Thursday, December 11, 2025
Thursday, December 11, 2025

ತಮಿಳುನಾಡಿನಲ್ಲಿ ಇದ್ದಷ್ಟು ಹೊತ್ತೂ ದೈವಮಯ!

ವೈದ್ಯೇಶ್ವರ ಎಂಬ ಹೆಸರು ದೇವರನ್ನು ರೋಗ ನಿವಾರಕನಾಗಿ ಪೂಜಿಸುವ ಸಂಪ್ರದಾಯವನ್ನು ಸೂಚಿಸುತ್ತದೆ.ಜನರು ಆರೋಗ್ಯಕ್ಕಾಗಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ.ದೇವಾಲಯದ ಗರ್ಭಗುಡಿ,ಗೋಪುರದ ವಿನ್ಯಾಸ ಕಲಾತ್ಮಕವಾಗಿದೆ.ಪಂಚಲಿಂಗ ರೂಪಗಳು,ದ್ರಾವಿಡ ಶೈಲಿಯ ಕೆತ್ತನೆಗಳಿವೆ.ಈ ದೇವಸ್ಥಾನವೂ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ.

- ಎನ್.ಆರ್.ರೂಪಶ್ರೀ


ಅಲ್ಲಿ ಕಣ್ಣು ಹಾಯಿಸಿದಷ್ಟು ದೂರದವರೆಗೆ ದೇವಸ್ಥಾನವೇ ಕಾಣುತ್ತದೆ.ಆಗಸವನ್ನೂ ಮುಟ್ಟುವಂತೆ ದೇವಾಲಯ ತನ್ನ ಹರಿವನ್ನು ಚಾಚಿದೆ.ಆ ದೇವಾಲಯವನ್ನು ಚೋಳ ಸಾಮ್ರಾಟ ಪ್ರಥಮ ರಾಜರಾಜ ಚೋಳ ಕ್ರಿಸ್ತಶಕ 1010ರಲ್ಲಿ ನಿರ್ಮಿಸಿದನು.ಇದು ಭಗವಾನ್ ಶಿವನಿಗೆ ಸಮರ್ಪಿತವಾಗಿದ್ದು, ರಾಜರಾಜೇಶ್ವರ ದೇವಾಲಯ ಎಂದೂ ಕರೆಯಲಾಗುತ್ತದೆ. ಬೃಹದೇಶ್ವರ ದೇವಸ್ಥಾನವು ಭಾರತದ ವಾಸ್ತುಶಿಲ್ಪ,ಕಲೆ ಮತ್ತು ಭಕ್ತಿಯ ದ್ಯೋತಕವಾಗಿದೆ.ದೇವಾಲಯದ ಮುಖ್ಯ ಗೋಪುರವು ಸುಮಾರು 216 ಅಡಿ ಎತ್ತರವಿದ್ದು,ಕಲಶದ ತೂಕ ಸುಮಾರು 80 ಟನ್ ಇದೆ.

ಬೃಹದೇಶ್ವರ ದೇವಾಲಯದ ಒಳಗೆ ಅತಿ ದೊಡ್ಡ ನಂದಿ ಮೂರ್ತಿ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟಿದೆ.ಅದರ ಉದ್ದ ಸುಮಾರು 16 ಅಡಿ ಮತ್ತು ಎತ್ತರ 13 ಅಡಿ ಇದೆ.ದೇವಾಲಯದ ಗೋಡೆಗಳಲ್ಲಿ ಶಾಸನಗಳು,ಅದ್ಭುತ ಶಿಲ್ಪಗಳು,ಮತ್ತು ಚಿತ್ರಗಳು ಚೋಳರ ಕಾಲದ ಸಾಂಸ್ಕೃತಿಕ ಹಿರಿಮೆ ಮತ್ತು ಕಲಾತ್ಮಕ ಕೌಶಲ್ಯವನ್ನು ಪ್ರದರ್ಶಿಸುತ್ತವೆ.ಬೃಹದೇಶ್ವರ ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದೆ.ವಿನ್ಯಾಸದಲ್ಲಿ ವಿಜ್ಞಾನ ಮತ್ತು ಕಲೆ ಎರಡೂ ಸಂಯೋಜಿತವಾಗಿದೆ.ಈ ದೇವಾಲಯವು ಇಂದು ಯುನೆಸ್ಕೂ ವಿಶ್ವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಬೃಹದೇಶ್ವರ ದೇವಸ್ಥಾನದ ಪ್ರತಿಯೊಂದು ಕಲ್ಲು ಕಾವ್ಯಮಯವಾಗಿದೆ.ನಿತ್ಯ ಸಾವಿರಾರು ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿದೆ.ಭಾರತದ ಭವ್ಯ ಪರಂಪರೆಯನ್ನು ಜಗತ್ತಿಗೆ ತೆರೆದಿಟ್ಟಿದೆ.

