ಇಟಗಿ ಮಹಾದೇವ ದೇವಾಲಯ...
ಈ ಗೋಪುರವನ್ನು ನಿರ್ಮಿಸಿದ ಶಿಲ್ಪಿಗೆ ಶೀಘ್ರ ಮರಣ ಕಂಟಕವಿರುವುದಾಗಿ ಜ್ಯೋತಿಷಿಗಳು ಹೇಳಿದ್ದರಂತೆ. ಹಾಗಾಗಿ ದಂಡನಾಯಕ ಇದನ್ನು ಪೂರ್ಣಗೊಳಿಸಲಿಲ್ಲ. ಮುಂದೆ ಹೈದರಾಬಾದಿನ ನಿಜಾಮರು ಇದನ್ನು ಪೂರ್ಣಗೊಳಿಸಿದ್ದಾರೆಂದು ವದಂತಿಯಿದೆ.
- ಸಂಗಮೇಶ ಬಾದವಾಡಗಿ
ಕರ್ನಾಟಕ ರಾಜ್ಯದಲ್ಲಿ ಬಹುವಿಶಿಷ್ಟ ಸ್ಥಳಗಳಿದ್ದರೂ, ಅವುಗಳು ಎಲೆ ಮರೆಯ ಕಾಯಿಯಂತೆ ಉಳಿದಿವೆ. ಪ್ರಚಾರದಿಂದಲೂ ದೂರ ಉಳಿದಿವೆ. ಕೊಪ್ಪಳ ಜಿಲ್ಲೆಯ “ದೇವಾಲಯಗಳ ಚಕ್ರವರ್ತಿ” ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಇಟಗಿ ಮಹಾದೇವ ದೇವಸ್ಥಾನ ಅಂಥ ಒಂದು ಅದ್ಭುತ ಸ್ಥಳ.
ಒಂದು ದೇವಸ್ಥಾನ “ದೇವಾಲಯದ ಚಕ್ರವರ್ತಿ” ಎಂದು ಕರೆಸಿಕೊಳ್ಳಬೇಕಾದರೆ, ಅದು ಹೇಗೆ ಉಳಿದ ದೇವಾಲಯಗಳಿಗಿಂತ ಶ್ರೇಷ್ಠ ಎನುವುದನ್ನು ನಿರೂಪಿಸಬೇಕಾಗುತ್ತದೆ. ಪುರಾವೆ ಒದಗಿಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ, ಇಟಗಿಯ ಹತ್ತಿರದ ಗದುಗಿನ ‘ತ್ರಿಕೂಟೇಶ್ವರ’, ಲಕ್ಷ್ಮೇಶ್ವರದ ಲಕ್ಷ್ಮೇಶ್ವರ, ಹಾನಗಲ್ಲಿನ ತಾರಕೇಶ್ವರ, ಗಳಗನಾಥದ ಗಳಗನಾಥೇಶ್ವರ, ಡಂಬಳದ ದೊಡ್ಡಬಸವೇಶ್ವರ, ನೀರಲಗಿಯ ಸಿದ್ದರಾಮೇಶ್ವರ ಈ ಎಲ್ಲ ದೇವಾಲಯಗಳನ್ನು ನೋಡುವಾಗ ಇವುಗಳು ಮನಸ್ಸುಗಳನ್ನು ಆಕರ್ಷಿಸಿದರೂ ಈ ಮಹಾದೇವ ದೇವಸ್ಥಾನ ಮಾತ್ರ ಅತ್ಯಂತ ವೈಶಿಷ್ಟ್ಯಪೂರ್ಣತೆಯಿಂದ ಭಿನ್ನ ಹಾಗೂ ಸುಂದರ ಶೈಲಿಯ ಕೆತ್ತನೆಯಿಂದ ಅದು ಚಕ್ರವರ್ತಿ ಎಂದು ಕರೆಸಿಕೊಳ್ಳುತ್ತದೆ. ಈ ಮಾತನ್ನು ದೇವಾಲಯಗಳ ನಾಡಾದ ಕರಾವಳಿಯ ಖ್ಯಾತ ಸಾಹಿತಿ, ಡಾ. ಶಿವರಾಮ ಕಾರಂತರು ಹಾಗೂ ಇತಿಹಾಸ ತಜ್ಞ ಸೂರ್ಯನಾಥ್ ಕಾಮತರು ಪುಷ್ಟೀಕರಿಸಿದ್ದಾರೆ. ಈ ದೇವಾಲಯದ ಸ್ವರೂಪ, ಶ್ರೇಷ್ಠ ಕೆತ್ತನೆ, ಭವ್ಯತೆಯಿಂದ ಇದೊಂದು ಮಾದರಿ ದೇವಾಲಯವೆಂದು ಕರೆಸಿಕೊಂಡು, ಬೇಲೂರಿನ ಪ್ರಸಿದ್ದ ಚನ್ನಕೇಶವ ದೇವಾಲಯ ನಿರ್ಮಾಣಕ್ಕೆ ಪ್ರೇರಣೆ ನೀಡಿತಂತೆ. ಹೆಚ್ಚಿನದೇನು ಬೇಕು, ಈ ದೇವಾಲಯದ ಮಾನ ಸನ್ಮಾನಕ್ಕೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೇಂದ್ರ ಸ್ಥಳದಿಂದ 6 ಕಿ.ಮೀ. ಕ್ರಮಿಸಿದರೆ ಸಿಗುವ ಒಂದು ಹಳ್ಳಿ ಇಟಗಿ. ಈ ಗ್ರಾಮದ ವಿಸ್ತಾರ, ವಿಶಾಲವುಳ್ಳ ಬಯಲು ಜಾಗದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುವ ಈ ಶಿಲ್ಪ ಸದನ, ಸಹಜವಾಗಿ ನೋಡುಗರ ಕಣ್ಣಿಗೆ ಬೀಳುತ್ತದೆ. ಉನ್ನತ ಕಲಾ ಕೆತ್ತನೆಯಿದ ಸರ್ವಾಲಂಕೃತವಾದ ಪರಿಪೂರ್ಣ ಕಲಾವೈಭವವನ್ನು ಗಮನಿಸುತ್ತಾ ಹೋದಂತೆ, ಮೈಮನಗಳು ಮರೆಯುವಂತೆ ಮಾಡುತ್ತವೆ. ಅಲ್ಲಲ್ಲಿ ಉರುಳಿದ್ದ ಕಂಬಗಳು ಪ್ರಾಚ್ಯವಸ್ತು ಇಲಾಖೆಯವರು ಕೈಗೊಂಡಿರುವ ಮರು ಸ್ಥಾಪನೆಗಾಗಿ ಕಾದು ನಿಂತಿರುವುದರಿಂದ ಪ್ರವಾಸಿಗರು ಸಹ ದೇವಾಲಯದ ಮರು ವೈಭವದ ದಿನಗಳಿಗಾಗಿ ಕಾದಿದ್ದಾರೆ.
ಮಹಾದೇವ ದೇವಾಲಯವನ್ನು ಕ್ರಿ.ಶ. 1112ರಲ್ಲಿ ಕಲ್ಯಾಣ ಚಾಲುಕ್ಯ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿ ಇಟಗಿಯ ಮಹಾದೇವ ದಂಡನಾಯಕ ತಾನು ಯುದ್ಧವೊಂದರಲ್ಲಿ ಗೆದ್ದ ನೆನಪಿಗಾಗಿ ಈ ಸ್ಮಾರಕ ನಿರ್ಮಾಣ ಮಾಡಿದ್ದಂತೆ. ಈ ದೇವಾಲಯದ ನಿರ್ಮಾಣಕ್ಕೆ ಕಪ್ಪು ಮಿಶ್ರಿತ ನೀಲಿ ಛಾಯೆಯ ಮೆದು ಬಳಪದ (ಕ್ಲೊರೆಟಕ್ ಸಿಸ್ಟ ಕಲ್ಲುಗಳು) ಕಲ್ಲುಗಳನ್ನು ಬಳಸಿ ಸೂಕ್ಷ್ಮ ಕೆತ್ತನೆ ಮಾಡಿದ್ದಾರೆ. ತಜ್ಞರ ಅಭಿಪ್ರಾಯದಂತೆ ಈ ಗುಡಿ ವೇಸರ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದು, ಇಲ್ಲಿ ಹಿನಸರಿತ, ಮುನಸರಿತಗಳೊಂದಿಗೆ ನಕ್ಷತ್ರಾಕಾರದಲ್ಲಿ ಅರಳಿ ನಿಂತಿದೆ. ಕಲ್ಯಾಣ ಚಾಲುಕ್ಯರು ನಿರ್ಮಿಸಿರುವ ಶ್ರೇಷ್ಠ ದೇವಾಲಯವಾದ ಬಾದಾಮಿ ಚಾಲುಕ್ಯರ ಒರಟು ಕೆತ್ತನೆ ಹಾಗೂ ಹೊಯ್ಸಳರ ಸೂಕ್ಷ್ಮ ಕೆತ್ತನೆಗಳ ಸಮ್ಮಿಶ್ರ ಸಂಗಮವಾಗಿದೆ. ಗರ್ಭಗೃಹ, ಅಂತರಾಳ(ಸುಕನಾಶಿ)ನವರಂಗ, ರಂಗಮಂಟಪ, ಮುಖಮಂಟಪಗಳ ಶಿಸ್ತೀಯ ಬದ್ಧತೆಯಿಂದ ಕಟ್ಟಿದ್ದರಿಂದ ಪರಿಪೂರ್ಣ ದೇವಾಲಯವೆನಿಸಿದೆ. ಸುಂದರ ಕೆತ್ತನೆಯ ಕಲೆಯಲ್ಲಿ ಅರಳಿದ ಹಳೆಬೀಡಿನ ಹೊಯ್ಸಳೇಶ್ವರನ ದೇವಾಲಯದ ನಂತರ ಅತ್ಯಂತ ಸುಂದರ, ಪರಿಪಕ್ವತೆಯಲ್ಲಿ ಈ ದೇವಾಲಯ ವಿಶಿಷ್ಟವಾಗಿದ್ದು ಕರ್ನಾಟಕದಲ್ಲಿ ಮತ್ತೆಲ್ಲಿಯೂ ಇಂಥದ್ದು ಕಾಣಸಿಗುವುದಿಲ್ಲ.
ಈ ದೇವಾಲಯದ ಉದ್ದ 120 ಅಡಿ ಅಗಲ 99 ಅಡಿ ಕಟ್ಟಡದಲ್ಲಿ ಶಿಲ್ಪ ಕಲೆಯ ಇಂದ್ರಜಾಲ ಹೊಂದಿದ್ದು ಪೂರ್ವ ದಿಕ್ಕಿಗೆ ಮಹಾದ್ವಾರವಿದ್ದು, ದಕ್ಷಿಣೋತ್ತರವಾಗಿ ಒಂದೊಂದು ದ್ವಾರಗಳನ್ನು ಅಳವಡಿಸಿಲಾಗಿದೆ. ಎಡ-ಬಲ ಭಾಗಕ್ಕೆ ದ್ವಾರ ಪಟ್ಟಿಕೆಗಳನ್ನು ಕೆತ್ತಲಾಗಿದೆ. ಸುತ್ತಲೂ ಅನೇಕ ದೇವರ ಗುಡಿಗಳ ಸಮುಚ್ಛಯವೇ ಇದೆ. ಅದಕ್ಕೆ ಮುಕುಟವಿಟ್ಟಂತೆ ಪ್ರಾಚ್ಯವಸ್ತು ಇಲಾಖೆಯವರು ಬೆಳೆಸಿದ ಹಸಿರು ಹುಲ್ಲಿನ ಹಾಸಿಗೆ ಆಕರ್ಷಕವಾಗಿದೆ. ಆವರಣದ ಸುತ್ತ, ಅಲ್ಲಲ್ಲಿ ಶಿಲಾ ಶಾಸನಗಳು, ವೀರಗಲ್ಲುಗಳು, ಮೂಕವಾಗಿ ತಮ್ಮ ಕಥೆಯನ್ನು ಬಿಚ್ಚಿಡುತ್ತವೆ. ಹಸಿರು ಹುಲ್ಲಿನ ಮಧ್ಯೆ ಆವರಣದ ಹೊರಭಾಗದಲ್ಲಿ ಅಪರೂಪದ ಚತುರ್ಮುಖದ ಬ್ರಹ್ಮನ ವಿಗ್ರಹವಿದೆ.

ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಸುಮಾರು 3 ಅಡಿ ಎತ್ತರದ ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಜಗುಲಿ (ಅಧಿಷ್ಠಾನ) ಮೇಲೆ ವಿಭಿನ್ನವಾದ ಕೆತ್ತನೆಯ 62 ಕಂಬಗಳನ್ನು ಹೊತ್ತು ನಿಂತಿರುವ ಮುಖಮಂಟಪ ನೋಡುಗರನ್ನು ದೇವಾಲಯದೊಳಕ್ಕೆ ಬರಮಾಡಿಕೊಳ್ಳುತ್ತದೆ. ಬೇಲೂರಿನ ಚನ್ನಕೇಶವ ದೇವಾಲಯದ ರಂಗಮಂಟಪದಲ್ಲಿರುವ ಕಂಬಗಳನ್ನು ನೆನಪಿಸುವ ಇವುಗಳಲ್ಲಿ 17 ಕಂಬಗಳು ಬಿದ್ದು ಹೋಗಿವೆ. ಈ ಮುಖಮಂಟಪಕ್ಕೆ ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಗರ್ಭಗೃಹಕ್ಕೆ ಅಭಿಮುಖವಾಗಿ ಪಶ್ಚಿಮದೆಡೆಗೆ ಮುಖ ಮಾಡಿ ಕುಳಿತ ನಂದಿ ವಿಗ್ರಹವಿದೆ. ಇದು ನಾಲ್ಕು ಕಂಬಗಳ ಮಧ್ಯೆ ಇದ್ದು ಮೇಲ್ಭಾಗದಲ್ಲಿ ಸುಂದರವಾದ ಭುವನೇಶ್ವರಿ ಮೂರ್ತಿ ಇದೆ. ಹಾಗಾಗಿ ಈ ಭಾಗವನ್ನು ನಂದಿ ಮಂಟಪ ಎಂತಲೂ ಕರೆಯುತ್ತಾರೆ.
ಗೋಲಾಕಾರವಾಗಿ ತಗ್ಗಾಗಿರುವ ಈ ಭುವನೇಶ್ವರಿಯಲ್ಲಿ ಭೈರವನನ್ನು ಕೆತ್ತಲಾಗಿದೆ. ಶಿಲ್ಪಿಯ ಅತ್ಯಂತ ಸೂಕ್ಷ್ಮ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ. ಭುವನೇಶ್ವರಿಯನ್ನು ಹೊತ್ತ ನಾಲ್ಕು ಕಂಬಗಳ ಬೋದಿಗೆಗಳನ್ನು ನಾಲ್ಕು ಕೆತ್ತನೆಯ ಪಟ್ಟಿಕೆಗಳು ಸೇರಿಸುತ್ತವೆ. ಇವುಗಳಲ್ಲಿ ದಕ್ಷಿಣ ಭಾಗಕ್ಕಿರುವ ಪಟ್ಟಿಕೆಯ ಕೆಳಭಾಗದಲ್ಲಿ ಒಂದು ಚಿಕ್ಕಶಾಸನವಿದೆ. ಪೂರ್ವದ್ವಾರದ ಬಿಂಬಲಲಾಟದಲ್ಲಿ ಗಜಲಕ್ಷ್ಮಿ ಇದೆ. ಇದು ಕಲ್ಯಾಣ ಚಾಲುಕ್ಯರ ಎಲ್ಲ ದೇವಾಲಯಗಳಲ್ಲಿ ಸಾಮಾನ್ಯವಾಗಿದೆ. ಈ ಮಹಾದ್ವಾರವನ್ನು ದಾಟಿದರೆ ಸಿಗುವುದೇ ನವರಂಗ (ರಂಗಮಂಟಪ). ಇಲ್ಲಿನ ಈಶಾನ್ಯ ಭಾಗದ ಕಂಬದ ಬೋದಿಗೆಯಲ್ಲಿ ಮಹಾದಂಡನಾಯಕನಾದ ಮಹಾದೇವನ ಸುಂದರ ಮೂರ್ತಿ ಇದೆ.
