ವೀಣೆ ಹಿಡಿದು ಬರಿಗಾಲಲ್ಲಿ ದೇಶ ಸುತ್ತಿದ ಸಂತ
ಶಂಕರರ ತತ್ವದ ಹಾದಿಯಲ್ಲೇ ನಡೆದವರು ದೀಕ್ಷಿತರು. ನಡೆದರು ಎಂದರೆ ಕೇವಲ ಪಾಲಿಸಿದರು ಎಂದಷ್ಟೇ ಅಲ್ಲ; ಶಂಕರರು ಭಾರತವಿಡೀ ನಡೆದು ಹೋದಂತೆಯೇ ದೀಕ್ಷಿತರೂ ಸಹ! ಶಂಕರರು ತಮ್ಮ ದಂಡ-ಕಮಂಡಲಗಳನ್ನು ಹಿಡಿದು ಹೋದಂತೆ, ದೀಕ್ಷಿತರು ತಮ್ಮ ವೀಣೆಯನ್ನು ಹಿಡಿದು-ನುಡಿಸಿ-ನಡೆದರು! ಇಬ್ಬರಿಗೂ ಅದೇ ಅದ್ವೈತ ಸಿದ್ಧಿ, ಅದೇ ಭಕ್ತಿಭಾವ.
-ತೇಜಸ್ ಎಚ್ ಬಾಡಾಲಾ
“ನನ್ನದೊಂದು ಕಾರು; ದಾರಿಯೊಂದಿಗೆ ಕರಾರು-
ಕರೆದುಕೊಂಡು ಹೋದಲೆಲ್ಲ ನಾನು ಪಯಣ ಮಾಡುವೆ;
ಯಾವ ಕಾರುಬಾರು? ನೋಡೊ ಜಾಗ ಸಾವಿರಾರು-
ಹೋದ ಕಡೆಯಲೆಲ್ಲ ಕುಳಿತು ನನ್ನ ಕವನ ಹಾಡುವೆ.”
ಎಂದು ನಾವು ಹಾಡಿಕೊಂಡು ಓಡಾಡುತ್ತೇವೆ ಹೌದು; ರಸ್ತೆಗಳಲ್ಲಿ ಹಾದು ಹೋಗುವಾಗ ತಣ್ಣನೆ ತಂಗಾಳಿಗೆ ಮುಖ ಕೊಟ್ಟು ಸಂಭ್ರಮಪಡುತ್ತೇವೆ. ಇನ್ನೂ ದೂರದ ಊರುಗಳಿಗೆ ಹೋಗಬೇಕೆಂದರೆ ವಿಮಾನವನ್ನು ಹತ್ತಿ ಮೋಡರಾಯನ ಲೀಲೆಗಳನ್ನು ಮೆಚ್ಚುತ್ತೇವೆ- ಮೆಚ್ಚಿ ಅದನ್ನು ಎಲ್ಲೆಡೆ ಹಂಚಿಕೊಳ್ಳುತ್ತೇವೆ. ಇಷ್ಟಿದ್ದೂ, ಒಂದು ಕಡೆ ಅನಾನುಕೂಲ ಆಗುವುದೇ ತಡ, ಪೂರ್ಣ ಪ್ರವಾಸವೇ ಹಾಳಾಯಿತು ಎಂದೆಲ್ಲಾ ಶಪಿಸಿ ಒದ್ದಾಡಿಬಿಡುತ್ತೇವೆ.
ಇದನ್ನು ತಲೆಯಲಿಟ್ಟುಕೊಳ್ಳಿ. ಈಗ ಇನ್ನೊಂದು ವಿಷಯ ಹೇಳುತ್ತೇನೆ ಕೇಳಿ:
ಮದ್ರಾಸಿನಲ್ಲಿ ಬಂದ ಬ್ರಿಟಿಷ್ ಅಧಿಕಾರಿಗಳು, ಅಲ್ಲಿನ ಜನಜೀವನದ ಕುರಿತಾದ ಸಮೀಕ್ಷೆಯನ್ನು ಮಾಡಿದರು. ಅದು ಬಹುಶಃ 17ನೇ ಶತಮಾನದ ಅಂತ್ಯವಿರಬೇಕು. ಮದ್ರಾಸಿನ ಓರ್ವ ಪ್ರಜೆಯು ತನ್ನ ಜೀವನದಲ್ಲಿ ಕ್ರಮಿಸಬಹುದಾದ ದೂರವೆಷ್ಟು ಎಂಬುದು ಪ್ರಶ್ನೆಯಾಗಿದ್ದಿತು. ಅದರ ಉತ್ತರವೇನು ಗೊತ್ತಾ? ತನ್ನ ಮನೆಯಿಂದ ಕೇವಲ ಇಪ್ಪತ್ತು ಕಿಲೋಮೀಟರಿನ ಸುತ್ತಳತೆಯಷ್ಟರಲ್ಲೇ ಅವನು ಜೀವನವನ್ನು ಕಳೆದಿರುತ್ತಾನೆ ಎಂಬುದು ಆ ಸಮೀಕ್ಷೆಯಿಂದ ತಿಳಿದದ್ದು.
