ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ
ಸೋಮನಾಥ ದೇವಾಲಯವನ್ನು ಯುಗಯುಗಾಂತರಗಳ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ. ಮೊದಲಿಗೆ ರಾಜ ಸೋಮನಾಥನಿಂದ ಚಿನ್ನದಿಂದಲೂ, ಆನಂತರ ರಾವಣನಿಂದ ಬೆಳ್ಳಿಯಿಂದಲೂ, ಭಗವಾನ್ ಶ್ರೀ ಕೃಷ್ಣನಿಂದ ಮರದಿಂದಲೂ ಹಾಗೂ ರಾಜ ಭೀಮದೇವ ಎಂಬವನಿಂದ ಕಲ್ಲಿನಿಂದಲೂ ನಿರ್ಮಿಸಲಾಯಿತೆಂದು ನಂಬಲಾಗುತ್ತದೆ.
- ಅರುಣ ಷಡಕ್ಷರಿ
ಸೌರಾಷ್ಟ್ರದೇಶೇ ವಿಮಲೇಽತಿರಮ್ಯೇ ಜ್ಯೋತಿರ್ಮಯಂ ಚಂದ್ರಕಲಾವತಂಸಮ್ |
ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದಲ್ಲಿ ಮೊದಲನೆಯದಾಗಿ ಉಲ್ಲೇಖವಾಗುವ ಜ್ಯೋತಿರ್ಲಿಂಗವೇ ಸೋಮನಾಥ ಜ್ಯೋತಿರ್ಲಿಂಗ. ಇದಕ್ಕೆ ಕಾರಣ, ಇದು ಶಿವನ ಮೊದಲ ಅವತಾರವಾದ ಜ್ಯೋತಿರ್ಲಿಂಗವೆಂದು ನಂಬಲಾಗಿದೆ.
ಸೋಮನಾಥ ದೇವಾಲಯವು ಅರಬ್ಬೀ ಸಮುದ್ರದ ತೀರದಲ್ಲಿರುವ, ಮರಳು ಬಣ್ಣದ ಭವ್ಯ ಹಾಗೂ ದಿವ್ಯ ದೇವಾಲಯ. ಇತಿಹಾಸದ ಪಯಣದಲ್ಲಿ ಅನೇಕ ಆಕ್ರಮಣಕಾರರಿಂದ ಈ ದೇವಾಲಯ ಹಲವು ಬಾರಿ ಧ್ವಂಸಗೊಂಡಿದ್ದರೂ, ಪ್ರತಿಬಾರಿಯೂ ಅದೇ ಶ್ರದ್ಧೆ ಮತ್ತು ಭಕ್ತಿಯಿಂದ ಪುನರ್ ನಿರ್ಮಾಣಗೊಂಡಿದೆ. ಇಂದಿನ ದೇವಾಲಯದ ರಚನೆ 1951ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರೇರಣೆಯಿಂದ ಪುನರ್ ನಿರ್ಮಾಣಗೊಂಡಿದೆ.
ಈ ದೇವಾಲಯದ ಹಿಂದೆ ಅತ್ಯಂತ ಸುಂದರವಾದ ಪೌರಾಣಿಕ ಕಥೆಯಿದೆ. ಚಂದ್ರನು ದಕ್ಷನ 27 ಪುತ್ರಿಯರನ್ನು ವಿವಾಹವಾಗಿದ್ದು, ಎಲ್ಲರನ್ನೂ ಸಮಾನವಾಗಿ ಕಾಣುವೆನೆಂಬ ವಾಗ್ದಾನವನ್ನು ನೀಡಿದ್ದನು. ಆದರೆ ಕಾಲಕ್ರಮೇಣ ಚಂದ್ರನು ಉಳಿದವರಿಗಿಂತ ರೋಹಿಣಿಯನ್ನು ಹೆಚ್ಚು ಪ್ರೀತಿಸಲು ಆರಂಭಿಸಿದನು. ಈ ಅನ್ಯಾಯದ ವಿಷಯ ತಿಳಿದ ದಕ್ಷನು ಕೋಪಗೊಂಡು, ಚಂದ್ರನು ಕ್ರಮೇಣ ತನ್ನ ಕಾಂತಿಯನ್ನು ಕಳೆದುಕೊಂಡು ಕ್ಷೀಣಿಸುವಂತೆ ಶಾಪವನ್ನು ಕೊಟ್ಟನು.

