Monday, August 18, 2025
Monday, August 18, 2025

ರಾವಣ ರಾಜ್ಯದಲ್ಲೊಂದು ಸುತ್ತು!

ಸೀತಾ ಎಲಿಯಾ ಎನ್ನುವ ಒಂದು ಚಿಕ್ಕ ಹಳ್ಳಿಯಲ್ಲಿ ಸೀತಾ ದೇವಿಯ ದೇವಸ್ಥಾನವೂ ಇದೆ. ಇಡೀ ಪ್ರಪಂಚದಲ್ಲಿ ಇದೊಂದೇ ಸೀತಾ ದೇವಿಯ ದೇವಸ್ಥಾನ ಎನ್ನುವ ವಿಶೇಷತೆಯಿಂದಾಗಿ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

  • ವಿಂಗ್ ಕಮಾಂಡರ್ ಸುದರ್ಶನ

ಒಬ್ಬ ಪ್ರವಾಸಿಗನ ದೃಷ್ಟಿಕೋನದಿಂದ ಶ್ರೀಲಂಕಾದ ಬಗ್ಗೆ ಬರೆಯುವುದರಲ್ಲಿ ಸ್ವಲ್ಪ ತೊಡಕಾಗುತ್ತಿದೆ. ಇಲ್ಲಿ ಭಾರತೀಯ ಶಾಂತಿಪಡೆಯ ಅಂಗವಾಗಿ ನಡೆಸಿದ ಕಾರ್ಯಾಚರಣೆಗಳ, ವಾಯುಸೇನೆಯ ವೈಮಾನಿಕನಾಗಿ ಮರೆಯಲಾಗದ ಅನುಭವಗಳ ನೆನಪುಗಳ ಸರಮಾಲೆಯೇ ಮರುಕಳಿಸುತ್ತದೆ. ಮೊದಲು ಇದರ ಹಿನ್ನೆಲೆಯನ್ನು ಸ್ವಲ್ಪ ಹೇಳಿ ನನ್ನ ಮನಸ್ಸಿನ ದ್ವಂದ್ವವನ್ನು ನಿಮಗೆ ಹೇಳಿ, ನನ್ನ ಆಲೋಚನೆಗಳು ತಿಳಿಯಾದ ನಂತರ ಪ್ರವಾಸಿಗನಾಗಿ ಶ್ರೀಲಂಕಾದ ಸೊಬಗನ್ನು ವರ್ಣಿಸಲು ಸಾಧ್ಯವಾಗಬಹುದು.

ಎಂಬತ್ತರ ದಶಕಗಳಲ್ಲಿ ಆಂತರಿಕ ಕಲಹಗಳಿಂದ ಜರ್ಝರಿತವಾಗಿ ಹೋಗಿತ್ತು ಶ್ರೀಲಂಕಾ. ತಮಿಳು ಉಗ್ರರ ಮತ್ತು ಶ್ರೀಲಂಕಾದ ಸೇನಾಪಡೆಯ ನಡುವಿನ ಹೋರಾಟದ ನಡುವೆ ಸಿಲುಕಿಕೊಂಡ ನಾಗರೀಕರ ಸಾವು ನೋವಿನ ಆಕ್ರಂದನ ತಾರಕಕ್ಕೇರಿಬಿಟ್ಟಿತ್ತು. ಅಲ್ಲಿನ ಸಮಸ್ಯೆಯ ಸಂಕೀರ್ಣತೆ, ಆಳ ಅಗಲ ಸಂಪೂರ್ಣವಾಗಿ ಅರಿಯದೆ, ಅಲ್ಲಿಯ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಇಲ್ಲದೆ, ಶ್ರೀಲಂಕಾಕ್ಕೆ ಭಾರತದ ಸಶಸ್ತ್ರ ಸೈನ್ಯವನ್ನು ಕಳುಹಿಸಿದ ಅಪಕ್ವ ರಾಜಕೀಯ ನಿರ್ಧಾರ, ಆ ನಿರ್ಧಾರವನ್ನು ಪ್ರಶ್ನಿಸದೆ ಒಪ್ಪಿಕೊಂಡ ಸೈನ್ಯದ ನಾಯಕತ್ವ, ಇದರ ಪರಿಣಾಮವಾಗಿ ನಡೆದ ನಮ್ಮ ಸೈನಿಕರ ಬಲಿದಾನಗಳು, ಪದೇಪದೆ ಮನಸ್ಸಿನಲ್ಲಿ ಏಳುತ್ತಿದ್ದ ಪ್ರಶ್ನೆ 'ಇದು ಯಾರ ಯುದ್ಧ?'. ಉತ್ತರ ದೊರೆಯದ ಅಸಹಾಯಕ ಸ್ಥಿತಿ.

