ಹುಂಡಿಯೇ ಇಲ್ಲದ ಗುಡಿ!
ವೇಣು ಗೋಪಾಲ ಸ್ವಾಮಿ ದೇವಾಲಯ ಇರೋದು ಮಂಡ್ಯ ಜಿಲ್ಲೆಯ ಹೊಸ ಕನ್ನಂಬಾಡಿ ಬಳಿ. ನಗರದ ಜಂಜಾಟ ಸಾಕೆನಿಸಿ ವೀಕೆಂಡ್ನ ಹಾಯಾಗಿ ಕಳೆದು ಬರುತ್ತೇನೆ ಎಂದರೆ ಈ ಸ್ಥಳ ನಿಮಗೆ ಒಳ್ಳೆಯ ಆಯ್ಕೆ. ಇಲ್ಲಿ ದೇವಾಲಯವನ್ನು ನೋಡುವುದರ ಜೊತೆಗೆ ಕಾವೇರಿ ಹಿನ್ನೀರಿನಲ್ಲಿ ಆಟ ಆಡಿ ಬರಬಹುದು.
-ಕಾವ್ಯಾ ಹೆಚ್
ಒಂದು ಕಡೆ ದೇವಾಲಯ, ಆ ದೇವಾಲಯದ ಎದುರು ನಿಂತು ನೋಡಿದರೆ ಕಣ್ಣು ಹಾಯಿಸುವಷ್ಟು ನೀರು. ಅದರಲ್ಲೂ ಸಂಜೆ ವೇಳೆ ಇಲ್ಲಿಗೆ ಹೋದರೆ ಸೂರ್ಯ ಆಗತಾನೇ ಡ್ಯೂಟಿ ಮುಗಿಸಲು ರೆಡಿ ಆಗಿ, ಆಗಸಕ್ಕೆ ಕೆಂಪು ಬಣ್ಣ ಬಳಿದು ಅಲ್ಲಿನ ಪರಿಸರವನ್ನು ಮತ್ತಷ್ಟು ಚೆಂದಗಾಣಿಸುತ್ತಾನೆ. ಅಲ್ಲಲ್ಲಿ ತೆಪ್ಪದ ರೈಡ್ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಜನ, ಸೂರ್ಯನೇ ಮನೆಗೆ ಹೊರಟ ಎಂದು ಗಡಿಬಿಡಿಯಲ್ಲಿ ಗೂಡಿನತ್ತ ಸಾಗುವ ಪಕ್ಷಿಗಳು.. ಹೀಗೆ ಒಂದಕ್ಕಿಂತ ಒಂದು ಅದ್ಭುತ ದೃಶ್ಯಗಳನ್ನು ನೀವು ನೋಡಬಹುದು. ಈ ದೃಶ್ಯ ಕಾಣಿಸೋದು ‘ವೇಣು ಗೋಪಾಲ ಸ್ವಾಮಿ’ ದೇವಾಲಯದಲ್ಲಿ.
ವೇಣು ಗೋಪಾಲ ಸ್ವಾಮಿ ದೇವಾಲಯ ಇರೋದು ಮಂಡ್ಯ ಜಿಲ್ಲೆಯ ಹೊಸ ಕನ್ನಂಬಾಡಿ ಬಳಿ. ನಗರದ ಜಂಜಾಟ ಸಾಕೆನಿಸಿ ವೀಕೆಂಡ್ನ ಹಾಯಾಗಿ ಕಳೆದು ಬರುತ್ತೇನೆ ಎಂದರೆ ಈ ಸ್ಥಳ ನಿಮಗೆ ಒಳ್ಳೆಯ ಆಯ್ಕೆ. ಇಲ್ಲಿ ದೇವಾಲಯವನ್ನು ನೋಡುವುದರ ಜೊತೆಗೆ ಕಾವೇರಿ ಹಿನ್ನೀರಿನಲ್ಲಿ ಆಟ ಆಡಿ ಬರಬಹುದು.

ದೇವಾಲಯದ ಇತಿಹಾಸ
1909ರಲ್ಲಿ ಕಾವೇರಿ ನದಿಗೆ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಮಾಡಲಾಯಿತು. ಈ ಅಣೆಕಟ್ಟು ನಿರ್ಮಾಣಕ್ಕೂ ಮೊದಲು ಈ ದೇವಾಲಯವು ಕನ್ನಂಬಾಡಿ ಗ್ರಾಮದಲ್ಲಿಯೇ ಇತ್ತು. ಸ್ಥಳೀಯರು ಹಾಗೂ ಇತರರು ದೇವಾಲಕ್ಕೆ ಬಂದು ದರ್ಶನ ಪಡೆಯುತ್ತಿದ್ದರು..
