Wednesday, October 22, 2025
Wednesday, October 22, 2025

ಮಲೆನಾಡಿನ ಪವಿತ್ರ ಶಿಖರದಲ್ಲಿಹಳು ವರ್ಷಕ್ಕೊಮ್ಮೆ ದರ್ಶನ ನೀಡುವ ಬೆಟ್ಟದ ದೇವೀರಮ್ಮ

ಚಿಕ್ಕಮಗಳೂರಿನಿಂದ ಕೇವಲ ಇಪ್ಪತ್ತೈದು ಕಿಮೀ ದೂರದಲ್ಲಿದೆ ಬಿಂಡಿಗ ದೇವೀರಮ್ಮನ ದೇವಸ್ಥಾನ. ಅಲ್ಲಿಂದ ಸುಮಾರು ಎಂಟು ಕಿಮೀ ನಷ್ಟು ದೂರ ಗಿರಿ ಚಾರಣ ಮಾಡಿದರೆ ಬೆಟ್ಟದ ತುದಿಯಲ್ಲಿ ನೆಲೆಸಿರುವ ಗಿರಿ ದೇವೀರಮ್ಮ ದರ್ಶನ ನೀಡುತ್ತಾಳೆ. ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವೀರಮ್ಮ ದರ್ಶನ ನೀಡುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಅದು ದೀಪಾವಳಿಯ ನರಕಚತುರ್ದಶಿಯ ಸಂದರ್ಭದಲ್ಲಿ.

ಚಿಕ್ಕಮಗಳೂರು ಅಂದರೆ ಅದು ಪ್ರಕೃತಿ ಯೌವ್ವನಕ್ಕೆ ಕಾಲಿರಿಸಿದ ನಾಡು. ಕರ್ನಾಟಕದ ಕಾಫಿನಾಡು. ಹಸಿರು ಸೀರೆ ಮಲ್ಲಿಗೆ ಮುಡಿದಂಥ ಸೊಬಗಿನ ಚೆಲುವಿನ ಬೀಡು. ಎತ್ತ ತಿರುಗಿ ನೋಡಿದರೂ ಎತ್ತರೆತ್ತರ ಬೆಟ್ಟಗಳು, ಹಚ್ಚ ಹಸಿರಿನ ಕಾಫಿ ತೋಟಗಳು. ಹಾಗಾದ್ರೆ ಚಿಕ್ಕಮಗಳೂರು ಅಂದ್ರೆ ಕೇವಲ ಪ್ರಕೃತಿ ಸಿರಿ ಮಾತ್ರವಾ? ಅಲ್ಲ. ಇಲ್ಲಿ ಪ್ರತಿ ಬೆಟ್ಟದ ಹಿಂದೆ ಒಂದು ಆಳವಾದ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯ ಅಡಗಿದೆ. ಪ್ರತಿ ಬೆಟ್ಟಕ್ಕೂ ಒಂದು ಪೌರಾಣಿಕ ಐತಿಹ್ಯವಿದೆ. ಪ್ರತಿ ಬೆಟ್ಟದ ತಪ್ಪಲಿಗೂ ಧಾರ್ಮಿಕ ಮಹತ್ವವಿದೆ. ಆಚರಣೆಗೆ ಸಂಬಂಧಪಟ್ಟ ವಿಷಯಗಳಿವೆ. ರಾಮಾಯಣ ಮಹಾಭಾರತ ಕಾಲಕ್ಕೂ ಹಿಂದಿನ ಅವಧಿಯ ದೈವಿಕ ವಿಚಾರಗಳಿವೆ. ಅಂಥ ಒಂದು ಶ್ರೇಷ್ಠ ಧಾರ್ಮಿಕ ಮಹತ್ವ ಹೊಂದಿರುವ ಸ್ಥಳ ದೇವೀರಮ್ಮನ ಬೆಟ್ಟ ಹಾಗೂ ದೇವೀರಮ್ಮನ ದೇವಸ್ಥಾನ.