srilanka

ವಾಯುಯಾನದ ಸಮಯದಲ್ಲಿ ಕೆಳಗೆ ನೋಡಿದಾಗ ನಮಗರಿವಿಲ್ಲದಂತೆ ಹೊರಡುತ್ತಿದ್ದ ಉದ್ಗಾರ...ಓಹ್ ಎಂಥ ಸುಂದರ ನಾಡು, ಹಸಿರು ಬನಗಳ ಬೀಡು! ಎಂಥ ವಿರೋಧಾಭಾಸ ನೋಡಿ. ಮೇಲಿಂದ ಕಾಣುತ್ತಿತ್ತು ಪ್ರಕೃತಿಯ ಸೊಬಗು. ಕೆಳಗೆ ನಡೆಯುತ್ತಿತ್ತು ಕ್ರೌರ್ಯದ ಅಟ್ಟಹಾಸ. ಅಂತೂ ಕೆಲವು ವರ್ಷಗಳ ಕಹಿ ಅನುಭವದ ನಂತರ ಅಲ್ಲಿಂದ ಬಿಡುಗಡೆಯ ನಿಟ್ಟುಸಿರು. ಆದರೆ ಒಳಗಿದ್ದ ಪ್ರವಾಸಿಗನ ಹಪಾಹಪಿ ಶ್ರೀಲಂಕಾದ ಸೌಂದರ್ಯವನ್ನು ಇನ್ನೊಂದು ಸಲ ನೋಡಿಕೊಂಡು ಬರೋಣ ಎನ್ನುತ್ತಿತ್ತು.

ಹೀಗೆ ಹಲವಾರು ವರುಷಗಳ ನಂತರ ಕೈಗೊಂಡ ಪ್ರವಾಸದಲ್ಲಿ ಆದ ಹೊಸ ಅನುಭವ ಏನೆಂದರೆ ಅಲ್ಲಿಯ ಜನಗಳ ಸ್ನೇಹ, ಸೌಹಾರ್ದತೆ ಮತ್ತು ಅತಿಥಿ ಸತ್ಕಾರ. ಎಲ್ಲಿ ಹೋದರೂ "ಆಯಿಭುವನ್" ಎಂದು ನಗು ಮುಖದ ಸ್ವಾಗತ. ಅದೇ ಒಂದು ರಾಷ್ಟ್ರೀಯ ಸಂಕೇತ. ಪ್ರವಾಸದ ಸಮಯದಲ್ಲಿ ಹೊಟೇಲುಗಳಿಂದ ದೂರವಿದ್ದು ಹೋಮ್ ಸ್ಟೇಗಳಲ್ಲಿ ಉಳಿಯುವುದು ಉತ್ತಮ ನಿರ್ಧಾರವೆನಿಸುತ್ತದೆ. ಆದರೆ ಮುಂಗಡ ಬುಕಿಂಗ್ ಅನಿವಾರ್ಯ.

