ದೇವರ ಮೀನುಗಳ ಆಗರ ಈ ಶಿಶಿಲೇಶ್ವರ!
ಶಿಶಿಲದಲ್ಲಿ ದನದ ಕಲ್ಲು ಮತ್ತು ಹುಲಿ ಕಲ್ಲು ಎಂಬ ಎರಡು ಕಲ್ಲುಗಳಿವೆ. ನದಿ ಬಳಿ ನೀರು ಕುಡಿಯಲು ಏಕಕಾಲಕ್ಕೆ ಬಂದ ದನ ಮತ್ತು ಹುಲಿಯ ನಡುವೆ ಸಂಘರ್ಷ ಏರ್ಪಡುವುದನ್ನು ತಡೆಯಲು ಶಿಶಿಲೇಶ್ವರನು ಅವುಗಳನ್ನು ಕಲ್ಲಾಗಿ ಪರಿವರ್ತಿಸಿದ ಎಂದು ಹೇಳಲಾಗುತ್ತದೆ.
- ಕಿರಣ್
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿರುವ ಶಿಶಿಲದ ಶಿಶಿಲೇಶ್ವರ ದೇವಾಲಯ ತನ್ನದೇ ಆದ ವಿಶೇಷತೆಗಳಿಂದ ನಾಡಿನ ಭಕ್ತರ ಗಮನ ಸೆಳೆದಿದೆ. ನಿಸರ್ಗದ ತಪ್ಪಲಿನಲ್ಲಿ ನೂರಾರು ವರ್ಷಗಳಿಂದ ನೆಲೆಯಾಗಿರುವ ಶಿಶಿಲೇಶ್ವರ ದೇವರು, ಪಕ್ಕದಲ್ಲೇ ಪ್ರಶಾಂತವಾಗಿ ಹರಿಯುತ್ತಿರುವ ಕಪಿಲಾ ನದಿ, ದೇವರ ಮೀನುಗಳ ನೆಲೆಯಾಗಿರುವ ಮತ್ಸ್ಯ ತೀರ್ಥ ಮತ್ತು ತೂಗುಸೇತುವೆ ಇಲ್ಲಿನ ಪ್ರಮುಖ ಆಕರ್ಷಣೆ. ಒಂದೆಡೆ ಪಶ್ಚಿಮ ಘಟ್ಟಗಳ ಸಾಲು, ಮತ್ತೊಂದೆಡೆ ಪ್ರಕೃತಿಯ ಮಧ್ಯೆ ಶಾಂತವಾಗಿ ಹರಿಯುತ್ತಿರುವ ನದಿ ಇವುಗಳ ಮಧ್ಯೆ ಭಕ್ತಿಯ ಸುಧೆಯನ್ನೇ ಹೊತ್ತು ನೆಲೆಯಾಗಿರುವ ಶ್ರೀ ದೇವರ ಸಾನಿಧ್ಯ ನಾಡಿನ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ದಕ್ಷಿಣ ಕನ್ನಡದಲ್ಲಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ಎರಡೂ ಕ್ಷೇತ್ರಗಳ ಸಮೀಪದಲ್ಲಿರುವ ಊರು ಈ ಶಿಶಿಲ. ನೂರಾರು ವರ್ಷಗಳಿಂದ ಈ ಊರಿನಲ್ಲಿ ನೆಲೆನಿಂತು ಭಕ್ತರನ್ನು ಪೊರೆಯುತ್ತಿರುವ ಈಶ್ವರನೇ ಶ್ರೀ ಶಿಶಿಲೇಶ್ವರ.
ಶಿಶಿಲ ಎನ್ನುವುದು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಪುಟ್ಟ ಊರು. ಪ್ರಕೃತಿ ರಮಣೀಯ ತಾಣ ಮಾತ್ರವಲ್ಲದೇ ಕಪಿಲಾ ನದಿಯ ತಟದಲ್ಲಿರುವ ಊರು. ಇಲ್ಲಿನ ಶಿವಲಿಂಗ ಉದ್ಭವ ಲಿಂಗ ಎನ್ನುವುದು ಪ್ರತೀತಿ. ಈ ಸುಂದರ ಶಿವನ ದೇಗುಲ ಧರ್ಮಸ್ಥಳದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಇಲ್ಲಿ ಹರಿಯುತ್ತಿರುವ ಕಪಿಲಾ ನದಿ ನೇತ್ರಾವತಿಯ ಉಪನದಿ. ಇದು ಮೂಡಿಗೆರೆ ತಾಲೂಕಿನ ಗುತ್ತಿಗ್ರಾಮದ ದೇವರಮನೆ ಸಮೀಪದ ಹುಳ್ಳು ಮಲೆಯಲ್ಲಿ ಹುಟ್ಟಿ ನಂತರ ನೇತ್ರಾವತಿಯನ್ನು ಸೇರಿ ಮುಂದೆ ಹರಿಯುತ್ತದೆ.
