Saturday, May 16, 2026
Saturday, May 16, 2026

ಮುನಿದ ಹರ – ಶಾಂತಪಡಿಸಿದ ಹರಿ ಇಲ್ಲಿ ನೆಲೆ ನಿಂತಿದ್ದಾರೆ!

ಮಹಾವಿಷ್ಣು ಲಿಂಗ ರೂಪದಲ್ಲಿ ನೆಲೆನಿಂತಿರುವ ಏಕೈಕ ದೇವಾಲಯವಿದು. ಸತಿಯ ಸಾವಿನಿಂದ ಕೋಪಗೊಂಡ ಶಿವನು ತಾಂಡವ ನೃತ್ಯ ಮಾಡುತ್ತಿದ್ದಾಗ ಅವನನ್ನು ತಣಿಸಲು ಬಂದ ವಿಷ್ಣು ಇಲ್ಲಿ ಲಿಂಗ ರೂಪದಲ್ಲಿ ನೆಲೆನಿಂತ ಎನ್ನಲಾಗಿದೆ. ಹೀಗಾಗಿ ಗರ್ಭಗುಡಿಯಲ್ಲಿ ಎರಡು ಲಿಂಗಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಶಿವನಿಗೆ ಇಲ್ಲಿ ಕೋಪೇಶ್ವರ ಎಂದು ಕರೆದರೆ ಆತನನ್ನು ತಣಿಸಲು ಬಂದ ವಿಷ್ಣು ಇಲ್ಲಿ ತೋಪೇಶ್ವರ ಎನ್ನಲಾಗಿದೆ.

  • ವಂದನಾ ಕೊಮ್ಮುಂಜೆ

ನಮ್ಮ ಪುರಾಣಗಳ ಕಥೆಗಳಿಗೆ ಸಾಕ್ಷಿಯಾಗಿ ನಿಂತಿರುವುದೇ ನಮ್ಮ ದೇಶದಲ್ಲಿ ಕಟ್ಟಲಾಗಿರುವ ದೇವಾಯಗಳು ಮತ್ತು ಅಲ್ಲಿ ನಡೆಯುವ ವಿಸ್ಮಯಗಳು. ಇವುಗಳು ಇಲ್ಲವಾಗಿದ್ದಿದ್ದರೆ ಪುರಾಣಗಳು ಒಂದು ರೀತಿಯ ಕಟ್ಟು ಕಥೆಗಳಾಗಿ ಉಳಿಯುತ್ತಿದ್ದವೇನೋ. ಹೆಚ್ಚಿನ ಕಥೆಗಳಿಗೆ ಸಂಬಂಧಿತ ಒಂದು ದೇವಾಲಯ ದೇಶದ ಯಾವುದಾದರೂ ಒಂದು ಮೂಲೆಯಲ್ಲಿ ಇದ್ದೇ ಇರುತ್ತದೆ. ದೇವರ ಅವತಾರಕ್ಕೆ ಸಾಕ್ಷಿಯಾಗಿರುವ ದೇವಾಲಯಗಳು ಸಾಕಷ್ಟಿವೆ.

ಶಿವ-ಪಾರ್ವತಿ ವಿವಾಹಿತರಾದ ದೇಗುಲ: ಅಂದಿನಿಂದ ಇಂದಿನವರೆಗೂ ಆರಿಲ್ಲ ಇಲ್ಲಿನ ಅಗ್ನಿಕುಂಡ!

ಕೋಪೇಶ್ವರ

ಮಹಾರಾಷ್ಟ್ರದ ಖಿದ್ರಾಪುರದಲ್ಲಿನ ಕೃಷ್ಣಾ ನದಿಯ ದಂಡೆಯಲ್ಲಿ ಕೋಪೇಶ್ವರ ದೇವರ ದೇವಾಲಯವಿದೆ. ಇದು ನಮ್ಮನ್ನು ಪುರಾಣ ಲೋಕಕ್ಕೆ ಕೊಂಡೊಯ್ಯುತ್ತದೆ. ಹೆಸರೇ ಹೇಳುವಂತೆ ಇದು ಕೋಪದಲ್ಲಿ ನಿಂತ ಶಿವನ ದೇವಾಲಯ. ಸುಂದರ ಪರಿಸರ, ವಿಶಿಷ್ಟ ವಾಸ್ತುಶಿಲ್ಪ ನಮ್ಮನ್ನು ಇನ್ನೊಂದು ಲೋಕಕ್ಕೆ ಎಳೆದೊಯ್ಯುತ್ತವೆ. ಕೃಷ್ಣ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ದೇವಾಲಯ, ಸತಿದೇವಿ ಹಾಗೂ ಶಿವ ವಿರಹಕ್ಕೆ ಸಾಕ್ಷಿಯಾಗಿ ನಿಂತಿರುವ ದೇವಾಲಯವಾಗಿದೆ. ದಕ್ಷ ಯಜ್ಞದಲ್ಲಿ ಸತಿ ದಹನವಾದಾಗ ಕೋಪಗೊಂಡ ಶಿವ ಇಲ್ಲಿ ತಾಂಡವ ನೃತ್ಯ ಮಾಡಿದ್ದ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.