ಬೆಂಗಳೂರಿನಿಂದ 'ಮಿಹಿನ್ ಲಂಕಾ'ದ ವಿಮಾನದಲ್ಲಿ ಒಂದೂವರೆ ಗಂಟೆಯ ಪ್ರಯಾಣ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸುತ್ತದೆ. ಭಾರತೀಯ ಪ್ರಜೆಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯವಿದೆ. ಅಂದ್ರೆ ಶ್ರೀಲಂಕಾ ತಲುಪಿದ ಮೇಲೆ ಅಲ್ಲಿನ ವೀಸಾ ಪಡೆಯಬಹುದು. ವೀಸಾ ಸಿಗುವುದು ಕಷ್ಟವೇನಿಲ್ಲ. ಕೊಲಂಬೊದಿಂದ ಹೋಗಬೇಕಾದ ಸ್ಥಳ ಕ್ಯಾಂಡಿ. ಕ್ಯಾಂಡೀ ಶ್ರೀಲಂಕಾದ ಪ್ರಮುಖ ಪ್ರವಾಸಿ ನಗರ. ಕಾರಿನಲ್ಲೇ ಪ್ರಯಾಣಿಸಬಹುದು. ಅಲ್ಲಿ ನಮ್ಮ ಕಡೆಯ ಶಾವಿಗೆಗೆ ಹೋಲುವ 'ಸ್ಟ್ರಿಂಗ್ ಹಾಪರ್ಸ್' ಮತ್ತು ನೀರ್ ದೋಸೆಗೆ ಹೋಲುವ 'ಹಾಪರ್ಸ್' ಎಂಬ ಎರಡು ತಿಂಡಿಗಳು ಬಹಳ ಸ್ಪೆಷಲ್. ಹೊಟೇಲಿನಲ್ಲಿ ಈ ಎರಡು ಖಾದ್ಯಗಳನ್ನು ಮೀನಿನ ಸಾರು ಮತ್ತು ಕೋಳಿ ಸಾರು ಜೊತೆಗೆ ಸವಿಯುತ್ತಾರೆ.

kandy city

ಕ್ಯಾಂಡೀ ನಗರವನ್ನು ಶ್ರೀಲಂಕಾದ ಸಾಂಸ್ಕೃತಿಕ ನಗರಿ ಎಂದು ಕರೆಯುತ್ತಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಕಂಗೊಳಿಸುವ ಬುದ್ಧನ ಪ್ರತಿಮೆಗಳು, ಅಲ್ಲಲ್ಲಿ ಕಾಣಿಸುವ ದೇವಾಲಯಗಳು ದಟ್ಟವಾಗಿ ಆವರಿಸಿಕೊಂಡಿರುವ ಊದಿನ ಕಡ್ಡಿಗಳ ಸುವಾಸನೆ, ತಾವರೆ ಹೂಗಳ ರಾಶಿ, ಭಕ್ತಾದಿಗಳ ಪ್ರಾರ್ಥನೆ ಇವೆಲ್ಲದರ ಸಮ್ಮಿಲನದಿಂದ ನೋಡುಗರಲ್ಲಿ ಭಕ್ತಿಯ ಭಾವ ಸಹಜವಾಗಿಯೇ ಉದ್ಭವಿಸುತ್ತದೆ. ಇಲ್ಲಿ ಅತ್ಯಂತ ಪ್ರಸಿದ್ಧವಾದ "ಶ್ರೀದಳದ ಮಲಿಗಾವ" ಬೌದ್ಧ ಮಂದಿರ ಅರೆಮನೆಯ ಆವರಣದಲ್ಲಿದೆ. ಗೌತಮ ಬುದ್ಧನ ಪರಿನಿರ್ವಾಣದ ನಂತರ ಅವರ ಒಂದು ಹಲ್ಲನ್ನು ಕಳಿಂಗ ದೇಶದಿಂದ ಶ್ರೀಲಂಕಾಕ್ಕೆ ಕೊಂಡೊಯ್ಯಲಾಯಿತಂತೆ. ಈ ಹಲ್ಲನ್ನು ಬಂಗಾರದ ಸ್ತೂಪದಲ್ಲಿ ಇಟ್ಟು ಈಗಲೂ ನಿಯಮಿತವಾಗಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಶ್ರೀಲಂಕಾದಲ್ಲಿ ಪ್ರತಿಯೊಬ್ಬರೂ 'ಹೋಮ್ ಸ್ಟೇ' ಆತಿಥ್ಯ ಸವಿಯಲೇಬೇಕು. ನಿಮ್ಮದೇ ಮನೆ ಎಂಬಂಥ ಆತ್ಮೀಯತೆ ಇಲ್ಲಿನ ಹೋಮ್ ಸ್ಟೇ ಗಳು ನೀಡುತ್ತವೆ. ಊಟೋಪಚಾರ ಮತ್ತು ಆದರಾತಿಥ್ಯಗಳಂತೂ ಅದ್ಭುತ.

