ಇಲ್ಲಿನ ಸದ್ಯದ ರುಚಿ ಎಂದರೆ ಭಗವಾನನಿಗೂ ಸಂತಸ
ಒಂದು ಕಡೆ ಪಂಪಾ ನದಿ, ಅದರ ದಡದಲ್ಲಿ ಪಾರ್ಥ ಸಾರಥಿಯ ಮಂದಸ್ಮಿತ ಮೂರ್ತಿ. ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ಕೊಟ್ಟ ಭಗವಾನ್ ಶ್ರೀಕೃಷ್ಣ ಬೆಣ್ಣೆಯ ಅಲಂಕಾರದಲ್ಲಿ ಹೀಗೆ ಕಂಗೊಳಿಸುತ್ತಿದ್ದರೆ, ನೋಡುಗರ ಕಣ್ಣಿಗೆ ಅದೇ ಹಬ್ಬ.
- ಮೇಘಾ ಭಟ್
ಪಾರ್ಥಸಾರಥಿ ಎಂಬ ಹೆಸರಿನ ದೇವಸ್ಥಾನವು ಕೇರಳದ ಮೂರನೇ ಉದ್ದದ ನದಿಯಾದ ಪಂಪಾದ ದಡದಲ್ಲಿದೆ. ಇದು ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲ ಎಂಬ ಹಳ್ಳಿಯಲ್ಲಿದ್ದು, ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಪಾರ್ಥಸಾರಥಿ ಅಂದರೆ ಅರ್ಜುನನ ಸಾರಥಿಯ ದೇವಸ್ಥಾನವಾಗಿದೆ. ಬಲರಾಮ ದೇವರಿಗೆ ವಿಶೇಷ ಗುಡಿಯೊಂದು ಇಲ್ಲಿದ್ದು ಸದಾ ಪೂಜೆ ನಡೆಯುವುದು ವಿಶೇಷ. ದೇವರ ನಾಡು ಎಂದು ಪ್ರಸಿದ್ಧಿ ಪಡೆದಿರುವ ಕೇರಳದಲ್ಲಿ, ನೆಲೆಸಿರುವ ಈ ದೇವಸ್ಥಾನವು ಮಹಾಭಾರತದ ಕಥೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಇಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಸಾರಥಿಯಾಗಿ ಪೂಜಿಸಲ್ಪಡುತ್ತಾನೆ. ಇದಕ್ಕಾಗಿ ಪಾರ್ಥ ಸಾರಥಿ ಎಂಬ ಹೆಸರು ಈ ದೇವಾಲಯಕ್ಕಿದೆ.
ಇದು ಧಾರ್ಮಿಕ ಕಾರಣಕ್ಕಾಗಿ ಮಾತ್ರವಲ್ಲದೆ, ಕಲೆ ಮತ್ತು ವಾಸ್ತುಶಿಲ್ಪಕ್ಕೂ ಹೆಸರುವಾಸಿ. ನಗರಗಳ ಸದ್ದು ಗದ್ದಲಗಳಿಂದ ದೂರವಾಗಿ ಪ್ರಶಾಂತ ವಾತಾವರಣ ಉಳಿಸಿಕೊಂಡಿದೆ. ಒಂದು ಕಡೆ ಪಂಪಾ ನದಿ, ಅದರ ದಡದಲ್ಲಿ ಪಾರ್ಥ ಸಾರಥಿಯ ಮಂದಸ್ಮಿತ ಮೂರ್ತಿ. ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ಕೊಟ್ಟ ಭಗವಾನ್ ಶ್ರೀಕೃಷ್ಣ ಬೆಣ್ಣೆಯ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದರೆ, ನೋಡುಗರ ಕಣ್ಣಿಗೆ ಅದೇ ಹಬ್ಬ. ಈ ದೇವಾಲಯವನ್ನು ಮಧ್ಯಮ ಪಾಂಡವ ಅಂದರೆ ಅರ್ಜುನನು ಕಟ್ಟಿಸಿದ ಎಂಬ ಪ್ರತೀತಿ ಇದೆ. ಕೇರಳ ಸರ್ಕಾರದ ಆಡಳಿತದಲ್ಲಿ ದೇವಾಲಯವಿದೆ. ಪ್ರತಿದಿನ ಬೆಳಗಿನ 4ರಿಂದ 11ಗಂಟೆಯವರೆಗೆ ಮತ್ತು ಸಂಜೆ 5ರಿಂದ 8ಗಂಟೆಯವರೆಗೆ ತೆರೆದಿರುತ್ತದೆ.

