ಕಾಂತಾರದ ಯಶಸ್ಸಿನ ಹಿಂದಿದೆಯಾ ಮೂಡಗಲ್ಲು ಗುಹಾಂತರ ದೇವಾಲಯ?
ʼಕಾಂತಾರʼ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ಕರಾವಳಿ ಸಂಸ್ಕೃತಿಯನ್ನೂ, ಭೂತಾರಾಧನೆಯನ್ನು ಜಗತ್ತಿಗೆ ತಿಳಿಸಿದ ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೇ ಕೆರಾಡಿಯವರು. ಕಳೆದ ವರ್ಷ ರಿಷಬ್ ಶೆಟ್ಟಿ, ʼಕೆಜಿಎಫ್ʼ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್.ಟಿ.ಆರ್ ಕುಟುಂಬ ಸಮೇತ ಮೂಡಗಲ್ಲು ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿದ್ದರು.
- ರಮೇಶ್ ಬಳ್ಳಮೂಲೆ
ದಟ್ಟ ಕಾಡಿನ ಮಧ್ಯೆ ಒಂದು ಗುಹೆ. ಅದರಲ್ಲಿನ ಮೊಣಕಾಲೆತ್ತರದ ನೀರಿನಲ್ಲಿ ಒಳ ಸಾಗಿದರೆ ಉದ್ಭವ ಶಿವಲಿಂಗದ ದರ್ಶನ. ಬೆಳಗ್ಗೆ, ಸಂಜೆ ಸೂರ್ಯನಿಂದಲೇ ಶಿವನಿಗೆ ಬೆಳಕಿನಾರತಿ...ಇದು ಯಾವುದೋ ಸಿನಿಮಾದ ದೃಶ್ಯವಲ್ಲ. ನಮ್ಮದೇ ರಾಜ್ಯದಲ್ಲಿರುವ ಅತೀ ಪುರಾತನ, ವಿಶಿಷ್ಟ ದೇವಸ್ಥಾನವೊಂದರ ಪರಿಚಯ. ಉಡುಪಿ ಜಿಲ್ಲೆಯ ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯ ಪ್ರಕೃತಿಯ ಮಧ್ಯೆಯೇ ನೆಲೆ ನಿಂತಿದ್ದು, ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಪ್ರಕೃತಿ ನಿರ್ಮಿತ ಕೆಂಪು ಕಲ್ಲಿನ ಗುಹೆಯೊಳಗಿರುವ ಈ ದೇಗುಲಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿ ಮೂಲ ಲಿಂಗವೂ ಇದೆ, ಉದ್ಭವ ಶಿವಲಿಂಗವೂ ಇದೆ. ಶಿವ ಇಲ್ಲಿ ತಪಸ್ಸು ಮಾಡುತ್ತಿದ್ದ ಎನ್ನುವ ನಂಬಿಕೆ ಸ್ಥಳೀಯರದ್ದು. ಕುಂದಾಪುರದಿಂದ ಕೊಲ್ಲೂರು ಮಾರ್ಗವಾಗಿ ಸುಮಾರು 34 ಕಿಮೀ. ಸಾಗಿದರೆ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇಗುಲ ಸಿಗುತ್ತದೆ. ಗುಹಾಂತರ ದೇವಾಲಯದ ಎದುರು ದೇವಳ ಪ್ರಕಾರ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪರಿವಾರ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದರೊಳಗೆ ಹೋಗಿ ಅಲ್ಲಿಂದ ಗುಹೆ ಪ್ರವೇಶಿಸಬೇಕು.

