ಸೈಕಲ್ ತುಳಿದೆವು ಗೋಪುರ ನೋಡಲು!
ದೊಡ್ಡಗದ್ದುವಳ್ಳಿ ದೇಗುಲವನ್ನು"ಗೋಪುರಗಳ ವನ" ಎಂದು ಕರೆದದ್ದರಲ್ಲಿ ಅರ್ಥವಿದೆ! ಅಲ್ಲಿ ಮುಖ್ಯವಾದ ಐದು ಗೋಪುರಗಳು ಮತ್ತು ನಾಲ್ಕು ಮೂಲೆಯಲ್ಲಿ ನಾಲ್ಕು ಪುಟ್ಟ ಗೋಪುರಗಳು ಹರಡಿದ್ದವು; ಎತ್ತ ನೋಡಿದರೂ ಗೋಪುರಗಳ ಸಾಲು! ನಾವು ಹೋಗಿದ್ದ ನಡು ಮಧ್ಯಾಹ್ನದ ಸಮಯದಲ್ಲಿ ಆ ಗೋಪುರಗಳ ಮೇಲೆ ಬಿದ್ದ ಬಿಸಿಲು, ವಿನ್ಯಾಸ ಪೂರ್ಣ ನೆರಳಿನ ಚಿತ್ತಾರವನ್ನೇ ಬರೆದಿತ್ತು! ಹೊರಗಡೆಯಿಂದ ನೋಡಲು ಸುಂದರ ವಾಸ್ತು ನಿರ್ಮಿತಿ.
- ಶಶಿಧರ ಹಾಲಾಡಿ
ಹಾಸನದಿಂದ ಬೇಲೂರಿಗೆ ಹೋಗುವ ದಾರಿಯಲ್ಲಿ ಒಂದು ವಿಶೇಷವಾದ, ಹೊಯ್ಸಳ ವಾಸ್ತು ಶೈಲಿಯಲ್ಲಿ ನಿರ್ಮಾಣವಾದ ದೇವಾಲಯವಿದೆ; ನಿಜ ಹೇಳಬೇಕೆಂದರೆ, ಇಂಥ ವಿಶಿಷ್ಟ ವಾಸ್ತು ಇರುವ ಬೇರೊಂದು ದೇಗುಲ ನಮ್ಮ ರಾಜ್ಯದಲ್ಲಿಲ್ಲ! ಬೇಲೂರು ದೇವಸ್ಥಾನಕ್ಕಿಂತ ತುಸು ಮುಂಚೆಯೇ ನಿರ್ಮಾಣವಾಗಿರುವ ಈ ದೇಗುಲವು, ಈಗ ಪ್ರವಾಸಿ ನಕ್ಷೆಯಲ್ಲಿ ಸೇರಿದೆ ನಿಜ. ಆದರೆ ಕೆಲವೇ ವರ್ಷಗಳ ಹಿಂದೆ ಈ ದೇವಾಲಯವನ್ನು ನೋಡಬೇಕೆಂದು ಪ್ರವಾಸಿಗರು ಹೋಗುವ ಕ್ರಮ ಇರಲಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು!
ನಾನಿಲ್ಲಿ ಹೇಳುತ್ತಿರುವುದು ಹಾಸನ ಜಿಲ್ಲೆಯಲ್ಲಿರುವ ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮಿ ದೇವಾಲಯದ ಕುರಿತು. ಐದು ದೊಡ್ಡ ಗೋಪುರಗಳು ಮತ್ತು ನಾಲ್ಕು ಚಿಕ್ಕ ಗೋಪುರಗಳು ಇರುವ ಈ ಶಿಲಾ ದೇಗುಲಗಳ ಸಂಕೀರ್ಣವನ್ನು, ಹಿಂದೆ ಬೇರೆ ಊರಿನ ಪ್ರವಾಸಿಗರು ಇಲ್ಲಿಗೆ ಬಂದು ನೋಡುವ ಪದ್ಧತಿಯೇ ಇರಲಿಲ್ಲ! ಅದಕ್ಕೆ ಹಲವು ಕಾರಣಗಳಿವೆ. ನಾನು ಮೊದಲ ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಅದೊಂದು ನಿರ್ಜನ ಪ್ರದೇಶ. ಕುಗ್ರಾಮದ ಅಂಚಿನಲ್ಲಿದ್ದ ಹುಲ್ಲು ಗಿಡಗಳು ಬೆಳೆದ ಅಂಗಣದ್ದ, ಸುತ್ತಲೂ ರಕ್ಷಣಾ ಬೇಲಿ ಇಲ್ಲದೆ ಇದ್ದ ಸುಂದರ ವಾಸ್ತು ನಿರ್ಮಿತಿ ಅದಾಗಿತ್ತು.