ಧೋಪೇಶ್ವರ

ಈ ಸ್ಥಳ ಒಂದು ಪವಿತ್ರ ವಿಷ್ಣು ಕ್ಷೇತ್ರವೂ ಹೌದು. ಮಹಾವಿಷ್ಣು ಲಿಂಗ ರೂಪದಲ್ಲಿ ನೆಲೆನಿಂತಿರುವ ಏಕೈಕ ದೇವಾಲಯವಿದು. ಸತಿಯ ಸಾವಿನಿಂದ ಕೋಪಗೊಂಡ ಶಿವನು ತಾಂಡವ ನೃತ್ಯ ಮಾಡುತ್ತಿದ್ದಾಗ ಅವನನ್ನು ತಣಿಸಲು ಬಂದ ವಿಷ್ಣು ಇಲ್ಲಿ ಲಿಂಗ ರೂಪದಲ್ಲಿ ನೆಲೆನಿಂತ ಎನ್ನಲಾಗಿದೆ. ಹೀಗಾಗಿ ಗರ್ಭಗುಡಿಯಲ್ಲಿ ಎರಡು ಲಿಂಗಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಶಿವನಿಗೆ ಇಲ್ಲಿ ಕೋಪೇಶ್ವರ ಎಂದು ಕರೆದರೆ ಆತನನ್ನು ತಣಿಸಲು ಬಂದ ವಿಷ್ಣು ಇಲ್ಲಿ ಧೋಪೇಶ್ವರ ಎಂದು ಕರೆಯಲಾಗುತ್ತಿದೆ.

New Project (25)

ಇಲ್ಲಿ ನಂದಿ ಇಲ್ಲ

ಇಲ್ಲಿ ಶಿವನು ನೆಲೆಸಿದ್ದರೂ ನಂದಿಯನ್ನು ಕಾಣಲು ಸಿಗುವುದಿಲ್ಲ. ಸ್ಥಳ ಪುರಾಣದ ಪ್ರಕಾರ, ಶಿವನ ಮಾತನ್ನು ಕೇಳದ ದಾಕ್ಷಾಯಿಣಿ ದಕ್ಷ ಯಜ್ಞಕ್ಕೆ ತೆರಳಿದಾಗ ಶಿವನ ಆಜ್ಞೆಯಂತೆ ನಂದಿ ಜತೆಗೆ ಹೋಗಿದ್ದ. ಸತಿ ಬೆಂಕಿಯಲ್ಲಿ ಹಾರಿ ತನ್ನನ್ನು ದಹಿಸಿಕೊಂಡಾಗ ನಂದಿ ದುಖಃದಲ್ಲಿ ಅಲ್ಲೇ ಶಿಲೆಯಾದ ಎನ್ನಲಾಗಿದೆ. ನಂತರ ಶಿವ ವೀರಭದ್ರನನ್ನು ಕಳುಹಿಸಿ ದಕ್ಷನನ್ನು ಸಂಹರಿಸಿದ್ದ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿಂದ 15 ಕಿಮೀ ದೂರದ ಕರ್ನಾಟಕದ ಯಡೂರು ಎಂಬಲ್ಲಿ ವೀರಭದ್ರ ಸ್ವಾಮಿಯ ದೇವಾಯವಿದೆ. ಅಲ್ಲಿ ನಂದಿ ದೇವಾಲಯವೂ ಇದ್ದು, ಪಶ್ವಿಮಕ್ಕೆ ಎದುರಾಗಿ ಕುಳಿತ ಭಂಗಿಯಲ್ಲಿದೆ. ಆದರೆ ಅದರ ಕತ್ತನ್ನು ಉತ್ತರಕ್ಕೆ, ಅಂದರೆ ಈ ದೇವಾಲಯದ ಕಡೆಗೆ ತಿರುಗಿಸಿದಂತೆ ಮುಖ ಮಾಡಿದೆ. ಅಲ್ಲಿಂದಲೇ ಈ ಶಿವನ್ನು ನಂದಿ ನೋಡುತ್ತಿದೆ ಎನ್ನುವುದು ನಂಬಿಕೆ.