ಆದರೆ ಆ ಕಾಲದಲ್ಲಿ ಈ ಸಮೀಕ್ಷೆಗಷ್ಟೆ ಅಲ್ಲದೆ, ಅಂದಿನ ಆ ಜೀವನ ವಿಧಾನಕ್ಕೆ ದುರ್ಗಮ ಪ್ರಯಾಣಗಳಿಗೆ ಎದೆಯೊಡ್ಡಿ ಅಪವಾದವಾದವರು ಹಲವು ಜನ. ಇದರಲ್ಲಿ ನಮ್ಮ ದಕ್ಷಿಣ ಭಾರತದಲ್ಲಿ ಪ್ರಸಿದ್ಧರೂ ಸಿದ್ಧರೂ ಆಗಿರುವ ಹಲವರಲ್ಲಿ ಪ್ರಮುಖರೆಂದರೆ ಶ್ರೀ ಶಂಕರಾಚಾರ್ಯರು, ಹಾಗೂ ಶ್ರೀ ಮುತ್ತುಸ್ವಾಮಿ ದೀಕ್ಷಿತರು.

ಶಂಕರರ ತತ್ವದ ಹಾದಿಯಲ್ಲೇ ನಡೆದವರು ದೀಕ್ಷಿತರು. ನಡೆದರು ಎಂದರೆ ಕೇವಲ ಪಾಲಿಸಿದರು ಎಂದಷ್ಟೇ ಅಲ್ಲ; ಶಂಕರರು ಭಾರತವಿಡೀ ನಡೆದು ಹೋದಂತೆಯೇ ದೀಕ್ಷಿತರೂ ಸಹ! ಶಂಕರರು ತಮ್ಮ ದಂಡ-ಕಮಂಡಲಗಳನ್ನು ಹಿಡಿದು ಹೋದಂತೆ, ದೀಕ್ಷಿತರು ತಮ್ಮ ವೀಣೆಯನ್ನು ಹಿಡಿದು-ನುಡಿಸಿ-ನಡೆದರು! ಇಬ್ಬರಿಗೂ ಅದೇ ಅದ್ವೈತ ಸಿದ್ಧಿ, ಅದೇ ಭಕ್ತಿಭಾವ.
ಶಂಕರರ ಜನನವಾದದ್ದು ಕೇರಳ ದೇಶದ ಕಾಲಟಿಯಲ್ಲಿ; ದೀಕ್ಷಿತರದ್ದು ತಮಿಳುನಾಡಿನ ತಿರುವಾರೂರಿನಲ್ಲಿ. ಇಂದಿಗೂ ನೀವು ಈ ಸ್ಥಳಗಳಿಗೆ ಹೋದರೆ ಈ ಮಹಾನುಭಾವರ ಪ್ರಭಾವವೆಂಥದ್ದೆಂದು ಕಾಣಬಹುದು.
