ನಿದ್ದೆಗಾಗಿ ಪ್ರವಾಸ!
ಇದಕ್ಕಾಗಿಯೇ ಇತ್ತೀಚಿಗೆ ಐಷಾರಾಮಿ ಹೋಟೆಲ್, ರೆಸಾರ್ಟ್ ಅಥವಾ ವಿಶ್ರಾಂತಿ ಕೇಂದ್ರಗಳನ್ನು ಕಾಣಬಹುದು. ಅಲ್ಲಿ ನೀವು ಶಾಂತಿಯುತವಾಗಿ ಮಲಗಬಹುದು. ಇದಲ್ಲದೆ, ನಿಮಗೆ ಧ್ವನಿ ನಿರೋಧಕ ಕೊಠಡಿಗಳು, ಆರಾಮದಾಯಕ ಹಾಸಿಗೆಗಳು, ವಿಶೇಷ ದಿಂಬುಗಳು, ಗಿಡಮೂಲಿಕೆ ಚಹಾಗಳು, ಯೋಗ, ಧ್ಯಾನ ಮತ್ತು ನಿದ್ರೆಯನ್ನು ಸುಧಾರಿಸುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಪ್ರವಾಸ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಕಾಡುಮೇಡು, ಬೆಟ್ಟ ಗುಡ್ಡಗಳ ಅಲೆದಾಟ, ಜೊತೆಗೆ ಹೊಸ ಹೊಸ ತಾಣಗಳ ಸುಂದರ ಅನುಭವ. ಆದರೆ ಎಂದಾದರೂ ಸ್ಲೀಪ್ ಟೂರಿಸಂ ಬಗ್ಗೆ ಕೇಳಿದ್ದೀರಾ? ಹೌದು ಕನ್ನಡದಲ್ಲಿ ಹೇಳುವುದಾದರೆ 'ನಿದ್ರೆ ಪ್ರವಾಸೋದ್ಯಮ' ಎಂಬುದು ಇತ್ತೀಚಿನ ದಿನಗಳಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ. ಒಂದು ಕ್ಷಣ ನಿಮಗೆ, ನಿದ್ದೆಗೂ ಪ್ರವಾಸಕ್ಕೂ ಏನು ಸಂಬಂಧ ಅಂತ ಅನಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ನಿದ್ರೆ ಮತ್ತು ವಿಶ್ರಾಂತಿಗೆ ವಿಶೇಷ ಆದ್ಯತೆ ನೀಡುವ ಸ್ಥಳಗಳನ್ನು ಜನರು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ. ಇಲ್ಲಿ ಕಾಡು, ಬೆಟ್ಟ ಗುಡ್ಡ ಸುತ್ತಾಡುವ ಬದಲು ಜನರು ಆರಾಮಾಗಿ ನಿದ್ದೆ ಮಾಡಲೆಂದೇ ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಮಾಡುತ್ತಾರೆ.
ಸಿಟಿ ಜೀವನ, ಟ್ರಾಫಿಕ್, ಕೆಲಸದ ಒತ್ತಡ ಜನರನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಅತಿಯಾದ ಒತ್ತಡ ನಿದ್ರಾಹೀನತೆಯಂಥ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಅನೇಕ ರೋಗಗಳ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದಲೇ ಸಿಟಿ ಜನರು ಇತ್ತೀಚಿನ ದಿನಗಳಲ್ಲಿ ಸ್ಲೀಪ್ ಟೂರಿಸಂ ಕಡೆಗೆ ಮುಖ ಮಾಡುತ್ತಿದ್ದಾರೆ.

ಏನಿದು ಸ್ಲೀಪ್ ಟೂರಿಸಂ?
