Thursday, February 12, 2026
Thursday, February 12, 2026

ತಂತ್ರ ವಿದ್ಯೆ ಸಾಧನೆಗೆ ನಿರ್ಮಾಣವಾಗಿದ್ದ ದೇವಾಲಯಗಳಿವು

ಯೋಗಿನಿಯರ ಉಪಾಸನೆ ಮಾಡುವವರದು ಒಂದು ಪಂಥವಾಗಿದ್ದು, ಇದು ಪ್ರಾಯಶಃ ತಂತ್ರ ಪದ್ದತಿ ಎಲ್ಲೆಡೆ ಹರಡಿದ್ದಾಗ ನಾಥ ಸಂಪ್ರದಾಯದ ಯೋಗಿ ಮತ್ಸ್ಯೇಂದ್ರನಾಥರಿಂದ ಆರಂಭವಾಗಿರಬಹುದು ಎನ್ನಲಾಗಿದೆ. ಇದನ್ನು ಯೋಗಿನೀ ಕೌಲಸಂಪ್ರದಾಯವೆಂದು ಕರೆಯಲಾಗಿತ್ತು. ಮತ್ಸ್ಯೇಂದ್ರನಾಥರು ಈಗ ದೇವಾಲಯವಿರುವ ಸ್ಥಳದಲ್ಲಿ ಅರವತ್ತ ನಾಲ್ಕು ಯೋಗಿನಿಯರನ್ನು ಒಮ್ಮೆಲೇ ಆಹ್ವಾನಿಸಿದ್ದರೆಂಬ ಕಥೆಯಿದೆ. ಯೋಗಿನಿಯರ ವಿವರಣೆಗಳಿರುವ ಏಕೈಕ ಸಂಸ್ಕೃತ ಗ್ರಂಥವೆಂದರೆ ಮಹಾಕೌಲಜ್ಞಾನನಿರ್ಣಯ.

  • ಡಾ.ಬಿ.ಆರ್.ಸುಹಾಸ್

ಚೌಷಟ್ ಯೋಗಿನೀ ದೇವಾಲಯವನ್ನು ಮಧ್ಯಪ್ರದೇಶದ ಜಬಲ್‌ಪುರದ ಪ್ರವಾಸದ ವೇಳೆ ನೋಡುವ ಅವಕಾಶ ನನಗೆ ದೊರಕಿತ್ತು. ಜಬಲ್‌ಪುರ್ ನಗರದಿಂದ ಸುಮಾರು ಇಪ್ಪತ್ತೆರಡು ಕಿಮೀ ದೂರದಲ್ಲಿರುವ ಭೇಡಾಘಾಟ್‌ನ ಬಳಿ ಈ ದೇವಾಲಯವಿದೆ. ಇದು ನರ್ಮದಾ ಮತ್ತು ಬಾಣಗಂಗಾ ನದಿಗಳ ಸಂಗಮತಾಣ. ಮೈನವಿರೇಳಿಸುವ ಅಮೃತಶಿಲೆಯ ಬೃಹತ್ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿ ಹಾಗೂ ಇದು ನಿರ್ಮಿಸಿರುವ ಧುವಾಂಧರ್ ಜಲಪಾತ ಸಹ ನೋಡಲು ಅತ್ಯಂತ ರಮಣೀಯವಾಗಿದೆ. ಭೇಡಾಘಾಟ್ ಗ್ರಾಮ ಒಂದು ತಾಂತ್ರಿಕ ಪೀಠವಾಗಿದ್ದು, ಮೂಲತಃ ಇದರ ಹೆಸರು ಭೈರವ ಘಾಟ್ ಆಗಿತ್ತೆಂದು ಹೇಳುತ್ತಾರೆ. ಕೆಲವರು ಭೇಡಾ ಎಂದರೆ ಸಂಗಮವೆಂದೂ ಹೇಳುತ್ತಾರೆ. ಇಲ್ಲಿ ಶಿವನನ್ನು ಮೆಚ್ಚಿಸಲು ಭೃಗು ಮಹರ್ಷಿಗಳು ಆತ್ಮಾರ್ಪಣೆ ಮಾಡಿಕೊಂಡರೆಂದು ಎನ್ನಲಾಗಿದೆ.

