ಗೂಗಲ್ ಸರ್ಚ್ ಕೊಟ್ಟಿದೆ ಇಂಟರೆಸ್ಟಿಂಗ್ ಮಾಹಿತಿ!
ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ. ಇಲ್ಲಿ ಅನೇಕ ಉದ್ಯಾನವನಗಳಿವೆ, ಲಾಲ್ ಬಾಗ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೃಗಾಲಯ, ನಂದಿ ಬೆಟ್ಟಗಳು, ಕಬ್ಬನ್ ಪಾರ್ಕ್, ಬೆಂಗಳೂರು ಅರಮನೆ, ಹಾಗೆಯೇ ಒಂದೂವರೆ ಗಂಟೆ ದೂರದಲ್ಲಿ ಮೈಸೂರಿನಂಥ ಸ್ಥಳವೂ ಇದೆ.
- ಮುನಾಫ್ ಎಂಡಿ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಅನೇಕ ಸುಂದರ ಮತ್ತು ಅದ್ಭುತವಾದ ಪ್ರವಾಸಿ ಸ್ಥಳಗಳಿವೆ. ಕಾಶ್ಮೀರ ಕಣಿವೆಯಲ್ಲಿರುವ ಹಿಮಭರಿತ ಸ್ಥಳಗಳು, ದೆಹಲಿಯ ಕೆಂಪು ಕೋಟೆ, ಆಗ್ರಾದ ತಾಜ್ ಮಹಲ್, ಮಹಾರಾಷ್ಟ್ರದ ಅದ್ಭುತ ಅಜಂತಾ ಎಲ್ಲೋರಾ ಶಿಲ್ಪಗಳು ಮತ್ತು ಕರ್ನಾಟಕದ ಹಂಪಿ ಸೇರಿದಂತೆ ನೂರಾರು ಸ್ಥಳಗಳು ಪ್ರವಾಸಿಗರನ್ನು ನಿಬ್ಬೆರಗಾಗಿಸುವುದಂತೂ ಖಂಡಿತ. ಶ್ರೀಮಂತ ವಾಸ್ತುಶಿಲ್ಪಗಳಿಂದಾಗಿಯೇ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಇಂಟರ್ ನೆಟ್ ನಲ್ಲಿ ವಿದೇಶಿ ಪ್ರವಾಸಿಗರು ಭಾರತದ ಯಾವ ತಾಣಗಳನ್ನು ಹೆಚ್ಚು ಹುಡುಕಿದ್ದಾರೆ ಎಂಬ ವರದಿ ಬಿಡುಗಡೆಯಾಗಿದೆ. ಆ ಪಟ್ಟಿಯ ಪ್ರಮುಖ ತಾಣಗಳು ಇಲ್ಲಿವೆ.
ಹೈದರಾಬಾದ್:
ತೆಲಂಗಾಣದ ರಾಜಧಾನಿಯಾಗಿರುವ ಹೈದರಾಬಾದ್ ವಿದೇಶಿಗರಿಂದ ಅತೀ ಹೆಚ್ಚು ಹುಡುಕಲ್ಪಟ್ಟ ನಗರಗಳಲ್ಲೊಂದು. ಈ ನಗರವನ್ನು ನೋಡಲು ವಿದೇಶೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೈದರಾಬಾದ್ ಚಾರ್ಮಿನಾರ್, ಟ್ಯಾಂಕ್ ಬಂಡ್, ಬಿರ್ಲಾ ಮಂದಿರ, ಎನ್ ಟಿ ಆರ್ ಗಾರ್ಡನ್ಸ್, ರಾಮೋಜಿ ಫಿಲ್ಮ್ ಸಿಟಿ, ರಾಜೀವ್ ಗಾಂಧಿ ರಾಷ್ಟ್ರೀಯ ಮೃಗಾಲಯ ಉದ್ಯಾನವನ ಮತ್ತು ಇನ್ನೂ ಅನೇಕ ಪ್ರವಾಸಿತಾಣಗಳನ್ನೊಳಗೊಂಡಿದೆ.

ಬೆಂಗಳೂರು:
ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ. ಇಲ್ಲಿ ಅನೇಕ ಉದ್ಯಾನವನಗಳಿವೆ, ಲಾಲ್ ಬಾಗ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೃಗಾಲಯ, ನಂದಿ ಬೆಟ್ಟಗಳು, ಕಬ್ಬನ್ ಪಾರ್ಕ್, ಬೆಂಗಳೂರು ಅರಮನೆ, ಹಾಗೆಯೇ ಒಂದೂವರೆ ಗಂಟೆ ದೂರದಲ್ಲಿ ಮೈಸೂರಿನಂಥ ಸ್ಥಳವೂ ಇದೆ. ವಿದೇಶಿ ಪ್ರವಾಸಿಗರು ಇವುಗಳನ್ನು ನಿಯಮಿತವಾಗಿ ಭೇಟಿ ಮಾಡಲು ಬರುತ್ತಾರೆ. ಅದಕ್ಕಾಗಿಯೇ ಅವರು ಇಂಟರ್ನೆಟ್ ನಲ್ಲಿ ಇವುಗಳ ಬಗ್ಗೆ ಸಾಕಷ್ಟು ಹುಡುಕಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ಹಂಪಿ:
ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಹಂಪಿ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಮೂಲವಾಗಿದೆ. ಇಲ್ಲಿ ವಿಠ್ಠಲ ದೇವಸ್ಥಾನ, ತುಂಗಭದ್ರಾ ನದಿ, ವಿರೂಪಾಕ್ಷ ದೇವಸ್ಥಾನ, ಕಮಲ ಮಹಲ್, ಮತ್ತು ಇನ್ನೂ ಅನೇಕ ಅದ್ಭುತ ಪ್ರವಾಸಿ ಸ್ಥಳಗಳಿವೆ. ಇದಲ್ಲದೆ, ಹಂಪಿ ಶ್ರೀಮಂತ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿನ ವಾಸ್ತು ಶಿಲ್ಪಗಳಿಗೆ ವಿದೇಶಿಗರು ಮನಸೋತಿದ್ದು, ಸಾಕಷ್ಟು ಹೊರದೇಶಗಳಿಂದ ಬಂದ ಪ್ರವಾಸಿಗರನ್ನು ಇಲ್ಲಿ ಕಾಣಬಹುದು.

