ಮುಂದಿನ ನಿಲ್ದಾಣ - ಏರ್ ಪೋರ್ಟ್
ವಿಮಾನಗಳು ಬರುವ ನೂರಾರು ವರ್ಷಗಳ ಮೊದಲೇ ಜಗತ್ತಿನೆಲ್ಲೆಡೆ ಹಡಗುಗಳನ್ನು ಬಳಸಲಾಗುತ್ತಿತ್ತು. ಬೃಹತ್ ಹಡಗುಗಳಿಂದ ಜನರನ್ನು ಬಂದರುಗಳಲ್ಲಿ ಇಳಿಸುವುದಕ್ಕೆ ಎಲ್ಲರೂ ಒಂದೇ ವ್ಯವಸ್ಥೆಯನ್ನು ಪಾಲಿಸಲು ಆರಂಭಿಸಿದ್ದರು. ಹಡಗಿನ ಎಡಬದಿಯಲ್ಲೇ ಪ್ರಯಾಣಿಕರು ಇಳಿಯುವ ವ್ಯವಸ್ಥೆ ಮಾಡಲಾಗಿತ್ತು. ಜಗತ್ತಿನ ಯಾವುದೇ ಬಂದರಿಗೆ ಹೋದರೂ ಸಮಸ್ಯೆಯಾಗಬಾರದು ಹಾಗೂ ಬಳಸುವ ಸಾಮಗ್ರಿಗಳು ಯಾವುದೇ ಹಡಗಿಗೂ ತೊಂದರೆ ಮಾಡಬಾರದು ಎನ್ನುವ ಕಾರಣಕ್ಕೆ ಎಡಬದಿಯಲ್ಲೇ ಇಳಿಯುವ ವ್ಯವಸ್ಥೆಯನ್ನು ಏಕರೂಪವಾಗಿ ಜಗತ್ತಿನಾದ್ಯಂತ ಪಾಲಿಸಲಾಗುತ್ತಿತ್ತು.
- ಬಾನುಪ್ರಕಾಶ್
ಭಾರತದಲ್ಲಿ ಬಸ್ಸುಗಳಿಗೆ ಎಡಬದಿಗೆ ಪ್ರಯಾಣಿಕರು ಇಳಿಯುವ ಬಾಗಿಲಿದ್ದರೆ, ಹೊರ ದೇಶಗಳಲ್ಲಿ ಈ ವ್ಯವಸ್ಥೆ ಬಲಗಡೆಗೆ ಇರುತ್ತದೆ. ಸಾಮಾನ್ಯವಾಗಿ ವಾಹನ ಚಾಲಕರು ಇರುವ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಕರು ಇಳಿಯುವುದು ಸುರಕ್ಷಿತ ಹಾಗೂ ವೈಜ್ಞಾನಿಕ ಎನ್ನುವ ಮಾತಿದೆ. ಅದೇ ರೈಲುಗಳ ವಿಚಾರಕ್ಕೆ ಬಂದರೆ, ಕೋಚ್‌ಗಳ ಎರಡೂ ಕಡೆ ಇಳಿಯುವ ವ್ಯವಸ್ಥೆ ಇರುತ್ತದೆ. ಪ್ಲ್ಯಾಟ್‌ಫಾರ್ಮ್‌ನ ಲಭ್ಯತೆ ಆಧರಿಸಿ ಎಡ ಹಾಗೂ ಬಲದ ಆಯ್ಕೆಯಾಗುತ್ತದೆ. ಆದರೆ ವಿಮಾನ ಹಾಗೂ ಹಡಗುಗಳಿಗೆ ಸಂಬಂಧಿಸಿ ಜಗತ್ತಿನೆಲ್ಲೆಡೆ ಒಂದೇ ವ್ಯವಸ್ಥೆಯಿದೆ ಎಂಬುದು ನಿಮಗೆ ತಿಳಿದಿದೆಯೇ?
