ಪ್ರಕೃತಿ ಮಡಿಲಲ್ಲಿ ನೆಲೆನಿಂತ ಕಾರಿಂಜೇಶ್ವರ
ಹಸಿರಿನಿಂದ ಕೂಡಿದ ಈ ಬೆಟ್ಟವನ್ನು ಏರಬೇಕೆಂದರೆ ಸುಮಾರು ಐನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಕು. ಮೊದಲೇ ಹೇಳಿರುವಂತೆ ಇಲ್ಲಿ ಶಿವ ಹಾಗೂ ಪಾರ್ವತಿಯರ ಪ್ರತ್ಯೇಕ ದೇವಸ್ಥಾನಗಳಿದ್ದು ಶಿವ ಹಾಗೂ ಪಾರ್ವತಿಯರು ಇಲ್ಲಿ ಭೇಟಿಯಾಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಅದುವೇ ಶಿವರಾತ್ರಿಯ ಸಮಯದಲ್ಲಿ ನಡೆಯುವ ಉತ್ಸವದಂದು.
- ಸೌಮ್ಯಕಾರ್ಕಳ
ತುಳುನಾಡ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಇತಿಹಾಸ ಸುಪ್ರಸಿದ್ಧ ಭೂಕೈಲಾಸವಾದ ಶ್ರೀ ಕಾರಿಂಜೇಶ್ವರ ದೇವಸ್ಥಾನವು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಸಮೀಪ ಇರುವ ಕಾರಿಂಜ ಎಂಬಲ್ಲಿರುವ ಪ್ರಸಿದ್ದ ಶಿವ ದೇವಾಲಯದಲ್ಲಿ ಒಂದು.
ಬೆಟ್ಟದ ತುದಿಯಲ್ಲಿರುವ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡಿರುವ ಬಂಟ್ವಾಳದ ಶ್ರೀ ಕಾರಿಂಜೇಶ್ವರ ದೇವಸ್ಥಾನವು ಶಾಂತಿಯುತವಾದ ಸ್ವರ್ಗವಾಗಿದೆ. ಶಿವನಿಗೆ ಸಮರ್ಪಿತವಾದ, 1000 ವರ್ಷಗಳಷ್ಟು ಹಳೆಯದಾದ ಕಾರಿಂಜೇಶ್ವರ ದೇವಸ್ಥಾನವು ಪ್ರಾಚೀನತೆ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ. ಈ ದೇವಸ್ಥಾನವು ಕೇವಲ ತೀರ್ಥಯಾತ್ರೆಯ ಸ್ಥಳವಲ್ಲ, ಸುತ್ತಮುತ್ತಲಿನ ವಿಹಂಗಮ ನೋಟವನ್ನು ಆಸ್ವಾದಿಸಬಹುದು.
ಕಾರಿಂಜೇಶ್ವರ ದೇವಾಲಯದ ಇತಿಹಾಸ
ಶ್ರೀ ಕಾರಿಂಜೇಶ್ವರ ದೇವಾಲಯದ ಇತಿಹಾಸವು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, ಹಿಂದೂ ಪುರಾಣದ ನಾಲ್ಕು ಯುಗಗಳ ಈ ದೇವಾಲಯದಲ್ಲಿ ಉಲ್ಲೇಖವಿದ್ದು ಕೃತಯುಗದಲ್ಲಿ ರೌದ್ರಗಿರಿ, ದ್ವಾಪರಯುಗದಲ್ಲಿ 'ಭೀಮಶೈಲ', ತ್ರೇತಾಯುದಲ್ಲಿ 'ಗಜೇಂದ್ರಗಿರಿ' ಹಾಗೂ ಕಲಿಯುಗದಲ್ಲಿ 'ಕಾರಿಂಜ'ವೆಂದು ಕರೆಯಲ್ಪಡುವ ಈ ದೇವಾಲಯವು ಸಮುದ್ರ ಮಟ್ಟದಿಂದ 1500 ಸಾವಿರ ಅಡಿ ಎತ್ತರದಲ್ಲಿದೆ.

