ಸ್ವರ್ಣಧ್ವಜಸ್ತಂಭದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇಗುಲ
ಈ ದೇಗುಲವು ಕಾರಣಿಕ ಕ್ಷೇತ್ರವಾಗಿದ್ದು, ಮುಖ್ಯವಾಗಿ ಕಂಕಣ ಭಾಗ್ಯ ಮತ್ತು ಸಂತಾನ ಭಾಗ್ಯವನ್ನು ತಾಯಿ ಶ್ರೀ ದುರ್ಗಾಪರಮೇಶ್ವರಿ ಕರುಣಿಸುತ್ತಾಳೆ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿದೆ. ಇಲ್ಲಿನ ವಿಶೇಷ ಪೂಜೆಗಳೆಂದರೆ ಸ್ವಯಂವರ ಪುಷ್ಪಾಂಜಲಿ, ಸೀರೆ ಸಮರ್ಪಣೆ, ತೊಟ್ಟಿಲು ಸೇವೆ, ತುಲಾಭಾರ ಸೇವೆ ಹಾಗೂ ಉದಯಾಸ್ತಮಾನ ಪೂಜೆಗಳು.
- ಡಾ. ವಾಣಿಶ್ರೀ ಕಾಸರಗೋಡು
ಸನಾತನ ವೈದಿಕ ಧರ್ಮದಲ್ಲಿ ಕಷ್ಟ ಬರಲಿ, ಸುಖವೇ ಇರಲಿ ಎಲ್ಲದಕ್ಕೂ ದೇವರನ್ನು ನೆನೆದು ಆರಾಧಿಸುವುದು ವಾಡಿಕೆ. ತನಗೆ ಬಂದ ದುರಿತವನ್ನು ಪರಿಹರಿಸೆಂದು ಬೇಡುವುದು ಒಂದೆಡೆಯಾದರೆ, ತನಗಿತ್ತ ಸುಖ ಸಂಪತ್ತು ನಿನ್ನದಯ್ಯ ಎಂದು ಶರಣಾಗುವುದು ಮತ್ತೊಂದೆಡೆ. ಆಸ್ತಿಕ ಮಹಾಶಯರನ್ನು ತನ್ನತ್ತ ಸೆಳೆದು ಬೇಡಿದ್ದನ್ನು ಕರುಣಿಸುವ ಕಾರಣಿಕ ಕ್ಷೇತ್ರಗಳು ಈ ದೇಶದ ಉದ್ದಗಲದಲ್ಲೂ ಸಾಕಷ್ಟು ಇವೆ. ಅಂಥ ವಿಶೇಷ ದೇಗುಲಗಳಲ್ಲೊಂದು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇಗುಲ ಇರುವುದು ಕಾಸರಗೋಡು ಜಿಲ್ಲೆಯ ಬೋವಿಕಾನಂ ಸಮೀಪದ ಮುಳಿಯಾರ್ ಗ್ರಾಮದಲ್ಲಿ. ಬ್ರಾಹ್ಮಣ ವಿದ್ವಾಂಸರೊಬ್ಬರು ದೇವಿಯ ಪ್ರೇರಣೆಯಿಂದಾಗಿ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಶ್ರೀ ಚಕ್ರದ ದರ್ಪಣ ಬಿಂಬದ ರೂಪದಲ್ಲಿ ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದರು ಎನ್ನುವ ಐತಿಹ್ಯವಿದೆ. ಇಲ್ಲಿಯೇ ಮಧುವಾಹಿನಿ ನದಿ ಪ್ರವಹಿಸುತ್ತಿದ್ದು, ಭಕ್ತರಿಗೆ ತೀರ್ಥಸ್ನಾನದಿಂದ ವಿಶೇಷ ಫಲಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಪೂರ್ವಾಹ್ನದಲ್ಲಿ ದೇವಿಯ ವಿಗ್ರಹವನ್ನು ಶಾಂತದುರ್ಗೆಯಾಗಿ ಪೂಜಿಸಲಾಗುತ್ತದೆ. ಅಪರಾಹ್ನ ಅದೇ ದೇವಿಯ ವಿಗ್ರಹವನ್ನು ಸ್ವಯಂವರ ಪಾರ್ವತಿಯಾಗಿ ಆರಾಧಿಸಿದರೆ, ರಾತ್ರಿಯಲ್ಲಿ ದೇವಿಯನ್ನು ವನದುರ್ಗೆಯಾಗಿ ಪೂಜಿಸುತ್ತಾರೆ. ಮಂಗಳವಾರ ಮತ್ತು ಶುಕ್ರವಾರದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದ್ದರಿಂದ ಆ ದಿನಗಳಲ್ಲಿ ಕ್ಷೇತ್ರವು ಸಹಸ್ರಾರು ಭಕ್ತರಿಂದ ತುಂಬಿರುತ್ತದೆ. ವಾರ್ಷಿಕವಾಗಿ ನವರಾತ್ರಿ, ಕಾರ್ತಿಕ ಹುಣ್ಣಿಮೆ ಹಾಗೂ ವಸಂತೋತ್ಸವಗಳು ವಿಶೇಷ ದಿನಗಳಾಗಿವೆ. ದೇವಿಗೆ ಯಕ್ಷಗಾನ ಬಯಲಾಟ ಸೇವೆಯು ಇಲ್ಲಿ ವಿಶೇಷವಾಗಿದ್ದು ಶ್ರೀ ಕ್ಷೇತ್ರದ ಹೆಸರಿನಲ್ಲಿ ಯಕ್ಷಗಾನ ಬಯಲಾಟ ಮೇಳವೂ ಇದೆ. ನವರಾತ್ರಿಯ ಸಮಯದಲ್ಲಿ ಯಕ್ಷಗಾನ, ಸಂಗೀತ, ನೃತ್ಯ ಸೇವೆಗಳು ಜರುಗುತ್ತವೆ. ಪ್ರತಿವರ್ಷ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ವಾರ್ಷಿಕ ಉತ್ಸವವು ಏಳು ದಿನಗಳ ಕಾಲ ಇಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.
