Sunday, August 17, 2025
Sunday, August 17, 2025

ವಿಂಟೇಜ್ ಕಾರುಗಳ ಪಯಣ

ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿ ಬೃಹತ್ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ, ಅದುವೇ “ಪಯಣ”. ಚಲನಶೀಲತೆಯ ಪ್ರತೀಕವಾಗಿ ವಸ್ತುಸಂಗ್ರಹಾಲಯಕ್ಕೆ ಪಯಣ ಎಂಬ ಹೆಸರಿಡಲಾಗಿದೆ. ಅದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ.ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಸಕ್ತಿಯ ಫಲವಾಗಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಅಪರೂಪದ ಮ್ಯೂಸಿಯಂ.

ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿದಂತೆ ಹತ್ತು ಹಲವು ಮಜಲುಗಳೊಂದಿಗಿನ ಸಾಂಸ್ಕೃತಿಕ ನಗರದ ಜನತೆಯ ಬದುಕಿಗೆ ಮುಕುಟಪ್ರಾಯವೆಂಬಂತೆ “ಪಯಣ” ಜೊತೆಯಾಗಿದೆ. ಇದು ಕೇವಲ ಮೈಸೂರಿಗರಿಗೆ ಮಾತ್ರವಲ್ಲ, ಮೈಸೂರಿಗೆ ಬರುವ ಪ್ರತಿಯೊಬ್ಬರನ್ನೂ ತನ್ನೊಂದಿನ ಪಯಣಕ್ಕೆ ಕೈಬೀಸಿ ಕರೆಯುತ್ತಿದೆ. ನೀವು ವಿಂಟೇಜ್ ಕಾರುಗಳ ಅಭಿಮಾನಿಯಾಗಿದ್ದರೆ ಅಥವಾ ಅನನ್ಯ ತಾಣಗಳನ್ನು ಅನ್ವೇಷಿಸುವುದನ್ನು ಆನಂದಿಸುತ್ತಿದ್ದರೆ, ಮೈಸೂರಿನಲ್ಲಿರುವ ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ನೋಡಲೇಬೇಕಾದ ಸ್ಥಳವಾಗಿದೆ.

ಬದಲಾದ ಕಾಲಘಟ್ಟದಲ್ಲಿ ವಿಜ್ಞಾನದ ನಾಗಾಲೋಟದ ನಡುವೆ ನಿತ್ಯ ಒಂದಿಲ್ಲೊಂದು ಹೊಸ ಆವಿಷ್ಕಾರ, ನಾವಿನ್ಯತೆ, ನಿರೀಕ್ಷೆಗೂ ನಿಲುಕದ ಬದಲಾವಣೆಗಳಿಂದಾಗಿ ಹೊಸತು ಮುಂದಡಿಯಿಡುವ ಹೊತ್ತಿನಲ್ಲಿ ಹಳೆಯದಕ್ಕೂ ಆಸ್ಪದ ನೀಡಬೇಕೆಂಬುದೇ ಪಯಣದ ಆಶಯ. ಅಂಥ ಒಂದು ಸಂಕಲ್ಪದೊಂದಿಗೆ ಚಿಗುರೊಡೆದ ಗಿಡವೊಂದು ಇಂದು ಹೆಮ್ಮರವಾಗಿ ಬೆಳೆದಿದೆ. ಮಾತ್ರವಲ್ಲ, ಇತಿಹಾಸದ ಪುಟಗಳಲ್ಲಿ ಹೀಗೂ ಇತ್ತೆಂಬುದನ್ನು ಸಾರಿ ಹೇಳುತ್ತಿದೆ. ಅದಕ್ಕೆ ಮೈಸೂರಿಗೆ ಬರುವ ಪ್ರತಿಯೊಬ್ಬರೂ ಜೀವಂತ ಸಾಕ್ಷಿಯಾಗಿದ್ದಾರೆ. ಈ ಮೂಲಕ ವಸ್ತುಸಂಗ್ರಹಾಲಯವು ಮೈಸೂರಿನ ಬೆಳೆಯುತ್ತಿರುವ ಪ್ರವಾಸಿ ಆಕರ್ಷಣೆಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

payana 6 (1)

ಅಂಥ ಒಂದು ವಿಸ್ಮಯ ಲೋಕವೇ “ಪಯಣ” ಎಂಬ ಐತಿಹಾಸಿಕ ತಾಣ. ಅಂದಮಾತ್ರಕ್ಕೆ ಈ ಐತಿಹಾಸಿಕ ಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿಲ್ಲ, ಕೇವಲ ವರ್ಷದ ಕೂಸು. ಆದರೆ, ಅದರೊಳಗಿರುವ ಅಪರೂಪದ ವಸ್ತುಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಆ ಕಾರಣಕ್ಕಾಗಿಯೇ ಇಂದು ಪಯಣ ಎಂಬ ಹಳೆಯ ಕಾರು, ಬೈಕು, ಲಾರಿ ಸೇರಿದಂತೆ ಹತ್ತಾರು ಬಗೆಯ ಅಪರೂಪದ ವಸ್ತುಗಳ ಸಂಗ್ರಹಾಲಯ ಬೆರಳೆಣಿಕೆಯ ದಿನಗಳ ಅಂತರದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ.

ಇಂದು ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿ ಬೃಹತ್ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ, ಅದುವೇ “ಪಯಣ”. ಚಲನಶೀಲತೆಯ ಪ್ರತೀಕವಾಗಿ ವಸ್ತುಸಂಗ್ರಹಾಲಯಕ್ಕೆ ಪಯಣ ಎಂಬ ಹೆಸರಿಡಲಾಗಿದೆ. ಅದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ.ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಸಕ್ತಿಯ ಫಲವಾಗಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಅಪರೂಪದ ಮ್ಯೂಸಿಯಂ. ಅಲ್ಲಿ ಎತ್ತುಗಳು ಕಾರನ್ನು ಎಳೆಯುತ್ತಿರುವ ಚಿತ್ರದೊಂದಿಗೆ 'ಪಯಣ' ಎನ್ನುವ ನಾಮಫಲಕ ಕುತೂಹಲ ಹೆಚ್ಚಿಸುತ್ತದೆ. ಅದರ ಪ್ರವೇಶದ್ವಾರದಲ್ಲೇ ನಿಲ್ಲಿಸಿರುವ 'ಡಬಲ್ ಡೆಕ್ಕರ್' ಬಸ್ಸು ಒಳಪ್ರವೇಶಕ್ಕೆ ಮುನ್ನುಡಿ ಬರೆಯುತ್ತದೆ. ಒಳಹೊಕ್ಕು ಮೂವತ್ತು ಮೀಟರ್ ಮುಂದೆ ಹೋದರೆ ಉಕ್ರೇನ್ ದೇಶದ ಯುದ್ಧದ ಟ್ಯಾಂಕರ್ ಕಾಣಿಸುತ್ತದೆ. ತದನಂತರ ಒಳಹೊಕ್ಕಾಗ ಕಾಣಿಸುವುದೇ ವಿಂಟೇಜ್ ಕಾರುಗಳ ಸಾಲು.

