ದೈವಿಕ ಮಾತ್ರವಲ್ಲ ಪ್ರಾಕೃತಿಕ ಅನುಭವವೂ ಹೌದು!
ವಿಶ್ವದ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾಗಿರುವ ಚಾರ್ ಧಾಂ ಯಾತ್ರೆಯು ಇತ್ತೀಚೆಗೆ ತುಂಬ ಪ್ರಸಿದ್ಧಿ ಪಡೆಯುತ್ತಿದೆ. ಕೇವಲ ಉತ್ತರ ಭಾರತೀಯರಿಗಷ್ಟೇ ಹೆಚ್ಚಾಗಿ ಗೊತ್ತಿದ್ದ ಈ ತೀರ್ಥಯಾತ್ರೆಯು ಬ್ಲಾಗರ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರಲ್ಲೂ ಕುತೂಹಲವನ್ನೂ ಈ ಯಾತ್ರೆಯ ಸವಾಲುಗಳನ್ನು ಅರಿಯಲೂ ಸಹಕಾರಿಯಾಗಿದೆ
- ಡಿ ಎಸ್ ರಾಮಸ್ವಾಮಿ
ಪ್ರಬಲ ಹಿಮಾಲಯದ ಶಿಖರಗಳ ನಡುವೆ ಏಕಾಂತದಲ್ಲಿ ನೆಲೆಸಿರುವ ನಾಲ್ಕು ದೇವಾಲಯಗಳ ದರ್ಶನವೇ ಚಾರ್ ಧಾಂ ಯಾತ್ರೆಯೆಂದು ಪ್ರಸಿದ್ಧವಾಗಿದೆ. ಈ ದೇಗುಲಗಳಿಗೆ ಭೇಟಿ ನೀಡುವುದು ವ್ಯಕ್ತಿಯ ಭಕ್ತಿಗಿಂತಲೂ ಅವನ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಅಳತೆಗೋಲೇ ಆಗಿದೆ. ಗಂಗಾ, ಯಮುನಾ, ವಿಷ್ಣು ಮತ್ತು ಪ್ರಬಲ ಶಿವ ಅಲ್ಲಿ ತಮ್ಮ ಶುದ್ಧ ಅವತಾರಗಳಲ್ಲಿ ಅಸ್ತಿತ್ವದಲ್ಲಿದ್ದಾರೆಂದು ಮತ್ತು ಹಿಂದೂಗಳಿಗೆ ಈ ಯಾತ್ರೆಯು ಸ್ವರ್ಗೀಯ ಆನಂದವನ್ನು ಅನುಭವಿಸಲು ಸಹಕಾರಿಯಾಗಿದೆ ಎಂದು ನಂಬಲಾಗಿದೆ.
ಚಾರ್ ಧಾಮ್ ಯಾತ್ರೆ ಎಂದರೇನು ಮತ್ತು ಅದು ಏಕೆ ಮುಖ್ಯ?
ಚಾರ್ ಧಾಮ್, ಅಂದ್ರೆ ಅಕ್ಷರಶಃ 'ನಾಲ್ಕು ನಿವಾಸಗಳು'. ಈ ಯಾತ್ರೆಯು ಉತ್ತರ ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ನಾಲ್ಕು ಪವಿತ್ರ ದೇವಾಲಯಗಳಿಗೆ ಪರ್ವತಗಳ ಮೇಲಿನ ಪ್ರಯಾಣವನ್ನು ಸೂಚಿಸುತ್ತದೆ. ಚಾರ್ ಧಾಮ್ ಸೈಟ್‌ಗಳ ದೊಡ್ಡ ಸರ್ಕ್ಯೂಟ್‌ನಿಂದ ಇದನ್ನು ಪ್ರತ್ಯೇಕಿಸಲು ಇದನ್ನು 'ಛೋಟಾ ಚಾರ್ ಧಾಮ್' ಎಂದೂ ಕರೆಯಲಾಗುತ್ತದೆ. ಚಾರ್ ಧಾಮ್ ಅನ್ನು ಒಳಗೊಂಡಿರುವ ನಾಲ್ಕು ದೇವಾಲಯಗಳೆಂದರೆ ಯಮುನೋತ್ರಿ ಧಾಮ್, ಗಂಗೋತ್ರಿ ಧಾಮ್, ಬದರಿನಾಥ್ ಧಾಮ್ ಮತ್ತು ಕೇದಾರನಾಥ ಧಾಮ್.
