ಎಲ್ಲೋಡು ಬೆಟ್ಟದ ಎಡೆಯಲ್ಲಿ ಆದಿನಾರಾಯಣ
ಕೂರ್ಮಗಿರಿಯ ಮೇಲೆ ಸುಮಾರು1000 ವರ್ಷಗಳಷ್ಟು ಪುರಾತನವಾದ ಪ್ರಕೃತಿದತ್ತ ಗುಹೆಯಲ್ಲಿ ಮಹಾವಿಷ್ಣುವು ಲಕ್ಷ್ಮೀ ಸಮೇತ ಆದಿನಾರಾಯಣಸ್ವಾಮಿ ಶಿಲಾ ಮೂರ್ತಿಯಾಗಿ ಉದ್ಬವಿಸಿ ಅತ್ಯಂತ ಸುಂದರನಾಗಿ ಕಂಗೊಳಿಸುತ್ತಿದ್ದಾನೆ. ನಮಗಲ್ಲಿ ದರ್ಶನ ಭಾಗ್ಯ ಲಭಿಸಿತು. ಭಕ್ತರ ಕೋರಿಕೆಗಳನ್ನು ಈಡೇರಿಸಿ ಲೋಕ ಕಲ್ಯಾಣ ಮಾಡುತ್ತಿದ್ದಾನೆ ಎಂಬಂತೆ ಆ ದಿವ್ಯದರ್ಶನದಿಂದ ಭಾಸವಾಯಿತು.
ಪಂಚನಾರಾಯಣ ಕ್ಷೇತ್ರಗಳು ಪುರಾಣ ಪ್ರಸಿದ್ಧವಾದ ಕ್ಷೇತ್ರಗಳು. ಅವುಗಳಲ್ಲಿ ಗುಡಿಬಂಡೆ ತಾಲೂಕಿನಲ್ಲಿನ ಎಲ್ಲೋಡು ಪ್ರಮುಖ ಯಾತ್ರಾ ಸ್ಥಳವಾಗಿದೆ. ಉತ್ತರ ಭಾರತದ ಬದರಿನಾರಾಯಣ, ಗದುಗಿನ ವೀರನಾರಾಯಣ, ಕೈವಾರದ ಅಮರನಾರಾಯಣ, ಮೇಲುಕೋಟೆ ಚೆಲುವನಾರಾಯಣ ಹಾಗೂ ಎಲ್ಲೋಡಿನ ಆದಿನಾರಾಯಣ ಇವು ಶ್ರೀ ವಿಷ್ಣು ಅವತಾರದ ಪಂಚನಾರಾಯಣ ಕ್ಷೇತ್ರಗಳಾಗಿವೆ. ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆಯ ಆಕಾರದಲ್ಲಿ ಇರುವುದರಿಂದ ಇದಕ್ಕೆ ಕೂರ್ಮಗಿರಿ ಎಂಬ ಹೆಸರೂ ಇದೆ.
ಇದನ್ನೂ ಓದಿ: ಲೋಕವನುಳಿಸಲು ವಿಷವನು ಕುಡಿದ ಶಿವ!
ಈ ಸುಂದರ ಕ್ಷೇತ್ರವನ್ನು ನೋಡಿ ಬಹಳ ದಿನಗಳಾದವು ಎಂದು ಪರಿವಾರ ಸಮೇತರಾಗಿ ಹೊರಟೆವು. ಬೆಂಗಳೂರು-ಹೈದರಾಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪ್ರಯಾಣ ಮಾಡಿ ಬಾಗೇಪಲ್ಲಿ ಸಮೀಸುತ್ತಿದ್ದಂತೆ, ಗೌರಿಬಿದನೂರು ಕಡೆಗೆ ತಿರುಗಿ ರಸ್ತೆ ಮಾರ್ಗವಾಗಿ 12 ಕಿಮೀ ಚಲಿಸಿದರೆ ಎಲ್ಲೋಡು ಸಿಗುತ್ತದೆ. ಬೆಂಗಳೂರಿನಿಂದ ಸುಮಾರು 110 ಕಿಮೀ ಪ್ರಯಾಣ.

