ಇದು ಕಾಗೆಗಳು ಮಿಂದು ಹಂಸವಾದ ಬೆಟ್ಟ!
ಸಮುದ್ರ ಮಟ್ಟದಿಂದ 1,453 ಕಿ.ಮೀ ಎತ್ತರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮೇಲ್ಭಾಗದಲ್ಲಿ ಶ್ರೀಕೃಷ್ಣನ ದೇವಾಲಯವಿದೆ. ಇಲ್ಲಿ ವರ್ಷದ ಎಲ್ಲಾ ಅವಧಿಯೂ ತಂಪಾದ ವಾತಾವರಣ ಇರುತ್ತದೆ. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಹಿಮದ ನೀರು ಜಿನುಗುತ್ತಿರುತ್ತದೆ. ಈ ಕಾರಣಕ್ಕೆ ಈ ಜಾಗಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ.
- ಹಿಮೇಶ್ ಜಿ ಎಸ್
ಕಣ್ಣು ಹಾಯಿಸಿದಷ್ಟು ದೂರ ಹಸಿರು. ಇದು ಭೂಲೋಕವೋ ಅಥವಾ ದೇವಲೋಕವೋ ಎಂಬ ಗೊಂದಲ ಮೂಡುವಷ್ಟು ಸೌಂದರ್ಯ. ಬೆಳಿಗ್ಗೆ 11 ಗಂಟೆಗೆ ತೆರಳಿದರೂ ಮಂಜು ನಿಮ್ಮ ಮುಖಕ್ಕೆ ರಾಚುತ್ತದೆ. ಬೆಟ್ಟದ ಒಂದು ಭಾಗದಲ್ಲಿ ನಿಂತು ನೋಡಿದರೆ ಬಂಡೀಪುರ ತನ್ನ ಹಸಿರು ಸೀರೆಯನ್ನು ಹಾಸಿ ಮಲಗಿದಂತೆ ಕಾಣುತ್ತದೆ. ಹೀಗಾಗಿ, ಕಣ್ಣು ಹಾಯಿಸಿದಷ್ಟೂ ಇಲ್ಲಿ ಹಸಿರು. ಬೇಸಗೆಯಲ್ಲೇ ಚಳಿ ಅನುಭವ ಸಿಗುತ್ತದೆ. ಇನ್ನು ಚಳಿಗಾಲದಲ್ಲಿ ಹೋದರೆ ನೀವು ಮಂಜಿನ ರಾಶಿಯಲ್ಲೇ ಕಳೆದು ಹೋಗುತ್ತೀರಿ. ಒಂದಡಿ ದೂರ ಇರೋ ವ್ಯಕ್ತಿಯೂ ನಿಮಗೆ ಕಾಣಿಸೋದಿಲ್ಲ. ಮೋಡಗಳ ಜೊತೆಯೇ ನೀವು ನಡೆದು ಹೋಗುತ್ತಿರುವ ಅನುಭವ ಆಗುತ್ತದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಅಲ್ಲಿ ನೀರು ಕುಡಿಯಲು ಬರುವ ಆನೆ, ಹುಲಿಗಳ ದರ್ಶನ ಕೂಡ ಆಗುತ್ತದೆ. ಈ ಎಲ್ಲಾ ರಮಣೀಯ ಅಂಶಗಳು ಇರೋದು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ.

ಮೈಸೂರಿಗೆ ಭೇಟಿ ನೀಡೋ ಪ್ಲ್ಯಾನ್ ಇಟ್ಟುಕೊಂಡವರು ಸಾಮಾನ್ಯವಾಗಿ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯವನ್ನು ನೋಡಿ ಬರುತ್ತಾರೆ. ಆದರೆ, ಮೈಸೂರಿನಿಂದ ಕೇವಲ 80 ಕಿ.ಮೀ ದೂರದಲ್ಲಿರೋ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಮಿಸ್ ಮಾಡಿಕೊಳ್ಳುತ್ತಾರೆ. ಈ ಬೆಟ್ಟವನ್ನು ನೋಡಿಲ್ಲ ಎಂದರೆ ತಪ್ಪದೇ ಅದನ್ನು ನಿಮ್ಮ ಪ್ಲ್ಯಾನ್ ಲಿಸ್ಟ್ನಲ್ಲಿ ಸೇರಿಸಿಕೊಳ್ಳಿ. ಇದು ಎಲ್ಲಾ ಬೆಟ್ಟಗಳಂತಲ್ಲ. ಅಲ್ಲಿನ ಸೌಂದರ್ಯಗಳನ್ನು ವರ್ಣಿಸಲು ಶಬ್ದಗಳು ಕಡಿಮೆ.
ಹೆಸರು ಬಂದಿದ್ದೇಕೆ?