Tamil nadu temple

ಸ್ವಾಮಿಮಲೈ ಮುರುಗನ್

ಸ್ವಾಮಿಮಲೈ ಮುರುಗನ್ ದೇವಸ್ಥಾನವು ದಕ್ಷಿಣ ಭಾರತದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ.ಮುರುಗನ್ ಅಥವಾ ಕಾರ್ತಿಕೇಯ ದೇವರ ಆರಾಧನೆ ಪ್ರಮುಖವಾಗಿದೆ.ಆರು ಪಡೈ ವೀಡುಗಳ ಪೈಕಿ ನಾಲ್ಕನೆಯ ಸ್ಥಾನವನ್ನು ಹೊಂದಿದೆ.ದೇವಾಲಯವು ಅರವತ್ತು ಮೆಟ್ಟಿಲುಗಳನ್ನು ಹೊಂದಿದೆ.ಪ್ರತಿ ಮೆಟ್ಟಿಲುಗಳಿಗೂ ಒಂದು ತಮಿಳು ವರ್ಷದ ಹೆಸರು ನಾಮಕರಣಗೊಂಡಿದೆ.ದೇವಾಲಯದ ವಾಸ್ತುಶಿಲ್ಪವು ಚೋಳರ ಕಾಲದ ಶೈಲಿಯನ್ನು ಹೊಂದಿದೆ.ಗೋಪುರಗಳ ಅಲಂಕಾರ,ಶಿಲ್ಪಗಳ ಕಲಾತ್ಮಕ ವಿನ್ಯಾಸ,ಭಕ್ತರನ್ನು ಆಕರ್ಷಿಸುತ್ತದೆ.ಕೇವಲ ಹಣತೆಯ ದೀಪದಿಂದ ಬೆಳಗುವ ದೇವರ ಪ್ರತಿಮೆ ಭಕ್ತಿಭಾವವನ್ನು ಮೂಡಿಸುತ್ತದೆ.

