ಬೇಸಿಗೆಯಲ್ಲಿ ಈ ಹೊಟೇಲ್ ಮರೆಯಾಗುತ್ತೆ!
ಈ ಐಸ್ ಹೊಟೇಲ್ ವಿಶ್ವದ ಅತಿದೊಡ್ಡ ಹಿಮದ ಹೊಟೇಲ್ ಎಂದು ಪ್ರಸಿದ್ಧವಾಗಿದ್ದು, ಇದು ಸುಮಾರು 64,600 ಚದರ ಅಡಿ ವಿಸ್ತಾರವಾಗಿದೆ. ಇಲ್ಲಿನ ತಾಪಮಾನ ಕಡಿಮೆಯಾದಾಗ ಮತ್ತು ಟಾರ್ನ್ ನದಿಯು ಹೆಪ್ಪುಗಟ್ಟಲು ಪ್ರಾರಂಭಿಸಿದಾಗ, ಕಟ್ಟಡ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗ ಮಾತ್ರ ಕಲಾವಿದರು ಹೊಟೇಲ್ನ ವಿನ್ಯಾಸಕ್ಕೆ ಮುಂದಾಗುತ್ತಾರೆ. ಈ ಐಸ್ ಹೊಟೇಲ್ ಪ್ರತೀ ವರ್ಷದ ಡಿಸೆಂಬರ್ ಮತ್ತು ಏಪ್ರಿಲ್ ತಿಂಗಳ ನಡುವೆ ಮಾತ್ರ ಅಸ್ತಿತ್ವದಲ್ಲಿರುತ್ತದೆ.
- ಸಂತೋಷ್ ರಾವ್ ಪೆರ್ಮುಡ
ಮನೆಯ ಪರಿಕಲ್ಪನೆಯೇ ಇಂದು ಬದಲಾಗಿದ್ದು, ಅದು ಉದ್ಯಮವಾಗಿಯೂ ಬೆಳೆದುನಿಂತಿದೆ.ಬರಿಯ ಮನೆಗಳಷ್ಟೇ ಅಲ್ಲದೆ ವಿವಿಧ ರೀತಿಯ ಪಂಚತಾರಾ ಹೊಟೇಲ್‌ಗಳು, ರೆಸಾರ್ಟ್‌ಗಳು ಮತ್ತು ವಿಲ್ಲಾಗಳು ಸಹ ಇಂದು ಬಾಡಿಗೆಗೆ ಲಭಿಸುತ್ತವೆ. ಆದರೆ ಇಲ್ಲೊಂದು ಹೊಟೇಲ್ ಇದ್ದು, ಇದು ಕೇವಲ ಚಳಿಗಾಲದಲ್ಲಷ್ಟೇ ನಿರ್ಮಾಣವಾಗಿ ಬೇಸಿಗೆ ಬಂದಾಕ್ಷಣ ಮಾಯವಾಗಿ ಬಿಡುತ್ತದೆ. ಅದುವೇ ಸಂಪೂರ್ಣವಾಗಿ ಮಂಜುಗಡ್ಡೆಯಿಂದಲೇ ನಿರ್ಮಾಣವಾಗುವ ಸ್ವೀಡನ್‌ನ ‘ಐಸ್ ಹೊಟೇಲ್’.