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇರೋದು ಚಾಮರಾಜ ನಗರ ಜಿಲ್ಲೆಯ ಗುಂಡ್ಲು ಪೇಟೆಯಲ್ಲಿ. ಊಟಿ ಹೆದ್ದಾರಿಯಲ್ಲಿ ಸಾಗಿದರೆ ಈ ಜಾಗ ಸಿಗುತ್ತದೆ. ಸಮುದ್ರ ಮಟ್ಟದಿಂದ ಈ ಜಾಗವು 1,453 ಕಿ.ಮೀ ಎತ್ತರದಲ್ಲಿ ಇದೆ. ಮೇಲ್ಭಾಗದಲ್ಲಿ ಶ್ರೀಕೃಷ್ಣನ ದೇವಾಲಯ ಇದೆ. ಇಲ್ಲಿ ವರ್ಷದ ಎಲ್ಲಾ ಅವಧಿಯೂ ತಂಪಾದ ವಾತಾವರಣ ಇರುತ್ತದೆ. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಹಿಮದ ನೀರು ಜಿನುಗುತ್ತಿರುತ್ತದೆ. ಈ ಕಾರಣಕ್ಕೆ ಈ ಜಾಗಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ.
ಕಾಗೆಗಳು ಮಿಂದು ಹಂಸವಾದವು
ಈ ಜಾಗಕ್ಕೆ ಪುರಾಣದ ಕಥೆಯೂ ಇದೆ. ಈ ಬೆಟ್ಟದ ಮೇಲೆ 77 ತೀರ್ಥ ಸ್ಥಳಗಳನ್ನು ಕಾಣಬಹುದು. ಈ ಭಾಗದಲ್ಲಿ ಯಾವುದೇ ಕಾಗೆಗಳು ನಿಮಗೆ ನೋಡಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿನ ತೀರ್ಥ ಸ್ಥಳಗಳಲ್ಲಿ ಮಿಂದ ಕಾಗೆಗಳು ಹಂಸಗಳಾಗಿ ಹಾರಿ ಹೋದವು ಎಂಬುದು ಪುರಾಣದ ಕಥೆ.

ಹವಾಮಾನದ ಅಚ್ಚರಿ!
ಬೆಟ್ಟದ ಕೆಳಗೆ ನಿಂತು ನೋಡಿದರೆ ನಿಮಗೆ ಸಾಮಾನ್ಯ ವಾತಾವರಣವೇ ಕಾಣುತ್ತದೆ. ಮೇಲೆ ಚಳಿ ಇರಬಹುದು ಎಂಬ ಯಾವ ಸೂಚನೆಯೂ ನಿಮಗೆ ಸಿಗೋದಿಲ್ಲ. ಕಡಿದಾದ ದಾರಿಯಲ್ಲಿ ಮೇಲೆ ಸಾಗುತ್ತಾ ಹೋದಂತೆ ಶುರುವಾಗುತ್ತೆ ನೋಡಿ ಚಳಿಯ ಅನುಭವ. ಬೆಟ್ಟದ ತುತ್ತ ತುದಿಗೆ ಹೋದರೆ ಅಲ್ಲಿ ಬೀಸೋ ಗಾಳಿಗೆ ಕಾಲಿನಿಂದ ಶುರುವಾದ ನಡುಕ ಇಡೀ ದೇಹವನ್ನು ಆವರಿಸಿಕೊಳ್ಳುತ್ತದೆ. ಹಲ್ಲುಗಳೆಲ್ಲ ಕಟಕಟ ಕಡಿಯಲು ಆರಂಭವಾಗುತ್ತದೆ. ಮುಂಜಾನೆ ಭೇಟಿ ಕೊಟ್ಟರಂತೂ ಅದು ನಿಜಕ್ಕೂ ಅವಿಸ್ಮರಣೀಯ ಅನುಭವ.
ಕಾರ್ ನೋ ಎಂಟ್ರಿ!
ಖಾಸಗಿ ವಾಹನಗಳನ್ನು ಬೆಟ್ಟದ ಕೆಳಭಾಗದಲ್ಲೇ ಬಿಡಬೇಕು. ಮೇಲೆ ಹೋಗಲು ಸರ್ಕಾರಿ ಬಸ್ನ ಏರಬೇಕು. ಸುರಕ್ಷತೆ ದೃಷ್ಟಿಯಿಂದಾಗಿ ಮೇಲ್ಭಾಗಕ್ಕೆ ಯಾವುದೇ ಖಾಸಗಿ ವಾಹನವನ್ನು ಬಿಡೋದಿಲ್ಲ. ಹೀಗಾಗಿ, ವೀಕೆಂಡ್ನಲ್ಲಿ ಹೋದರೆ ನೀವು ಕೊಂಚ ಸಮಯ ಕಾಯಬೇಕಾಗಿ ಬರಬಹುದು.