ನಿಷ್ಕಳಂಕ ಮಹಾದೇವ ದೇವಾಲಯ
ಉಬ್ಬರ ಇಳಿದಾಗ ಬರಿಗಾಲಿನಲ್ಲಿ ಸಮುದ್ರದಲ್ಲಿ ನಡೆದು ಅಲ್ಲಿಗೆ ಭೇಟಿ ನೀಡಿ ಶಿವಲಿಂಗದ ಪೂಜೆ ಮಾಡಿಸಬಹುದು. ಪುನಃ ಉಬ್ಬರ ಬರುವ ಮೊದಲು ದಡಕ್ಕೆ ಬರಬೇಕು. ಪ್ರತಿದಿನದ ಉಬ್ಬರ ಇಳಿತದ ವೇಳಾಪಟ್ಟಿಯನ್ನು ದೇವಾಲಯ ಸಮಿತಿ ಮೊದಲೇ ಪ್ರಕಟಿಸುತ್ತದೆ.
- ಸವಿತಾ ಭಟ್
ಗುಜರಾತ್ ನ ಭಾವನಗರದಿಂದ 28 ಕಿ.ಮೀ ದೂರದ ಕೊಲಿಯಾಕ್ ನಲ್ಲಿರುವ ಶಿವನ ದೇವಾಲಯ ಭಾರತದಲ್ಲೇ ಅಪರೂಪದ ಸಮುದ್ರ ದೇವಾಲಯ. ಗುಜರಾತ್ ಗೆ ಪ್ರವಾಸ ಹೋಗುವವರು ಇದನ್ನು ತಮ್ಮ ಪ್ರವಾಸದಲ್ಲಿ ಖಂಡಿತ ಸೇರಿಸಿಕೊಳ್ಳಬಹುದು.
ಇದು ಕೊಲಿಯಾಕ್ ಬೀಚಿನಿಂದ ಸಮುದ್ರದಲ್ಲಿ ಒಂದು ಕಿಲೋಮೀಟರ್ ದೂರದಲ್ಲಿರುವ ಒಂದು ವೇದಿಕೆಯಂಥ ದೊಡ್ಡ ಕಲ್ಲಿನ ಮೇಲಿದೆ. ಅಲ್ಲಿ ಐದು ಸ್ವಯಂಭೂ ಶಿವಲಿಂಗಗಳಿವೆ. ಪ್ರತಿ ಲಿಂಗದ ಎದುರೂ ನಂದಿಯ ವಿಗ್ರಹಗಳಿವೆ. ಸಮುದ್ರದಲ್ಲಿ ಉಬ್ಬರವಿದ್ದಾಗ ಈ ಲಿಂಗಗಳಿಂದ ಕೂಡಿದ ಕಲ್ಲು ಸಂಪೂರ್ಣ ಮುಳುಗುತ್ತದೆ. ಆಗ ಅಲ್ಲಿರುವ ಎತ್ತರದ ಕಂಬದ ತುದಿ ಹಾಗೂ ತುದಿಯಲ್ಲಿರುವ ಧ್ವಜ ಮಾತ್ರ ಕಾಣಿಸುತ್ತದೆ. ಉಬ್ಬರ ಇಳಿದಾಗ ಬರಿಗಾಲಿನಲ್ಲಿ ಸಮುದ್ರದಲ್ಲಿ ನಡೆದು ಅಲ್ಲಿಗೆ ಭೇಟಿ ನೀಡಿ ಶಿವಲಿಂಗದ ಪೂಜೆ ಮಾಡಿಸಬಹುದು. ಪುನಃ ಉಬ್ಬರ ಬರುವ ಮೊದಲು ದಡಕ್ಕೆ ಬರಬೇಕು. ಪ್ರತಿದಿನದ ಉಬ್ಬರ ಇಳಿತದ ವೇಳಾಪಟ್ಟಿಯನ್ನು ದೇವಾಲಯ ಸಮಿತಿ ಮೊದಲೇ ಪ್ರಕಟಿಸುತ್ತದೆ. ಅದನ್ನು ಗೂಗಲ್ ನಲ್ಲೂ ಹುಡುಕಬಹುದು.

ಅಲ್ಲಿರುವ ಲಿಂಗಗಳಿಗೆ ಹಾಲು ,ಬಿಲ್ವಪತ್ರೆ ಮತ್ತು ಹೂಗಳನ್ನು ಸಮರ್ಪಿಸಬಹುದು. ಇದನ್ನು ಮಾರಾಟ ಮಾಡಲು ಬೀಚ್ ಬಳಿ ಸಾಕಷ್ಟು ಜನರಿರುತ್ತಾರೆ. ಹಾಗೆಯೇ ಸಮುದ್ರದ ಸೊಬಗನ್ನು ಸವಿಯುತ್ತಾ ಅಲ್ಲೇ ಸ್ವಲ್ಪ ಸುತ್ತಾಡಿ ಫೊಟೋ ತೆಗೆದುಕೊಳ್ಳಬಹುದು. ಲಿಂಗದ ಬಳಿ ನೀರು ತುಂಬಿಕೊಳ್ಳುವ ಮುನ್ನ ಅಲ್ಲಿನ ಅರ್ಚಕರ ಸೂಚನೆಯ ಮೇರೆಗೆ ಹೊರಟು ಬಿಡಬೇಕಾಗುತ್ತದೆ.
ಕಪ್ಪು ಹಸು ಬಿಳಿಯಾಯ್ತು!