ಇದನ್ನು ದಾಟಿ ಗರ್ಭಗೃಹದತ್ತ ಮುಂದೆ ಸಾಗಿದರೆ ಸಿಗುವುದೇ ಸುಕನಾಸಿ. ಇದರ ದ್ವಾರದ ಬಿಂಬಲಲಾಟದಲ್ಲಿ ಶಿವನ ನಾಟ್ಯ ಭಂಗಿಯ ಕೆತ್ತನೆ ಇದ್ದು, ಸುತ್ತಲೂ ಮಕರ ತೋರಣವಿದೆ. ಮೇಲೆ ಕೀರ್ತಿ ಶಿಖರವಿದೆ. ಇದಕ್ಕೆ ಬಳ್ಳಿ ಹಬ್ಬಿಕೊಂಡಿದೆ. ಇಲ್ಲಿನ ಗೋಡೆಗಳಲ್ಲಿ ಕೋಷ್ಟ ಪಂಜರಗಳಿವೆ. ಅಷ್ಟಲಕ್ಷ್ಮಿಯರ ಮೂರ್ತಿಗಳಿಗಾಗಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಿರುವುದೇ ಗರ್ಭಗೃಹದ ದ್ವಾರ. ಈ ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಐದು ಸ್ತರಗಳುಳ್ಳ ಸುಂದರವಾದ ಗೋಪುರವಿದೆ. ಮಹಾದೇವ ದಂಡನಾಯಕ ಇದರ ಮೂರು ಸ್ತರಗಳನ್ನು ಮಾತ್ರ ನಿರ್ಮಿಸಿದ್ದಾನೆ. ಏಕೆಂದರೆ ಈ ಗೋಪುರವನ್ನು ನಿರ್ಮಿಸಿದ ಶಿಲ್ಪಿಗೆ ಶೀಘ್ರ ಮರಣ ಕಂಟಕವಿರುವುದಾಗಿ ಜ್ಯೋತಿಷಿಗಳು ಹೇಳಿದ್ದರಂತೆ. ಹಾಗಾಗಿ ದಂಡನಾಯಕ ಇದನ್ನು ಪೂರ್ಣಗೊಳಿಸಲಿಲ್ಲ. ಮುಂದೆ ಹೈದರಾಬಾದಿನ ನಿಜಾಮರು ಇದನ್ನು ಪೂರ್ಣಗೊಳಿಸಿದ್ದಾರೆಂದು ವದಂತಿಯಿದೆ.
ಒಂದು ಪರಿಪೂರ್ಣ ದೇವಾಲಯದ ಎಲ್ಲ ಭಾಗಗಳನ್ನು ಒಳಗೊಂಡಂತೆ ನಿರ್ಮಿಸಿದ ಈ ದೇವಾಲಯದ ಅನೇಕ ಕಂಬಗಳು ಬಿದ್ದುಹೋಗಿವೆ. ಪೂರ್ವ ದಿಕ್ಕಿನ ಮೆಟ್ಟಿಲನ್ನೇರಿ ಮೇಲ್ಛಾವಣಿಯನ್ನು ನೋಡಿದರೆ ಭಗ್ನಗೊಂಡ ನಟರಾಜನ ಮೂರ್ತಿ ಇದೆ. ಸದ್ಯ ಉಳಿದಿರುವ ವಿಭಿನ್ನ ಆಕೃತಿಯ ನಲವತ್ತೈದು ಕಂಬಗಳು ಪಾದದಿಂದ ತುದಿಯವರೆಗೆ ದುಂಡಾಗಿವೆ. ಆದ್ದರಿಂದ ಇವುಗಳನ್ನು ಚಕ್ರಗಂಬಗಳು ಎಂದು ಕರೆಯಲಾಗುತ್ತದೆ. ನವರಂಗದ ಮಧ್ಯದಲ್ಲಿ ಎರಡು ಕಂಬಗಳ ಮೇಲೆ ಬ್ರಹ್ಮ, ವಿಷ್ಣು, ಶಿವನ ಮೂರ್ತಿಗಳನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. ಇದರೊಂದಿಗೆ ವಿವಿಧ ಉಡುಗೆ ತೊಟ್ಟ ಕೇಟಿಬಂಧ, ಉರಬಂಧ, ಕರ್ಣಕುಂಡಲ, ಕಾಲ್ಗಡಗಗಳನ್ನು ಧರಿಸಿ ನರ್ತಿಸುತ್ತಿರುವ ಸುಂದರ ಶಿಲೆಗಳಿವೆ. ಇಲ್ಲಿನ ಎಲ್ಲ ಕಂಬಗಳಲ್ಲಿ ಮಣಿಹಾರ, ಪತ್ರಲತೆ, ಲತಾಸುರುಳಿಗಳಿದ್ದು ಅತ್ಯಂತ ನುಣುಪಾಗಿವೆ. ಪ್ರದಕ್ಷಿಣಪಥ ಈ ದೇವಾಲಯಕ್ಕಿಲ್ಲ. ದಕ್ಷಿಣ ಭಾಗದಲ್ಲಿರುವ ಸರಸ್ವತಿ ದೇವಾಲಯ ಕೂಡಾ ಮನ ಸೆಳೆಯುವಂಥದ್ದು.