ಉದ್ಭವ ಲಿಂಗದ ದರ್ಶನವೇ ವಿಶೇಷ
ಪ್ರಕೃತಿ ನಿರ್ಮಿತ ಈ ಗುಹೆ ಸುಮಾರು 8 ಅಡಿ ಎತ್ತರವಿದೆ. ಗುಹೆಯ ಬಾಗಿಲಿನಿಂದ ಮೊಣಕಾಲೆತ್ತರ ನೀರಿನಲ್ಲಿ ಸುಮಾರು 30 ಅಡಿ ದೂರ ಸಾಗಿದರೆ ಉದ್ಭವ ಲಿಂಗದ ದರ್ಶನವಾಗುತ್ತದೆ. ಇಲ್ಲಿ ಯಾವುದೇ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಕತ್ತಲು ತುಂಬಿದ ಗುಹೆಯಲ್ಲಿ ದೇವರ ದೀಪದಲ್ಲಿ ಸಾಗುವುದು ಒಂದು ದೈವಿಕ ಅನುಭವವನ್ನು ನೀಡುತ್ತದೆ. ನೀರಿನಲ್ಲಿ ಸಾವಿರಾರು ಮೀನಿಗಳಿದ್ದು, ನಾವು ಸಾಗುವಾಗ ಅವು ನಮ್ಮನ್ನು ಸ್ಪರ್ಶಿಸಿ ದಿವ್ಯ ಅನುಭೂತಿ ನೀಡುತ್ತವೆ. ಕೇಶವನಾಥ ರೂಪದಲ್ಲಿರುವ ಶಿವನ ಹಿಂಭಾಗ ಗುಹೆ ಮುಂದುವರಿದಿದ್ದು, ಅಲ್ಲೆಲ್ಲ ಹಾವುಗಳು ವಾಸವಾಗಿವೆ ಎನ್ನಲಾಗುತ್ತಿದೆ. ಇನ್ನೊಂದು ವಿಶೇಷ ಎಂದರೆ ವರ್ಷದ ಎಲ್ಲ ದಿನವೂ ಈ ಗುಹೆಯಲ್ಲಿ ಮೊಣಕಾಲೆತ್ತರ ನೀರು ಇದ್ದೇ ಇರುತ್ತದೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಾದರೂ ಇದುವರೆಗೆ ಪೂಜಿಸುವ ಶಿವನ ಮೂರ್ತಿ ಮುಳುಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಗುಹೆಯೊಳಗಿದೆ ಕಾಶಿಗೆ ದಾರಿ
ವಿಶೇಷ ಎಂದರೆ ಈ ಗುಹೆ ಕಾಶಿಯನ್ನು ಸಂಪರ್ಕಿಸುತ್ತದೆ ಎನ್ನಲಾಗಿದೆ. ಶಿವ ಈ ಗುಹೆಯ ಮುಖಾಂತರವೇ ಕಾಶಿಗೆ ತೆರಳಿದ ಎನ್ನುವ ನಂಬಿಕೆ ಇದೆ. ಇಲ್ಲಿರುವ ಹಾವುಗಳು ಇದುವರೆಗೆ ಯಾವುದೇ ಭಕ್ತರಿಗೆ ಹಾನಿಯುಂಟು ಮಾಡಿಲ್ಲ. ದುರಂತದ ಸೂಚನೆ ಸಿಕ್ಕಿದರೆ ಮಾತ್ರ ನಾಗರಹಾವು ಕಾಣಿಸಿಕೊಂಡು ಎಚ್ಚರಿಕೆ ನೀಡುತ್ತದೆ ಎನ್ನುವ ನಂಬಿಕೆಯೂ ಮನೆ ಮಾಡಿದೆ. ಈ ನೀರಿನಲ್ಲಿರುವ ಅಸಂಖ್ಯಾತ ಮೀನುಗಳ ಜತೆಯಲ್ಲಿ ಬಂಗಾರ ಮೂಗುತಿಯ ಮೀನೂ ಇದೆಯಂತೆ. ಅದು ಎಳ್ಳು ಅಮಾವಾಸ್ಯೆಯಂದು ಮಾತ್ರ ಕಾಣಸಿಗುತ್ತದೆ ಎನ್ನಲಾಗಿದೆ. ಇಲ್ಲಿ ಪ್ರತಿದಿನ ಪೂಜೆ, ಸೋಮವಾರ, ಶಿವರಾತ್ರಿಯಂದು ವಿಶೇಷ ಪೂಜೆ ಮತ್ತು ಎಳ್ಳು ಅವಾಮಾಸ್ಯೆಯಂದು ಜಾತ್ರೆ ಜರಗುತ್ತದೆ.

