ದೇವಸ್ಥಾನವೇ ಇಲ್ಲಿ ಡಿವೋರ್ಸ್ ಸ್ಥಾನ!
1902 ರವರೆಗೆ ಈ 'ವಿಚ್ಛೇದನ ದೇವಾಲಯ'ಕ್ಕೆ ಪುರುಷರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. 1902 ರಲ್ಲಿ ಎಂಗಾಕು-ಜಿ ಈ ದೇವಾಲಯದ ಉಸ್ತುವಾರಿ ವಹಿಸಿಕೊಂಡಾಗ ನಿಯಮ ಬದಲಾಯಿತು. ಆ ನಂತರ ಮಠಕ್ಕೆ ಪುರುಷ ಮಠಾಧೀಶರನ್ನು ನೇಮಿಸಲಾಯಿತು.
- ಧನಂಜಯ ಪಿ ಎಸ್
ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾದಾಗ ಸಾಕಷ್ಟು ಜನರು ಹಿರಿಯರ ಸಲಹೆಯಂತೆ ದೇವಸ್ಥಾನಕ್ಕೆ ಹೋಗಿ ಕೆಲವು ಪರಿಹಾರಗಳನ್ನು ಮಾಡುವುದನ್ನು ನೀವು ನೋಡಿರುತ್ತೀರಿ. ಸಂಸಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಬರದಂತೆ ದೇವರಲ್ಲಿ ಬೇಡುವುದುಂಟು. ಆದರೆ ಇಲ್ಲೊಂದು ದೇವಸ್ಥಾನ ಡಿವೋರ್ಸ್ ಗೆಂದೇ ಫೇಮಸ್ ಆಗಿದೆ. ವಿಚ್ಛೇದನ ಬಯಸಿ ಬಂದ ಮಹಿಳೆಯರಿಗೆ ಮತ್ತು ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಿ ಸಂಬಂಧವನ್ನೇ ತೊರೆದು ಬಂದವರಿಗೆ ಈ ದೇವಾಲಯ ಆಶ್ರಯ ನೀಡುತ್ತದೆ. ಇನ್ನು ಈ ದೇವಾಲಯದಲ್ಲಿ ವಿಚ್ಛೇದನ ಪತ್ರವನ್ನು ನೀಡುವ ಮೂಲಕ ಕಾನೂನು ಬದ್ಧವಾಗಿ ವಿಚ್ಛೇದನವನ್ನು ನೀಡಲಾಗುತ್ತದೆ.
ಪತಿಯ ದಬ್ಬಾಳಿಕೆಯಿಂದ ಸಂರಕ್ಷಣೆ ಪಡೆಯಲು ಆತನೊಂದಿಗಿನ ವೈವಾಹಿಕ ಜೀವನದಿಂದ ಮುಕ್ತಿ ಪಡೆಯಲು ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಮಹಿಳೆಯರನ್ನು ಸಬಲೀಕರಣಗೊಳಿಸಲು ನಿರ್ಮಿಸಲಾದ ದೇವಾಲಯ ಇದು. ಪತಿಯನ್ನು ತೊರೆದ ಮಹಿಳೆಯರಿಗೆ ರಕ್ಷಾಕವಚದಂತಿರುವ ಈ ದೇವಸ್ಥಾನ ಎಲ್ಲಿದೆ ಎಂದು ಇಲ್ಲಿ ತಿಳಿದುಕೊಳ್ಳೋಣ.

ಡಿವೋರ್ಸ್ ಟೆಂಪಲ್ ಇರುವುದೆಲ್ಲಿ?
ಜಪಾನ್‌ನ ಕಾಮಕುರಾ ನಗರದಲ್ಲಿ ನೆಲೆಗೊಂಡಿರುವ ಇದು ಒಂದು ವಿಶಿಷ್ಟ ದೇವಾಲಯವಾಗಿದ್ದು, ಇದರ ಇತಿಹಾಸ ಸುಮಾರು 700 ವರ್ಷಗಳಷ್ಟು ಹಳೆಯದಾಗಿದೆ. ಈ ದೇವಾಲಯವನ್ನು 'ವಿಚ್ಛೇದನ ದೇವಾಲಯ' ಎಂದೂ ಕರೆಯುತ್ತಾರೆ. ಈ ದೇವಾಲಯವನ್ನು ಬೌದ್ಧ ಸನ್ಯಾಸಿನಿ ಕಾಕುಸನ್ ನಿರ್ಮಿಸಿದರು ಎಂದು ಹೇಳಲಾಗುತ್ತದೆ. 12ನೇ ಮತ್ತು 13ನೇ ಶತಮಾನಗಳಲ್ಲಿ ಜಪಾನೀಸ್ ಸಮಾಜದಲ್ಲಿ ವಿಚ್ಛೇದನವು ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಪುರುಷರು ಮಾತ್ರ ಡಿವೋರ್ಸ್ ನಿರ್ಧರಸಬಹುದಿತ್ತು. ಆ ಸಮಯದಲ್ಲಿ ಮಹಿಳೆಯರಿಗೆ ತನ್ನ ಗಂಡನ ವಿರುದ್ಧವಾಗಿ ಧ್ವನಿ ಎತ್ತುವ ಸ್ವಾತಂತ್ರ್ಯವಿರಲಿಲ್ಲ. ಸ್ವತಃ ಕಾಕುಸನ್ ಅವರೇ ತನ್ನ ಪತಿಯಿಂದಲೇ ದೌರ್ಜನ್ಯಕ್ಕೆ ಒಳಗಾಗಿದ್ದರು. ಆದ್ದರಿಂದ ಆಕೆ ತನ್ನ ಗಂಡನಿಂದ ಬೇರ್ಪಟ್ಟ ನಂತರ ಸನ್ಯಾಸ ದೀಕ್ಷೆಯನ್ನು ಪಡೆದರು. ಬಳಿಕ ತನ್ನಂತೆಯೇ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಲು ಈ ದೇವಾಲಯವನ್ನು ನಿರ್ಮಿಸಿದರು.
