ಪವನ ಪುತ್ರನನ್ನು ಕಾಣಲು ಇದು ಪವರಫುಲ್ ದೇವಾಲಯ
ಚೌಕಾಕಾರದಲ್ಲಿರುವ ದೇವಾಲಯದ ಸುತ್ತ ನಾಲ್ಕು ದಿಕ್ಕುಗಳಲ್ಲಿ ದಶಾವತಾರವನ್ನು ಗುರುತಿಸುವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹಿಂದೆ, ಕಲ್ಲುಗಳಲ್ಲಿ ಕೊರೆಯಲಾದ ದೇವಾಲಯದ ಇತಿಹಾಸದ ಕುರುಹುಗಳಿವೆ. ಅಲ್ಲೇ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತಿರುಗುವ ಪಲ್ಲಕ್ಕಿ, ರಥವೂ ಇದ್ದು, ಇವುಗಳನ್ನೆಲ್ಲ ನೋಡಿಕೊಂಡು, ಸಾಧ್ಯವಾದರೆ ಓದಿಕೊಂಡು ಓಡಾಡುತ್ತಿದ್ದರೆ, ದೈವಿಕ ಅನುಭವ ಆಗಿಯೇ ಆಗುತ್ತದೆ.
- ರಘು, ಕೊರ್ಲಗುಂದಿ
ಬಳ್ಳಾರಿಯಿಂದ ಕೊಂಚ ದೂರದ ಊರು ಎತ್ತಿನಭೂದಿಹಾಳು. ಅಲ್ಲಿ ನನ್ನ ಸ್ನೇಹಿತನ ಮದುವೆ ಇತ್ತು. ಹೊರಡಲು ನಾನು ಸಿದ್ಧನಾಗಿ ನನ್ನ ಸ್ನೇಹಿತರ ಬರುವಿಕೆ ನಿರೀಕ್ಷೆಯಲ್ಲಿ ನಮ್ಮೂರು ಕೊರ್ಲಗುಂದಿಯಿಂದ ಹೊರಟು ಬಳ್ಳಾರಿಯ ರಾಯಲ್ ಸರ್ಕಲ್‌ಗೆ ಬಂದು ನಿಂತಿದ್ದೆ. ಅವರನ್ನು ಜತೆಗೂಡಿಸಿಕೊಂಡು ಒಟ್ಟು ಮೂರೂ ಬೈಕುಗಳನ್ನು ಹತ್ತಿ ಎತ್ತಿನಬೂದಿಹಾಳು ಕಡೆಗೆ ಹೊರಟು ನಿಂತೆವು. ಕಾಲು ಗಂಟೆಯಲ್ಲಿ ಅಲ್ಲಿಗೆ ತಲುಪಿದ್ದ ನಮಗೆ, ಅಲ್ಲಿನ ರಸ್ತೆ, ಚರಂಡಿ, ಗಿಜಿಗುಡುವ ಕೆಸರು ನಮ್ಮನ್ನು ಆ ಊರಿಗೆ ಸ್ವಾಗತಿಸಿತ್ತು. ಅಲ್ಲಿದ್ದದ್ದು ಕೇವಲ ನಾಲ್ಕು ಗಂಟೆಗಳಾದರೂ ಅಷ್ಟೊತ್ತಿಗೆ ನನಗಾಗಲೆ ರೋಸಿಗೆ ಹುಟ್ಟಿತ್ತು. ಅಲ್ಲಿನ ಗ್ರಾಮ ಪಂಚಾಯಿತಿ, ಶಾಸಕರು ಅದೇನು ಮಾಡುತ್ತಿದ್ದಾರೋ, ಇರಲಿ. ನಾನಿಲ್ಲಿ ಹೇಳಲು ಹೊರಟಿದ್ದು ಮದುವೆಯ ನಂತರ ಅಲ್ಲಿಂದ ನಾವು ದಂಡು ಕಟ್ಟಿ ಹೊರಟು ನೋಡಿಬಂದ ನೇಮಿಕಲ್ ಆಂಜನೇಯ ದೇವಾಲಯ ಮತ್ತು ಅಲ್ಲಿನ ವಾತಾವರಣ, ಸ್ಥಳ ಪುರಾಣ, ಪ್ರಕೃತಿ ಸೌಂದರ್ಯ, ಜನ-ಜೀವನ, ಭಾಷೆ ಭಾವನೆ, ಆಚಾರ - ವಿಚಾರ, ನಡಾವಳಿ - ನಂಬಿಕೆಗಳ ಬಗ್ಗೆ. ಹಾಂ… ಅವು ಹೇಳುವಷ್ಟೇ ಸುಂದರವಾಗಿವೆ.