ನಾವು ಎಲ್ಲೋಡಿಗೆ ಬಂದಾಗ ಆಗಲೇ 9 ಗಂಟೆ ಆಗಿತ್ತು. ಕಾರ್ ಅಲ್ಲೇ ಹತ್ತಿರದಲ್ಲಿ ಪಾರ್ಕ್‌ಮಾಡಿ ಬ್ಯಾಗ್‌ನಲ್ಲಿ ಸ್ವಲ್ಪ ಬಿಸ್ಕತ್, ನೀರು ಇಟ್ಟುಕೊಂಡು ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಹತ್ತುತ್ತ ಎರಡು ಕಡೆ ಹಸಿರಿನ ಸೀರೆಯಂತೆ ಕಂಗೊಳಿಸುತ್ತಿದ್ದ ಪ್ರಕೃತಿಯ ಸಿರಿ. ಬೆಟ್ಟ ಹತ್ತುವ ಕೆಲಸ ಸುಲಭ ಅನಿಸುವ ಹಾಗಾಯಿತು. ಪ್ರಕೃತಿ ಮಾತೆಯಿಂದ ಪವಿತ್ರ ಗಿರಿಯಾಗಿ ಒಂದು ಅಪರೂಪದ ಬಂಧ ಬೆಸೆಯುತ್ತದೆ. ಸುಮಾರು 620 ಮೆಟ್ಟಿಲು ಹತ್ತಿದ ಮೇಲೆ ನಾವು ದೇವಸ್ಥಾನದ ಹತ್ತಿರಕ್ಕೆ ಬಂದಾಗ ಸಮಯ ಸುಮಾರು 11:30 ಆಗಿತ್ತು.
ನಿಸರ್ಗದ ಚೆಲುವನ್ನು ಹೊದ್ದಂತಿರುವ ಎಲ್ಲೋಡಿನ ಕೂರ್ಮಗಿರಿ ಟ್ರೆಕ್ಕಿಂಗ್ ಅನುಭವ ನೀಡುತ್ತದೆ. ಬೆಟ್ಟವನ್ನು ಏರುತ್ತ ಹಲವು ವೈಶಿಷ್ಟಗಳು ಕಂಡವು. ಅಚ್ಚುಕಟ್ಟಾದ ಮೆಟ್ಟಲುಗಳು, ಮೇಲ್ಛಾವಣಿ ವ್ಯವಸ್ಥೆ, ಬೆಟ್ಟದಲ್ಲಿರುವ ವಿಶ್ರಾಂತಿ ಮಂಟಪ ಎಲ್ಲವು ದೇವಾಲಯಕ್ಕೆ ಮೆರುಗು ತಂದು ಆಕರ್ಷಕವಾಗಿಸಿವೆ .
ಬೆಟ್ಟದಲ್ಲಿ ನೋಡಲು ಸುಂದರ ನಿಸರ್ಗಮಯ ತಾಣಗಳಿವೆ. ತಂಗಾಳಿಯ ತಂಪಿನಲ್ಲಿ ಮುಂದೆ ಸಾಗಿದರೆ ನೀರಿನ ಝರಿ ಸಿಗುತ್ತದೆ. ಇಲ್ಲಿ ಮಳೆಗಾಲ, ಚಳಿಗಾಲ, ಬೇಸಗೆ ಕಾಲ, ಮಳೆಗಾಲ ಹೀಗೆ ಕಾಲಗಳ ಭೇದವಿಲ್ಲದೆ ಸದಾ ನೀರು ಸಿಗುತ್ತದೆ. ಬೆಟ್ಟದ ಮೇಲಿಂದ ಸುತ್ತ ಮುತ್ತಲಿನ ದೃಶ್ಯಗಳು ಅತ್ಯಂತ ಸುಂದರವಾಗಿ ಕಾಣುತ್ತದೆ.
ಕೂರ್ಮಗಿರಿಯ ಮೇಲೆ ಸುಮಾರು 1000 ವರ್ಷಗಳಷ್ಟು ಪುರಾತನವಾದ ಪ್ರಕೃತಿದತ್ತ ಗುಹೆಯಲ್ಲಿ ಮಹಾವಿಷ್ಣುವು ಲಕ್ಷ್ಮೀ ಸಮೇತ ಆದಿನಾರಾಯಣಸ್ವಾಮಿ ಶಿಲಾ ಮೂರ್ತಿಯಾಗಿ ಉದ್ಬವಿಸಿ ಅತ್ಯಂತ ಸುಂದರನಾಗಿ ಕಂಗೊಳಿಸುತ್ತಿದ್ದಾನೆ. ನಮಗಲ್ಲಿ ದರ್ಶನ ಭಾಗ್ಯ ಲಭಿಸಿತು. ಭಕ್ತರ ಕೋರಿಕೆಗಳನ್ನು ಈಡೇರಿಸಿ ಲೋಕ ಕಲ್ಯಾಣ ಮಾಡುತ್ತಿದ್ದಾನೆ ಎಂಬಂತೆ ಆ ದಿವ್ಯದರ್ಶನದಿಂದ ಭಾಸವಾಯಿತು. ಈ ಕ್ಷೇತ್ರ ನಮ್ಮ ರಾಜ್ಯ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ ಮುಂತಾದ ಹೊರರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿದೆ.