ಸೈಕಲ್ಲೇ ಗತಿ!
1984 ನೇ ಇಸವಿ; ದೊಡ್ಡಗದ್ದುವಳ್ಳಿಯಲ್ಲಿರುವ, ಹೊಯ್ಸಳ ಶೈಲಿಯ ಆ ಅಪರೂಪದ ದೇವಾಲಯವನ್ನು ನೋಡುವ ಆಸಕ್ತಿ ಮೂಡಿತು. ಒಬ್ಬನೇ ಆ ಕುಗ್ರಾಮಕ್ಕೆ ಹೋಗಲು ಅಳುಕು; ಆಗ ಜತೆಗಾರರಾಗಿ ಬಂದವರು ಗೆಳೆಯ ಸತ್ಯನಾರಾಯಣ ಅರಸ.
"ಅಲ್ಲಿಗೆ ಬಸ್‌ಸೌಕರ್ಯ ಇಲ್ಲವಂತೆ" ಎಂದು ಅವರ ಬಳಿ ಉಸುರಿದೆ.
"ಅದಕ್ಕೇನಂತೆ. ಒಂಬತ್ತು ಗೋಪುರಗಳಿರುವ ಆ ದೇವಸ್ಥಾನವನ್ನು ನೋಡಲು, ಮೊದಲು ಹೊರಡೋಣ. ಆ ಹಳ್ಳಿಯಲ್ಲಿ ಜನರಂತೂ ಇದ್ದೇ ಇರುತ್ತಾರೆ, ಅವರು ಹೇಗೆ ಅಲ್ಲಿಗೆ ಹೋಗ್ತಾರೋ ನಾವು ಅದೇ ರೀತಿ ಹೋದರಾಯ್ತು" ಎಂದು ಧೈರ್ಯ ತುಂಬಿದರು. ಒಂದು ಬೆಳಗ್ಗೆ ಬೇಗನೆ ಬಸ್ ಏರಿ, ಕಡೂರಿನಿಂದ ಅತ್ತ ಪಯಣಿಸಿದೆವು.
ದೊಡ್ಡಗದ್ದುವಳ್ಳಿಯ ಮಹಾಲಕ್ಷ್ಮಿ ದೇವಾಲಯದ ವಿಷಯ ನನಗೆ ಗೊತ್ತಾದದ್ದು ಸಹ ಕುತೂಹಲಕಾರಿ. 1970- 80ರ ದಶಕದಲ್ಲಿ, ಬೆಂಗಳೂರಿನ ಐಬಿಎಚ್ ಪ್ರಕಾಶನದವರು 40 ರಿಂದ 60 ಪುಟಗಳ ಪುಟ್ಟ ಪುಸ್ತಕಗಳನ್ನು ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದರು; ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ದೇಶ ವಿದೇಶಗಳ ಕೌತುಕ, ಜನಪ್ರಿಯ ವಿಜ್ಞಾನ ಮೊದಲಾದ ವಿಷಯಗಳ ಕುರಿತು ಆ ಪುಸ್ತಕಗಳು ಹೊರಬರುತ್ತಿದ್ದವು. ಆ ಸರಣಿಯಲ್ಲಿ ಹೊರಬಂದ “ಹೊಯ್ಸಳ ದೇವಾಲಯಗಳು” ಎಂಬ ಪುಟ್ಟ ಪುಸ್ತಕದಲ್ಲಿ (ರಚನೆ ಎಚ್.ಎಸ್. ಗೋಪಾಲರಾವ್) ದೊಡ್ಡಗದ್ದುವಳ್ಳಿ ದೇಗುಲದ ಗೋಪುರಗಳನ್ನು ವಿವರಿಸಿದ್ದರು; ಒಟ್ಟು ಒಂಬತ್ತು ಶಿಲಾ ಗೋಪುರಗಳು ಇರುವ ಆ ದೇಗುಲವನ್ನು "ಗೋಪುರಗಳ ವನ "ಎಂಬ ವಿಶ್ಲೇಷಣೆಯೊಂದಿಗೆ ಬರೆದಿದ್ದರು.