ಕುಂಭಕೋಣಂ

ಕುಂಭಕೋಣಂನಲ್ಲಿ ಹಲವು ದೇವಾಲಯಗಳಿದ್ದು,ಅತ್ಯಂತ ಪ್ರಮುಖವಾದದ್ದು ಆದಿಕುಂಭೇಶ್ವರ ದೇವಸ್ಥಾನ.ಈ ದೇವಸ್ಥಾನವು ಶಿವಮಯವಾಗಿದೆ.ಚೋಳ ರಾಜವಂಶದ ವಾಸ್ತು ಶೈಲಿಯನ್ನು ಹೊಂದಿದೆ. ಗೋಡೆಗಳ ಮೇಲಿನ ಕೆತ್ತನೆ ಕಣ್ಮನ ಸೆಳೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ಸೃಷ್ಟಿಯ ಅಂತ್ಯದ ಸಮಯದಲ್ಲಿ ವಿಶ್ವವನ್ನು ಉಳಿಸಲು ಅಮೃತಕುಂಭವನ್ನು ರಚಿಸಿದನು. ಆ ಕುಂಭವು ಇಲ್ಲಿ ನೆಲಸಿ ಶಿವನು ಅದನ್ನು ಒಡೆದಾಗ ವಿಶ್ವದ ಪುನರ್ ನಿರ್ಮಾಣವಾಯಿತೆಂಬ ಪ್ರತೀತಿಯಿದೆ. ಕುಂಭಕೋಣಂ ದೇವಾಲಯದ ಸುತ್ತಮುತ್ತ ಪಾಠಶಾಲೆ,ವಿವಿಧ ಮಠಗಳು,ಸಂಗೀತ ಶಾಲೆಗಳು ಇವೆ.ಇಡೀ ವಾತಾವರಣ ಶಾಂತ ಮತ್ತು ತನ್ಮಯತೆಯಿಂದ ಕೂಡಿದೆ. ಬೆಳಗಿನ ಪ್ರಶಾಂತತೆ ನಮಗೆ ದೇವರ ದರ್ಶನದ ಭಕ್ತಿಭಾವದ ಶಕ್ತಿಯನ್ನು ಇಮ್ಮಡಿಗೊಳಿಸಿತು. ಇಲ್ಲಿ ಪ್ರತಿವರ್ಷ ನಡೆಯುವ ಮಹಾಮಹಂ ಉತ್ಸವ ವಿಶೇಷ ಪ್ರಸಿದ್ದಿಯನ್ನು ಪಡೆದಿದೆ. ದೇವಸ್ಥಾನದ ಒಂದು ಬದಿಯಲ್ಲಿ ನಾನಾ ರೀತಿಯ ಗೊಂಬೆಗಳು ಮಾರಾಟಕ್ಕೆ ದೊರೆಯುತ್ತವೆ. ದಸರಾದಲ್ಲಿ ಮೈಸೂರಿನ ಗೊಂಬೆ ಕೂರಿಸುವುದು ವಿಶೇಷ.

ಪಟ್ಟೇಶ್ವರ ದೇವಾಲಯ

ಪಟ್ಟೇಶ್ವರ ದೇವಾಲಯವು ತಂಜಾವೂರಿನ ಸಮೀಪದಲ್ಲಿಯೇ ಇದೆ. ಪಟ್ಟಣದ ರಕ್ಷಕ ದೇವರು ಇದಾಗಿದೆ. ಚೋಳ ರಾಜರು ನಿರ್ಮಿಸಿದ ಈ ದೇಗುಲವು ಉನ್ನತ ಶಿಲ್ಪಕಲೆಯನ್ನು ಹೊಂದಿದೆ. ದೇವರ ಮುಖ್ಯ ವಿಗ್ರಹವು ಲಿಂಗ ರೂಪದಲ್ಲಿದೆ.ದೇವಾಲಯದ ಗೋಪುರ,ಗರ್ಭಗುಡಿ,ಶಿಲಾ ಶಾಸನಗಳು ತುಂಬಾ ಚೆನ್ನಾಗಿವೆ. ಶಿವ ದೇವಾಲಯದ ಪಕ್ಕದಲ್ಲಿಯೇ ಪಾರ್ವತಿ ದೇವಿಯ ಆರಾಧನೆಯೂ ನಡೆಯುತ್ತದೆ. ನಾವು ನೋಡಿದ ಶಿವ ದೇವಾಲಯಗಳ ಎಲ್ಲ ಕಡೆಗಳಲ್ಲಿ ಭಸ್ಮವನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದರು. ದೇವಿ ದೇವಸ್ಥಾನಗಳಲ್ಲಿ ಕುಂಕುಮ ನೀಡುತ್ತಿದ್ದರು. ದೇವಾಲಯಗಳ ಪ್ರಾಂಗಣ ವಿಶಾಲವಾಗಿ ಭವ್ಯವಾಗಿ ಜನರನ್ನು ಸೆಳೆಯುತ್ತವೆ. ಈ ದೇವಸ್ಥಾನವು ತಮಿಳುನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಕೇಂದ್ರವಾಗಿದೆ.