ಯಮುನೋತ್ರಿ ಧಾಮ, ಹೆಸರೇ ಸೂಚಿಸುವಂತೆ ಯಮುನಾ ದೇವಿಯ ಹೆಸರನ್ನು ಇಡಲಾಗಿದೆ. ಇದು ಯಾತ್ರೆಯ ಮಾರ್ಗದಲ್ಲಿ ಮೊದಲ ಧಾಮವಾಗಿದೆ. ಯಮುನಾ ನದಿಯ ಪವಿತ್ರ ನೀರಿನಲ್ಲಿ ಸ್ನಾನವು ಎಲ್ಲಾ ಪಾಪಗಳಲ್ಲಿ ಒಂದನ್ನು ಶುದ್ಧೀಕರಿಸುತ್ತದೆ ಮತ್ತು ಅಕಾಲಿಕ ಮರಣದಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಚೋಟಾ ಚಾರ್ ಧಾಮ್ ಸರ್ಕ್ಯೂಟ್‌ನಲ್ಲಿ ಬರುವ ಎರಡನೇ ದೇವಾಲಯ ಗಂಗೋತ್ರಿ ಧಾಮ್. ಇದು ಪವಿತ್ರ ಗಂಗಾ ನದಿಯ ಜನ್ಮಸ್ಥಳವಾಗಿದೆ. ಮೂರನೆಯ ದೇಗುಲವು ಭಗವಾನ್ ಶಿವನ ನಾಡು ಎಂದು ಕರೆಯಲ್ಪಡುವ ಕೇದಾರನಾಥ. ಇದು ಭೂಮಿಗೆ ಅತ್ಯಂತ ಎತ್ತರದಲ್ಲಿರುವ ಜ್ಯೋತಿರ್ಲಿಂಗವನ್ನು ಹೊಂದಿದೆ. ಮಂದಾಕಿನಿ ನದಿಯ ದಡದಲ್ಲಿ ನೆಲೆಸಿರುವ ಈ ದೇವಾಲಯದ ಹಿನ್ನೆಲೆಯ ನೋಟವೇ ಅದ್ಭುತ. ಇನ್ನು ಈ ಯಾತ್ರೆಯ ಕಡೆಯ ಅಂದರೆ ನಾಲ್ಕನೇ ದೇಗುಲವು ಭಗವಾನ್ ಬದ್ರಿ (ವಿಷ್ಣು). ಬದರಿನಾಥವು ಅಲಕನಂದಾ ನದಿಯ ದಡದಲ್ಲಿರುವ ದೇಗುಲವಾಗಿದ್ದು, ಗರ್ವಾಲ್ ಬೆಟ್ಟದ ಮೇಲೆ ಸುಂದರವಾಗಿ ನಿಂತಿದೆ.

ಚಾರ್ ಧಾಮ್ ಯಾತ್ರೆಗೆ ಹೇಗೆ ತಯಾರಿ ಆಗಬೇಕು?
ಚಾರ್ ಧಾಮ್ ಯಾತ್ರಿಗಳಿಗೆ ಯಾವುದೇ ನಿಗದಿತ ವಯಸ್ಸಿನ ಮಿತಿ ಇಲ್ಲ. ಆದರೆ ಕಠಿಣ ಪ್ರಾಕೃತಿಕ ವಾತಾವರಣದ ಕಾರಣ, ಆದ್ಯತೆಯ ವಯಸ್ಸಿನ ಆವರಣವು 7 ರಿಂದ 65 ವರ್ಷಗಳ ನಡುವೆ ಇರುವುದು ಒಳ್ಳೆಯದು. ಆದಾಗ್ಯೂ, ನಿಮ್ಮ ಆರೋಗ್ಯ ಸ್ಥಿತಿಯನ್ನು ಮೌಲ್ಯೀಕರಿಸಿಕೊಂಡು ನಿಮ್ಮ ವೈದ್ಯರ ಒಪ್ಪಿಗೆ ಪಡೆದೇ ಯಾತ್ರೆಯನ್ನು ಆರಂಭಿಸುವುದು ಒಳಿತು. ಉತ್ತರಾಖಂಡ್ ರಾಜ್ಯ ಮತ್ತು ಸ್ಥಳೀಯ ಆಡಳಿತವು ಎಲ್ಲ ಚಾರ್ ಧಾಮ್ ಶಿಬಿರಗಳಲ್ಲಿ ಪ್ರಥಮ ಚಿಕಿತ್ಸಾ ಕೊಠಡಿಗಳನ್ನು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಿದೆ. ಜೊತೆಗೆ ನಿಮ್ಮ ಸ್ವಂತ ಪ್ರಥಮ ಚಿಕಿತ್ಸಾ ಕಿಟ್ ಮತ್ತು ಅತ್ಯಗತ್ಯ ಔಷಧಗಳನ್ನು ಒಯ್ಯುವುದು ಒಳ್ಳೆಯದು.