ಆದರೆ 1984 ನೇ ಇಸವಿಯಲ್ಲಿ ಆ ಗೋಪುರಗಳ ವನಕ್ಕೆ ಇದ್ದ ದಾರಿ ಸುಗಮವಾಗಿರಲಿಲ್ಲ;ಬದಲಿಗೆ ಬಲು ಕಠಿಣವಾಗಿತ್ತು!ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ, ಹಗರೆ ಎಂಬ ಹಳ್ಳಿಯಲ್ಲಿ ಬಸ್ ಇಳಿಯಬೇಕಿತ್ತು; ಅಲ್ಲಿಂದ ದೊಡ್ಡಗದ್ದುವಳ್ಳಿ ಎಂಬ ಕುಗ್ರಾಮಕ್ಕೆ ಸುಮಾರು 5 ಕಿಮೀ. ದೂರ. ಆದರೆ ಬಸ್ ವ್ಯವಸ್ಥೆ ಇರಲಿಲ್ಲ. ಅಸಲಿಗೆ ದೊಡ್ಡಗದ್ದುವಳ್ಳಿಗೆ ಜಲ್ಲಿ ಅಥವಾ ಟಾರು ಹಾಕಿದ ರಸ್ತೆಯೇ ಇರಲಿಲ್ಲ.
ಹಗರೆ ಹತ್ತಿರ ನಾವು ಬಸ್ ಇಳಿದಾಗ ಬೆಳಗಿನ ಸುಮಾರು 10 ಗಂಟೆಯಾಗಿರಬಹುದು.ಹಳ್ಳಿಯ ಜನರನ್ನು ವಿಚಾರಿಸಲಾಗಿ" ದೇವಸ್ಥಾನ ನೋಡಲು ಬಂದಿದಿರಾ! ಸರಿ ಅಲ್ಲಿಗೆ ಹೋಗಲು ಬಾಡಿಗೆ ಸೈಕಲ್ ಸಿಗುತ್ತೆ" ಎಂಬ ಸಲಹೆಯನ್ನು ನೀಡಿದರು. ಆಗಿನ್ನೂ ಅಂಥ ಹಳ್ಳಿಗಳಲ್ಲಿ ಆಟೋರಿಕ್ಷಾ ಸೇವೆ ಸಹಾ ಆರಂಭವಾಗಿರಲಿಲ್ಲ. ಹಗರೆಯಲ್ಲಿ ಎರಡು ಸೈಕಲ್‌ಗಳನ್ನು ಬಾಡಿಗೆಗೆ ಪಡೆದು,ಪೆಡಲ್ ತುಳಿಯಲು ಆರಂಭಿಸಿದೆವು.