ʻಸ್ವರ್ಗʼ ಮಂಟಪ

ಈ ದೇವಾಲಯ ಪೂರ್ವಕ್ಕೆ ಮುಖಮಾಡಿಕೊಂಡಿದೆ. ಆದರೆ, ಗರ್ಭಗುಡಿಯಲ್ಲಿ ಲಿಂಗಗಳಿಗೆ ದಕ್ಷಿಣ ಮುಖವಾಗಿ ಪೂಜೆ ಮಾಡಲಾಗುತ್ತಿದೆ. ಇಲ್ಲಿನ ಸ್ವರ್ಗ ಮಂಟಪ ಸ್ವರ್ಗಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗದು. ದೇವಾಲಯದ ಪ್ರವೇಶಕ್ಕೂ ಮೊದಲು ಸಿಗುವ ಈ ಸ್ವರ್ಗ ಮಂಟಪಕ್ಕೆ ಛಾವಣಿ ಇಲ್ಲ. ಸುತ್ತಲಿನ ಕಂಬಗಳಲ್ಲಿ ಸ್ವರ್ಗದ ದೇವತೆಗಳನ್ನು ಕೆತ್ತಲಾಗಿದೆ. ಛಾವಣಿ ಇಲ್ಲವಾದ್ದರಿಂದ, ಖಾಲಿ ಇರುವ ವೃತ್ತಾಕಾರದಲ್ಲಿ ಆಕಾಶ ಕಾಣುತ್ತದೆ. ಅದನ್ನು ದಿಟ್ಟಿಸಿ ನೋಡಿದರೆ ಸ್ವರ್ಗಕ್ಕೆ ಬಾಗಿಲು ಇಟ್ಟಂತೆ ಅನಿಸದಿರದು. ಕಾರ್ತಿಕ ಮಾಸದ ಹುಣ್ಣಿಮೆಯಂದು ಚಂದ್ರ ಈ ವರ್ತುಲದ ನಡುವಿನಲ್ಲಿ ನಿಂತು ಬೆಳಕು ಚೆಲ್ಲುತ್ತಾನೆ. ಮೇ ತಿಂಗಳಿನ ಮೊದಲ ವಾರದ ಕೊನ ದಿನ ಇಲ್ಲಿನ ಲಿಂಗಗಳಿಗೆ ನೇರ ಸೂರ್ಯನಿಂದ ಸೂರ್ಯಾರ್ಚನೆ ನಡೆಯುತ್ತದೆ. ಇದನ್ನು ನೋಡುವುದೇ ಒಂದು ಹಬ್ಬ.

New Project (27)

ಇತಿಹಾಸ

ಈ ದೇವಾಲಯದ ಇತಿಹಾಸ ನಮ್ಮನ್ನು ಸುಮಾರು 800 ವರ್ಷಗಳಿಗೂ ಹಿಂದಕ್ಕೆ ಕರೆದೊಯ್ಯುತ್ತದೆ. ಮಹಾರಾಷ್ಟ್ರವನ್ನು ಆಳುತ್ತಿದ್ದ ಶಿಲಾಹಾರ್ ರಾಜರು 10ನೆಯ ಶತಮಾನದಲ್ಲಿ ದೇವಾಲಯವನ್ನು ನಿರ್ಮಿಸಿದರು. ಇದರ ಮೇಲೇ ಮೂರು ಬಾರಿ ದಾಳಿಗಳು ನಡೆದಿವೆ ಎನ್ನಲಾಗಿದ್ದು, ಜೌರಂಗಜೇಬನ ಸೇನಾನಿ ಖಿದರ್ ಖಾನ್ ಈ ದೇವಾಲಯದ ಮೇಲೆ ದಾಳಿ ನಡೆಸಿದ್ದ, ಹೀಗಾಗಿ ಈ ಊರಿಗೆ ಖಿದ್ರಾಪುರ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಸದ್ಯ ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿದೆ.

ದಾರಿ ಹೇಗೆ?

ಮಹಾರಾಷ್ಟ್ರದ ಸಾಂಗ್ಲಿಗೆ ಈ ದೇವಾಲಯ ಹತ್ತಿರವಾಗಿದ್ದು, ಅಲ್ಲಿಂದ ಸುಮಾರು 30 ಕಿಮೀ ದೂರದ ಖಿದ್ರಾಪುರದಲ್ಲಿ ಈ ದೇವಾಲಯವಿದೆ. ಬೆಂಗಳೂರಿನಿಂದ ಸಾಂಗ್ಲಿಗೆ ರೈಲಿನ ಮೂಲಕ ತಲುಪಿ, ಅಲ್ಲಿಂದ ಆಟೋ ಹಾಗೂ ಖಾಸಗಿ ವಾಹನಗಳ ಮೂಲಕ ಈ ದೇವಾಲಯಕ್ಕೆ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