payana 8

80ಕ್ಕೂ ಹೆಚ್ಚು ಕಾರುಗಳ ಸಂಗ್ರಹ

ಇಲ್ಲಿ ಸುಮಾರು 80ಕ್ಕೂ ಹೆಚ್ಚು ಹಳೆಯ ಕಾಲದ ಕಾರುಗಳಿವೆ. ಆಕಾರ, ಬಣ್ಣದಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ಮತ್ತು ವಿಭಿನ್ನ. ಮತ್ತೊಂದು ಕಾರು ನೊಬೆಲ್ ಪ್ರಶಸ್ತಿ ಪುರಸ್ಕೃತ ಖಗೋಳ ಭೌತ ವಿಜ್ಞಾನಿ ಸ‌ರ್ ಸಿ.ವಿ. ರಾಮನ್ ಅವರು ಬಳಸುತ್ತಿದ್ದ ಸ್ಟುಡಿ ಬೇಕರ್ ಚಾಂಪಿಯನ್. ಇದರ ಮೂಲ ಯುಎಸ್ಎ. ಸ್ಟುಡಿ ಬೇಕರ್ ಕಾರ್ಪೋರೇಷನ್ ಈ ಮಾದರಿಯ ಕಾರನ್ನು 1939-1958ರ ನಡುವೆ ಉತ್ಪಾದಿಸುತ್ತಿತ್ತು. ಸಿಲಿಂಡ‌ರ್ ಆಕಾರದ ಜೋಡಿ ಎಂಜಿನ್ ಹೊಂದಿರುವ ಈ ಕಾರಿಗೆ ಎರಡು ಬಾಗಿಲುಗಳಿವೆ. ಇದರೊಳಗೆ ಐದು ಮಂದಿ ಕುಳಿತು ಪ್ರಯಾಣಿಸುವಷ್ಟು ಸ್ಥಳಾವಕಾಶವಿದೆ. ಸರ್ ಸಿ.ವಿ. ರಾಮನ್ ಅವರು ಈ ಕಾರನ್ನು 1947ರಲ್ಲಿ ಖರೀದಿಸಿ ಬಳಸುತ್ತಿದ್ದರು. ಅವರು ಕಾಲವಾದ ನಂತರ (1970) ಕಾರು ವಸ್ತುಸಂಗ್ರಹಾಲಯ ಸೇರಿದೆ.

ಇಂಗ್ಲೆಂಡ್ ಮೂಲದ ಆಸ್ಟಿನ್ ಸೋಮರ್ಸೆಟ್, ಕ್ಯಾಡಿಲಾಕ್, ಮಾರಿಸ್-15 (6), ಹಿಲ್‌ಮನ್ ಮಿಂಗ್ಸ್, ಹಿಂದೂಸ್ತಾನ್-14, ಸಿಟ್ರಾನ್, ಬೆಲೈರ್, ಚವರೆಲೆಟ್ ಇಂಪಾಲ್, ಅಮೆರಿಕದ ಬ್ಯೂಕ್, ಆಸ್ಟ್ರಿಯಾ ಮೂಲದ ಸೈಯರ್ ಪುಚ್ ಆಫ್‌ಲಿಂಗರ್, 1926ರ ಮಾಡೆಲ್‌ನ ಇಟಲಿ ಮೂಲದ ಫಿಯಟ್, ಬೆಂಚ್ ಮರ್ಸಿಂಟ್ ಕಾರುಗಳು. ಗಾಢ ಹಳದಿ ಬಣ್ಣದ ಪ್ರಿಯಾ ಫೆಂಟಾಬೈಸ್, ರಾಯಲ್ ಎನ್‌ಫೀಲ್ಡ್ ಮತ್ತು ಚೇತಕ್‌ನ ಆರಂಭಿಕ ಮಾದರಿಯ ಸ್ಕೂಟರ್‌ಗಳ ಬಣ್ಣ ಇಂದಿಗೂ ಮಾಸಿಲ್ಲ. ಹಳ್ಳಿಗಳಲ್ಲಿ ಐದಾರು ದಶಕಗಳ ಹಿಂದೆ ಕಾಣಸಿಗುತ್ತಿದ್ದ ಮನೆಗಳ ಬಾಗಿಲು ಮತ್ತು ಚೌಕಟ್ಟುಗಳನ್ನು ಇಲ್ಲಿ ರಕ್ಷಿಸಿಡಲಾಗಿದೆ.

ಗ್ರಾಮ್ಯಲೋಕದ ಅನಾವರಣ

ಕಿಲೋಗ್ರಾಮ್, ಗ್ರಾಮ್‌ಗಳ ತೂಕ ಪದ್ಧತಿ ಬಳಕೆಗೆ ಬರುವ ಮುನ್ನ ಚಾಲ್ತಿಯಲ್ಲಿದ್ದ ಸೇರು, ಪಾವು, ಅಚ್ಚೇರು, ಚಟಾಕು, ಕೊಳಗ, ಬಿದಿರಿನ ಬೂಜುಂಡಿಗೆ ಬುಟ್ಟಿ, ತೊಟ್ಟಿಲು, ಪೆಟ್ಟಿಗೆ, ಮಜ್ಜಿಗೆ ಕಡೆಯುವ ಮಂಥು, ಸೌಟು, ಮರ ಮತ್ತು ಕಲ್ಲಿನ ಬೋಗುಣಿ, ಜಾನುವಾರುಗಳಿಗೆ ಔಷಧ ಕುಡಿಸಲು ಬಳಸುತ್ತಿದ್ದ ಗೊಟ್ಟ, ಶಾವಿಗೆ ಮತ್ತು ಪಡ್ಡು ಮಣೆಗಳು ಸೇರಿದಂತೆ ನಮ್ಮ ಪೂರ್ವಜರು ಬಳಸುತ್ತಿದ್ದ ಬಗೆ ಬಗೆಯ ಗೃಹಕೃತ್ಯದ ಪರಿಕರಗಳನ್ನು ಕಣ್ಣುಂಬಿಕೊಳ್ಳಬಹುದು. ಹೊಸ ತಲೆಮಾರಿನವರಿಗೆ ಹಳತನ್ನು ಪರಿಚಯಿಸಬಹುದು.