ಉತ್ತರ ಸ್ವೀಡನ್ ದೇಶದ ಜುಕ್ಕಸ್ಜಾರ್ವಿ ಎಂಬ ಹಳ್ಳಿಯಲ್ಲಿ ಪ್ರತಿ ವರ್ಷ ಹಿಮ ಮತ್ತು ಮಂಜುಗಡ್ಡೆಯಿಂದ ಐಸ್ ಹೊಟೇಲನ್ನು ನಿರ್ಮಾಣ ಮಾಡಲಾಗುತ್ತದೆ. ಇದು ಕಿರುನಾ ನಗರದಿಂದ ಸುಮಾರು 17 ಕಿಮೀ ದೂರದಲ್ಲಿದ್ದು, ವಿಶ್ವದ ಮೊದಲ ಐಸ್ ಹೊಟೇಲ್ ಎಂಬ ಹೆಸರನ್ನು ಗಳಿಸಿದೆ. ಈ ಹೊಟೇಲ್‌ನ ಹತ್ತಿರವಿರುವ ಟಾರ್ನ್ ನದಿಯಿಂದ ತೆಗೆದ ಹಿಮ ಮತ್ತು ಐಸ್ ಗ್ಲಾಸ್‌ಗಳಿಂದ ನಿರ್ಮಿಸಲಾಗುತ್ತದೆ. ಅದರೊಳಗೆ ಮಲಗುವ ಕೋಣೆಗಳು, ಬಾರ್, ಐಸ್ ಚಾಪೆಲ್‌ಗಳಿದ್ದು, ಇದರ ರಚನೆಯೇ ಅತಿ ಮನೋಹರವಾಗಿದೆ. ಇಲ್ಲಿನ ತಾಪಮಾನ ಸುಮಾರು −5 ಡಿಗ್ರಿಗಿಂತ ಕಡಿಮೆ ಇದ್ದಾಗಲಷ್ಟೇ ಈ ಐಸ್ ಹೊಟೇಲ್ ನಿರ್ಮಾಣ ಸಾಧ್ಯವಾಗುತ್ತದೆ.

ಹೊಟೇಲ್‌ನ ಇತಿಹಾಸ ಕೇಳಿ ಬೆರಗಾಗದಿರಿ:
1989ರಲ್ಲಿ ಜಪಾನಿನ ಐಸ್ ಕಲಾವಿದರು ಈ ಪ್ರದೇಶಕ್ಕೆ ಭೇಟಿ ನೀಡಿ ಐಸ್ ಕಲಾಕೃತಿಗಳನ್ನು ರಚಿಸಿದರು. 1990ರ ವಸಂತ ಋತುವಿನಲ್ಲಿ ಫ್ರೆಂಚ್ ಕಲಾವಿದ ಜಾನೊಟ್ ಡೆರಿಡ್ ಅದೇ ಪ್ರದೇಶದಲ್ಲಿ ಸಿಲಿಂಡರ್ ಆಕಾರದ ಇಗ್ಲೂವಿನ ರೀತಿಯ ಕಲಾಕೃತಿ ನಿರ್ಮಿಸಿದರು. ಒಂದು ರಾತ್ರಿ ಜುಕ್ಕಸ್ಜಾರ್ವಿ ನಗರದಲ್ಲಿ ಪ್ರವಾಸಿಗರ ದಟ್ಟಣೆಯಿಂದಾಗಿ ಯಾವುದೇ ಕೊಠಡಿಗಳು ಲಭ್ಯವಿರಲಿಲ್ಲ. ಆಗ ಕೆಲವು ಸಂದರ್ಶಕರು ಪ್ರದರ್ಶನ ಮಂಟಪದಲ್ಲಿ ಮತ್ತು ಇಗ್ಲೂನಲ್ಲಿ ರಾತ್ರಿ ಕಳೆಯಲು ಅನುಮತಿ ಕೇಳಿದರು. ಆಗ ಇಗ್ಲೂ ಒಳಗಡೆ ಹಿಮಸಾರಂಗದ ಚರ್ಮದ ಮಲಗುವ ಚೀಲಗಳಲ್ಲಿ ಮಲಗಲು ಅವಕಾಶ ನೀಡಲಾಯಿತು. ಇವರೇ ಈ ಹೋಟೆಲ್‌ನ ಪ್ರಥಮ ಗ್ರಾಹಕರು. ನಂತರ ಪ್ರತೀ ವರ್ಷ ಡಿಸೆಂಬರ್‌ನಿಂದ ಏಪ್ರಿಲ್ ವರೆಗೆ ಈ ಹೊಟೇಲನ್ನು ಐಸ್‌ನಿಂದ ನಿರ್ಮಿಸಲು ಪ್ರಾರಂಭಿಸಲಾಯಿತು.