Temples of Tamil nadu

ವೈದ್ಯೇಶ್ವರ ದೇವಾಲಯ

ವೈದ್ಯೇಶ್ವರ ದೇವಸ್ಥಾನ ತಮಿಳುನಾಡಿನ ಇನ್ನೊಂದು ಪ್ರಮುಖ ಯಾತ್ರಾ ಸ್ಥಳ. ರಾಜೇಂದ್ರ ಚೋಳನು 11ನೇ ಶತಮಾನದಲ್ಲಿ ನಿರ್ಮಿಸಿದ್ದಾನೆ. ಆದ್ಯಯಾರು ನದಿ ತೀರದಲ್ಲಿ ದೇವಸ್ಥಾನವಿದೆ. ದೇವಿಯ ಪೂಜೆಯೂ ಇಲ್ಲಿ ನಡೆಯುತ್ತದೆ. ವೈದ್ಯೇಶ್ವರ ಎಂಬ ಹೆಸರು ದೇವರನ್ನು ರೋಗ ನಿವಾರಕನಾಗಿ ಪೂಜಿಸುವ ಸಂಪ್ರದಾಯವನ್ನು ಸೂಚಿಸುತ್ತದೆ. ಜನರು ಆರೋಗ್ಯಕ್ಕಾಗಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ. ದೇವಾಲಯದ ಗರ್ಭಗುಡಿ,ಗೋಪುರದ ವಿನ್ಯಾಸ ಕಲಾತ್ಮಕವಾಗಿದೆ. ಪಂಚಲಿಂಗ ರೂಪಗಳು,ದ್ರಾವಿಡ ಶೈಲಿಯ ಕೆತ್ತನೆಗಳಿವೆ. ಈ ದೇವಸ್ಥಾನವು ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ.ತಮಿಳುನಾಡಿನ ಸೀರಕಾಲ್ ದೇವಸ್ಥಾನ ಭಾರತದ ಪ್ರಮುಖ ಶೈವ ಕ್ಷೇತ್ರಗಳಲ್ಲಿ ಒಂದಾಗಿದೆ. ನಾವು ಈ ದೇವಸ್ಥಾನ ನೋಡಲು ಹೊರಟಾಗ ವಿಪರೀತ ಬಿಸಿಲು. ಕಾಲುಗಳು ಬೊಬ್ಬೆ ಬರಲು ಪ್ರಾರಂಭವಾಗಿತ್ತು. ಆದರೂ ದೇವರನ್ನು ನೋಡಬೇಕೆಂಬ ಉತ್ಸಾಹ ಕಡಿಮೆ ಆಗಿರಲಿಲ್ಲ. ಇಲ್ಲಿ ಭಗವಾನ್ ಶಿವನನ್ನು ಪೂಜಿಸುತ್ತಾರೆ. ದೇವಿಯು ಉಮೈಯಾಳ್ ಅಥವಾ ಪಾರ್ವತಿ ದೇವಿಯ ರೂಪದಲ್ಲಿದೆ. ಬಾಲ ಶಿಶುವಿಗೆ ಪಾರ್ವತಿ ದೇವಿಯೇ ಹಾಲು ನೀಡಿ ಆಶೀರ್ವದಿಸಿದಳು ಎಂಬ ಪ್ರತೀತಿ ಇದೆ. ದೇವಾಲಯದ ವಾಸ್ತುಶಿಲ್ಪವು ಚೋಳ ವಂಶದ ಶೈಲಿಯನ್ನು ಹೊಂದಿದೆ. ಗೋಪುರಗಳು,ಕಲ್ಲಿನ ಮಂಟಪಗಳು ಸುಂದರವಾಗಿವೆ.