payana 77

ವಸ್ತು ಸಂಗ್ರಹಾಲಯದ ಮತ್ತೊಂದು ಭಾಗದಲ್ಲಿ ನೂರಿನ್ನೂರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕಬ್ಬಿನರಸ ಹಿಂಡುವ ಯಂತ್ರ, ಟೆಲಿಸ್ಕೋಪ್, ಮೊಳೆ ಅಚ್ಚಿನ ಮುದ್ರಣ ಯಂತ್ರ, ಗ್ರಾಮಾಫೋನ್, ಟೈಪ್‌ರೈಟ‌ರ್, ಪ್ರೊಜೆಕ್ಟರ್, ಜಪಾನ್ ಟ್ರೇಡ್ ಮಾರ್ಕ್ ನ ತಮಿಯಾಮ ಕ್ಯಾಮೆರಾಗಳು ಪುಳಕಗೊಳಿಸುತ್ತವೆ. ಹಿಂದೆ ಯುದ್ಧದಲ್ಲಿ ಬಳಸುತ್ತಿದ್ದ ಕತ್ತಿ, ಗುರಾಣಿ, ಬಾಕು, ಕಠಾರಿ, ಫಿರಂಗಿ, ನಾಡ ಬಂದೂಕು, ಬ್ಯಾರಲ್ ಗನ್, ಕತ್ತಿ, ಕೊಡಲಿಗಳನ್ನು ಅಮೂಲ್ಯ ರತ್ನಗಳಂತೆ ಗಾಜಿನಪೆಟ್ಟಿಗೆಗಳಲ್ಲಿ ಇರಿಸಿರುವುದು ಅವುಗಳ ಮಹತ್ವ ಸಾರುತ್ತದೆ. ದೇಶ, ವಿದೇಶಗಳ ಕರೆನ್ಸಿಗಳು, ಸ್ಟಾಂಪ್‌ಗಳು, ಭಾರತದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು, ತೂತು ಕಾಸುಗಳು, ವಿವಿಧ ಮುಖಬೆಲೆಯ ಮಾಸಿದ ಪೈಸೆಗಳನ್ನೂ ನೋಡಬಹುದು.

ಕನ್ನಡದ ಜೈಮಿನಿ ಭಾರತ!

ಭಾರತೀಯ ಕೃತಿಗಳನ್ನೂ ಇಲ್ಲಿ ಸಂರಕ್ಷಿಸಿಡಲಾಗಿದೆ. ಕವಿ ಲಕ್ಷ್ಮೀಶನ ಕಾಲದ ಕನ್ನಡ ಲಿಪಿಯ 17ನೇ ಶತಮಾನದ ಜೈಮಿನಿ ಭಾರತವೂ ಇಲ್ಲುಂಟು. ಸಂಸ್ಕೃತ ಸಾಹಿತ್ಯದ ಹಲವು ತಾಳೆಗರಿಯ ಕೃತಿಗಳು, ಕೈಬರಹದ ಪಂಚಾಂಗ, ಶ್ರೀಶೈಲ ಮಲ್ಲಿಕಾರ್ಜುನನನ್ನು ಉಲ್ಲೇಖಿಸುವ ಹಳಗನ್ನಡದ ತಾಮ್ರಪತ್ರ, 1929ರಲ್ಲಿ ಅ.ನ.ಕೃ ಕನ್ನಡಕ್ಕೆ ಭಾಷಾಂತರಿಸಿರುವ ಕವಿ ರವೀಂದ್ರ ವಿರಚಿತ 'ಚಿತ್ರ' ನಾಟಕದ ಹಸ್ತಪ್ರತಿ, 1910ರಲ್ಲಿ ಮುದ್ರಣಗೊಂಡಿರುವ 'ಮೈಸೂರು ಸ್ಟಾರ್' ಕನ್ನಡ ವಾರಪತ್ರಿಕೆಯ ಪ್ರತಿ, ತೊಗಲುಗೊಂಬೆ, ಗಂಜೀಫಾ ಕಲೆ ಮತ್ತು ಮೈಸೂರು ರಾಜ ವಂಶಸ್ಥರ ವಿತ್ರಗಳನ್ನೂ ಇತಿಹಾಸ ದರ್ಶನ ಮಾಡಿಸುತ್ತವೆ.

payana (2)

ಮಾಜಿ ಸೈನಿಕರಿಗೆ ಉಚಿತ !

'ಪಯಣ' ವಸ್ತುಸಂಗ್ರಹಾಲಯವು ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೂ ತೆರೆದಿರುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ರೂ. 75 ಪ್ರವೇಶ ಶುಲ್ಕವಿದೆ. ಮಕ್ಕಳು ಸೈನಿಕರು ಮತ್ತು ಮಾಜಿ ಸೈನಿಕರಿಗೆ ಪ್ರವೇಶ ಉಚಿತ. ಇದು ಮೈಸೂರಿನಿಂದ 8 ಕಿಮೀ, ಶ್ರೀರಂಗಪಟ್ಟಣದಿಂದ 8 ಕಿಮೀ ಮತ್ತು ಮಂಡ್ಯದಿಂದ 33 ಕಿಮೀ ದೂರದಲ್ಲಿದೆ. ವರ್ಷದ 365 ದಿನವೂ ವಸ್ತುಸಂಗ್ರಹಾಲಯ ತೆರೆದಿರುತ್ತದೆ. ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆಯಲ್ಲದೆ, ಪ್ರತಿಯೊಂದೂ ಆಟೋಮೋಟಿವ್ ಇತಿಹಾಸದ ಸೊಬಗು ಮತ್ತು ನಾವಿನ್ಯತೆಯನ್ನು ಪ್ರದರ್ಶಿಸುತ್ತದೆ. ಮಾತ್ರವಲ್ಲ, ಕಾರುಗಳ ವಿಶಿಷ್ಟ ಪರಂಪರೆ ಮತ್ತು ಕಾಲಾತೀತ ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ

ಪ್ರವಾಸಿ ಸ್ನೇಹಿ ವಾತಾವರಣ

ವೀರೇಂದ್ರ ಹೆಗ್ಗಡೆ ಅವರ ವಿಂಟೇಜ್ ಕಾರುಗಳು ಮತ್ತು ಛಾಯಾಗ್ರಹಣದ ಮೇಲಿನ ಪ್ರೀತಿ ಈ ಎಚ್ಚರಿಕೆಯಿಂದ ಸಂಗ್ರಹಿಸಲಾದ ಸಂಗ್ರಹದಲ್ಲಿ ಎದ್ದುಕಾಣುತ್ತದೆ. ಪ್ರತಿಯೊಂದು ಕಾರು ನಾವಿನ್ಯತೆ ಮತ್ತು ಕೌಶಲ್ಯದ ಕಥೆಯನ್ನು ಹೇಳುತ್ತದೆ, ಒಂದು ಕಾಲದಲ್ಲಿ ಜಯಚಾಮರಾಜೇಂದ್ರ ವಡೆಯರ್, ಸರ್ ಸಿ.ವಿ. ರಾಮನ್, ಡಾ. ವಿಷ್ಣುವರ್ಧನ್ ಮತ್ತು ಶ್ರೀ ವೀರೇಂದ್ರ ಹೆಗ್ಗಡೆ ಅವರು ಹೊಂದಿದ್ದ ಐಕಾನಿಕ್ ವಾಹನಗಳು ಕೂಡ ಇಲ್ಲಿವೆ.