12ನೇ ಮತ್ತು 13ನೇ ಶತಮಾನಗಳಲ್ಲಿ ಜಪಾನ್ ನಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಹಕ್ಕುಗಳಿರಲಿಲ್ಲ ಮತ್ತು ಪುರುಷರು ತಮ್ಮ ಹೆಂಡತಿಗೆ ಕ್ಷುಲಕ ಕಾರಣಕ್ಕೆ ಸುಲಭವಾಗಿ ವಿಚ್ಛೇದನ ನೀಡುತ್ತಿದ್ದರೆ, ಈ ಅವಕಾಶ ಮಹಿಳೆಯರಿಗೆ ಮಾತ್ರ ಇರಲೇ ಇಲ್ಲ. ಆದ್ದರಿಂದಲೇ ಆ ಸಮಯದಲ್ಲಿ, ಈ ದೇವಾಲಯವು ಕೌಟುಂಬಿಕ ಹಿಂಸಾಚಾರದಿಂದ ಬಳಲುತ್ತಿರುವ ಮಹಿಳೆಯರಿಗೆ ಆಶ್ರಯ ನೀಡಲು ಮುಂದಾಯಿತು. ತನ್ನ ಗಂಡನ ಕ್ರೌರ್ಯದಿಂದ ಓಡಿಹೋಗುವ ಪ್ರತಿಯೊಬ್ಬ ಮಹಿಳೆಗೆ ದೇವಾಲಯದ ಬಾಗಿಲುಗಳು ತೆರೆದಿದ್ದವು. ಇಲ್ಲಿಗೆ ಬಂದ ನಂತರ, ಅವರು ದೈಹಿಕ ರಕ್ಷಣೆಯನ್ನು ಮಾತ್ರವಲ್ಲದೆ ಅಧ್ಯಾತ್ಮಿಕ ಶಾಂತಿ ಮತ್ತು ಸಾಂತ್ವನವನ್ನು ಕಂಡುಕೊಳ್ಳುವ ವಾತಾವರಣವನ್ನೂ ಪಡೆಯುತ್ತಿದ್ದರು.

1902 ರವರೆಗೆ ಈ 'ವಿಚ್ಛೇದನ ದೇವಾಲಯ'ಕ್ಕೆ ಪುರುಷರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. 1902 ರಲ್ಲಿ ಎಂಗಾಕು-ಜಿ ಈ ದೇವಾಲಯದ ಉಸ್ತುವಾರಿ ವಹಿಸಿಕೊಂಡಾಗ ನಿಯಮ ಬದಲಾಯಿತು. ಆ ನಂತರ ಮಠಕ್ಕೆ ಪುರುಷ ಮಠಾಧೀಶರನ್ನು ನೇಮಿಸಲಾಯಿತು.
ಈ ದೇವಾಲಯವು ಯಾವುದೇ ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಇನ್ನೂ ಸ್ಫೂರ್ತಿಯ ಮೂಲವಾಗಿದೆ. ಇಲ್ಲಿ ಉಳಿಯುವುದರಿಂದ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗುವುದಲ್ಲದೆ, ಸ್ವಾವಲಂಬಿಗಳಾಗುವ ಅವಕಾಶವನ್ನೂ ಪಡೆಯುತ್ತಾರೆ. ಇನ್ನು ಈ ದೇವಾಲಯದಲ್ಲಿ ವಿಚ್ಛೇದನ ಪತ್ರವನ್ನು ನೀಡುವ ಮೂಲಕ ಕಾನೂನು ಬದ್ಧವಾಗಿ ವಿಚ್ಛೇದನ ಆಗುತ್ತದೆ. ಈ ದೇವಸ್ಥಾನಕ್ಕೆ ಬರುವ ಮಹಿಳೆಯರು ದೇವಸ್ಥಾನಕ್ಕೆ ಬಂದ ಮೂರು ವರ್ಷಗಳ ನಂತರ ಅವರು ಗಂಡನೊಂದಿಗೆ ಸಂಬಂಧ ಮುರಿದುಕೊಳ್ಳುವ ಅವಕಾಶವಿತ್ತು. ಆದರೆ ಆ ನಂತರ ಅದನ್ನು ಎರಡು ವರ್ಷಕ್ಕೆ ಇಳಿಸಲಾಯಿತು.