Sunday, December 14, 2025
Sunday, December 14, 2025

ವಿಷ್ಣುವಿನ ವಿರಾಟ ರೂಪ : 108 ಅಡಿ ಎತ್ತರದ ಏಕಶಿಲಾ ಮೂರ್ತಿ!

108 ಅಡಿ ಎತ್ತರದ ಶ್ರೀ ಮಹಾವಿಷ್ಣು ವಿಶ್ವರೂಪ ಏಕಶಿಲಾ ಮೂರ್ತಿಯ ನಿರ್ಮಾಣಕ್ಕಾಗಿ 2019 ರಲ್ಲಿ ತಮಿಳುನಾಡಿನ ತಿರುವಣ್ಣಾಮಲೈನಿಂದ 420 ಟನ್ ತೂಕದ ಏಕಶಿಲಾ ಕಲ್ಲನ್ನು 240 ಚಕ್ರಗಳ ಟ್ರಕ್‌ನಲ್ಲಿ ಆರು ತಿಂಗಳ ಅವಧಿಯಲ್ಲಿ ನಗರಕ್ಕೆ ತರಲಾಗಿತ್ತು. ಇತ್ತೀಚೆಗಷ್ಟೇ ಅಂದರೆ 2025ರ ಜೂನ್ 02ರಂದು ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಲಾಗಿತ್ತು.

ಬೆಂಗಳೂರಿನ ಧಾರ್ಮಿಕ ಕ್ಷೇತ್ರಗಳ ಪೈಕಿ ಸುಮಾರು 100 ವರ್ಷಗಳ ಇತಿಹಾಸವಿರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನವು ಧಾರ್ಮಿಕ ಪ್ರವಾಸಿಗರ ಕೇಂದ್ರ ಬಿಂದುವಾಗಿ ರೂಪುಗೊಂಡಿದೆ. ಇತ್ತೀಚೆಗಷ್ಟೇ ದೇವಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪನೆಗೊಂಡಿರುವ 108 ಅಡಿ ಎತ್ತರದ ಶ್ರೀ ಮಹಾವಿಷ್ಣು ವಿಶ್ವರೂಪ ಏಕಶಿಲಾ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಮಾತ್ರವಲ್ಲದೆ, ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದೆಲ್ಲೆಡೆಯಿಂದ ಜನರು ಇಲ್ಲಿ ಆಗಮಿಸುತ್ತಿದ್ದಾರೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಸೇರ್ಪಡೆ

ನಗರದ ಈಜಿಪುರದಲ್ಲಿರುವ ಕೋದಂಡರಾಮನ ಸನ್ನಿಧಿ ಹಲವು ದಶಕಗಳಿಂದ ಭಕ್ತರ ಆರಾಧನಾ ಕೇಂದ್ರವಾಗಿತ್ತು. 100 ವರ್ಷಗಳ ಇತಿಹಾಸವಿರುವ ಈ ದೇವಾಲಯ ಕೋದಂಡರಾಮನ ನೆಲೆಬೀಡಾಗಿದ್ದು, ನಂಬಿದ ಭಕ್ತರನ್ನು ಕೈಹಿಡಿದು ನಡೆಸುವ ದೇವರೆಂದು ಕರೆಸಿಕೊಂಡಿದ್ದಾರೆ. ಇದಕ್ಕೆ ಹೊಸ ಸೇರ್ಪೆಡೆಯೆಂಬಂತೆ ಕಳೆದ ಎಂಟು ತಿಂಗಳಿನಿಂದೀಚೆಗೆ ಈ ದೇವಾಲಯದಲ್ಲಿಯೇ ವಿಶ್ವರೂಪ ವಿಗ್ರಹದ ಸ್ಥಾಪನೆಯೊಂದಿಗೆ ಇದು ಭವಿಷ್ಯದಲ್ಲಿ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ತೀರ್ಥಕ್ಷೇತ್ರವಾಗುವ ನಿರೀಕ್ಷೆ ಇದೆ. ಭಕ್ತರು ಈಗಾಗಲೇ ಇದನ್ನು ಉತ್ತರಕ್ಕೆ ಅಯೋಧ್ಯೆ, ಮಧ್ಯಕ್ಕೆ ಭದ್ರಾಚಲಂ ಎಂದು ಗುರುತಿಸುವಂತೆ ಇದನ್ನು “ದಕ್ಷಿಣದ ಇಜಿಪುರಂ” ಎಂದು ಕರೆಯಲು ಆರಂಭಿಸಿದ್ದಾರೆ.