ತಮ್ಮ ಪತಿಯ ದುಃಸ್ಥಿತಿಯನ್ನು ಕಂಡ ದಕ್ಷನ ಪುತ್ರಿಯರು ದುಃಖಿತರಾಗಿ ಮಹಾದೇವನಿಗೆ ಪ್ರಾರ್ಥಿಸಿದರು. ಆದರೆ ದಕ್ಷನ ಶಾಪವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಶಿವನಿಗೂ ಸಾಧ್ಯವಾಗಲಿಲ್ಲ. ಆದರೆ ಶಿವನು ಶಾಪದ ತೀವ್ರತೆಯನ್ನು ಕಡಿಮೆ ಮಾಡಲು, ಚಂದ್ರನು ಹದಿನೈದು ದಿನಗಳು ಕ್ಷೀಣಿಸಿ ನಂತರ ಮುಂದಿನ ಹದಿನೈದು ದಿನಗಳಲ್ಲಿ ಪುನರ್ಜನ್ಮ ಪಡೆದು ಕಾಂತಿಯನ್ನು ಮರಳಿ ಪಡೆಯುವಂತೆ ವರ ನೀಡಿದನು. ಇದರಿಂದ ಚಂದ್ರನ ಕಲೆಯ ಏರಿಳಿತದ ಚಕ್ರ ಆರಂಭವಾಯಿತು. ಆ ಚಂದ್ರನು ತನ್ನ ಶಾಪ ವಿಮೋಚನೆಯನ್ನು ಪಡೆದ ಕ್ಷೇತ್ರವೇ ’ಸೋಮನಾಥ’ ಎಂದು ಹೇಳಲ್ಪಡುತ್ತದೆ. ಅಲ್ಲಿ ಚಂದ್ರನು ಸೋಮನಾಥೇಶ್ವರ ದೇವಾಲಯವನ್ನು ಸ್ಥಾಪಿಸಿದನೆಂಬ ಪ್ರತೀತಿ ಇದೆ.
ಸೋಮನಾಥ ದೇವಾಲಯವನ್ನು ಯುಗಯುಗಾಂತರಗಳ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ. ಮೊದಲಿಗೆ ರಾಜ ಸೋಮನಾಥನಿಂದ ಚಿನ್ನದಿಂದಲೂ, ಆನಂತರ ರಾವಣನಿಂದ ಬೆಳ್ಳಿಯಿಂದಲೂ, ಭಗವಾನ್ ಶ್ರೀ ಕೃಷ್ಣನಿಂದ ಮರದಿಂದಲೂ ಹಾಗೂ ರಾಜ ಭೀಮದೇವ ಎಂಬವನಿಂದ ಕಲ್ಲಿನಿಂದಲೂ ನಿರ್ಮಿಸಲಾಯಿತೆಂದು ನಂಬಲಾಗುತ್ತದೆ.