ಭಕ್ತಾದಿಗಳಲ್ಲಿ ಸಂಚಲನ

ದೇವೀರಮ್ಮನ ಬೆಟ್ಟ ಅಥವಾ ದೇವೀರಮ್ಮನ ದೇವಸ್ಥಾನದ ಹೆಸರು ಕೇಳಿದರೆ ಭಕ್ತಾದಿಗಳಲ್ಲಿ ಮತ್ತು ಯಾತ್ರಿಗಳಲ್ಲಿ ಒಂದು ಸಂಚಲನ ಉಂಟಾಗುತ್ತದೆ. ನರನಾಡಿಗಳಲ್ಲಿ ಭಕ್ತಿರಸ ಸಂಚರಿಸುತ್ತದೆ. ದೇವೀಶಕ್ತಿ ಅವಿರ್ಭವಿಸುತ್ತದೆ. ಅದಕ್ಕೆ ಕಾರಣ ದೇವೀರಮ್ಮನ ಘನೀಕೃತ ಶಕ್ತಿ. ಆಕೆಯ ಮಹಿಮೆ. ಜತೆಗೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುವ ದೇವಿಯ ಅಪರೂಪದ ಗುಣ. ಹೀಗಾಗಿ ಪ್ರತಿ ವರ್ಷ ದೀಪಾವಳಿ ಬಂತೆಂದರೆ ಸಾಕು, ನರಕ ಚತುರ್ದಶಿಯ ದಿನ ಭಕ್ತಾದಿಗಳು ದೇವೀರಮ್ಮನ ದರ್ಶನಕ್ಕೆಂದು ಹೊರಟು ನಿಲ್ಲುತ್ತಾರೆ. ಎಂಥ ಕಟ್ಟುನಿಟ್ಟಿನ ಆಚರಣೆಗೂ ಸಿದ್ಧರಾಗುತ್ತಾರೆ.

deveeramma betta 2

ಅಲ್ಲಿ ಚಾಮುಂಡಿ ಇಲ್ಲಿ ದೇವೀರಮ್ಮ

ನವರಾತ್ರಿಯ ಸಮಯದಲ್ಲಿ ತಾಯಿ ಚಾಮುಂಡಿಯನ್ನು ದರ್ಶಿಸಲು ಭಕ್ತಗಣ ಹೇಗೆ ಮೈಸೂರಿನ ಚಾಮುಂಡಿ ಬೆಟ್ಟದತ್ತ ಹೆಜ್ಜೆ ಹಾಕುತ್ತಾರೋ ಹಾಗೆಯೇ ದೀಪಾವಳಿ ಸಮಯದಲ್ಲಿ ದೇವೀರಮ್ಮನನ್ನು ದರ್ಶಿಸಲು ಚಿಕ್ಕಮಗಳೂರಿನತ್ತ ದೌಡಾಯಿಸುತ್ತಾರೆ. ಏಕೆಂದರೆ ತಾಯಿ ಚಾಮುಂಡಿ ಬೇರೆ ಅಲ್ಲ ದೇವೀರಮ್ಮ ಬೇರೆ ಅಲ್ಲ.

ಗಿರಿ ದೇವೀರಮ್ಮ- ಬಿಂಡಿಗ ದೇವೀರಮ್ಮ

ಚಿಕ್ಕಮಗಳೂರಿನಿಂದ ಕೇವಲ ಇಪ್ಪತ್ತೈದು ಕಿಮೀ ದೂರದಲ್ಲಿದೆ ಬಿಂಡಿಗ ದೇವೀರಮ್ಮನ ದೇವಸ್ಥಾನ. ಅಲ್ಲಿಂದ ಸುಮಾರು ಎಂಟು ಕಿಮೀ ನಷ್ಟು ದೂರ ಗಿರಿ ಚಾರಣ ಮಾಡಿದರೆ ಬೆಟ್ಟದ ತುದಿಯಲ್ಲಿ ನೆಲೆಸಿರುವ ಗಿರಿ ದೇವೀರಮ್ಮ ದರ್ಶನ ನೀಡುತ್ತಾಳೆ. ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವೀರಮ್ಮ ದರ್ಶನ ನೀಡುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಅದು ದೀಪಾವಳಿಯ ನರಕಚತುರ್ದಶಿಯ ಸಂದರ್ಭದಲ್ಲಿ.

ಈ ಬಾರಿ ಎರಡು ದಿನ ದರ್ಶನ ಭಾಗ್ಯ!