ಅಲ್ಲಿಂದ ಮುಂದೆ ನೋಡಲೇಬೇಕಿರೋ ಜಾಗ ಅಂದರೆ ಅದು ’ನುವರ ಎಲಿಯ’. ಸಮುದ್ರ ಮಟ್ಟದಿಂದ ಸುಮಾರು 6300 ಅಡಿಗಳಷ್ಟು ಎತ್ತರದಲ್ಲಿರುವ "ನುವರ ಎಲಿಯ" ಎನ್ನುವ ಶಿಖರ ಶ್ರೇಣಿಯಲ್ಲಿರುವ ತಂಗುದಾಣಕ್ಕೆ ಮಾಡುವ ಜರ್ನಿ ಪ್ರವಾಸಿಗರಿಗೆ ಸ್ಮರಣೀಯ ಅನಿಸುವುದು ಖಚಿತ. ಎಲ್ಲೆಲ್ಲಿ ನೋಡಿದರೂ ಹಸಿರು ಚಾದರ ಹೊದ್ದುಕೊಂಡು ಬಿಮ್ಮನೆ ಬೀಗುತ್ತಿರುವ ಚಹಾ ತೋಟಗಳು ಕಾಣುತ್ತವೆ. ಇಲ್ಲಿ ಬೆಳೆದು ಸಂಸ್ಕರಿಸುವ ಚಹಾ ಪ್ರಪಂಚದ ಶ್ರೇಷ್ಠ ಚಹಾಗಳಲ್ಲಿ ಒಂದು. ಈ ಹಚ್ಚ ಹಸಿರಿನ ಬೆಟ್ಟಗಳ ನಡುವೆ ಹಾಲಿನ ಹೊಳೆಯಂತೆ ಹರಿಯುವ ಹಲವಾರು ನಿರ್ಮಲ ಜಲಪಾತಗಳು, ನಿರಂತರವಾಗಿ ಚಲಿಸುವ ಮೋಡಗಳು ಇಲ್ಲಿಯ ಪ್ರಕೃತಿಯ ಮೆರುಗಿಗೆ ಇಂಬು ಕೊಡುತ್ತವೆ. ಪ್ರಕೃತಿದತ್ತ ಶಬ್ದಗಳನ್ನು ಬಿಟ್ಟರೆ ಎಲ್ಲ ಕಡೆ ಪ್ರಶಾಂತ ವಾತಾವರಣ. ಇಲ್ಲಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸುವುದೇ ಒಂದು ವಿಸ್ಮಯಕಾರಿ ಅನುಭವ.

ನುವರ ಏಲಿಯಾದಿಂದ ಸುಮಾರು 5 ಕಿ. ಮೀ. ದೂರದಲ್ಲಿ ಸೀತಾ ಎಲಿಯಾ ಎನ್ನುವ ಒಂದು ಚಿಕ್ಕ ಹಳ್ಳಿಯಲ್ಲಿ ಸೀತಾ ದೇವಿಯ ದೇವಸ್ಥಾನವೂ ಇದೆ. ಇಡೀ ಪ್ರಪಂಚದಲ್ಲಿ ಇದೊಂದೇ ಸೀತಾ ದೇವಿಯ ದೇವಸ್ಥಾನ ಎನ್ನುವ ವಿಶೇಷತೆಯಿಂದಾಗಿ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಸುತ್ತಲೂ ಇರುವ ಸುಮಾರು 5 ಚದರ ಕಿಲೋಮೀಟರ್ ಗಳ 'ಹಕ್ಕಲಗ' ಉದ್ಯಾನವನವಿದೆ. ಇದು ರಾಮಾಯಣದಲ್ಲಿ ಕಂಡುಬರುವ 'ಅಶೋಕ ವನವಂತೆ'!

