ಬುಕ್ಕಾಪಟ್ಟಣ : ಪ್ರವಾಸ ಸಾಹಿತ್ಯಕ್ಕೆ ಈ ಕೃತಿ ಮೇಲ್ಪಂಕ್ತಿ
ಪಂಪಾಯಾತ್ರೆ ಕನ್ನಡದಲ್ಲಿ ಪ್ರಕಟವಾದ ಎರಡನೇ ಪ್ರವಾಸ ಕಥನ. ಹದಿನೇಳು ಮತ್ತು ಹದಿನೆಂಟನೆಯ ಶತಮಾನದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರವಾಸ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
“ಹಂಪೆ ಪುಣ್ಯಕ್ಷೇತ್ರ: ಇಂಥ ಪುಣ್ಯಸ್ಥಳದಲ್ಲಿ ಇಷ್ಟು ಚೇಳು ಮೊಂಡರ ಕಪ್ಪೆಗಳು ಏಕಿವೆಯೋ ಆ ಪಂಪಾಪತಿಗೇ ಗೊತ್ತು. ಮೊಳದುದ್ದ ಮೊಂಡರಕಪ್ಪೆ, ಗೇಣುದ್ದ ಚೇಳುಗಳೇ? ಈ ಜನರಿಗೆ ಭಯವೇ ಇಲ್ಲವೇನೋ? ಅವರಿಗಂತೂ ಅದು ಸಾಮಾನ್ಯವಾಗಿ ಹೋಗಿದೆ. ಹೊಸದಾಗಿ ಅಲ್ಲಿಗೆ ಆ ದಿನ ತಾನೆ ಹೋಗಿದ್ದ ನಮಗೆಲ್ಲ ಮೈಯೆಲ್ಲ ಬೈರಿಗೆ ಹಿಡಿದಂತೆ ಆಗಿತ್ತು” ಕನ್ನಡದ ಪ್ರಭಾವಶಾಲಿ ಕವಿ ಮತ್ತು ವಿಮರ್ಶಕ ವೀ.ಸೀ(ವಿ. ಸೀತಾರಾಮಯ್ಯ) ಹೀಗೆ ಬರೆಯುತ್ತಾರೆ. ಅವರು ತಮ್ಮ ʼಪಂಪಾಯಾತ್ರೆʼ ಪ್ರವಾಸಕಥನದಲ್ಲಿ ಹಂಪೆಯ ಇಡೀ ಚಿತ್ರಣ ಮತ್ತು ವಸ್ತುಸ್ಥಿತಿಯನ್ನು ಹೃದ್ಯವಾಗಿ ಕಟ್ಟಿಕೊಟ್ಟ ಬಗೆಯಿದು. ಪಂಪಾಯಾತ್ರೆ ಕನ್ನಡದಲ್ಲಿ ಪ್ರಕಟವಾದ ಎರಡನೇ ಪ್ರವಾಸ ಕಥನ. ಹದಿನೇಳು ಮತ್ತು ಹದಿನೆಂಟನೆಯ ಶತಮಾನದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರವಾಸ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಬೇರೆ ಭಾಷೆಗಳಲ್ಲಿಯೂ ಡೇನಿಯಲ್ ಡೆಫೊ, ಲೇಡಿ ಮೇರಿ ವರ್ಟ್ಲಿ ಮೊಂಟಾಗು, ಹೆನ್ರಿ ಫೀಲ್ಡಿಂಗ್, ಟೋಬಿಯಾಸ್ ಸ್ಮೊಲೆಟ್‌ರಂಥ ಲೇಖಕರು ಪ್ರವಾಸ ಸಾಹಿತ್ಯಕ್ಕೆ ಜಾಗತಿಕಮಟ್ಟದಲ್ಲಿ ಹೊಸ ದಿಕ್ಕನ್ನು ತೋರಗೊಟ್ಟಿದ್ದರು. ಆದರೆ ಕನ್ನಡ ಸಾಹಿತ್ಯದ ಮಟ್ಟಿಗೆ ಬಂದರೆ ವಿಪುಲವಾದ ಪ್ರವಾಸ ಸಾಹಿತ್ಯ ರಚನೆಯಾಗಿರಲಿಲ್ಲ. ಕನ್ನಡದಲ್ಲಿ ಶೈಶವಾವಸ್ಥೆಯಲ್ಲೂ ಇಲ್ಲದ ಪ್ರವಾಸ ಸಾಹಿತ್ಯಕ್ಕೆ ಮೊದಲು ನಾಂದಿ ಹಾಡಿದವರು ಹೊಸಗನ್ನಡದ ಆದ್ಯ ಲೇಖಕರಾದ ಕರ್ಕಿ ವೆಂಕಟರಮಣ ಶಾಸ್ತ್ರಿ. ಅವರು 1890ರಲ್ಲಿ ʼದಕ್ಷಿಣ ಭಾರತದ ಯಾತ್ರೆʼ ಪ್ರವಾಸ ಕಥನವನ್ನು ಬರೆದರು. ಅದು ಕನ್ನಡದ ಪ್ರಪ್ರಥಮ ಪ್ರವಾಸ ಕಥನ. ಮುಂದಿನ ಮೂರು ದಶಕಗಳು ಕನ್ನಡದಲ್ಲಿ ಮತ್ತೊಂದು ಪ್ರವಾಸ ಕಥನ ಪ್ರಕಟವಾಗಲಿಲ್ಲ. ಪಂಪಾಯಾತ್ರೆ ಹೊರತಾಗಿ.