ಹೌದು. ಇದು ಭಕ್ತಾದಿಗಳು ಗಮನಿಸಲೇಬೇಕಾದ ಸುದ್ದಿ. ಇದೇ ಪ್ರಪ್ರಥಮ ಬಾರಿಗೆ ದೇವೀರಮ್ಮನ ಬೆಟ್ಟಕ್ಕೆ ಎರಡು ದಿನಗಳ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಕೇವಲ ಒಂದು ದಿನ ಮಾತ್ರ ಬೆಟ್ಟಕ್ಕೆ ಪ್ರವೇಶ ಸಿಗುತ್ತಿತ್ತು. ಆದರೆ ಈ ಬಾರಿ ಎರಡು ದಿನ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ವಿಶೇಷ ಎಂದರೆ ಪ್ರತಿ ಬಾರಿ ರಾತ್ರಿಯ ಹೊತ್ತು ಬೆಟ್ಟ ಹತ್ತಿ ಬೆಳಗ್ಗೆ ದೇವಸ್ಥಾನ ತಲುಪುವ ಪದ್ಧತಿ ನಡೆದು ಬಂದಿತ್ತು. ಆದರೆ ಈ ಬಾರಿ ರಾತ್ರಿ ಬೆಟ್ಟ ಹತ್ತಲು ಅವಕಾಶ ನೀಡಿಲ್ಲ. ಬದಲಿಗೆ ಅಕ್ಟೋಬರ್ ಹತ್ತೊಂಬತ್ತರಂದು ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯ ತನಕ ದೇವಿಯ ದೇವಸ್ಥಾನವು ದರ್ಶನಕ್ಕೆ ತೆರೆದಿರುತ್ತದೆ. ಅದೇ ರೀತಿ ಇಪ್ಪತ್ತನೇ ತಾರೀಖು ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಮೂರು ಗಂಟೆಯ ತನಕ ದರ್ಶನಕ್ಕೆ ಅವಕಾಶ ಇರುತ್ತದೆ. ಮಲೆನಾಡಿನ ಭಾಗದಲ್ಲಿ ಈ ಬಾರಿ ಅಕ್ಟೋಬರ್ ತನಕವೂ ಮಳೆ ಸುರಿದಿರುವುದರಿಂದ ಚಾರಣಕ್ಕೆ ರಾತ್ರಿ ಹೊತ್ತು ಸೂಕ್ತವಿಲ್ಲವೆಂದು ಭಕ್ತಾದಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಈ ಬಾರಿ ಹಿಂದಿನ ಎಲ್ಲ ವರ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಹರಿದುಬರುವ ನಿರೀಕ್ಷೆ ಕಾಣುತ್ತಿದೆ.

ಭೌಗೋಳಿಕ ಮತ್ತು ಐತಿಹಾಸಿಕ ಹಿನ್ನೆಲೆ

ದೇವೀರಮ್ಮನ ಬೆಟ್ಟವು ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪವಿರುವ ಬಿಂಡಿಗಾ ಗ್ರಾಮದ ವ್ಯಾಪ್ತಿಯಲ್ಲಿದೆ. ಈ ಬೆಟ್ಟವು ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಪ್ರಕೃತಿ ಸೌಂದರ್ಯದ ಮಾನದಂಡದಲ್ಲೂ ಇದೊಂದು ಅದ್ಭುತ ಜಾಗ ಅನ್ನಬಹುದಾಗಿದೆ.

ಎತ್ತರ: ಬೆಟ್ಟದ ಎತ್ತರ ಸುಮಾರು 3,000 ರಿಂದ 3,800 ಅಡಿಗಳಷ್ಟಿದ್ದು, ಇದನ್ನು ಏರುವುದು ಒಂದು ಸವಾಲಿನ ವಿಷಯವೂ ಹೌದು ಅದೇ ರೀತಿ ಶ್ರದ್ಧಾಭಕ್ತಿಯ ವಿಷಯವೂ ಹೌದು