ಹಳ್ಳಿ ರಸ್ತೆಯಲ್ಲಿ ಸೈಕಲ್‌ಬ್ಯಾಲೆನ್ಸ್
ಮೊದಲಿನ ಎರಡು ಮೂರು ಕಿಲೋಮೀಟರ್ ತನಕ, ಟಾರು ಹಾಕಿದ ರಸ್ತೆ. ನಂತರ ಬಲಕ್ಕೆ ಸಾಗಿದ್ದ ಮಣ್ಣು ರಸ್ತೆಯಲ್ಲಿ ಸೈಕಲ್ ಹೊಡೆಯಲಾರಂಭಿಸಿದೆವು. ಆ ರಸ್ತೆಯೋ! ರಾಮ! ರಾಮ! ಜಲ್ಲಿ ಸಹ ಕಾಣದ ಸಡಿಲು ಮಣ್ಣಿನ ರಸ್ತೆ. ಅದರ ಮೇಲೆ ಟ್ರ್ಯಾಕ್ಟರ್‌ಗಳು ನಿರಂತರವಾಗಿ ಓಡಾಡಿದ್ದರಿಂದ ಇರಬೇಕು, ದಾರಿಯುದ್ದಕ್ಕೂ ಎರಡು ಅಡಿ ಆಳದ ಎರಡು ಪಟ್ಟಿಗಳು ಇದ್ದವು. ಅದರ ನಡುವೆ ಸುಮಾರು 2 ಅಡಿ ಅಗಲದ ಸಣ್ಣ ದಿಣ್ಣೆಯಂಥ ದಾರಿ. ಆ ಮಧ್ಯದ ಕಿರಿದಾದ ಜಾಗದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು! ಅಕಸ್ಮಾತ್ ಸೈಕಲ್ ಚಕ್ರ ಜಾರಿದರೆ ಎರಡು ಅಡಿ ಅಗಲದ ಗುಂಡಿಗೆ ಬೀಳುವ ಸಾಧ್ಯತೆ! ಮಳೆ ಬಂದು ಕೆಸರಾಗಿದ್ದಾಗ ಟ್ರಾಕ್ಟರ್‌ಗಳನ್ನು ಓಡಿಸಿದ್ದರಿಂದಾಗಿ ಆ ಮಣ್ಣಿನ ರಸ್ತೆ ಆ ರೀತಿಯ ವಿಚಿತ್ರ ವಿನ್ಯಾಸವನ್ನು ಹೊಂದಿತ್ತು.
ಜೋಳದ ರಾಶಿ!
ನಿಧಾನವಾಗಿ ಜಾಗ್ರತೆಯಿಂದ ಸೈಕಲ್ ಹೊಡೆಯುತ್ತಾ, ದಾರಿಯ ಎರಡೂ ಪಕ್ಕದಲ್ಲಿದ್ದ ಹೊಲಗದ್ದೆಗಳನ್ನು ನೋಡುತ್ತಾ ಸಾಗಿದೆವು. ಒಂದೆಡೆ ದಾರಿ ಬದಿಯಲ್ಲಿ ಜೋಳವನ್ನು ಹದಮಾಡಿ ರಾಶಿ ಹಾಕಿಕೊಂಡಿದ್ದರು. ಆ ಬೆಳಗಿನ ಬಿಸಿಲಿನಲ್ಲಿ ಜೋಳದ ರಾಶಿಯ ಬಣ್ಣ ಮೋಹಕವಾಗಿ ಕಾಣಿಸುತ್ತಿತ್ತು! ಮುಸುಕಿನ ಜೋಳ ಮತ್ತು ಮೆಣಸಿನಕಾಯಿ ಬೆಳೆ ಆಗ ಅಲ್ಲಿ ವ್ಯಾಪಕ. ಜೋಳವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿ ಸಾಗಿಸಿದ್ದರಿಂದ ರಸ್ತೆ ಆ ರೀತಿ ಆಗಿದ್ದಿರಬಹುದು.
ಚುರು ಚುರು ಎನ್ನುತ್ತಿದ್ದ ಬಿಸಿಲಿನಲ್ಲಿ ಸೈಕಲ್ ತುಳಿದು ದೊಡ್ಡಗದ್ದುವಳ್ಳಿ ಎಂಬ ಕುಗ್ರಾಮ ತಲುಪಿದಾಗ, ಊರಿನ ಇನ್ನೊಂದು ತುದಿಯಲ್ಲಿ ವಿಶಾಲವಾದ ಕೆರೆಯ ಬಳಿ ದೇವಸ್ಥಾನವಿದೆ ಎಂದು ಹಳ್ಳಿಯವರು ಕೈ ಮಾಡಿ ತೋರಿಸಿದರು. ನಾವಿಬ್ಬರೂ ಎರಡು ಸೈಕಲ್‌ಗಳನ್ನು ದೇಗುಲಗಳ ಬಳಿ ನಿಲ್ಲಿಸಿದಾಗ ತಂಪಾದ ತಂಗಾಳಿ ಬೀಸಿ ಬಂತು- ದೇಗುಲಕ್ಕೆ ಹೊಂದಿಕೊಂಡಂತಿದ್ದ ವಿಶಾಲವಾದ ಕೆರೆಯ ಮೇಲಿಂದ ಬೀಸಿ ಬಂದ ತಂಗಾಳಿ ಅದು. 12ನೇ ಶತಮಾನದಲ್ಲಿ ಆ ದೇಗುಲ ನಿರ್ಮಿಸಿದಾಗ ಅದರ ಪಕ್ಕದಲ್ಲಿ ವಿಶಾಲವಾದ ಕೆರೆಯನ್ನು ಸಹ ನಿರ್ಮಿಸಿದ್ದರು!