ಹೆಜ್ಜೆ ಹೆಜ್ಜೆಗೂ ನಿಮ್ಮ ಯಾತ್ರೆಯ ದಾಖಲೆಯನ್ನು ಪರಿಶೀಲಿಸಲಾಗುತ್ತದೆ. ನೀವು ಈ ಮೊದಲೇ ಯಾತ್ರೆಗೆ ನೋಂದಣಿ ಮಾಡಿಸದಿದ್ದಲ್ಲಿ ನಿಮ್ಮನ್ನು ಯಾತ್ರೆಯ ಆರಂಭದಲ್ಲೇ ಹೊರದಬ್ಬಲಾಗುತ್ತದೆ.
ಚಾರ್ ಧಾಮ್ ಯಾತ್ರೆಯು ಎರಡು ಚಾರಣಗಳನ್ನು ಮತ್ತು ಎರಡು ನೇರ ದರ್ಶನಗಳನ್ನೂ ಒಳಗೊಂಡಿದೆ. ಜಾನಕಿಚಟ್ಟಿಯ ಮೂಲಕ ಯಮುನೋತ್ರಿಗೆ 6 ಕಿಮೀ ಏಕಮುಖ ಚಾರಣ ಮತ್ತು ಗೌರಿಕುಂಡ್‌ನಿಂದ ಕೇದಾರನಾಥಕ್ಕೆ 21 ಕಿಮೀ ಏಕಮುಖ ಚಾರಣ ನಡೆಸಲೇಬೇಕಾಗುತ್ತದೆ. ಚಾರಣ ಮಾಡುವ ಶಕ್ತಿ ಇಲ್ಲದಿದ್ದಲ್ಲಿ ಕುದುರೆಗಳನ್ನೂ ಪಾಲಕಿಗಳನ್ನೂ ಉಪಯೋಗಿಸಬಹುದು. ಆದರೆ ಇವುಗಳ ಉಪಯೋಗದಿಂದ ಸಹಜ ನಡಿಗೆಯ ಆನಂದ ಮತ್ತು ಸಂಭ್ರಮವನ್ನು ಪಡೆಯಲಾಗುವುದಿಲ್ಲ. ಆದ್ದರಿಂದ ಉತ್ತಮ ಹಿಡಿತವಿರುವ ಆರಾಮದಾಯಕ ಬೂಟುಗಳು, ಆಗಾಗ್ಗೆ ಮಳೆ ಬರುತ್ತಲೇ ಇರುವುದರಿಂದ ರೇನ್ ಕೋಟ್, ನೀರಿನ ಬಾಟಲಿ, ಒಆರೆಸ್, ಗ್ಲುಕೋಸ್ ನಿಮ್ಮೊಂದಿಗೆ ಇರಲೇಬೇಕು. ಚಾರಣ ಮಾಡಲು ಇಚ್ಛಿಸದ ಅಥವಾ ಸಾಧ್ಯವಾಗದವರು ಹೆಲಿಕಾಪ್ಟರ್ ಮೂಲಕವೂ ಮೂಲ ದೇಗುಲಗಳನ್ನು ದರ್ಶಿಸಬಹುದಾದರೂ ಹೆಲಿಕಾಪ್ಟರ್ ಟಿಕೇಟುಗಳನ್ನು ಮೊದಲೇ ಬುಕ್ ಮಾಡದಿದ್ದರೆ ಅನಗತ್ಯ ತೊಂದರೆ ತಪ್ಪಿದ್ದಲ್ಲ.