ವಿಶೇಷ ದೋಣಿ ಪಂದ್ಯ
ಪ್ರತಿ ವರ್ಷ ಓಣಂ ಹಬ್ಬದ ಕೊನೆಯ ದಿನ ಇಲ್ಲಿನ ಪಂಪಾ ನದಿಯಲ್ಲಿ ದೋಣಿ ಪಂದ್ಯವನ್ನು ನಡೆಸಲಾಗುತ್ತದೆ. ಪುರಾಣಗಳ ಪ್ರಕಾರ ಅರ್ಜುನನು ಸುದೀರ್ಘ ತಪಸ್ಸಿನ ನಂತರ ಭಗವಾನ್ ಕೃಷ್ಣನ ಮೂರ್ತಿಯನ್ನು ತೆಗೆದುಕೊಂಡು ಹಿಂದಿರುಗುತ್ತಿದ್ದನು. ಆಗ ಪಂಪಾ ನದಿಯಲ್ಲಿ ಭಾರಿ ಪ್ರವಾಹವಿದ್ದ ಕಾರಣ ದಲಿತ ಹಿಂದೂವೊಬ್ಬ ಬಿದಿರಿನ ದೋಣಿಯಲ್ಲಿ ಅರ್ಜುನನನ್ನು ನದಿ ದಾಟಿಸಿದನಂತೆ. ಈ ಘಟನೆಯ ಸ್ಮರಿಸುವುದಕ್ಕಾಗಿ ಈ ಸ್ಪರ್ಧೆ ಇಂದಿಗೂ ನಡೆಯುತ್ತದೆ. ಪ್ರತಿ ವರ್ಷ ನೂರು ಅಡಿ ಉದ್ದದ ಹಾಯಿ ದೋಣಿಗಳಲ್ಲಿ ಸಂಗೀತ ವಾದ್ಯಗಳೊಂದಿಗೆ ಪಂದ್ಯವನ್ನು ಆಯೋಜಿಸುತ್ತಾರೆ. ಸಾವಿರಾರು ಪ್ರೇಕ್ಷಕರು ಭಾಗವಹಿಸುವ ಈ ಧಾರ್ಮಿಕ ಆಚರಣೆಯ ನಂತರ ಸಾಮೂಹಿಕ ಭೋಜನದ ವ್ಯವಸ್ಥೆ ಇಲ್ಲಿರುತ್ತದೆ.

ಪ್ರಸಿದ್ಧವಾದ ಸದ್ಯ ಪಾರ್ಥಸಾರಥಿಗೆ ಪ್ರಿಯ
ಅರನ್ಮುಲವಳ್ಳ ಸದ್ಯವು ಸಸ್ಯಾಹಾರಿ ಭಕ್ಷ್ಯವಾಗಿದೆ. ಇದನ್ನು ಬಾಳೆ ಎಲೆಗಳ ಮೇಲೆ ಪ್ರೀತಿ, ಭಕ್ತಿ ಮತ್ತು ನಮ್ರತೆಯಿಂದ ಬಡಿಸಲಾಗುತ್ತದೆ. ಹೀಗೆ ಒಪ್ಪಿಸುವ ಸದ್ಯವೆಂದರೆ ದೇವರಿಗೆ ಅತ್ಯಂತ ಪ್ರಿಯವಂತೆ.
ಅರನ್ಮುಳ ಕನ್ನಡಿಗಳು
ಇವು ಲೋಹದಿಂದ ಮತ್ತು ಕರ-ಕುಶಲ ಕಾರ್ಯದಿಂದ ತಯಾರಾಗುವ ಕನ್ನಡಿಗಳು. ವಿಶ್ವದಾದ್ಯಂತ ಪ್ರಸಿದ್ಧಿ ಇವುಗಳಿಗಿವೆ. ಪ್ರತಿಬಿಂಬದ ಗಾಜು ಇಲ್ಲದ ಕನ್ನಡಿಗಳು ಇವಾಗಿವೆ.
ಸಾಮಾನ್ಯ ಕನ್ನಡಿಗಳಲ್ಲಿ ವಸ್ತು ಮತ್ತು ಬಿಂಬಗಳ ನಡುವೆ ಕಾಣಲು ಸಿಗುವ ಅಂತರ ಈ ಕನ್ನಡಿಗಳಲ್ಲಿ ಕಾಣುವುದಿಲ್ಲ. ಇಲ್ಲಿನ ಒಂದು ಜನಾಂಗದ ಜನರು ಮಾತ್ರ ಇವುಗಳನ್ನು ತಯಾರಿಸುತ್ತಾರೆ. ಇದರಿಂದಾಗಿ ಈ ಕನ್ನಡಿ ತಯಾರಿಕೆ ಸಾಂಸ್ಕೃತಿಕ ಮತ್ತು ಧಾತು ಶಾಸ್ತ್ರ ಪರಂಪರೆಯ ಕೊಂಡಿಯಾಗಿದೆ. ಇವುಗಳಿಂದ ಮನೆಗೆ ಶುಭ- ಲಾಭಗಳು ಹೆಚ್ಚುತ್ತವೆ ಎನ್ನುವುದು ಜನರ ನಂಬಿಕೆ. ಹಾಗಾಗಿ ಮದುವೆಗಳಲ್ಲಿ ವಧುವನ್ನು ಸ್ವಾಗತಿಸುವಾಗ, ವಿಷು ಹಬ್ಬದ ದಿನದಂದು ಈ ಕನ್ನಡಿಗಳನ್ನು ಬಳಸುತ್ತಾರೆ. ಹಲವರು ಮನೆಯ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವಾಗ ನೋಡುತ್ತಾರಂತೆ. ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿ ಈ ತೆರೆನ ಕನ್ನಡಿ ಇದೆಯಂತೆ. 2004-05ರಲ್ಲಿ ಇದಕ್ಕೆ ಜಿಐ ಟ್ಯಾಗ್ ಸಹ ದೊರೆತಿದೆ.
ದಾರಿ ಹೇಗೆ?
ಬೆಂಗಳೂರು ಪ್ರಯಾಣ ಆರಂಭಿಸಿದರೆ, ಚೆಂಗನ್ನೂರ್ ರೈಲು ನಿಲ್ದಾಣದಲ್ಲಿ ಇಳಿದು ಹತ್ತು ನಿಮಿಷದ ಕಾಲ್ನಡಿಗೆಯಲ್ಲಿ ಈ ದೇವಸ್ಥಾನ ತಲುಪಬಹದು.