ಉಂಡೂ ಬನ್ನಿ ತಗೊಂಡೂ ಬನ್ನಿ... ಇದು ಕಳ್ಳತನ ಅಲ್ಲ!!
ಪ್ರವಾಸ, ಪ್ರಯಾಣದ ವೇಳೆ ನೀವು ಹೊಟೇಲ್ ನಲ್ಲಿ ಉಳಿದುಕೊಂಡಿದ್ದೀರಾ ? ನಿಮ್ಮ ರೂಮಿನಲ್ಲಿ ಕಂಡುಬರುವ ಕೆಲವು ವಸ್ತುಗಳನ್ನು ನೀವು ನಿಮ್ಮೊಂದಿಗೆ ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಅವುಗಳಿಗೆ ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅದು ಕಳ್ಳತನ ಅನಿಸಿಕೊಳ್ಳುವುದಿಲ್ಲ. ಯಾವುದೇ ಗಿಲ್ಟ್ ಬೇಡ.
- ಜಗನ್ಮೋಹಿನಿ
ಎಲ್ಲಾದರೂ ಪ್ರವಾಸ ಹೋದಾಗ ಅಥವಾ ಕಾರ್ಯಕ್ರಮ, ಮೀಟಿಂಗ್ ಮುಂತಾದ ಉದ್ದೇಶಕ್ಕೆ ಬೇರೆ ನಗರಗಳಿಗೆ ಪ್ರಯಾಣ ಮಾಡಿದಂಥ ಸಂದರ್ಭದಲ್ಲಿ ಹೊಟೇಲ್ ಉಳಿದುಕೊಳ್ಳಬೇಕಾಗುತ್ತದೆ. ಹೊಟೇಲ್ ನಲ್ಲಿ ತಂಗಿದಾಗ, ನಿಮಗೆ ಹಲವು ರೀತಿಯ ಸೌಲಭ್ಯಗಳು ಸಿಗುತ್ತವೆ. ಈ ಸೌಲಭ್ಯಗಳು ನಿಮ್ಮ ಕೊಠಡಿ ಶುಲ್ಕ ಮತ್ತು ಹೊಟೇಲನ್ನು ಅವಲಂಬಿಸಿರುತ್ತದೆ. ಆದರೆ ಸಾಮಾನ್ಯವಾಗಿ ನೀವು ಪ್ರತಿ ಹೊಟೇಲ್ ನಲ್ಲಿ ಕೆಲವು ಮೂಲಭೂತ ವಸ್ತುಗಳನ್ನು ಪಡೆಯುತ್ತೀರಿ. ಇದನ್ನು ನೀವೂ ಮನೆಗೆ ಕೂಡ ತೆಗೆದುಕೊಂಡು ಹೋಗಬಹುದು. ಇದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಆ ವಸ್ತುಗಳನ್ನು ಹೊಟೇಲ್ ರೂಮಿನಿಂದ ನೀವು ತೆಗೆದುಕೊಂಡು ಹೋದರೆ ಕಳ್ಳತನ ಮಾಡಿದಂತೆ ಎಂಬುದು ಸಾಕಷ್ಟು ಜನರ ಅಭಿಪ್ರಾಯ.
ಆದರೆ ಹೊಟೇಲ್ ನ ನಿಮ್ಮ ರೂಮಿನಲ್ಲಿ ಕಂಡುಬರುವ ಕೆಲವು ವಸ್ತುಗಳನ್ನು ನೀವು ನಿಮ್ಮೊಂದಿಗೆ ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಅವುಗಳಿಗೆ ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅದು ಕಳ್ಳತನ ಅನಿಸಿಕೊಳ್ಳುವುದಿಲ್ಲ. ಯಾವುದೇ ಗಿಲ್ಟ್ ಬೇಡ.
ಹೋಟೆಲ್ ಕೋಣೆಯಿಂದ ನೀವು ನಿಮ್ಮೊಂದಿಗೆ ಯಾವ ವಸ್ತುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶಾಂಪೂ, ಸೋಪ್, ಲೋಷನ್, ಇತ್ಯಾದಿ:
ಹೊಟೇಲ್ ರೂಮ್ ಗಳಲ್ಲಿ ಸಾಮಾನ್ಯವಾಗಿ ಶಾಂಪೂ, ಕಂಡಿಷನರ್, ಬಾಡಿ ಲೋಷನ್, ಟೂತ್ ಬ್ರಷ್, ಹ್ಯಾಂಡ್ ಸೋಪ್ ಮತ್ತು ಇತರ ಶೌಚಾಲಯ ಸಾಮಗ್ರಿಗಳು ಸಣ್ಣ ಬಾಟಲಿಗಳಲ್ಲಿ ಇರುತ್ತವೆ. ನಿಮ್ಮ ವಾಸ್ತವ್ಯವನ್ನು ಆರಾಮದಾಯಕವಾಗಿಸಲು ಇವುಗಳನ್ನು ನಿಮಗೆ ನೀಡಲಾಗುತ್ತದೆ. ಈ ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿದ್ದು, ಅವುಗಳನ್ನು ಬಳಸಿದ ನಂತರ ಅಥವಾ ನೀವು ಬಳಸಿಲ್ಲವೆಂದಾದರೆ ಅದನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಹುದು. ಇದಕ್ಕೆ ನೀವು ಯಾವುದೇ ರೀತಿಯ ಹಣ ಪಾವತಿಸಬೇಕೆಂದಿಲ್ಲ.

ಸ್ಟೇಷನರಿ ಸಾಮಗ್ರಿಗಳು (ನೋಟ್‌ಪ್ಯಾಡ್, ಪೆನ್ನು, ಪೆನ್ಸಿಲ್‌ಗಳು):
ಹೊಟೇಲ್ ಗಳು ಸಾಮಾನ್ಯವಾಗಿ ಅತಿಥಿಗಳಿಗಾಗಿ ತಮ್ಮ ಬ್ರಾಂಡ್ ನೋಟ್ ಪ್ಯಾಡ್ ಗಳು, ಪೆನ್ನುಗಳು ಅಥವಾ ಪೆನ್ಸಿಲ್ ಗಳನ್ನು ಇಟ್ಟಿರುತ್ತವೆ. ನೀವು ಇವುಗಳನ್ನು ಹಿಂಜರಿಕೆಯಿಲ್ಲದೆ ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಈ ಸ್ಟೇಷನರಿ ವಸ್ತುಗಳು ಚಿಕ್ಕದಾಗಿದ್ದರೂ, ನಂತರ ನಿಮಗೆ ಉಪಯುಕ್ತವಾಗಬಹುದು.
ಚಹಾ-ಕಾಫಿ ಪ್ಯಾಕೆಟ್ ಗಳು:
ಹೆಚ್ಚಿನ ಹೊಟೇಲ್ ಗಳಲ್ಲಿ ಉಚಿತ ಟೀ-ಕಾಫಿ ಪ್ಯಾಕೆಟ್‌ಗಳು ಮತ್ತು ಸಕ್ಕರೆ, ಕ್ರೀಮರ್ ಮುಂತಾದ ಮಸಾಲೆಗಳು ಮಿನಿ-ಬಾರ್‌ಗಳಲ್ಲಿ ಅಥವಾ ಟ್ರೇಗಳಲ್ಲಿ ಲಭ್ಯವಿರುತ್ತವೆ. ನೀವು ಅವುಗಳನ್ನು ಬಳಸದಿದ್ದರೆ, ಅವುಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಬರಲು ಯಾವುದೇ ತೊಂದರೆ ಇಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ಇವುಗಳನ್ನು ನೀವು ಬಳಸಿಕೊಳ್ಳಬಹುದು.

ಶೂ ಪಾಲಿಶ್ ಕಿಟ್ ಅಥವಾ ಹೊಲಿಗೆ ಕಿಟ್
ಕೆಲವು ಹೊಟೇಲ್ ರೂಮ್ ನಲ್ಲಿ ಶೂ ಪಾಲಿಶಿಂಗ್ ಕಿಟ್‌ಗಳು ಅಥವಾ ಸಣ್ಣ ಹೊಲಿಗೆ ಕಿಟ್ ಗಳನ್ನು ಇಡಲಾಗಿರುತ್ತದೆ. ಇದರಲ್ಲಿ ದಾರ, ಸೂಜಿಗಳು, ಗುಂಡಿ ಮತ್ತು ಇದಕ್ಕೆ ಸಂಬಂಧಿಸಿದ ಅಗತ್ಯ ವಸ್ತುಗಳಿರುತ್ತವೆ. ನೀವು ಈ ಕಿಟ್ ಪಡೆದುಕೊಂಡು ಅದನ್ನು ಬಳಸದಿದ್ದರೆ, ನಂತರ ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಹಾನಿ ಇಲ್ಲ. ಈ ಸಣ್ಣ ವಸ್ತುಗಳು ತುರ್ತು ಪರಿಸ್ಥಿತಿಯಲ್ಲಿ ಉಪಯುಕ್ತವಾಗಬಹುದು.
ಆದರೆ ಯಾವ ವಸ್ತುಗಳನ್ನು ಹೋಟೆಲ್ ರೂಮಿನಿಂದ ತರುವಂತಿಲ್ಲ ಅನ್ನೋದು ನಿಮಗೆ ಸ್ಪಷ್ಟವಾಗಿ ಗೊತ್ತಿರಲೇಬೇಕು. ಇಲ್ಲವಾದಲ್ಲಿ ಕಂಬಿ ಎಣಿಸಬೇಕಾಗುತ್ತದೆ ಅಥವಾ ಮುಜುಗರ ಅನುಭವಿಸಬೇಕಾಗುತ್ತದೆ.
ಹೇರ್ ಡ್ರೈಯರ್, ಹೊಟೇಲ್ ನ ಗೋಡೆಗಳಲ್ಲಿ ನೇತುಹಾಕಿರುವ ಪೇಂಟಿಂಗ್‌ಗಳು, ದಿಂಬಿನ ಕವರ್‌ಗಳು, ಕಿಟಕಿಯ ಕರ್ಟನ್, ದೀಪ, ಲೈಟ್, ಗಡಿಯಾರಗಳು, ಡ್ರೆಸ್ಸಿಂಗ್ ಗೌನ್ ಗಳು ಮುಂತಾದ ಕೆಲವು ವಸ್ತುಗಳನ್ನು ನೀವು ತೆಗೆದುಕೊಂಡು ಬರುವಂತಿಲ್ಲ. ಇವು ಹೊಟೇಲ್ ನ ಆಸ್ತಿ ಮತ್ತು ನೀವು ಅವುಗಳನ್ನು ಅಲ್ಲಿ ಮಾತ್ರ ಬಳಸಬಹುದು. ಇದಲ್ಲದೆ, ಅನೇಕ ಹೊಟೇಲ್ ಗಳು ರೂಮ್ ನಲ್ಲಿ ಸಣ್ಣ ಕ್ಯಾಬಿನೆಟ್‌ನಲ್ಲಿ ಚಾಕೊಲೇಟ್‌ಗಳು ಮತ್ತು ತಿಂಡಿಗಳನ್ನು ಇಡುತ್ತವೆ. ನೀವು ಅವುಗಳನ್ನು ತಿಂದರೆ, ನೀವು ಅದಕ್ಕೆ ಹಣ ಪಾವತಿಸಬೇಕಾಗುತ್ತದೆ.