ಘಾನಾ ಬಜಾನಾ ವರ್ಸಸ್ ತಮಟೆ ಡ್ಯಾನ್ಸ್
ಪ್ರತಿ ಸಾವೂ ಎಷ್ಟೋ ಜನಕ್ಕೆ ಉದ್ಯೋಗ ಒದಗಿಸುತ್ತಿದೆ, ಬದುಕು ಕೊಡುತ್ತಿದೆ! ಜೋಗಿ ಸಿನಿಮಾದಲ್ಲಿ ಸತ್ತವರನ್ನು ಅಳ್ತಾ ಕಳಿಸಿಕೊಡಬಾರದು, ನಗ್ತಾ ನಗ್ತಾ ಕುಣ್ತ ಹಾಕಿ ಕಳಿಸಿಕೊಡ್ಬೇಕು ಅಂತ ಪ್ರೇಮ್ಸ್ ಅದ್ಯಾವ ಘಳಿಗೇಲಿ ಹೇಳಿದ್ರೋ ಏನೋ ಬೆಂಗಳೂರಲ್ಲಿ ಈ ಸಂಪ್ರದಾಯ ಬಹಳ ಸೀರಿಯಸ್ಸಾಗೇ ಫೇಮಸ್ ಆಗೋಯ್ತು.
ಆಫ್ರಿಕಾದ ಘಾನಾದಲ್ಲಿ ಯಾರಾದರೂ ಸತ್ತರೆ ಗಾನಾಬಜಾನಾ ನಡೆಯುತ್ತಂತೆ. ಪಾರ್ಟಿ ಆಯೋಜನೆಯಾಗುತ್ತದಂತೆ. ನಿಮಗೆ ನೆನಪಿದ್ದೀತು.. ಸೋಷಿಯಲ್ ಮೀಡಿಯಾದಲ್ಲಿ ಕೆಲವು ವರ್ಷಗಳ ಹಿಂದೆ ಕಫಿನ್ ಡ್ಯಾನ್ಸ್ ಮತ್ತು ಸಾಂಗ್ ಎಂಬ ಮ್ಯೂಸಿಕ್ ಭಾರೀ ವೈರಲ್ ಕೂಡ ಆಗಿತ್ತು. ಇದನ್ನು ವಿದೇಶದ ಮಹಾನ್ ವೈಚಿತ್ರ್ಯ ಅಥವಾ ಅಪರೂಪದ ಅಪದ್ಧ ಸಂಪ್ರದಾಯ ಎಂಬಂತೆ ನಾವು ನೋಡುತ್ತಿದ್ದೇವೆ. ಆದರೆ ಇದು ನಿಜಕ್ಕೂ ಹೊಸತಾ? ಅಲ್ಲವೇ ಅಲ್ಲ. ನಮ್ಮಲ್ಲಿಯೂ ಇದು ನಡೆಯುವುದಿಲ್ಲವೇ? ಬೆಂಗಳೂರಿನಲ್ಲಂತೂ ಪ್ರತಿ ಸಾವಿನ ಮೆರವಣಿಗೆಗೂ ಬ್ಯಾಂಡ್ ಸೆಟ್ ಬರುತ್ತದೆ. ತಮಟೆ ಡ್ಯಾನ್ಸ್ ಇರುತ್ತದೆ. ಮದ್ಯ ಸೇವಿಸಿ ಕುಣಿಯುವವರ ದಂಡೇ ಇರುತ್ತದೆ. ಇದನ್ನು ಪರದೇಶದ ಯಾರಾದರೂ ನೋಡಿದರೆ, ತಮ್ಮ ದೇಶಕ್ಕೆ ಹೋಗಿ ವಿಶೇಷ ಎಂಬಂತೆ ಹೇಳಬಹುದಾ?

ಭಾರತದಲ್ಲಿ ಬೆಂಗಳೂರು ಅಂತ ಒಂದು ಊರಿದೆ. ಅಲ್ಲಿ ಯಾರಾದರೂ ಸತ್ತರೆ ಹೆಣದ ಮುಂದೆ ಕುಣೀತಾರೆ ಅಂತ? ಇರಲಿಕ್ಕಿಲ್ಲ. ಕಾರಣ ಇಷ್ಟೆ. ನಾವು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಸರಿಯಾದ ರೀತಿಯಲ್ಲಿ ಪ್ರಚಾರಕ್ಕೆ ಒಳಪಡಿಸುತ್ತಿಲ್ಲ. ಅದಕ್ಕೊಂದು ಸ್ಪಷ್ಟ ರೂಪವನ್ನೂ ಕೊಡುತ್ತಿಲ್ಲ. ಕೊಟ್ಟಿದ್ದಿದ್ರೆ ಯಾರಿಗ್ಗೊತ್ತು ಹೆಣದ ಮುಂದೆ ಕುಣಿಯುವ ಡ್ಯಾನ್ಸಿಗೆ, ತಮಟೆ ಬಡಿತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಪ್ರಚಾರ ಸಿಕ್ಕಿರುತ್ತಿತ್ತೇನೋ!
