ಉಳಿ ಮುಟ್ಟದ ತಾನೇ ಉದ್ಭವವಾದ ಕುಂಟೋಜಿ ಬಸವಣ್ಣ
ಇಟಗಿಬಸವಣ್ಣನವರು ಅದರಿಂದ ನೊಂದು ’ಕಲ್ಯಾಣವೆಂಬುದು ಕಟುಕರ ಗಲ್ಲಿ ಆಗುತ್ತದೆ’ ಎಂದು ಶಾಪ ಕೊಟ್ಟರು. ಅಷ್ಟೇ ಅಲ್ಲ . ಕಲ್ಯಾಣವನ್ನೇ ಬಿಟ್ಟು ಕೂಡಲಸಂಗಮಕ್ಕೆ ಶರಣರ ದಂಡಿನೊಂದಿಗೆ ಕಾಲು ನಡಿಗೆಯಿಂದಲೇ ಹೊರಟುಬಿಟ್ಟರು.
- ಬಸವರಾಜ ಹುಲಗಣ್ಣಿ, ಮುದ್ದೇಬಿಹಾಳ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮವು ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮವಾಗಿದೆ. ಅಮರ ಶಿಲ್ಪಿ ಜಕಣಾಚಾರಿಯವರಿಂದಲೇ ನಿರ್ಮಾಣವಾದದ್ದೆಂದು ಇಲ್ಲಿನವರು ಹೆಮ್ಮೆಯಿಂದ ಹೇಳುವ 120 ಕಂಬಗಳಿಂದ ನಿರ್ಮಿತವಾದ ಬಸವಣ್ಣನ ದೇವಸ್ಥಾನವಿದೆ. ಅದರಿಂದಲೇ ಕುಂಟೋಜಿಗೆ ಪ್ರಸಿದ್ಧಿ ಬಂದಿದೆ. ಜಗದೊಡೆಯ ಮಹಾಶಿವನ ಅಪ್ಪಣೆಯಂತೆ ಭೂಮಂಡಲದ ಭಕ್ತರ ಉದ್ಧಾರಕ್ಕಾಗಿ ಅವತಾರವೆತ್ತಲು ಕುಂಟೋಜಿಗೆ ಬಂದ ಕೈಲಾಸದ ನಂದಿಯು ಇಲ್ಲಿ ಕಪ್ಪು ಕಲ್ಲಿನ ಸುಂದರ ಬಸವಣ್ಣನಾಗಿ ನೆಲೆ ನಿಂತಿದ್ದಾನೆ.
ಎಂಟುನೂರು ವರ್ಷಗಳ ಹಿಂದೆ ಕಲ್ಯಾಣದ ಬಿಜ್ಜಳ ರಾಜನ ಮಂತ್ರಿಯಾಗಿದ್ದ ಅಣ್ಣ ಬಸವಣ್ಣನವರ ಸಾಮಾಜಿಕ ಕ್ರಾಂತಿಗಳಿಂದ ಕೆರಳಿದ ಕೆಲವು ಜನರು ಕುತಂತ್ರ ನಡೆಸಿ ಶರಣರ ಮೇಲೆ ಹಲ್ಲೆಗಳನ್ನು ಮಾಡಿದರು. ಶರಣರ ಹತ್ಯೆಯನ್ನೂ ನಡೆಸಿದರು. ಆಗ ಬಸವಣ್ಣನವರು ಅದರಿಂದ ನೊಂದು ’ಕಲ್ಯಾಣವೆಂಬುದು ಕಟುಕರ ಗಲ್ಲಿ ಆಗುತ್ತದೆ’ ಎಂದು ಶಾಪ ಕೊಟ್ಟರು. ಅಷ್ಟೇ ಅಲ್ಲ. ಕಲ್ಯಾಣವನ್ನೇ ಬಿಟ್ಟು ಕೂಡಲಸಂಗಮಕ್ಕೆ ಶರಣರ ದಂಡಿನೊಂದಿಗೆ ಕಾಲು ನಡಿಗೆಯಿಂದಲೇ ಹೊರಟುಬಿಟ್ಟರು. ಹೀಗೆ ಹೊರಟ ಅಣ್ಣ ಬಸವಣ್ಣನವರು ದಾರಿಯಲ್ಲಿ ಬರುವ ಕುಂಟೋಜಿ ಗ್ರಾಮದ ಹೊರವಲಯದಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು. ಮರುದಿನ ಇಲ್ಲಿಯೇ ಇಷ್ಟಲಿಂಗದ ಪೂಜೆಯನ್ನು ಮಾಡಿಕೊಂಡು ಕೂಡಲ ಸಂಗಮಕ್ಕೆ ತೆರಳಿದರು. ಸಾಕ್ಷಾತ್ ಬಸವಣ್ಣನೇ ತಮ್ಮ ಊರಿಗೆ ಬಂದು ಹೋಗಿದ್ದರ ಸವಿ ನೆನಪಿಗಾಗಿ ಒಂದು ಬೃಹದಾಕಾರದ ನಂದಿ ವಿಗ್ರಹವನ್ನು ನಿರ್ಮಿಸಿ ಶ್ರೀ ಸಂಗಮೇಶ್ವರ ದೇವಸ್ಥಾನದ ಮುಂದೆ ಪ್ರತಿಷ್ಠಾಪಿಸಿದರು ಎಂದು ಒಂದು ಕಥೆ ಹೇಳುತ್ತದೆ.

ಎಂಟು ನೂರು ವರ್ಷಗಳ ಹಿಂದೆ ಊರ ಹೊರವಲಯದಲ್ಲಿದ್ದ ಶ್ರೀ ಸಂಗಮೇಶ್ವರನ ದೇವಸ್ಥಾನದ ಸುತ್ತಮುತ್ತಲೂ ಅಪಾರ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದಿದ್ದವು. ಹೀಗಾಗಿ ಪ್ರತಿದಿನ ಬೆಳಿಗ್ಗೆ ಈ ದೇವಾಲಯದ ಪೂಜಾರಿಗಳು ಬಂದು ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಹೋದ ನಂತರ ಇಲ್ಲಿಗೆ ಯಾರೂ ಬರುತ್ತಿರಲಿಲ್ಲವಂತೆ. ಆದರೆ ಪ್ರತಿನಿತ್ಯ ಇಲ್ಲಿನ ದನಗಾಹಿ ಹುಡುಗರು ತಮ್ಮ ದನಗಳನ್ನು ಮೇಯಿಸಲು ಬರುತ್ತಿದ್ದರು. ಹೀಗೆ ಬಂದಾಗ ಒಂದು ದಿನ ಇದ್ದಕ್ಕಿದ್ದಂತೆ ಮೋಡ ಕವಿದು ಆಲಿಕಲ್ಲುಗಳನ್ನು ಒಳಗೊಂಡ ಕುಂಭದ್ರೋಣ ಮಳೆ ಸುರಿಯಿತು. ಕತ್ತಲಾಗುವವರೆಗೆ ನಿಂತ ಹುಡುಗರು ತಮ್ಮ ದನಕರುಗಳನ್ನು ಹೊಡೆದುಕೊಂಡು ಮನೆಗೆ ಹೋದರು. ಮರುದಿನ ಮುಂಜಾನೆ ಅದೇ ದೇವಾಲಯದ ಹತ್ತಿರ ಬಂದಾಗ ಹಿಂದಿನ ದಿನ ಆದ ಮಳೆಯಿಂದ ಅಲ್ಲಿ ಒಂದು ಕಡೆ ನೀರು ನಿಂತಿತ್ತು. ಆ ನೀರಿನಲ್ಲಿ ಆಟವಾಡುತ್ತಿದ್ದ ದನಗಾಹಿ ಮಕ್ಕಳಿಗೆ ವಿಚಿತ್ರ ದೃಶ್ಯ ಕಂಡಿತು. ತಕ್ಷಣ ಮಕ್ಕಳು ಅದು ಏನೆಂದು ನೋಡುವ ಕುತೂಹಲದಿಂದ ಆ ತಗ್ಗಿನಲ್ಲಿದ್ದ ನೀರನ್ನು ಖಾಲಿ ಮಾಡತೊಡಗಿದರು. ಆಗ ನೆಲದಲ್ಲಿ ನಂದಿಯ ಎರಡು ಕೊಂಬುಗಳು ಹೊರಗೆ ಕಾಣತೊಡಗಿದವು. ಇದನ್ನು ಕಂಡು ಆತುರದಿಂದ ಊರಿಗೆ ಓಡುತ್ತಾ ಬಂದ ಮಕ್ಕಳು ಊರ ಜನರಿಗೆ ತಾವು ಕಂಡ ದೃಶ್ಯವನ್ನು ಹೇಳಿದರು. ಊರ ಜನರೆಲ್ಲ ಸಂಗಮೇಶ್ವರ ದೇವಸ್ಥಾನಕ್ಕೆ ದೌಡಾಯಿಸಿ ಬಂದು ಅಲ್ಲಿದ್ದ ಡಬಗೊಳ್ಳಿನ ಮಧ್ಯದಲ್ಲಿದ್ದ ತಗ್ಗಿನಲ್ಲಿ ಇಳಿದು ಉತ್ಖನನ ಮಾಡಿದಾಗ ಭೂಮಿಯಲ್ಲಿ ಮಲಗಿಕೊಂಡಿದ್ದ ನಂದಿಯ ಮೂರ್ತಿ ಕಾಣಿಸಿತು. ಎಲ್ಲರೂ ಕುಣಿದು ಕುಪ್ಪಳಿಸಿ ಹರ್ಷೋದ್ಗಾರ ಮಾಡಿದರು. ನಂತರ ಎಲ್ಲರೂ ಸೇರಿ ಜಂಗಮ ಮಠಾಧೀಶರನ್ನು ಕರೆಸಿ ಶಾಸ್ತ್ರೋಕ್ತವಾಗಿ ಸಂಗಮೇಶ್ವರ ದೇವಸ್ಥಾನದ ಮುಂದೆ ಬೃಹದಾಕಾರದ ಕಟ್ಟೆಯನ್ನು ನಿರ್ಮಿಸಿ ಅದರ ಮೇಲೆ ನಂದಿಯನ್ನು ಪ್ರತಿಷ್ಠಾಪಿಸಿ ಪೂಜಿಸತೊಡಗಿದರು. ಹೀಗೆ ಈ ಬಸವಣ್ಣನ ಬಗ್ಗೆ ಎರಡು ಪೌರಾಣಿಕ ಕಥೆಗಳು ಜನಮಾನಸದಿಂದ ಕೇಳಿಬರುತ್ತಿವೆ.