ಇದಲ್ಲದೆ, ಈ ದೇವಾಲಯವು ರಾಮಾಯಣ ಮತ್ತು ಮಹಾಭಾರತದೊಂದಿಗೆ ಸಂಪರ್ಕವನ್ನು ಹೊಂದಿದೆ. ಇಲ್ಲಿನ ಗುಹೆಗಳು ಪಾಂಡವರ ವನವಾಸದ ಸಮಯದಲ್ಲಿ ಅಡಗು ತಾಣಗಳಾಗಿಯೂ ಕಾರ್ಯನಿರ್ವಹಿಸಿವೆ. ಪಾಂಡವ ಸಹೋದರರಾದ ಭೀಮ ಮತ್ತು ಅರ್ಜುನರು ಕಾರಿಂಜೇಶ್ವರ ದೇವಾಲಯದಲ್ಲಿ ನಾಲ್ಕು ತೀರ್ಥಗಳು ಅಥವಾ ಪವಿತ್ರ ಕೊಳಗಳನ್ನುರಚಿಸಿದರು. ನಂಬಿಕೆಗಳ ಪ್ರಕಾರ, ಭೀಮನು ತನ್ನ ಗದೆಯನ್ನು (ಗದಾ) ನೆಲದ ಮೇಲೆ ಹೊಡೆದು 'ಗದಾತೀರ್ಥ'ವನ್ನು ರೂಪಿಸಿದನು. ಅಲ್ಲದೆ, ಅವನು ನೆಲದ ಮೇಲೆ ಮಂಡಿಯೂರಿ ಕುಳಿತಾಗ, ಭೀಮನು ತನ್ನ ಹೆಬ್ಬೆರಳಿನಿಂದ 'ಅಂಗುಷ್ಟ ತೀರ್ಥ' ಮತ್ತು 'ಜಾನು ತೀರ್ಥ'ವನ್ನು ಸೃಷ್ಟಿಸಿದನು. ಇದಲ್ಲದೆ, ಅರ್ಜುನನು ಹಂದಿಯೊಂದಕ್ಕೆ ಬಾಣ ಎಸೆದನು, 'ಹಂದಿತೀರ್ಥ' ಅಥವಾ 'ವರಾಹ ತೀರ್ಥ'ವನ್ನು ರೂಪಿಸಿದನು ಎಂಬ ನಂಬಿಕೆ ಹೊಂದಿದ್ದು, ಅಷ್ಟೇಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ಒಂದು ವಿಶೇಷ.
ಐತಿಹಾಸಿಕ ಹಿನ್ನೆಲೆ
ಐತಿಹಾಸಿಕ ಹಿನ್ನಲೆಯ ಪ್ರಕಾರ ಸುಮಾರು ಎಂಟು ನೂರು ವರ್ಷಗಳ ಹಿಂದೆ ಕಾರಿಂಜತ್ತಾಯ ಮತ್ತು ಇಚ್ಳತ್ತಾಯ ಎಂಬ ಬ್ರಾಹ್ಮಣ ಸಹೋದರರು ಉತ್ತರ ಕನ್ನಡ ಜಿಲ್ಲೆಯ ಕುಂಬಲದಿಂದ ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಬಂದಿದ್ದರು. ಈ ಪ್ರಚಾರಕರಲ್ಲಿ ಇಚ್ಳತ್ತಾಯ ನೆಲೆಯೂರಿದ ಸ್ಥಳವನ್ನು ಇಚ್ಲಂಪಾಡಿಯೆಂದೂ, ಕಾರಿಂಜತ್ತಾಯ ನೆಲೆಯೂರಿದ ಸ್ಥಳವನ್ನು ಕಾರಿಂಜ ಎಂದು ಕರೆಯಲಾಯಿತು. ಕಾರಿಂಜದಲ್ಲಿ ದಟ್ಟ ಹಸಿರಿನ ಮಧ್ಯೆ ಇರುವ ಬೆಟ್ಟದಲ್ಲಿ ಶಿವ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಈ ಕ್ಷೇತ್ರವೇ ಮುಂದೆ ಕಾರಿಂಜೇಶ್ವರವೆಂದು ಪ್ರಸಿದ್ಧಿ ಪಡೆಯಿತು.
