Friday, October 3, 2025
Friday, October 3, 2025

ವಿಂಡೋ ಟೂರಿಸಂ ಗೊತ್ತಾ?

ವಿಂಡೋ ಟೂರಿಸಂ ತಪ್ಪೇನಲ್ಲ. ಆದರೆ ವಿಂಡೋ ಟೂರಿಸಂ ಮಾಡಿ ಪ್ರತ್ಯಕ್ಷ ಹೋಗಿಬಂದವರಿಗಿಂತ ಹೆಚ್ಚಾಗಿ ಮಾತನಾಡುವುದು ಮತ್ತು ಬರೆಯುವುದು ಮಾತ್ರ ಘೋರ ಅಪರಾಧ. ಪ್ರವಾಸಕ್ಷೇತ್ರಕ್ಕೆ ಮಾಡೋ ದೊಡ್ಡ ಅಪಚಾರ.

ನಿಮಗೊಂದು ಪ್ರಶ್ನೆ. ನೀವು ವಿಂಡೋ ಟೂರಿಸಂ ಬಗ್ಗೆ ಕೇಳಿದೀರಾ? ಟೂರಿಸಂ ವಿಂಡೋ ಬಗ್ಗೆ ಕೇಳಿದ್ದಿರಬಹುದು. ಆದರೆ ವಿಂಡೋ ಟೂರಿಸಂ ಗೊತ್ತಿರಲು ಸಾಧ್ಯವಿಲ್ಲ. ಬಾಂಗ್ಲಾದಲ್ಲಿರುವ ಅಧಿಕೃತ ಟೂರ್ ಆಪರೇಟರ್ ಹೆಸರು ’ಟೂರಿಸಂ ವಿಂಡೋ’ ಅಂತ. ಅದೇ ರೀತಿ ಸಿಕ್ಕಿಂನಲ್ಲಿ ಟೂರಿಸಂ ವಿಂಡೋ ಹೆಸರಿನ ಖ್ಯಾತ ಟ್ರಾವೆಲ್ ಏಜೆನ್ಸಿ ಇದೆ. ಇನ್ನು ಪ್ರವಾಸೋದ್ಯಮದಲ್ಲಿ ಟೂರಿಸಂ ವಿಂಡೋ ಅನ್ನೋ ಪದ ಬಳಕೆಯಲ್ಲಿದೆ. ಆದರೆ ವಿಂಡೋ ಟೂರಿಸಂ ಎಂಬ ಪದ ಬಹುಶಃ ಹೊಸತು.

ನಿಮಗೆ ವಿಂಡೋ ಶಾಪಿಂಗ್ ಗೊತ್ತಲ್ವಾ? ಅದೇ ಥರ ವಿಂಡೋ ಟೂರಿಸಂ ಪದವನ್ನು ಯಾಕೆ ಹುಟ್ಟು ಹಾಕಬಾರದು ಎಂಬ ಜಿಜ್ಞಾಸೆಯಲ್ಲಿ ಈ ಪದ ಇಂದು ಪ್ರಸ್ತಾಪಿಸಿದ್ದೇನೆ. ವಿಂಡೋ ಟೂರಿಸಂಗೆ ನಾವು ಎರಡು ಅರ್ಥ ಕೊಡಬಹುದು. ಚಿಕ್ಕಂದಿನಿಂದ ಇಂದಿನ ತನಕ ಬಹಳಷ್ಟು ಪ್ರವಾಸಿಗರು ವಿಂಡೋ ಸೀಟ್ ಬೇಕು ಎಂದು ಹಪಹಪಿಸುತ್ತಾರೆ. ಅದಕ್ಕೆ ಕಾರಣ ಹಲವು, ಶುದ್ಧ ಗಾಳಿಗೆ ಮುಖ ಒಡ್ಡಬಹುದು, ಸಹಪ್ರಯಾಣಿಕರ ಮುಖ, ಬೆವರವಾಸನೆ, ಬಾಯಿವಾಸನೆ ಇತ್ಯಾದಿಗಳಿಂದ ತಪ್ಪಿಸಿಕೊಳ್ಳಬಹುದು, ಉಗಿಯುವ ಅಭ್ಯಾಸವಿದ್ದರೆ ಉಗೀತಾ ಇರಬಹುದು, ಪ್ರಯಾಣದ ಮಾರ್ಗ ಮತ್ತು ರಸ್ತೆಬದಿಗಿನ ಪ್ರಕೃತಿ,ಜನಜೀವನ, ಅಂಗಡಿ, ಸಿನಿಮಾ ಥಿಯೇಟರ್, ಚೆಂದದ ಹುಡುಗಿ ಎಲ್ಲವನ್ನೂ ನೋಡಬಹುದು ಅಂತ.