ಕಾಶ್ಮೀರದ ತೀತ್ವಾಲ್ ಎಂಬ ಸ್ಥಳದಲ್ಲಿ ಶೃಂಗೇರಿ ಜಗದ್ಗುರುಗಳು 2023ರಲ್ಲಿ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಶತಮಾನಗಳ ಹಿಂದೆ ಅದೇ ಕಾಶ್ಮೀರ ದೇಶದಲ್ಲಿನ ಸರ್ವಜ್ಞಪೀಠವನ್ನು ಶಂಕರರು ದಕ್ಷಿಣಭಾರತದಿಂದ ಕಾಲ್ನಡಿಗೆಯಲ್ಲಿ ತಲುಪಿ, ಅಲ್ಲಿನ ವಿದ್ವಜ್ಜನರೊಂದಿಗೆ ವಾಕ್ಯಾರ್ಥಗಳನ್ನು ನಡೆಸಿ, ಸೋಲಿಸಿ, ಪೀಠಾರೋಹಣ ಮಾಡಿದ್ದು ನಮ್ಮೆಲ್ಲರಿಗೂ ತಿಳಿದಿದೆ. ಅವರ ಬ್ರಹ್ಮಜ್ಞಾನದ ಪರಿಧಿಯು ನಮಗೆ ಎಟುಕಬೇಕೆಂದರೆ ಜನ್ಮಾಂತರಗಳ ಸಾಧನೆಯು ಅವಶ್ಯಕ. ಆದರೆ ಇಲ್ಲಿನ ಪ್ರಶ್ನೆಯು ಅದಲ್ಲ. ದಕ್ಷಿಣ ಭಾರತದಿಂದ ಆರಂಭವಾಗಿ ಕಾಶ್ಮೀರದ ತನಕ ಸಹಸ್ರ ಸಹಸ್ರ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರಲ್ಲ! ಅದೂ ಆ ಕಾಲದಲ್ಲಿ ಕೇವಲ ಕಾಡುಗಳು, ಕ್ರೂರ ಮೃಗಗಳು, ಕಳ್ಳ-ಕಾಕರು! ಏತನ್ಮಧ್ಯೆ ಸಿಗುವ ಎಲ್ಲಾ ಕ್ಷೇತ್ರಗಳಲ್ಲಿಯೂ ಶಂಕರರು ರಚಿಸಿರುವ ಅದ್ಭುತ ಸ್ತೋತ್ರಗಳು! ಆ ಸ್ತೋತ್ರದಲ್ಲಿನ ಛಂದಸ್ಸು, ಸಾಹಿತ್ಯ-ಸೌಂದರ್ಯ, ತತ್ವ- ಶಂಕರರು ಜಗದ್ಗುರುಗಳು ಹೌದು. ಅವರು ಅಷ್ಟೇ ಅದ್ಭುತ ಕವಿ!
ಇನ್ನು ದೀಕ್ಷಿತರ ಕಥೆಗೆ ಬರೋಣ. ಕಾರ್ನಾಟಿಕ್ ಎಂಬ ತಪ್ಪು ಹೆಸರಿನಲ್ಲಿ ಕೀರ್ತಿಸಲ್ಪಡುವ ಕರ್ಣಾಟಕ ಸಂಗೀತವನ್ನು ಕಲಿಯುವವರೂ, ಕಲಿತಿರುವವರೂ, ಆಸ್ವಾದಿಸುವವರೂ ಮೆಚ್ಚುವ, ಗುನುಗುನಿಸುವ ಹಲವಾರು ಕೃತಿಗಳಲ್ಲಿ ಒಂದು ಮಹಾಗಣಪತಿಂ ಮನಸಾಸ್ಮರಾಮಿ. ಅದರಲ್ಲಿನ ಆ ಸಾಹಿತ್ಯದ ಧಾಟಿ, ರಾಗದ ಜೋಡಣೆ ಅತ್ಯಂತ ಮನೋನ್ಮಯವಾದಂಥದ್ದು. ಆ ಕೃತಿಯ ಕರ್ತೃವು ಶ್ರೀಮುತ್ತುಸ್ವಾಮಿ ದೀಕ್ಷಿತರು. ಈ ಪುಣ್ಯಾತ್ಮನು ಹುಟ್ಟಿದ್ದು ತಮಿಳುನಾಡಿನಲ್ಲೇ, ಅದೂ ಅವರ ತಂದೆ ತಾಯಿಯರ ಸತತ ಭಕ್ತಿ, ಕ್ಷೇತ್ರದರ್ಶನದ ಫಲವಾಗಿ. ಹುಟ್ಟಿದಾರಭ್ಯ ಸಂಸ್ಕೃತ ವಾಙ್ಮಯವು ಮನದಟ್ಟಾಯಿತು, ಸಂಗೀತವೋ ರಕ್ತದಲ್ಲೇ ಇತ್ತು.