ಸಂಗಮನಾಥನ ದರ್ಶನ ಮುಗಿಸಿಕೊಂಡು ಬಸವಣ್ಣನ ಗುಡಿಯನ್ನು ಕಿರಿದಾದ ಬಾಗಿಲಿಗೆ ನಮಸ್ಕರಿಸಿ ಬಗ್ಗಿಕೊಂಡೇ ಒಳಗೆ ಹೋಗಬೇಕು. ಒಳಗೆ ಹೋಗಿ ತಲೆ ಎತ್ತಿ ನಿಂತು, ಎದುರಿಗೆ ಕಾಣುವ ಈ ಬಸವಣ್ಣನ ಮೂರ್ತಿಯನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಅಲ್ಲಿ ತಮಗೇ ಅರಿವಿಲ್ಲದೆ ಭಕ್ತಿಯಿಂದ ನಮಸ್ಕರಿಸಿ ಶಿರಬಾಗುತ್ತಾರೆ. ಬಸವಾ ಬಸವಾ ಎನ್ನುತ್ತಾ ನಮಸ್ಕರಿಸಿ ಹೊರಗೆ ಬರಬೇಕು. ದೇವಸ್ಥಾನದಲ್ಲಿ ನಿರ್ಮಿಸಿರುವ ಕಟಾಂಜನದ ಒಳಬಾಜು ಚಿತ್ರ ವಿಚಿತ್ರ ಕರಕುಶಲ ಕಲೆಯಿಂದ ಕೆತ್ತಿದ ಎಂಟು ಕಂಬಗಳಿದ್ದು ಅದರಲ್ಲಿ ಒಂದು ಕಂಬವು ಬಹಳ ವಿಶೇಷವಾಗಿದೆ. ಚಚ್ಚೌಕಾಕಾರದ ಕಂಬದ ಮಧ್ಯ ಭಾಗದಲ್ಲಿ ಕುಂಭವನು ಕೆತ್ತಿ ಅದಕ್ಕೆ ಆಭರಣಗಳನ್ನು ಹಾಕಿ ಕುಂಭದ ಮಧ್ಯದಲ್ಲಿ ಒಂದು ರಂಧ್ರವನ್ನು ಮಾಡಿದ್ದಾರೆ. ಕಂಬದ ಎಂಟೂ ಮೂಲೆಗೂ ಒಂದೊಂದು ಸಣ್ಣ ಸಣ್ಣ ರಂಧ್ರಳನ್ನು ಬಿಟ್ಟಿದ್ದಾರೆ. ಇದರ ಒಗಟನ್ನು ಯಾರೂ ಬಿಡಿಸಿಲ್ಲ. ಊರಲ್ಲಿ ಯಾರಿಗಾದರೂ ಉಸಿರು ಹಿಡಿದುಕೊಂಡು ಸ್ವಾಶಕೋಶದ ಸಮಸ್ಯೆಗಳೇನಾದರೂ ಕಂಡು ಬಂದಲ್ಲಿ ತಲೆ ಸ್ನಾನ ಮಾಡಿ, ಮಾತನಾಡದೆ ಭಕ್ತಿಯಂದ ಗುಡಿಗೆ ಬಂದು ಸಂಗಮೇಶ್ವರನಿಗೆ ಮತ್ತು ಬಸವಣ್ಣನಿಗೆ ನಮಸ್ಕರಿಸಿ ಈ ಕಂಬಕ್ಕೆ ಪ್ರದಕ್ಷಿಣೆ ಹಾಕಿ ಯಾವ ಭಾಗದಲ್ಲಿ ನೋವಿದೆಯೋ ಆ ಭಾಗವನ್ನು ಕಂಬಕ್ಕೆ ಸ್ಪರ್ಶಿಸಿದರೆ ನೋವು ಮಾಯವಾಗುತ್ತದೆ. ಇಲ್ಲಿಯೇ ಮದುವೆ ಮಾಡುವುದು, ಸುರುಗಿ ಸುತ್ತುವುದು, ಜವಳ ತೆಗೆಸುವುದು ಮುಂತಾದ ಕಾರ್ಯಗಳನ್ನು ಮಾಡುತ್ತಾರೆ.

ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ (ಕಡಿ ಸ್ವಾಮಾರ) ದಿಂದ ಐದು ದಿನಗಳವರೆಗೆ ಜಾತ್ರೆ ನಡೆಯುತ್ತದೆ. ಆದರೆ ಜಕಣಾಚಾರಿಯಿಂದ ನಿರ್ಮಿಸಲಾದ ಈ ದೇವಸ್ಥಾನಕ್ಕೆ ಇದುರೆಗೂ ತೇರು ಎಳೆಯುವ ಸಂಪ್ರದಾಯ ಇರಲಿಲ್ಲ. ಬಸವಣ್ಣನ ಭಕ್ತರೆಲ್ಲರೂ ಸೇರಿಕೊಂಡು ಈ ವರ್ಷದಿಂದ ರಥ (ತೇರು) ಎಳೆಯುವ ಸಂಪ್ರದಾಯವನ್ನು ಆರಂಭಿಸಬೇಕು ಎಂದು ತೀರ್ಮಾನಿಸಿ ಸಾಗುವಾನೀ ಮರದ ತೇರನ್ನು ನಿರ್ಮಿಸುತ್ತಿದ್ದಾರೆ. ಈ ತೇರು ಎಳೆಯಲು ಸೂಕ್ತವಾದ ಜಾಗವನ್ನು ಕೂಡಾ ಖರೀದಿ ಮಾಡುತ್ತಿದ್ದಾರೆ. ತೇರಿನ ಮನೆಯನ್ನು ನಿರ್ಮಿಸುತ್ತಿದ್ದಾರೆ.ಬೆಳ್ಳಿ ಸಂಗಮೇಶ್ವರ ಮತ್ತು ಬಸವಣ್ಣ ಮುಖವಾಡವನ್ನು ತಯಾರಿಸುತ್ತಿದ್ದಾರೆ. ಕುಂಟೋಜಿ ದೈವ ಮಂಡಳಿಯ ಈ ಇಚ್ಛೆಗೆ ಪೂರಕವಾಗಿ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ವಿಜಯಪುರ, ಮುದ್ದೇಬಿಹಾಳ, ದಾವಣೆಗೆರೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಬಸವಣ್ಣನ ಭಕ್ತರು ತಮ್ಮ ಪಾಲಿನ ದೇಣಿಗೆಯನ್ನು ನೀಡುತ್ತಿದ್ದಾರೆ. ಈ ದೇವಾಲಯಕ್ಕೆ ಜೀವನದಲ್ಲಿ ಒಂದೆರಡು ಬಾರಿಯದರೂ ದರ್ಶನ ಮಾಡಿಕೊಂಡು ಬಂದರೆ ಜೀವನ ಪಾವನವಾಗುವದಂತೂ ಶತಸಿದ್ಧ.
ಈ ದೇವಾಲಯದಲ್ಲಿರುವ 120 ಕಂಬಗಳಲ್ಲಿ ಒಂದು ಕಂಬ ಇದ್ದಂತೆ ಇನ್ನೊಂದು ಕಂಬವಿಲ್ಲ. ನೋಡಿದರೆ ಎಲ್ಲವೂ ಒಂದೇ ಕಂಬದಂತೆ ಕಂಡರೂ ಚಿತ್ರದ ಕೆತ್ತನೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮತ್ತು ಗುಡಿಯ ಹಿಂದೆ ಇರುವ ಮಜ್ಜನ ಬಾವಿಯಲ್ಲಿ ಎರಡು ಕನ್ನಡ ಶಿಲಾ ಶಾಸನಗಳದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದವರು ಈ ಶಾಸನಗಳನ್ನು ಪ್ರಕಟಪಡಿಸಿದ್ದಾರೆ. ಅದರ ಪ್ರಕಾರ ಕಲ್ಯಾಣ ಚಾಲುಕ್ಯರು ಈ ದೇವಸ್ಥನಕೆಕ ಭೂಮಿ ಉಂಬಳಿ ಮತ್ತು ಕಪ್ಪ ಕಾಣಿಕೆ ನೀಡಿದ್ದರ ಉಲ್ಲೇಖವಿದೆ. ಈ ಮಜ್ಜನ ಬಾವಿಯ ನೀರಿನಿಂದ ಸಂಗಮನಾಥನ ಹಾಗೂ ಬಸವಣ್ಣನ ಎರಡೂ ಹೊತ್ತು ಪೂಜೆ ಮಾಡುತ್ತಾರೆ. ಈ ಮಜ್ಜನ ಬಾವಿಯ ಮೇಲೆ ನೀಲಾಂಬಿಕೆಯ ದೇವಸ್ಥಾನವಿದೆ. ಇಲ್ಲಿ ಈ ದೇವಸ್ಥಾನವಿದ್ದುದರಿಂದ ಯಾರೂ ಈ ಬಾವಿಯೊಳಗೆ ಇಳಿಯುವುದಿಲ್ಲ. ಗುಡಿಯ ಪೂಜಾರಿಗಳು ಮಾತ್ರ ಇಳಿದು ಇಲ್ಲಿನ ನೀರಿನ್ನು ಪೂಜೆಗೆಂದು ತರುತ್ತಾರೆ.