ಇದನ್ನೂ ಓದಿ: ಘಂಟೆ ಕೊಟ್ಟರೆ ಗಂಡಾಂತರ ಪರಿಹಾರ

ಜಬಲ್‌ಪುರ್ ನಾಮ ಕಾರಣ

ಕಥೆಗಳ ಪ್ರಕಾರ ನರ್ಮದಾ ನದಿಯ ದಂಡೆಯ ಮೇಲೆ ಜಾಬಾಲಿ ಎಂಬ ಮಹರ್ಷಿಗಳು ತಪಸ್ಸು ಮಾಡಿದ್ದರು ಎನ್ನಲಾಗಿದೆ. ಇದರಿಂದಾಗಿ ಜಾಬಾಲಿಪುರವೆಂಬ ಹೆಸರು ಬಂದು, ಅನಂತರ ಅದು ಜಬಲ್‌ಪುರ್ ಎಂಬ ಹೆಸರಾಗೆ ಬದಲಾಯಿತು ಎನ್ನಲಾಗಿದೆ. ಹಾಗಾಗಿ ಜಬಲ್‌ಪುರ್ ಎಂದರೆ ಋಷಿಮುನಿಗಳ ತಪೋಭೂಮಿ ಎನ್ನುತ್ತಾರೆ ಸಾಕಷ್ಟು ಜನರು.

Untitled design (12)