ಒಮ್ಮೆ ಚಿದಂಬರನಾಥ ಯೋಗಿ ಎಂಬ ಮಹಾ ಶ್ರೀವಿದ್ಯೋಪಾಸಕರು ಈ ಬಾಲಕನನ್ನು ನೋಡಿ ಅವನ ತಂದೆಯನ್ನು ಕೇಳಿದರು: “ಈ ಬಾಲಕನನ್ನು ನನ್ನೊಂದಿಗೆ ಕಾಶಿಗೆ ಕಳುಹಿಸು”. ತಂದೆಯು ಅರೆಮನಸ್ಸಿನಲ್ಲೇ ಒಪ್ಪಿದರು. ಎಷ್ಟಾದರೂ ತಪಃಫಲ ಅಲ್ಲವೇ ಆ ಸಂತಾನ?
ದೀಕ್ಷಿತನೋ, ಗುರುವಿನನುಜ್ಞೆ ಎಂದು ಅವರೊಂದಿಗೆ ಕಾಲ್ನಡಿಗೆಯಲ್ಲೇ ಕಾಶಿಗೆ ಹೊರಟನು!

ಕಾಶಿಯಲ್ಲಿ ಅವನಿಗೆ ಅಧ್ಯಾತ್ಮ, ಆನಂದ, ಇವೆಲ್ಲದರ ಅನುಭೂತಿಗಳಾದವು. ಗಂಗೆಯಲ್ಲಿ ಮುಳುಗೆದ್ದ ಅವನ ಕೈಗೆ ವೀಣೆಯು ತಾನಾಗಿಯೇ ಬಂದಿತು! ಅದೇ ವೀಣೆಯನ್ನು ಹಿಡಿದು, ತನ್ನ ಗುರುವಿನ ಕಾಲವಾದ ನಂತರ ಅಲ್ಲಿಂದ ಹೊರಟು ಬಂದನು. ಒಂದೊಂದೇ ಕ್ಷೇತ್ರವನ್ನು ದರ್ಶಿಸುತ್ತಾ, ಪ್ರತೀ ಕ್ಷೇತ್ರದಲ್ಲಿಯೂ ಕೃತಿಗಳನ್ನು ರಚಿಸಿದ್ದಾನೆ ಈ ಮಹಾತ್ಮ!
ದೀಕ್ಷಿತರ ಕ್ಷೇತ್ರ ಕೃತಿಗಳು ಅದೆಷ್ಟು ಸುಂದರವೆಂದರೆ, ಅದು ಒಂದು ಕಡೆ ಅದ್ಭುತ ಸಂಗೀತ ರಚನೆ ಹೌದು (ಅಪರೂಪದ ರಾಗಗಳು, ಸಮಷ್ಟಿ ಚರಣದ ಪ್ರಯೋಗ), ಇನ್ನೊಂದು ಕಡೆ ಸಂಸ್ಕೃತ ಸಾಹಿತ್ಯದ ಉತ್ಕೃಷ್ಟತೆ (ವಿಭಕ್ತಿಗಳಲ್ಲಿ ರಚನೆ), ಮತ್ತೂ ವಿಶೇಷವೆಂದರೆ, ಅದರಲ್ಲಿ ದೀಕ್ಷಿತರು ನೀಡುವ ಆ ಕ್ಷೇತ್ರದ, ಆ ಕ್ಷೇತ್ರದ ದೇವರ ವರ್ಣನೆ! ಈಗಿನ ಕಾಲದ ಪ್ರವಾಸ ಕಥನ ಕೇವಲ ಗದ್ಯ; ಆದರೆ ಇಲ್ಲಿ ನೋಡಿ- ಅದನ್ನು ನೀವು ರಾಗವಾಗಿ ಆಲಾಪನೆ, ಸ್ವರಗಳೊಂದಿಗೆ ಹಾಡಬಹುದು!
ಹಾಗಾಗಿಯೇ, ದೀಕ್ಷಿತರನ್ನು ಒಬ್ಬರು ಆಂಗ್ಲದಲ್ಲಿ The Eternal Piligrim ಎಂದು ಕರೆದರು. ಅವರ ಕಾಲದಲ್ಲಿ ಜನರು ಕೇವಲ 20 ಕಿಲೋಮೀಟರ್ ದೂರವನ್ನು ಜೀವನದಲ್ಲಿ ಕ್ರಮಿಸುತ್ತಿದ್ದರು. ಇವರೋ! ಸಹಸ್ರ ಸಹಸ್ರ!
ಈ ಈರ್ವರೂ ಮಹಾತ್ಮರ ಜೀವನವೇ ಒಂದು ಯಾತ್ರೆ!