ದೇಗುಲದ ಸ್ವರೂಪ: ಬೆಟ್ಟದ ತುದಿಯಲ್ಲಿರುವ ದೇವಸ್ಥಾನವು ಪ್ರಾಚೀನ ಕಾಲದ ರಚನೆಯಾಗಿದ್ದು, ಇದಕ್ಕೆ ಗೋಡೆಗಳಾಗಲೀ ಅಥವಾ ಬಾಗಿಲುಗಳಾಗಲೀ ಇರಲಿಲ್ಲ ಎಂಬ ನಂಬಿಕೆಯಿದೆ. ಇಂದಿಗೂ ಸರಳ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿರುವ ಈ ದೇಗುಲವು ತಾಯಿ ದೇವೀರಮ್ಮನ ಶಕ್ತಿಯನ್ನು ಸೂಚಿಸುತ್ತದೆ. ಬೆಟ್ಟದ ಮೇಲಿನ ದೇವಸ್ಥಾನವನ್ನು ಗಿರಿದೇವೀರಮ್ಮನ ದೇವಸ್ಥಾನ ಎಂದು ಕರೆಯಲಾಗುತ್ತದೆ. ಬಿಂಡಿಗಾ ಗ್ರಾಮದಲ್ಲಿ ಬೆಟ್ಟದ ಕೆಳಗೆ ಮತ್ತೊಂದು ದೇವಿರಮ್ಮನ ದೇವಸ್ಥಾನವಿದ್ದು, ಇದು ವರ್ಷವಿಡೀ ತೆರೆದಿರುತ್ತದೆ. ದೇವಿಯು ವರ್ಷದ ಬಹುಪಾಲು ಕೆಳಗಿನ ದೇವಾಲಯದಲ್ಲಿದ್ದು, ನರಕ ಚತುರ್ದಶಿಯಂದು ಮಾತ್ರ ಗಿರಿ ದೇವಾಲಯಕ್ಕೆ ತೆರಳುತ್ತಾಳೆ ಎಂಬುದು ಭಕ್ತರ ನಂಬಿಕೆ.

deveeramma betta 1

ಪೌರಾಣಿಕ ಮಹತ್ವ- ಕೋಪ ಶಮನ ಮತ್ತು ಶಕ್ತಿ ಕೇಂದ್ರ

ದೇವೀರಮ್ಮನು ಹಿಂದೂ ಧರ್ಮದ ಶಕ್ತಿ ದೇವತೆಯಾದ ದುರ್ಗಾ ದೇವಿಯ ಅಥವಾ ಚಾಮುಂಡಿಯ ಒಂದು ಶಾಂತ ಸ್ವರೂಪ ಎಂದು ನಂಬಲಾಗಿದೆ. ಈ ದೇವಸ್ಥಾನದ ಕುರಿತಾದ ಪೌರಾಣಿಕ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯೊಂದಿಗೆ ಸಂಬಂಧ ಹೊಂದಿದೆ. ವಿಜಯದಶಮಿಯಂದು ರಾಕ್ಷಸನಾದ ಮಹಿಷಾಸುರನನ್ನು ಸಂಹರಿಸಿದ ನಂತರ, ಚಾಮುಂಡೇಶ್ವರಿ ದೇವಿಯು ತನ್ನ ರೌದ್ರ ರೂಪದಿಂದ ಶಾಂತ ರೂಪಕ್ಕೆ ಮರಳಲು ಮತ್ತು ಕೋಪವನ್ನು ಶಮನಗೊಳಿಸಲು ಸೂಕ್ತವಾದ ಏಕಾಂತ ಸ್ಥಳವನ್ನು ಹುಡುಕುತ್ತಿದ್ದಳು ಎನ್ನಲಾಗುತ್ತದೆ.

ಆ ಸಮಯದಲ್ಲಿ, ದೇವಿಯು ಈ ಚಂದ್ರದ್ರೋಣ ಪರ್ವತ ಶ್ರೇಣಿಯ ಎತ್ತರದ ಶಿಖರವನ್ನು ಆಯ್ದು, ಇಲ್ಲಿ ನೆಲೆಸಿದಳು. ಹೀಗೆ ಶಾಂತ ಸ್ವರೂಪದಲ್ಲಿ ನೆಲೆಸಿದ ಈ ದೇವಿಯು ಕಾಲಕ್ರಮೇಣ ದೇವೀರಮ್ಮ ಅಥವಾ ಬಿಂಡಿಗ ದೇವೀರಮ್ಮ ಎಂಬ ಹೆಸರಿನಿಂದ ಪ್ರಸಿದ್ಧಳಾದಳು.