ಏಪ್ರಿಲ್ ನಿಂದ ಜೂನ್ ವರೆಗೆ ಚಾರ್ ಧಾಮ್ ನಲ್ಲಿ ಹವಾಮಾನವು ಹೆಚ್ಚಾಗಿ ಆಹ್ಲಾದಕರವಾಗಿರುತ್ತದೆ. ಹಿತವಾದ ಚಳಿ ಬೆಟ್ಟದ ಮೇಲಿರುವುದರಿಂದ ತಂಪಾಗಿರುತ್ತದೆ. ಈ ಕಾಲದಲ್ಲಿ ಮಾತ್ರ ವಿಪರೀತ ಮಳೆ ಇರದ ಕಾರಣ ಅದರ ಪರಿಣಾಮವಾಗಿ ಭೂಕುಸಿತದ ಸಾಧ್ಯತೆ ಹೆಚ್ಚಿರುವುದಿಲ್ಲ. ಬೆಚ್ಚಗಿನ ಜಾಕೆಟ್ ಗಳು, ಸ್ವೆಟರ್ ಗಳು, ಕೈಗವಸುಗಳು ಮತ್ತು ಉಣ್ಣೆಯ ಸಾಕ್ಸುಗಳ ಅಗತ್ಯ ಇದ್ದೇ ಇರುತ್ತದೆ. ಜುಲೈ ನಂತರ ವಿಪರೀತ ಮಳೆ ಈ ಪ್ರದೇಶಗಳಲ್ಲಿ ಇರುವುದರಿಂದ ಹೆಜ್ಜೆ ಹೆಜ್ಜೆಗೂ ಅಪಾಯ ಕಾದಿರುತ್ತದೆ. ಆದರೆ ಜನಜಂಗುಳಿ ಇರದ ಕಾರಣ ದರ್ಶನವು ಸುಲಭವಾಗಿ ಆಗಬಹುದಾದ ಸಾಧ್ಯತೆಗಳಿರುತ್ತವೆ.
ಈ ಯಾತ್ರೆಗೆ ಅಧ್ಯಾತ್ಮಿಕ ಮನಸ್ಥಿತಿ ಇರಲೇಬೇಕೆಂದಿಲ್ಲ. ಪ್ರಕೃತಿಯ ರಮಣೀಯ ದೃಶ್ಯಗಳನ್ನು, ಹಿಮಾಚ್ಛಾದಿತ ಬೆಟ್ಟಗುಡ್ಡಗಳನ್ನೂ, ಈ ಎಲ್ಲ ಸವಾಲುಗಳೊಂದಿಗೇ ಸೆಣಸುತ್ತಿರುವ ಅಲ್ಲಿನ ಜನಜೀವನ ಅರಿಯಲೂ ಈ ಯಾತ್ರೆ ನಮ್ಮನ್ನು ಸಜ್ಜುಗೊಳಿಸುತ್ತದೆ.
ಚಾರ್ ಧಾಮ್ ಯಾತ್ರೆಯು ದೀರ್ಘವಾದುದು ಮತ್ತು ಸವಾಲಿನದು. ಜತೆಗೆ ಅತ್ಯಂತ ಪ್ರಯಾಸಕರವಾದುದು. ದುರ್ಬಲ ಹೃದಯದವರಿಗೆ ಈ ಯಾತ್ರೆ ಅಲ್ಲವೇ ಅಲ್ಲ.
ಚಾರ್ ಧಾಮ್ ಯಾತ್ರೆಯು ಚೈತ್ಯ ಮಾಸದ ಅಕ್ಷಯ ತೃತೀಯದ ಶುಭ ದಿನದಂದು ಪ್ರಾರಂಭವಾಗುತ್ತದೆ ಮತ್ತು ದೀಪಾವಳಿ ಪಾಡ್ಯದ ತನಕ ತೆರೆದಿರುತ್ತದೆ. ಸಂಪೂರ್ಣ ಯಾತ್ರೆಯನ್ನು ಕೈಗೊಳ್ಳಲು ಹರಿದ್ವಾರದಿಂದ 11 ಅಥವಾ 12 ದಿನಗಳು ಬೇಕೇ ಬೇಕು.
ಸಮಯ ಸಿಕ್ಕಲ್ಲಿ, ಗೌಮುಖ, ತಪೋವನ ಕಣಿವೆಯ ದಿವ್ಯ ಅನುಭೂತಿ, ಭೈರವನಾಥ ದೇವಾಲಯ, ವಾಸುಕಿ ತಾಲ್, ಚೋಪ್ತಾ, ಔಲಿ ಮತ್ತು ಹೇಮಕುಂಡ್ ಸಾಹಿಬ್‌ನಂಥ ಹಲವಾರು ಸ್ಥಳಗಳನ್ನು ನೋಡಬಹುದು. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ದೆಹಲಿ, ಹರಿದ್ವಾರ, ಋಷಿಕೇಶ ಅಥವಾ ಡೆಹ್ರಾಡೂನ್‌ನಿಂದ ನಿಮ್ಮ ಯಾತ್ರೆಯನ್ನು ಪ್ರಾರಂಭಿಸಲು ನೀವು ಆಯ್ಕೆ ಮಾಡಬಹುದು.