ಗೋಪುರಗಳ ವನ ದೊಡ್ಡಗದ್ದುವಳ್ಳಿ ದೇಗುಲವನ್ನು" ಗೋಪುರಗಳ ವನ" ಎಂದು ಕರೆದದ್ದರಲ್ಲಿ ಅರ್ಥವಿದೆ! ಅಲ್ಲಿ ಮುಖ್ಯವಾದ ಐದು ಗೋಪುರಗಳು ಮತ್ತು ನಾಲ್ಕು ಮೂಲೆಯಲ್ಲಿ ನಾಲ್ಕು ಪುಟ್ಟ ಗೋಪುರಗಳು ಹರಡಿದ್ದವು; ಎತ್ತ ನೋಡಿದರೂ ಗೋಪುರಗಳ ಸಾಲು! ನಾವು ಹೋಗಿದ್ದ ನಡು ಮಧ್ಯಾಹ್ನದ ಸಮಯದಲ್ಲಿ ಆ ಗೋಪುರಗಳ ಮೇಲೆ ಬಿದ್ದ ಬಿಸಿಲು, ವಿನ್ಯಾಸ ಪೂರ್ಣ ನೆರಳಿನ ಚಿತ್ತಾರವನ್ನೇ ಬರೆದಿತ್ತು! ಹೊರಗಡೆಯಿಂದ ನೋಡಲು ಸುಂದರ ವಾಸ್ತು ನಿರ್ಮಿತಿ. ಇಲ್ಲಿ ಅಪಾರ ಸಂಖ್ಯೆಯ ವಿಗ್ರಹಗಳು ಮತ್ತು ಶಿಲಾಬಾಲಿಕೆಗಳು ಇಲ್ಲ; ಬದಲಿಗೆ ಹಂತ ಹಂತವಾಗಿ ಏರಿದ ಕಲ್ಲಿನ ಚಪ್ಪಡಿಗಳಲ್ಲೇ ಆಕರ್ಷಕ ವಿನ್ಯಾಸವನ್ನು ರೂಪಿಸಲಾಗಿದೆ.

ಭಯ ಹುಟ್ಟಿಸುವ ಬೇತಾಳಗಳು!
ದೇಗುಲದ ಒಳಭಾಗವು ಅಂದು ಅಂದರೆ 1984ರಲ್ಲಿ ಬಹುಪಾಲು ಕತ್ತಲಿನಿಂದ ತುಂಬಿತ್ತು; ದೇಗುಲಕ್ಕೆ ಇನ್ನೂ ವಿದ್ಯುತ್ ದೀಪದ ಸಂಪರ್ಕ ದೊರಕಿರಲಿಲ್ಲ. ಒಳಗಿನ ಕತ್ತಲೆಗೆ ನಮ್ಮ ಕಣ್ಣುಗಳು ಹೊಂದಿಕೊಂಡಾಗ, ಧುತ್ತೆಂದು ಎದುರಿನಲ್ಲಿ ಕಾಣಿಸಿದ್ದು, ಸುಮಾರು 10 ಅಡಿ ಎತ್ತರದ ಎರಡು ನಗ್ನ ಬೇತಾಳಗಳ ಶಿಲಾ ವಿಗ್ರಹಗಳು! ಅವುಗಳ ಕೈಯಲ್ಲಿ ಕತ್ತರಿಸಿದ ರುಂಡಗಳು! ವಿಕಾರವಾಗಿ ತೆರೆದ ಬಾಯಿ ನಾಲಿಗೆ, ಎದ್ದು ಕಾಣುವ ಪಕ್ಕೆಲುಬು, ತೊಡೆಗಳು, ಆ ನಡುವಿನ ಅಂಗಗಳು ಎಲ್ಲವೂ ವಿಕಾರವಾಗಿ, ವಿಚಿತ್ರವಾಗಿ ಕಾಣಿಸುತಿದ್ದವು!