ಮುಳುಗಿದ ದೇವಾಲಯ
1909ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಕೆಆರ್ ಎಸ್ ಡ್ಯಾಂ ನಿರ್ಮಾಣ ಮಾಡಿದರು. ಈ ವೇಳೆ ಈ ದೇವಾಲಯ ನೀರಿನಲ್ಲಿ ಮುಳುಗಿ ಹೋಯಿತು. ಆ ಬಳಿಕ ಕಡು ಬೇಸಿಗೆ ಸಂದರ್ಭದಲ್ಲಿ ಮಾತ್ರ ದೇವಾಲಯವು ಕಾಣುತ್ತಿತ್ತು. ಹಲವು ದಶಕಗಳ ಕಾಲ ದೇವಾಲಯ ನೀರಿನ ಅಡಿಯಲ್ಲೇ ಇತ್ತು.
ದೇವಾಲಯದ ಮರು ನಿರ್ಮಾಣ
ಈ ದೇವಾಲಯವನ್ನು ಮತ್ತೆ ನಿರ್ಮಾಣ ಮಾಡಬೇಕು ಎಂದುಕೊಂಡವರು ಉದ್ಯಮಿ ಹರಿ ಖೋಡೆ. ‘ಖೋಡೆ ಪ್ರತಿಷ್ಠಾನ’ದ ಅಡಿಯಲ್ಲಿ ದೇವಾಲಯವನ್ನು ಸ್ಥಳಾಂತರ ಮಾಡಲಾಯಿತು. ಈಗ ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ದೇವಾಲಯ ನಿರ್ಮಾಣ ಆಗಿದೆ. ಮೂಲ ದೇವಾಲಯದಿಂದ ಒಂದು ಕಿ.ಮೀ ದೂರದಲ್ಲಿ ಈ ದೇವಾಲಯ ಸ್ಥಾಪನೆ ಮಾಡಲಾಗಿದೆ.
ಕಾಣಿಕೆ ಹಾಕುವಂತಿಲ್ಲ
ಸಾಮಾನ್ಯವಾಗಿ ದೇವಸ್ಥಾನಕ್ಕೆ ತೆರಳಿದರೆ ಅಲ್ಲಿ ಒಂದು ಕಾಣಿಕೆ ಹುಂಡಿ ಇದ್ದೇ ಇರುತ್ತದೆ. ಆದರೆ, ಈ ದೇವಾಲಯದಲ್ಲಿ ಕಾಣಿಕೆಯನ್ನು ಹಾಕುವಂತಿಲ್ಲ. ಈ ಕಾರಣಕ್ಕೆ ಇಲ್ಲಿ ಯಾವುದೇ ಹುಂಡಿಯನ್ನು ಇಡಲಾಗಿಲ್ಲ. ಇಷ್ಟೇ ಅಲ್ಲ, ಅಲ್ಲಿ ಪೂಜೆ ಮಾಡುವ ಅರ್ಚಕರಿಗೂ ದಕ್ಷಿಣೆ ಕಾಣಿಕೆ ರೂಪದಲ್ಲಿ ಆರತಿ ತಟ್ಟೆಗೆ ಹಣ ಹಾಕುವಂತಿಲ್ಲ.

ಬಸ್ ವ್ಯವಸ್ಥೆ ಇಲ್ಲ!
ಬೆಂಗಳೂರು ನಗರ ಭಾಗದಿಂದ ಈ ಸ್ಥಳ ಸುಮಾರು 150 ಕಿ.ಮೀ ದೂರದಲ್ಲಿ ಇದೆ. ಬೆಂಗಳೂರಿನಿಂದ ಇಲ್ಲಿಗೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ, ಸ್ವಂತ ವಾಹನದಲ್ಲಿ ಇಲ್ಲಿಗೆ ಪ್ರಯಾಣಿಸೋದು ಉತ್ತಮ. ಹಂಪಿಯ ಮಾದರಿಯ ಕಲ್ಲಿನ ರಥವನ್ನು ಇಲ್ಲೂ ಇಡಲಾಗಿದ್ದು, ಇದು ಆಕರ್ಷಣೆಯ ಕೇಂದ್ರ ಬಿಂದು..
ಇರಲಿ ಎಚ್ಚರ
ವೇಣುಗೋಪಾಲಸ್ವಾಮಿ ದೇವಾಲಯ ಮಾತ್ರವಲ್ಲದೆ, ಇಲ್ಲಿ ಕಾವೇರಿ ಹಿನ್ನೀರು ಕೂಡ ಇದೆ. ಹೀಗಾಗಿ, ನೀರಿನಲ್ಲಿ ಆಟ ಆಡಬಹುದು. ಆದರೆ, ಮಳೆಗಾಲದಲ್ಲಿ ಇಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಆ ಸಂದರ್ಭದಲ್ಲಿ ನೀರಿಗೆ ಇಳಿಯಲು ಸಾಧ್ಯವಾಗದೆಯೂ ಇರಬಹುದು.