ನಮ್ಮ ಪ್ರವಾಸದ ಮೂರನೇ ದಿನ ತಿರುಕಡೆವೂರು ದೇವಸ್ಥಾನದ ಕಡೆ ಪಯಣ ಸಾಗಿತು. ಈಗಾಗಲೇ ಹಲವಾರು ದೇವಸ್ಥಾನಗಳನ್ನು ಕಣ್ತುಂಬಿಕೊಂಡ ಸಂತೃಪ್ತಿ ನಮ್ಮದಾಗಿತ್ತು. ಈಗ ನಾವು ನೋಡಿದ್ದು ಅಮೃತಘಟೇಶ್ವರರ_ಅಭಿರಾಮಿ ದೇವಸ್ಥಾನ. ಈ ಸ್ಥಳವೂ ದೀರ್ಘಾಯುಷ್ಯದ ಪೂಜೆಗಾಗಿ ಪ್ರಸಿದ್ಧವಾಗಿದೆ. ಶೈವ ಮತದ ಭಕ್ತರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಶಿವ ಮತ್ತು ಅಭಿರಾಮಿ ಪಾರ್ವತಿ ದೇವಿಯನ್ನು ದಿನಕ್ಕೆ ಐದು ಸಲ ಪೂಜಿಸಲಾಗುತ್ತದೆ. ಶಿವನು ಮಾರ್ಕಂಡೇಯನಿಗೆ ಅಮೃತವನ್ನು ದಾನ ಮಾಡಿದ ಪುಣ್ಯಕ್ಷೇತ್ರವಾಗಿದೆ. ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿತವಾಗಿದ್ದು ದ್ರಾವಿಡ ಶೈಲಿ ಹೊಂದಿದೆ. ಅಭಿರಾಮಿ ಅಮ್ಮನ ಸನ್ನಿಧಾನವು ಸುಂದರವಾದ ಕಲೆಗಳಿಂದ ಅಲಂಕರಿಸಲ್ಪಟ್ಟಿದೆ. ಮಹಾಶಿವರಾತ್ರಿ,ಅಭಿರಾಮಿ ಉತ್ಸವ,ನವರಾತ್ರಿ,ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ನಾವು ಹೋದಾಗ ಬಹಳಷ್ಟು ಭಕ್ತರು ಸಧ್ಯಾಯುಷ್ಯ ಹೋಮ ಮಾಡಿಸಿ ದೀರ್ಘ ಆಯುಷ್ಯಕ್ಕಾಗಿ ಪ್ರಾರ್ಥಿಸುತ್ತಿರುವುದು ಕಂಡುಬಂತು.

ನಮ್ಮ ನಂಬಿಕೆಗಳಿಗೆ ಪುಷ್ಠಿ ಕೊಡುವಂತೆ ಇದ್ದ ಇನ್ನೊಂದು ದೇವಾಲಯ ತಿರುಕರುಕಾವೂರ್. ಈ ದೇವಸ್ಥಾನವು ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ಮುಖ್ಯ ದೇವರು ವಿದ್ಯಾಪುರೀಶ್ವರಸ್ವಾಮಿ ಮತ್ತು ಪಾರ್ವತಿ ದೇವಿ. ಇಲ್ಲಿ ದೇವಾಲಯದ ಒಳಗಡೆ ಇನ್ನೊಂದು ಭಾಗದಲ್ಲಿ ಗರ್ಭರಕ್ಷಾಂಭಿಕೆ ದೇವಿ ದೇವಸ್ಥಾನವಿದೆ. ಈ ದೇವಿಯು ಗರ್ಭಿಣಿ ಮಹಿಳೆಯರ ಗರ್ಭ ರಕ್ಷಣೆ,ಸುರಕ್ಷಿತ ಪ್ರಸವ ಮತ್ತು ಸಂತಾನ ಪ್ರಾಪ್ತಿಗಾಗಿ ಕರುಣೆಯನ್ನು ತೋರಿಸುವ ತಾಯಿ ಎಂಬ ನಂಬಿಕೆಯಿದೆ.ದೇವಸ್ಥಾನದಲ್ಲಿ ದೊರೆಯುವ ಗರ್ಭರಕ್ಷಾ ಎಣ್ಣೆ ಅತ್ಯಂತ ಪ್ರಸಿದ್ಧವಾಗಿದೆ.ಇಲ್ಲಿ ದೇವಿಯು ಕೈಯಲ್ಲಿ ಕಮಲ ಹೂವು ಮತ್ತು ಪಾಯಸ ಪಾತ್ರೆ ಹಿಡಿದಿದ್ದಾಳೆ. ದೇವಿಯು ಸೌಮ್ಯರೂಪದಲ್ಲಿದ್ದು ತಾಯಿಯ ಮಮತೆ,ಕರುಣೆಯನ್ನು ಪ್ರತಿನಿಧಿಸುತ್ತಾಳೆ. ಇದು ಚೋಳ ರಾಜರ ಕಾಲದಲ್ಲಿ ನಿರ್ಮಾಣವಾಯಿತು. ದೇವಾಲಯದ ಶಿಲ್ಪಕಲೆ,ಗೋಪುರ,ದೇವರ ಮೂರ್ತಿಗಳು ಅದ್ಬುತವಾಗಿ ಮೂಡಿ ಬಂದಿದೆ.