ಈ ದೇಗುಲದಲ್ಲಿ ಮಹಾಲ,ಕ್ಷ್ಮಿ, ಕಾಳಿ, ಶಿವ, ವಿಷ್ಣು (ಭೈರವ) ಗುಡಿಗಳಿವೆ. ಬಹುಶಃ, ಹಿಂದೆ ಕಾಳಿಗೆ ಬಲಿ ಕೊಡುವ ಪದ್ಧತಿ ಇತ್ತು; ಆದ್ದರಿಂದಲೇ ಅದಕ್ಕೆ ಪೂರಕ ಎನಿಸುವ, ಬೇತಾಳಗಳ ಬೃಹದಾಕಾರದ ವಿಗ್ರಹಗಳಿವೆ. ಕತ್ತಿ ಹಿಡಿದ ಬೇತಾಳ ವಿಗ್ರಹದ ಇನ್ನೊಂದು ಕೈಯಲ್ಲಿ ಇರುವುದು, ಕತ್ತರಿಸಿದ ಮನುಷ್ಯನ ತಲೆ! ಎಲ್ಲವನ್ನೂ ಕಲ್ಲಿನಲ್ಲಿ ಕೆತ್ತಿದ್ದ ಅಂದಿನ ಆ ಅಜ್ಞಾತ ಶಿಲ್ಪಿ!
ಇದೊಂದು ಚತುಷ್ಕೂಟ ದೇಗುಲ-ಅಂದರೆ 4 ಮುಖ್ಯ ಗುಡಿಗಳು; ಅವುಗಳಿಗೆ ಗೋಪುರಗಳು; ನಡುವೆ ಇನ್ನೊಂದು ಗೋಪುರ; ಪ್ರಕಾರದ ಮೂಲೆಯಲ್ಲಿ ನಾಲ್ಕು ಪುಟ್ಟಪುಟ್ಟ ಗೋಪುರಗಳು - ಆದ್ದರಿಂದ ಈ ಪ್ರಕಾರದಲ್ಲಿ ಎತ್ತ ದೃಷ್ಟಿ ಹಾಯಿಸಿದರೂ ಕಲ್ಲಿನ ಗೋಪುರಗಳೇ! ಒಟ್ಟು 9 ಗೋಪುರಗಳು ಇರುವ ದೇವಾಲಯ ಇದು. ಇದರ ನಿರ್ಮಾಣ ಸಾ.ಶ. 1114. ಬೇಲೂರಿನ ಸುಂದರ ಮತ್ತು ಪ್ರಸಿದ್ಧ ಚನ್ನಕೇಶವ ದೇಗುಲದ ನಿರ್ಮಾಣಕ್ಕಿಂತ ಕೆಲವು ವರ್ಷಗಳ ಮೊದಲು ಇದನ್ನು ನಿರ್ಮಿಸಲಾಗಿದೆ.
ಮುಖ್ಯ ರಸ್ತೆಯಿಂದ 3 ಕಿಮೀ ದೂರದಲ್ಲಿರುವ ಪುಟ್ಟ ಹಳ್ಳಿಯಲ್ಲಿರುವ ಈ ದೇಗುಲವನ್ನು ತಲುಪುವುದು 1980- 90ರ ದಶಕದಲ್ಲಿ ಬಹಳ ಕಷ್ಟ; ಆದ್ದರಿಂದಲೇ ಬೇಲೂರಿಗೆ ಅತಿ ಸನಿಹದಲ್ಲಿದ್ದರೂ, ಹಿಂದಿನ ದಿನಗಳಲ್ಲಿ ಬೇಲೂರು ನೋಡಲು ಬಂದ ಪ್ರವಾಸಿಗರು ಇಲ್ಲಿಗೆ ಬರುತ್ತಿರಲಿಲ್ಲ.