ನಾವು ಡಿಸೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಸೋಮನಾಥ ಯಾತ್ರೆ ಮಾಡಿದೆವು. ದೇವಾಲಯದ ಆವರಣವನ್ನು ಸಂಜೆ ಸಮಯದಲ್ಲಿ ತಲುಪಿದೆವು. ಸೂರ್ಯ ಅಸ್ತಮಿಸುವ ಕ್ಷಣಗಳಲ್ಲಿ ಮರಳು ಬಣ್ಣದ ದೇವಾಲಯ ಸುವರ್ಣದಂತೆ ಕಂಗೊಳಿಸುತ್ತಿತ್ತು. ದೇವಾಲಯದ ಮೆಟ್ಟಿಲುಗಳವರೆಗೆ ನಡೆದು ಹೋಗುವ ದಾರಿ ದೀರ್ಘವಾಗಿತ್ತು. ದೇವಾಲಯವು ಅರಬ್ಬೀ ಸಮುದ್ರದ ತೀರದಲ್ಲಿದೆ. ಅಲ್ಲಿ ಮೀನುಗಾರಿಕೆ ಅವ್ಯಾಹತವಾಗಿ ನಡೆಯುವುದರಿಂದ ಸತ್ತ ಮೀನಿನ ವಾಸನೆ ಸುತ್ತಲೂ ಇದೆ. ಅದು ಮೂಗಿಗೆ ಅಪ್ಪಳಿಸುತ್ತಿತ್ತು. ಸ್ವಲ್ಪ ಅಸಹನೀಯವೂ ಆಗಿತ್ತು. ಆದರೆ ಅದು ದೇವಾಲಯದ ಒಳಗೆ ಕಾಲಿಟ್ಟ ಮರುಕ್ಷಣದಲ್ಲೇ ಎಲ್ಲವೂ ಮರೆತುಹೋಯಿತು.
ದೇವಾಲಯದ ಒಳಭಾಗ ವಿಶಾಲವಾಗಿದ್ದು, ಎಲ್ಲೆಡೆ ಅದ್ಭುತ ಶಿಲ್ಪಕಲೆ ಕಂಡುಬರುತ್ತದೆ. ಗರ್ಭಗುಡಿಯೊಳಗೆ ಪ್ರವೇಶಿಸಿದಾಗ, ಶಿವಲಿಂಗದ ಸುಂದರ ಅಲಂಕಾರ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಪ್ರತಿದಿನದ ಅಲಂಕಾರವನ್ನು ಅನೇಕ ಬಾರಿ ಯೋಚಿಸಿ, ಯೋಜನೆ ಮಾಡಲಾಗುತ್ತದೆ.
ನಾನು ಭೇಟಿ ನೀಡಿದ ದಿನ ರುದ್ರಾಕ್ಷಿ ಅಲಂಕಾರ ಮಾಡಲಾಗಿತ್ತು. ಅದು ಅತ್ಯಂತ ಸುಂದರವಾಗಿದ್ದು, ನೋಡುವವರನ್ನು ಮಂತ್ರಮುಗ್ಧರನ್ನಾಗಿಸುವಷ್ಟು ಆಕರ್ಷಕವಾಗಿತ್ತು.
ಪ್ರತಿಯೊಂದು ಜ್ಯೋತಿರ್ಲಿಂಗಕ್ಕೂ ತನ್ನದೇ ಆದ ಕತೆ ಇದೆ. ಸೌಂದರ್ಯವಿದೆ ಮತ್ತು ಭಕ್ತಿ ಭಾವವೂ ಇದೆ. ಸೋಮನಾಥನ ದರ್ಶನದಿಂದ ಧನ, ಶಾಂತಿ ಮತ್ತು ಸೌಂದರ್ಯಭಾವ ದೊರೆಯುತ್ತದೆ ಎಂಬ ನಂಬಿಕೆ ಇದೆ.

ನಾವು ಈ ಯಾತ್ರೆಯಿಂದ ಹಿಂತಿರುಗಿದಾಗ ನಮಗೆ ಶಿವನ ದಿವ್ಯ ಲೀಲೆಯ ಕಥೆ ತಿಳಿದುದರಿಂದ ಜ್ಞಾನ ಸಂಪತ್ತು ದೊರೆತಂತಾಯಿತು. ಮಹಾದೇವನ ಭವ್ಯ ದರ್ಶನದಿಂದ ಮನಸ್ಸಿಗೆ ಅಪಾರ ಶಾಂತಿಯೂ ದೊರೆತಂತಾಯಿತು. ಸಮುದ್ರ ತೀರದ ದೇವಾಲಯ ಹಾಗೂ ರಾತ್ರಿ ಹೊತ್ತಿನ ಬೆಳಕಿನಲ್ಲಿ ಕಂಗೊಳಿಸುವ ಸೋಮನಾಥ ದೇವಾಲಯವನ್ನು ನೋಡಿದಾಗ ಶಿವನ ಸೌಂದರ್ಯದ ಅನುಭವವೂ ಆಯಿತು.