ಹೌದು. ಜಗತ್ತಿನ ಯಾವುದೇ ದೇಶದ ವಿಮಾನ ನಿಲ್ದಾಣ ಹಾಗೂ ಬಂದರುಗಳಿಗೆ ಹೋದರೆ ನಿಮಗೆ ವಿಮಾನ ಅಥವಾ ಹಡಗುಗಳ ಎಡಬದಿಗೆ ಮಾತ್ರ ಪ್ರಯಾಣಿಕರು ಇಳಿಯುವ ಬಾಗಿಲಿನ ವ್ಯವಸ್ಥೆ ಇರುತ್ತದೆ. ನಿಲ್ದಾಣಗಳ ಲಭ್ಯತೆ ಹಾಗೂ ಜಾಗವನ್ನು ನೋಡಿ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆಯೇ ಇದಕ್ಕೆ ಐತಿಹಾಸಿಕ ಕಾರಣವೂ ಕೂಡ ಇದೆ.
ವಿಮಾನಗಳು ಬರುವ ನೂರಾರು ವರ್ಷಗಳ ಮೊದಲೇ ಜಗತ್ತಿನೆಲ್ಲೆಡೆ ಹಡಗುಗಳನ್ನು ಬಳಸಲಾಗುತ್ತಿತ್ತು. ಬೃಹತ್ ಹಡಗುಗಳಿಂದ ಜನರನ್ನು ಬಂದರುಗಳಲ್ಲಿ ಇಳಿಸುವುದಕ್ಕೆ ಎಲ್ಲರೂ ಒಂದೇ ವ್ಯವಸ್ಥೆಯನ್ನು ಪಾಲಿಸಲು ಆರಂಭಿಸಿದ್ದರು. ಹಡಗಿನ ಎಡಬದಿಯಲ್ಲೇ ಪ್ರಯಾಣಿಕರು ಇಳಿಯುವ ವ್ಯವಸ್ಥೆ ಮಾಡಲಾಗಿತ್ತು. ಜಗತ್ತಿನ ಯಾವುದೇ ಬಂದರಿಗೆ ಹೋದರೂ ಸಮಸ್ಯೆಯಾಗಬಾರದು ಹಾಗೂ ಬಳಸುವ ಸಾಮಗ್ರಿಗಳು ಯಾವುದೇ ಹಡಗಿಗೂ ತೊಂದರೆ ಮಾಡಬಾರದು ಎನ್ನುವ ಕಾರಣಕ್ಕೆ ಎಡಬದಿಯಲ್ಲೇ ಇಳಿಯುವ ವ್ಯವಸ್ಥೆಯನ್ನು ಏಕರೂಪವಾಗಿ ಜಗತ್ತಿನಾದ್ಯಂತ ಪಾಲಿಸಲಾಗುತ್ತಿತ್ತು. ಇದರಿಂದ ಹೆಚ್ಚುವರಿ ನಿರ್ವಹಣಾ ವೆಚ್ಚ ಕೂಡ ಬರುವುದಿಲ್ಲ. ಶತಮಾನಗಳಿಂದ ಇಂದಿನವರೆಗೂ ಜಗತ್ತಿನ ಎಲ್ಲ ಬಂದರು ಹಾಗೂ ಹಡಗುಗಳಲ್ಲಿ ಇದೇ ವ್ಯವಸ್ಥೆ ಜಾರಿಯಲ್ಲಿದೆ.

ವಿಮಾನಗಳ ಉತ್ಪಾದನೆ ಶುರುವಾದಾಗಲೂ ಸಾಮಾನ್ಯವಾಗಿ ಪ್ರಯಾಣಿಕರನ್ನು ಇಳಿಸುವ ಪ್ರಕ್ರಿಯೆಯನ್ನು ಹಡಗಿನಲ್ಲಿರುವುದನ್ನೇ ಅನ್ವಯ ಮಾಡಲಾಯಿತು. ದಿನಕಳೆದಂತೆ ವಿಮಾನವು ಜಾಗತಿಕ ಸಾಗಾಣಿಕೆ ಹಾಗೂ ಪ್ರಯಾಣಕ್ಕೆ ಆದ್ಯತೆಯಾಗುತ್ತಿದ್ದಂತೆ ಇದನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಪ್ರಯತ್ನ ನಡೆಯಿತು.