Untitled design (53)

ಹದಿನೈದು ವರ್ಷಗಳ ಅವಿರತ ಶ್ರಮ

ನಿವೃತ್ತ ಸರ್ಕಾರಿ ವೈದ್ಯ ಡಾ. ಬಿ. ಸದಾನಂದ ಅವರು ತಮ್ಮ ತಂದೆಯವರಿಂದ ನಿರ್ಮಾಣವಾಗಿದ್ದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯವನ್ನು ಅಭಿವೃದ್ಧಿಪಡಿಸಿ, 108 ಅಡಿ ಎತ್ತರದ ಶ್ರೀ ಮಹಾವಿಷ್ಣು ವಿಶ್ವರೂಪ ಏಕಶಿಲಾ ಮೂರ್ತಿಯನ್ನು ನಿರ್ಮಾಣ ಮಾಡಬೇಕೆಂದುಕೊಂಡಿದ್ದರು. ಇದಕ್ಕಾಗಿ 2010ರಿಂದಲೂ ಕಾರ್ಯಪ್ರವೃತ್ತರಾದ ಅವರು ಶೃಂಗೇರಿ ಜಗದ್ಗುರುಗಳು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಡಾ. ಸೆಲ್ವಪಿಳ್ಳೈ ಐಯ್ಯಂಗಾರ್‌ ಸೇರಿದಂತೆ ಅನೇಕ ಗಣ್ಯರನ್ನು ಇದಕ್ಕಾಗಿ ಭೇಟಿಯಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಕೊನೆಗೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದ ಅಂದರೆ 100 ವರ್ಷಗಳಿಗೂ ಹಳೆಯ ಪೇಂಟಿಂಗ್‌ನಲ್ಲಿರುವಂತೆ ಮಹಾವಿಷ್ಣು ವಿಶ್ವರೂಪದ ಕಾಲ್ಪನಿಕ ಚಿತ್ರವನ್ನು ಸಿದ್ಧಪಡಿಸಲಾಯಿತು. 2019 ರಲ್ಲಿ ತಮಿಳುನಾಡಿನ ತಿರುವಣ್ಣಾಮಲೈನಿಂದ 420 ಟನ್ ತೂಕದ ಏಕಶಿಲಾ ಕಲ್ಲನ್ನು 240 ಚಕ್ರಗಳ ಟ್ರಕ್‌ನಲ್ಲಿ ಆರು ತಿಂಗಳ ಅವಧಿಯಲ್ಲಿ ನಗರಕ್ಕೆ ತರಲಾಗಿತ್ತು. ಇತ್ತೀಚೆಗಷ್ಟೇ ಅಂದರೆ 2025ರ ಜೂನ್‌ 02ರಂದು ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಲಾಗಿತ್ತು. ಈ ವೇಳೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮತ್ತು ಮೈಸೂರಿನ ಪರಕಾಲ ಮಠದ 36ನೇ ಮಠಾಧೀಶರಾದ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಹಾದೇಸಿಕನ ಸ್ವಾಮೀಜಿಯವರು ಆಗಮಿಸಿದ್ದರು. ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ, ರಾಜಕೀಯ ಹಾಗೂ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಮಹಾವಿಷ್ಣು ವಿಶ್ವರೂಪ

