡುವ ಒಂದು ಸುಂದರ ಅನುಭವ. ಪ್ರತಿದಿನದ ಜಂಜಾಟದಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯಲು ಇದೊಂದು ಅತ್ಯುತ್ತಮ ಅವಕಾಶ. ಮಳೆಗಾಲದ ರಸ್ತೆಗಳು ಹೊಸ ಸಾಹಸಗಳಿಗೆ ಆಹ್ವಾನ ನೀಡುತ್ತವೆ, ಮತ್ತು ಪ್ರತಿ ಮೈಲಿಗಲ್ಲೂ ಒಂದು ಹೊಸ ನೆನಪನ್ನು ಸೃಷ್ಟಿಸುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!