ಘಾನಾದಲ್ಲಿ ಈ ಸಂಪ್ರದಾಯದ ಹಿಂದೆ ಉದ್ಯೋಗ ಕಾಳಜಿಯೂ ಇದೆಯಂತೆ. ನಮ್ಮಲ್ಲೂ ಅಷ್ಟೆ ಅಲ್ಲವೇ? ಪ್ರತಿ ಸಾವೂ ಎಷ್ಟೋ ಜನಕ್ಕೆ ಉದ್ಯೋಗ ಒದಗಿಸುತ್ತಿದೆ, ಬದುಕು ಕೊಡುತ್ತಿದೆ! ಜೋಗಿ ಸಿನಿಮಾದಲ್ಲಿ ಸತ್ತವರನ್ನು ಅಳ್ತಾ ಕಳಿಸಿಕೊಡಬಾರದು, ನಗ್ತಾ ನಗ್ತಾ ಕುಣ್ತ ಹಾಕಿ ಕಳಿಸಿಕೊಡ್ಬೇಕು ಅಂತ ಪ್ರೇಮ್ಸ್ ಅದ್ಯಾವ ಘಳಿಗೇಲಿ ಹೇಳಿದ್ರೋ ಏನೋ ಬೆಂಗಳೂರಲ್ಲಿ ಈ ಸಂಪ್ರದಾಯ ಬಹಳ ಸೀರಿಯಸ್ಸಾಗೇ ಫೇಮಸ್ ಆಗೋಯ್ತು. ಸಾವಿನ ಮನೇಲಿ ದಿನಗಟ್ಲೆ ಮೃತದೇಹ ಇಟ್ಟುಕಾಯುವ ಪರಿಸ್ಥಿತಿ ಬಂದಾಗ ಹಾಡುಗಾರಿಕೆ ವ್ಯವಸ್ಥೆ ಮಾಡುವುದು, ಯಾರೋ ಮನಸ್ಸು ಹಗುರಗೊಳಿಸುವ ಮಾತನ್ನಾಡಿ ದುಃಖ ಮರೆಸುವುದು ಮೊದಲಿಂದಲೂ ಇದ್ದೇ ಇದೆ. ಇದನ್ನೆಲ್ಲ ಸಾವನ್ನು ಸಂಭ್ರಮಿಸುವುದು ಅಂತ ಅನ್ನಲಾಗುವುದಿಲ್ಲ.
ಸಾವಿನ ಮನೆಗೆ ಸದಾನಂದ ಗೌಡ್ರನ್ನ ಕರೀಬಾರ್ದು ಎಂಬ ಗಾದೆ ಹುಟ್ಟಿಕೊಂಡದ್ದು ನಿಮಗೆ ನೆನಪಿರಬಹುದು. ಮುಖವೇ ನಗುಮುಖವಿದ್ದರೆ, ಸಾವನ್ನು ಸಂಭ್ರಮಿಸುತ್ತಿರುವುದು ಎಂದು ತಪ್ಪು ತಿಳಿಯಬಹುದೇ? ತಮಿಳ್ನಾಡಿನಲ್ಲಿ ಕೆಲವೆಡೆ ಸತ್ತವರನ್ನು ನೋಡೋಕೆ ಬಂದವರೆಲ್ಲ ರೋಧಿಸಿ ಅಳಲೇಬೇಕೆಂಬ ಸಂಪ್ರದಾಯವಿದೆಯಂತೆ. ಕೆಲವೆಡೆ ಬಯ್ಯುವ ಸಂಪ್ರದಾಯವಿದೆ. ದೇವರನ್ನು ತರಾಟೆಗೆ ತೆಗೆದುಕೊಳ್ಳುವ ಪದ್ಧತಿ ಇದೆ. ಎಲ್ಲವೂ ಸಾವಿಗೆ ತೋರುವ ಸಂತಾಪವೇ ಹೊರತು ಸಂಭ್ರಮವಲ್ಲ. ಸಾವನ್ನು ಸಂಭ್ರಮಿಸುವುದು ಅಂದರೆ ಉಗ್ರರ, ದೇಶ ವಿರೋಧಿಗಳ, ಅಮಾನುಶ ವ್ಯಕ್ತಿಗಳ ಹತ್ಯೆ ಅಥವಾ ಸಾವಾದಾಗ ನಿಟ್ಟುಸಿರು ಬಿಟ್ಟು ಸತ್ತದ್ದು ಒಳ್ಳೆಯದಾಯ್ತು ಅಂತೀವಲ್ಲ ಅದು.