window tourism new

ಇದರ ಜೊತೆಗೆ ವಿಂಡೋಸೀಟ್ ಗಾಗಿ ಹೋರಾಡುವವರ ಇನ್ನೊಂದು ಕೆಟಗರಿ ಇದೆ. ಅವರನ್ನು ಪ್ಯೂಕರ್ ಬರ್ಗ್ ಅಥವಾ ವಾಂತಿಕಾರಿಗಳು ಅನ್ನಬಹುದು. ಅವರಿಗೆ ಗಾಡಿ ಚಾಲೂ ಆದಕೂಡಲೇ ಹೊಟ್ಟೆ ತೊಳೆಸಲು ಶುರುವಾಗುತ್ತದೆ. ವಿಂಡೋ ಸೀಟ್ ಕೊಟ್ಟರೆ ವಾಹನ ಸೇಫ್! ಇಂಥ ಪ್ರಜೆಗಳನ್ನು ವಿಂಡೋ ಟೂರಿಸ್ಟ್ ಗಳು ಅನ್ನಬಹುದು. ಇವರ ಪ್ರವಾಸವನ್ನು ವಿಂಡೋ ಟೂರಿಸಂ ಅನ್ನಬಹುದು.

ಇನ್ನೊಂದು ಅರ್ಥದಲ್ಲಿ ವಿಶ್ಲೇಷಿಸುವುದಾದರೆ, ಕೇವಲ ಪ್ರವಾಸಿ ಸ್ಥಳಗಳ ಫೊಟೋ ನೋಡಿ, ಯೂಟ್ಯೂಬ್ ಗಳಲ್ಲಿ ಪ್ರವಾಸದ ವಿಡಿಯೋ ನೋಡಿ, ನಮ್ಮಿಂದ ಹೋಗೋಕೆಲ್ಲ ಆಗಲ್ಲ, ನಾವು ನೋಡಿ ಖುಷಿ ಪಡೋಣ ಸಾಕು ಎಂಬ ಅಲ್ಪತೃಪ್ತರನ್ನು, ಪ್ರವಾಸದ ಆಸೆ ಇದ್ದರೂ ಮಾಡಲಾಗದೇ ವಿಡಿಯೋ ಫೋಟೋ ನೋಡಿ ಸಮಾಧಾನ ಪಟ್ಟುಕೊಳ್ಳುವವರನ್ನು ವಿಂಡೋ ಟೂರಿಸ್ಟ್ ಅನ್ನಬಹುದು. ಅವರ ಪ್ರವಾಸ ರೀತಿಯನ್ನು ವಿಂಡೋ ಟೂರಿಸಂ ಅನ್ನಬಹುದು.

ವಿಂಡೋ ಟೂರಿಸಂ ತಪ್ಪೇನಲ್ಲ. ಆದರೆ ವಿಂಡೋ ಟೂರಿಸಂ ಮಾಡಿ ಪ್ರತ್ಯಕ್ಷ ಹೋಗಿಬಂದವರಿಗಿಂತ ಹೆಚ್ಚಾಗಿ ಮಾತನಾಡುವುದು ಮತ್ತು ಬರೆಯುವುದು ಮಾತ್ರ ಘೋರ ಅಪರಾಧ. ಪ್ರವಾಸಕ್ಷೇತ್ರಕ್ಕೆ ಮಾಡೋ ದೊಡ್ಡ ಅಪಚಾರ. ಅಂದಹಾಗೆ ವಿಂಡೋ ಟೂರಿಸಂ ಎಂಬ ಪದ ಗೂಗಲಲ್ಲೂ ಇಲ್ಲ. ಹುಡುಕಲು ಹೋಗಬೇಡಿ. ಬೇಕಾದರೆ ಇನ್ನು ಮುಂದೆ ಈ ಪದವನ್ನು ಶಬ್ದಕೋಶಕ್ಕೆ ಸೇರಿಸಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!