ನಿದ್ರೆ ಪ್ರವಾಸೋದ್ಯಮ(Sleep Tourism) ಎಂದರೆ ರಜಾದಿನಗಳನ್ನು ಕಳೆಯುವುದು ಅಥವಾ ನಿಮ್ಮ ನಿದ್ರೆ ಮತ್ತು ವಿಶ್ರಾಂತಿಗೆ ವಿಶೇಷ ಗಮನ ನೀಡುವ ಸ್ಥಳಗಳಿಗೆ ಪ್ರಯಾಣಿಸುವುದು ಎಂದರ್ಥ. ಇದಕ್ಕಾಗಿಯೇ ಇತ್ತೀಚಿಗೆ ಐಷಾರಾಮಿ ಹೋಟೆಲ್, ರೆಸಾರ್ಟ್ ಅಥವಾ ವಿಶ್ರಾಂತಿ ಕೇಂದ್ರಗಳನ್ನು ಕಾಣಬಹುದು. ಅಲ್ಲಿ ನೀವು ಶಾಂತಿಯುತವಾಗಿ ಮಲಗಬಹುದು. ಇದಲ್ಲದೆ, ನಿಮಗೆ ಧ್ವನಿ ನಿರೋಧಕ ಕೊಠಡಿಗಳು, ಆರಾಮದಾಯಕ ಹಾಸಿಗೆಗಳು, ವಿಶೇಷ ದಿಂಬುಗಳು, ಗಿಡಮೂಲಿಕೆ ಚಹಾಗಳು, ಯೋಗ, ಧ್ಯಾನ ಮತ್ತು ನಿದ್ರೆಯನ್ನು ಸುಧಾರಿಸುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಒಂದು ರೀತಿಯಲ್ಲಿ, ಇದು ಕಡಿಮೆ ಪ್ರಯಾಣ ಮತ್ತು ಹೆಚ್ಚು ನಿದ್ರೆ ಮಾಡುವ ಟೂರಿಸಂ. ಇದರ ಮೂಲಕ, ಜನರು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಇದು ಅವರಿಗೆ ಮಾನಸಿಕ ಶಾಂತಿಯನ್ನು ನೀಡಿ, ಅವರ ಮಾನಸಿಕ ಆಯಾಸ ಮತ್ತು ದೈಹಿಕ ಆಯಾಸವನ್ನು ನಿವಾರಿಸುತ್ತದೆ.
ನೀವೂ ಕೂಡ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸ್ಲೀಪ್ ಟೂರಿಸಂ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೆ, ವಾರಾಂತ್ಯದಲ್ಲಿ ಪ್ರಯಾಣಿಸಿ. ಸ್ಲೀಪ್ ಟೂರಿಸಂಗೆ ಭಾರತದಲ್ಲಿ ಅತ್ಯುತ್ತಮ ಸ್ಥಳಗಳು ಎಲ್ಲಿವೆ ಎಂದು ನೀವು ಹುಡುಕಾಟ ನಡೆಸುತ್ತಿದ್ದರೆ, ಪ್ರಮುಖ ತಾಣಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶವು ನಿದ್ರಾ ಪ್ರವಾಸೋದ್ಯಮಕ್ಕೆ ಉತ್ತಮ ಸ್ಥಳವೆಂದು ಗುರುತಿಸಲ್ಪಟ್ಟಿದೆ. ಹಿಮಾಚಲವನ್ನು ನಿದ್ರಾ ರಾಜ್ಯ(Sleeping State) ಎಂದೂ ಕರೆಯಲಾಗುತ್ತದೆ. ಇಲ್ಲಿ, ಶಿಮ್ಲಾದಿಂದ ಡಾಲ್ಹೌಸಿಯವರೆಗೆ, ಧರ್ಮಶಾಲಾ, ಕಸೋಲ್ ಮತ್ತು ಸ್ಪಿತಿ ಕಣಿವೆ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದು ಸುಂದರವಾದ ಹಳ್ಳಿಗಳು, ಹಚ್ಚ ಹಸಿರಿನ ಕಣಿವೆಗಳು ಮತ್ತು ಭವ್ಯ ಪರ್ವತಗಳಿಂದ ಕೂಡಿದ ಶಾಂತ ವಾತಾವರಣವನ್ನು ನಿಮಗೆ ಕಲ್ಪಿಸುತ್ತದೆ.