ಈ ದೇಗುಲವು ಕಾರಣಿಕ ಕ್ಷೇತ್ರವಾಗಿದ್ದು, ಮುಖ್ಯವಾಗಿ ಕಂಕಣ ಭಾಗ್ಯ ಮತ್ತು ಸಂತಾನ ಭಾಗ್ಯವನ್ನು ತಾಯಿ ಶ್ರೀ ದುರ್ಗಾಪರಮೇಶ್ವರಿ ಕರುಣಿಸುತ್ತಾಳೆ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿದೆ. ಇಲ್ಲಿನ ವಿಶೇಷ ಪೂಜೆಗಳೆಂದರೆ ಸ್ವಯಂವರ ಪುಷ್ಪಾಂಜಲಿ, ಸೀರೆ ಸಮರ್ಪಣೆ, ತೊಟ್ಟಿಲು ಸೇವೆ, ತುಲಾಭಾರ ಸೇವೆ ಹಾಗೂ ಉದಯಾಸ್ತಮಾನ ಪೂಜೆಗಳು. ತಮ್ಮ ಇಷ್ಟಾರ್ಥ ಈಡೇರಿದ ಮೇಲೆ ಭಕ್ತಾದಿಗಳು ಇಲ್ಲಿಗೆ ಆಗಮಿಸಿ, ಹರಕೆ ಸಮರ್ಪಣೆ ಮಾಡುತ್ತಾರೆ. ಮಕ್ಕಳಿಗೆ ಅನ್ನಪ್ರಾಶನ ಸಂಸ್ಕಾರವನ್ನು ಇಲ್ಲಿ ಮಾಡಿಸುವುದು ವಿಶೇಷವಾಗಿದೆ. ಗ್ರಹಚಾರ ಬಾಧೆಯಿರುವವರು ಇಲ್ಲಿಗೆ ಬಂದು ದುರ್ಗಾ ಪೂಜೆ ಮಾಡಿಸಿದರೆ ದೋಷ ಪರಿಹಾರ ಆಗುತ್ತದೆ ಎನ್ನುವ ಪ್ರತೀತಿ ಇದೆ.

ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇಗುಲವು ತಂಜಾವೂರು ಶೈಲಿಯ ರಾಜಗೋಪುರವನ್ನು ಹೊಂದಿದೆ. ಸ್ವರ್ಣಧ್ವಜಸ್ತಂಭವನ್ನು ಹೊಂದಿರುವ ಈ ಭಾಗದ ಪ್ರಪ್ರಥಮ ದೇವಸ್ಥಾನ ಎನ್ನುವ ಹಿರಿಮೆಯೂ ಇಲ್ಲಿಗಿದೆ. ದೇಗುಲದ ಬಲಭಾಗದಲ್ಲಿ ಅಮೃತ ಶಿಲೆಯಿಂದ ನಿರ್ಮಾಣಗೊಂಡ ಶ್ರೀ ಸತ್ಯನಾರಾಯಣ ಸ್ವಾಮಿಯ ಆಲಯವಿದೆ. ಇಲ್ಲಿ ಪ್ರತಿನಿತ್ಯವೂ ನಡೆಯುವ ಸತ್ಯನಾರಾಯಣ ಪೂಜೆಯು ವಿಶೇಷವಾಗಿದ್ದು, ದೇಶದೆಲ್ಲೆಡೆಯಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.
ಕೇರಳ ರಾಜ್ಯದ ಪ್ರಮುಖ ಪ್ರವಾಸಿ ಕ್ಷೇತ್ರವೂ ಆಗಿರುವ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇಗುಲವು ಕಾಸರಗೋಡಿನಿಂದ 15 ಕಿ.ಮೀ. ದೂರದಲ್ಲಿದೆ. ರೈಲು ಮಾರ್ಗದ ಮೂಲಕ ಆಗಮಿಸುವವರಿಗೆ ಕಾಸರಗೋಡು ರೈಲು ನಿಲ್ದಾಣದಿಂದ 16 ಕಿ.ಮೀ. ದೂರ ಪ್ರಯಾಣಿಸಿದರೆ ದೇವಸ್ಥಾನ ಸಿಗುತ್ತದೆ. ಮಲ್ಲ ಕ್ಷೇತ್ರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ 73 ಕಿ.ಮೀ.ನಷ್ಟು ದೂರದಲ್ಲಿ ದೇಗುಲವಿದೆ. ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಕಾಸರಗೋಡಿನಿಂದ ಬೆಳಿಗ್ಗೆ 5:40 ರಿಂದ ಸಂಜೆ 6:30 ರ ವರೆಗೆ ಬಸ್ ಸೌಕರ್ಯವಿದೆ. ಆಸ್ತಿಕ ಬಂಧುಗಳು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ತೀರ್ಥಕ್ಷೇತ್ರಗಳಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇಗುಲವೂ ಒಂದು ಎನ್ನಬಹುದು.