ನೇಮಿಕಲ್, ಪವನ ಪುತ್ರ ನೆಲೆಸಿರುವ ಪವಿತ್ರ ಸ್ಥಳ. ಬಳ್ಳಾರಿಯಿಂದ ಆಂಧ್ರದ ಹಿರೇಹಾಳು ಮಾರ್ಗವಾಗಿ ಹೊರಟರೆ, 10ಕಿಮೀ ಅಂತರದಲ್ಲಿ ನೇಮಿಕಲ್ ಆಂಜನೇಯ ದೇವಸ್ಥಾನವನ್ನು ತಲುಪಬಹುದು. ದಾರಿ ಮಧ್ಯದಲ್ಲಿ ಕಣ್ಣು ಅರಳಿಸಿ ನೋಡುವಂತೆ ಮಾಡುವ ಬೆಟ್ಟ ಗುಡ್ಡಗಳ ಸಾಲು, ಹಚ್ಚ ಹಸಿರಿನಿಂದ ಕೂಡಿದ್ದು, ಅವುಗಳ ತಪ್ಪಲಿನಲ್ಲಿ ಸೂರು ಕಟ್ಟಿ ಉಳಿದಿರುವ ಅಲೆಮಾರಿ ಕುರಿಗಾಹಿಗಳು, ಗಾಡಿ ಹೋಕನನ್ನೂ ನಿಲ್ಲಿಸಿ, ಫೊಟೋ ಕ್ಲಿಕ್ಕಿಸಿಕೊಳ್ಳುವಂತೆ ಮಾಡುವ ಮನಮೋಹಕ ದೃಶ್ಯ.

ದೇವಾಲಯ
ಆಂಜನೇಯ ಸ್ವಾಮಿಯ ದೇವಾಲಯ ಪುರಾತನವಾಗಿದ್ದು, ಬಾಗಿಲುಗಳ ಇಕ್ಕೆಲಗಳಲ್ಲಿ ಒಳಾಂಗಣದ ಗೋಪುರದ ಪಕ್ಕದಲ್ಲಿ ಕಡೆಗೆ ದೇವಸ್ಥಾನದ ಗರ್ಭಗುಡಿಯಲ್ಲೂ ಆಂಜನೇಯನೇ ನಿಂತು ಅಲ್ಲಿಗೆ ಬರುವ ಭಕ್ತರನ್ನು ಸುತ್ತಲಿನಿಂದಲೂ ಕಂಡು ಹರಸುತ್ತಾನೆ. ಗಮನ ಸೆಳೆಯುವ ಗೋಪುರ, ಮುಂದೆಯೇ ಇರುವ ಹಿತ್ತಾಳೆ ಪಾದುಕೆಗಳು, ಇತಿಹಾಸ ಪ್ರೇಮಿಗಳು ನೀವಾಗಿದ್ದಾರೆ ಗೋಪುರದ ಅಂಕಣದ ಎಡಬಲಗಳಲ್ಲಿ ಇರುವ ಬರಹಗಳನ್ನು ನೋಡಬಹುದು. ಇವುಗಳಲ್ಲಿ ದೇವಾಲಯದ ಜೀರ್ಣೋದ್ಧಾರಕ್ಕೆ ದಾನ ನೀಡಿದವರ ಹೆಸರುಗಳನ್ನು ಕಪ್ಪು ಕಲ್ಲುಗಳಲ್ಲಿ ಕೊರೆದು ಹಚ್ಚಲಾಗಿದೆ. ಗೋಪುರವನ್ನು ದಾಟಿ ಒಳಗೆ ಹೋದರೆ ಎದುರಿಗೆ ದೀಪ ಸ್ತಂಭವೂ, ಬಲಕ್ಕೆ ಆಂಜನೇಯನ ಐದು ಅಡಿ ಎತ್ತರದ ಹನುಮನ ವಿಗ್ರಹ ಅದರ ಮುಂದೆ ಕುಳಿತಿರುವ ಭಂಗಿಯ ನಂದಿಯ ವಿಗ್ರಹವಿದೆ.