ಅಲ್ಲಿಗೆ ಹೋಗಿ ಪೂಜೆ ಮಾಡಿಸಿ ಬರುವ ಅನುಭವವೇ ಅಪೂರ್ವವಾದುದು. ಸ್ಥಳ ಪುರಾಣ ವಿವರಿಸಲು ಇಲ್ಲಿ ಗೈಡ್ ಸಿಗುತ್ತಾರೆ. ದಂತ ಕತೆಗಳ ಪ್ರಕಾರ ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು, ತಮ್ಮ ನೆಂಟರು, ದಾಯಾದಿಗಳನ್ನು ಕೊಂದ ಬಗ್ಗೆ ಬಹಳ ಪಾಪಪ್ರಜ್ಞೆ ಯಲ್ಲಿ ಬಳಲುತ್ತಿದ್ದರು. ಆ ಬಗ್ಗೆ ಶ್ರೀ ಕೃಷ್ಣ ನನ್ನು ಕೇಳಿದಾಗ, ಅವನು ಪಾಂಡವರಿಗೆ ಧ್ವಜ ಮತ್ತು ಕಪ್ಪು ಹಸುಗಳನ್ನು ನೀಡಿ, ಹಸುವನ್ನು ಸ್ವತಂತ್ರವಾಗಿ ಬಿಡಲು ಹೇಳಿದನು. ಹಸು ಹೋದಲ್ಲೆಲ್ಲಾ ಧ್ವಜದ ಜೊತೆ ಹಿಂಬಾಲಿಸಲು ಹೇಳಿದನು. ಎಲ್ಲಿ ಹೋದಾಗ ಹಸುಗಳು ಬಿಳಿ ಬಣ್ಣಕ್ಕೆ ತಿರುಗುವುದೋ ಅಲ್ಲಿ ಶಿವನನ್ನು ಪ್ರಾರ್ಥಿಸಿ. ನಿಮ್ಮ ಪಾಪ ವಿಮೋಚನೆಯಾಗುತ್ತದೆ ಎಂದು ತಿಳಿಸಿದನು. ಹಲವು ಊರು ಸುತ್ತಾಡಿದ ಹಸುಗಳು ಈ ಪ್ರದೇಶಕ್ಕೆ ತಲುಪಿದಾಗ ಬಿಳಿ ಬಣ್ಣಕ್ಕೆ ತಿರುಗಿದವು. ಅಲ್ಲಿ ಪಾಂಡವರು ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಶಿವನು ಪ್ರತಿಯೊಬ್ಬ ಸಹೋದರರಿಗೂ ಲಿಂಗದ ರೂಪದಲ್ಲಿ ಕಾಣಿಸಿಕೊಂಡು ಆಶೀರ್ವದಿಸಿದನು. ಪಾಂಡವರು ಕಳಂಕಗಳನ್ನು ಕಳೆದು ನಿಷ್ಕಳಂಕರಾಗಿ ಹೊರಹೊಮ್ಮಿದರು. ಹಾಗಾಗಿ ಅಲ್ಲಿನ ಶಿವಲಿಂಗಳಿಗೆ ನಿಷ್ಕಳಂಕ ಮಹಾದೇವ ಎಂಬ ಹೆಸರು ಬಂತು. ಇಲ್ಲಿ ನಾವು ಪ್ರಕೃತಿಯ ವಿಸ್ಮಯವನ್ನು ಕಾಣಬಹುದು.

ಲಿಂಗ ಮುಳುಗೇಳುವುದು ಯಾಕೆ?
ಪಂಚಾಂಗದ ಪ್ರಕಾರ ಲೆಕ್ಕ ಹಾಕಿ ಕೆಲವು ದಿನದ ಉಬ್ಬರ ಇಳಿತಗಳ ವೇಳಾಪಟ್ಟಿಯನ್ನು ಅಲ್ಲಿ ಹಾಕಲಾಗುತ್ತದೆ. ಅದರಂತೆ ಅಲ್ಲಿ ನಡೆಯುತ್ತದೆ. ಸಮುದ್ರದಲ್ಲಿ ಲಿಂಗಗಳಿರುವುದು, ಅದು ಆಗಾಗ ಮುಳುಗೇಳುವುದು ಇದೆಲ್ಲಾ ಅದ್ಭುತ. ಏಕೆ ಹೀಗೆ ಎಂದು ಕೇಳಿದರೆ ಉತ್ತರವಿಲ್ಲ. ಎಲ್ಲವೂ ದೇವರ ಮಹಿಮೆ ಎಂದಷ್ಟೇ ಹೇಳಬಹುದು. ಅಲ್ಲಿಗೆ ನೀರಿನಲ್ಲಿ ನಡೆದು ಹೋಗುವುದು ಒಂದು ಸುಂದರ ಅನುಭವ. ಆದರೆ ಬೇಸರದ ವಿಷಯವೆಂದರೆ ಸಮುದ್ರದ ದಂಡೆಯಲ್ಲಿರುವ ಕಸದ ರಾಶಿ ಮತ್ತು ಭಿಕ್ಷುಕರ ಕಾಟ. ಇಷ್ಟೊಂದು ಪ್ರವಾಸಿಗರು ಬರುವ ಆ ಪ್ರದೇಶವನ್ನು ಶುಚಿಯಾಗಿಟ್ಟರೆ ಎಷ್ಟು ಚಂದವಿರುತ್ತದೆ.