ಪಯಣ ವಿಂಟೇಜ್ ಕಾರ್ ಮ್ಯೂಸಿಯಂಗೆ ಮೈಸೂರು ನಗರದಿಂದ ಹತ್ತು ನಿಮಿಷಗಳ ಪ್ರಯಾಣವಾದರೆ, ಬೆಂಗಳೂರಿನಿಂದ 2 ಗಂಟೆಗಳಲ್ಲಿ ತಲುಪಬಹುದು. ವಾರಾಂತ್ಯದ ವಿಹಾರಕ್ಕೆ ಸೂಕ್ತ ಸ್ಥಳವಾಗಿ ಪಯಣ ನಿಮ್ಮ ಆಯ್ಕೆ ಆಗಬಹುದು. ವಿಶೇಷ ಚೇತನರಿಗೂ ಅನುಕೂಲಕರವಾದ ವಿನ್ಯಾಸ, ಮೆಟ್ಟಿಲುಗಳ ಬದಲಿಗೆ ಜಾರುದಾರಿಗಳು, ಇಂಥ ಹಲವು ಸೌಕರ್ಯಗಳು ಪ್ರವಾಸಿಗರಿಗೆ ಇನ್ನಷ್ಟು ಆಪ್ತವೆನಿಸುತ್ತದೆ.

payana 7

ಇಲ್ಲಿ ಕಾರು ಸಂಗ್ರಹದ ಜೊತೆಗೆ ತೆರೆದ ರಂಗಮಂದಿರ ಮತ್ತು ಕೆಫೆಟೇರಿಯಾ ಇದೆ. ಇದು ಪ್ರವಾಸಿಗರಿಗೆ ಸಂಪೂರ್ಣ ಸಾಂಸ್ಕೃತಿಕ ಅನುಭವ ನೀಡುತ್ತದೆ. ವಿಂಟೇಜ್ ಆಟೋಮೊಬೈಲ್‌ಗಳ ಪರಂಪರೆಯನ್ನು ಸಂರಕ್ಷಿಸುವುದಲ್ಲದೆ, ಮೈಸೂರು ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವುದು ಕೂಡ ಪಯಣ ಮ್ಯೂಸಿಯಮ್ ನ ಗುರಿ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಆಟೋಮೋಟಿವ್ ಪರಂಪರೆಯ ಭವ್ಯ ಸಾಕ್ಷಿ

ಪಯಣ ಕೇವಲ ವಿಂಟೇಜ್ ಕಾರುಗಳ ವಸ್ತುಸಂಗ್ರಹಾಲಯವಲ್ಲ, ಕರ್ನಾಟಕದ ಶ್ರೀಮಂತ ಆಟೋಮೋಟಿವ್ ಪರಂಪರೆಯ ಒಂದು ಭವ್ಯ ಸಾಕ್ಷಿಯಾಗಿದೆ.

ಪಯಣದ ಕನಸು ಮೊಳಕೆ ಒಡೆದದ್ದು ಡಾ. ಹೆಗ್ಗಡೆ ಅವರ 20ನೇ ವಯಸ್ಸಿನಲ್ಲಿ. ತಂದೆಯವರಿಂದ ಜವಾಬ್ದಾರಿ ವರ್ಗಾವಣೆ ಆದ ಬಳಿಕ ಡಾ. ಹೆಗ್ಗಡೆಯವರು ಧರ್ಮಕ್ಷೇತ್ರದ ಅಭಿವೃದ್ಧಿಯ ಜೊತೆಗೆ ತಮ್ಮ ಪ್ಯಾಶನ್ ಗೂ ನೀರೆರೆದರು. ಧರ್ಮಸ್ಥಳದ ಮಂಜುಷಾ ಕಾರು ವಸ್ತು ಸಂಗ್ರಹಾಲಯದಲ್ಲಿ ಪಯಣದ ಮುನ್ನುಡಿ ಬರೆಯಲಾಯಿತು. ಕೇವಲ ಎರಡು ಕಾರುಗಳಿಂದ ಆರಂಭವಾದ ಪಯಣ 250ಕ್ಕೂ ಹೆಚ್ಚು ವಿಂಟೇಜ್ ವಾಹನಗಳನ್ನು ಹೊಂದುವ ಹಂತಕ್ಕೆ ಬೆಳೆಯಿತು.

ಪಯಣ ವಸ್ತುಸಂಗ್ರಹಾಲಯ ಅಂದ್ರೆ ಕೇವಲ ವಿಂಟೇಜ್ ಕಾರುಗಳ ಸಂಗ್ರಹಾಲಯ ಅಲ್ಲ. ಇದು ಕರ್ನಾಟಕದ ಶ್ರೀಮಂತ ಪರಂಪರೆಯ ಒಂದು ಭಾಗ. ದೇಶೀಯ ಗೃಹೋಪಯೋಗಿ ಕಲಾಕೃತಿಗಳು, ಹಳೆಯ ಫೋನ್‌ಗಳು, ಟೈಪ್‌ರೈಟರ್‌ಗಳು, ಕ್ಯಾಮೆರಾಗಳು, ಹಸ್ತಪ್ರತಿಗಳು, ಶಸ್ತ್ರಾಗಾರಗಳ ಪ್ರದರ್ಶನ ಸೇರಿದಂತೆ ಇತಿಹಾಸ ಮತ್ತು ಸಂಸ್ಕೃತಿಯ ಸಮಗ್ರ ಚಿತ್ರಣ ನಿಮಗಿಲ್ಲಿ ಸಿಗುತ್ತದೆ.

ಶೈಕ್ಷಣಿಕ ಪ್ರವಾಸವೂ ಹೌದು!

ಪಯಣ ವಸ್ತುಸಂಗ್ರಹಾಲಯವು ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ತೋರಿಸಲೇಬೇಕಾದ ಸ್ಥಳ. ಇಲ್ಲಿರುವ ಪ್ರತಿ ವಸ್ತು, ಅದರ ಇತಿಹಾಸ, ಅದರ ತಾಂತ್ರಿಕ ವಿವರ, ಪಾರಂಪರಿಕ ಮಹತ್ವ ಇವೆಲ್ಲವನ್ನೂ ಇಂದಿನ ಪೀಳಿಗೆ ತಿಳಿಯುವ ಅಗತ್ಯವಿದೆ. ಪಯಣ ಮ್ಯೂಸಿಯಂ ಅವರಲ್ಲಿ ಆಸಕ್ತಿ ಕೆರಳಿಸುವುದರಲ್ಲಿ ಸಂದೇಹವೇ ಇಲ್ಲ. ವಿಶೇಷವೆಂದರೆ ಇಲ್ಲಿ ಗೈಡ್ ಗಳ ಅಗತ್ಯವೂ ಇಲ್ಲ. ಸರ್ವಮಾಹಿತಿಯೂ ನಿಮಗೆ ನೇರವಾಗಿಯೇ ದೊರೆಯುತ್ತದೆ.