ಚೌಷಟ್ ಯೋಗಿನೀ ದೇವಾಲಯ

ಚೌಷಟ್ ಯೋಗಿನೀ ದೇವಾಲಯ ಒಂದು ಬೆಟ್ಟದ ಮೇಲಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ಮೆಟ್ಟಿಲುಗಳನ್ನು ಹತ್ತುತ್ತಾ ತಲುಪಬೇಕು. ಈ ದೇವಾಲಯ ಒಂದು ರೀತಿಯ ಬಯಲು ದೇವಾಲಯವಾಗಿದ್ದು, ಗೋಳಾಕೃತಿಯಲ್ಲಿದೆ. ಎಂಬತ್ತೊಂದು ಪ್ರತ್ಯೇಕ ಕೋಣೆಗಳನ್ನು ಹೊಂದಿದೆ. ಮುಖ್ಯವಾಗಿ ಒಂದು ಗೋಳಾಕೃತಿಯ ಗೋಡೆಯಿದ್ದು, ನಿಯಮಿತ ಅಂತರಗಳಲ್ಲಿ ಕಂಬಗಳನ್ನು ನಿರ್ಮಿಸಿ ಎಂಬತ್ತೊಂದು ಕೋಣೆಗಳನ್ನು ಕಟ್ಟಲಾಗಿದೆ. ಪ್ರತಿ ಕೋಣೆಯಲ್ಲೂ ಅತ್ಯಂತ ಸುಂದರವಾದ, ಕೆಂಪು ಮರಳುಗಲ್ಲಿನಲ್ಲಿ ಕೆತ್ತಿದ ದೇವಿಯರ ಮೂರ್ತಿಗಳಿವೆ. ಸುಂದರವಾದ ಅಂಗಸೌಷ್ಠವದಿಂದ, ಆಭರಣಗಳಿಂದ ಭೂಷಿತವಾಗಿ ಕುಳಿತ ಭಂಗಿಯಲ್ಲಿ ಈ ದೇವಿಯರ ವಿಗ್ರಹಗಳಲ್ಲಿ ಅರವತ್ತು ನಾಲ್ಕು ಯೋಗಿನಿಯರದ್ದಾದರೆ, ಮಿಕ್ಕವು ಸಪ್ತಮಾತೃಕೆಯರ ಹಾಗೂ ಇತರ ದೇವತೆಗಳದ್ದಾಗಿವೆ. ಒಂದು ಗಣೇಶನ ಮೂರ್ತಿಯೂ ಇದೆ. ಚೌಷಟ್ ಎಂದರೆ ಅರವತ್ತು ನಾಲ್ಕು ಎಂದು ಅರ್ಥ. ಆದರೆ ಇಲ್ಲಿ ಎಂಬತ್ತೊಂದು ವಿಗ್ರಹಗಳಿವೆ. ವಿಗ್ರಹಗಳ ಸುತ್ತಲಿನ ಅಲಂಕಾರ ಬಹಳ ಅದ್ಭುತವಾಗಿದ್ದು, ಅನೇಕ ತಾಂತ್ರಿಕ ಚಿಹ್ನೆಗಳಿಂದ ಕೂಡಿವೆ.‌ ಪೀಠಗಳಲ್ಲಿ ಪ್ರಾಣಿಗಳ ಕೆತ್ತನೆಗಳೂ ಇವೆ. ಕೆಲವು ವಿಗ್ರಹಗಳು ನರ್ತಿಸುವ ಭಂಗಿಯಲ್ಲೂ ಇವೆ. ಆದರೆ ದುರದೃಷ್ಟಕರ ವಿಚಾರವೆಂದರೆ, ಬಹುತೇಕ ವಿಗ್ರಹಗಳು ಮುಸ್ಲಿಂ ದಾಳಿಕೋರರಿಂದ ದಾಳಿಗೊಳಗಾಗಿ ಮುರಿದು ಹಾಳಾಗಿವೆ. ಈ ದೇವಾಲಯವನ್ನು ಹತ್ತನೆಯ ಶತಮಾನದಲ್ಲಿ ಕಳಚೂರಿಗಳ ರಾಜನಾದ ಮೊದಲನೆಯ ಯುವರಾಜದೇವನು ನಿರ್ಮಿಸಿದನೆಂದು ಹೇಳಲಾಗಿದೆ.‌ ಹಾಗಾಗಿ ಇದು ಕಳಚೂರಿಗಳ ಕಲೆಯನ್ನು ತೋರಿಸುತ್ತದೆ. ಈ ದೇವಾಲಯ ಗೋಳಾಕೃತಿಯಲ್ಲಿರುವುದರಿಂದ ಇದನ್ನು ಗೋಳಕೀಮಠವೆಂದು ಹೆಸರಿಸಲಾಗಿದೆ. ಇದು ಶೈವ ತಾಂತ್ರಿಕ ಪಂಥಕ್ಕೆ ಸೇರಿದ್ದು, ಶ್ರೀಚಕ್ರ ಪೂಜೆ ಸೇರಿ ಹಲವು ತಾಂತ್ರಿಕ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ಚಕ್ರಾಕಾರದ ಮಂದಿರದ ಆವರಣದಲ್ಲಿ ಗೌರೀಶಂಕರ ದೇವಾಲಯವೆಂಬ ಇನ್ನೊಂದು ಕಲಾತ್ಮಕ ದೇವಾಲಯವಿದೆ. ಇದನ್ನು ಅಲ್ಹಣದೇವಿಯೆಂಬ ಕಳಚೂರಿ ರಾಣಿಯು ಕಟ್ಟಿಸಿದ್ದೆಂದೂ ಅನಂತರದ್ದೆಂದೂ ತಿಳಿದುಬಂದಿದೆ. ಈ ದೇವಾಲಯವು ನಾಗರಶೈಲಿಯ ಶಿಖರವನ್ನು ಹೊಂದಿದ್ದು, ಎತ್ತರದ ಪೀಠದ ಮೇಲೆ ಕಟ್ಟಲಾಗಿದೆ. ಗರ್ಭಗುಡಿಯ ಹೊರಗೆ ಬೇರೆ ಬೇರೆ ಗಾತ್ರದ ಶಿವಲಿಂಗಗಳು ಒಂದು ಗಂಟೆಯೂ ಇದೆ. ಗರ್ಭಗೃಹದಲ್ಲಿ ತ್ರಿಶೂಲಧಾರಿ ಶಿವ ಮತ್ತು ಕನ್ನಡಿ ಹಿಡಿದಿರುವ ಪಾರ್ವತಿ ನಂದಿಯ ಮೇಲೆ ಕುಳಿತಿರುವ ವಿಗ್ರಹಗಳಿವೆ. ಇವಲ್ಲದೆ, ಗಣೇಶ, ಷಣ್ಮುಖ, ಲಕ್ಷ್ಮೀನಾರಾಯಣರು ತಮ್ಮ ವಾಹನಗಳ ಮೇಲೆ ಕುಳಿತಿರುವ ವಿಗ್ರಹಗಳೂ ಇಲ್ಲಿವೆ. ಇಲ್ಲಿ ಮಾತ್ರ ಈಗಲೂ ಪೂಜೆ ನಡೆಯುತ್ತವೆ. ಆದರೆ ಮುರಿದಿರುವ ಯೋಗಿನೀ ವಿಗ್ರಹಗಳಿಗೆ ಪೂಜೆಯಿಲ್ಲ.