ಚೌಕಾಕಾರದಲ್ಲಿರುವ ದೇವಾಲಯದ ಸುತ್ತ ನಾಲ್ಕು ದಿಕ್ಕುಗಳಲ್ಲಿ ದಶಾವತಾರವನ್ನು ಗುರುತಿಸುವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹಿಂದೆ, ಕಲ್ಲುಗಳಲ್ಲಿ ಕೊರೆಯಲಾದ ದೇವಾಲಯದ ಇತಿಹಾಸದ ಕುರುಹುಗಳಿವೆ. ಅಲ್ಲೇ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತಿರುಗುವ ಪಲ್ಲಕ್ಕಿ, ರಥವೂ ಇದ್ದು, ಇವುಗಳನ್ನೆಲ್ಲ ನೋಡಿಕೊಂಡು, ಸಾಧ್ಯವಾದರೆ ಓದಿಕೊಂಡು ಓಡಾಡುತ್ತಿದ್ದರೆ, ದೈವಿಕ ಅನುಭವ ಆಗಿಯೇ ಆಗುತ್ತದೆ. ದೇವಾಲಯದ ಹೊರಗೆ ಎಷ್ಟು ಗದ್ದಲಗಳಿದ್ದರೂ ಒಳಗೆ ಹೋಗುತ್ತಿದ್ದಂತೆ ಅವುಗಳನ್ನೆಲ್ಲ ಬದಿಗೊತ್ತುವ ಪ್ರಶಾಂತತೆ ನೆಲೆಸಿದೆ.
ಇಲ್ಲಿರುವ ಇತಿಹಾಸ ಎಲ್ಲೂ ಇಲ್ಲ
ಹೌದು, ಈ ದೇವಾಲಯದ ಇತಿಹಾಸವು ಬೇರೆಲ್ಲೂ ಇರದಷ್ಟು ವಿಭಿನ್ನವಾಗಿದೆ. ಏಕ ಕಾಲದಲ್ಲಿ ತ್ರಿಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಂಡ ಹನುಮಂತನ ದೇವಾಲಯಗಳಲ್ಲಿ ಇದು ಒಂದಾಗಿದೆ. ವ್ಯಾಸರಾಯರು ಏಕಕಾಲದಲ್ಲಿ ಈ ಮೂರು ದೇವಾಲಯಗಳನ್ನು ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಅವುಗಳಲ್ಲಿ ಕಸಾಪುರ ಮತ್ತು ಮುರುಡಿಯಲ್ಲಿರುವ ಆಂಜನೇಯ ದೇವಾಲಯಗಳು ಉಳಿದ ಎರಡು ದೇವಾಲಯಗಳು. ಅವುಗಳಲ್ಲಿ ನೇಮಕಲ್ಲಿನ ಆಂಜನೇಯ ದೇವಾಲಯವು ವಿಶೇಷವಾಗಿದ್ದು, ಹನುಮಂತನು ಲಕ್ಷ್ಮಣನನ್ನು ಉಳಿಸಲು ಸಂಜೀವಿನಿ ಪರ್ವತವನ್ನು ಹೊತ್ತು ತರುತ್ತಿರುವಾಗ ಒಂದು ಕಣ ತಿರುಪತಿಯಲ್ಲಿ ಮತ್ತೊಂದು ಕಣ ಈ ನೇಮಕಲ್ಲಿನಲ್ಲಿ ಬಿದ್ದಿತಂತೆ. ಈ ಸ್ಥಳ ಪುರಾಣಕ್ಕೆ ಹೊಂದಿಕೊಂಡಿರುವ ದೇವರ ಮೂರ್ತಿಯ ಜತೆಗೆ ಖಡ್ಗವೂ ಇದ್ದು, ಇದು ಸೀತಾ ದೇವಿಯು ಪ್ರಸಾದಿಸಿದ ಖಡ್ಗ ಎನ್ನಲಾಗಿದೆ.
ಏನೇ ಇರಲಿ ನಾವಂತು ನೋಡಿ ತಿರುಗಾಡಿ, ತಿಳಿದು ಮರಳಿ ಮನೆಗೆ ಬಂದಿದ್ದೇವೆ. ಮದುವೆಯಂತೂ ಮುಗಿಯಿತು ಅದರ ಹೆಸರಲ್ಲಿ ಪಡೆದ ರಜೆಗೆ ಈ ಓಡಾಟ ಪೂರ್ಣ ವಿರಾಮ ನೀಡಿತು.