ಒಂದು ಸ್ಥಳೀಯ ಐತಿಹ್ಯದ ಪ್ರಕಾರ, ಆ ಐವರು ಪುರುಷ ದೇವರುಗಳ ಕೋರಿಕೆಯ ಮೇರೆಗೆ ದೇವಿರಮ್ಮ ತಾಯಿಯು ಆ ಸ್ಥಳದಿಂದ ದೂರದಲ್ಲಿ ನೆಲೆಸುವಂತೆ ಈ ಬೆಟ್ಟವನ್ನು ಆಯ್ದುಕೊಂಡಳು. ಅಂದಿನಿಂದ ಈ ಬೆಟ್ಟಕ್ಕೆ ದೇವಿಯ ಹೆಸರೇ ಬಂತು.

ಇದು ಶ್ರದ್ಧಾಭಕ್ತಿಯ ಯಾತ್ರೆ

ದೇವೀರಮ್ಮನ ಜಾತ್ರೆ ಕೇವಲ ಉತ್ಸವವಲ್ಲ, ಇದು ಭಕ್ತರ ಅಚಲವಾದ ನಂಬಿಕೆ ಮತ್ತು ದೈಹಿಕ ಶ್ರಮವನ್ನು ಬೇಡುವ ಒಂದು ಕಠಿಣ ವ್ರತ ಮತ್ತು ಸಾಹಸಮಯ ಯಾತ್ರೆ.

ದೇವಸ್ಥಾನವು ಪ್ರತಿ ವರ್ಷ ದೀಪಾವಳಿ ಹಬ್ಬದ ನರಕ ಚತುರ್ದಶಿಯಂದು, ಸಾಮಾನ್ಯವಾಗಿ ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರ ದರ್ಶನಕ್ಕೆ ಮುಕ್ತವಾಗುತ್ತದೆ. ದೀಪಾವಳಿಯ ಆರಂಭ ಇಲ್ಲಿಂದಲೇ ಆಗುತ್ತದೆ. ಈ ಬಾರಿ ಮಾತ್ರ ಹಗಲು ಹೊತ್ತಿನಲ್ಲಿ ದರ್ಶನ ಕಲ್ಪಿಸಲಾಗಿದೆ.

ಕಠಿಣ ವ್ರತಗಳು ಮತ್ತು ಪದ್ಧತಿಗಳು

ದೇವಿರಮ್ಮನ ದರ್ಶನವನ್ನು ಪಡೆಯುವ ಭಕ್ತರು ಕಡ್ಡಾಯವಾಗಿ ಕೆಲವು ವ್ರತ ಮತ್ತು ಪದ್ಧತಿಗಳನ್ನು ಪಾಲಿಸುತ್ತಾರೆ. ಇದು ಯಾತ್ರೆಯ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ

ಬರಿಗಾಲಿನ ಪಯಣ:

ಬೆಟ್ಟಕ್ಕೆ ಬರುವ ಲಕ್ಷಾಂತರ ಭಕ್ತರು ಸುಮಾರು 8 ಕಿ.ಮೀ. ದೂರದ ದುರ್ಗಮ ಹಾದಿಯಲ್ಲಿ ಕಲ್ಲು-ಮುಳ್ಳುಗಳಿದ್ದರೂ ಸಹ, ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸದೇ ಬರಿಗಾಲಿನಲ್ಲಿಯೇ ಬೆಟ್ಟವನ್ನು ಏರುತ್ತಾರೆ. ಇದು ಭಕ್ತಿಯ ಪರಾಕಾಷ್ಠೆ ಮತ್ತು ತ್ಯಾಗದ ಸಂಕೇತವಾಗಿದೆ.

ಉಪವಾಸ ವ್ರತ:

ಬೆಟ್ಟ ಹತ್ತುವ ಮುನ್ನ ಭಕ್ತರು ಯಾವುದೇ ರೀತಿಯ ಆಹಾರ ಸೇವಿಸದೇ ಕಠಿಣ ಉಪವಾಸ ಮಾಡುತ್ತಾರೆ. ಬೆಟ್ಟದ ತುದಿಯಲ್ಲಿ ದೇವಿಯ ಪೂಜೆ ಮತ್ತು ದೀಪೋತ್ಸವ ಮುಗಿದ ನಂತರವೇ ಪ್ರಸಾದ ರೂಪದಲ್ಲಿ ಊಟವನ್ನು ಮಾಡಲಾಗುತ್ತದೆ.