1989 ರಿಂದ ಪ್ರತಿ ವರ್ಷ, ಟಾರ್ನೆ ನದಿ ಚಳಿಯಿಂದ ಮಂಜುಗಡ್ಡೆಯ ರೂಪಕ್ಕೆ ತಿರುಗಿದಾಗ, ಸ್ವೀಡನ್‌ನ ಉತ್ತರದ ಜುಕ್ಕಸ್ಜಾರ್ವಿ ಎಂಬ ಸಣ್ಣ ಹಳ್ಳಿಯಲ್ಲಿ ಹೊಸತಾಗಿ ಐಸ್ ಹೊಟೇಲನ್ನು ನಿರ್ಮಿಸಲಾಗುತ್ತದೆ. ಇದರ ಕೊಠಡಿಗಳ ಒಳಾಂಗಣ ವಿನ್ಯಾಸವನ್ನು ರಚಿಸಲು ಮಂಜುಗಡ್ಡೆಯನ್ನೇ ಬಳಸುವುದು ಈ ಹೊಟೇಲ್‌ನ ವಿಶೇಷ. ಹೊಟೇಲ್ ವಿನ್ಯಾಸಗೊಳಿಸಲು ಅಪ್ರತಿಮ ಜ್ಞಾನವುಳ್ಳ ಮತ್ತು ಜಾಗತಿಕ ವಿನ್ಯಾಸಕರನ್ನು ವೋಲ್ವೋ, ಶನೆಲ್, ಕಿಂಗ್ ಮತ್ತು ನೊಬೆಲ್‌ನಂಥ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಿದವರ ಪಟ್ಟಿಯಿಂದ ಆಯ್ಕೆ ಮಾಡುತ್ತದೆ. ಪ್ರತಿ ವರ್ಷ ಕಲಾವಿದರು ತಮ್ಮ ವಿಭಿನ್ನ ಕೌಶಲಗಳನ್ನು ಇಲ್ಲಿನ ಕೊಠಡಿಗಳಲ್ಲಿ ಪ್ರದರ್ಶಿಸುತ್ತಾರೆ.

ಹೊಟೇಲ್ ನಿರ್ಮಾಣ ಕೆಲಸ ಪೂರ್ಣಗೊಂಡಾಗ ಇದರೊಳಗೆ ಬಾರ್, ಚರ್ಚ್, ಮುಖ್ಯ ಹಾಲ್, ಅತಿಥಿಗಳಿಗಾಗಿ ಸುಮಾರು 100 ಕೊಠಡಿಗಳು ಸೇರಿರುತ್ತವೆ. ಇಲ್ಲಿನ ಪ್ರತೀ ಕೊಠಡಿಗಳ ದರ ದಿನಕ್ಕೆ 1,500 ಸ್ವೀಡನ್ ಕ್ರೋನಾ (ರು.11,670/-) ಇದೆ. ಈ ಹೊಟೇಲ್ ಐಸ್ ರೆಸ್ಟೋರೆಂಟನ್ನೂ ಒಳಗೊಂಡಿದ್ದು, ಪೀಠೋಪಕರಣಗಳು, ಕುರ್ಚಿಗಳು ಮತ್ತು ಹಾಸಿಗೆಗಳೂ ಮಂಜುಗಡ್ಡೆಯಿಂದಲೇ ಮಾಡಲ್ಪಟ್ಟಿವೆ. ದಪ್ಪ ಗೋಡೆಗಳು, ನೆಲ, ಫಿಟ್ಟಿಂಗ್ ಮತ್ತು ಅಲಂಕಾರವನ್ನು ಸಹ ಐಸ್‌ನಿಂದ ಕೆತ್ತಲಾಗಿದೆ.