seetha temple (1)

ನುವರ ಏಲಿಯಾದ ಹತ್ತಿರದ ರೈಲು ನಿಲ್ದಾಣದಿಂದ ಕೊಲಂಬೊ ನಗರಕ್ಕೆ ಒಂದು ವಿಶೇಷವಾದ ರೈಲು ಸಂಚಾರದ ವ್ಯವಸ್ಥೆ ಇದೆ. ವಿದೇಶಿ ಪ್ರವಾಸಿಗರಿಗೆಂದೇ ವಿನ್ಯಾಸಗೊಳಿಸಿರುವ ಈ ರೈಲಿನ ಕೊನೆಯ ಬೋಗಿಯನ್ನು 'ವೀಕ್ಷಣಾ ಬೋಗಿ' ಎಂದು ಕರೆಯುತ್ತಾರೆ. ಇಡೀ ಬೋಗಿಯು ಒಂದು ಗಾಜಿನ ಟ್ಯೂಬಿನಂತೆ ಕಾಣುತ್ತದೆ. ಮಂದಗತಿಯಲ್ಲಿ ಚಲಿಸುವ ಈ ರೈಲು ಚಹಾ ತೋಟಗಳನ್ನು ಸುತ್ತುವರೆಯುತ್ತಾ, ಜಲಪಾತಗಳನ್ನು ಸವರಿಕೊಳ್ಳುತ್ತಾ, ಮೋಡಗಳೊಂದಿಗೆ ಮಾತಾಡುತ್ತಾ, ಆಗಾಗ ಸುರಂಗಗಳನ್ನು ಸೀಳಿಕೊಳ್ಳುತ್ತಾ ಸಾಗುತ್ತಿರುವ ಈ ರೈಲಿನಲ್ಲಿ ಕೂತುಕೊಂಡು ಇಲ್ಲವೇ ಮಲಗಿಕೊಂಡು ಪ್ರತಿ ನಿಮಿಷಕ್ಕೂ ಬದಲಾಗುತ್ತಿರುವ ಆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ರೋಮಾಂಚಕಾರಿ ಅನುಭವ.

ಶ್ರೀಲಂಕಾ ಪ್ರವಾಸಿಗರು ಈ ಕೆಳಗಿನ ಸಂಗತಿಗಳನ್ನು ಗಮನಿಸಬೇಕು. ಶ್ರೀಲಂಕಾ ಜನಗಳ ಸ್ನೇಹ ಸೌಹಾರ್ದತೆಗಳ ಪರಿಚಯವಾಗಬೇಕು ಎಂದರೆ ಹೋಮ್ ಸ್ಟೇ ಅತ್ಯುತ್ತಮ ಆಯ್ಕೆ. ಇದರಲ್ಲೂ ಕೂಡ ಕಾಸಿಗೆ ತಕ್ಕ ಕಜ್ಜಾಯ ಎನ್ನುವ ಹಾಗೆ ಎಲ್ಲ ವರ್ಗಗಳ ಆಯ್ಕೆಯೂ ಇದೆ. ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಮತ್ತು ವಿಶ್ರಮಿಸಲು ಸಮಯ ಇಟ್ಟು ಕೊಂಡು ಹೋಗಿ. ಮೇಲೆ ಹೇಳಿದ ರೈಲು ಪ್ರಯಾಣವಂತೂ ಕಡ್ಡಾಯವಾಗಿ ನಿಮ್ಮ ಪ್ರೋಗ್ರಾಮಿನಲ್ಲಿ ಇರಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!