ಸೌದೆ ಹೊತ್ತುಕೊಂಡು ಹೋಗುವುದು (ಸಮರ್ಪಣೆ)

ಜಾತ್ರೆಗೆ ಆಗಮಿಸುವ ಭಕ್ತರು ಸಂಜೆಯ ದೀಪೋತ್ಸವಕ್ಕೆ ಬಳಸಲು ಸೌದೆಯನ್ನು ಅಥವಾ ಕಟ್ಟಿಗೆಯ ತುಂಡುಗಳನ್ನು ತಮ್ಮೊಂದಿಗೆ ಬೆಟ್ಟದ ಮೇಲೆ ಹೊತ್ತುಕೊಂಡು ಹೋಗುತ್ತಾರೆ.

ದೇವೀರಮ್ಮ ದೀಪೋತ್ಸವದ ವೈಭವ

ದೀಪಾವಳಿಯಂದು ಸಂಜೆ ನಡೆಯುವ ದೇವೀರಮ್ಮ ದೀಪೋತ್ಸವ ಈ ಜಾತ್ರೆಯ ಪ್ರಮುಖ ಆಕರ್ಷಣೆ. ಭಕ್ತರು ತಂದ ಸೌದೆಯನ್ನು ಬಳಸಿ ಬೆಟ್ಟದ ಮೇಲೆ ದೀಪವನ್ನು ಬೆಳಗಿಸಲಾಗುತ್ತದೆ. ಈ ದೀಪದ ಬೆಳಕು ಸುಮಾರು 40 ರಿಂದ 50 ಕಿ.ಮೀ. ದೂರದವರೆಗೂ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಹಿಂದೆ, ಮೈಸೂರಿನ ಅರಸರು ತಮ್ಮ ಅರಮನೆಯಲ್ಲಿ ದೀಪಾವಳಿ ಆಚರಣೆಯನ್ನು ಆರಂಭಿಸಲು, ಬೆಟ್ಟದ ಮೇಲಿನ ಈ ದೀಪದ ಬೆಳಕನ್ನು ನೋಡಲು ಕಾಯುತ್ತಿದ್ದರು ಎಂಬ ಐತಿಹಾಸಿಕ ಉಲ್ಲೇಖವಿದೆ. ಆ ದೀಪದ ಬೆಳಕೇ ಮೈಸೂರಿನಲ್ಲಿ ದೀಪಾವಳಿ ಆರಂಭಕ್ಕೆ ಸಂಕೇತವಾಗಿತ್ತು.

deveeramma betta 4

ಮೈಸೂರು ಅರಸರೊಂದಿಗೆ ಸಂಬಂಧ

ದೇವೀರಮ್ಮನ ಜಾತ್ರೆಗೆ ಮೈಸೂರಿನ ಒಡೆಯರ್ ರಾಜಮನೆತನದ ನಂಟು ಇಂದಿಗೂ ಮುಂದುವರೆದಿದೆ. ಇತಿಹಾಸದ ಪ್ರಕಾರ, ರಾಜಮನೆತನದವರು ಪ್ರತಿ ವರ್ಷ ದೇವಸ್ಥಾನಕ್ಕೆ ಪೂಜಾ ಸಾಮಗ್ರಿಗಳು, ಎಣ್ಣೆ, ಸೀರೆ, ಅರಿಶಿನ-ಕುಂಕುಮ ಮುಂತಾದ ಕಾಣಿಕೆಗಳನ್ನು ಕಳುಹಿಸಿಕೊಡುವ ಪದ್ಧತಿಯನ್ನು ಇಟ್ಟುಕೊಂಡಿದ್ದರು.ಈ ಸಂಪ್ರದಾಯವು ಇಂದಿಗೂ ಮುಂದುವರಿದಿದ್ದು, ಇದು ದೇವಿಯ ಮೇಲಿನ ರಾಜಮನೆತನದ ಭಕ್ತಿ ಮತ್ತು ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಹರಿದುಬರಲಿದೆ ಭಕ್ತ ಜನಸಾಗರ