ದೇವರ ಮೀನುಗಳು
ತುಳುವಿನಲ್ಲಿ ಪೆರುವೋಲ್ ಎಂದು ಕರೆಯಲ್ಪಡುವ ದೇವರ ಮೀನುಗಳು ಎಂದೇ ಪ್ರಸಿದ್ಧವಾಗಿರುವ ಮಹಶೀರ್ ಜಾತಿಯ ಮೀನುಗಳು ಈ ದೇಗುಲದ ಪರಿಸರದಲ್ಲಿವೆ. ಇವು ಸಮೀಪದ ಮೀನು ಗುಂಡಿ ಎಂಬಲ್ಲಿ ನೆಲೆಯಾಗಿದ್ದು, ದೇಗುಲದ ಬಳಿಯೇ ಹರಿಯುವ ಕಪಿಲಾ ನದಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಇಲ್ಲಿನ ಮೀನುಗಳನ್ನು ಪೂಜಿಸಿದರೆ, ಅವುಗಳಿಗೆ ಆಹಾರವನ್ನು ಅರ್ಪಿಸಿದರೆ, ಚರ್ಮವ್ಯಾಧಿಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ದೇಗುಲದ ಸಮೀಪದಲ್ಲಿರುವ ಅಂಗಡಿಗಳಲ್ಲಿ ಸಿಗುವ ಹುರಿದ ಅಕ್ಕಿಯನ್ನೇ ಭಕ್ತರು ಮೀನುಗಳಿಗೆ ನೀಡುತ್ತಾರೆ. ನಿಗದಿಪಡಿಸಿದ ಆಹಾರವನ್ನು ಹೊರತುಪಡಿಸಿ ಹೊರಗಿನ ಯಾವುದೇ ಆಹಾರಗಳನ್ನು ಇಲ್ಲಿನ ಮೀನುಗಳಿಗೆ ನೀಡುವಂತಿಲ್ಲ.
ಮೀನುಗಳ ಸಂರಕ್ಷಣೆಗಾಗಿ ದೇಗುಲದ ಸುಮಾರು 2 ಕಿ. ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಮೀನುಗಳೇ ಶಿಶಿಲದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಪ್ರತಿದಿನ ದೇಗುಲದಲ್ಲಿ ನಡೆಯುವ ಪೂಜೆಯ ಬಳಿಕ ಅವುಗಳಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಇಲ್ಲಿನ ತೂಗುಸೇತುವೆ ಮತ್ತೊಂದು ಆಕರ್ಷಣೆಯಾಗಿದ್ದು, ಅದರ ಮೇಲಿಂದಲೂ ಮೀನುಗಳಿಗೆ ಆಹಾರ ನೀಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಎಸೆಯುವ ಆಹಾರವನ್ನು ತಿನ್ನಲು ಮುಗಿಬೀಳುವ ಈ ಮೀನುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಸ್ಥಳದ ವಿಶೇಷತೆ
ಶಿಶಿಲದಲ್ಲಿ ದನದ ಕಲ್ಲು ಮತ್ತು ಹುಲಿ ಕಲ್ಲು ಎಂಬ ಎರಡು ಕಲ್ಲುಗಳಿವೆ. ನದಿ ಬಳಿ ನೀರು ಕುಡಿಯಲು ಏಕಕಾಲಕ್ಕೆ ಬಂದ ದನ ಮತ್ತು ಹುಲಿಯ ನಡುವೆ ಸಂಘರ್ಷ ಏರ್ಪಡುವುದನ್ನು ತಡೆಯಲು ಶಿಶಿಲೇಶ್ವರನು ಅವುಗಳನ್ನು ಕಲ್ಲಾಗಿ ಪರಿವರ್ತಿಸಿದ ಎಂದು ಹೇಳಲಾಗುತ್ತದೆ. ಮೇ ತಿಂಗಳ ಕೊನೆಯಲ್ಲಿ ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ವರ್ಷಾವಧಿ ಜಾತ್ರೆಯ ಸಮಯದಲ್ಲಿ ಈ ಎರಡೂ ಕಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದಕ್ಷಿಣ ಕನ್ನಡದ ಎಲ್ಲಾ ದೇಗುಲಗಳಂತೆ ಈ ದೇಗುಲದಲ್ಲಿ ತೀರ್ಥ ಬಾವಿ ಇಲ್ಲ. ಅದರ ಬದಲು ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ದೇಗುಲದ ಮೂಲಸ್ಥಾನವಾದ ಕುಮಾರಗುಡ್ಡೆಯಲ್ಲೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದೇಗುಲಕ್ಕೆ 700ಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು, ಜೈನ ಅರಸರು ಇದನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.