ಶ್ರೀ ಮಹಾವಿಷ್ಣುವಿನ ವಿಶ್ವರೂಪದ ವಿಗ್ರಹ ಇತರ ವಿಷ್ಣು ಪ್ರತಿಮೆಗಳಿಗಿಂತಲೂ ವಿಭಿನ್ನವಾಗಿದೆ. ಪರಮಾತ್ಮನ ‘ಶಿವ ಕೇಶವ ಸ್ವರೂಪಂ’ ಮಹಾ ವಿಷ್ಣು, ಶಿವ, ಬ್ರಹ್ಮ, ಸ್ಕಂದ, ವಿನಾಯಕ, ನರಸಿಂಹ, ಆಂಜನೇಯ, ಗರುಡ, ಅಗ್ನಿ ಮತ್ತು ಋಷಿ ಮುನಿಗಳನ್ನು ಪ್ರತಿನಿಧಿಸುವ ಹಲವಾರು ತೋಳುಗಳು ಮತ್ತು ಶಿರಗಳನ್ನು ಈ ಮೂರ್ತಿ ಹೊಂದಿದೆ. ಶಿಲ್ಪಕಲೆಯ ಕೆಲಸ ಪೂರ್ಣಗೊಳಿಸುವಿಕೆ, ಹೊಳಪು ನೀಡುವಿಕೆ, ಕ್ರೇನ್ ಕೆಲಸ, ಪ್ರತಿಮೆಯ ಕಟ್ಟಡ ಚೌಕಟ್ಟು ಮತ್ತು ಇತರ ಸಿವಿಲ್ ಕೆಲಸಗಳನ್ನು ಒಳಗೊಂಡಂತೆ ಪ್ರತಿಮೆಯನ್ನು ಪೂರ್ಣಗೊಳಿಸಲು ಒಟ್ಟು 2.60 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗಿದೆ. ಕೋದಂಡರಾಮಸ್ವಾಮಿ ದೇವಸ್ಥಾನ ಚಾರಿಟೆಬಲ್ ಟ್ರಸ್ಟ್ ಈ ಯೋಜನೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿತ್ತು. ಈ ಪ್ರತಿಮೆ ಹಿಂದೂ ಧರ್ಮದ ಅನುಯಾಯಿಗಳಲ್ಲಿ ಏಕತೆಯನ್ನು ಸೃಷ್ಟಿಸಲು ಸಂಕೇತವೆಂದರೂ ತಪ್ಪಾಗಲಾರದು.

ಇತ್ತೀಚೆಗಷ್ಟೇ ಮರುನಾಮಕರಣಗೊಂಡಿರುವ ಶ್ರೀ ವಿರಾಟ ವಿಷ್ಣುರೂಪ ರಾಮನಾರಾಯಣ ಕ್ಷೇತ್ರದ ದರ್ಶನಕ್ಕೆ ಬೆಳಗ್ಗೆ 6.30 ರಿಂದ 11ಗಂಟೆಯ ವರೆಗೆ ಹಾಗೂ ಸಂಜೆ 5.30 ರಿಂದ ರಾತ್ರಿ 8.30ರ ವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ. ಶ್ರೀ ಮಹಾವಿಷ್ಣು ವಿಶ್ವರೂಪವನ್ನು ಹತ್ತಿರದಿಂದ ನೋಡಬೇಕಾದರೆ ಪ್ರತಿಯೊಬ್ಬರೂ 100 ರು. ಟಿಕೆಟ್ ಕೊಂಡುಕೊಳ್ಳಬೇಕಾಗುತ್ತದೆ. ಈಜಿಪುರದಲ್ಲಿ ವಾಹನ ನಿಲುಗಡೆಗೆ ಜಾಗದ ಕೊರತೆಯಿರುವುದರಿಂದಾಗಿ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿಲ್ಲ.