ವರ್ಷಕ್ಕೆ ಒಂದೇ ದಿನ ದರ್ಶನ ಲಭ್ಯವಿರುವುದರಿಂದ, ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಹರಿದು ಬರುತ್ತಾರೆ. ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆಯುತ್ತಾರೆಂದು ಅಂಕಿಅಂಶಗಳು ಹೇಳುತ್ತವೆ. ಈ ಬಾರಿ ಎರಡು ದಿನ ದರ್ಶನವಿರುವುದರಿಂದ ಇದು ದುಪ್ಪಟ್ಟಾಗುವ ಸಾಧ್ಯತೆಯೂ ಇದೆ.

ಒಂದಷ್ಟು ಜಾಗ್ರತೆ ಅಗತ್ಯ

ಜಾತ್ರೆಯು ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಮಳೆಗಾಲದ ನಂತರ ನಡೆಯುವುದರಿಂದ, ಬೆಟ್ಟದ ಮಾರ್ಗವು ಕೆಲವೊಮ್ಮೆ ಜಾರು ಮತ್ತು ದುರ್ಗಮವಾಗಿರುತ್ತದೆ. ಭಕ್ತರ ಸುರಕ್ಷತೆಗಾಗಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತವು ಪ್ರತಿ ವರ್ಷ ವ್ಯಾಪಕ ಸಿದ್ಧತೆಗಳನ್ನು ಮಾಡುತ್ತದೆ. ಕಡಿದಾದ ಮಾರ್ಗಗಳಲ್ಲಿ ಹಗ್ಗಗಳನ್ನು ಅಳವಡಿಸುವುದು, ತುರ್ತು ವೈದ್ಯಕೀಯ ಸೇವೆ ಒದಗಿಸುವುದು ಮತ್ತು ಪೋಲೀಸ್ ರಕ್ಷಣಾ ತಂಡಗಳನ್ನು ನಿಯೋಜಿಸುವುದು ಕಡ್ಡಾಯವಾಗಿರುತ್ತದೆ. ಇದೆಲ್ಲದರ ನಡುವೆಯೂ ಮುಂಜಾನೆಯ ಚಳಿ, ಇಬ್ಬನಿ ಮತ್ತು ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ಭಕ್ತರು ಗುಂಪಾಗಿ ಸಾಗುವ ದೃಶ್ಯ, ಈ ಧಾರ್ಮಿಕ ಕೇಂದ್ರದ ಮೇಲಿನ ಜನರ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ.

ಬಿಂಡಿಗ ದೇವೀರಮ್ಮನ ಬೆಟ್ಟವು ಕೇವಲ ಒಂದು ದೇವಸ್ಥಾನವಲ್ಲ. ಇದು ದಕ್ಷಿಣ ಭಾರತದ, ಅದರಲ್ಲೂ ಮಲೆನಾಡಿನ ವಿಶಿಷ್ಟ ಧಾರ್ಮಿಕ ಸಂಪ್ರದಾಯದ ಪ್ರತೀಕ. ವರ್ಷದಲ್ಲಿ ಕೇವಲ ಒಂದು ದಿನದ ದರ್ಶನಕ್ಕಾಗಿ ಲಕ್ಷಾಂತರ ಜನರು ಸೇರಿ, ಬರಿಗಾಲಿನಲ್ಲಿ ದುರ್ಗಮ ಬೆಟ್ಟವನ್ನು ಏರಿ, ಉಪವಾಸ ವ್ರತ ಆಚರಿಸಿ ದೇವಿಯ ಆಶೀರ್ವಾದ ಪಡೆಯುವ ಈ ಪದ್ಧತಿ, ಆಧುನಿಕ ಯುಗದಲ್ಲಿಯೂ ನಂಬಿಕೆ ಮತ್ತು ಧರ್ಮವು ಜನರ ಜೀವನದೊಂದಿಗೆ ಎಷ್ಟು ಆಳವಾಗಿ ಬೆಸೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ದೇವೀರಮ್ಮನ ಬೆಟ್ಟವು ಭಕ್ತಿ, ನಂಬಿಕೆ ಮತ್ತು ಸಾಹಸದ ಒಂದು ಅನನ್ಯ ಸಂಗಮವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