ಎಚ್ಚರ.... ಈ ನಗರಗಳಲ್ಲಿ ಪ್ರವಾಸ ಅಪಾಯ!
ಯಾವುದೇ ಹೊಸ ಜಾಗಗಳಿಗೆ ಪ್ರವಾಸ ಕೈಗೊಳ್ಳುವ ಮೊದಲು ಆ ತಾಣದ ಬಗ್ಗೆ ಸ್ಪಲ್ಪ ತಿಳಿದುಕೊಳ್ಳುವುದು ಅಗತ್ಯ ಎಂದು ಫೋರ್ಬ್ಸ್ ಅಡ್ವೈಸರ್ ವರದಿ ಎಚ್ಚರಿಸಿದೆ. ಇದಲ್ಲದೇ ಪ್ರವಾಸಿಗರಾಗಿ ಭೇಟಿ ನೀಡಲೇಬಾರದ ಅತ್ಯಂತ ಅಪಾಯಕಾರಿ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೊತೆಗೆ ಅತ್ಯಂತ ಸುರಕ್ಷಿತವಾದ ತಾಣಗಳ ಬಗ್ಗೆಯೂ ಇಲ್ಲಿ ವಿವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರವಾಸಿ ವ್ಲಾಗರ್ಗಳ ಸಂಖ್ಯೆ ಹೆಚ್ಚುತ್ತಿದೆ. ಹೊರಗೆ ಹೋಗಿ ಹೊಸ ಹೊಸ ಜಗತ್ತನ್ನು ಆನ್ವೇಷಿಸುವ ಮೂಲಕ ಅದರಿಂದಲೇ ಜೀವನೋಪಾಯಕ್ಕಾಗಿ ಹಣ ಗಳಿಸುತ್ತಿರುವ ಅನೇಕ ಜನರನ್ನು ಕಾಣಬಹುದು. ಆದರೆ ಪ್ರಯಾಣವು ಅಂದುಕೊಳ್ಳುವಷ್ಟು ಸುಲಭವಲ್ಲ. ಕೆಲವೊಂದು ತಾಣಗಳು ಸುಂದರವಾಗಿದ್ದರೂ ಅಷ್ಟೇ ಅಪಾಯಕಾರಿ ಕೂಡಾ ಹೌದು!. ಪ್ರವಾಸಿಗರಿಗೆ ಹೋಗಲು ಸುರಕ್ಷಿತವಾಗಿಲ್ಲದ 10 ನಗರಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ. ವಿಶೇಷವಾಗಿ ನೀವು ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ಈ ನಗರಗಳಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಅನ್ನೋದಾದ್ರೆ ನಿಮ್ಮಿಷ್ಟ.
ಟಾಪ್ 10 ಅಪಾಯಕಾರಿ ಸ್ಥಳಗಳು:
ವೆನಿಜುಯೆಲಾದ ಕ್ಯಾರಕಾಸ್ ನಗರ
ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿರುವ ವೆನಿಜುಯೆಲಾದ ಒಂದು ನಗರವು ಅತ್ಯಂತ ಅಪಾಯಕಾರಿ ತಾಣಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಕ್ಯಾರಕಾಸ್ ನಗರಕ್ಕಿರುವ ಮತ್ತೊಂದು ಹೆಸರೇ 'ದರೋಡೆಕೋರರ ನಗರ'. ಇಲ್ಲಿ ಪ್ರತಿದಿನ ಸಾಕಷ್ಟು ಅಪರಾಧಗಳು ನಡೆಯುತ್ತವೆ. ವಿಶೇಷವಾಗಿ ನೀವು ಪ್ರವಾಸಿಗರಾಗಿದ್ದರೆ ನಿಮ್ಮನ್ನು ಇಲ್ಲಿ ಸುಲಭವಾಗಿ ನಂಬಿಸಿ ದರೋಡೆ ಮಾಡಿಕೊಂಡು ಪರಾರಿಯಾಗುವವರೇ ಹೆಚ್ಚು.

ಪಾಕಿಸ್ತಾನದ ಕರಾಚಿ
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಕರಾಚಿ ನಗರ ಅತ್ಯಂತ ಅಪಾಯಕಾರಿ ತಾಣಗಳಲ್ಲಿ ಎರಡನೇ ಸ್ಥಾನದಲ್ಲಿದೆ. ವಿಶೇಷವಾಗಿ ಅಪರಾಧ, ಹಿಂಸಾಚಾರ, ಭಯೋತ್ಪಾದಕ ಬೆದರಿಕೆಗಳು ಮತ್ತು ನೈಸರ್ಗಿಕ ವಿಕೋಪಗಳಂಥ ಅಪಾಯಗಳಿಂದಾಗಿ, ಕರಾಚಿ ಪ್ರವಾಸಿಗರಿಗೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ನೀವು ಪಾಕಿಸ್ತಾನಕ್ಕೆ ಭೇಟಿ ನೀಡಲು ಬಯಸಿದರೆ, ಈ ನಗರದಿಂದ ದೂರವಿರಿ.