ದೇಗುಲದಲ್ಲಿ ಶಿಶಿಲೇಶ್ವರ ಪ್ರಮುಖ ದೇವರಾಗಿದ್ದು, ಜೊತೆಗೆ ದುರ್ಗಾ ದೇವಿ ಮತ್ತು ಮಹಾಗಣಪತಿಯ ಸಾನಿಧ್ಯವಿದೆ. ಹೊರಭಾಗದಲ್ಲಿ ಪಿಲಿ ಚಾಮುಂಡಿ, ರಕ್ತೇಶ್ವರಿ ಮತ್ತು ರುದ್ರಾಂಡಿ ದೈವದ ಗುಡಿಯಿದ್ದು, ದೇಗುಲದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ದೈವಗಳಿಗೆ ನೇಮೋತ್ಸವ ಇರುತ್ತದೆ.
ಗಮನಿಸಿ: ನೀವು, ಶಿಶಿಲ ದೇವಾಲಯಕ್ಕೆ ಭೇಟಿ ನೀಡುವವರಿದ್ದರೆ, ಈ ವಿಷಯಗಳು ನಿಮ್ಮ ಗಮನದಲ್ಲಿರಲಿ.
- ಕಪಿಲಾ ನದಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಸಹಜವಾಗಿ ಹೆಚ್ಚಿರುತ್ತದೆ, ಹೀಗಾಗಿ ಮಕ್ಕಳು, ವೃದ್ಧರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಿ.
- ಮೀನುಗಳಿಗೆ ನಿಗದಿಪಡಿಸಿದ ಆಹಾರವನ್ನು ಹೊರತುಪಡಿಸಿ ಇತರ ಆಹಾರ ನೀಡದಿರಿ.
- ಪ್ಲಾಸ್ಟಿಕ್ ಮುಕ್ತ ಪ್ರದೇಶ ಇದಾಗಿದ್ದು ಮೀನುಗಳಿಗೆ ಆಹಾರ ನೀಡಿದ ಬಳಿಕ ಪ್ಲಾಸ್ಟಿಕ್ ಅನ್ನು ಕಸದ ಬುಟ್ಟಿಗೆ ಹಾಕಿ ಅಥವಾ ಸಮೀಪದ ಅಂಗಡಿಗೆ ವಾಪಸ್ ನೀಡಿ.
- ಮೀನುಗಳನ್ನು ಕೈಯಲ್ಲಿ ಹಿಡಿಯಲು ಯತ್ನಿಸುವುದು, ಅವುಗಳಿಗೆ ತೊಂದರೆ ಕೊಡುವುದನ್ನು ಮಾಡಬೇಡಿ.
- ಇಲ್ಲಿಗೆ ತಲುಪುವ ರಸ್ತೆ ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಿದೆಯಾದರೂ ಈ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸೀಮಿತವಾಗಿರುವುದರಿಂದ ಆಫ್‌ಲೈನ್ ಮ್ಯಾಪ್ ನಿಮ್ಮೊಂದಿಗಿರಲಿ.
- ಕಾಡಿನ ಮಧ್ಯದ ಏಕಾಂತದ ದಾರಿ ಇದಾಗಿದ್ದು, ಸಲಹೆ ಸೂಚನೆ, ರಸ್ತೆ ನಿಯಮಗಳನ್ನು ಪಾಲಿಸಿ.
- ನೆಟ್‌ವರ್ಕ್ ಕಡಿಮೆ ಇರುವುದರಿಂದ ಯುಪಿಐ ಬದಲು ಕ್ಯಾಶ್ ಪಾವತಿ ಆಯ್ಕೆಯನ್ನು ಪರಿಗಣಿಸಿ.
- ಮ್ಯಾಪ್ ದಾರಿ ತಪ್ಪಿದಲ್ಲಿ ಸ್ಥಳೀಯರಿಂದ ಮಾರ್ಗದರ್ಶನ ಪಡೆಯಿರಿ.

ತಲುಪುವುದು ಹೇಗೆ?
ಶಿಶಿಲೇಶ್ವರ ದೇವಾಲಯ ಬೆಂಗಳೂರಿನಿಂದ ಸುಮಾರು 295 ಕಿ.ಮೀ., ಮಂಗಳೂರಿನಿಂದ 110 ಕಿ.ಮೀ., ಧರ್ಮಸ್ಥಳದಿಂದ 30 ಕಿ.ಮೀ, ಬೆಳ್ತಂಗಡಿಯಿಂದ 45 ಕಿ.ಮೀ., ಮತ್ತು ಕೊಕ್ಕಡದಿಂದ 15 ಕಿ.ಮೀ. ದೂರದಲ್ಲಿದೆ.