ಸಾಮಾನ್ಯವಾಗಿ ಬಸ್ ಅಥವಾ ಪ್ರಾದೇಶಿಕ ಸಾರ್ವಜನಿಕ ಸಾರಿಗೆಗಳು ಆಯಾ ದೇಶವನ್ನು ಬಿಟ್ಟು ಬೇರೆಡೆ ಹೋಗುವುದಿಲ್ಲ. ಹೀಗಾಗಿ ಪ್ರತಿ ದೇಶವೂ ತನ್ನದೇ ಆದ ವ್ಯವಸ್ಥೆ ಹೊಂದಿರಬಹುದು. ಆದರೆ ವಿಮಾನಯಾನ ಹಾಗೂ ಹಡಗುಯಾನ ಹಾಗಾಗುವುದಿಲ್ಲ. ಬದಲಾಗಿ ಏಕರೂಪ ವ್ಯವಸ್ಥೆಯು ನಿರ್ವಹಣೆಗೆ ಅನಿವಾರ್ಯವಾಗುತ್ತದೆ. ವಿಮಾನ ಹಾಗೂ ವಿಮಾನ ನಿಲ್ದಾಣದ ನಿರ್ವಹಣೆಯು ದುಬಾರಿ ಹಾಗೂ ಸೂಕ್ಷ್ಮವಾಗಿರುವುದರಿಂದ ಜಾಗತಿಕವಾಗಿ ಏಕರೂಪ ವ್ಯವಸ್ಥೆಯನ್ನು ತರಲಾಯಿತು.
ಇದರಂತೆಯೇ ಎಲ್ಲ ವಿಮಾನಗಳಲ್ಲಿ ಪ್ರಯಾಣಿಕರು ಇಳಿಯುವ ಮೆಟ್ಟಿಲುಗಳನ್ನು ಎಡಬದಿಯಲ್ಲೇ ಕಡ್ಡಾಯವಾಗಿ ಇಡಲಾಯಿತು. ನೀವು ಸದ್ಯಕ್ಕೆ ಹುಡುಕಿದರೂ ಯಾವುದೇ ವಿಮಾನಯಾನದಲ್ಲಿ ಬಲಬದಿಗೆ ಬಾಗಿಲು, ಮೆಟ್ಟಿಲು ಇರುವ ವಿಮಾನಗಳು ಸಿಗುವುದಿಲ್ಲ. ಇದಲ್ಲದೇ ವಿಮಾನದ ಪೈಲಟ್ ಕೂಡ ಕಾಕ್‌ಪಿಟ್‌ನ ಎಡಬದಿಯ ಸೀಟಿನಲ್ಲೇ ಕುಳಿತಿರುತ್ತಾರೆ. ಅವರಿಗೆ ಸುಲಭವಾಗಿ ಪ್ರಯಾಣಿಕರು ಇಳಿಯುವ ಬಾಗಿಲನ್ನು ವಿಮಾನ ನಿಲ್ದಾಣದ ಪೂರಕ ವ್ಯವಸ್ಥೆಗೆ ತಕ್ಕಂತೆ ನಿಲ್ಲಿಸಲು ಸಾಧ್ಯವಾಗುತ್ತದೆ. ಪೈಲಟ್‌ನ ಅಂದಾಜಿಗೂ ಇದು ಸುಲಭವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇದರ ಜತೆಗೆ ಇನ್ನೊಂದು ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದ ವಿಚಾರವೂ ಇದೆ. ಪ್ರಯಾಣಿಕರು ವಿಮಾನಕ್ಕೆ ಹತ್ತುವ ಹಾಗೂ ಇಳಿಯುವ ಸಮಯವನ್ನು ವ್ಯರ್ಥ ಮಾಡಲು ವಿಮಾನಯಾನ ಕಂಪೆನಿಗಳಿಗೆ ಅವಕಾಶವಿರುವುದಿಲ್ಲ. ಏಕೆಂದರೆ ಪ್ರತಿ ನಿಮಿಷಕ್ಕೂ ವಿಮಾನ ನಿಲ್ದಾಣದಲ್ಲಿ ಬಾಡಿಗೆ ಕಟ್ಟಬೇಕಾಗುತ್ತದೆ. ಹೀಗಾಗಿ ಎಡಬದಿಗೆ ಪ್ರಯಾಣಿಕರು ಇಳಿಯುವ ವೇಳೆಯಲ್ಲಿ ಬಲಬದಿಯಲ್ಲಿ ಒಂದೆಡೆ ಇಂಧನಗಳನ್ನು ಭರ್ತಿ ಮಾಡಲಾಗುತ್ತಿರುತ್ತದೆ. ಇನ್ನೊಂದೆಡೆ ಲಗೇಜ್‌ಗಳನ್ನು ವಿಮಾನಕ್ಕೆ ಹಾಕುವ ಬಾಗಿಲು ಕೂಡ ಬಲಕ್ಕಿರುತ್ತದೆ. ಪ್ರಯಾಣಿಕರು ಹತ್ತಿಳಿಯುವ ವೇಳೆಯಲ್ಲೇ ಈ ಕೆಲಸವನ್ನು ಇತರ ಸಿಬ್ಬಂದಿ ಮಾಡಿ ಮುಗಿಸಬಹುದು.
