ಪ್ರವಾಸೋದ್ಯಮ ಕ್ಷೇತ್ರದ ಕಾಯಕಯೋಗಿ ರತ್ನಾಕರ್
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ನಿಸ್ವಾರ್ಥದಿಂದ, ಪ್ರತಿಫಲಾಪೇಕ್ಷೆ ಇಲ್ಲದೆ ಸುಮಾರು ನಲವತ್ತು ವರ್ಷಗಳ ಕಾಲ ಸೇವೆಸಲ್ಲಿಸಿದರು. ಮುಗ್ದ, ನಿರ್ಮಲ ಮನಸ್ಸಿನಿಂದ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಮಾತನಾಡಿಸುವ ವಿಶಿಷ್ಟ ವ್ಯಕ್ತಿತ್ವ ಇವರದ್ದಾಗಿತ್ತು. ಅಪಾರ ಸಂಖ್ಯೆಯ ಜನಪ್ರೀತಿ ವಿಶ್ವಾಸ ಗೌರವ ಗಳಿಸಿದ್ದರು ರತ್ನಾಕರ್. ಆರೋಗ್ಯವಂತ ದೇಹ, ಆರೋಗ್ಯವಂತ ಮನಸ್ಸು ರತ್ನಾಕರ ಅವರದ್ದು. ಎಲ್ಲರ ನೋವಿಗೆ ಮಿಡಿಯುತ್ತಿದ್ದ ಅವರ ಹೃದಯ ನವೆಂಬರ್ 3ರಂದು ಸಡನ್ನಾಗಿ ನಿಂತುಹೋಗಿದೆ. 71 ಕಡಿಮೆ ವಯಸ್ಸೇನೂ ಅಲ್ಲ. ಆದ್ರೆ ರತ್ನಾಕರ್ ಇಷ್ಟು ಬೇಗ ನಿರ್ಗಮಿಸಬಾರದಿತ್ತು.
- B.V ಶ್ರೀನಿವಾಸ ಮೂರ್ತಿ
ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಜಾತಶತ್ರು ಎಂದು ಹೆಸರು ಮಾಡಿದ್ದ ಹಿರಿಯ ಮತ್ತು ಅನುಭವಿ ಅಧಿಕಾರಿ ಶ್ರೀ ಹೆಚ್ ಟಿ ರತ್ನಾಕರ ಮೂಲತಃ ಕೋಣಂದೂರಿನವರು. ಹುಲತ್ತಿ ಗ್ರಾಮದ ತಿಮ್ಮೇಗೌಡರು ಮತ್ತು ಶ್ರೀಮತಿ ಗೌರಮ್ಮ ನವರ ಪುತ್ರರಾಗಿ ಆಗಸ್ಟ್ 9 1954 ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ವನ್ನು ಕೋಣಂದೂರಿನಲ್ಲಿ ಪಡೆದು, ಪದವಿ ಶಿಕ್ಷಣ ವನ್ನು ಉಡುಪಿಯ ಸೆಂಟ್ ಮೆಲಾಗ್ರಿಸ್ ಕಾಲೇಜ್ ನ ವಾಣಿಜ್ಯ ವಿಭಾಗಕ್ಕೆ ಸೇರಿ ಮೈಸೂರು ವಿಶ್ವವಿದ್ಯಾನಿಲಯದಿಂದ 1974ರಲ್ಲಿ ಬಿಕಾಂ ಪದವಿ ಪಡೆದರು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಇವರು ತಮ್ಮ ಸತತ ಪರಿಶ್ರಮ, ಶಿಸ್ತು, ನಾಯಕತ್ವ ಗುಣಗಳಿಂದಾಗಿ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಆಗಿ, ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸುಮಾರು 34 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.