ಸ್ಥಳೀಯರ ಪ್ರಕಾರ ಕೂರ್ಮ ಮಹರ್ಷಿ ಎಂಬ ಮುನಿ, ಈ ಅರಣ್ಯದಲ್ಲಿ ಮಹಾವಿಷ್ಣುವಿಗಾಗಿ ದೀರ್ಘ ಕಾಲ ತಪಸ್ಸು ಮಾಡಿದಾಗ ವಿಷ್ಣು ದರ್ಶನ ನೀಡಿದನಂತೆ.
ಗುಡಿಬಂಡೆಯಲ್ಲಿದ್ದ ಪಾಳೇಗಾರರು ದೇವರ ಪರಮಭಕ್ತರಾಗಿದ್ದರು. ಪ್ರತಿಬಾರಿ ಜೈತ್ರ ಯಾತ್ರೆಗೆ ಹೋಗುವ ಮುನ್ನ ಈ ಕ್ಷೇತ್ರದಲ್ಲಿ ಗುರುಗಳ ಆಶೀರ್ವಾದ ಪಡೆದು, ಗೆದ್ದು ಬಂದ ನಂತರ ಗುರುಗಳಿಗೆ ಹಾಗೂ ದೇವರಿಗೆ ಕಾಣಿಕೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

450 ವರ್ಷಗಳ ಹಿಂದೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಭಯಂಕರ ಜಲಕ್ಷಾಮ ಉಂಟಾದಾಗ, ಇಬ್ಬರು ಸಹೋದರರು ಸೂಕ್ತ ನೆಲೆಗಾಗಿ ಅರಸುತ್ತ ಕೂರ್ಮಗಿರಿ ಕ್ಷೇತ್ರಕ್ಕೆ ವಲಸೆ ಬಂದರು. ಇಲ್ಲಿಯೇ ಉಳಿದುಕೊಂಡಾಗ ಹಳ್ಳಿಯ ಸ್ಥಾಪನೆಯಾಯಿತು.
ಇಲ್ಲಿ 150 ವರ್ಷಗಳ ಹಿಂದೆ ಒಬ್ಬ ಭಕ್ತರು ನಿರ್ಮಿಸಿರುವ ಕೆರೆ ಇಂದಿಗೂ ಜನರಿಗೆ ಆಸರೆಯಾಗಿದೆ.
ಶ್ರೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವವು ಪ್ರತಿವರ್ಷ ಮಾಘಮಾಸದಲ್ಲಿ ನಡೆಯುತ್ತದೆ. ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಹೂವಿನ ಪಲ್ಲಕ್ಕಿ ಮೆರೆವಣಿಗೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಜಾತ್ರೆಯ ಪ್ರಯುಕ್ತ ಪ್ರತಿನಿತ್ಯ ಅನ್ನ ಸಂತರ್ಪಣೆಗಳು, ಎತ್ತಿನ ಬಂಡಿಗಳ ಓಟಗಳು ವಿಶೇಷವಾಗಿರುತ್ತವೆ.
ಮನಸು ತಣಿಸುವ ನಿಸರ್ಗದ ಚೆಲುವನ್ನು ಹೊಂದಿರುವ ಎಲ್ಲೋಡು ಬೆಟ್ಟ, ಹಸಿರು ಗಿಡ- ಮರಗಳಿಂದ ಕಂಗೊಳಿಸಿ ಪ್ರವಾಸಿಗರನ್ನು ಬನ್ನಿ ಎಂದು ಕೈ ಬೀಸಿ ಕರೆಯುತ್ತದೆ. ಇಲ್ಲಿ ಉಳಿದುಕೊಳ್ಳವವರಿಗೆ ಊಟ- ವಸತಿ ವ್ಯವಸ್ಥೆಗಳೂ ಇವೆ.