Vishnu statue

ವಿಜೃಂಭಿಸಿದ ವಿಷ್ಣು ದೀಪೋತ್ಸವ

ವಿರಾಟ ವಿಶ್ವರೂಪ ರಾಮ ನಾರಾಯಣ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಡಿಸೆಂಬರ್‌ 5, 2025ರ ಶುಕ್ರವಾರದಂದು, ಕೃತಿಕಾ ಪೌರ್ಣಮಿಯ ವಿಷ್ಣು ದೀಪೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 8 ಗಂಟೆಗೆ ರಾಮ ನಾರಾಯಣನಿಗೆ ವಿಶೇಷ ನವ ಕಲಶ ಅಭಿಷೇಕ ಮತ್ತು ಸಹಸ್ರ ದೀಪ ವಿಶೇಷ ಅಲಂಕಾರ, ಸಂಜೆ 5:30ಕ್ಕೆ ಕೃತಿಕಾ ದೀಪಾರಾಧನೆ, ನಕ್ಷತ್ರ ದೀಪಾರಾಧನೆ, ಪಂಚಲಕ್ಷ್ಮಿ ಆರಾಧನೆ, ಜ್ವಾಲಾ ತೋರಣ ಪೂಜೆ, ವಿಶ್ವರೂಪ ದರ್ಶನ, ರಾಮ ನಾರಾಯಣ ಗ್ರಾಮ ಪ್ರದಕ್ಷಿಣೆ, ಉಯ್ಯಾಲೋತ್ಸವ ಹೀಗೆ ಶಾಸ್ತ್ರದಂತೆ ಅನೇಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿತ್ತು.

ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನವನ್ನು ನನ್ನ ತಂದೆಯವರೇ ಕಟ್ಟಿಸಿದ್ದರು. ನನಗೆ ಅದನ್ನು ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದೆ. ಈ ಸಂದರ್ಭದಲ್ಲಿ 108 ಅಡಿ ಎತ್ತರದ ಶ್ರೀ ಮಹಾವಿಷ್ಣು ವಿಶ್ವರೂಪದ ಏಕಶಿಲಾ ಮೂರ್ತಿಯನ್ನು ಸ್ಥಾಪಿಸುವ ಅವಕಾಶವನ್ನು ದೇವರು ನನಗೆ ಕರುಣಿಸಿದ್ದರು. ಅದಕ್ಕಾಗಿ ಅನೇಕ ಮಂದಿ ನನಗೆ ನೆರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರದಿಂದಲೂ ಸಹಾಯ ಸಿಗುವ ನಿರೀಕ್ಷೆಯಿದೆ. ದೇವ ದೀಪಾವಳಿ ಎಂದು ಕರೆಯಲ್ಪಡುವ ವಿಷ್ಣು ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಿದ್ದೇವೆ. ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಈ ವೇಳೆ ಆಗಮಿಸಿದ್ದು, ಮಹಾವಿಷ್ಣುವಿಗೆ ಲಕ್ಷಾಂತರ ದೀಪವನ್ನು ಬೆಳಗಿಸಿದರು.

- ಡಾ.ವಿ ಸದಾನಂದ

ಭಗವದ್ಗಿತೆಯ 11ನೇ ಅಧ್ಯಾಯದಲ್ಲಿ ವಿಶ್ವರೂಪದ ಅಧ್ಯಾಯವಿದೆ. ನಡುವೆ ನಾರಾಯಣನ ಮುಖ, ಎಡಕ್ಕೂ ಬಲಕ್ಕೂ 5ರಂತೆ ದೇವಾನುದೇವತೆಗಳ ಮುಖಗಳನ್ನು ಮಾಡಲಾಗಿದೆ. 16 ಕೈಗಳು, ಸಪ್ತ ಸಾಗರ, ಸಪ್ತ ನದಿಗಳು, ಅಷ್ಟ ದಿಕ್ಪಾಲಕರು, ದೇವತೆಗಳು, ಗಾಯತ್ರಿ, ಸಾವಿತ್ರಿ, ಯಮ, ಚಾಮುಂಡೇಶ್ವರಿ, ಸ್ಕಂದ, ಹನುಮ, ನರಸಿಂಹ, ಈಶ್ವರ, ಹೀಗೆ 108 ಅಡಿಯ ಈ ಮೂರ್ತಿಯಲ್ಲಿ ಎಲ್ಲರೂ ಇದ್ದಾರೆ. ಇದು ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗಿರುವ ಬೃಹತ್‌ ವಿಷ್ಣು ಮೂರ್ತಿಯೆಂದರೂ ತಪ್ಪಾಗುವುದಿಲ್ಲ. ದೇವರ ಇಂಥ ವಿಗ್ರಹವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿರುವುದು ಆಜನ್ಮ ಪುಣ್ಯವೇ ಸರಿ.

-ಪ್ರೊ.ಸೆಲ್ವಪಿಳ್ಳೆ ಅಯ್ಯಂಗಾರ್, ಆಗಮಾಚಾರ್ಯರು

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!