ಪಯಣ ಚಿಹ್ನೆಯ ಮಹತ್ವ

’ಪಯಣ’ ಅಂದರೇನು ಎಂದು ವಿವರಿಸೋ ಅಗತ್ಯವಿಲ್ಲ. ಅದು ದಿನನಿತ್ಯ ಓದುವ ಬರೆಯುವ ಮಾತಲ್ಲಿ ಬಳಸುವ ಪದ. ವಸ್ತುಸಂಗ್ರಹಾಲಯಕ್ಕೆ ಅದೇ ಹೆಸರನ್ಯಾಕೆ ಇಟ್ಟದ್ದು. ಕಾರಣ ಸರಳವಿದೆ. ಇದು ಕೇವಲ ಕಾರ್ ಗಳ ಮ್ಯೂಸಿಯಂ ಮಾತ್ರವಲ್ಲ, ವಿಕಾಸದ ಚಕ್ರ ಚಲಿಸುವುದನ್ನೂ ಬಿಂಬಿಸಬೇಕು ಎಂಬುದು ಉದ್ದೇಶವಾಗಿತ್ತು. ಸಾರಿಗೆ ಸಾಧನಗಳು ಹೇಗೆ ವಿಕಸನಗೊಳ್ಳುತ್ತಾ ಬಂದಿದೆ ಎಂಬುದನ್ನು ಸೂಚ್ಯವಾಗಿ ಹೇಳಿದೆ ಪಯನದ ಲೋಗೋ. ಬಂಡಿಗಳಿಂದ ಕಾರುಗಳ ತನಕ ಆಗಿರುವ ಪರಿವರ್ತನೆಯನ್ನು ಸಂಕೇತಿಸಲು ಬೃಹತ್ ಚಕ್ರಾಕಾರದ ಕಿರೀಟ ಹೊತ್ತಿರುವ ಕಟ್ಟಡದ ಜತೆ, ಕಾರ್ಟ್ ಟು ಕಾರ್, ಅಂದ್ರೆ ಬಂಡಿಯಿಂದ ಕಾರ್ ತನಕ ಎಂದು ಸೂಚ್ಯವಾಗಿ ಹೇಳುವ ಲೋಗೋ ಮಾಡಲಾಗಿದೆ.

ಭವಿಷ್ಯದಲ್ಲಿ, ವಸ್ತುಸಂಗ್ರಹಾಲಯವು ಇನ್ನಷ್ಟು ಮತ್ತಷ್ಟೂ ವಸ್ತುಗಳನ್ನು ತನ್ನದಾಗಿಸಿಕೊಳ್ಳಲಿದೆ. ಅದರಲ್ಲಿ ದೇಶದ ವಿದೇಶದ ಅಮೂಲ್ಯ ವಸ್ತುಗಳಿರಲಿವೆ.

ಕಾರ್ ಸಂಗ್ರಹ ಹೇಗೆ?

ಕೆಲವು ವಾಹನಗಳನ್ನು ವೀರೇಂದ್ರ ಹೆಗ್ಗಡೆ ಅವರು ನೇರವಾಗಿ ಖರೀದಿಸಿದರೆ, ಇನ್ನು ಕೆಲವು ವಾಹನಗಳನ್ನು ವಿಂಟೇಜ್ ಕಾರು ಉತ್ಸಾಹಿಗಳು ಉದಾರವಾಗಿ ದಾನ ಮಾಡಿದ್ದಾರೆ. ಅವರು ತಮ್ಮ ಅಮೂಲ್ಯವಾದ ಆಸ್ತಿಗಳ ಸಂರಕ್ಷಣೆಯನ್ನು ಶ್ರೀಗಳಿಗೆ ವಹಿಸಿದ್ದರು. ಹೆಚ್ಚುವರಿಯಾಗಿ, ಶ್ರೀಗಳ ನೇತೃತ್ವದ ತಂಡ ವಿವಿಧೆಡೆಯಿಂದ ಔಪಚಾರಿಕ ಮಾರ್ಗಗಳ ಮೂಲಕ ವಸ್ತುಗಳನ್ನು ಸಂಗ್ರಹಿಸಿದೆ.

payana 2

ಪಯಣದ ವಾಸ್ತುಶಿಲ್ಪಿ ಮಂಜುಕೀರ್ತನ್

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಪಯಣ ವಸ್ತು ಸಂಗ್ರಹಾಲಯವು ಒಂದು ಲಕ್ಷ ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿದೆ. ಇದರ ಹಿಂದೆ ವಾಸ್ತುಶಿಲ್ಪಿ ಮಂಜುಕೀರ್ತನ್ ಅವರ ಕೈಚಳಕವಿದೆ. ಪಯಣ ವಸ್ತುಸಂಗ್ರಹಾಲಯದ ಯೋಜನೆ ಮತ್ತು ಪರಿಕಲ್ಪನೆಯು 4 ವರ್ಷಗಳ ಕಾಲ ನಡೆಯಿತು. ಇದನ್ನು ವೀರೇಂದ್ರ ಹೆಗ್ಗಡೆ ಅವರು ದೇವಾಲಯದಲ್ಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಪ್ರಾರಂಭಿಸಿದರಂತೆ. ಶಿಕ್ಷಣವನ್ನು ಮನರಂಜನೆಯೊಂದಿಗೆ ಸಂಯೋಜಿಸುವ ಪ್ರಾಥಮಿಕ ಉದ್ದೇಶದೊಂದಿಗೆ, ಟೈರ್ ಆಕಾರದ ಕಾರ್ ವಸ್ತುಸಂಗ್ರಹಾಲಯವನ್ನು ರಚಿಸುವುದು ಇದರ ಉದ್ದೇಶವಾಗಿತ್ತು.

ಎಸ್ ಡಿಎಂ ಸಂಸ್ಥೆಗಳ ಸಮೂಹದ ನಿರ್ದೇಶಕ ಶ್ರೇಯಸ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪಯಣದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ವಿಂಟೇಜ್ ಕಾರುಗಳನ್ನು ಪ್ರತಿನಿಧಿಸುವುದಲ್ಲದೆ, ಅವುಗಳ ಇತಿಹಾಸ ಮತ್ತು ವಿಕಾಸವನ್ನು ಪ್ರದರ್ಶಿಸುವ ಕಟ್ಟಡವನ್ನು ರಚಿಸುವುದು ಆಲೋಚನೆಯಾಗಿತ್ತು. ಹಸಿರು ಇಂಧನ ಪರಿಹಾರಗಳನ್ನು ಸಂಯೋಜಿಸುವ ಯೋಜನೆಗಳೊಂದಿಗೆ ಸುಸ್ಥಿರತೆಯು ಪ್ರಮುಖ ಗಮನವಾಗಿತ್ತು.