ದೆಹಲಿಯು ರಾಜಧಾನಿಯಾಗಿರುವುದರಿಂದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಹರಿದ್ವಾರಕ್ಕೆ ಕೇವಲ 4 ಗಂಟೆಗಳ ರೈಲು ಪ್ರಯಾಣ.
ಚಾರ್ ಧಾಮ್ ಯಾತ್ರೆಯು ಹರಿದ್ವಾರದಿಂದ ಹೊರಟು ಬಾರಕೋಟ್ ತಲುಪುವುದರೊಂದಿಗೆ ಆರಂಭವಾಗುತ್ತದೆ. ಬಾರಕೋಟಿನಿಂದ 36 ಕಿಮೀ ಡ್ರೈವ್ ನಂತರ ಜಾನಕಿಚಟ್ಟಿಗೆ ಹೋಗಿ ಅಲ್ಲಿಂದ ಯಮುನೋತ್ರಿ ಧಾಮಕ್ಕೆ ಏಳುಕಿಮೀ ಚಾರಣ ಮಾಡಿ ತಲುಪಬೇಕು. ಒಂದು ದಿನದಲ್ಲೇ ಈ ಚಾರಣ ಸುಲಭ ಸಾಧ್ಯ. ನಂತರ ವಾಪಸ್ ಬಾರಕೋಟ್ ತಲುಪಿ ಅಲ್ಲಿ ಒಂದು ರಾತ್ರಿ ದಣಿವಾರಿಸಿಕೊಂಡು ಅಲ್ಲಿಂದ ಕೇವಲ 100 ಕಿಮೀ ದೂರದಲ್ಲಿರುವ ಉತ್ತರಕಾಶಿ ತಲುಪಿ ಅಲ್ಲಿ ತಂಗುವುದು ಚಾರ್ ಧಾಂ ಯಾತ್ರಿಗಳ ಸಾಮಾನ್ಯ ವೇಳಾ ಪಟ್ಟಿ.

ಉತ್ತರಕಾಶಿಯಲ್ಲಿ ಇರುವ ಕಾಶಿವಿಶ್ವನಾಥ ದೇಗುಲ ನೋಡಲೇ ಬೇಕಾದ ಸ್ಠಳ. ಇಲ್ಲಿಂದ ಗಂಗೋತ್ರಿ ಧಾಮಕ್ಕೆ ಸುಮಾರುಮೂರು ಗಂಟೆಗಳ ಪ್ರಯಾಣ. ಹೆಚ್ಚೇನೂ ಅಪಾಯವಿಲ್ಲದ ಆದರೆ ಸಂದಣಿ ವಿಪರೀತ ಇರುವುದರಿಂದ ಚಾಲಕನ ಚಾಕಚಕ್ಯತೆಗೆ ಸವಾಲು ಎಸೆಯುವ ಹಾದಿಯಿದು. ಗಂಗೋತ್ರಿಯ ದರ್ಶನದ ನಂತರ ವಾಪಸು ಉತ್ತರಕಾಶಿಗೆ ಬಂದು ಉಳಿದು, ಅಲ್ಲಿಂದ ಸುಮಾರು 180 ಕಿಮೀ ದೂರದಲ್ಲಿರುವ ಕೇದಾರನಾಥನನ್ನು ಕಾಣಲು ಮಾರ್ಗ ಮಧ್ಯ ರುದ್ರಪ್ರಯಾಗ ತಲುಪಿ ಅಲ್ಲಿನ ದಿವ್ಯ ದರ್ಶನ ಪಡೆದು ಮುಂದೆ ಫಟಾ ಅಥವ ಸೀತಾಪುರದಲ್ಲಿ ಉಳಿದು ಅಲ್ಲಿಂದ 15ಕಿಮೀ ಸೋನುಪ್ರಯಾಗ ತಲುಪಿ ಅಲ್ಲಿಂದ ಲಭ್ಯವಿರುವ ಸರ್ಕಾರೀ ವಾಹನ ಬಳಸಿ ಗೌರಿಕುಂಡಕ್ಕೆ ಹೋಗಬೇಕು. ಕೇದಾರನಾಥವನ್ನು ತಲುಪಲು ಗೌರಿಕುಂಡವೇ ಮೂಲ ದಾರಿ. ನಂತರ ಪರ್ವತದ ಕಡಿದಾದ ಹಾದಿಯಲ್ಲಿ 21 ಕಿಮೀ ಚಾರಣ ಮಾಡಲೇ ಬೇಕು. ಇಲ್ಲೂ ಕುದುರೆ, ಪಿತೂ ಮತ್ತು ಪಾಲಕಿಗಳು ಲಭ್ಯವಿವೆ. ಮೊದಲೆಲ್ಲ 14 ಕಿಮೀ ಒಂದೇ ದಿನದಲ್ಲಿ ಕ್ರಮಿಸಿ ದರ್ಶನ ಸಾಧ್ಯವಿದ್ದಿತ್ತಾದರೂ ಕೇದಾರದ ದುರಂತದ ನಂತರ ಚಾರಣದ ಹಾದಿ 21 ಕಿಮೀಗೆ ವಿಸ್ತರಿಸಿದೆ. ಹಾಗಾಗಿ ಎರಡು ದಿನಗಳಿಲ್ಲದೇ ಈ ಕೇದಾರನಾಥನ ದರ್ಶನ ಸಾಧ್ಯವೇ ಇಲ್ಲ.