ಪೌರಾಣಿಕ ಹಿನ್ನೆಲೆ
ಮೂಡಗಲ್ಲು ಗುಹಾಂತರ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಇಲ್ಲಿ ಸಾಕ್ಷಾತ್ ಶಿವನೇ ತಪಸ್ಸು ಮಾಡುತ್ತಿದ್ದ ಎನ್ನುವ ನಂಬಿಕೆ ಸ್ಥಳೀಯರದ್ದು. ಸ್ಕಂದ ಪುರಾಣದಲ್ಲಿ ಈ ಸ್ಥಳದ ಬಗ್ಗೆ ಉಲ್ಲೇಖವಿದೆ. ಬ್ರಹ್ಮಾಂಡ ಸೃಷ್ಟಿಯಾದ ಕಾಲ. ಬ್ರಹ್ಮ ಭೂಮಿ ಮೇಲೆ ಎಷ್ಟೇ ಜೀವ ಸೃಷ್ಟಿ ಮಾಡಿದರೂ ಅದು ಮುಂದುವರಿಯುತ್ತಿರಲಿಲ್ಲ. ಭೂಮಿಯಲ್ಲಿ ಪುರುಷ ಶಕ್ತಿ ಕಡಿಮೆಯಾದ ಕಾರಣ ಹೀಗಾಗುತ್ತಿದೆ ಎನ್ನುವ ವಿಚಾರ ತಿಳಿಯಿತು. ಶಿವ ಭೂಮಿ ಮೇಲೆ ನೆಲೆಯಾದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ದೇವತೆಗಳಿಗೆ ಮನವರಿಕೆಯಾಯ್ತು. ಹೀಗಾಗಿ ದೇವತೆಗಳು ಶಿವನಲ್ಲಿ ಭೂಮಿಗೆ ಹೋಗಿ ನೆಲೆಸುವಂತೆ ಪ್ರಾರ್ಥಿಸುತ್ತಾರೆ.
ಅದರಂತೆ ಶಿವ ಭೂಮಿಗೆ ಬಂದು ವಿಹರಿಸುತ್ತ ಮೂಡಗಲ್ಲಿಗೆ ಬರುತ್ತಾನೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಈ ಗುಹೆಯಲ್ಲಿ ತಪಸ್ಸಿಗೆ ಕೂರುತ್ತಾನೆ. ಇದಾದ ಬಳಿಕ ಭೂಮಿ ಮೇಲಿನ ಸಂತತಿ, ಬ್ರಹ್ಮ ಸೃಷ್ಟಿ ನಿರಾತಂಕವಾಗಿ ವೃದ್ಧಿಸತೊಡಗಿತು. ಕಲಿಯುಗ ಬಂದಾಗ ದೇವತೆಗಳಿಗೆ ಮತ್ತೆ ಚಿಂತೆ ಆರಂಭವಾಯ್ತು. ಮನುಷ್ಯರು ಮೂಲ ಲಿಂಗವನ್ನು ಮುಟ್ಟಿ ಅಪವಿತ್ರಗೊಳಿಸಬಹುದು ಎಂಬ ಆತಂಕ ಕಾಡತೊಡಗಿತು. ಹೀಗಾಗಿ ಮೂಲ ಲಿಂಗವನ್ನು ಕಲ್ಲಿನಿಂದ ಮರೆ ಮಾಡಿ ಮತ್ತೊಂದು ಲಿಂಗವನ್ನು ಸೃಷ್ಟಿ ಮಾಡಿದ್ದಾರೆ ಎನ್ನುತ್ತದೆ ಈ ಕಥೆ. ಹೀಗಾಗಿ ಈಗ ಮೂಲ ಲಿಂಗ ಮರೆಯಾಗಿದ್ದು, ಉದ್ಭವ ಲಿಂಗ ಕಾಣಸಿಗುತ್ತದೆ. ಭಕ್ತರು ಈ ಉದ್ಭವ ಲಿಂಗವನ್ನು ಮುಟ್ಟಿ ಪ್ರಾರ್ಥಿಸಿದರೆ ಮನಸ್ಸಿನ ಕೋರಿಕೆ ಎಲ್ಲ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಉದ್ಭವ ಲಿಂಗಕ್ಕೆ ನಾವು ಸಲ್ಲಿಸುವ ಪ್ರಾರ್ಥನೆ ಮೂಲ ಲಿಂಗಕ್ಕೆ ಸೇರುತ್ತದೆ ಎನ್ನುವ ಪ್ರತೀತಿಯೂ ಇದೆ.