ಪ್ರವಾಸಿಗರಿಗೆ ಬರಲು ಅನುಕೂಲವಾಗುವಂಥ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡುವುದು ಆರಂಭಿಕ ಸವಾಲಾಗಿತ್ತು. ಸ್ಥಳವನ್ನು ಅಂತಿಮಗೊಳಿಸಿದ ನಂತರ, ಮುಂದಿನ ಹಂತದ ಕಾರ್ಯ ಆರಂಭವಾಯಿತು. ವಸ್ತುಸಂಗ್ರಹಾಲಯದ ವಿನ್ಯಾಸ ಮತ್ತು ಪ್ರದರ್ಶನಗಳನ್ನು ಯೋಜಿಸಲು ವಾಸ್ತುಶಿಲ್ಪಿಗಳ ಮತ್ತು ವಸ್ತುಸಂಗ್ರಹಾಲಯಶಾಸ್ತ್ರಜ್ಞರ ನಿಯೋಗ ಸಿದ್ಧಗೊಂಡಿತು. ಪ್ರವಾಸಿಗರ ಮತ್ತು ಆಸಕ್ತರ ಮನಸನ್ನು ಗಮನದಲ್ಲಿಟ್ಟುಕೊಂಡು, ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸಲಾಯ್ತು.

ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಚರ್ಚೆಗಳು ಮತ್ತು ವಿವಿಧ ತಜ್ಞರಿಂದ ಬಂದ ಸಲಹೆಗಳ ನಂತರ, ವಸ್ತುಸಂಗ್ರಹಾಲಯವು ಅಂತಿಮವಾಗಿ ರೂಪುಗೊಂಡಿತು ಮತ್ತು ಈಗ ಸಾರ್ವಜನಿಕ ವೀಕ್ಷಣೆಗೆ ತಲೆ ಎತ್ತಿ ನಿಂತಿದೆ.

ಹತ್ತಿರದ ಪ್ರವಾಸಿ ಆಕರ್ಷಣೆಗಳು

ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ಕೆಲವೇ ಕಿಮೀ ಅಂತರದಲ್ಲಿ ಇತಿಹಾಸ ಸಾರುವ ಕೋಟೆ ಕೊತ್ತಲುಗಳು, ದೇವಾಲಯಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಐತಿಹಾಸಿಕ ಪಟ್ಟಣವಾದ ಶ್ರೀರಂಗಪಟ್ಟಣಕ್ಕೆ ಹತ್ತಿರದಲ್ಲಿದೆ. ಮಾತ್ರವಲ್ಲ, ಪ್ರಕೃತಿ ಪ್ರಿಯರಿಗೆ ಇಷ್ಟವಾಗುವ ಚಾಮುಂಡಿ ಬೆಟ್ಟ, ಕರಿಘಟ್ಟ ಶಿಖರ, ಕಾವೇರಿ ನದಿ ಸೂರ್ಯಾಸ್ತದ ವೀಕ್ಷಣಾ ಸ್ಥಳ, ಬಲಮುರಿ ಜಲಪಾತ, ಕೆಆರ್ ಎಸ್ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನಗಳು, ಸಂಗೀತ ಕಾರಂಜಿ ಇವೆ.

ಇವುಗಳ ಹೊರತಾಗಿ ನಿಮಿಷಾಂಬ ದೇವಾಲಯ, ಶ್ರೀ ರಂಗನಾಥಸ್ವಾಮಿ ದೇವಾಲಯ, ಗುಂಬಜ್-ಎ-ಶಾಹಿ-ಟಿಪ್ಪು ಸುಲ್ತಾನ್ ಮತ್ತು ಅವರ ಕುಟುಂಬದ ಸಮಾಧಿ. ಶ್ರೀರಂಗಪಟ್ಟಣ ಕೋಟೆ, ಟಿಪ್ಪು ಸುಲ್ತಾನ್ ಕೋಟೆ, ದರಿಯಾ ದೌಲತ್ ಬಾಗ್ ಇವೆ. ಇವೆಲ್ಲವೂ ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ನೋಡಲು ಬಂದಾಗ ಸಿಗುವ ಬೋನಸ್ ಅಂದ್ಕೊಳ್ಳಬಹುದು. ಮೈಸೂರು ಎಂಬ ಪಾರಂಪರಿಕ ಶ್ರೀಮಂತಿಕೆಯ ಊರಿಗೆ ಪ್ರವೇಶಿಸಲು ಪಯಣ ಒಂದು ದ್ವಾರವೆನ್ನಲೂಬಹುದು. ಪಯಣ ಮ್ಯೂಸಿಯಂ ನೋಡಿದ ನಂತರ ಮೈಸೂರು ನಗರ ಪ್ರವೇಶ ಮಾಡಬಹುದು.

ಮಂಜುಷಾ ವಸ್ತುಸಂಗ್ರಹಾಲಯ

ಪಯಣದೊಳಗೆ ಮಂಜುಷಾ ಹೆಸರಿನ ವಸ್ತುಸಂಗ್ರಹಾಲಯ ಎಂದು ಕರೆಯಲ್ಪಡುವ ಒಂದು ಆಕರ್ಷಕ ಸಣ್ಣ ವಸ್ತುಸಂಗ್ರಹಾಲಯವಿದೆ. ಹಳೆಯ ಅಡುಗೆಮನೆ ಪರಿಕರಗಳಿಂದ ಹಿಡಿದು ಟೈಪ್‌ರೈಟರ್‌ಗಳು ಮತ್ತು ಗ್ರಾಮಫೋನ್‌ಗಳಂಥ ಸುಂದರವಾಗಿ ಸಂರಕ್ಷಿಸಲ್ಪಟ್ಟ ವಿಂಟೇಜ್ ವಸ್ತುಗಳಿವೆ. ಮಾತ್ರವಲ್ಲ, ಚಿತ್ರಕಲೆ, ಕರ್ನಾಟಕದ ಕಲಾತ್ಮಕ ಸಂಪ್ರದಾಯಗಳಿಗೆ ಸಂಬಂಧಿಸಿದ ವಾದ್ಯಗಳು ಮತ್ತು ಅವಶೇಷಗಳನ್ನು ಪ್ರದರ್ಶಿಸಲಾಗಿದೆ.

ಪಯಣದ ಹಾದಿ

ಪಯಣ ವಸ್ತುಸಂಗ್ರಹಾಲಯಕ್ಕೆ ನೇರವಾಗಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳಿಲ್ಲ. ಆದಾಗ್ಯೂ, ನೀವು ಉಬರ್ ಅಥವಾ ಓಲಾದಂತಹ ರೈಡ್-ಶೇರಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನೇರ ಪ್ರವಾಸಕ್ಕಾಗಿ ಮೈಸೂರಿನಲ್ಲಿ ಕ್ಯಾಬ್ ಬುಕ್ ಮಾಡಬಹುದು ಅಥವಾ ಆಟೋ-ರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದು.