Untitled design (11)

ದೇವಾಲಯಗಳಿರುವ ಬೆಟ್ಟದ ಮೇಲೆ ಬೀಸುವ ತಂಗಾಳಿ ಹಾಗೂ ಹಸಿರು ಪ್ರಕೃತಿ ಆಹ್ಲಾದವುಂಟುಮಾಡುತ್ತವೆ. ಅಮೃತಶಿಲೆಯ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿಯ ನೋಟ ಮನೋಹರವಾಗಿರುತ್ತದೆ. ಇಲ್ಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಕಲ್ಲುಬೆಂಚುಗಳನ್ನೂ ಹಾಕಲಾಗಿದೆ. ‌ಸ್ಥಳೀಯರು ಹೇಳುವಂತೆ, ಇಲ್ಲಿ ಒಂದು ಸುರಂಗಮಾರ್ಗವಿದ್ದು, ಅದು ಜಬಲ್‌ಪುರವನ್ನು ಆಳುತ್ತಿದ್ದ ಗೊಂಡರ ರಾಣಿ ದುರ್ಗಾವತಿಯ ಅರಮನೆಗೆ ಸಂಪರ್ಕ ಹೊಂದಿತ್ತು ಎನ್ನಲಾಗಿದೆ. ಈಗ ಈ ಇಡೀ ತಾಣ ಭಾರತೀಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ.