ಐಸ್ ಹೊಟೇಲ್ ಒಳಗಿರುವ ಕೊಠಡಿಗಳು ಕೇವಲ ಕೊಠಡಿಗಳಷ್ಟೇ ಅಲ್ಲ, ಬದಲಿಗೆ ಅವುಗಳು ಕಲಾಕೃತಿಗಳು. ಇಲ್ಲಿ ಪ್ರವಾಸಿಗರು ಮಲಗುವ ಹಾಸಿಗೆಗಳು ಹಿಮಸಾರಂಗ ಪ್ರಾಣಿಯ ತುಪ್ಪಳದಿಂದ ಮಾಡಿದ್ದು, ಮಲಗಲು ದ್ರುವ ಪ್ರದೇಶಗಳಲ್ಲಿ ಬಳಸುವ ಮಲಗುವ ಬ್ಯಾಗ್‌ಗಳನ್ನು ಒದಗಿಸಲಾಗುತ್ತದೆ. ಇಲ್ಲಿನ ಎಲ್ಲಾ ಕೋಣೆಗಳ ಉಷ್ಣತೆಯು -5ಡಿಗ್ರಿ ಆಗಿರುತ್ತದೆ. ಇಲ್ಲಿ ಯಾವುದೇ ನೀರಿನ ಕೊಳವೆಗಳ ವ್ಯವಸ್ಥೆ ಇಲ್ಲವಾದರೂ, ಹೊಟೇಲ್ ಆವರಣದ ಹೊರಾಂಗಣದ ಕೊಠಡಿಗಳಲ್ಲಿ ಸ್ಟೀಮ್ ಬಾತ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಬೇಸಿಗೆಯಲ್ಲಿ ಮರೆಯಾಗುವ ಹೊಟೇಲ್
ಈ ಐಸ್ ಹೊಟೇಲ್ ವಿಶ್ವದ ಅತಿದೊಡ್ಡ ಹಿಮದ ಹೊಟೇಲ್ ಎಂದು ಪ್ರಸಿದ್ಧವಾಗಿದ್ದು, ಇದು ಸುಮಾರು 64,600 ಚದರ ಅಡಿ ವಿಸ್ತಾರವಾಗಿದೆ. ಇಲ್ಲಿನ ತಾಪಮಾನ ಕಡಿಮೆಯಾದಾಗ ಮತ್ತು ಟಾರ್ನ್ ನದಿಯು ಹೆಪ್ಪುಗಟ್ಟಲು ಪ್ರಾರಂಭಿಸಿದಾಗ, ಕಟ್ಟಡ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹಿಮವನ್ನು ಬೃಹತ್ ಹಲಗೆಗಳ ರೀತಿ ಕತ್ತರಿಸಿ ತೆಗೆಯಲಾಗುತ್ತದೆ. ನಂತರ ಐಸ್ ಬ್ಲಾಕ್ಗಳನ್ನು ಹೊಟೇಲ್ ನಿರ್ಮಿಸುವಲ್ಲಿಗೆ ಸಾಗಿಸಲಾಗುತ್ತದೆ. ಅಲ್ಲಿ ಕಲಾವಿದರು ಕಲೆ ಮತ್ತು ವಿನ್ಯಾಸವನ್ನು ರಚಿಸಲು ಪ್ರಾರಂಭಿಸುತ್ತಾರೆ. ಈ ಐಸ್ ಹೊಟೇಲ್ ಪ್ರತೀ ವರ್ಷದ ಡಿಸೆಂಬರ್ ಮತ್ತು ಏಪ್ರಿಲ್ ತಿಂಗಳ ನಡುವೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಇಲ್ಲಿನ ಪ್ರತೀ ಕೋಣೆಗಳೂ ವಿಶಿಷ್ಟವಾಗಿದ್ದು, ಹೊಟೇಲ್‌ನ ವಾಸ್ತುಶಿಲ್ಪವನ್ನು ಪ್ರತಿವರ್ಷವೂ ಬದಲಾಯಿಸಲಾಗುತ್ತದೆ. ಕಲಾವಿದರು ಪ್ರತಿ ವರ್ಷ ನವೆಂಬರ್‌ನಿಂದ ಜುಕ್ಕಸ್ಜಾರ್ವಿಯಲ್ಲಿ ಕಲಾಕೃತಿಗಳನ್ನು ನಿರ್ಮಿಸಲು ಪ್ರಾರಂಭಿಸುತ್ತಾರೆ. ಬೇಸಿಗೆ ಬಂದಾಗ ಹೊಟೇಲ್ ಪೂರ್ತಿ ಕರಗಿ ಟಾರ್ನೆ ನದಿಯನ್ನು ಸೇರುತ್ತದೆ. ಇದು ಸ್ವೀಡನ್ ದೇಶದ ಏಳು ಅದ್ಭುತಗಳಲ್ಲಿ ಒಂದಾಗಿದೆ.