ನಮ್ಮ ಪ್ರವಾಸದ ಕೊನೆಯಲ್ಲಿ ನಾವು ನೋಡಿದ ಎರಡು ದೇವಸ್ಥಾನಗಳೆಂದರೆ ಹೂತನೂರು ಸರಸ್ವತಿ ದೇವಸ್ಥಾನ ಮತ್ತು ತಿರುನೆಳ್ಳಾರ್ ಶನೀಶ್ವರ ದೇವಾಲಯ. ಸರಸ್ವತಿ ದೇವಾಲಯವು ವಿದ್ಯೆ ಮತ್ತು ಜ್ಞಾನಕ್ಕೆ ಪ್ರತೀಕವಾಗಿದೆ. ಈ ದೇವಸ್ಥಾನವು ಶಾಂತವಾದ ವಾತಾವರಣದಲ್ಲಿ ನಿರ್ಮಣವಾಗಿದೆ. ಸರಸ್ವತಿ ದೇವಿ ವಿಗ್ರಹವು ದೊರೆಯುತ್ತದೆ. ಬಹಳಷ್ಟು ಭಕ್ತರು ವಿದ್ಯೆ,ಜ್ಞಾನಕ್ಕಾಗಿ ಅರ್ಚನೆ ಮಾಡಿಸುತ್ತಿರುವುದು ಕಂಡು ಬಂತು. ಕಮಲವನ್ನು ಅರ್ಪಿಸುತ್ತಿದ್ದರು. ನೋಟ್‌ಬುಕ್‌ಗಳಲ್ಲಿ ಬರೆದು ಸಮರ್ಪಿಸುತ್ತಿದ್ದರು. ವಿವಿಧ ರೀತಿಯ ಸೀರೆಗಳನ್ನು ಸರಸ್ವತಿಗೆ ಬಾಗಿನ ನೀಡುತ್ತಿದ್ದರು. ಪ್ರತಿವರ್ಷ ವಸಂತಪಂಚಮಿಯಂದು ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ವಿದ್ಯಾಭ್ಯಾಸ ಆರಂಭಿಸುವ ಮಕ್ಕಳಿಗೆ ಶುಭ ಸ್ಥಳವೆಂದು ನಂಬಿಕೆಯಿದೆ.ಜನರು ಇಲ್ಲಿ ಬಂದು ಅಕ್ಷರಾಭ್ಯಾಸ ಮಾಡುತ್ತಾರೆ. ಹೂತನೂರು ಸರಸ್ವತಿ ದೇವಾಲಯವು ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ನಾವೆಲ್ಲರೂ ಸರಸ್ವತಿಗೆ ಭಕ್ತಿಯಿಂದ ಕೈ ಮುಗಿದೆವು. ತಿರುನೆಳ್ಳಾರ್ ಶನೀಶ್ವರ ದೇವಾಲಯವು ತಮಿಳುನಾಡಿನ ನವಗ್ರಹ ದೇವಾಲಯಗಳಲ್ಲಿ ಒಂದಾಗಿದೆ. ದಾರಣೀಶ್ವರ ಮತ್ತು ಪ್ರಣಂಭಿಕಾ ದೇವಿ ಸಹ ಪೂಜಿಸಲ್ಪಡುತ್ತಾರೆ. ಭಕ್ತರು ದೇವಾಲಯ ಪ್ರವೇಶಿಸುವ ಮೊದಲು ತೈಲಾಭಿಷೇಕ ಸ್ನಾನ ಮಾಡುವುದನ್ನು ಪವಿತ್ರವೆಂದು ನಂಬಲಾಗಿದೆ. ಇದು ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಒಳಗಡೆ ಇದೆ. ಶನಿ ಅಮವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತದೆ. ಈ ದೇವಸ್ಥಾನವು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಶನೀಶ್ವರ ದೇವರು ಕಪ್ಪು ಕಲ್ಲಿನ ಮೂರ್ತಿಯಾಗಿ ಅಲಂಕರಿಸಲಾಗಿದೆ. ದರ್ಶನದಿಂದ ಭಕ್ತರ ಕಷ್ಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.ಮೂರು ದಿನಗಳ ತಮಿಳುನಾಡಿನ ನಮ್ಮ ಪ್ರವಾಸ ಸಂಪನ್ನಗೊಂಡಿತು. ಆದರೆ ನಾವು ತಮಿಳುನಾಡಿನಲ್ಲಿ ನೋಡಬೇಕಾದ ದೇಗುಲಗಳು ಇನ್ನೂ ಬಹಳಷ್ಟು ಇವೆ. ಮುಂದಿನ ರಜೆಯಲ್ಲಿ ನೋಡೋಣ ಎನ್ನುವ ಮಾತಿನೊಂದಿಗೆ ರೈಲು ನಿಲ್ದಾಣದತ್ತ ಮುಖ ಮಾಡಿದೆವು. ದಾರಿಯುದ್ದಕ್ಕೂ ಗೆಳತಿ ರಮ್ಯ ನಮಗೆ ಮಾರ್ಗದರ್ಶಕರಾಗಿ ಎಲ್ಲ ದೇವಾಲಯಗಳ ವಿವರಣೆ ನೀಡಿದರು. ತಮಿಳು ಭಾಷೆ ಬರದ ನಾವುಗಳು ಹಾವಭಾವದಿಂದಲೇ ಅಂಗಡಿಯವರ ಹತ್ತಿರ,ಜನರ ಜತೆ ಮಾತನಾಡುತ್ತಿದ್ದೆವು. ಕೆಲವು ತಮಿಳು ಶಬ್ಧಗಳನ್ನು ಕಲಿತೆವು.ದೇವಾಲಯಗಳ ವೀಕ್ಷಣೆಯಿಂದ ಎಲ್ಲರ ಮನಸ್ಸು ಪ್ರಸನ್ನವಾಗಿತ್ತು. ಹಾಡು,ಹರಟೆ,ನಗು ಎಲ್ಲವುಗಳಿಂದ ನಮ್ಮ ಪ್ರವಾಸ ಬಹಳ ಕಾಲ ನೆನಪಿನಲ್ಲಿ ಉಳಿಯುವಂತಾಯಿತು.ದೇವಾಲಯದ ವೈಭವವನ್ನು ನೋಡಿದ ಮನಸು ನಮ್ಮ ಭಾರತದ ಶ್ರೇಷ್ಠತೆಯ ಬಗ್ಗೆ ಹೆಮ್ಮೆ,ಅಭಿಮಾನ ಮೂಡುವಂತೆ ಮಾಡಿತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!