ಹಸಿರಿನಿಂದ ಕೂಡಿದ ಈ ಬೆಟ್ಟವನ್ನು ಏರಬೇಕೆಂದರೆ ಸುಮಾರು ಐನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಕು. ಮೊದಲೇ ಹೇಳಿರುವಂತೆ ಇಲ್ಲಿ ಶಿವ ಹಾಗೂ ಪಾರ್ವತಿಯರ ಪ್ರತ್ಯೇಕ ದೇವಸ್ಥಾನಗಳಿದ್ದು ಶಿವ ಹಾಗೂ ಪಾರ್ವತಿಯರು ಇಲ್ಲಿ ಭೇಟಿಯಾಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಅದುವೇ ಶಿವರಾತ್ರಿಯ ಸಮಯದಲ್ಲಿ ನಡೆಯುವ ಉತ್ಸವದಂದು. ಮಹಾಶಿವರಾತ್ರಿಯಂದು ಇಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರೋತ್ಸವದಂದು ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿಯ ದೇವಾಲಯಕ್ಕೆ ತರುವ ಮೂಲಕ ಶಿವ ಪಾರ್ವತಿಯರ ಭೇಟಿ ನಡೆಯುತ್ತದೆ.

ಪೌರಾಣಿಕ ಹಿನ್ನೆಲೆಯ ಪ್ರಕಾರ ಶಿವನು ಪಾರ್ವತಿ ದೇವಿಯ ಸಂಗವನ್ನು ಬಯಸಿ ಬೆಟ್ಟದಿಂದ ಕೆಳಗೆ ಇಳಿದು ಬರುತ್ತಾನೆ. ಆದರೆ ಕೆಳಗೆ ಬಂದು ತಲುಪಿದಾಗ ಪಾರ್ವತಿಯು ಋತುಮತಿಯಾಗಿರುವುದನ್ನು ತಿಳಿದು, ವೇಗವಾಗಿಯೇ ಕಡಿದಾದ ಬೆಟ್ಟವನ್ನು ಏರುತ್ತಾನೆ. ಹೀಗಾಗಿ ಇಂದಿಗೂ ಕೂಡಾ ಉತ್ಸವದ ಸಮಯದಲ್ಲಿ ಅರ್ಚಕರು ಶಿವನ ವಿಗ್ರಹವನ್ನು ಕೆಳಗೆ ತಂದು ಅಷ್ಟೇ ವೇಗವಾಗಿ ಓಡಿಕೊಂಡು ಬೆಟ್ಟವನ್ನು ಏರುತ್ತಾರೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗೂ ಈ ಕಡಿದಾದ ಬೆಟ್ಟವನ್ನು ನಿಧಾನವಾಗಿ ಹತ್ತಿಕೊಂಡು ಏರುವುದರಲ್ಲಿ ಏದುಸಿರು ಬರುತ್ತದೆ. ಶಿವರಾತ್ರಿಯಂದು ಅರ್ಚಕರು ಓಡಿಕೊಂಡೇ ಬೆಟ್ಟವನ್ನು ಏರುವಂತಹ ಸನ್ನಿವೇಶವು ಈ ಸ್ಥಳದ ಪವಾಡ ಶಕ್ತಿಯಾದ ಶಿವನ ಪ್ರಭಾವವನ್ನು ತಿಳಿಸುತ್ತದೆ
ಬೆಟ್ಟದ ವಿಶೇಷತೆ
ಬೆಟ್ಟದ ಮೇಲೆ ಬೃಹತ್ ಶಿಲಾ ಬೆಟ್ಟದತ್ತ ಕೂಗಿದರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿ ಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾ ದೇವಿ ಪ್ರಮಾಣ ಕಲ್ಲೂ ಇದೆ. ನಿತ್ಯವೂ ಇಲ್ಲಿ ವಾನರ ಸೇನೆಗೆ ಅನ್ನ ನೈವೇದ್ಯವನ್ನು ನೀಡಲಾಗುತ್ತದೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಕರಾವಳಿಯಾದ್ಯಂತ ಅಮಾವಾಸ್ಯೆಯಂದು ಮಾಡುವ ತೀರ್ಥಸ್ನಾನ ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.
ಕಾರಿಂಜೇಶ್ವರ ದೇವಾಲಯದ ಸಮಯ
ಕಾರಿಂಜೇಶ್ವರ ದೇವಸ್ಥಾನವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಸಂಜೆ 5.30 ರಿಂದ ಸಂಜೆ 6.30 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.