ಪ್ರತೀ ವರ್ಷವೂ ಇಲ್ಲಿಗೆ ದೇಶವಿದೇಶಗಳ ಅತಿಥಿಗಳು ಭೇಟಿ ನೀಡುತ್ತಿದ್ದು, ಇದುವರೆಗೂ ಸುಮಾರು 84 ದೇಶಗಳ ಒಂದು ದಶಲಕ್ಷಕ್ಕೂ ಹೆಚ್ಚು ಅತಿಥಿಗಳು ಆಗಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಅತಿಥಿಗಳು ಇಲ್ಲಿ ರಾತ್ರಿಯ ವೇಳೆ ಉಳಿದುಕೊಳ್ಳದೇ ಹಗಲಷ್ಟೇ ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸಿ ತೆರಳುತ್ತಾರೆ. ಇಲ್ಲಿನ ಬಾರ್‌ನಲ್ಲಿ ಅತಿಥಿಗಳಿಗೆ ಮಂಜುಗಡ್ಡೆಯಿಂದಲೇ ತಯಾರಿಸಿದ ಗ್ಲಾಸ್‌ಗಳಲ್ಲಿ ವೊಡ್ಕಾ ನೀಡಲಾಗುತ್ತದೆ. ಇಲ್ಲಿನ ಈ ವ್ಯವಸ್ಥೆಯನ್ನು ‘ಬಂಡೆಗಳಲ್ಲಿ ಪಾನೀಯ’ ಎಂದು ಕರೆಯಲಾಗುತ್ತದೆ. ಬಾರ್‌ಗಳಲ್ಲಿನ ಬಳಸುವ ಐಸ್ ಗ್ಲಾಸ್‌ಗಳನ್ನು ಜುಕ್ಕಸ್ಜಾರ್ವಿಯ ಪ್ರೊಡಕ್ಷನ್ ಹಾಲ್‌ನಿಂದಲೇ ತರಲಾಗುತ್ತದೆ.
ಆರ್ಟ್ ಮತ್ತು ಡಿಲಕ್ಸ್ ಕೊಠಡಿ, ಐಸ್ ಬಾರ್, ಶಿಲ್ಪಕಲೆ ಗ್ಯಾಲರಿ ಮತ್ತು ಇವೆಂಟ್ ಹಾಲ್‌ಗಳಿರುವ ಈ ಹೊಟೇಲ್‌ನಲ್ಲಿ ರಾತ್ರಿಯ ವೇಳೆ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆಯಿದ್ದು, ಹಗಲಿನ ವೇಳೆಯಲ್ಲಿ ಕಲಾ ಪ್ರದರ್ಶನ ಕೇಂದ್ರವಾಗಿರುತ್ತದೆ. ಇಲ್ಲಿಗೆ ಭೇಟಿ ನೀಡುವವರು ಪ್ರವೇಶ ಟಿಕೆಟ್‌ಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.