ಮೊದಲ ಬಾರಿ 1984ರಲ್ಲಿ ನೋಡಿದ್ದ ಈ ದೇಗುಲವನ್ನು ಮತ್ತೊಮ್ಮೆ ನಾನು ನೋಡಿದ್ದು ಇತ್ತೀಚೆಗೆ ಅಂದರೆ 2024 ರಲ್ಲಿ. ಈಗ ಕಂಡ ಮುಖ್ಯವಾದ ವ್ಯತ್ಯಾಸವೆಂದರೆ, ದೇಗುಲದ ತನಕ ಉತ್ತಮವಾದ, ಟಾರು ಹಾಕಿದ ರಸ್ತೆ ಇದೆ. ಆದ್ದರಿಂದ ಪ್ರವಾಸಿಗರು ತಮ್ಮ ವಾಹನಗಳನ್ನು ದೇಗುಲದ ಪಕ್ಕದಲ್ಲಿ ತಂದು ನಿಲ್ಲಿಸಿ, ಈ ವಾಸ್ತು ವಿಶೇಷವನ್ನು ನೋಡಬಹುದು. ಸುತ್ತಲಿನ ಹಳ್ಳಿ ಇಂದು ಬೆಳೆದಿದೆ; ಹಲವು ಕಟ್ಟಡಗಳು ಮೇಲೆದ್ದಿವೆ. ಹಿಂದೆ ಹಳ್ಳಿಯಿಂದ ಬಹು ದೂರದಲ್ಲಿದ್ದ ಈ ದೇಗುಲವು, ಇಂದು ಹಳ್ಳಿಗೆ ತಾಗಿಕೊಂಡಂತಿದೆ; ದೇಗುಲದ ತನಕವೂ ಮನೆಗಳನ್ನು ಕಟ್ಟಿಕೊಂಡಿದ್ದಾರೆ.
ಮೊದಲ ಬಾರಿ ಅಲ್ಲಿಗೆ ಹೋಗಿದ್ದಾಗ, ಅದೊಂದು ನಿರ್ಜನ ದೇಗುಲವಾಗಿತ್ತು; ಎರಡನೇ ಬಾರಿ ನಾನು ಆ ದೇಗುಲಕ್ಕೆ ಹೋದಾಗ ದೇಗುಲದ ತುಂಬಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳೇ ತುಂಬಿಹೋಗಿದ್ದರು. ಸುತ್ತಲೂ ಬೇಲಿ; ಚೊಕ್ಕಟವಾದ ಪ್ರಾಂಗಣ ಎಲ್ಲವೂ ವಿಶೇಷ ಎನಿಸಿತು. ಪಕ್ಕದಲ್ಲಿರುವ ವಿಶಾಲವಾದ ಕೆರೆಯ ನೀಲಿ ನೀರಿನ ಮೇಲಿಂದ ಬೀಸಿ ಬರುವ ತಂಗಾಳಿ ಮಾತ್ರ ಅಂದಿನಂತೆಯೇ ಇಂದೂ ತಂಪೆರೆಯಿತು!
----
ಎಲ್ಲಿದೆ?
ಹಾಸನದಿಂದ 20 ಕಿಮೀ. ದೂರದಲ್ಲಿದೆ; ಹಾಸನ-ಬೇಲೂರು ರಸ್ತೆಯ ಮಗ್ಗುಲಲ್ಲಿದೆ; ಮುಖ್ಯ ರಸ್ತೆಯಿಂದ 3 ಕಿಮೀ. ಸಾಗಿದರೆ, ಈ ಗೋಪುರಗಳ ವನ ಸಿಗುತ್ತದೆ. ಊಟ, ತಿಂಡಿ ವ್ಯವಸ್ಥೆಗೆ ಬೇಲೂರು ಸೂಕ್ತ.