ಈ ಹಿಂದೆ ಬಲಕ್ಕೂ ಬಾಗಿಲಿತ್ತು!
1930ರ ಅವಧಿಯಲ್ಲಿ ಬೋಯಿಂಗ್ ಕಂಪೆನಿಯು ಯುನೈಟೆಡ್ ಏರ್‌ಲೈನ್‌ಗೆ ʼಬೋಯಿಂಗ್-247ʼ ಎನ್ನುವ ವಿಮಾನವನ್ನು ನಿರ್ಮಿಸಿತ್ತು. ಈ ವಿಮಾನವೀಗ ವಾಷಿಂಗ್ಟನ್ ಡಿಸಿಯಲ್ಲಿ ರಾಷ್ಟ್ರೀಯ ವಸ್ತುಸಂಗ್ರಾಹಲಯದಲ್ಲಿದೆ. ಈ ವಿಮಾನಕ್ಕೆ ಬಲಬದಿಯಲ್ಲೇ ಪ್ರಯಾಣಿಕರು ಇಳಿಯುವ ಬಾಗಿಲಿನ ವ್ಯವಸ್ಥೆಯಿತ್ತು. ಆದರೆ ವ್ಯವಹಾರಿಕ ಕಾರಣದಿಂದ ಭವಿಷ್ಯದಲ್ಲಿ ಬೋಯಿಂಗ್ ಕಂಪೆನಿಯು ಈ ವ್ಯವಸ್ಥೆಗೆ ತಿಲಾಂಜಲಿ ಹಾಡಿ, ಎಲ್ಲ ವಿಮಾನಕ್ಕೂ ಎಡಬದಿಯಲ್ಲೇ ಬಾಗಿಲಿನ ವ್ಯವಸ್ಥೆ ಮಾಡಿತು.
ಬೇರೆ ವಾಹನಗಳಲ್ಲಿ ಇರುವಂತೆ ವಿಮಾನ ನಿರ್ಮಾಣದಲ್ಲಿ ಗೊಂದಲ ಅಥವಾ ಅತೀವವಾದ ಸ್ಪರ್ಧೆಯಿಲ್ಲ. ಜಾಗತಿಕವಾಗಿ ಏರ್‌ಬಸ್ ಹಾಗೂ ಬೋಯಿಂಗ್ ಕಂಪೆನಿಗಳೇ ಬಹುತೇಕ ವಿಮಾನಗಳನ್ನು ನಿರ್ಮಿಸುತ್ತದೆ. ಜಾಗತಿಕ ವಾಣಿಜ್ಯ ವಿಮಾನ ನಿರ್ಮಾಣಗಳಲ್ಲಿ ಶೇ.55ರಷ್ಟು ಪಾಲನ್ನು ಏರ್‌ಬಸ್ ಹೊಂದಿದ್ದರೆ, ಬೋಯಿಂಗ್ ಶೇ.44ನ್ನು ಹೊಂದಿದೆ. ಉಳಿದ ಶೇ.1ನ್ನು ಇತರೆ ಸಣ್ಣಪುಟ್ಟ ಕಂಪೆನಿಗಳು ಹಂಚಿಕೊಂಡಿವೆ. ಅಂದಹಾಗೆ ಈ ಸಣ್ಣಪುಟ್ಟ ಕಂಪೆನಿಗಳ ವಿಮಾನಗಳು ಕೂಡ ಎಡಬದಿಯಲ್ಲೇ ಪ್ರಯಾಣಿಕರು ಇಳಿಯುವ ಬಾಗಿಲನ್ನು ಹೊಂದಿವೆ.