ನೋಡಬನ್ನಿ ಜ್ಯೋತಿರ್ಲಿಂಗ - ಮಹಾರಾಷ್ಟ್ರದ ಗೃಷ್ಣೇಶ್ವರನ ದರ್ಶನ
ಕಳೆದ ವಾರದ ಸಂಚಿಕೆಯಲ್ಲಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನನ ದರ್ಶನ ಮಾಡಿಸಿದ್ದೆವು. ಈ ವಾರ ಮಹಾರಾಷ್ಟ್ರದ ಗೃಷ್ಣೇಶ್ವರನ ದರ್ಶನ ಮಾಡಿಸಲಿದ್ದೇವೆ. ಇದು ʼನೋಡಬನ್ನಿ ಜ್ಯೋತಿರ್ಲಿಂಗ-ವಾರಕ್ಕೊಮ್ಮೆ ಶಿವ ದರ್ಶನʼದ ಆರನೇ ಜ್ಯೋತಿರ್ಲಿಂಗ.
ಭಾರತದಲ್ಲಿ ಹನ್ನೆರಡು ಪವಿತ್ರ ಶಿವಸ್ಥಾನಗಳಿವೆ. ಅದನ್ನು ಹನ್ನೆರಡು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಸಾಕಷ್ಟು ಶಿವನ ದೇಗುಲಗಳಿವೆ. ಆದರೆ ಈ ಹನ್ನೆರಡು ಜ್ಯೋತಿರ್ಲಿಂಗಗಳಿಗೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆಯಿದೆ. ಶೈವ ಭಕ್ತರ ಪಾಲಿಗೆ ಅದು ಪರಮ ಪವಿತ್ರ ಕ್ಷೇತ್ರ. ಜ್ಯೋತಿರ್ಲಿಂಗದಲ್ಲಿ ನೆಲೆಸಿರುವ ಶಿವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗವು ಮಹಾದೇವನ ಸ್ವಯಂಭೂ ಅವತಾರವಾಗಿದ್ದು, ಭಗವಾನ್ ಶಿವನ ಜ್ಯೋತಿ ಗೋಚರಿಸುವಲ್ಲೆಲ್ಲಾ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.
ಮಹಾರಾಷ್ಟ್ರದ ಗೃಷ್ಣೇಶ್ವರ
ಗೃಷ್ಣೇಶ್ವರ ಜ್ಯೋತಿರ್ಲಿಂಗವನ್ನು ಭಾರತದ ಕೊನೆಯ ಜ್ಯೋತಿರ್ಲಿಂಗವೆಂದು ಕರೆಯಲಾಗುತ್ತದೆ. ಈ ದೇವಾಲಯವು ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ದೌಲತಾಬಾದ್‌ನಿಂದ 20 ಕಿ.ಮೀ ದೂರದಲ್ಲಿದೆ. ಗೃಷ್ಣೇಶ್ವರ ಸ್ಥಳ ಪ್ರತೀತಿಯಿಂದಲೂ ಪ್ರಸಿದ್ಧತೆ ಪಡೆದುಕೊಂಡಿದೆ. ಇದು ಪ್ರಖ್ಯಾತ ಪ್ರವಾಸಿ ತಾಣಗಳಾದ ಅಜಂತಾ ಮತ್ತು ಎಲ್ಲೋರಾ ಗುಹೆಗಳ ಸಮೀಪದಲ್ಲಿದೆ.

ಪುರಾಣ ಮತ್ತು ದಂತಕಥೆಯ ಪ್ರಕಾರ ಒಂದು ಕಾಲದಲ್ಲಿ ಶಿವನ ಅಪ್ರತಿಮ ಭಕ್ತೆಯಾಗಿದ್ದ ಕುಸುಮಾ ಎಂಬಾಕೆಯು ಇಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಆಕೆ ಪ್ರತಿದಿನವೂ ತನ್ನ ಪ್ರಾರ್ಥನೆಗೂ ಮೊದಲು ಶಿವನ ಲಿಂಗವನ್ನು ತೊಟ್ಟಿಯಲ್ಲಿ ಮುಳುಗಿಸುತ್ತಿದ್ದಳು. ಕುಸುಮಾಳ ಗಂಡನ ಎರಡನೇ ಹೆಂಡತಿಗೆ(ಸವತಿ) ಕುಸುಮಾಳಿಗೆ ಸಮಾಜದಲ್ಲಿ ದೊರಕುತ್ತಿದ್ದ ಗೌರವವನ್ನು ಮತ್ತು ಆಕೆಗಿದ್ದ ಅಪಾರ ಶಿವನ ಭಕ್ತಿಯನ್ನು ಕಂಡು ತೀರಾ ಅಸೂಯೆ ಉಂಟಾಯಿತು. ಅದೇ ಅಸೂಯೆ ಮತ್ತು ಕೋಪದಿಂದ, ಅವಳು ಕುಸುಮಾಳ ಮಗನನ್ನು ಕೊಂದಳು. ಇದರಿಂದ ನೊಂದ ಕುಸುಮಾ ಮಗನ ಸಾವಿನಿಂದ ದುಃಖಿತಳಾಗಿ ಮಾನಸಿಕವಾಗಿ ಖಿನ್ನಳಾದಳು. ಆದರೂ ಅವಳ ಶಿವನಾಮ ಭಜನೆ ನಿಂತಿರಲಿಲ್ಲ.
ಮುದ್ದಾದ ಮಗ ಸಾವನ್ನಪ್ಪಿದರೂ ತನ್ನ ದಿನಚರಿಯಂತೆ ಲಿಂಗವನ್ನು ತೊಟ್ಟಿಯಲ್ಲಿ ಮುಳುಗಿಸಿದಾಗ, ಅದ್ಭುತವೆಂಬಂತೆ ಆಕೆಯ ಮಗನು ಮರಳಿ ಜೀವ ಪಡೆದನು ಎಂದು ನಂಬಲಾಗಿದೆ. ಆ ಸಮಯದಲ್ಲಿ ಕುಸುಮಾ ಮತ್ತು ಹಳ್ಳಿಗರ ಮುಂದೆ ಶಿವನು ಕಾಣಿಸಿಕೊಂಡನು ಎಂದೂ ಹೇಳಲಾಗುತ್ತದೆ. ತನ್ನ ಭಕ್ತೆಯಾದ ಕುಸುಮಾಳ ಕೋರಿಕೆಯ ಮೇರೆಗೆ, ಶಿವನು ಆ ಸ್ಥಳದಲ್ಲಿಯೇ, ಗೃಷ್ಣೇಶ್ವರ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಯಾದನು. ಅಕಾಲಿಕ ಮರಣ ಮತ್ತು ಸಂತಾನ ಸಮಸ್ಯೆಗಳ ಪರಿಹಾರಕ್ಕಾಗಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.