ಇನ್ನುಳಿದ ಅಪಾಯಕಾರಿ ನಗರಗಳು
ಬರ್ಮಾದ ಯಾಂಗೂನ್ ನಗರವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಿವೆ. ನೈಜೀರಿಯಾದ ಲಾಗೋಸ್ ನಗರವೂ ಈ ಪಟ್ಟಿಯಲ್ಲಿದೆ. ಈ ನಗರದಲ್ಲಿ ದರೋಡೆ, ಕಳ್ಳತನ ಮತ್ತು ವಂಚನೆ ಸಾಮಾನ್ಯವಾಗಿದೆ. ಪ್ರವಾಸಿಗರನ್ನು ಅಲ್ಲಿಯವರು ಬೇಗನೇ ಕಂಡು ಹಿಡಿಯುತ್ತಾರೆ. ಆದ್ದರಿಂದ ಈ ನಗರಗಳು ಪ್ರವಾಸಿಗರಿಗೆ ಸುರಕ್ಷಿತವಲ್ಲ. ವಿಶೇಷವಾಗಿ ನೀವು ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ಈ ನಗರಗಳಿಂದ ದೂರವಿರಿ. ಇದರ ನಂತರ ಮನಿಲಾ, ಢಾಕಾ, ಬೊಗೋಟಾ, ಕೈರೋ, ಮೆಕ್ಸಿಕೊ ಮತ್ತು ಈಕ್ವೆಡಾರ್‌ನ ಕ್ವಿಟೊ ನಗರಗಳು ಬರುತ್ತವೆ. ನಿಮ್ಮ ಪ್ರವಾಸದ ಸಮಯದಲ್ಲಿ ಈ ನಗರಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.

ಸುರಕ್ಷಿತ ನಗರಗಳು ಯಾವುವು?
ಫೋರ್ಬ್ಸ್ ಅಡ್ವೈಸರ್ ವರದಿಯಲ್ಲಿ ಸುರಕ್ಷಿತ ಸ್ಥಳಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸಿಂಗಾಪುರ ಪಡೆದುಕೊಂಡಿದೆ. ಎರಡನೇ ಹೆಸರು ಜಪಾನ್‌ನ ಟೋಕಿಯೊ. ಮೂರನೇ ಹೆಸರು ಕೆನಡಾದ ಟೊರೊಂಟೊ. ಇದರ ನಂತರ ಆಸ್ಟ್ರೇಲಿಯಾದ ಸಿಡ್ನಿ, ನಂತರ ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ಈ ಪಟ್ಟಿಯಲ್ಲಿದೆ. ಆರನೇ ಸ್ಥಾನದಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್,ಅದರ ನಂತರದ ಕೊನೆಯ ನಾಲ್ಕು ಸ್ಥಾನಗಳಲ್ಲಿ ದಕ್ಷಿಣ ಕೊರಿಯಾದ ಸಿಯೋಲ್, ಜಪಾನ್‌ನ ಒಸಾಕಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮತ್ತು ನೆದರ್ಲೆಂಡ್ಸ್ ನ ಆಮ್ ಸ್ಟರ್ ಡ್ಯಾಮ್ ಕೂಡ ಸೇರಿವೆ. ಈ ನಗರಗಳು ಯಾವುದೇ ಪ್ರವಾಸಿಗರಿಗೆ ಸುರಕ್ಷಿತವಾಗಿದೆ. ನೀವು ಇಲ್ಲಿ ಸುಲಭವಾಗಿ ಸುತ್ತಾಡಬಹುದು ಮತ್ತು ನೀವು ಬಯಸಿದರೆ ಇಲ್ಲಿ ಏಕಾಂಗಿಯಾಗಿ ಕೂಡ ಪ್ರಯಾಣಿಸಬಹುದು.
ಸುರಕ್ಷತಾ ಸಿದ್ಧತೆ ಹೀಗಿರಲಿ
ಯಾವುದೇ ಪ್ರವಾಸವನ್ನು ಕೈಗೊಳ್ಳುವ ಮೊದಲು ಸಿದ್ಧತೆ ಅತ್ಯಂತ ಅಗತ್ಯ. ಪ್ರಯಾಣಕ್ಕೆ ತೆರಳುವ ಮುನ್ನ ನೀವು ಪ್ರವಾಸ ಹೋಗಬೇಕೆಂದಿರುವ ಸ್ಥಳದ ಅನ್ವೇಷಣೆ ಮಾಡಿ. ಸಾಧ್ಯವಾದರೆ ಅಲ್ಲಿಗೆ ಹೋಗಿ ಬಂದಿರುವ ನಿಮ್ಮ ಸ್ನೇಹಿತರಿದ್ದರೆ ಅವರಿಂದ ಮಾಹಿತಿಯ ಪಡೆದುಕೊಂಡಿರಿ. ಸಾಕಷ್ಟು ಜಾಗಗಳಲ್ಲಿ ವಿದೇಶಿಗರೆಂದಾಕ್ಷಣ ಮೋಸ ಮಾಡುವವರೇ ಹೆಚ್ಚು. ತಿಳಿಯದ ಸ್ಥಳಕ್ಕೆ ಹೋದಂಥ ಸಂದರ್ಭದಲ್ಲಿ ಅನಗತ್ಯ ಗೊಂದಲ ಮಾಡಿಕೊಳ್ಳುವುದಕ್ಕಿಂತ ರಸ್ತೆ ವಿವರ ಪಡೆಯಲು ಸ್ಥಳೀಯರ ಸಹಾಯ ಪಡೆಯುವುದು ಕೂಡಾ ಉತ್ತಮ. ನಿಮ್ಮೊಂದಿಗೆ ತಂದ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿಡುವುದು ಅತ್ಯಂತ ಅಗತ್ಯ. ಏನೇ ಆದರೂ ಕೂಡ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳಿ. ಪವರ್ ಬ್ಯಾಂಕ್ ಕೂಡಾ ನಿಮ್ಮ ಜೊತೆಗಿರಲಿ. ಕೆಲವೊಂದು ತಾಣಗಳು ನೋಡಲು ಸುಂದರವಾಗಿದ್ದರೂ ಅಷ್ಟೇ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.