ಕೊಡಗು
ಹಚ್ಚ ಹಸಿರಿನ ಕಾಫಿ ತೋಟಗಳು ಮತ್ತು ಬೆಟ್ಟಗಳ ನಡುವೆ ನೆಲೆಗೊಂಡಿರುವ ಕೊಡಗು, ಪ್ರಶಾಂತ ಮತ್ತು ನೈಸರ್ಗಿಕ ಸೌಂದರ್ಯದ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಇದು ತಂಪಾದ, ಮಂಜಿನ ವಾತಾವರಣವನ್ನು ಹೊಂದಿದ್ದು, ಇದು ಹಸಿರು ಮತ್ತು ಪಕ್ಷಿಗಳ ಹಾಡುಗಳೊಂದಿಗೆ ಸೇರಿಕೊಂಡಾಗ, ವಿಶ್ರಾಂತಿ ಪಡೆಯಲು ಮತ್ತು ಆಳವಾಗಿ ನಿದ್ರಿಸಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಹೃಷಿಕೇಶ, ಉತ್ತರಾಖಂಡ
ಹೃಷಿಕೇಶವನ್ನು ವಿಶ್ವದ ಯೋಗ ರಾಜಧಾನಿ ಎಂದು ಕರೆಯಲಾಗುತ್ತದೆ. ಈ ಪರಿಸರವು ಆಧ್ಯಾತ್ಮಿಕ ಶಾಂತತೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಪ್ರಶಾಂತವಾದ ಆಶ್ರಮಗಳ ಜೊತೆಗೆ ಗಂಗೆಯ ಶಾಂತ ಶಬ್ದಗಳು ವಿಶ್ರಾಂತಿ ನಿದ್ರೆಗೆ ಸುಂದರವಾದ ವಾತಾವರಣವನ್ನು ಸೃಷ್ಟಿಸುತ್ತವೆ.

ಅಲೆಪ್ಪಿ, ಕೇರಳ
ಅಲೆಪ್ಪಿಯ ಪ್ರಶಾಂತ ಹಿನ್ನೀರು ಮತ್ತು ಸುಂದರವಾದ ದೋಣಿಮನೆಗಳು ಶಾಂತತೆಯ ಅನುಭವವನ್ನು ನೀಡುತ್ತವೆ. ಶಾಂತ ನೀರು ಮತ್ತು ಸೌಮ್ಯವಾದ ಗಾಳಿಯಿಂದ ಸುತ್ತುವರೆದಿರುವ ಈ ಪರಿಸರ, ನಿಮ್ಮ ನಿಜ ಜೀವನದ ಗದ್ದಲದಿಂದ ತಪ್ಪಿಸಿಕೊಳ್ಳಲು ಪರಿಪೂರ್ಣ ಸ್ಥಳವಾಗಿದೆ. ನಿಮ್ಮ ಏನೇ ಒತ್ತಡಗಳಿದ್ದರೂ ಕೂಡ ಈ ಪ್ರದೇಶಕ್ಕೆ ಬಂದ ಕೂಡಲೇ ಇದು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.
ಚೈಲ್, ಹಿಮಾಚಲ ಪ್ರದೇಶ
ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಚೈಲ್, ದಟ್ಟ ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರಿದಿದೆ. ಇದು ಶಾಂತ ಮತ್ತು ಆಕರ್ಷಕವಾಗಿದ್ದು, ನಿರಂತರ ವಿಶ್ರಾಂತಿಯನ್ನು ಬಯಸುವವರಿಗೆ ಇದು ಒಂದು ಉಲ್ಲಾಸಕರವಾದ ತಾಣವಾಗಿದೆ.