ಪ್ರಯಾಣ ಸಲಹೆಗಳು
ಸೌರಾಷ್ಟ್ರ ಸೋಮನಾಥದ ಯಾತ್ರೆ ಕೈಗೊಳ್ಳಲು ಉತ್ತಮ ಸಮಯವೆಂದರೆ ಅದು ನವೆಂಬರ್‌ನಿಂದ ಫೆಬ್ರವರಿ ತಿಂಗಳುಗಳಲ್ಲಿ ಹವಾಮಾನ ತಂಪು ಮತ್ತು ಆರಾಮದಾಯಕವಾಗಿರುತ್ತದೆ. ಮಾರ್ಚ್‌ನಿಂದ ಜೂನ್ ತಿಂಗಳುಗಳಲ್ಲಿ ಬಿಸಿಲು ಪ್ರಖರವಾಗಿರುತ್ತದೆ. ಆಗ ಜನಸಂದಣಿ ಕಡಿಮೆಯಾಗಿರುತ್ತದೆ.
ಪ್ರಯಾಣ ಮಾರ್ಗ
ಬೆಂಗಳೂರಿನಿಂದ ದಿಯು ಅಥವಾ ರಾಜಕೋಟ್ ವಿಮಾನ ನಿಲ್ದಾಣಕ್ಕೆ ಹೋಗಬಹುದು. ಅಲ್ಲಿಂದ ಕ್ಯಾಬ್ ಮೂಲಕ ಸೋಮನಾಥವನ್ನು ತಲುಪಬಹುದು. ಪ್ರಯಾಣ ಸಮಯ ಸುಮಾರು ಒಂದೂವರೆ ಗಂಟೆ.
ದೇವಾಲಯ ಮತ್ತು ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಲು ಒಂದೆರಡು ದಿನಗಳು ಬೇಕಾಗುತ್ತದೆ.
ಮತ್ತಷ್ಟು ಮಾಹಿತಿ
- ಸಮಯ ಮತ್ತು ಬುಕಿಂಗ್‌ಗಾಗಿ ಸೋಮನಾಥ ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್ ಬಳಸಬಹುದು.
- ಇಲ್ಲಿ ಸಾಂಪ್ರದಾಯಿಕ ಉಡುಪು ಕಡ್ಡಾಯವಾಗಿರುತ್ತದೆ.
- ಕೆಲವು ವಿಶೇಷ ಪೂಜೆಗಳಲ್ಲಿ ಪುರುಷರು ಅಂಗಿಯಿಲ್ಲದೆ ಪ್ರವೇಶಿಸಬೇಕಾಗಬಹುದು.
- ಸುರಕ್ಷತೆಯ ದೃಷ್ಠಿಯಿಂದ ಮೊಬೈಲ್, ಕ್ಯಾಮೆರಾ, ಚರ್ಮದ ವಸ್ತುಗಳು ಒಳಗೆ ನಿಷೇಧಿಸಲಾಗಿದೆ.
- ದೇವಾಲಯದ ಒಳಗೆ ಉಚಿತ ಲಾಕರ್ ವ್ಯವಸ್ಥೆ ಲಭ್ಯ.
ಸಧ್ಯಕ್ಕೆ ಅಲ್ಲಿ ಈಗ ತಂಪಾದ ವಾತಾವರಣ ಇರುವುದರಿಂದ ಸೋಮನಾಥ ಯಾತ್ರೆಯನ್ನು ಯೋಜಿಸಲು ಸರಿಯಾದ ಸಮಯ.