ಯೋಗಿನಿಯರು ಮತ್ತು ಯೋಗಿನಿ ದೇವಾಲಯಗಳು

ಒಟ್ಟು ಅರವತ್ತು ನಾಲ್ಕು ಯೋಗಿನಿಯರು ಇದ್ದು, ಇವರು ತಂತ್ರಕ್ಕೆ ಸಂಬಂಧಿಸಿದ ಸ್ತ್ರೀ ದೇವತೆಗಳು. ಇವರನ್ನು ಉಪಾಸಿಸುವ ತಂತ್ರ ಸಾಧಕರಿಗೆ ಇವರು ನೆರವಾಗುತ್ತಾರೆ ಎಂದು ಹೇಳಲಾಗುತ್ತದೆ. ಯೋಗಿನಿಯರ ಉಪಾಸನೆ ಮಾಡುವವರದು ಒಂದು ಪಂಥವಾಗಿದ್ದು, ಇದು ಪ್ರಾಯಶಃ ತಂತ್ರ ಪದ್ದತಿ ಎಲ್ಲೆಡೆ ಹರಡಿದ್ದಾಗ ನಾಥ ಸಂಪ್ರದಾಯದ ಯೋಗಿ ಮತ್ಸ್ಯೇಂದ್ರನಾಥರಿಂದ ಆರಂಭವಾಗಿರಬಹುದು ಎನ್ನಲಾಗಿದೆ. ಇದನ್ನು ಯೋಗಿನೀ ಕೌಲಸಂಪ್ರದಾಯವೆಂದು ಕರೆಯಲಾಗಿತ್ತು. ಮತ್ಸ್ಯೇಂದ್ರನಾಥರು ಈಗ ದೇವಾಲಯವಿರುವ ಸ್ಥಳದಲ್ಲಿ ಅರವತ್ತ ನಾಲ್ಕು ಯೋಗಿನಿಯರನ್ನು ಒಮ್ಮೆಲೇ ಆಹ್ವಾನಿಸಿದ್ದರೆಂಬ ಕಥೆಯಿದೆ. ಯೋಗಿನಿಯರ ವಿವರಣೆಗಳಿರುವ ಏಕೈಕ ಸಂಸ್ಕೃತ ಗ್ರಂಥವೆಂದರೆ ಮಹಾಕೌಲಜ್ಞಾನನಿರ್ಣಯ. ಕೆಲವು ಕಥೆಗಳ ಪ್ರಕಾರ, ಈ ಯೋಗಿನಿಯರು ದುರ್ಗಾದೇವಿಯ ವಿಸ್ತರಣೆಗಳು ಹಾಗೂ ಸಹಾಯಕರಾಗಿದ್ದು, ರಾಕ್ಷಸರೊಂದಿಗಿನ ದೇವಿಯ ಯುದ್ಧದಲ್ಲಿ ಸಹಾಯ ಮಾಡುತ್ತಾರೆ. ಅವರು ಯೋಗೇಶ್ವರಿ ಸೇರಿದಂತೆ ಅಷ್ಟಮಾತೃಕೆಯರ ವಿಸ್ತರಣೆಯರೆಂದೂ ಹೇಳುತ್ತಾರೆ. ಕೆಲವು ಯೋಗಿನಿಯರಿಗೆ ಸ್ತ್ರೀ ದೇಹ ಹಾಗೂ ಪ್ರಾಣಿಯ ಮುಖವೂ ಇರುತ್ತದೆ! ಭಾರತದಲ್ಲಿ ಒಡಿಶಾದ ಹೀರಾಪುರ, ರಾಣೀಪುರ, ಝರಿಯಲ್, ಮಧ್ಯಪ್ರದೇಶದ ಭೇಡಾಘಾಟ್, ಖಜುರಾಹೋ, ದುಧಾಯ್ ಇತ್ಯಾದಿ ಕಡೆಗಳಲ್ಲಿ ಮತ್ತು ದೆಹಲಿಯ ಯೋಗಿನೀಪುರ, ಉತ್ತರ ಪ್ರದೇಶದ ವಾರಾಣಸಿ, ಅಸ್ಸಾಂನ ಗುವಾಹಟಿ, ನೇಪಾಳದ ಕಠ್ಮಂಡು, ಮೊದಲಾದ ಕಡೆಗಳಲ್ಲಿ ಈ ಯೋಗಿನೀ ದೇವಾಲಯಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ ಕೆಲವು ದುಸ್ಥಿತಿಯಲ್ಲಿವೆ. ಒಟ್ಟಿನಲ್ಲಿ ಜಬಲ್‌ಪುರದ ಚೌಷಟ್ ಯೋಗಿನೀ ದೇವಾಲಯದ ಭೇಟಿ, ಯೋಗಿನಿಯರೆಂಬ ವಿಸ್ಮಯಕರ ದೇವತೆಗಳ ಹಾಗೂ ಅವರ ದೇವಾಲಯಗಳ ಬಗ್ಗೆ ಕುತೂಹಲ ಮೂಡಿಸುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