ಕೀಲುಗೊಂಡ ತೀರ್ಥ : ಇದು ನೀರಿನ ಸಂಗ್ರಹಾಗಾರವಾಗಿದೆ. ದೇವಾಲಯದ ಗರ್ಭಗೃಹದ ಹಿಂದೆ ಪಶ್ಚಿಮಕ್ಕೆ ಒಂದು ಸುಂದರವಾದ ಮೆಟ್ಟಿಲು, ಮೆಟ್ಟಿಲುಗಳಾಗಿ ತೊಟ್ಟಿಲಾಕಾರದ ನಿರ್ಮಿಸಲ್ಪಟ್ಟ ಪುಷ್ಕರಣಿ ಇದೆ. ಇದನ್ನು ಕೀಲುಕೊಂಡ ಎಂದು ಕರೆಯುತ್ತಾರೆ. ಇದರ ಮೇಲ್ಭಾಗದಿಂದ ತಳದವರೆಗಿನ ರಚನೆಯು ಗರ್ಭಗೃಹದ ಮೇಲಿನ ವಿಮಾನ (ಗೋಪುರ)ದ ರಚನೆಯ ಗಾತ್ರದಲ್ಲಿದೆ. ಇಂದಿಗೂ ಇದು ಸುಭದ್ರ ಸ್ಥಿತಿಯಲ್ಲಿದ್ದು, ಈಗಲೂ ಪುಷ್ಕರಣಿ ತುಂಬಾ ಸದಾಕಾಲ ಸ್ವಚ್ಛ ಹಾಗೂ ಸ್ಫಟಿಕದಂತಿರುವ ನೀರು ತುಂಬಿರುತ್ತದೆ. ಇದರಲ್ಲಿನ ನೀರನ್ನು ದೇವರಪೂಜೆಗಾಗಿ ಬಳಸುತ್ತಾರೆ.

ಶಿವತೀರ್ಥ
ಈ ದೇವಾಲಯದ ಎದುರಿನ ಪೂರ್ವ ಭಾಗದಲ್ಲಿ ಒಂದು ಕಿ.ಮೀ. ಸುತ್ತಳತೆಯ ವಿಶಾಲವಾದ ಸುಮಾರು 40ರಿಂದ 50 ಅಡಿ ಆಳವಾದ ಪುಷ್ಕರಣಿ ನಿರ್ಮಿಸಿದ್ದಾರೆ. ಇದನ್ನು ಶಿವತೀರ್ಥವೆಂದು ಕರೆಯುತ್ತಾರೆ. ಇದು ಒಂದು ರೀತಿ ಸದಾ ನೀರಿರುವ ಕೆರೆಯಂತೆ ಕಂಗೊಳಿಸುತ್ತದೆ, ಇದರ ಜಲ ಸಂಪತ್ತಿನ ಸಂಪನ್ಮೂಲವನ್ನು ಶಾಸನಗಳು ಹೇಳುತ್ತವೆ. ಈ ಜಲಸಂಪತ್ತನ್ನು ಬಂಡವಾಳ ಮಾಡಿಕೊಳ್ಳುವ ಆಸಕ್ತ ಉದ್ಯಮಪತಿಗಳು ಮನಸ್ಸು ಮಾಡಿ, ಈ ಹೊಂಡವನ್ನು ಪುನರ್‌ಜೀವನಗೊಳಿಸಿ, ಸುಂದರ ಕಟ್ಟೆ ನಿರ್ಮಾಣ ಮಾಡಿ, ದೋಣಿ ವಿಹಾರ ಮಕ್ಕಳ ಆಟೋಟಗಳ ತಾಣವನ್ನಾಗಿ ಮಾಡಿದಲ್ಲಿ ಈ ಕೇಂದ್ರಕ್ಕೆ ಹತ್ತಿರವಿರುವ ಹುಬ್ಬಳ್ಳಿ, ಗದಗ, ಕೊಪ್ಪಳ, ಬಾಗಲಕೋಟೆ, ಹೊಸಪೇಟೆಯಂಥ ನಗರವಾಸಿಗಳಿಗೆ ಏಕದಿನದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಹಾಗೆ ಇಲ್ಲಿ ತಂಗಲು ವಸತಿ ಗೃಹ, ಊಟೋಪಚಾರಕ್ಕೆ ಸುಸಜ್ಜಿತ ಹೋಟೆಲ್ ಆದಲ್ಲಿ ಹಂಪಿ, ಕನಕಗಿರಿ, ಆನೆಗೊಂದಿಗೆ ಬರುವ ವಿದೇಶಿ, ಸ್ವದೇಶಿ ಪ್ರವಾಸಿಗರ ಮೆಚ್ಚಿನ ಸ್ಥಳವಾಗಿ ಮುಪ್ಪರಿಗೊಳ್ಳಬಹುದು. ಈ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಗೊಳಪಟ್ಟಿದ್ದರಿಂದ ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯ ಕಲ್ಪಿಸುವ ಕ್ರಮಕ್ಕೆ ಮುಂದಾಗಬೇಕಾಗಿದೆ.
ಮಹಾದೇವ ಮಂದಿರದ ಗರ್ಭಗುಡಿಯಲ್ಲಿರುವ ಮಹಾಲಿಂಗೇಶ್ವರನ ಮುಂದೆ ಪ್ರತಿವರ್ಷ ಯುಗಾದಿ ಪಾಡ್ಯದ ಹೊತ್ತಿಗೆ ಸೂರ್ಯನಿಂದ ಹೊರಡುವ ಕಿರಣಗಳು ಬಂದು ಆತನನನ್ನು ಸ್ಪರ್ಶಿಸುವ ದೃಶ್ಯ ಅನಾದೃಶ್ಯವಾಗಿರುತ್ತದೆ. ಈ ಆಶ್ಚರ್ಯದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸ್ಥಳೀಯ ಹಾಗೂ ಸುತ್ತಲಿನ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಈ ಚಮತ್ಕಾರಿಕೆಯ ಸೋಜಿಗವನ್ನು ಅನುಭವಿಸುತ್ತಾರೆ.
ಬರುವ ಬಗೆ: ಕೊಪ್ಪಳ ಜಿಲ್ಲಾ ಕೇಂದ್ರದಿಂದ ಈ ಇಟಗಿ 25 ಕಿ.ಮೀ. ಅಂತರದಲ್ಲಿ ಸುರಕ್ಷಿತ ರಸ್ತೆ ಇದೆ. ಹೊಸಪೇಟೆ, ಗದಗ, ಕೊಪ್ಪಳದಿಂದ ಈ ದೇವಸ್ಥಾನಕ್ಕೆ ಬರಲು ಆರು ಕಿ.ಮೀ. ಅಂತರದ ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ಇಳಿದು ಈ ಸ್ಥಳಕ್ಕೆ ಬರಬಹುದು. ಕುಕನೂರಿನಿಂದಲೂ 6 ಕಿ.ಮೀ ಕ್ರಮಿಸಿ ರಸ್ತೆ ಮೂಲಕ ಬರಬಹುದು.