ಮತ್ತೊಂದು ಕಥೆಯ ಪ್ರಕಾರ ಮುನಿಗಳೊಬ್ಬರು ಈ ಗುಹೆಯಲ್ಲಿ ಶಿವನ ಕುರಿತು ಕಠಿಣ ತಪಸ್ಸು ಮಾಡುತ್ತಾರೆ. ಶಿವನು ಕೇಶವನಾಥೇಶ್ವರ ರೂಪದಲ್ಲಿ ಪ್ರತ್ಯಕ್ಷನಾಗಿ ಬಳಿಕ ಈ ಗುಹೆಯ ಮೂಲಕವೇ ಕಾಶಿಗೆ ತೆರಳಿದ ಎನ್ನಲಾಗುತ್ತದೆ. ಈ ಗುಹೆಯೊಳಗೆ ನೀರಿನಲ್ಲೇ ನಾಗ ಪ್ರತಿಷ್ಠೆಯನ್ನೂ ಮಾಡಲಾಗಿದೆ.
ರಿಷಬ್ ಶೆಟ್ಟಿಯ ಊರು
ʼಕಾಂತಾರʼ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ಕರಾವಳಿ ಸಂಸ್ಕೃತಿಯನ್ನೂ, ಭೂತಾರಾಧನೆಯನ್ನು ಜಗತ್ತಿಗೆ ತಿಳಿಸಿದ ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೇ ಕೆರಾಡಿಯವರು. ಕಳೆದ ವರ್ಷ ರಿಷಬ್ ಶೆಟ್ಟಿ, ʼಕೆಜಿಎಫ್ʼ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್ ಕುಟುಂಬ ಸಮೇತ ಮೂಡಗಲ್ಲು ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿದ್ದರು.
ಹೋಗುವುದು ಹೇಗೆ?
ಉಡುಪಿಯಿಂದ ಹಾಲಾಡಿ ಮಾರ್ಗವಾಗಿ ಸುಮಾರು 64 ಕಿಮೀ. ಸಾಗಿದರೆ ಕೆರಾಡಿ ಗ್ರಾಮ ಸಿಗುತ್ತದೆ. ಅಲ್ಲಿಂದ 4 ಕಿಮೀ. ಕಚ್ಚಾ ರಸ್ತೆಯಲ್ಲಿ ಸಾಗಿದರೆ ಮೂಡಗಲ್ಲು ತಲುಪಬಹುದು. ಇಲ್ಲದಿದ್ದರೆ ಕುಂದಾಪುರದಿಂದ ನೇರಳಕಟ್ಟೆ-ಹೆಮ್ಮಕ್ಕಿ ಕ್ರಾಸ್-ಕೆರಾಡಿ ಅಲ್ಲಿಂದ ಮೂಡಗಲ್ಲಿಗೆ ಹೋಗಬಹುದು. ಇನ್ನು ಹೆಮ್ಮಾಡಿ-ವಂಡ್ಸೆ-ಮಾರಣಕಟ್ಟೆ-ಹೊಸೂರು ಮೂಲಕವೂ ಮೂಡಗಲ್ಲಿಗೆ ಹೋಗಬಹುದು. ಸಿದ್ದಾಪುರ-ಆಜ್ರಿ-ಮೋರ್ಟು ಮೂಲಕವೂ ದಾರಿ ಇದೆ. ಮೂಡಗಲ್ಲು ಉಡುಪಿಯಿಂದ ಸುಮಾರು 70 ಕಿಮೀ. ಮತ್ತು ಕುಂದಾಪುರದಿಂದ 34 ಕಿಮೀ. ದೂರದಲ್ಲಿದೆ.