ಕರ್ನಾಟಕ ಪ್ರವಾಸೋದ್ಯವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸರಿಸುವಲ್ಲಿ ಇವರ ಕೊಡುಗೆ ಅಪಾರ ಮತ್ತು ಅನನ್ಯ. ಇವರ ಸೇವಾ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಪ್ರಚಾರ ಮಾಡಲು ಜರ್ಮನಿ, ಕಾಂಬೋಡಿಯ ಯುಕೆ ಸಿಂಗಾಪುರ್, ಪ್ಯಾರಿಸ್ ದೇಶಗಳಲ್ಲಿ ಟ್ರಾವೆಲ್ ಮಾರ್ಟ್ಗಳ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ರೋಮ್, ಲಂಡನ್, ಅಮೆರಿಕ ವಿಯನ್ನಾ ದೇಶಗಳಲ್ಲಿ ಆಯೋಜಿಸಿದ್ದ ರೋಡ್ ಷೋಗಳಲ್ಲಿ ಭಾರತದ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದರು.

ರತ್ನಾಕರ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಪ್ರಖ್ಯಾತ ಯೋಜನೆಯಾದ ಗೋಲ್ಡನ್ ಚಾರಿಯಟ್ ಪ್ರಾಜೆಕ್ಟ್ನಲ್ಲಿ ತಮ್ಮನ್ನು ತೊಡಗಿಸಿಕೊಂಡು ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿದರು. ಇದಲ್ಲದೆ ಕರ್ನಾಟಕದಲ್ಲಿ ಪ್ರವಾಸೋದ್ಯಮ ನೀತಿ ರೂಪಿಸುವಲ್ಲಿ, ಪ್ರವಾಸೋದ್ಯಮವನ್ನು ಪ್ರಚಾರಗೊಳಿಸಲು ರೋಡ್ ಷೋ, ಸಮ್ಮೇಳನ ಮತ್ತು ಉತ್ಸವ ಆಯೋಜಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯದ ಸಂಸದೀಯ ನಿಯೋಗವು ವಿದೇಶಗಳಿಗೆ ಭೇಟಿ ನೀಡುವಾಗ ಕಾರ್ಯಕ್ರಮವನ್ನು ಇವರೇ ನಿಭಾಯಿಸುತ್ತಿದ್ದರು. ಪ್ರವಾಸೋದ್ಯಮ ಇಲಾಖೆಯ ಪ್ರಖ್ಯಾತ ಯೋಜನೆಯಾದ ಚಿಣ್ಣರ ಪ್ರವಾಸ ಯೋಜನೆಯನ್ನು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಕೇಂದ್ರದ ರೈಲ್ವೆ ಸಂಸ್ಥೆ ಯ ಸಹಯೋಗದೊಂದಿಗೆ ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ಟೂರಿಸಂ ಸೊಸೈಟಿ ಸ್ಥಾಪನೆಯಲ್ಲಿಯೂ ಇವರು ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮಾರ್ಗದರ್ಶಕರಾಗಿ ಹಲವಾರು ಯೋಜನೆ ರೂಪಿಸಿ ಜಾರಿಗೆ ತರುವಲ್ಲಿಯ ಹಿಂದಿನ ಶಕ್ತಿ ಇವರಾಗಿದ್ದರೆಂದರೆ ಅತಿಶಯೋಕ್ತಿಯಲ್ಲ.