ಭಾರತೀಯ ಪರಂಪರೆ ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಗುರಿಯೊಂದಿಗೆ ಸ್ಥಾಪಿಸಲಾದ “ಪಯಣ” ವಸ್ತುಸಂಗ್ರಹಾಲಯ ಇಂದು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ನಿತ್ಯ ಸಾವಿರಾರು ಮಂದಿ ಕುಟುಂಬ ಸಮೇತ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಇಲ್ಲಿ ಆದಾಯ ಎನ್ನುವುದಕ್ಕಿಂತ ಶಿಕ್ಷಣ ಎಂಬುದೇ ಮೂಲಮಂತ್ರವಾಗಿದೆ. ಆ ದಿಸೆಯಲ್ಲಿ ನಮ್ಮ ಪಯಣ ಸಾಗಿದೆ.
-ವಿವೇಕ್ ಶಂಕರ್,ಪ್ರಧಾನ ವ್ಯವಸ್ಥಾಪಕ, ಪಯಣ ವಸ್ತು ಸಂಗ್ರಹಾಲಯ, ಮೈಸೂರು.

ಸಂಗ್ರಹದಲ್ಲಿರುವ ವಿಂಟೇಜ್ ಕಾರುಗಳು

ಸ್ಟ್ಯಾಂಡರ್ಡ್ ಹೆರಾಲ್ಡ್ (ವೀರೇಂದ್ರ ಹೆಗ್ಗಡೆ ಅವರ ಕಾರು),

ದೇಶ: ಇಂಗ್ಲೆಂಡ್

ಮಾದರಿ: 1962

ಎಂಜಿನ್ ಶಕ್ತಿ-948 ಸಿಸಿ, 34.5 ಎಚ್‌ಪಿ

ಫಿಯೆಟ್ 501

ದೇಶ: ಇಟಲಿ

ಮಾದರಿ: 1925

ಎಂಜಿನ್ ಶಕ್ತಿ-1460 ಸಿಸಿ, 23 ಎಚ್‌ಪಿ

ಫಿಯೆಟ್ 521

ದೇಶ: ಇಟಲಿ,

ಮಾದರಿ: 1928,

ಎಂಜಿನ್ ಶಕ್ತಿ-2516 ಸಿಸಿ, 51 ಎಚ್‌ಪಿ

ಫೋರ್ಡ್ ಫರ್ಫೆಕ್ಟ್ E93A

ದೇಶ: ಯುಎಸ್ಎ,

ಮಾದರಿ: 1946,

ಎಂಜಿನ್ ಶಕ್ತಿ-3768 ಸಿಸಿ, 140 ಎಚ್‌ಪಿ

ಮೋರಿಸ್8 ಸರಣಿ ಇ

ದೇಶ: ಯುನೈಟೆಡ್ ಕಿಂಗ್‌ಡಮ್,

ಮಾದರಿ: 1948,

ಎಂಜಿನ್ ಶಕ್ತಿ-918 ಸಿಸಿ, 29.6 ಎಚ್‌ಪಿ

ಬ್ಯೂಕ್ ಸರಣಿ 50 ಸೂಪರ್8

ದೇಶ: ಯುಎಸ್ಎ,

ಮಾದರಿ: 1947,

ಎಂಜಿನ್ ಶಕ್ತಿ-4064 ಸಿಸಿ, 144 ಎಚ್‌ಪಿ

ಡೈಮ್ಲರ್ ಡಿಇ36

(ಜಯಚಾಮರಾಜೇಂದ್ರ ಒಡೆಯರ್ ಅವರ ಕಾರು)

ದೇಶ: ಇಂಗ್ಲೆಂಡ್,

ಮಾದರಿ: 1949,

ಎಂಜಿನ್ ಶಕ್ತಿ- 5460 ಸಿಸಿ, 150 ಎಚ್‌ಪಿ

ಸಿಟ್ರೊಯೆನ್ ಟ್ರಾಕ್ಷನ್ ಅವಂಟ್ II ಸಿವಿ

ದೇಶ: ಫ್ರಾನ್ಸ್,

ಮಾದರಿ: 1947,

ಎಂಜಿನ್ ಶಕ್ತಿ- 1911 ಸಿಸಿ, 56ಎಚ್ ಪಿ

ಹಿಲ್ಮನ್ ಮಿನ್ಕ್ಸ್ ಮಾರ್ಕ್/ ಹಂತ 5

ದೇಶ: ಇಂಗ್ಲೆಂಡ್,

ಮಾದರಿ: 1952,

ಎಂಜಿನ್ ಶಕ್ತಿ 1265ಸಿಸಿ, 37.5 ಎಚ್ ಪಿ

ಹಿಂದೂಸ್ತಾನ್ 14,

ದೇಶ: ಭಾರತ,

ಮಾದರಿ 1952,

ಎಂಜಿನ್ ಶಕ್ತಿ- 1477ಸಿಸಿ, 41 ಎಚ್ ಪಿ

ಹಿಂದೂಸ್ತಾನ್ ಲ್ಯಾಂಡ್‌ಮಾಸ್ಟರ್

ದೇಶ: ಭಾರತ,

ಮಾದರಿ 1956,

ಎಂಜಿನ್ ಶಕ್ತಿ- 1498ಸಿಸಿ, 41 ಎಚ್ ಪಿ

ಹಿಂದೂಸ್ತಾನ್ ರಾಯಭಾರಿ (ಮಾರ್ಕ್ I)

ದೇಶ: ಭಾರತ,

ಮಾದರಿ: 1961,

ಎಂಜಿನ್ ಶಕ್ತಿ 1476 ಸಿಸಿ, 55 ಎಚ್ ಪಿ

ಷೆವರ್ಲೆ ಬೆಲ್ ಏರ್

ದೇಶ:ಯುಎಸ್ಎ,

ಮಾದರಿ: 1955,

ಎಂಜಿನ್ ಶಕ್ತಿ 3859ಸಿಸಿ, 123 ಎಚ್ ಪಿ

ಸ್ಟುಡ್‌ಬೇಕರ್ ಚಾಂಪಿಯನ್ ರೀಗಲ್ ಕೋನೆಸ್ಟೋಗಾ ಸ್ಟೇಷನ್ ವ್ಯಾಗನ್

ದೇಶ: ಯುಎಸ್ಎ

ಮಾದರಿ: 1955

ಎಂಜಿನ್ ಶಕ್ತಿ: 3041ಸಿಸಿ, 101 ಎಚ್ ಪಿ

ಪಿಯುಗಿಯೊ 404 ಬರ್ಲೈನ್ ಗ್ರ್ಯಾನ್ ಟುರಿಸ್ಮೆ

ದೇಶ: ಫ್ರಾನ್ಸ್

ಮಾದರಿ: 1960

ಎಂಜಿನ್ ಶಕ್ತಿ: 1618ಸಿಸಿ, 64 ಎಚ್ ಪಿ

ಷೆವರ್ಲೆ ಇಂಪಾಲಾ

ದೇಶ:ಯುಎಸ್ಎ

ಮಾದರಿ: 1960

ಎಂಜಿನ್ ಶಕ್ತಿ: 3859ಸಿಸಿ, 135ಎಚ್ ಪಿ

ಹಿಲ್ಮನ್ ಹಂಟರ್

ದೇಶ: ಯುನೈಟೆಡ್ ಕಿಂಗ್ಡಮ್

ಮಾದರಿ: 1967

ಎಂಜಿನ್ ಶಕ್ತಿ: 1725ಸಿಸಿ, 74ಎಚ್ ಪಿ

ಒಪೆಲ್ ರೆಕಾರ್ಡ್ ಸರಣಿ ಬಿ

ದೇಶ: ಜರ್ಮನಿ

ಮಾದರಿ: 1965

ಎಂಜಿನ್ ಶಕ್ತಿ: 1492 ಸಿಸಿ, 59 ಎಚ್‌ಪಿ

ಸ್ಟೂಡ್‌ಬೇಕರ್ ಚಾಂಪಿಯನ್ (ಸಿ.ವಿ. ರಾಮನ್ಸ್ ಕಾರ್)