ಯಾತ್ರೆಗಳು ಸುಲಭಕ್ಕೆ ಜರುಗಬಾರದು. ಪರಮಾತ್ಮನ ದರ್ಶನವು ಸುಲಭಕ್ಕೆ ಆಗಬಾರದೆಂದೇ ನಮ್ಮ ಹಿರೀಕರು ಬೆಟ್ಟದ ಮೇಲೆ ಗುಡಿಗಳನ್ನು ಕಟ್ಟುತ್ತಿದ್ದರು. ದೈಹಿಕ ಶ್ರಮದ ಜೊತೆಗೇ ಮಾನಸಿಕ ಸಿದ್ಧತೆಯೂ ಇಲ್ಲದಿದ್ದರೆ ಯಾತ್ರೆ ಪರಿಪೂರ್ಣ ಆಗುತ್ತಿರಲಿಲ್ಲ.
ಕೇದಾರದಿಂದ ವಾಪಸಾಗಿ ಫಟಾದಲ್ಲೋ, ಗುಪ್ತಕಾಶಿಯಲ್ಲೋ ಅಥವ ಸೀತಾಪುರದಲ್ಲೋ ಒಂದು ರಾತ್ರಿ ವಿಶ್ರಮಿಸಿದರೆ ಈ ಯಾತ್ರೆಯ ಕಡೆಯ ಬದ್ರಿನಾಥಕ್ಕೆ ನೀವು ತಯಾರಾದಿರೆಂದು ಅರ್ಥ. ಮಾರ್ಗಮಧ್ಯದಲ್ಲೆಲ್ಲಾದರೂ ಉಳಿದು ಬದರಿ ಧಾಮ ಸೇರಬಹುದಾದರೂ, ಹೆಚ್ಚಿನ ಪ್ರವಾಸೀ ಸಂಸ್ಥೆಗಳು ನೇರ ಬದರಿಗೇ ತಮ್ಮ ವಾಹನವನ್ನು ಚಲಾಯಿಸಿ ಅಲ್ಲೇ ತಂಗಲು ವ್ಯವಸ್ಥೆ ಮಾಡಿರುತ್ತವೆ. ಬದರಿಯಲ್ಲಿ ನಾರಾಯಣನ ದರ್ಶನ ನಂತರ ಅಲ್ಲೇ ಇರುವ ಬ್ರಹ್ಮ ಕಪಾಲದಲ್ಲಿ ಪಿತೃ ಕಾರ್ಯ ಸಾಮಾನ್ಯ ನಿಯಮಗಳೇ ಆಗಿವೆ.
ಬದರಿಯಿಂದ ಹೊರಟು ಮಾರ್ಗ ಮಧ್ಯೆ ಸಿಗುವ ನಾಲ್ಕು ಪ್ರಯಾಗಗಳನ್ನು ದರ್ಶಿಸಿ ಶ್ರೀನಗರದಲ್ಲೋ ಹೃಷಿಕೇಶದಲ್ಲೋ ತಂಗಿ ಮಾರನೇ ದಿನ ದೆಹಲಿ ತಲುಪಿ ನಿಮ್ಮೂರಿಗೆ ರೈಲನ್ನೋ ವಿಮಾನವನ್ನೋ ಹತ್ತಬಹುದು.