2014ರಲ್ಲಿ ಇವರು ವಯೋನಿವೃತ್ತಿ ಹೊಂದಿದರು. ಇಲಾಖೆಯು ಇವರ ಅಪಾರ ಅನುಭವ ಹಾಗೂ ಪರಿಣತಿಯನ್ನು ಪರಿಗಣಿಸಿ ನಿವೃತ್ತಿಯ ನಂತರ ವಿವಿಧ ವಿಭಾಗಗಳಿಗೆ ಸಲಹೆಗಾರರನ್ನಾಗಿ ನೇಮಿಸಿತು. ಜಂಗಲ್ ಲಾಡ್ಜ್ & ರೆಸಾರ್ಟ್, ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯು ನಡೆಸುತ್ತಿರುವ ಹೋಟೆಲ್ ವಿಭಾಗ ಇದರಲ್ಲಿ ಪ್ರಮುಖವಾದುವು. ಕರ್ನಾಟಕ ಪ್ರವಾಸೋದ್ಯಮದ ವಾಣಿಜ್ಯ ಅಂಗವಾಗಿರುವ ಅವರ ನೆಚ್ಚಿನ ಕಚೇರಿ ಕೆ ಎಸ್ ಟಿ ಡಿ ಸಿಯಲ್ಲಿ ಸಲಹೆಗಾರರಾಗಿ ಕೊನೆತನಕ ಸೇವೆ ಸಲ್ಲಿಸಿದರು.. ಮಲೆನಾಡಿನ ರೈತ ಕುಟುಂಬದಲ್ಲಿ ಜನಿಸಿ ಬಡತನ ಬವಣೆಯನ್ನು ಅನುಭವಿಸಿ ಬೆಳೆದ ರತ್ನಾಕರ್ ಅವರದ್ದು ಸೂಕ್ಷ್ಮ ಸಂವೇದನಾಶೀಲ ಸಜ್ಜನ ವ್ಯಕ್ತಿತ್ವ. ಇವರು ಬೆಂಗಳೂರಿನಲ್ಲಿ ತಮ್ಮ ಜೀವನವನ್ನು ಕಟ್ಟಿ ಕೊಂಡವರು. ತಮ್ಮ ಕಾರ್ಯವೈಖರಿಯಿಂದ ಅಪಾರ ಅನುಭವದಿಂದ ತಾಳ್ಮೆ, ಸ್ನೇಹಶೀಲತೆಯಿಂದ, ಬಹುದೊಡ್ಡ ಆಪ್ತ ವಲಯ ಹೊಂದಿದ್ದರು. ಇಲಾಖೆಗೆ ಯಾವುದೇ ಐ ಎ ಎಸ್, ಕೆ. ಎ. ಎಸ್ ಉನ್ನತ ಅಧಿಕಾರಿಗಳು ನೇಮಕವಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಮೊತ್ತ ಮೊದಲ ಹೆಸರು ಕರೆಯುತ್ತಿದ್ದುದೇ ರತ್ನಾಕರ ರವರನ್ನು. ಅಷ್ಟರ ಮಟ್ಟಿಗೆ ಇವರು ಪ್ರಖ್ಯಾತರಾಗಿದ್ದರು. ಸದಾ ಒಂದು ಮುಗುಳ್ನಗೆ. ಮೃದು ಮಾತು. ಯಾರ ಬಗ್ಗೆಯೇ ಆಗಲಿ, ಒಂದೇ ಒಂದು ಕಹಿ ಮಾತನ್ನು ಆಡಿದವರಲ್ಲ. ಅವರ ಮಾತಿನಲ್ಲಿ ಒಂದು ನೆಗೆಟಿವ್ ಶಬ್ದ ಕೂಡಾ ಬಂದದ್ದು ಗೊತ್ತಿಲ್ಲ. ಅಂಥ ಸಜ್ಜನಿಕೆ. ಸದಾ ದುಡಿಮೆಯ ಧ್ಯಾನ. ಇತ್ತೀಚಿನ ವರ್ಷಗಳಲ್ಲಿ ಇಲಾಖೆಯ ಕೆಲಸಕ್ಕಾಗಿ ಬಹಳಷ್ಟು ದೇಶಗಳನ್ನು ಸುತ್ತಿದ್ದರು. ಯಾವಾಗ ಫೋನ್ ಮಾಡಿದ್ರೂ ನಾಳೆ ಜರ್ಮನಿಗೆ ಹೊರಟೆ; ಮುಂದಿನ ವಾರ ಲಂಡನ್ನಿನಲ್ಲಿ ಕಾರ್ಯಕ್ರಮ ಇದೆ, next month ದುಬೈಗೆ, ಪ್ಯಾರಿಸ್ ಗೆ ಹೋಗ್ತಾ ಇದೀನಿ... ಹೀಗೆ ಮಾತು. ಇಲಾಖೆಯ ಕೆಲಸವನ್ನು ಶುದ್ಧ ಹಸ್ತದಿಂದ, ಇಷ್ಟೊಂದು ಶ್ರದ್ಧೆಯಿಂದ ಮಾಡಬಹದೇ ಅಂತ ಆಶ್ಚರ್ಯ ಆಗುವಷ್ಟು ಸೇವಾ ಮನೋಭಾವ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ನಿಸ್ವಾರ್ಥದಿಂದ, ಪ್ರತಿಫಲಾಪೇಕ್ಷೆ ಇಲ್ಲದೆ ಸುಮಾರು ನಲವತ್ತು ವರ್ಷಗಳ ಕಾಲ ಸೇವೆಸಲ್ಲಿಸಿದರು. ಮುಗ್ದ, ನಿರ್ಮಲ ಮನಸ್ಸಿನಿಂದ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಮಾತನಾಡಿಸುವ ವಿಶಿಷ್ಟ ವ್ಯಕ್ತಿತ್ವ ಇವರದ್ದಾಗಿತ್ತು. ಅಪಾರ ಸಂಖ್ಯೆಯ ಜನಪ್ರೀತಿ ವಿಶ್ವಾಸ ಗೌರವ ಗಳಿಸಿದ್ದರು ರತ್ನಾಕರ್. ಆರೋಗ್ಯವಂತ ದೇಹ, ಆರೋಗ್ಯವಂತ ಮನಸ್ಸು ರತ್ನಾಕರ ಅವರದ್ದು. ಎಲ್ಲರ ನೋವಿಗೆ ಮಿಡಿಯುತ್ತಿದ್ದ ಅವರ ಹೃದಯ ನವೆಂಬರ್ 3ರಂದು ಸಡನ್ನಾಗಿ ನಿಂತುಹೋಗಿದೆ. 71 ಕಡಿಮೆ ವಯಸ್ಸೇನೂ ಅಲ್ಲ. ಆದ್ರೆ ರತ್ನಾಕರ್ ಇಷ್ಟು ಬೇಗ ನಿರ್ಗಮಿಸಬಾರದಿತ್ತು.
ಸೇವಾ ಅವಧಿಯಲ್ಲಿ ಅವರು ತೋರಿದ ತ್ಯಾಗ, ನಿಷ್ಠೆ ಮತ್ತು ಕಾರ್ಯತತ್ಪರತೆ ಶ್ಲಾಘನಾರ್ಹ. ಪ್ರವಾಸೋದ್ಯಮ ಇಲಾಖೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ನಿವೃತ್ತಿಯ ನಂತರವೂ ತಮ್ಮ ಅಮೂಲ್ಯ ಜ್ಞಾನ ಮತ್ತು ಅನುಭವವನ್ನು ಸರ್ಕಾರದ ವಿನಂತಿಯ ಮೇರೆಗೆ ಹಂಚಿಕೊಂಡು, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಷ್ಟೋ ಬಾರಿ ತುಂಬಾ ಜೋರಾಗಿ ಮಾತಾಡುವ ಸಂದರ್ಭದಲ್ಲಿ ಸಮಾಧಾನ ಮಾಡುತ್ತಿದ್ದರು. ಸರಕಾರದ ಜೊತೆಗೆ ಸಂಯಮದಿಂದ ವ್ಯವಹಾರ ಮಾಡೋಕೆ ಹೇಳಿ ಕೊಡುತ್ತಿದ್ದರು. ಕರ್ನಾಟಕದ ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರದ ನೂರಾರು ಜನರಿಗೆ ಅವರೊಂದಿಗೆ ಆಪ್ತತೆ ಇದೆ. ಎಲ್ಲಾ ಸಚಿವರಿಗೆ ಅವರು ಅಪ್ತರಾಗಿದ್ದರು. Karnataka tourism policy ಎರಡುಬಾರಿ ಕರಡು ನಡೆಯುವಾಗ ಅವರು ಇದ್ದರು. ಸಚಿವರಲ್ಲಿ, ಅಧಿಕಾರಿಗಳಲ್ಲಿ ಇಲ್ಲದ ಮಾಹಿತಿ ರತ್ನಾಕರ್ ಅವರ ಬಳಿ ಇರುತ್ತಿತ್ತು. ಅವರಿಗಿದ್ದ ಎರಡೇ ದುರಭ್ಯಾಸ ಅಂದ್ರೆ ತಾಳ್ಮೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವ ಗುಣ.
-ರಾಧಾಕೃಷ್ಣ ಹೊಳ್ಳ