ಪಂಪಾಯಾತ್ರೆ 1920ರಲ್ಲಿ ಪ್ರಕಟವಾದ ಮೇರುಕೃತಿ. ಕನ್ನಡದ ಪ್ರವಾಸ ಸಾಹಿತ್ಯ ಜಡ್ಡು ಹಿಡಿದು ಹೋಗಿದ್ದ ಕಾಲಘಟ್ಟದಲ್ಲಿ ಈ ಕೃತಿಯು ಹೊಸ ಭಾಷ್ಯವನ್ನು ಬರೆಯಿತು. ಭರವಸೆಯನ್ನೂ ಮೂಡಿಸಿತು. ಲೇಖಕರಾದ ವೀ.ಸೀ ತಮ್ಮ ಗೆಳೆಯರೊಂದಿಗೆ ಹಂಪೆಗೆ ಹೋಗಿ, ಅಲ್ಲಿನ ಪಾಳು ಹಂಪೆಯನ್ನು ಕಂಡು ತಮಗಾದ ಅನುಭವವನ್ನು ಅಕ್ಷರಗಳ ಮೂಲಕ ಬಿತ್ತರಿಸಿದ್ದಾರೆ. ಪಂಪಾಯಾತ್ರೆ ಅರ್ಥಪೂರ್ಣ ಮತ್ತು ರಸಭರಿತ ಪ್ರಬಂಧ. ಇಲ್ಲಿ ವೀಸೀ ಅವರ ಲೋಕಾನುಭವ, ಜೀವನಾನುಭವ, ಅವರ ಒಳಗಣ್ಣಿನ ಚಿಂತನೆ, ತತ್ತ್ವಚಿಂತನೆಯ ಸಂಗಮವನ್ನು ಕಾಣಬಹುದು. ಎರಡು ದಿನಗಳ ತಮ್ಮ ಪ್ರವಾಸದಲ್ಲಿ ಇನ್ನೂರ ಐವತ್ತು ವರ್ಷಗಳ ಗತಕಾಲದ ವೈಭಯಯುತ ಚರಿತ್ರೆಯನ್ನು ಲೇಖಕರು ಆಪ್ತವಾಗಿ ಓದುಗರ ಎದುರು ತೆರೆದಿಡುತ್ತಾರೆ. ಇಡೀ ಪ್ರವಾಸ ಕಥನವು ಕೇವಲ ಇತಿಹಾಸವನ್ನು ಹೇಳದೆ, ವಾಸ್ತವತೆಯನ್ನೂ ತೆರೆದಿಟ್ಟಿದೆ. ವೀಸೀ ಅವರ ಭಾಷೆ ಮತ್ತು ವಿಷಯ ನಿರೂಪಣೆ ನೇರ ಮತ್ತು ನಿರಾಡಂಬರವಾಗಿದ್ದು ಒಂದೇ ಕಂತಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಲೇಖಕರು ತಾವಷ್ಟೇ ಮಾತನಾಡದೆ ಹಂಪೆಯ ಪ್ರತಿ ಕಲ್ಲನ್ನೂ ಮಾತಿಗೆಳೆದಿದ್ದಾರೆ. ಅವರು ಅಲ್ಲಿ ಕಾಣುವ ಪ್ರತಿ ಸಂಗತಿಯನ್ನೂ ಬೆರಗುಗಣ್ಣುಗಳಲ್ಲಿ ಹಿಡಿದಿಟ್ಟು ಓದುಗರಿಗೆ ಉಣಬಡಿಸಿದ್ದಾರೆ. ವೀಸೀ ಅವರ ಕುತೂಹಲ ಮತ್ತು ಬೆರಗು ಕಥನವನ್ನು ಗಟ್ಟಿಗೊಳಿಸಿದೆ . ಗಂಭೀರತೆ, ವಿನೋದ, ಚೇಷ್ಟೆಯೊಂದಿಗೆಯೇ ಹಂಪೆಯ ಕಥೆಯನ್ನು ದಾಟಿಸುವಲ್ಲಿ ವೀಸೀ ಯಶಸ್ವಿಯಾಗಿದ್ದಾರೆ. ಕೃತಿಯಲ್ಲಿ ಲೇಖಕರಿಗೆ ನಾಡಿನ ಇತಿಹಾಸದ ಬಗೆಗಿರುವ ಗೌರವ ಮತ್ತು ಅಭಿಮಾನ ಎದ್ದು ಕಾಣುತ್ತದೆ. ಒಟ್ಟಾರೆ ಪಂಪಾಯಾತ್ರೆ ಕಥನವು ಕನ್ನಡದ ಪ್ರವಾಸ ಸಾಹಿತ್ಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಕೃತಿ.