ಕುರುಕ್ಷೇತ್ರ ಇದು ರಣಕ್ಷೇತ್ರ ಜತೆಗೆ ಗೀತೋಪದೇಶದ ಕ್ಷೇತ್ರವೂ ಹೌದು
ಕುರುಕ್ಷೇತ್ರ ಜಿಲ್ಲೆಯ ಜ್ಯೋತಿಸಾರ ಎಂಬ ಪುಣ್ಯಕ್ಷೇತ್ರದಲ್ಲಿರುವ ವಿಶಾಲ ಆಲದ ಮರದ ಬಳಿ, ಶ್ರೀ ಕೃಷ್ಣನು ಗೀತೋಪದೇಶ ಮಾಡಿದನೆಂದು ಶ್ರೀ ಆದಿ ಶಂಕರಾಚಾರ್ಯರು ಜಗತ್ತಿಗೆ ತಿಳಿಸಿಕೊಟ್ಟರು. ಸಹಸ್ರ ವರ್ಷಗಳ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಈ ಸ್ಥಾನವನ್ನು ತದನಂತರ ಮಗಧ ದೊರೆಗಳು ಅಭಿವೃದ್ಧಿಗೊಳಿಸಿದರೆಂದು ಉಲ್ಲೇಖವಿದೆ.
- ಡಾ. ಕಿರಣ ಅಂಕ್ಲೇಕರ, ಪುಣೆ
ಭಗವಾನ್ ಶ್ರೀ ಕೃಷ್ಣ, ಮಹಾಭಾರತ ಯುದ್ಧ ಪ್ರಾರಂಭವಾಗುವಾಗ ಮೊದಲು ಅರ್ಜುನನಿಗೆ, ಕುರುಕ್ಷೇತ್ರದ ರಣರಂಗದಲ್ಲಿ ಗೀತೋಪದೇಶ ಮಾಡಿದ್ದು ನಮಗೆಲ್ಲ ಗೊತ್ತು. ಭಗವದ್ಗೀತೆಯ ಮೊದಲ ಶ್ಲೋಕ ಪ್ರಾರಂಭವಾಗುವುದೇ, ʻ ಧರ್ಮ ಕ್ಷೇತ್ರೆ, ಕುರುಕ್ಷೇತ್ರೆ ಉಲ್ಲೇಖದಿಂದ. ಅದಾದ ಸುಮಾರು ಐದು ಸಾವಿರ ವರ್ಷಗಳ ನಂತರ ಆ ಸ್ಥಳ ಎಲ್ಲಿ, ಹೇಗಿರಬಹುದೆಂಬ ಕುತೂಹಲ ನನ್ನಲ್ಲಿತ್ತು. ಕಳೆದ ವಾರ ಅನಿರೀಕ್ಷಿತವಾಗಿ ಆ ಪುಣ್ಯ ಸ್ಥಳದ ದರ್ಶನವಾಗಿದ್ದು ನನ್ನ ಅದೃಷ್ಟ.
ಈ ಸ್ಥಳ ಕುರುಕ್ಷೇತ್ರ ನಗರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ. ಕುರುಕ್ಷೇತ್ರವು ಚಂಡಿಗಡದಿಂದ 100 ಕಿಲೋಮೀಟರ್ ದೂರದಲ್ಲಿದೆ.

ಆಗಿನ ಕುರುಕ್ಷೇತ್ರ ಅದೇ ಹೆಸರಲ್ಲಿ ಇಂದಿನ ಹರಿಯಾಣ ರಾಜ್ಯದಲ್ಲಿದೆ. ಈಗ ಜಿಲ್ಲಾ ಕೇಂದ್ರವಾಗಿರುವ ಕುರುಕ್ಷೇತ್ರ, ಅಂದು ಸುಮಾರು 400 ಕಿಲೋಮೀಟರ್ ವಿಸ್ತಾರವಾಗಿತ್ತು. ಅಂದರೆ ಇಂದಿನ ಕುರುಕ್ಷೇತ್ರ ಜಿಲ್ಲೆ ಜತೆಗೆ ಇನ್ನೂ 3-4 ಜಿಲ್ಲೆಗಳನ್ನು ಒಳಗೊಂಡಷ್ಟು. ಅಷ್ಟೊಂದು ವಿಶಾಲ, ವಿಸ್ತಾರದ ಪ್ರದೇಶ ಕೇವಲ ರಣರಂಗವಾಗಿತ್ತು ಎಂದರೆ ಅಂದು ನಡೆದ ಯುದ್ಧ ಮತ್ತಿನ್ನೂ ಅದೆಷ್ಟು ಭಯಂಕರ, ಭೀಕರ ಆಗಿರಬಹುದೆಂದು ಊಹಿಸಿ.