ತಮಿಳುನಾಡು:
ಚೆನ್ನೈ ಬಳಿಯ ಮಹಾಬಲೇಶ್ವರಂ, ಕನ್ಯಾಕುಮಾರಿ, ಶ್ರೀರಂಗಂ ಮತ್ತು ರಾಮೇಶ್ವರಂನಂಥ ಅನೇಕ ಪ್ರವಾಸಿ ಸ್ಥಳಗಳ ಬಗ್ಗೆ ವಿದೇಶಿಗರು ಸಾಕಷ್ಟು ಹುಡುಕಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಇದಲ್ಲದೆ, ಮರೀನಾ ಬೀಚ್, ಬ್ರಿಟಿಷ್ ಯುಗದ ವಸ್ತುಸಂಗ್ರಹಾಲಯಗಳು ಮತ್ತು ಸ್ಮಾರಕಗಳಂಥ ಇನ್ನೂ ಅನೇಕ ಸ್ಥಳಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಮಹಾರಾಷ್ಟ್ರ:
ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈಗೆ ವಿದೇಶಿಯರು ಭೇಟಿ ನೀಡುತ್ತಾರೆ. ಮುಂಬೈ ವಿದೇಶಿಯರಿಗೆ ಅತ್ಯಂತ ನೆಚ್ಚಿನ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ತಾಜ್ ಹೊಟೇಲ್ ಹೆಚ್ಚಿನ ಸಂಖ್ಯೆಯ ವಿದೇಶಿಯರನ್ನು ಆಕರ್ಷಿಸುತ್ತದೆ. ಇದಲ್ಲದೆ, ಹೆಚ್ಚಿನ ಸಂಖ್ಯೆಯ ವಿದೇಶಿಗರು ಮಹಾರಾಷ್ಟ್ರದ ಅಜಂತ ಎಲ್ಲೋರಾ ಶಿಲ್ಪಗಳು ಮತ್ತು ಲೋನಾವಾಲಾದಂಥ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಜೈಪುರ:
ಪಿಂಕ್ ಸಿಟಿ ಎಂದು ಹೆಸರಾಗಿರುವ ರಾಜಸ್ಥಾನದ ರಾಜಧಾನಿ ಜೈಪುರವು ಅನೇಕ ಅದ್ಭುತ ಪ್ರಾಚೀನ ಸ್ಮಾರಕಗಳನ್ನು ಹೊಂದಿದೆ. ಪ್ರಿ ವೆಡ್ಡಿಂಗ್ ಫೊಟೋಶೂಟ್ ಗಾಗಿ ಹೆಚ್ಚಿನ ಜನರು ಈ ನಗರವನ್ನು ಆಯ್ಕೆ ಮಾಡಿಕೊಳುತ್ತಾರೆ . ಈ ನಗರವನ್ನು ಕಣ್ತುಂಬಿಸಿಕೊಳ್ಳಲು ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುವುದನ್ನು ಕಾಣಬಹುದು.

ಉತ್ತರ ಭಾರತ:
ಭಾರತದ ರಾಜಧಾನಿ ದೆಹಲಿಯಲ್ಲಿ ಹಲವು ಹಳೆಯ ಸ್ಮಾರಕಗಳಿವೆ. ಇಲ್ಲಿ, ಕೆಂಪು ಕೋಟೆ, ಕುತುಬ್ ಮಿನಾರ್, ದೆಹಲಿ ಬಳಿಯ ತಾಜ್ ಮಹಲ್, ಕರೋಲ್ ಬಾಗ್, ಚಾಂದನಿ ಚೌಕ್, ಆನ್ ಮಾರುಕಟ್ಟೆ, ಲಜಪತ್ ನಗರ ಮತ್ತು ಪ್ರಶಾಂತ್ ಲೋಧಿ ಉದ್ಯಾನವನಗಳಂಥ ಅದ್ಭುತ ಸ್ಮಾರಕಗಳು ವಿದೇಶಿ ಪ್ರವಾಸಿಗರನ್ನು ಬಹಳ ಆಕರ್ಷಿಸಿವೆ.

ಈ ಎಲ್ಲಾ ಸ್ಥಳಗಳು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದು, ಇಲ್ಲಿನ ನೈಸರ್ಗಿಕ ಸೌಂದರ್ಯದ ಜೊತೆಗೆ ಶ್ರೀಮಂತ ವಾಸ್ತುಶಿಲ್ಪಕ್ಕೆ ಮನಸೋತಿದ್ದಾರೆ. ಭವ್ಯವಾದ ಐತಿಹಾಸಿಕ ತಾಣಗಳಿಂದ ಹಿಡಿದು ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟ ಶ್ರೀಮಂತ ಗಿರಿಧಾಮಗಳವರೆಗೆ ಭಾರತವು ಅಸಂಖ್ಯಾತ ಪ್ರವಾಸಿ ತಾಣಗಳು ವಿದೇಶಿಗರ ಮನಸ್ಸಿನಲ್ಲಿ ನೆಲೆಯೂರಿರುವುದಂತೂ ಸುಳಲ್ಲ.