ದೇಶ: ಯುಎಸ್‌ಎ

ಮಾದರಿ: 1947

ಎಂಜಿನ್ ಶಕ್ತಿ: 2786 ಸಿಸಿ, 80 ಎಚ್‌ಪಿ

ಗ್ಯಾಜ್ 69 (ಸೋವಿಯತ್ ಆರ್ಮಿ ವೆಹಿಕಲ್)

ದೇಶ: ಯುಎಸ್‌ಎಸ್‌ಆರ್

ಮಾದರಿ: 1953

ಎಂಜಿನ್ ಶಕ್ತಿ: 2120 ಸಿಸಿ, 55 ಎಚ್‌ಪಿ

ಮರ್ಸಿಡಿಸ್ ಬೆಂಜ್

ದೇಶ: ಜರ್ಮನಿ

ಮಾದರಿ: 1926

ಎಂಜಿನ್ ಶಕ್ತಿ: 1988 ಸಿಸಿ, 38 ಎಚ್‌ಪಿ

ಸ್ಟೈರ್-ಪುಚ್ ಹ್ಯಾಫ್ಲಿಂಗರ್

ದೇಶ: ಸ್ವಿಟ್ಜರ್‌ಲ್ಯಾಂಡ್

ಮಾದರಿ: 1962

ಎಂಜಿನ್ ಶಕ್ತಿ: 643ಸಿಸಿ, 30 ಎಚ್‌ಪಿ

ಫಿಯೆಟ್ 1100 ಎಲಿಗಂಟ್ (1100/103ಇ)

ದೇಶ: ಇಟಲಿ

ಮಾದರಿ: 1957

ಎಂಜಿನ್ ಶಕ್ತಿ: 1089 ಸಿಸಿ, 40 ಎಚ್‌ಪಿ

ಫಿಯೆಟ್ 1100 ಸೂಪರ್ ಸೆಲೆಕ್ಟ್ (1100/103ಡಿ)

ದೇಶ: ಇಟಲಿ

ಮಾದರಿ: 1964

ಎಂಜಿನ್ ಶಕ್ತಿ: 1089 ಸಿಸಿ, 42 ಎಚ್‌ಪಿ

ಫಿಯೆಟ್ 1100 ಸೆಲೆಕ್ಟ್ (1100/103ಡಿ)

ದೇಶ: ಇಟಲಿ

ಮಾದರಿ: 1962

ಎಂಜಿನ್ ಶಕ್ತಿ: 1089 ಸಿಸಿ, 42ಎಚ್ ಪಿ

ಡಾಟ್ಸನ್ ಬ್ಲೂಬರ್ಡ್

(ಕನ್ನಡದ ಮೇರುನಡ ಡಾ.ವಿಷ್ಣುವರ್ಧನ್ ಅವರ ಕಾರು)

ದೇಶ: ಜಪಾನ್

ಮಾದರಿ:1983

ಎಂಜಿನ್ ಶಕ್ತಿ: 1770 ಸಿಸಿ, 88 ಎಚ್ ಪಿ

ವಿಲ್ಲಿಸ್ ಟ್ರಕ್ 475

ದೇಶ: ಯುಎಸ್ಎ

ಮಾದರಿ: 1958

ಎಂಜಿನ್ ಶಕ್ತಿ: 2199ಸಿಸಿ, 72ಎಚ್ ಪಿ

ಮೋರಿಸ್ 15/6

ದೇಶ: ಯುನೈಟೆಡ್ ಕಿಂಗ್‌ಡಮ್

ಮಾದರಿ: 1934

ಎಂಜಿನ್ ಶಕ್ತಿ: 1938ಸಿಸಿ, 36ಎಚ್ ಪಿ

ಸ್ಟ್ಯಾಂಡರ್ಡ್ 2000

ದೇಶ: ಭಾರತ

ಮಾದರಿ:1987

ಎಂಜಿನ್ ಶಕ್ತಿ: 1991ಸಿಸಿ, 83ಎಚ್ ಪಿ

ಡಾಡ್ಜ್ ಪವರ್ ವ್ಯಾಗನ್

ದೇಶ: ಯುಎಸ್ಎ

ಮಾದರಿ: 1946

ಎಂಜಿನ್ ಶಕ್ತಿ: 3769ಸಿಸಿ, 94ಎಚ್ ಪಿ

ಮರ್ಸಿಡಿಸ್ ಬೆಂಜ್ 240D(W 123)

ದೇಶ: ಜರ್ಮನಿ

ಮಾದರಿ: 1980

ಎಂಜಿನ್ ಶಕ್ತಿ: 2399ಸಿಸಿ, 72ಎಚ್ ಪಿ

ಟೊಯೋಟಾ ಕೊರೊಲ್ಲಾ 1.6GL

ದೇಶ: ಜಪಾನ್

ಮಾದರಿ: 1990

ಎಂಜಿನ್ ಶಕ್ತಿ: 1587ಸಿಸಿ, 89ಎಚ್ ಪಿ

ಕ್ಯಾಡಿಲಾಕ್ ಫ್ಲೀಟ್‌ವುಡ್

ದೇಶ: ಯುಎಸ್ಎ

ಮಾದರಿ: 1989

ಎಂಜಿನ್ ಶಕ್ತಿ: 4467ಸಿಸಿ, 155ಎಚ್ ಪಿ

ಮಜ್ಡಾ ಲೂಸ್ 1500SS(SU/SV ಸರಣಿ)

ದೇಶ: ಜಪಾನ್

ಮಾದರಿ: 1967

ಎಂಜಿನ್ ಶಕ್ತಿ: 1490ಸಿಸಿ, 84 ಎಚ್ ಪಿ

ಆಸ್ಟಿನ್ A40 ಫರೀನಾ (MKI)

ದೇಶ: ಯುನೈಟೆಡ್ ಕಿಂಗ್‌ಡಮ್

ಮಾದರಿ: 1958

ಎಂಜಿನ್ ಶಕ್ತಿ: 948ಸಿಸಿ, 34ಎಚ್ ಪಿ

ಕಾಂಟೆಸ್ಸಾ ಕ್ಲಾಸಿಕ್ 1.8L GL

ದೇಶ: ಭಾರತ

ಮಾದರಿ: 1991

ಎಂಜಿನ್ ಶಕ್ತಿ: 1817ಸಿಸಿ, 83ಎಚ್ ಪಿ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!