ಕುರುಕ್ಷೇತ್ರ ಜಿಲ್ಲೆಯ ಜ್ಯೋತಿಸಾರ ಎಂಬ ಪುಣ್ಯಕ್ಷೇತ್ರದಲ್ಲಿರುವ ವಿಶಾಲ ಆಲದ ಮರದ ಬಳಿ, ಶ್ರೀ ಕೃಷ್ಣನು ಗೀತೋಪದೇಶ ಮಾಡಿದನೆಂದು ಶ್ರೀ ಆದಿ ಶಂಕರಾಚಾರ್ಯರು ಜಗತ್ತಿಗೆ ತಿಳಿಸಿಕೊಟ್ಟರು.
ಸಹಸ್ರ ವರ್ಷಗಳ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಈ ಸ್ಥಾನವನ್ನು ತದನಂತರ ಮಗಧ ದೊರೆಗಳು ಅಭಿವೃದ್ಧಿಗೊಳಿಸಿದರೆಂದು ಉಲ್ಲೇಖವಿದೆ. ನಂತರದ ದಿನಗಳಲ್ಲಿ ರಾಜ್ಯ ಸರಕಾರ ಈ ಕ್ಷೇತ್ರದ ಅಭಿವೃದ್ಧಿಗಾಗಿ ಮಂಡಳಿ ರಚಿಸಿ, ಪ್ರವಾಸಿಗರಿಗೆ ಅನುಕೂಲಕರವಾಗುವ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ.
ಕಂಚಿ ಶ್ರೀ ಕಾಮಕೋಟಿ ಸ್ವಾಮೀಜಿಯವರು ಇಲ್ಲಿ ಸುಂದರ ಗೀತೋಪದೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಾರೆ. ಇದು ಗೀತೋಪದೇಶ ಸ್ಥಾನವಾಗಿದ್ದುದರಿಂದ, ಅಲ್ಲೇ ಸಮೀಪದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ತನ್ನ ವಿರಾಟರೂಪ ದರ್ಶನ ನೀಡಿರುವ ಸಾಧ್ಯತೆ ಇದ್ದುದರಿಂದ ಅಲ್ಲಿ 40 ಅಡಿ ಎತ್ತರದ ಅಷ್ಟಧಾತುವಿನಿಂದ ನಿರ್ಮಿತವಾದ ಅತ್ಯಂತ ಸುಂದರ ವಿಗ್ರಹವಿದೆ. ವಿಶೇಷ ದಿನಗಳಲ್ಲಿ ಇಲ್ಲಿ ಲೇಸರ್ ಬೆಳಕಿನಿಂದ ಗೀತಾ ಪ್ರದರ್ಶನವಾಗುತ್ತದೆ ಎಂದು ಕೇಳಿ ತಿಳಿದೆ.
ಇನ್ನೊಂದು ವಿಶೇಷವೆಂದರೆ, ಇಲ್ಲಿ ಇರುವ ಇನ್ನೊಂದು ಆಲದ ಮರದ ಮದ್ಯದಿಂದ ಸ್ವಯಂಭು ಶಿವಲಿಂಗ ಉದ್ಭವಗೊಂಡು, ಆ ಆಲದ ಮರ ಎರಡು ಟಿಸಿಲಾಗಿ ಒಡೆದಿದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತಿದೆ.
ಸದ್ಯ, ಈ ಕ್ಷೇತ್ರದ ಅಭಿವೃದ್ಧಿ ಕೆಲಸ ಸಾಗುತ್ತಿದ್ದು, ಸ್ಥಳ ಮಹಾತ್ಮೆ ಸರ್ವ ಸನಾತನಿಗಳಿಗೂ ತಲುಪಿಸುವ ಅವಶ್ಯಕತೆ ಇದೆ.